ಭಾಗ - ೨ ಭೀಷ್ಮ ಯುಧಿಷ್ಠಿರ ಸಂವಾದ: ಎಲ್ಲಕ್ಕಿಂತ ಶ್ರೇಷ್ಠ ಅಸ್ತ್ರವಾವುದು!
ನಾರದ ಕೃಷ್ಣ ಸಂವಾದ ಅಥವಾ ಎಲ್ಲಕ್ಕಿಂತ ಶ್ರೇಷ್ಠ ಅಸ್ತ್ರವಾವುದು!
(ಭೀಷ್ಮ ಯುಧಿಷ್ಠಿರ ಸಂವಾದವೆನ್ನುವ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ಕಥೆ)
ಯುಧಿಷ್ಠಿರನು ಹೀಗೆ ಕೇಳಿದನು,
"ಪಿತಾಮಹಾ! ಕುಟುಂಬ ಜೀವನದಲ್ಲಿ ಎಷ್ಟೋ ಕಲಹಗಳು ಉಂಟಾಗುತ್ತಿರುತ್ತವೆ. ದಾಯಾದಿಗಳೊಂದಿಗೆ ಹಾಗು ಬಂಧು ಜನರೊಂದಿಗೆ ವ್ಯಾಜ್ಯಗಳು ಏರ್ಪಡುತ್ತಿರುತ್ತವೆ. ಮನೆಯಲ್ಲಿಯೇ ಗಂಡ ಹೆಂಡಿರ ನಡುವೆ, ತಂದೆ ಮಕ್ಕಳ ನಡುವೆ ಗೊಂದಲಗಳು, ಸಮನ್ವಯಲೋಪಗಳು ಏರ್ಪಟ್ಟು ಪರಸ್ಪರರು ದೋಷಾರೋಪಣೆ ಮಾಡಿಕೊಂಡು ತಮ್ಮತಮ್ಮಲ್ಲೇ ಶತ್ರುತ್ವವೇರ್ಪಡಿಸಿಕೊಳ್ಳುತ್ತಾರೆ. ಇವರನ್ನೆಲ್ಲಾ ಪ್ರಸನ್ನರಾಗಿ ಮಾಡಿಕೊಳ್ಳುವುದು ಹೇಗೆ? ಎಲ್ಲರನ್ನೂ ಸಂತೋಷವಾಗಿರಿಸಿಕೊಳ್ಳುವುದು ಹೇಗೆ? ಎಲ್ಲರನ್ನೂ ಏಕಧಾಟಿಯಾಗಿ ಮುನ್ನಡೆಸುವುದು ಹೇಗೆ? ದಯಮಾಡಿ ವಿವರಿಸಬೇಕಾಗಿ ಪ್ರಾರ್ಥಿಸುತ್ತೇನೆ." ಹೀಗೆ ಭಿನ್ನವಿಸಿದ ಯುಧಿಷ್ಠಿರನು ಕೈಗಳನ್ನು ಜೋಡಿಸಿಕೊಂಡು ಭೀಷ್ಮ ಪಿತಾಮಹನ ಪಾದಗಳ ಬಳಿಯಲ್ಲಿ ನಿಂತುಕೊಂಡನು.
