ಭಾಗ - ೨: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ‍‍‍- ಮತ ಅಥವಾ ಧಾರ್ಮಿಕ ಶಕವನ್ನು ನಮ್ಮ ತಲೆಗೆ ಕಟ್ಟಿದರು!

ಭಾಗ - ೨: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ ‍‍‍- ಮತ ಅಥವಾ ಧಾರ್ಮಿಕ ಶಕವನ್ನು ನಮ್ಮ ತಲೆಗೆ ಕಟ್ಟಿದರು!

ಚಿತ್ರ

            ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಇದರ ಎರಡನೆಯ ಕಂತು, "ಮತಶಕಾನ್ನಿ ಮನ ನೆತ್ತಿನ ರುದ್ದಾರು - ಧಾರ್ಮಿಕ ಶಕವನ್ನು ನಮ್ಮ ತಲೆಗೆ ಕಟ್ಟಿದರು", ಇದೀಗ ನಿಮ್ಮ ಮುಂದಿದೆ ನೋಡಿ.
            ಮೊದಲನೆಯ ಕಂತಿನ ಕೊಂಡಿ. 
ಮತ ಅಥವಾ ಧಾರ್ಮಿಕ ಶಕವನ್ನು ನಮ್ಮ ತಲೆಗೆ ಕಟ್ಟಿದರು!
          ವಿಲಿಯಮ್ ಜೋನ್ಸ್, ಥಾಮಸ್ ಬಾಬಿಂಗ್ಟನ್ ಮೆಕಾಲೆ, ಬಿಷಪ್ ಕಾಲ್ಡ್‌ವೆಲ್‌ತ್ರಯರ ಚಿಂತನೆಗಳೊಂದಿಗೆ ಇಂದು ಕಾರ್ಲ್‌ಮಾರ್ಕ್ಸ್ ಸಿದ್ದಾಂತವು ಮೇಳೈವಿಸಿ ದುಷ್ಟಚತುಷ್ಟಯವು ಪೂರ್ಣಗೊಂಡಿದೆ. ನಿಜವಾಗಿ ನೋಡಿದರೆ ಈಗಿರುವುದು ಕಾರ್ಲ್‌ಮಾರ್ಕ್ಸ್ ಸಿದ್ದಾಂತವೆನ್ನುವದಕ್ಕಿಂತ ಅವನ ಹೆಸರಿನಲ್ಲಿ ಪ್ರಚಲಿತದಲ್ಲಿರುವ ಸಿದ್ಧಾಂತವೆನ್ನುವುದು ಹೆಚ್ಚು ಸೂಕ್ತವಾದೀತು! ಸತ್ಯವೇನೆಂದರೆ ಈಗಿರುವುದು ಲೆನಿನ್, ಸ್ಟ್ಯಾಲಿನ್, ಹಾಗು ಮಾವೋಗಳ ಸಿದ್ಧಾಂತ. ಭಾರತೀಯ ಮೇಧಾವಿಗಳಲ್ಲಿ ಹಲವರನ್ನು ಈ ’ಲೆನಿನಿಷ್ಟ್ ಸ್ಟ್ಯಾಲಿನಿಷ್ಟ್ ಮಾವೋಯಿಷ್ಟ್’ ಸಿದ್ಧಾಂತವು ಪ್ರಗತಿಪರ ಚಿಂತಕರನ್ನಾಗಿ ರೂಪಿಸಿದೆ! ಈ ಪ್ರಗತಿಪರರಿಂದ ಹಲವು ಕ್ರಾಂತಿಕಾರಿಗಳನ್ನು ಬೇರ್ಪಡಿಸಿ..... ಮೆಕಾಲೆ ಚಿಂತನೆಯ ಪ್ರಭಾವವನ್ನು ವಿಸ್ತರಿಸುವುದಕ್ಕೆ ಈ ಮಾರ್ಕ್ಸಿಸ್ಟ್ ಮೇಧಾವಿಗಳು ಕ್ರಿ.ಶ. ೧೯೪೭ರಿಂದ ತಮ್ಮ ಕೃಷಿಯನ್ನು ದ್ವಿಗುಣ, ತ್ರಿಗುಣಗೊಳಿಸಿದ್ದಾರೆ. ವಾಸ್ತವವಾಗಿ ಮೆಕಾಲೆ ವಿದ್ಯಾವಿಧಾನವು ಆರಂಭಿಸಿದ ಬೌದ್ಧಿಕ ದಿವಾಳಿತನವನ್ನು ಮುಂದುವರೆಸುವ ಗುರುತರವಾದ ಜವಾಬ್ದಾರಿಯನ್ನು ವಾಮಪಂಥದ ಮೇಧಾವಿಗಳು ತಮ್ಮ ಭುಜದ ಮೇಲೆ ಹೊತ್ತುಕೊಂಡಿದ್ದಾರೆ. ಪಾಶ್ಚಾತ್ಯ ಸಾಮ್ರಾಜ್ಯವಾದವನ್ನು ವಿರೋಧಿಸುವ ಪಣತೊಟ್ಟ ಭಾರತೀಯ ವಾಮಪಂಥೀಯ ಬುದ್ಧಿಜೀವಿಗಳು ಮೆಕಾಲೆಯ ಆಶಯವಾದ ಭಾರತೀಯ ಸಂಸ್ಕೃತಿಯನ್ನು ನಾಶಮಾಡುವ ಕುತಂತ್ರವನ್ನು ಮುಂದುವರೆಸುವಕೊಂಡು ಹೋಗುತ್ತಿರುವ ಅವನ ನಿಷ್ಠಾವಂತ ಅನುಯಾಯಿಗಳಾಗಿದ್ದಾರೆ!  
            ಹುಣ್ಣಿಮೆಯ ದಿನ ಹುಟ್ಟಿದ
ಮಗುವಿನ ’ಬರ್ತಡೆ’ ಯಾವಾಗ?
ಅಮಾವಾಸ್ಯೆಯ ದಿನದಂದೂ
ಜರುಗುತ್ತಿದೆಯಲ್ಲವೇ ಈಗ!
ಅನುಸರಿಸಿ ನಮ್ಮದಲ್ಲದ ಕಾಲಗಣನೆಯ ರೀತಿ
ಹಾಳಾಗಿಹುದು ನಮ್ಮಯ ಜೀವನದ ರೀತಿ ನೀತಿ
ಕ್ರಿಸ್ತ ಶಕ ಅಳವಡಿಸಿಕೊಂಡದ್ದರ ಪರಿಣಾಮ
ನಶಿಸಿಹುದು ದೇಶೀಯ ಚಿಂತನೆಯ ಪರಿಮಾಣ!
