ಭಾಗ - ೨ : ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ)

ಭಾಗ - ೨ : ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ)

ಪಾಂಚರಾತ್ರ ಆಗಮಗಳ ತತ್ತ್ವ ಸಿದ್ಧಾಂತ
ಈ ಪದ್ಧತಿಯ ಮೂಲಭೂತ ಸಿದ್ಧಾಂತವನ್ನು ಜಯಾಖ್ಯ ಸಂಹಿತೆಯಲ್ಲಿ ವಿಶದಪಡಿಸಲಾಗಿದೆ. ಅದರ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.
ಯಜ್ಞ-ಯಾಗಗಳನ್ನು ಕೈಗೊಳ್ಳುವದು, ದಾನ-ಧರ್ಮಾದಿಗಳನ್ನು ಮಾಡುವುದು ಮತ್ತು ಸ್ವಾಧ್ಯಾಯ (ವೇದಾಧ್ಯಯನ ಮಾಡುವುದು) ಹಾಗೂ ಇತರೇ ನೇಮ ನಿಷ್ಠೆಗಳನ್ನು ಪಾಲಿಸುವುದು ಆಧ್ಯಾತ್ಮಿಕ ಜೀವನಕ್ಕೆ ಒಳಿತುಂಟು ಮಾಡಿದರೂ ಸಹ ಪರತತ್ತ್ವ ಅಥವಾ ಅತ್ಯುನ್ನತವಾದ ಸತ್ಯವನ್ನು ಅರಿತಲ್ಲಿ ಮಾತ್ರವೇ ಮೋಕ್ಷವು ಹೊಂದಲ್ಪಡುತ್ತದೆ.
ಇಲ್ಲಿ ಹೇಳಿರುವ ಪರತತ್ತ್ವ ಅಥವಾ ದೇವರು ಎನ್ನುವುದು ವೇದೋಪನಿಷತ್ತುಗಳಲ್ಲಿ ವರ್ಣಿಸಲ್ಪಟ್ಟಿರುವ ಪರಬ್ರಹ್ಮವೇ ಆಗಿದೆ. ಅವನು ಪರಿಶುದ್ಧವಾದ ಚಿತ್ (ಚೈತನ್ಯ) ಮತ್ತು ಆನಂದವಾಗಿದ್ದಾನೆ. ಅವನು ಅನಾದಿ (ಆದಿಯಿಲ್ಲದವನು) ಮತ್ತು ಅನಂತನಾಗಿದ್ದಾನೆ (ಕೊನೆಯಿಲ್ಲದವನಾಗಿದ್ದಾನೆ). ಅವನು ಈ ಪ್ರಪಂಚದ ಮೂಲ ಕಾರಣನಾಗಿದ್ದು ಅದಕ್ಕೆ ಆಧಾರವೂ ಆಗಿದ್ದಾನೆ. ಅವನು ತ್ರಿಗುಣಗಳಿಗೆ ಅತೀತನಾಗಿದ್ದರೂ ಸಹ ಅವನು ತ್ರಿಗುಣಗಳಿಂದ ಉತ್ಪತ್ತಿಯಾಗುವ ಫಲಗಳ ಭೋಕ್ತೃವಾಗಿದ್ದಾನೆ (ಫಲಗಳನ್ನು ಅನುಭವಿಸುವವನು). ಅವನು ಸರ್ವಜ್ಞನೂ ಮತ್ತು ಸರ್ವಶಕ್ತನೂ ಆಗಿದ್ದಾನೆ. ಅವನು ಸೃಷ್ಟಿಸಲ್ಪಟ್ಟ ಈ ಪ್ರಪಂಚದಲ್ಲೆಲ್ಲಾ ವ್ಯಾಪಿಸಿ ಅದರ ಅಂತರಾಳವಾಗಿದ್ದಾನೆ. ಆದ್ದರಿಂದ ಅವನು ಮನಸ್ಸು ಹಾಗು ಇಂದ್ರಿಯಗಳ ಮೂಲಕ ಅರಿಯಲಾರದಷ್ಟು ಸೂಕ್ಷ್ಮನಾಗಿದ್ದಾನೆ. ಆದರೆ ಅವನನ್ನು ಪರಿಶುದ್ಧವಾದ ಮನಸ್ಸಿನಲ್ಲಿ ಅರಿಯಲು ಶಕ್ಯವಿದೆ. ಇದನ್ನೇ ಮಾನಸಿಕ ಪ್ರತ್ಯಕ್ಷ ಎಂದು ಕರೆಯಲಾಗುತ್ತದೆ.