ಭೀಷ್ಮನು ಹೀಗೆ ನುಡಿದನು,
"ಧರ್ಮಜನೇ! ಈ ವಿಷಯದಲ್ಲಿ ನಾನು ಬಹು ಹಿಂದೆ ಕೇಳಿದ, ’ನಾರದ ಶ್ರೀ ಕೃಷ್ಣ ಸಂವಾದ’ವೆನ್ನುವ ಒಂದು ಉಪಾಖ್ಯಾನವಿದೆ. ಅದನ್ನು ನಿನಗೆ ಹೇಳುವಂತಹವನಾಗುತ್ತೇನೆ, ಆಲಿಸುವಂತಹವನಾಗು"
"ಶ್ರೀಕೃಷ್ಣನಿರುವಲ್ಲಿಗೆ ಒಮ್ಮೆ ನಾರದ ಮಹರ್ಷಿಗಳು ಆಗಮಿಸಿದರು. ನಾರದರಿಗೆ ವಂದಿಸಿದ ಶ್ರೀ ಕೃಷ್ಣನು ತನ್ನ ಗೃಹಚ್ಛಿದ್ರಗಳನ್ನು ಕುರಿತು ಈ ವಿಧವಾಗಿ ಪರಿತಪಿಸಿದನು. "ಮಹರ್ಷಿಗಳೇ! ನಿಮ್ಮಿಂದ ಏನನ್ನೂ ಮುಚ್ಚಿಡಬೇಕಾದ ಅವಶ್ಯಕತೆ ಇಲ್ಲ. ನಾನು ಅಧಿಕಾರವನ್ನು ನಿಯಂತ್ರಿಸುತ್ತಿದ್ದರೂ ಸಹ ಅಣ್ಣ ತಮ್ಮಂದಿರನ್ನು, ಕುಟುಂಬದ ಸದಸ್ಯರನ್ನು ಅಂಕೆಯಲ್ಲಿಟ್ಟುಕೊಳ್ಳಬೇಕೆಂದು ಬಯಸುವುದಿಲ್ಲ. ನನ್ನ ಆದಾಯದಲ್ಲಿ ಅರ್ಧವನ್ನು ಮಾತ್ರವೇ ನಾನು ಅನುಭವಿಸುತ್ತಿದ್ದೇನೆ, ಉಳಿದದ್ದನ್ನು ಕುಟುಂಬಕ್ಕೆ ಹಾಗು ಬಂಧುಗಳಿಗೆ ಕೊಡುತ್ತಿದ್ದೇನೆ. ಅವರು ಕಠಿಣವಾಗಿ ಮಾತನಾಡಿದರೂ ಸಹ ನಾನು ತುಟಿ ಬಿಚ್ಚುವುದಿಲ್ಲ. ಆದರೂ ಸಹ ನನ್ನ ಕುಟುಂಬ ವರ್ಗದವರು ನನ್ನನ್ನು ನಾನಾ ಮಾತುಗಳಿಂದ ಚುಚ್ಚುತ್ತಾರೆ. ನನ್ನ ಹೃದಯವನ್ನು ಘಾಸಿಗೊಳಿಸುತ್ತಾರೆ. ನನ್ನ ಹೃದಯದಲ್ಲಿ ತಾಪವುಂಟಾಗುತ್ತಿದೆ. ನಮ್ಮ ಹಿರಿಯಣ್ಣನಾದ ಬಲರಾಮನನ್ನು ನೋಡಿ, ಅವನಿಗೆ ಎಣೆಯಿಲ್ಲದಷ್ಟು ಬಲವಿದೆ. ತನ್ನಷ್ಟು ಬಲಶಾಲಿ ಯಾರೂ ಇಲ್ಲವೆನ್ನುವ ದರ್ಪದಿಂದಲೇ ಅವನು ವ್ಯವಹರಿಸುತ್ತಾನೆ. ಇನ್ನು ಬಹಳ ಕಿರಿಯವನಾದ ಗದನು (ಬಲರಾಮನ ಸ್ವಂತ ತಮ್ಮ) ಅತ್ಯಂತ ಸುಕುಮಾರನು. ಕಷ್ಟಪಟ್ಟು ಕೆಲಸವನ್ನೂ ಮಾಡುವುದಿಲ್ಲ. ಇನ್ನು ನನ್ನ ಕುಮಾರನಾದ ಪ್ರದ್ಯುಮ್ನನೋ, "ತಾನೇ ಸುರ ಸುಂದರಾಂಗ - ತಾನೇ ಅತಿ ಸುಂದರನೆಂದು ಹೇಳಿಕೊಂಡು ತಿರುಗಾಡುತ್ತಿರುತ್ತಾನೆ. ಇವರೆಲ್ಲರೂ ನನ್ನ ಬಳಿಯಲ್ಲಿಯೇ ಇದ್ದರೂ ಸಹ ನಾನು ನಿಸ್ಸಾಹಯಕನಾಗಿದ್ದೇನೆ."