          ಒಬ್ಬ ವರನಿಗೆ ಒಂದು ಕನ್ಯೆಯೊಡನೆ ಮಾಘ ಶುದ್ಧ ತ್ರಯೋದಶಿಯಂದು ವಿವಾಹ ಜರಿಗಿತು.... ಅವರಿಬ್ಬರದೂ ಹೇಳಿ ಮಾಡಿಸಿದಂತಹ ಅನ್ಯೋನ್ಯ ದಾಂಪತ್ಯ. ಅವರು ಪ್ರತಿ ವರ್ಷ ತಪ್ಪದೆ ತಮ್ಮ ವಿವಾಹ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಾರೆ. ನಾಲ್ಕು ವರ್ಷಗಳ ನಂತರ ಈ ಶುಭ ವಿವಾಹ ಮಹೋತ್ಸವವು ಅಮಾವಾಸ್ಯೆಯಂದು ಆಚರಿಸಲ್ಪಟ್ಟಿತು. ಮದುವೆಯಾದ ದಿನದಂದು ಸ್ವಲ್ಪ ಹೆಚ್ಚೂ ಕಡಿಮೆ ಗುಂಡು ಗುಂಡಾಗಿದ್ದ ಚಂದ್ರನು ರಾತ್ರಿಯೆಲ್ಲಾ ಕಾಣಿಸಿಕೊಂಡರೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಈ ದಿವಸ ಚಂದ್ರನು ಕಾಣಿಸಿಕೊಳ್ಳದ ಅಮಾವಾಸ್ಯೆಯಾಗಿತ್ತು. ತಮ್ಮ ಮದುವೆಯಾದ ದಿನದಂದು ಗುಂಡು ಗುಂಡಾಗಿ ಕಾಣಿಸಿಕೊಂಡಿದ್ದ ಚಂದ್ರನು ಇಂದು ಭಾಗಶಃ  ಕೂಡಾ ಇಲ್ಲವೆನ್ನುವ ಕಲ್ಪನೆಯೂ ಇಲ್ಲ ಆ ಹಿಂದೂ ದಂಪತಿಗಳಿಗೆ. ಮಾಘ ಮಾಸದಲ್ಲಿ ತಮ್ಮ ಮದುವೆಯಾಗಿದೆ ಮತ್ತು ಅದು ಶುದ್ಧ ತ್ರಯೋದಶಿಯಂದು ನಡೆದಿದೆ ಎನ್ನುವ ನೆನಪೂ ಸಹ ಇಲ್ಲ ಅವರಿಗೆ. ಆದರೆ ಫ್ರೆಬ್ರವರಿ ತಿಂಗಳಿನ ೬ನೇ ತಾರೀಖಿನಂದು ತಮ್ಮ ಮದುವೆ ನಡೆಯಿತು ಎನ್ನುವುದು ಮಾತ್ರ ಖಂಡಿತವಾಗಿ ನೆನಪಿರುತ್ತದೆ! ಆ ಫ್ರೆಬ್ರವರಿ ೬ನೇ ತಾರೀಖಿನಂದು ಪ್ರತಿ ವರ್ಷ ಶುದ್ಧ ತ್ರಯೋದಶಿ ಆಗಿರಬೇಕೆಂದಾಗಲಿ ಅಥವಾ ಬೆಳದಿಂಗಳ ರಾತ್ರಿಯಾಗಿರಬೇಕೆಂಬುದಾಗಲಿ ಸೃಷ್ಟಿ ಕ್ರಮದಲ್ಲಿ ಇಲ್ಲ. ಆದ್ದರಿಂದ ಅಮಾವಾಸ್ಯೆ ಕೂಡಾ ಆ ದಿನದಂದು ಇರಬಹುದು, ಬರಬಹುದು! ನಮ್ಮ ಸಂಸ್ಕೃತಿಯ ಚಂದ್ರನನ್ನೇ ಮೆಕಾಲೆ.... ನುಂಗಿ ನೊಣೆದಿದ್ದಾನೆ....... ಹಾಗಿರುವಾಗ ಅದರ ಚಿಂತೆಯೂ ನಮಗಿಲ್ಲ!
        ಭಾರತೀಯರ ಜೀವನ ವೈವಿಧ್ಯತೆಗಳನ್ನು, ವೈವಿಧ್ಯತೆಗಳ ವಿವಿಧ ರೀತಿಗಳ ನಡುವೆ ಏರ್ಪಡಿಸಿಕೊಂಡ ಸಹಜವಾದ ಸಮನ್ವಯ ತತ್ತ್ವವನ್ನು ಮೆಕಾಲೆ ವಿದ್ಯಾ ವಿಧಾನವು ಆಪೋಶನ ತೆಗೆದುಕೊಂಡಿದೆ. ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಅನೇಕಾನೇಕ ಹಬ್ಬಗಳು ಚಾಂದ್ರಮಾನ ಪದ್ಧತಿಯನ್ನನುಸರಿಸಿ ಆಚರಿಸಲ್ಪಡುತ್ತವೆ. ಮಕರ ಸಂಕ್ರಾಂತಿಯಂತಹ ಹಬ್ಬಗಳು ಮಾತ್ರ ಸೌರಮಾನ ಪದ್ಧತಿಯನ್ನುನುಸರಿಸಿ ಆಚರಿಸಲ್ಪಡುತ್ತವೆ. ನದಿ ಪುಷ್ಕರಗಳಂತಹ ಹಬ್ಬಗಳು ’ಬಾರ್ಹಸ್ಪತಿಮಾನಂ’ ಅಂದರೆ ಗುರುಗ್ರಹದ ಚಲನೆಯನ್ನನುಸರಿಸಿ ಏರ್ಪಡುವ ಸಂವತ್ಸರಗಳಿಗನುಗುಣವಾಗಿ ಆಚರಿಸಲ್ಪಡುತ್ತವೆ. ಈ ಕಾಲಗಣನೆಗಳಲ್ಲದೆ ’ನಕ್ಷತ್ರಮಾನ’ ಪದ್ಧತಿಗಳೂ ಸಹ ಪ್ರಚಲಿತದಲ್ಲಿವೆ. ಈ ಎಲ್ಲಾ ಪದ್ಧತಿಗಳು ಯಾವುದೇ ಒಂದು ಮತಪಂಥಗಳಿಗೆ ಸೀಮಿತವಾಗಿಲ್ಲ! ಚಂದ್ರನ ಚಲನೆ, ಗ್ರಹಗಳ ಚಲನೆ, ಸೂರ್ಯನ ಸುತ್ತಲೂ ಭೂಮಿಯ ಪರಿಭ್ರಮಣದ ಫಲಿತವಾಗಿ ಉಂಟಾಗುವ ವಿವಿಧ ನಕ್ಷತ್ರಗಳ ಸಾಪೇಕ್ಷ ಚಲನೆ, ಮೊದಲಾದ ಸೃಷ್ಟಿಜನ್ಯ ಸತ್ಯಗಳಿಗೆ ಅನುಗುಣವಾಗಿ ವಿಶ್ವವ್ಯವಸ್ಥೆಯು ಏರ್ಪಟ್ಟಿದೆ. ಇದನ್ನು ಮನಗಂಡ ಭಾರತೀಯರು ಸೃಷ್ಟಿಯಲ್ಲಿನ ವೈವಿಧ್ಯತೆಗಳನ್ನು ತಮ್ಮ ಜೀವನಪದ್ಧತಿಗೂ ಅಳವಡಿಸಿಕೊಂಡರು. ಈ ವೈವಿಧ್ಯತೆಯಲ್ಲಿ ವೈರುಧ್ಯವಿಲ್ಲ (ವಿರೋಧವಿಲ್ಲ) ಆದರೆ ಸಮನ್ವಯವಿದೆ. ವೈವಿಧ್ಯತೆಗಳು ಒಂದಕ್ಕೊಂದು ಪರಸ್ಪರ ಪೂರಕವಾಗಿ ಇವೆ. ಹಾಗೆ ಸೃಷ್ಟಿಜನ್ಯ ಸಮನ್ವಯವಿರುವುದರಿಂದಲೇ ಋತುಗಳ ಆಗಮನದಲ್ಲಿ ವ್ಯತ್ಯಾಸವೇರ್ಪಡದು. ಈ ಸಹಜವಾದ ಸ್ಥಿತಿಯನ್ನು ಜೀವನರೀತಿಯಾಗಿ ಮಾರ್ಪಡಿಸಿಕೊಂಡ ಪ್ರಥಮ ಜನಾಂಗ ಭಾರತೀಯ ಜನಾಂಗ. ಆದ್ದರಿಂದ ಇತರೇ ಕಾಲಮಾನ ಪದ್ಧತಿಗಳನ್ನು ನಾವು ಸೌರಮಾನ ಪದ್ಧತಿಯೊಳಗೆ ಅನುಸಂಧಾನ ಮಾಡಿಕೊಂಡಿದ್ದೇವೆ. ಹೀಗೆ ಸಮನ್ವಯಗೊಳಿಸಿಕೊಳ್ಳುವ ಪದ್ಧತಿ ಪಾಶ್ಚಾತ್ಯರಿಗೆ ತಿಳಿಯದು. ಭಾರತದೇಶಕ್ಕೆ ಪಡುವಣ ದಿಕ್ಕಿನಲ್ಲಿರುವ ದೇಶಗಳ ಜನರು ಕ್ರಮೇಣವಾಗಿ ಭಾರತೀಯ ಚಿಂತನೆಗಳಿಗೆ ದೂರವಾದರು ಮತ್ತು ವಿವಿಧ ಕಾಲಮಾನಗಳ ಸಮನ್ವಯವನ್ನು ಮರೆತುಹೋದರು. ಕ್ರಿಸ್ತನ ಶಕವನ್ನು ಅನುಸರಿಸುವ ಪಾಶ್ಚಿಮಾತ್ಯರಿಗೆ ತಿಳಿದಿರುವುದು ಕೇವಲ ಸೌರಮಾನ ಪದ್ಧತಿಯೊಂದೇ. ಅರಬ್ ದೇಶಗಳಲ್ಲಿ ಹುಟ್ಟಿದ ಇಸ್ಲಾಂ ಧರ್ಮದ ಅನುಯಾಯಿಗಳಿಗೆ ತಿಳಿದಿರುವುದು ಕೇವಲ ಚಾಂದ್ರಮಾನ ಪದ್ಧತಿಯೊಂದೇ! ಕ್ರಿಸ್ತನ ಶಕವನ್ನು ಮತ್ತು ಹಿಜರಿ ಶಕವನ್ನು ಅನುಸರಿಸುವ ಇವರಿಬ್ಬರಿಗೂ ಚಾಂದ್ರಮಾನ ಮತ್ತು ಸೌರಮಾನ ಗಣನೆಗಳನ್ನು ಸಮನ್ವಯಗೊಳಿಸಿಕೊಳ್ಳುವ ಪದ್ಧತಿಯ ತಿಳುವಳಿಕೆಯೇ ಇರಲಿಲ್ಲ! ಈ ಎರಡೂ ಕಾಲಗಣನೆಯ ಪದ್ಧತಿಗಳು ಒಂದೊಂದು ಧರ್ಮದವರು ಅನುಸರಿಸುವ ಧಾರ್ಮಿಕ ಶಕಗಳು ಅಥವಾ ಅವು ಆಯಾ ಧರ್ಮಗಳಿಗೆ ಪರಿಮಿತವಾಗಿವೆ. ವಿವಿಧ ಮತಧರ್ಮಗಳಲ್ಲಿನ ವೈವಿಧ್ಯತೆಗಳನ್ನು ಸಹಿಸಿಕೊಳ್ಳಲಾರದ ಜನಾಂಗದವರು ಶಕ ಗಣನೆಯನ್ನಾಗಲಿ, ಕಾಲಗಣನೆಯಲ್ಲಿನ ವೈವಿಧ್ಯತೆಗಳನ್ನಾಗಲಿ ಹೇಗೆ ಒಪ್ಪಿಕೊಂಡಾರು? ಮೇಲಾಗಿ ತಮಗೆ ಗೊತ್ತಿಲ್ಲದೇ ಇರುವುದನ್ನೇ ಪ್ರಮಾಣವಾಗಿ ಸ್ವೀಕರಿಸಿದ ಬ್ರಿಟೀಷರು ಎಲ್ಲಾ ವಿಧವಾದ ಭಾರತೀಯ ಕಾಲಮಾನ ಪದ್ಧತಿಗಳನ್ನು ನಾಶಪಡಿಸಿ, ತಮ್ಮ ಧಾರ್ಮಿಕ ಶಕೆಯನ್ನೇ ನಮ್ಮ ತಲೆಗೆ ಕಟ್ಟಿ ನಮ್ಮ ಪದ್ಧತಿಗಳನ್ನೇ ತಪ್ಪೆಂದು ತೀರ್ಮಾನಿಸಿದರು! ಮೆಕಾಲೆ ವಿದ್ಯಾವಿಧಾನವು ಅವೈಜ್ಞಾನಿಕವಾದುದೆಂದು ತಿಳಿದ ಮೇಲೂ ಸಹ ನಮ್ಮ ಕಾಲಗಣನ ಪದ್ಧತಿಗಳನ್ನು ನಾವು ಮರೆತುಹೋಗುತ್ತಿದ್ದೇವೆ.....
