ಭಾಗ - ೩ ಭೀಷ್ಮ ಯುಧಿಷ್ಠಿರ ಸಂವಾದ: ಸಮಯಸಾಧಕತನ!
ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುದಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಒಂದು ನೀತಿ ಕಥೆ ಇದು.
ಯುಧಿಷ್ಠಿರನು ಹೀಗೆ ಪ್ರಶ್ನಿಸಿದನು, "ಪಿತಾಮಹಾ! ಲೋಕದಲ್ಲಿ ಒಳ್ಳೆಯವರೊಂದಿಗೆ ಕಪಟಿಗಳೂ ಸಹ ಇರುತ್ತಾರೆ. ಕಪಟಿಗಳು ಕೇವಲ ತಮ್ಮ ಸ್ವಾರ್ಥಕ್ಕಾಗಿ ಎಷ್ಟೆಷ್ಟೋ ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಅವರಿಗೆ ಆಗಬೇಕಾಗಿರುವುದು ಸ್ವಾರ್ಥಸಾಧನೆಯಷ್ಟೆ. ಅವರು ತಮ್ಮ ಸ್ವಾರ್ಥವನ್ನು ಮರೆಮಾಚಲು ತಾವು ಲೋಕೋಪಕಾರಕ್ಕಾಗಿಯೇ ಜನಿಸಿದ್ದೇವೆಂದು ಹೇಳುತ್ತಾ ವಂಚನೆ ಮಾಡುತ್ತಿರುತ್ತಾರೆ. ಸವಿ ಮಾತುಗಳನ್ನಾಡಿ ತಮಗೆ ಎದುರಾದವರನ್ನು ಮೋಸ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುತ್ತಾರೆ. ಅಂಥಹವರ ರೀತಿ ನೀತಿಗಳು ಯಾವ ವಿಧವಾಗಿರುತ್ತವೆಯೋ, ಅವರಿಂದ ಜನರು ಯಾವ ರೀತಿ ತಪ್ಪಿಸಿಕೊಳ್ಳಬೇಕೋ, ರಾಜನಾದವನು ಅಂಥಹವರ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು? ಎನ್ನುವುದರ ಕುರಿತಾಗಿ ವಿವರಿಸಬೇಕಾಗಿ ಪ್ರಾರ್ಥಿಸುತ್ತೇನೆ" ಎಂದು ಹೇಳಿ ಯುಧಿಷ್ಠಿರನು ಕೈಗಳನ್ನು ಜೋಡಿಸಿಕೊಂಡು ವಿನಯದಿಂದ ಬದಿಗೆ ಸರಿದು ನಿಂತುಕೊಂಡನು.
"ಧರ್ಮನಂದನಾ! ನಿನ್ನ ಪ್ರಶ್ನೆಗೆ ಉತ್ತರ ರೂಪವಾಗಿ ಈ ಕಥೆಯನ್ನು ಹೇಳುತ್ತೇನೆ ಕೇಳು" ಎಂದು ಭೀಷ್ಮನು ಆರಂಭಿಸಿದ... ಪೂರ್ವದಲ್ಲಿ ವಿದಿಶಾ ಪಟ್ಟಣದಲ್ಲಿ ಒಂದು ಮನೆಯಲ್ಲಿ ಬಾಲಕನೊಬ್ಬನು ಮರಣಿಸಿದನು. ಬಂಧುಗಳು ದುಃಖತಪ್ತರಾದರು. ಅವರು ಬಾಲಕನ ಶವವನ್ನು ಸ್ಮಶಾನಕ್ಕೆ ಕೊಂಡಯ್ದರು. ಅಲ್ಲಿ ಬಾಲಕನ ಶವವನ್ನು ಇಳಿಸಿದ ನಂತರವೂ ಅವರ ದುಃಖವು ಶಮನವಾಗದೇ ಇರಲು ಅವರು ಹಾಗೇ ಅಳುತ್ತಾ ಕುಳಿತುಕೊಂಡರು. ಅಲ್ಲಿಗೆ ಒಂದು ರಣಹದ್ದು ಬಂದಿತು. ಅದಕ್ಕೆ ಹಸಿವೆಯಾಗಿತ್ತು. ಶವವನ್ನು ಹಿರಿದು ತಿನ್ನೋಣವೆಂದರೆ ಅದರ ಬಂಧುಗಳು ಅದರ ಸುತ್ತಲೂ ಇದ್ದಾರೆ. ಅವರನ್ನುದ್ದೇಶಿಸಿ ಆ ಹದ್ದು ಹೀಗೆ ಹೇಳಿತು,