"ಉಳಿದಂತೆ, ನಾರದಾ! ವೃಷ್ಣಿ ವಂಶೀಯರಲ್ಲಿ ವೀರರು ಅನೇಕರಿದ್ದಾರೆ. ಅವರ ಸಹಾಯವಿದ್ದರೆ ಯಾರಿಗಾದರೂ ವಿಜಯವು ಸುಲಭವಾಗಿ ಒಲಿಯುತ್ತದೆ. ಆದರೆ ಆಹುಕ ಮತ್ತು ಅಕ್ರೂರರು ಪರಸ್ಪರ ಶತ್ರುತ್ವವನ್ನು ಹೊಂದಿದ್ದಾರೆ. ಇಬ್ಬರೂ ನನಗೆ ಬೇಕಾದವರೆ! ಇಬ್ಬರೂ ಸ್ವಜನರೆ, ಇಬ್ಬರ ಸಹಾಯವೂ ನನಗೆ ಅತ್ಯವಶ್ಯಕ. ಆದರೆ ನಾನು ಯಾರ ಪಕ್ಷವನ್ನೂ ವಹಿಸಲಾರೆ. ಇವನ ಪರವಾಗಿ ಮಾತನಾಡಿದರೆ ಅವನಿಗೆ ಕೋಪವುಂಟಾಗುತ್ತದೆ, ಅವನ ಪರವಾಗಿ ಮಾತನಾಡಿದರೆ ಇವನು ಕೋಪಗೊಳ್ಳುತ್ತಾನೆ. ಆದ್ದರಿಂದ ನಾನು ಏನು ಮಾಡಲಿ? ತನ್ನ ಇಬ್ಬರು ಮಕ್ಕಳು ಜೂಜಾಡುವಾಗ ತಾಯಿಯಾದವಳು ತನ್ನ ಮಕ್ಕಳು ಗೆಲ್ಲಲಿ ಎಂದು ಹಾರೈಸುತ್ತಾಳೆ. ಆದರೆ ಎರಡನೆಯವನು ಸೋತಾಗ ಆಕೆ ಅದನ್ನು ಸೈರಿಸಲಾರಳು. ಹೀಗಿದೆ ನನ್ನ ಪರಿಸ್ಥಿತಿ. ಉಭಯ ಪಕ್ಷದವರ ಹಿತವನ್ನು ಬಯಸುವವನಾದ ನಾನು ಏನು ಮಾಡಬೇಕು? ನನ್ನ ಕುಟಂಬದಲ್ಲಿ, ನನ್ನ ಕುಲದಲ್ಲಿ ಉಂಟಾಗುವ ಗೊಂದಲಗಳನ್ನು ನಿವಾರಿಸುವ ಮಾರ್ಗಗಳನ್ನು ತಿಳಿಸಿಕೊಡುವ ಕೃಪೆ ಮಾಡಿ."
"ಆಗ ನಾರದರು, ಶ್ರೀ ಕೃಷ್ಣನೊಂದಿಗೆ ಹೀಗೆ ಹೇಳಿದರು, "ಕೃಷ್ಣಾ! ಆಪತ್ತುಗಳಲ್ಲಿ ಎರಡು ವಿಧ. ಒಂದು ಬಾಹ್ಯವಾದುದಾರೆ ಮತ್ತೊಂದು ಆಂತರಿಕವಾದುದು. ಇವುಗಳಲ್ಲಿ ಸ್ವಯಂಕೃತ ಹಾಗು ಪರಕೃತ ಎನ್ನುವ ಮತ್ತೆರಡು ವಿಧಗಳಿವೆ. ನಿನಗೆ ಉಂಟಾಗಿರುವ ಆಪತ್ತು ಆಂತರಿಕವಾದದ್ದು. ಅಂತಃಕಲಹವು ನಿಶ್ಚಿಯವಾಗಿಯೂ ಸ್ವಯಂಕೃತವಾದದ್ದೇ ಹೊರತು