        ವಾರಾಣಾಸಿಯ ಗಂಗಾತೀರದಲ್ಲಿ ಆಗಾಗ ಶಾಸ್ತ್ರ ಚರ್ಚೆಗಳು ಜರುಗುತ್ತಾ ಇದ್ದುವಂತೆ. ಒಂದು ಬಾರಿ, ಅಂದರೆ ಸುಮಾರು ಎರಡು ಸಾವಿರದ ಒಂದು ನೂರು ವರ್ಷಗಳ ಹಿಂದೆ ಹಲವಾರು ಮಹಾ ಪಂಡಿತೋತ್ತಮರು ಇದೇ ಗಂಗಾ ತೀರದಲ್ಲೊಂದು ಸಮಾವೇಶವನ್ನು ಜರುಗಿಸಿದರಂತೆ. ವೇದವ್ಯಾಸರ ರಚನೆಗಳಲ್ಲಿನ ವ್ಯಾಕರಣ ದೋಷಗಳನ್ನು ಗುರುತಿಸಿ ಅವನ್ನು ಪಟ್ಟಿ ಮಾಡುವುದೇ ಆ ಸಮಾವೇಶದ ಉದ್ದೇಶವಾಗಿತ್ತಂತೆ! ಸರಿ, ಪಂಡಿತರು ಪ್ರಭಾತ ಸಮಯದಲ್ಲಿಯೇ ಸಭೆ ಸೇರಿದರು. ಅವರು ಹಾಗೆ ಆಸೀನರಾದ ಕೂಡಲೇ ಹತ್ತಿರದ ಗಿಡದ ಮೇಲಿದ್ದ ಶುಕಪಕ್ಷಿಯೊಂದು (ಗಿಳಿ) ಅವರ ಮಧ್ಯದಲ್ಲಿ ಆಸೀನವಾಯಿತು. ತಾನು ಬಂದ ಕೂಡಲೇ ಆ ಶುಕರಾಮನು "ನವ" "ನವ" "ನವ" ಎಂದು ಗಟ್ಟಿಯಾಗಿ ಅರಚಿತು. ಸಭಾ ನಿರ್ವಾಹಕರು ಎಷ್ಟು ಸಾರಿ ಅದನ್ನು ಓಡಿಸಿದರೂ ಸಹ ಅದು ಮತ್ತೆ ಮತ್ತೆ ಬಂದು ಕುಳಿತುಕೊಳ್ಳುತ್ತಿತ್ತು. ಬಂದ ಕೂಡಲೇ ಯಥಾ ಪ್ರಕಾರ "ನವ" "ನವ" ....... ಎಂದು ಅರಚಲಾರಂಭಿಸುತ್ತಿತ್ತು. ಅದರ ಹಿಂಸೆಯನ್ನು ಭರಿಸಲಾಗದೆ ಮಹಾ ಮಹಾ ಪಂಡಿತರುಗಳು ತಮ್ಮ ತಲೆ ಕೂದಲನ್ನು ಕಿತ್ತುಕೊಳ್ಳುತ್ತಿದ್ದರು. ಚರ್ಚೆಗಳು ಜರುಗುವ ಮೊದಲೇ ಮಾಧ್ಯಾಹ್ನಿಕ ಅನುಷ್ಠಾನಕ್ಕಾಗಿ (ಮಧ್ಯಾಹ್ನದ ಸಂಧ್ಯಾವಂದನೆಗಾಗಿ) ಎದ್ದು ಹೋಗುತ್ತಿದ್ದರು! ಇದೇ ಪ್ರಸಂಗ ಐದಾರು ದಿವಸಗಳು ನಡೆದ ಮೇಲೆ ಆ ಗಿಳಿಯ ಕಥೆ ವಾರಣಾಸಿಯಾದ್ಯಂತ ಪ್ರಚಾರ ಪಡೆಯಿತು. ಆ ಪ್ರಸಂಗವು ನಡೆದದ್ದು ಮಹಾಕವಿ ಕಾಳಿದಾಸ ಮತ್ತು ರಾಜಾ ವಿಕ್ರಮಾದಿತ್ಯನು (ಭೋಜರಾಜ) ಉಜ್ಜೈನಿಯನ್ನು ಪರಿಪಾಲಿಸುತ್ತಿದ್ದ ಕಾಲದಲ್ಲಿ. ಕಾಶಿಯಲ್ಲಿನ ಆ ಗಿಳಿರಾಮನ  ಸಂಗತಿ ಉಜ್ಜೈನಿಗೂ ತಲುಪಿತು. ಈ ವಿಷಯವನ್ನು ತಿಳಿದ ಮಹಾಕವಿ ಕಾಳಿದಾಸನು ಪ್ರಭಾತ ಸಮಯದಲ್ಲಿ ಕಾಶಿಯಲ್ಲಿ ನಡೆಯುತ್ತಿದ್ದ ಆ ಪಂಡಿತರ ಸಭೆಗೆ ಹೋಗಿ ಕುಳಿತ. ಯಥಾಪ್ರಕಾರ ಆ ಗಿಳಿಯು ಬಂದು, "ನವ" "ನವ" ....... ಎಂದು ಅರಚಲು ಪ್ರಾರಂಭಿಸಿತು. ಕೂಡಲೇ ಕಾಳಿದಾಸನು, "ಪಂಚ", "ಪಂಚ"....... ಎಂದು ಉತ್ತರವಿತ್ತನು. ಆ ಗಿಳಿಯು ಮತ್ತೆ ಅದೇ ವಿಧವಾಗಿ ಕಿರುಚಿದಾಗ ಕಾಳಿದಾಸನೂ ಸಹ ಅದೇ ವಿಧವಾಗಿ ಉತ್ತರಿಸಿದ. ಆ ಕೂಡಲೇ ಆ ಗಿಳಿಯು ಮೌನತಾಳಿತು. ಅದು ಅಲ್ಲಿ ಕುಳಿತಿದ್ದ ಪಂಡಿತರನ್ನು ದೀನ ದೃಷ್ಟಿಯಿಂದ ನೋಡಿ, ಅಲ್ಲಿಂದ ಎಗರಿ ಹೋಯಿತು. ಆಮೇಲೆ ಅದು ಯಾರ ಕಣ್ಣಿಗೂ ಬೀಳಲಿಲ್ಲ..... ಈ ದೃಶ್ಯವನ್ನು ನೋಡಿದ ಪಂಡಿತರೆಲ್ಲಾ ಆಶ್ಚರ್ಯಚಕಿತರಾಗಿ ಕಾಳಿದಾಸನನ್ನು ಪ್ರಶ್ನಿಸಿದರು. ಆ ಗಿಳಿ "ಪಂಚ" "ಪಂಚ" ಎನ್ನುವುದು ಏನು? ನೀನು ಹಾಗೆ ಹೇಳಿದ ಕೂಡಲೇ ಆ ಪಕ್ಷಿ ಅದೇಕೆ ಹಾಗೆ ಹಾರಿ ಹೋಯಿತು?" ಅದಕ್ಕೆ ಕಾಳಿದಾಸನು ಹೀಗೆ ಉತ್ತರಿಸಿದ, "ಆ ಗಿಳಿ ಬೇರೆ ಯಾರೂ ಅಲ್ಲ. ಸ್ವಯಂ ವೇದವ್ಯಾಸರೇ ಆ ರೂಪದಲ್ಲಿ ಇಲ್ಲಿಗೆ ಬಂದಿದ್ದರು. ತನ್ನ ವ್ಯಾಕರಣದಲ್ಲಿ ದೋಷಗಳಿವೆ ಎಂದು ಈಗಿನ ಪಂಡಿತರು ಭಾವಿಸಿರುತ್ತಿದ್ದಾರೆನ್ನುವುದು ಅವರಿಗೆ ತಿಳಿಯಿತು. ’ನವ ವ್ಯಾಕರಣ’ ಅಂದರೆ ಒಂಬತ್ತು ವಿಧದ ವ್ಯಾಕರಣ ಶಾಸ್ತ್ರಗಳನ್ನು ಕಲಿತುಕೊಂಡವರಿಗೆ ಅದರಲ್ಲಿ ವ್ಯಾಕರಣ ದೋಷಗಳಿಲ್ಲವೆನ್ನುವುದು ಅರ್ಥವಾಗುತ್ತದೆ ಎನ್ನುವುದು ಅವರ ಭಾವನೆ. ಅದಕ್ಕೇ ವ್ಯಾಸರು ಪ್ರತಿದಿನವೂ ಇಲ್ಲಿಗೆ ಗಿಳಿರೂಪದಲ್ಲಿ ಬಂದು "ನವ" "ನವ" ಎಂದು ಪ್ರಶ್ನಿಸುತ್ತಿದ್ದರು. ಆದರೆ ನಾನು, ನಮಗೆ ಕೇವಲ ಐದು ವ್ಯಾಕರಣ ಶಾಸ್ತ್ರಗಳಷ್ಟೇ ಗೊತ್ತು ಎನ್ನುವುದನ್ನು ತಿಳಿಸಿ ಹೇಳುವುದಕ್ಕಾಗಿ "ಪಂಚ" "ಪಂಚ" ಎಂದು ಅರಿಚಿ ಅವರ ಪ್ರಶ್ನೆಗೆ ಉತ್ತರ ಕೊಟ್ಟೆ. ಹ್ಞೋ! ಹಾಗೋ ಒಂಬತ್ತು ಶಾಸ್ತ್ರಗಳನ್ನು ಅರಿಯದೆ ಕೇವಲ ಐದು ಶಾಸ್ತ್ರಗಳನ್ನು ಮಾತ್ರವೇ ಬಲ್ಲವರು ನನ್ನ ರಚನೆಯಲ್ಲಿ ವ್ಯಾಕರಣ ದೋಷಗಳಿರುವವೆಂದು ನಿರ್ಧರಿಸಿದ ಮಾತ್ರಕ್ಕೆ ಒಪ್ಪುಗಳು ತಪ್ಪುಗಳಾಗುವುದಿಲ್ಲ..... ಒಂಬತ್ತೂ ಶಾಸ್ತ್ರಗಳನ್ನು ಓದಿಕೊಂಡವರಿಗೆ ಖಂಡಿತವಾಗಿ ಅದರಲ್ಲಿ ತಪ್ಪುಗಳು ಸಿಗುವುದಿಲ್ಲ ಎಂದು ಸಮಾಧಾನ ಮಾಡಿಕೊಂಡ ವ್ಯಾಸರು ಅಲ್ಲಿಂದ ಅಂತರ್ಧಾನರಾದರು!"
          ಕಾಳಿದಾಸನು ಹೀಗೆ ವಿವರಸಿದ ಮೇಲೆ ಅಲ್ಲಿ ನೆರೆದಿದ್ದ ಪಂಡಿತರೆಲ್ಲಾ ತಮ್ಮ ತಮ್ಮ ದಾರಿ ಹಿಡಿದು ಹೊರಟರು. ಅಲ್ಲಿಗೆ ಅವರಲ್ಲಿ ಮೂಡಿದ್ದ ಜಿಜ್ಞಾಸೆ ಮುಗಿಯಿತು. ಆದರೆ, ಮೆಕಾಲೆ ಪಂಡಿತರು ಹಾಗೆ ನಿಷ್ಕ್ರಮಿಸಲಿಲ್ಲ. ತಮ್ಮ ಅಸಮಗ್ರತೆಯನ್ನು, ಅಪರಿಪಕ್ವತೆಯನ್ನು, ಪಾಕ್ಷಿಕ ಅಥವಾ ಅರಬೆಂದ ಜ್ಞಾನವನ್ನು ನಮಗೆ ಉಣಬಡಿಸಿದರು. ’ಶಕಲ’ವನ್ನೇ ಸಕಲವೆಂದು ಅವರಿಂದ ಅರಿತುಕೊಂಡ ನಾವು ಸಕಲಕ್ಕೆ ದೂರವಾದೆವು. ಸಿಂಹಳದಿಂದ ಹಿಡಿದು ಕೈಲಾಸ ಪರ್ವತದವರೆಗೆ, ಗಾಂಧಾರದಿಂದ ಕಾಮರೂಪದವರೆಗೆ ವ್ಯಾಪಿಸಿದ್ದ ಭರತ ವರ್ಷದಲ್ಲಿ ವಿವಿಧ ಪ್ರಾಂತದವರು ವಿವಿಧ ರೀತಿಯ ಕಾಲಗಣನಾ ಪದ್ಧತಿಗಳನ್ನು ಅನುಸರಿಸುತ್ತಿದ್ದರು. ಬ್ರಿಟಿಷರ ಪದ್ಧತಿಗಳು ನಮ್ಮ ಮೆದುಳನ್ನು ಹೊಗುವವರೆಗೆ ಆ ಪದ್ಧತಿಗಳೇ ಪ್ರಚಲಿತವಿದ್ದವು. ಸೌರಮಾನವನ್ನು ಅನುಸರಿಸದೇ ಇದ್ದವರೂ (ಚಾಂದ್ರಮಾನ, ಬಾರ್ಹಸ್ಪತ್ಯಮಾನ) ಸಹ ತಮ್ಮ ಕಾಲಗಣನಾ ಪದ್ಧತಿಯನ್ನು ಸೌರಮಾನ ಪದ್ಧತಿಯೊಂದಿಗೆ ಸಮನ್ವಯಗೊಳಿಸಿಕೊಂಡರು ಮತ್ತು ಸೌರಮಾನವನ್ನು ಅನುಸರಿಸುತ್ತಿದ್ದ ಪ್ರಾಂತದವರು (ತಮಿಳುನಾಡು, ಕೇರಳ, ತುಳುನಾಡು) ಸಹ ಸ್ವಲ್ಪ ಹೆಚ್ಚೂ ಕಡಿಮೆ ಬಹಳಷ್ಟು ಹಬ್ಬಹರಿದಿನಗಳನ್ನು ಆಚರಿಸಲು ಚಾಂದ್ರಮಾನ ಪದ್ಧತಿಯನ್ನೇ ಅವಲಂಭಿಸಿದರು. ಧನುರ್ಮಾಸದಲ್ಲಿ ಆಚರಿಸುವ ವೈಕುಂಠ ಏಕಾದಶಿಯು ಸೌರಮಾನ ಮತ್ತು ಚಾಂದ್ರಮಾನ ಪದ್ಧತಿಗಳ ಸಮನಯ್ವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ವಿವಾಹಾದಿ ಶುಭಕಾರ್ಯಗಳಿಗೆ, ದೈವ, ಪಿತೃಕಾರ್ಯಗಳಿಗೆ, ವ್ಯಕ್ತಿಗತ ವ್ರತಗಳಿಗೆ, ವೈಯ್ಯಕ್ತಿಕ ಶುಭಕಾರ್ಯಗಳಿಗೆ - ಹುಟ್ಟುಹಬ್ಬ, ಮೊದಲಾದವುಗಳಿಗೆ ಚಂದ್ರನೊಂದಿಗೆ ಅನುಬಂಧ ಹೊಂದಿದ ತಿಥಿಗಳಿಗೆ ಪ್ರಾಧಾನ್ಯವಿತ್ತರು. ಪಾಡ್ಯದಿಂದ ಹುಣ್ಣಿಮೆ/ಅಮಾವಾಸ್ಯೆಯವರೆಗೆ ಇರುವ ಈ ತಿಥಿಗಳನ್ನೇ ಎಲ್ಲಾ ಕಾರ್ಯಗಳಿಗೆ ನಾವು ಪ್ರಧಾನ ಪ್ರಮಾಣವಾಗಿ ಇಟ್ಟುಕೊಂಡಿದ್ದೇವೆ. ಚಂದ್ರನ ಒಂದು ತಿಂಗಳು ಕೆಲವು ಘಂಟೆಗಳಷ್ಟು ಹೆಚ್ಚೂ ಕಡಿಮೆ ಕೇವಲ ೨೯ ದಿವಸಗಳು ಮಾತ್ರವೇ ಇರುತ್ತದೆ! ಕೆಲವು ಘಂಟೆಗಳು ಹೆಚ್ಚೂ ಕಡಿಮೆ ಏತಕ್ಕೆ? ಸರಿಯಾಗಿ ಇಪ್ಪತ್ತೊಂಬತ್ತು ದಿನಗಳನ್ನೇ ಇಟ್ಟುಕೊಳ್ಳಬಹುದಾಗಿತ್ತಲ್ಲವೇ? ಅದು ಹಾಗಾಗದು. ಏಕೆಂದರೆ ಚಂದ್ರನಿಗೂ, ಭೂಮಿಗೂ ಮತ್ತು ಸೂರ್ಯನಿಗೂ ಮಧ್ಯೆ ಇರುವ ಸೃಷ್ಟಿಜನ್ಯ ಸಂಬಂಧವು ಆ ರೀತಿ ಇರುವುದರಿಂದ! ಹಾಗಾಗಿ ಚಾಂದ್ರಮಾನ ಸಂವತ್ಸರವು ಮುನ್ನೂರಾ ಐವತ್ತನಾಲ್ಕು ದಿನಗಳನ್ನಷ್ಟೇ ಹೊಂದಿದೆ!
        ಇಲ್ಲಿಯೂ ಸಹ ಚಾಂದ್ರಮಾನ ಸಂವತ್ಸರವು ಖಚಿತವಾಗಿ ಮುನ್ನೂರಾ ಐವತ್ತನಾಲ್ಕು ದಿನಗಳು ಪೂರ್ತಿಯಾಗಿ ಇರುವುದಿಲ್ಲ. ಅದು ಕೆಲವೊಮ್ಮೆ ಮುನ್ನೂರಾ ಐವತ್ತಮೂರುವರೆ ದಿವಸಗಳು ಇರಬಹುದು ಅಥವಾ ಮುನ್ನೂರಾ ಐವತ್ತೈದು ದಿನಗಳು ಇರಬಹುದು ಅಥವಾ ಮುನ್ನೂರಾ ಐವತ್ತನಾಲ್ಕು ದಿನಗಳನ್ನು ದಾಟಿ ಕೆಲವು ಘಂಟೆಗಳು/ಘಳಿಗೆಗಳು ಇರಬಹುದು; ದಿನವೊಂದಕ್ಕೆ ೬೦ ಘಳಿಗೆಗಳಿರುವ ೨೪ಘಂಟೆಗಳನ್ನು ಪ್ರಮಾಣವಾಗಿ ತೆಗೆದುಕೊಂಡಾಗ! ಆದ್ದರಿಂದ, ಮುನ್ನೂರಾ ಅರವತ್ತೈದು ದಿನಗಳು ಐದು ಘಂಟೆ, ನಲವತ್ತೆಂಟು ನಿಮಿಷಗಳ ಸೌರಮಾನ ಸಂವತ್ಸರದಲ್ಲಿ ಮತ್ತು ಚಾಂದ್ರಮಾನ ಸಂವತ್ಸರದಲ್ಲಿ ಸುಮಾರು ಹನ್ನೊಂದು ದಿನಗಳ ವ್ಯತ್ಯಾಸವುಂಟಾಗುತ್ತದೆ. ಸೂರ್ಯನು ಹನ್ನೆರಡು ರಾಶಿಗಳಲ್ಲಿ ಸಂಚರಿಸಿ ಪುನಃ ಮೇಷರಾಶಿಗೆ ಬಂದಾಗ ಒಂದು ಸೌರಮಾನ ಸಂವತ್ಸರವು ಏರ್ಪಡುತ್ತದೆ. ಅದಕ್ಕೆ ಮುನ್ನೂರಾ ಅರವತ್ತೈದು ದಿನಗಳು ಮತ್ತು ಕೆಲವು ಘಂಟೆಗಳು ತಗಲುತ್ತವೆ! ಆದರೆ ಚಂದ್ರನ ಹನ್ನೆರಡು ತಿಂಗಳ ಒಟ್ಟು ದಿನಗಳು ೩೫೪ ದಿನಗಳು ಮಾತ್ರ. ಹೀಗೆ ಮೂರು ವರ್ಷಗಳು ಕಳೆಯುವಷ್ಟರಲ್ಲಿ ಸುಮಾರು ಮೂವತ್ತು ಅಥವಾ ಮೂವತ್ತೆರಡು ದಿನಗಳ ವ್ಯತ್ಯಾಸವುಂಟಾಗುತ್ತದೆ. ಹೀಗೇ ಸಾಗಿದರೆ ೩೬ ವರ್ಷಗಳಿಗೆ ಒಂದು ಸಂವತ್ಸರದಷ್ಟು ಕಾಲ ವ್ಯತ್ಯಾಸವುಂಟಾಗುತ್ತದೆ. ಅನಂತಕಾಲದಲ್ಲಿ ಸೌರಮಾನ ಸಂವತ್ಸರಕ್ಕೂ ಚಾಂದ್ರಮಾನ ಸಂವತ್ಸರಕ್ಕೂ ಸಾವಿರಾರು ವರ್ಷಗಳಷ್ಟು ಕಾಲ ವ್ಯತ್ಯಾಸವುಂಟಾಗುತ್ತದೆ. ಹಾಗೆ ವ್ಯತ್ಯಾಸ ಬಾರದಂತೆ ಎರಡೂ ಪದ್ಧತಿಗಳನ್ನು ಸಮನ್ವಯ ಮಾಡಿದ ಘನತೆ ಕೇವಲ ಭಾರತೀಯರಿಗೇ ಸಲ್ಲುತ್ತದೆ! ಮೂರು ವರ್ಷಗಳಿಗೊಮ್ಮೆ ಒಂದು ಅಧಿಕ ಮಾಸವನ್ನು ಸೇರಿಸುವ ಮೂಲಕ ಚಾಂದ್ರಮಾನವನ್ನು ಸೌರಮಾನಕ್ಕೆ ಸರಿದೂಗಿಸಿದ್ದಾರೆ. ಈ ವಿಲಕ್ಷಣ ಸಮನ್ವಯ ತತ್ತ್ವವು ಭಾರತೀಯರ ಹಿರಿಮೆಯಾಗಿದೆ. ಟಿಬೆಟ್ ದೇಶದಲ್ಲಿಯೂ ಸಹ ಈ ಅಧಿಕ ಮಾಸ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಈ ಅಧಿಕ ಮಾಸವನ್ನು