ಜೀವಿಗಳು ಯಾವಾಗ ಈ ಪರಬ್ರಹ್ಮ ಅಥವಾ ದೇವರನ್ನು ಅರಿಯುತ್ತವೆಯೋ ಆಗ ಅವು ದೇವರೊಂದಿಗೆ ಐಕ್ಯವಾಗುತ್ತವೆ, ಆದರೆ ಅವನಿಗೂ ಜೀವಿಗಳಿಗೂ ಕೆಲವೊಂದು ಸೂಕ್ಷ್ಮ ವ್ಯತ್ಯಾಸಗಳು ಉಳಿದುಕೊಳ್ಳುತ್ತವೆ. ಆದ್ದರಿಂದ ಈ ತತ್ತ್ವ ಸಿದ್ಧಾಂತವನ್ನು ’ಭೇದಾಭೇದ’ ಅಥವಾ ’ದ್ವೈತಾದ್ವೈತ’ ಎಂದು ಕರೆಯಬಹುದು.
ಸೃಷ್ಟಿಯನ್ನು ಕುರಿತಂತೆ ಪಾಂಚರಾತ್ರ ಸಿದ್ಧಾಂತವು ಮೂರು ವಿಧಗಳನ್ನು ಗುರುತಿಸುತ್ತದೆ. ಅವೆಂದರೆ, ಬ್ರಹ್ಮಸರ್ಗ, ಪ್ರಕೃತಿಸರ್ಗ ಮತ್ತು ಶುದ್ಧಸರ್ಗ.
ಬ್ರಹ್ಮಸರ್ಗವು ವಿಷ್ಣುವಿನಿಂದ ಚತುರ್ಮುಖನಾದ ಬ್ರಹ್ಮನು ಹೊರಹೊಮ್ಮಿ ಈ ಪ್ರಪಂಚವನ್ನು ಸೃಷ್ಟಿಸುವುದಾಗಿದೆ.
ಪ್ರಕೃತಿಸರ್ಗವು ವಿವರಿಸುವ ಸೃಷ್ಟಿಯು ಸಾಂಖ್ಯ ದರ್ಶನದ ಸೃಷ್ಟಿಯ ವಿವರಣೆಗೆ ಸಾಮ್ಯತೆಯನ್ನು ಹೊಂದಿದೆ. ಸಾಂಖ್ಯದಲ್ಲಿ ವಿವಿರಿಸುವಂತೆ ಪ್ರಕೃತಿ ಅಥವಾ ಪ್ರಧಾನವು ತ್ರಿಗುಣಗಳಾದ - ಸತ್ವ, ರಜಸ್ ಮತ್ತು ತಮೋ ಗುಣಗಳನ್ನು ಹೊಂದಿರುತ್ತದೆ.
ಯಾವಾಗ ಸತ್ವ ಗುಣವು ಪ್ರಧಾನವಾಗಿರುತ್ತದೆಯೋ ಆಗ ಸೃಷ್ಟಿಯ ಪ್ರಥಮ ಉತ್ಪನ್ನವು ಬುದ್ಧಿಯಾಗಿ ಹೊರಹೊಮ್ಮುತ್ತದೆ (ಬ್ರಹ್ಮಾಂಡ ಬುದ್ಧಿ). ಯಾವಾಗ ರಜೋ ಗುಣವು ಮೇಲುಗೈಯ್ಯನ್ನು ಹೊಂದಿರುತ್ತದೆಯೋ ಆಗ ಎರಡನೆಯ ಉತ್ಪನ್ನವಾದ ಅಹಂಕಾರವು ಹೊರಹೊಮ್ಮುತ್ತದೆ. ಈ ಅಹಂಕಾರವು ಮೂರು ವಿಧದ್ದಾಗಿರುತ್ತದೆ - ಪ್ರಕಾಶಾತ್ಮ ಅಥವಾ ತೈಜಸಾತ್ಮ, ವಿಕೃತಾತ್ಮ ಮತ್ತು ಭೂತಾತ್ಮ. ಮೊದಲನೆಯದಾದ ತೈಜಸಾತ್ಮವು ಪಂಚ ಜ್ಞಾನೇಂದ್ರಿಯಗಳನ್ನು (ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ) ಮತ್ತು ಮನಸ್ಸನ್ನು ಉಂಟುಮಾಡುತ್ತದೆ. ಎರಡನೆಯದಾದ ವಿಕೃತಾತ್ಮವು ಐದು ಕರ್ಮೇಂದ್ರಿಯಗಳನ್ನು (ಕೈ, ಕಾಲು, ಬಾಯಿ, ಜನನಾಂಗ ಮತ್ತು ವಿಸರ್ಜನಾಂಗ) ಉಂಟುಮಾಡುತ್ತದೆ. ಕಡೆಯದಾದ ಭೂತಾತ್ಮದಿಂದ ಸೂಕ್ಷ್ಮಭೂತಗಳು ಅಥವಾ ತನ್ಮಾತ್ರಗಳು (ಸ್ಥೂಲ ರೂಪದ ಪಂಚಮಹಾಭೂತಗಳ ಸೂಕ್ಷ್ಮರೂಪಗಳಾದ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳು) ಉಂಟಾಗುತ್ತವೆ. ಈ ತನ್ಮಾತ್ರಗಳಿಂದ ಸ್ಥೂಲ ರೂಪದ ಪಂಚಮಹಾಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿಗಳು ಉಂಟಾಗುತ್ತವೆ. ವಿಶ್ವದ ಸಮಸ್ತ ಸೃಷ್ಟಿಯು ಈ ಮೂಲತತ್ತ್ವಗಳ ವಿವಿಧ ಪ್ರಮಾಣಗಳ ಮಿಶ್ರಣಗಳಿಂದ ಉಂಟಾಗುತ್ತದೆ.
ಪುರುಷರು ಅಥವಾ ಜೀವಿಗಳು (ಆತ್ಮಗಳು) ಭಗವಂತನ ಇಚ್ಛೆಯಂತೆ ತಮ್ಮ ಕರ್ಮಫಲಕ್ಕನುಗುಣವಾಗಿ ವಿವಿಧ ರೀತಿಯ ಶರೀರಗಳನ್ನು ಧರಿಸುತ್ತವೆ. ಈ ಆತ್ಮಗಳು ಶರೀರಗಳಲ್ಲಿ ಇರುವುದರಿಂದ ಆ ಜಡ ದೇಹಗಳೂ ಸಹ ಚೈತನ್ಯದಿಂದಿರುವಂತೆ ಕಾಣಿಸುತ್ತವೆ; ಯಾವ ವಿಧವಾಗಿ ಕಬ್ಬಿಣದ ತುಣುಕೊಂದು ಅಯಸ್ಕಾಂತದ ಸಾಮೀಪ್ಯದಲ್ಲಿ ಅಯಸ್ಕಾಂತದಂತೆಯೇ ವರ್ತಿಸುತ್ತದೆಯೋ ಆ ವಿಧವಾಗಿ.