ಮತ್ತೇನಲ್ಲ. ನೀನು ಪ್ರಸ್ತಾಪಿಸಿರುವವರು ನಿನ್ನ ವಂಶಸ್ಥರೇ. ನೀನು ಕಂಸನನ್ನು ಸಂಹರಿಸಿದೆ, ಆ ರಾಜ್ಯವನ್ನು ಉಗ್ರಸೇನನಿಗೆ ಕೊಟ್ಟೆ. ಅಕ್ರೂರನೂ ಸಹ ಅಲ್ಲಿಯವನೇ. ಅವನ ಶಕ್ತಿಯು ಹೆಚ್ಚಾಗಿದೆ, ಆದ್ದರಿಂದ ನಿನಗೆ ಈ ವಿಧವಾದ ಗೊಂದಲವೇರ್ಪಟ್ಟಿದೆ. ಏನಾದರಾಗಲಿ, ಕೃಷ್ಣಾ ನಿನಗೆ ಉಪಾಯವೊಂದನ್ನು ತಿಳಿಸುತ್ತೇನೆ, ಕೇಳು. ಒಂದು ಅಸ್ತ್ರದ ಪ್ರಯೋಗವನ್ನು ನಿನಗೆ ಉಪದೇಶಿಸುತ್ತೇನೆ ಅದನ್ನು ಪ್ರಯೋಗಿಸು ಆಗ ಎಲ್ಲವೂ ಸರಿಯಾಗುತ್ತದೆ. ಈ ಅಸ್ತ್ರವು ಅತ್ಯಂತ ಮೃದುವಾದದ್ದು, ಅದನ್ನು ಯಾವುದೇ ವಜ್ರದಿಂದ ಮಾಡಲಾಗಿಲ್ಲ. ಅದು ಬಹು ಕೋಮಲವಾದ ಅಸ್ತ್ರ, ಅದನ್ನು ಉಪಯೋಗಿಸಿ ಎಂತಹ ಕಠಿಣ ಹೃದಯವನ್ನಾದರೂ ಛೇದಿಸಬಹುದು, ಎಂತಹವರ ನಾಲಿಗೆಯನ್ನಾದರೂ ತುಂಡರಿಸಬಹುದು ಅಂದರೆ ಅವರ ಬಾಯಿಗೆ ಬೀಗ ಹಾಕಬಹುದು."
"ಆ ಅಸ್ತ್ರವೇನೆಂದು ತಿಳಿಯುವ ಕುತೂಹಲವುಂಟಾಗುತ್ತಿದೆಯಲ್ಲವೇ! ಒಂದೇ ಮಾತಿನಲ್ಲಿ ಹೇಳುತ್ತೇನೆ ಕೇಳು. ಆ ಅಸ್ತ್ರದ ಹೆಸರು "ಮಧುರವಾಕ್ಯ!" ಅಂದರೆ "ಮೃದು ವಚನ". ಕುಟುಂಬ ವರ್ಗದವರಾಗಲಿ, ಬಂಧುಗಳಾಗಲಿ ಕಟುನುಡಿಗಳನ್ನಾಡುತ್ತಾರೆಂದಿಟ್ಟುಕೊ, ಅವಹೇಳನಕಾರಿಯಾಗಿ ಮಾತನಾಡಿದರೆಂದುಕೊ, ಅವರೊಂದಿಗೆ ನೀನು ಮಧುರವಾಗಿ ಮಾತನಾಡು. ಯಥಾಶಕ್ತಿ ಅವರನ್ನು ಸತ್ಕರಿಸು, ಅವರನ್ನು ಪೂಜಿಸು. ಈ ವಿಧವಾಗಿ ಅವರ ಹೃದಯಗಳನ್ನು, ಅವರ ಮಾತುಗಳನ್ನು ಹಾಗು ಅವರ ಮನಸ್ಸುಗಳನ್ನು ಶಾಂತಪಡಿಸಿ ಅವರನ್ನು ಜಯಿಸು."