"ಸ್ವಾಮಿ! ನೀವೆಲ್ಲಾ ಇಲ್ಲೇ ಕುಳಿತು ದುಃಖಿಸುತ್ತಿದ್ದೀರಲ್ಲಾ. ಅಗೋ ಅಲ್ಲಿ ನೋಡಿ ಹೊತ್ತು ಮುಳುಗುತ್ತಾ ಇದೆ. ಭೂತ, ಪ್ರೇತ, ಪಿಶಾಚಿಗಳು ಕತ್ತಲಾವರಿಸುತ್ತಲೇ ಇತ್ತ ಕಡೆ ಸುಳಿಯುತ್ತವೆ. ಅವು ಬಂದವೆಂದರೆ ನಿಮ್ಮ ಕಥೆಯೂ ಮುಗಿದಂತೆ. ಹೋದವನು ಹೇಗೂ ಹೊರಟು ಹೋದ, ಅವನೊಂದಿಗೆ ನೀವೂ ಹೋಗಲು ಬಯಸುತ್ತೀರಾ? ನಿಮ್ಮ ಒಳ್ಳೆಯದಕ್ಕಾಗಿ ಹೇಳುತ್ತಿದ್ದೇನೆ. ಆ ಕಳೇಬರವನ್ನು ಆಚೆ ಎಸೆದು ಬೇಗನೇ ಇಲ್ಲಿಂದ ಹೊರಟುಹೋಗಿ. ಹೋದವರು ಹೇಗೂ ಹಿಂದಿರುಗಿ ಬಾರರು!"
ಆ ರಣಹದ್ದಿನ ಮಾತನ್ನು ಕೇಳಿ ಎಲ್ಲರೂ ಭಯದಿಂದ ಎದ್ದು ಶವವನ್ನು ಬಿಟ್ಟೇಳಲು ಸಿದ್ಧರಾದರು. ಅಷ್ಟರಲ್ಲಿ ಹತ್ತಿರದ ಪೊದೆಯಲ್ಲಿ ಅವಿತು ಕುಳಿತಿದ್ದ ಗುಳ್ಳೆ ನರಿಯೊಂದು ಅವರ ಮುಂದೆ ಪ್ರತ್ಯಕ್ಷವಾಗಿ ಹೀಗೆಂದಿತು,
"ಅಯ್ಯಯ್ಯೋ! ಆ ರಣಹದ್ದಿನ ಮಾತನ್ನು ಕೇಳಿ ಭಯಭೀತರಾಗುತ್ತಿದ್ದೀರಾ? ಸತ್ತು ಹೋಗಿರುವ ಆ ಬಾಲಕನ ಮುಖವನ್ನು ನೋಡಿ. ಎಷ್ಟು ಮುದ್ದಾಗಿದೆ! ಇಂತಹವನನ್ನು ಬಿಟ್ಟು ಹೋಗುವುದಕ್ಕೆ ನಿಮಗೆ ಮನಸ್ಸಾದರೂ ಹೇಗೆ ಬರುತ್ತಿದೆ? ಇನ್ನೂ ಸ್ವಲ್ಪ ಹೊತ್ತು ಅತ್ತು ಕಣ್ಣೀರು ಸುರಿಸಿ ಬಿಡಿ. ಉಕ್ಕಿಬರುತ್ತಿರುವ ದುಃಖವನ್ನು ತಡೆಹಿಡಿಯುವುದಾದರೂ ಏತಕ್ಕೆ? ಅದನ್ನು ನೋಡಿ ದೇವರು ಕನಿಕರಪಟ್ಟು ಸತ್ತ ಬಾಲಕನನ್ನು ಬದುಕಿಸಿದರೂ ಬದುಕಿಸಬಹುದು! ಇನ್ನೂ ಹೊತ್ತು ಬಹಳವಿದೆ. ಮನೆಗೆ ಹೋಗಲು ಇಷ್ಟೇಕೆ ಅವಸರ?"
ನರಿಯ ಮನಸ್ಸಿನಲ್ಲಿ ಕತ್ತಲೆಯಾದ ನಂತರ ಬಂಧುಗಳು ಹೋಗಬೇಕು ಎನ್ನುವುದಿತ್ತು. ಆ ಸಮಯವು ಅದಕ್ಕೆ ಅನುಕೂಲ. ರಣಹದ್ದಿಗೋ ಬೆಳಕು ಬೇಕು, ನರಿಗೋ ಕತ್ತಲೆ ಬೇಕು. ಆದರೆ ಅವರೆಡರ ಗುರಿಯೂ ಒಂದೇ..... ಅದೇ ಶವವನ್ನು ಕಿತ್ತುಕೊಂಡು ತಿನ್ನವುದು!