ಶುದ್ಧಸರ್ಗವು ಮೂರನೆಯ ವಿಧವಾದ ಸೃಷ್ಟಿಯಾಗಿದೆ. ಇಲ್ಲಿ ಪುರುಷೋತ್ತಮ ವಾಸುದೇವನೆಂದು ಕರೆಯಲ್ಪಡುವ ಭಗವಂತನಿಂದಲೇ ಮೂರು ವಿಧದ ರೂಪಗಳು (ಅವತಾರಗಳು) ಹೊರಹೊಮ್ಮುತ್ತವೆ. ಅವೆಂದರೆ, ಅಚ್ಯುತ, ಸತ್ಯ ಮತ್ತು ಪುರುಷ. ವಾಸ್ತವವಾಗಿ ಈ ಮೂರು ರೂಪಗಳು ಭಗವನಂತಿನಿಗಿಂತ ಭಿನ್ನವಾದವುಗಳಲ್ಲ. ಮೂರನೆಯದಾದ ಪುರುಷ ರೂಪವು ಅಂತರ್ಯಾಮಿ ಅಥವಾ ಒಳಗಿನ ನಿಯಂತ್ರಕನಾಗಿ ಕಾರ್ಯನಿರ್ವಹಿಸುತ್ತದೆ. ಇವನೇ ಎಲ್ಲಾ ದೇವಾನು ದೇವತೆಗಳನ್ನು ಕಾರ್ಯಗಳನ್ನು ನಿರ್ವಹಿಸುವಂತೆ ಪ್ರಚೋದಿಸುತ್ತಾನೆ. ಇವನೇ ಜೀವಿಗಳನ್ನು ವಾಸನೆಗಳೊಂದಿಗೆ (ಪೂರ್ವ ಸಂಸ್ಕಾರಗಳು) ಬಂಧಿಸುತ್ತಾನೆ ಮತ್ತು ಅವನೇ ಆ ವಾಸನೆಗಳಿಂದ ಬಿಡುಗಡೆ ಹೊಂದಲು ಜೀವಿಗಳು ಆಧ್ಯಾತ್ಮಿಕ ಸಾಧನೆಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತಾನೆ.
ದೇವರ ಮಾಯಾ ಶಕ್ತಿಯಿಂದ ಜೀವಿಗಳು ಪೂರ್ವಜನ್ಮ ಸಂಸ್ಕಾರದಿಂದುಂಟಾದ ವಾಸನೆಗಳಿಂದ ಪ್ರಭಾವಿತವಾಗಿ ತಮ್ಮನ್ನು ತಾವು ದೇಹ-ಮನಸ್ಸುಗಳ ಸಂಕೀರ್ಣದೊಂದಿಗೆ ಗುರುತಿಸಿಕೊಳ್ಳುವಂತಾಗುತ್ತದೆ. ವಾಸನೆಗಳೊಂದಿಗಿನ ಜೀವಿಗಳ ಬಂಧನವು ಅನಾದಿಯಾಗಿದೆ. ಆದರೆ ದೈವೀ ಕೃಪೆಯಿಂದಾಗಿ ಅಂತರ್ಯಾಮಿಯ ಶಕ್ತಿ ಮತ್ತು ಬಲಗಳಿಂದ, ಜೀವಿಯ ನಿಜವಾದ ಬುದ್ಧಿಯು ಪ್ರೇರೇಪಿಸಲ್ಪಟ್ಟು ಆತ್ಮನ ನಿಜವಾದ ಜ್ಞಾನವು ಉಂಟಾಗಿ ಸರ್ವರೀತಿಯ ಬಂಧನಗಳಿಂದ ಜೀವಿಗೆ ಮುಕ್ತಿಯು ದೊರೆಯುತ್ತದೆ.
ಮೋಕ್ಷದ ಹಾದಿ ಅಥವಾ ಬಂಧನಗಳಿಂದ ಮುಕ್ತಿಯಡೆಗೆ ಕರೆದೊಯ್ಯುವ ಪಥವು ದೈವೀ ಪ್ರೇರಣೆಯ ಮೂಲಕ ಸೂಕ್ತವಾದ ಗುರುವನ್ನು ಜೀವಿಯು ಹುಡುಕುವ ಪ್ರಯತ್ನದ ಮೂಲಕ ಆಗುತ್ತದೆ. ಆ ಗುರುವು ಈ ಜೀವಿಗೆ (ಶಿಷ್ಯನಿಗೆ) ಮಂತ್ರದೀಕ್ಷೆಯನ್ನು (ಗುರುವು, ಪವಿತ್ರವಾದ ಮಂತ್ರಾಕ್ಷರ ಅಥವಾ ನಾಮವನ್ನು ಉಪದೇಶಿಸುವ ಪ್ರಕ್ರಿಯೆ) ಕೊಡುತ್ತಾನೆ. ನಿಯಮಿತ ಮತ್ತು ನಿರಂತರ ಮಂತ್ರ ಜಪವು (ಪವಿತ್ರವಾದ ಭಗವನ್ನಾಮಸ್ಮರಣೆ) ಸಮಾಧಿ ಸ್ಥಿತಿಯನ್ನು ಹೊಂದುವುದರಲ್ಲಿ ಅಥವಾ ದೇವರೊಂದಿಗೆ ಸಂಪೂರ್ಣವಾಗಿ ಲೀನವಾಗುವ ಸ್ಥಿತಿಯಲ್ಲಿ ಪರ್ಯವಸಾನವಾಗುತ್ತದೆ.
ದೇವರ ಕುರಿತ ಉಪಾಸನೆ ಅಥವಾ ಧ್ಯಾನವು ಎರಡು ಹಂತಗಳನ್ನು ಒಳಗೊಂಡಿದೆ. ಮೊದಲನೆಯದನ್ನು ಕ್ರಿಯಾಖ್ಯವೆಂದು ಕರೆಯುತ್ತಾರೆ. ಇದು ವಿವಿಧ ರೀತಿಯ ಸದ್ಗುಣಗಳನ್ನು ರೂಢಿಸಿಕೊಳ್ಳುವುದಾಗಿದೆ. ಉದಾಹರಣೆಗೆ - ಶೌಚ, ಯಜ್ಞ, ತಪಸ್ಸು, ಅಧ್ಯಯನ, ಅಹಿಂಸೆ, ಸತ್ಯ, ಕರುಣಾ, ದಾನ, ಮೊದಲಾದವು.
ಎರಡನೆಯದನ್ನು ಸತ್ಯಾಖ್ಯ ಅಥವಾ ಜ್ಞಾನಾಖ್ಯವೆಂದು ಕರೆಯಲಾಗುತ್ತದೆ. ವಾಸ್ತವವಾಗಿ ಇದು ಜ್ಞಾನಯೋಗವೇ ಆಗಿದೆ. ಕ್ರಿಯಾಖ್ಯೆಯಿಂದ ಮನಸ್ಸು ಪರಿಶುದ್ಧಗೊಂಡು ಆತ್ಮನ ಮೇಲೆ ಧ್ಯಾನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ತದನಂತರ, ಜ್ಞಾತೃ (ತಿಳಿದುಕೊಳ್ಳಬಯಸುವವನು - ಸಾಧಕ), ಜ್ಞೇಯ (ತಿಳಿದುಕೊಳ್ಳಬೇಕಾದ ವಸ್ತು) ಮತ್ತು ಜ್ಞಾನ (ತಿಳಿದುಕೊಳ್ಳಬೇಕಾಗಿರುವ ವಿಷಯ) ಈ ಮೂರು ವಸ್ತುಗಳಲ್ಲಿ ಭೇದವು ನಾಶವಾಗಿ ಏಕತ್ವವುಂಟಾಗುತ್ತದೆ.
ಪಾಂಚರಾತ್ರ ಆಗಮಗಳು ಅದರಲ್ಲೂ ವಿಶೇಷವಾಗಿ ಜಯಾಖ್ಯ ಸಂಹಿತೆಯು ಎರಡು ವಿಧವಾದ ಯೋಗಗಳನ್ನು ಉಲ್ಲೇಖಿಸುತ್ತದೆ - ಮಂತ್ರಧ್ಯಾನ ಮತ್ತು ಯೋಗಾಭ್ಯಾಸ.
ಮಂತ್ರಧ್ಯಾನವು ದೇವರ ಒಂದು ರೂಪದ ಮೇಲೆ ಧ್ಯಾನಿಸುತ್ತಾ ಸೂಕ್ತ ಮಂತ್ರಗಳನ್ನು ಜಪಿಸುವುದನ್ನು ಒಳಗೊಂಡಿದ್ದರೆ, ಯೋಗಾಭ್ಯಾಸವು ಸ್ವಲ್ಪ ಹೆಚ್ಚೂ ಕಡಿಮೆ ಪತಂಜಲಿಯ (ಕ್ರಿ.ಪೂ. ೨೦೦) ಯೋಗವನ್ನೇ ಹೋಲುತ್ತದೆ.
          ಪಾಂಚರಾತ್ರ ಆಗಮಗಳು ಹಿಂದೂ ಆಧ್ಯಾತ್ಮಿಕ ಸಾಹಿತ್ಯಕ್ಕೆ ವ್ಯೂಹವೆಂಬ ಒಂದು ವಿಶೇಷ ಪರಿಕಲ್ಪನೆಯನ್ನು ಕೊಟ್ಟಿವೆ. ವ್ಯೂಹ ಎಂದರೆ ಹೊರಹೊಮ್ಮುವಿಕೆ. ವ್ಯೂಹಗಳು ಒಟ್ಟು ನಾಲ್ಕಿವೆ, ಹಾಗಾಗಿ ಚತುರ್ವ್ಯೂಹ ಎಂಬ ನುಡಿಗಟ್ಟು ಬಳಕೆಯಲ್ಲಿ ಬಂದಿದೆ.
ಪಾಂಚರಾತ್ರ ಪದ್ಧತಿಯಲ್ಲಿ ಪುರುಷೋತ್ತಮನಾದ ದೇವರನ್ನು ಹಲವಾರು ನಾಮಗಳಿಂದ ಕರೆಯಲಾಗಿದೆ - ಪರಮಾತ್ಮ, ನಾರಾಯಣ, ವಿಷ್ಣು, ಭಗವಾನ್ ಮತ್ತು ವಾಸುದೇವ.
’ಭಗ’ ಎಂದರೆ ಷಡ್ಗುಣಗಳು ಅಂದರೆ ಒಳಿತುಂಟು ಮಾಡುವ ಆರು ಗುಣಗಳು. ಅವೆಂದರೆ, ಜ್ಞಾನ (ತಿಳುವಳಿಕೆ), ಐಶ್ವರ್ಯ (ಈಶತ್ವ - ಒಡೆತನ ಅದನ್ನು ಹೊಂದಿರುವುದು ಈಶ್ವರತ್ವ ಅಥವಾ ಐಶ್ವರ್ಯ), ಶಕ್ತಿ (ಸಾಮರ್ಥ್ಯ), ಬಲ (ದೃಢ ನಿಶ್ಚಯ), ವೀರ್ಯ (ಪೌರುಷ) ಮತ್ತು ತೇಜಸ್ಸು (ಭವ್ಯತೆ).
ಈ ಪದ್ಧತಿಯಲ್ಲಿ ದೇವರನ್ನು ವಾಸುದೇವನೆಂದು ಕರೆಯಲಾಗುತ್ತದೆ, ಅವನು ಭಗವೆಂದು ಕರೆಯಲ್ಪಡುವ ಷಡ್ಗುಣಗಳನ್ನು ಪರಿಪೂರ್ಣವಾಗಿ ಹೊಂದಿರುವುದರಿಂದ ಅವನು ಭಗವಾನ್ ಅಥವಾ ಭಗವಂತನಾಗಿದ್ದಾನೆ.
ಭಗವಾನ್ ವಾಸುದೇವನಿಂದ (ನಾಲ್ಕು ವ್ಯೂಹಗಳಲ್ಲಿ ಮೊದಲನೆಯದು) ಎರಡನೆಯ ವ್ಯೂಹವಾದ ’ಸಂಕರ್ಷಣ’ವು (ಅಥವಾ ಬಲರಾಮ) ಆವಿರ್ಭವಿಸುತ್ತದೆ. ಸಂಕರ್ಷಣದಿಂದ ಪ್ರದ್ಯುಮ್ನನು ಅವತರಿಸುತ್ತಾನೆ, ಅವನಿಂದ ಅನಿರುದ್ಧನ ಆವಿರ್ಭಾವವಾಗುತ್ತದೆ.