"ಕೃಷ್ಣಾ! ಒಂದು ವಿಷಯವನ್ನು ನೆನಪಿಟ್ಟುಕೊ. ಭೂಮಿ ಸಮತಟ್ಟಾಗಿದ್ದರೆ ಯಾವ ಎತ್ತಾದರೂ ಭಾರವನ್ನು ಎಳೆಯಬಲ್ಲದು. ಆದರೆ, ತಗ್ಗು-ದಿಣ್ಣೆಗಳಿಂದ ಕೂಡಿದ ನೆಲದಲ್ಲೂ ಭಾರವನ್ನು ಎಳೆಯುವ ಎತ್ತೇ ಉತ್ತಮವಾದುದು. ಯಾದವ ಸಮಾಜಕ್ಕೆ ನೀನು ಪ್ರಮುಖನು. ನಿಮ್ಮ ಸಮಾಜದ ಜನರಜೀವನದಲ್ಲಿ ಗೊಂದಲಗಳುಂಟಾಗಬಾರದು. ಒಂದು ವೇಳೆ ಗೊಂದಲ, ಕಲಹವೇರ್ಪಟ್ಟರೆ ಅದು ಯಾದವ ಕುಲದ ಮೂಲಕ್ಕೇ ಕೊಡಲಿ ಪೆಟ್ಟಾಗುತ್ತದೆ ಎನ್ನುವುದನ್ನು ಮರೆಯಬೇಡ."
"ಮತ್ತೊಂದು ವಿಷಯವೂ ಇದೆ. ಒಬ್ಬನಿಗೆ, ಬುದ್ಧಿಚಾತುರ್ಯವಿರಬೇಕು. ಕ್ಷಮಿಸುವ ಗುಣವಿರಬೇಕು. ಮತ್ತು ನಿಗ್ರಹದಿಂದ ಇರಬೇಕು. ಎಲ್ಲವನ್ನೂ ಮೀರಿ ತನ್ನ ಬಳಿಯಿರುವ ಧನವನ್ನು ತ್ಯಾಗಮಾಡುವುದಕ್ಕೆ ಸಂಸಿದ್ಧನಾಗಿ ಇರಬೇಕು. ಈ ಗುಣಗಳಿಲ್ಲದಿದ್ದರೆ ಎಲ್ಲರೂ ಒಬ್ಬರ ಆಧೀನದಲ್ಲಿರುವುದು ಸಾಧ್ಯವಿಲ್ಲ."
"ಕೃಷ್ಣಾ! ಮಧುರವಾಗಿ ಮಾತನಾಡುವ ವ್ಯಕ್ತಿಯು ಸಕಲಭೂತಗಳಿಗೂ ಪ್ರಿಯವಾದವನಾಗಿ ಇರಬಲ್ಲನು. ಯಾವಾಗಲೂ ಕಣ್ಣಿನಲ್ಲಿ ಕೆಂಡಕಾರುತ್ತ, ಯಾರೊಂದಿಗೂ ಮಾತನಾಡದೆ, ಕುಟಿಲ ಬುದ್ಧಿಯನ್ನು ಹೊಂದಿದವರು ಎಲ್ಲರ ದ್ವೇಷಕ್ಕೂ ಗುರಿಯಾಗುತ್ತಾರೆ."
"ಯಾರಾದರೂ ನಿನ್ನ ಎದುರು ಸಿಕ್ಕರೆ ನೀನೇ ಮುಂಚಿತವಾಗಿ ಅವರನ್ನು ಮಾತನಾಡಿಸಬೇಕು, ಮಂದಹಾಸದೊಂದಿಗೆ ಮಾತನಾಡಿಸಬೇಕು. ಆಗ ಎಲ್ಲರೂ ಪ್ರಸನ್ನರಾಗುತ್ತಾರೆ."
"ಪಲ್ಯೆ, ಉಪ್ಪಿನಕಾಯಿ ಮೊದಲಾದ ವ್ಯಂಜನಗಳಿಲ್ಲದ ಭೋಜನವು ರುಚಿಸುವುದಿಲ್ಲ. ಅದೇ ವಿಧವಾಗಿ ಮಧುರ ನುಡಿಗಳನ್ನಾಡದೆ ಕೊಟ್ಟ ದಾನವು ಸ್ವೀಕರಿಸಲ್ಪಡದು."