ನರಿಯ ಮಾತುಗಳನ್ನು ಕೇಳಿದ ಬಂಧುಗಳಿಗೆ ಆಶೆ ಚಿಗುರಿ ಅವರು ಪುನಃ ಶವದ ಬಳಿ ಬಂದು ಅಳುತ್ತಾ ಕುಳಿತರು. ಆ ಸಮಯಕ್ಕೆ ರಣಹದ್ದು ಪುನಃ ಅವರ ಸಮೀಪಕ್ಕೆ ಬಂದಿತು.
"ಆ ನರಿಗೆ ಬುದ್ಧಿ ಕಡಿಮೆ. ಅದರ ಮಾತನ್ನು ಕೇಳಬೇಡಿ. ಆ ಶವವನ್ನು ನೋಡಿದ್ದೀರಲ್ಲಾ ಎಷ್ಟು ವಿಕಾರವಾಗಿ ಹೋಗಿದೆ. ಇನ್ನು ಅದು ಬದುಕಿ ಬರುವ ಸಾಧ್ಯತೆ ಎಲ್ಲಿಯದು? ಆಸೆ ಇಟ್ಟುಕೊಳ್ಳಬೇಡಿ. ಮನೆಗೆ ಹೊರಟು ಹೋಗಿ. ಬಾಲಕನು ಉತ್ತಮ ಲೋಕಗಳನ್ನು ಹೊಂದಲು ದಾನಧರ್ಮಾದಿಗಳನ್ನು ಮಾಡಿ. ಹೋಗಿ, ಹೋಗಿ!"
ಆ ಹದ್ದಿನ ಮಾತನ್ನು ಖಂಡಿಸುತ್ತಾ, ಆ ನರಿ ಅವರಿಗೆ ಮತ್ತೆ ಹೀಗೆ ಹೇಳಿತು, "ಈ ರಣಹದ್ದಿನ ಮನಸ್ಸು ಬಹಳ ಕಠಿಣವಾದುದು. ನೀವು ಹೋಗಬೇಡಿ. ನನಗೇ ದುಃಖವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇನ್ನು ನಿಮಗೆ ಹೇಗೆ ಸಾಧ್ಯವಾದೀತು? ಆದ್ದರಿಂದ ಇಲ್ಲೇ ಇರಿ, ಬಾಲಕನ ಮೇಲೆ ದಯೆ ತೋರಿಸಿ. ಇನ್ನೂ ಸ್ವಲ್ಪ ಹೊತ್ತು ದುಃಖಿಸಿ"
ಆಗ ಹದ್ದು ಹೀಗೆ ಹೇಳಿತು, "ನಾನು ಹುಟ್ಟಿ ಸಾವಿರ ವರ್ಷಗಳಾದವು. ಸತ್ತು ಹೋದವರು ಮತ್ತೆ ಹಿಂದಿರುಗಿ ಬಂದದ್ದನ್ನು ನಾನು ನೋಡಿಲ್ಲ. ಈ ಠಕ್ಕ ನರಿಯ ಮಾತಿಗೆ ಮರುಳಾಗದೆ ಇಲ್ಲಿಂದ ಹೊರಟು ಹೋಗಿ!"
ಅದರ ಮಾತನ್ನು ಕೇಳಿ ಹೊರಡಲನುವಾದ ಬಂಧುಗಳ ಕಾಲುಗಳಿಗೆ ಎರಗಿದ ನರಿಯು, "ಅಯ್ಯಯ್ಯೋ! ನೀವು ಹಾಗೆ ಹೊರಟು ಹೋದರೆ ಹೇಗೆ? ಯಾವ ಕ್ಷಣದಲ್ಲಿ ಆ ದೇವರು ಪ್ರತ್ಯಕ್ಷನಾಗಿ ಒಳಿತು ಮಾಡುತ್ತಾನೋ ಏನೋ? ಆದ್ದರಿಂದ ಇನ್ನೂ ಸ್ವಲ್ಪ ಹೊತ್ತು ಕಾಯಿರಿ, ನೀವು ಮನಸಾರೆ ಅಳುವುದನ್ನು ಮುಂದುವರೆಸಿ" ಎಂದು ಉಪದೇಶವನ್ನು ಮಾಡಿತು.