ವಾಸುದೇವ ವ್ಯೂಹದಷ್ಟೇ ಉಳಿದ ಮೂರು ವ್ಯೂಹಗಳು ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದರೂ ಸಹ ಆ ವ್ಯೂಹಗಳಲ್ಲಿ ಆರು ಗುಣಗಳಲ್ಲಿ ಎರಡು ಗುಣಗಳು ಮಾತ್ರವೇ ಪ್ರಧಾನವಾಗಿ ಹೊರಹೊಮ್ಮುತ್ತವೆ, ಉಳಿದ ಗುಣಗಳು ಸುಪ್ತಾವಸ್ಥೆಯಲ್ಲಿರುತ್ತವೆ.
ಸಂಕರ್ಷಣ ರೂಪದಲ್ಲಿ ಜ್ಞಾನ ಮತ್ತು ಬಲಗಳು ಪ್ರಧಾನವಾಗಿದ್ದರೆ, ಪ್ರದ್ಯುಮ್ನದಲ್ಲಿ ಐಶ್ವರ್ಯ ಮತ್ತು ವೀರ್ಯ ಗುಣಗಳು ಪ್ರಧಾನವಾಗಿರುತ್ತವೆ ಮತ್ತು ಅನಿರುದ್ಧ ರೂಪದಲ್ಲಿ ಶಕ್ತಿ ಮತ್ತು ತೇಜಸ್ಸುಗಳು ಪ್ರಧಾನವಾಗಿ ಹೊರಹೊಮ್ಮುತ್ತವೆ.
ಪ್ರತಿಯೊಂದು ವ್ಯೂಹವು ಎರಡು ಪ್ರಧಾನ ಗುಣಗಳನ್ನು ಹೊಂದಿರುತ್ತದೆ ಅದರಲ್ಲೊಂದು ಸೃಜನಶೀಲವಾದದ್ದು (ಸೃಷ್ಟಿಸುವ ಗುಣವುಳ್ಳದ್ದು) ಮತ್ತೊಂದು ನೈತಿಕವಾದದ್ದು (ನೀತಿಯುಕ್ತವಾದದ್ದು). 
ಪ್ರತಿಯೊಂದು ವ್ಯೂಹವೂ ಸಹ ಮೂರು-ಮೂರು ಉಪವ್ಯೂಹಗಳಿಗೆ ದಾರಿಮಾಡಿಕೊಟ್ಟು ಒಟ್ಟು ನಾಲ್ಕು ವ್ಯೂಹಗಳಿಂದ ಹನ್ನೆರಡು ರೂಪಗಳು ಹೊರಹೊಮ್ಮುತ್ತವೆ. ಅವೆಂದರೆ - ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ.
ಈ ಹನ್ನೆರಡು ರೂಪಗಳನ್ನು ಮಾಸಾಧಿಪರು ಅಥವಾ ಚಾಂದ್ರಮಾನದ ಹನ್ನೆರಡು ದೇವತೆಗಳು ಎಂದು ಪರಿಗಣಿಸಲಾಗುತ್ತದೆ. ಇವರಿಗೂ ಸಹ ಪೂಜಾದಿ ಕಾರ್ಯಕ್ರಮಗಳಲ್ಲಿ ಅರ್ಘ್ಯವನ್ನು ಅರ್ಪಿಸಲಾಗುತ್ತದೆ.
ಸಾಂಕೇತಿಕವಾಗಿ ಅವರೆಲ್ಲರೂ ಒಂದೇ ಸ್ವರೂಪ ಹೊಂದಿದ್ದಾರೆ, ಆದರೆ ಅವರ ನಾಲ್ಕು ಕೈಗಳಲ್ಲಿ ಹಿಡಿದಿರುವ ಶಂಖ, ಚಕ್ರ, ಗದಾ ಮತ್ತು ಪದ್ಮಗಳ ಸ್ಥಾನವು ರೂಪದಿಂದ ರೂಪಕ್ಕೆ ವಿಭಿನ್ನವಾದ ಕೈಗಳಲ್ಲಿರುತ್ತವೆ.