"ಮಧುರವಾಗಿ ಮಾತನಾಡುವ ವ್ಯಕ್ತಿ ಮತ್ತೊಬ್ಬರಿಂದ ಎಲ್ಲವನ್ನೂ ತೆಗೆದುಕೊಂಡರೂ ಸಹ ಅವನು ಪ್ರಿಯನಾದವನಾಗಿಯೇ ಇರುತ್ತಾನೆ. ಆದ್ದರಿಂದ ಯಾರನ್ನಾದರೂ ದಂಡಿಸಬೇಕೆಂದುಕೊಂಡರೂ ಸಹ ಅವರನ್ನು ಸಾಂತ್ವನಪೂರ್ವಕವಾಗಿಯೇ ಮಾತನಾಡಿಸಬೇಕು. ಮಧುರ ವಾಕ್ಯಗಳನ್ನು ಮಾತನಾಡುವ ವ್ಯಕ್ತಿಗೆ ಮತ್ತೊಬ್ಬನು ಅವಶ್ಯಬಿದ್ದಾಗ ತಲೆಯನ್ನೂ ಸಹ ಸಂತೋಷವಾಗಿ ಕತ್ತರಿಸಿ ಕೊಡುತ್ತಾನೆ."
"ಮಧುರವಾಕ್ಯಕ್ಕೆ ಮೀರಿದ ಜನವಶೀಕರಣ ತಂತ್ರ ಮತ್ತೊಂದಿಲ್ಲ. ಮಧುರ ನುಡಿಗಳಿಗೆ ಮೀರಿದ ಮತ್ತೊಂದು ಅಸ್ತ್ರವೂ ಇಲ್ಲ."
"ಕೃಷ್ಣಾ! ಇವೆಲ್ಲಾ ನಿನಗೆ ತಿಳಿದಿರುವಂತಹವುಗಳೆ, ನೀನು ಆಚರಿಸುತ್ತಿರುವಂತಹವುಗಳೆ. ಆದರೂ ಸಹ ನೀನು ಕೇಳಿದ್ದರಿಂದ ನಿನಗೆ ವಿವರಿಸಿದೆನಷ್ಟೆ, ನಾನು ನಿನಗೆ ಉಪದೇಶಿಸುವುದೇನಿದೆ!"
ಇದಾದ ನಂತರ ಭೀಷ್ಮ ಪಿತಾಮಹನು, ಧರ್ಮಜ್ಞನೊಂದಿಗೆ ಹೀಗೆ ಹೇಳಿದನು - "ಯುಧಿಷ್ಟಿರ ನೀನು ಕೇಳಿದ ಪ್ರಶ್ನೆಗೆ ಇದೇ ಉತ್ತರ."
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಿದ್ದೆ).
ಹಿಂದಿನ ಲೇಖನ "ಭಾಗ - ೧ ಭೀಷ್ಮ ಯುಧಿಷ್ಠಿರ ಸಂವಾದ: ಮೂಷಿಕ ಮಾರ್ಜಾಲ ವೃತ್ತಾಂತವು" ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7-%E0%B2%AD...
Comments
ಉ: ಭಾಗ - ೨ ಭೀಷ್ಮ ಯುಧಿಷ್ಠಿರ ಸಂವಾದ: ಎಲ್ಲಕ್ಕಿಂತ ಶ್ರೇಷ್ಠ...
ಈ ಲೇಖನದ ಮುಂದಿನ ಭಾಗ - ೩ ಭೀಷ್ಮ ಯುಧಿಷ್ಠಿರ ಸಂವಾದ: ಸಮಯಸಾಧಕತನ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%AD...
ಉ: ಭಾಗ - ೨ ಭೀಷ್ಮ ಯುಧಿಷ್ಠಿರ ಸಂವಾದ: ಎಲ್ಲಕ್ಕಿಂತ ಶ್ರೇಷ್ಠ...
ಈ ಮಾಲಿಕೆಯ ಎರಡನೇ ಲೇಖನವನ್ನೂ ಸಹ ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿದ ಸಂಪದ ನಿರ್ವಹಣಾ ಮಂಡಳಿ ಮತ್ತು ಶ್ರೀಯುತ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು. ಸಂಪದ ಬಳಗದ ವಾಚಕರಿಗೂ ಧನ್ಯವಾದಗಳು. :)