ಪಾಶ್ಚಾತ್ಯರಂತೆ ಕುರುಡಾಗಿ ಫ್ರೆಬ್ರವರಿ ತಿಂಗಳಿಗೆ ಒಂದು ದಿನವನ್ನು ಅಧಿಕವಾಗಿ  ಸೇರಿಸಲಾಗಿಲ್ಲ. ’ಖಗೋಳ ಗತ ಸಾಪೇಕ್ಷ ಗ್ರಹನಕ್ಷತ್ರಗಮನ’ ಸಿದ್ಧಾಂತದ ಪ್ರಕಾರವೇ ನಮ್ಮ ಅಧಿಕಮಾಸವು ಬರುತ್ತದೆ. ಸೂರ್ಯಸಂಕ್ರಮಣವಿಲ್ಲದ ಕಾಲದಲ್ಲಿ ಮಾತ್ರವೇ ಚಂದ್ರನಿಗೆ ಅಧಿಕಮಾಸವು ಬರುತ್ತದೆ! ಮೂರು ವರ್ಷಕ್ಕೊಂದಾವರ್ತಿ ಮಾತ್ರವೇ ಸಂಕ್ರಮಣವಿಲ್ಲದ ಚಂದ್ರನ ಮಾಸವು (ಪಾಡ್ಯದಿಂದ ಅಮಾವಾಸ್ಯೆಯವರೆಗೆ) ಏರ್ಪಡುತ್ತದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವಾಗ ಮಾಸ ಸಂಕ್ರಾಂತಿಗಳು ಏರ್ಪಡುತ್ತವೆ ಮತ್ತು ಅದನ್ನು ದಾಟಿದ ನಂತರ ಸೌರಮಾಸಗಳು ಮೊದಲಾಗುತ್ತವೆ. ಉತ್ತರ ಭಾರತದಲ್ಲಿ ಹುಣ್ಣಿಮೆಯ ನಂತರ ಬರುವ ಕೃಷ್ಣಪಕ್ಷದ ಪಾಡ್ಯಮಿಯ ನಂತರ ಹೊಸ ಚಾಂದ್ರಮಾಸವು ಆರಂಭವಾದರೆ, ದಕ್ಷಿಣ ಭಾರತದಲ್ಲಿ ಹೊಸ ಚಾಂದ್ರಮಾಸವು ಅಮಾವಾಸ್ಯೆಯ ಮರುದಿನ ಬರುವ ಶುಕ್ಲಪಾಡ್ಯಮಿಯಿಂದ  ಆರಂಭವಾಗುತ್ತದೆ. ಇವನ್ನೇ ಅನುಕ್ರಮವಾಗಿ ’ಪೂರ್ಣಿಮಾಂತ’ ಮತ್ತು ’ಅಮಾಂತ್ಯ’ ಪದ್ಧತಿಗಳೆಂದು ಕರೆಯಲಾಗುತ್ತದೆ. ಇವೆಲ್ಲವೂ ಭಾರತೀಯರ ವೈವಿಧ್ಯತೆಗೆ ಸಾಕ್ಷಿಯಾಗಿ ನಿಲ್ಲುವ ಸಂಗತಿಗಳು. ಇಂತಹ ಅನೇಕ ವೈವಿಧ್ಯತೆಗಳನ್ನು ವೈರುಧ್ಯಗಳಾಗಿ ಕಾಣದೆ ಎಲ್ಲವನ್ನೂ ಸಮನ್ವಯಿಸಿಕೊಂಡು ಹೋದ ಘನತೆ ಭಾರತೀಯರದು ಮತ್ತು ಹೀಗೆ ಎಲ್ಲದರಲ್ಲೂ ಸಮನ್ವಯವನ್ನು ಸಾಧಿಸುವುದೇ ಭಾರತೀಯ ತತ್ತ್ವಚಿಂತನೆ!
        ಮೆಕಾಲೆ ವಿಚಾರಧಾರೆಯಿಂದ ಪ್ರಭಾವಿತರಾದವರು ನಮ್ಮ ರಾಷ್ಟ್ರೀಯ ಉತ್ಸವಗಳನ್ನೆಲ್ಲಾ ಸಾರಾಸಗಟಾಗಿ ಹೀಗಳೆದು ಅವಕ್ಕೆ ಹಿಂದೂ ಧಾರ್ಮಿಕ ಉತ್ಸವಗಳೆನ್ನುವ ಮುದ್ರೆ ಒತ್ತಿದ್ದಾರೆ. ಅಂತಹ ಹಿಂದೂ ಉತ್ಸವಗಳನ್ನು ಮಾತ್ರವೇ ಭಾರತೀಯ ಕಾಲಗಣನೆಯ ಪದ್ಧತಿಯನ್ನನುಸರಿಸಿ ಆಚರಿಸಲಾಗುತ್ತಿದೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಭಾರತಕ್ಕೆ ಕಾಲಿಡುವ ಮೊದಲು ರಾಷ್ಟ್ರೀಯ ಉತ್ಸವಗಳಾಗಿದ್ದ ಆ ಉತ್ಸವಗಳೆಲ್ಲಾ ಇಂದು ಹಿಂದೂ ಧಾರ್ಮಿಕ ಉತ್ಸವಗಳಾಗಿವೆ. ಈ ರೀತಿಯ ಸಂಕುಚಿತ ಚಿಂತನೆಯ ಬದಲಾವಣೆಯು ನಮಗೆ ವಕ್ಕರಿಸಿದೆ! ಆದ್ದರಿಂದ ಮತಧರ್ಮಗಳಿಗೆ ಅತೀತವಾದ ರಾಷ್ಟ್ರೀಯ ಉತ್ಸವಗಳನ್ನು ಕ್ರಿಸ್ತಶಕದಂತೆ ಆಚರಿಸುತ್ತಿದ್ದೇವೆ! ಸ್ವಾತಂತ್ರ್ಯದಿನೋತ್ಸವ, ಗಣರಾಜ್ಯೋತ್ಸವ, ಬ್ರಿಟಿಷರು ನಮ್ಮ ನಾಡಿನಲ್ಲಿ ಕಾಲಿರಿಸಿದ ನಂತರ ಹುಟ್ಟಿದ ನಾಯಕರ ಜಯಂತಿಗಳನ್ನೂ ಸಹ ಕ್ರಿಸ್ತಶಕದಂತೆಯೇ ಆಚರಿಸುತ್ತಿದ್ದೇವೆ. ವಾಸ್ತವದಲ್ಲಿ ಕ್ರಿಸ್ತಶಕವು ಅನುಷ್ಠಾನಕ್ಕೆ ಬರುವುದಕ್ಕೆ ಮುಂಚಿನಿಂದಲೂ - ಅನಾದಿಕಾಲದಿಂದಲೂ ಈ ದೇಶದಲ್ಲಿ ಪ್ರಚಲಿತವಿದ್ದ ಕಾಲಗಣನೆಯ ಪದ್ಧತಿಯು ಎಂದಿಗೂ ಯಾವುದೇ ಮತ ಪಂಥಗಳಿಗೆ ಸೀಮಿತವಾಗಿರಲಿಲ್ಲ. ಅವೆಲ್ಲವೂ ಪ್ರಪಂಚದಲ್ಲಿರುವ ಎಲ್ಲ ದೇಶಗಳಿಗೂ, ಮತಧರ್ಮಗಳಿಗೂ ಅನ್ವಯಿಸುತ್ತವೆ. ಅಷ್ಟೇ ಅಲ್ಲ ಅವು