ಹಿನ್ನುಡಿ
ಪಾಂಚರಾತ್ರ ಆಗಮಗಳು ವೇದ ಪರಂಪರೆಯ ಮುಂದುವರೆದ ಭಾಗಗಳಾಗಿವೆ. ಅವುಗಳು ದೇವರು ಮತ್ತು ಭಕ್ತಿಯ ಸ್ವರೂಪವನ್ನು ಹಿಗ್ಗಿಸುವುದಲ್ಲದೇ ಅವುಗಳ ಮಥನವನ್ನೂ ಕೈಗೊಳ್ಳುತ್ತವೆ.
ಈ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಪ್ರಳಯಗಳನ್ನು ಹೊರತು ಪಡಿಸಿ ದೇವರು ಇನ್ನೂ ಎರಡು ಕ್ರಿಯೆಗಳನ್ನು ಕೈಗೊಳ್ಳುತ್ತಾನೆ. ಅವೆಂದರೆ - ನಿಗ್ರಹ (ದುಷ್ಟರ ನಿಯಂತ್ರಣ ಮತ್ತು ಶಿಕ್ಷೆ) ಮತ್ತು ಅನುಗ್ರಹ (ಶಿಷ್ಠರ/ಭಕ್ತರ ರಕ್ಷಣೆ ಮತ್ತು ಅವರ ಮೇಲೆ ಕೃಪೆದೋರುವುದು).
ಈ ಪದ್ಧತಿಯಲ್ಲಿ ’ಭಕ್ತಿ’ (ದೇವರಲ್ಲಿ ಅನುರಾಗ) ಮತ್ತು ’ಪ್ರಪತ್ತಿ’ಗಳು (ದೇವರಲ್ಲಿ ಶರಣಾಗತಿ) ಪ್ರಧಾನ ಪಾತ್ರ ಪೋಷಿಸಿದರೂ ಸಹ ಈ ಪದ್ಧತಿಯಲ್ಲಿ ಅನುಯಾಯಿಗಳಿಗೆ ಒಳಿತುಂಟು ಮಾಡುವ ಯಜ್ಞ-ಯಾಗಗಳು, ಅರ್ಚನೆ, ದೇವರನ್ನು ವಿವಿಧ ರೀತಿಯ ವಿಗ್ರಹಗಳ ಅಥವಾ ರೂಪಕಗಳ ಮೂಲಕ ಉಪಾಸಿಸುವುದು ಮತ್ತು ಪೂಜಿಸುವುದು, ದೇವಸ್ಥಾನಗಳ ನಿರ್ಮಾಣ, ವಿವಿಧ ಮಂತ್ರಗಳ ಉಚ್ಛಾರಣೆ, ಜಪ-ತಪ, ಮೊದಲಾದ ವಿಷಯಗಳಿಗೂ ಅಷ್ಟೇ ಮಹತ್ವವನ್ನು ಕೊಡಲಾಗಿದೆ.
ಹೀಗೆ ಅನುಷ್ಠಾನದಲ್ಲಿರುವ ಹಿಂದೂ ಧರ್ಮಕ್ಕೆ ಪಾಂಚರಾತ್ರ ಆಗಮಗಳು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿವೆ. ಇಂದಿಗೂ ಸಹ, ದಕ್ಷಿಣ ಭಾರತದ ಬಹುತೇಕ ವೈಷ್ಣವ ದೇವಸ್ಥಾನಗಳು ಈ ಆಗಮಗಳ ಆದೇಶಗಳನ್ನು ಪಾಲಿಸುತ್ತಿದ್ದು ಆ ಸಂಪ್ರದಾಯಗಳನ್ನು ಜೀವಂತವಾಗಿಟ್ಟಿವೆ.
*****
ಸರ್ವೇ ಜನಾಃ ಸುಖಿನೋ ಭವಂತು!
(ಆಂಗ್ಲ ಮೂಲ : ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷಕರಾದ ಸ್ವಾಮಿ ಹರ್ಷಾನಂದರು ರಚಿಸಿದ PANCHARATRA AGAMAS (An Introduction) ಪುಟಗಳು ೧೪ - ೩೧)

Rating
Average: 3 (1 vote)