ವಿಶ್ವವ್ಯವಸ್ಥೆಗೆ ಅನ್ವಯವಾಗುವ ಸಾರ್ವಕಾಲಿಕ ಖಗೋಳ ಸತ್ಯಗಳು. ಕಲಿ ಶಕವಾಗಲಿ, ವಿಕ್ರಮ ಶಕವಾಗಲಿ ಅಥವಾ ಶಾಲಿವಾಹನ ಶಕವಾಗಲಿ.... ಯಾವುದೋ ಧಾರ್ಮಿಕ ಪ್ರವಾದಿ ಅಥವಾ ಮತಪ್ರವರ್ತಕನ ಹೆಸರಿನಲ್ಲಿ ಸ್ಥಾಪನೆಗೊಳ್ಳಲಿಲ್ಲ..... ಇಂತಹ ನಮ್ಮ ಉದಾತ್ತವಾದ ಶಕಗಳನ್ನು ಮರೆತುಹೋಗಿದ್ದೇವೆ! ಯಾವುದೋ ಒಬ್ಬ ಮತಸ್ಥಾಪಕನ ಹೆಸರಿನಲ್ಲಿ ಆರಂಭವಾದ ಧಾರ್ಮಿಕ ಶಕವನ್ನೇ... ಕ್ರಿಸ್ತಶಕವನ್ನೇ ನಾವಿಂದು ಜಾತ್ಯತೀತವಾಗಿ ಅನುಸರಿಸುತ್ತಿದ್ದೇವೆ! ಸರ್ವಮತ ಸಮಭಾವ ಹೊಂದಿದ ಧರ್ಮನಿರಪೇಕ್ಷವಾದ ಹಿಂದೂ ರಾಷ್ಟ್ರೀಯ ತತ್ತ್ವವನ್ನು ಕೇವಲ ಒಂದೇ ಒಂದು ಧಾರ್ಮಿಕ ಪಂಥವಾಗಿ ಪರಿಗಣಿಸಿ ಅದನ್ನು ಸಂಕುಚಿತವಾಗಿ ಬಿಂಬಿಸಿ ಪ್ರಚಾರಮಾಡಲಾಗಿದೆ. ಒಂದು ಕೋಮಿಗೆ ಸೇರಿದ ಶಕವು ಇಂದು ಸರ್ವಮತ ಸಮತತ್ತ್ವಕ್ಕೆ, ಜಾತ್ಯಾತೀತತೆ..... ಧರ್ಮನಿರಪೇಕ್ಷತೆಗೆ ಪ್ರತೀಕವಾಗಿದೆ! ಎಲ್ಲವೂ ಮೆಕಾಲೆಮಯ ಅಥವಾ ಮೆಕಾಲೆ ಮಾಯ.......!
               ವೇದಗಳನುಲಿದ ಮಾತ್ರದಿ
               ದೆವ್ವ ಉತ್ತಮನಹುದೇ?
               ಬಿಳಿ ತೊಗಲ ಹೊದ್ದಮಾತ್ರದಿ
               ಊಳಿಡುವ ನರಿ ಆಕಳಹುದೇ?
               ಉದಯಾಸ್ತಮಾನಗಳ ಸೂರ್ಯ
               ಕಿರಣಗಳ ಕಂಡ ಮಾತ್ರದಿ
               ಅಂಧಕಾರ ಪೊಟರೆಯಲ್ಲಿರ್ಪ
               ಮುದಿಗೂಬೆ ರವಿಗೆ ಸಖನಹುದೆ?
               (ಚಿತ್ರಕೃಪೆ: ಅಂತರ್ಜಾಲ)
 
 
 

Rating
No votes yet

Comments

Submitted by makara Wed, 09/28/2016 - 07:47

ಆತ್ಮೀಯ ಸಂಪದಿಗರೆ,
ಸತತವಾಗಿ ಈ ಸರಣಿಯ ಎರಡನೆಯ ಲೇಖನವನ್ನೂ ಸಹ ವಾರದ ವಿಶೇಷ ಲೇಖನವೊಂದನ್ನಾಗಿ ಆಯ್ಕೆಮಾಡಿದ್ದಕ್ಕಾಗಿ ಸಂಪದ ನಿರ್ವಾಹಕ ಮಂಡಳಿಗೆ ಧನ್ಯವಾದಗಳು. ಹಾಗೆಯೇ, ಎರಡನೆಯ ಲೇಖನವನ್ನೂ ಸಹ ವಿಶೇಷ ಪ್ರೀತಿಯಿಂದ ಓದಿದ ಸಂಪದಿಗರೆಲ್ಲರಿಗೂ ಧನ್ಯವಾದಗಳು. ಈ ಸರಣಿಯ ಮೂರನೇ ಕಂತು - "ತಪ್ಪುಗಳ ತಡಿಕೆ ಈಗ ಒಪ್ಪುಗಳ ಕುಡಿಕೆ! ಲೇಖನವನ್ನೂ ಸಹ ಸಂಪದದಲ್ಲಿ ಸೇರಿಸಲಾಗಿದೆ. ಆಸಕ್ತರು ಈ ಕೊಂಡಿಯನ್ನು ನೋಡಬಹುದು https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%AE...
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by Huddar Shriniv… Thu, 09/29/2016 - 12:26

ಈಗಲಾದರೂ ನಾವು ಎಚ್ಚತ್ತುಕೊಳ್ಳುವ ಅವಶ್ಯಕತೆ ಇದೆ. ಇಂತಹ ಹಲವಾರು ಲೇಖನಗಳು ಬರಲಿ ನಮ್ಮ ದಾಸ್ಯ ಚಿಂತನೆ ದೂರೀಕರಿಸಲಿ. ವಂದನೆಗಳು.

ಹುದ್ದಾರ್ ಸರ್, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆದರೆ ಎಷ್ಟು ಜನಕ್ಕೆ ಇಂತಹ ವಿಷಯಗಳನ್ನೆಲ್ಲಾ ತಿಳಿಯುವ ವ್ಯವಧಾನ ಅಥವಾ ಸಮಯವಿದೆ! ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