ಆಗ ಆ ಸತ್ತ ಬಾಲಕನ ಬಂಧುಗಳು ಅವನ ಶವದ ಸುತ್ತಲೂ ಕುಳಿತುಕೊಂಡು ಪುನಃ ಅಳುವುದಕ್ಕೆ ಮೊದಲು ಮಾಡಿದರು.
ಅಷ್ಟರಲ್ಲಿ ಹೊತ್ತು ಮುಳುಗಿ ಕತ್ತಲಾಯಿತು. ಕತ್ತಲೆಯಾಗುವುದೇ ತಡ ಇದ್ದಕ್ಕಿದ್ದಂತೆ ಹದ್ದು ಮತ್ತು ನರಿಗಳು ತಮ್ಮ ಮಾತಿನ ವರಸೆಯನ್ನು ಸಂಪೂರ್ಣವಾಗಿ ಬದಲಾಯಿಸಿದವು. ಈಗ ಹದ್ದು ಅವರನ್ನು ಅಲ್ಲಿಯೇ ಇರುವಂತೆ ಬೇಡಿಕೊಳ್ಳುತ್ತಿದ್ದರೆ, ನರಿ ಅವರನ್ನು ಅಲ್ಲಿಂದ ಆದಷ್ಟು ಬೇಗನೆ ಹೊರಟುಹೋಗುವಂತೆ ಹೇಳತೊಡಗಿತು!
ಒಂದು ಪಕ್ಕದಲ್ಲಿ ರಣಹದ್ದು, ಮತ್ತೊಂದು ಪಕ್ಕದಲ್ಲಿ ನರಿ ಈ ವಿಧವಾಗಿ ಭಾಷಣಗಳನ್ನು ಬಿಗಿಯತೊಡಗಿದವು. ಎರಡಕ್ಕೂ ಇದ್ದ ಸಮಸ್ಯೆ ಒಂದೇ ಅದೇನೆಂದರೆ ತಮ್ಮ ಹಸಿವೆಯನ್ನು ನೀಗಿಸಿಕೊಳ್ಳುವುದು. ಅದಕ್ಕಾಗಿ ಆ ಶವವನ್ನು ಆಹಾರವಾಗಿ ಸಂಪಾದಿಸಿ ತಮ್ಮ ಗುರಿಯನ್ನು ಮುಟ್ಟುವುದು. ಆದರೆ ತಮ್ಮ ಉದ್ದೇಶವನ್ನು ಮುಚ್ಚಿಟ್ಟು ನರಿ ಹದ್ದುಗಳೆರಡೂ ಆ ಬಾಲಕನ ಮೇಲೆ ಮತ್ತು ಅವನ ಬಂಧುಗಳ ಮೇಲೆ ಬಣ್ಣಿಸಲಾಗದಷ್ಟು ಸಹಾನುಭೂತಿಯನ್ನು ಪ್ರಕಟಿಸ ತೊಡಗಿದವು, ಕೊಡಗಟ್ಟಲೆ ಮೊಸಳೆ ಕಣ್ಣೀರನ್ನು ಸುರಿಸುತ್ತಾ!
ಧರ್ಮನಂದನನೇ, ನೀನು ಕೇಳಿದ ಪ್ರಶ್ನೆಗೆ ಉತ್ತರವು ಈ ಕಥೆಯಲ್ಲೇ ಇದೆ. ಆಲೋಚಿಸಿ ನೋಡು, ಕಪಟಿಗಳ ಮಾತನ್ನು ನಂಬಿ ಮೋಸ ಹೋಗದೆ ಪ್ರಜೆಗಳು ಹಾಗು ರಾಜ ಇಬ್ಬರೂ ತಮ್ಮ ತಮ್ಮ ಸ್ವಂತ ನಿರ್ಣಯದ ಮೇಲೆ ಕೆಲಸಗಳನ್ನು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮೋಸ ಹೋಗುವುದು ಅನಿವಾರ್ಯ.
ವಿ.ಸೂ.: ನರಿ ಮತ್ತು ಹದ್ದುಗಳನ್ನು ರಾಜಕೀಯ ಪಕ್ಷಗಳ ನಾಯಕರಿಗೂ, ಹೆಣದ ಬಂಧುಗಳನ್ನು ಮತದಾರ ಪ್ರಭುಗಳಿಗೂ ಅನ್ವಯಿಸಿಕೊಳ್ಳಬಹುದು ಮತ್ತು ಸತ್ತ ಬಾಲಕನ ಶವವನ್ನು ಪ್ರಜಾಪ್ರಭುತ್ವಕ್ಕೂ ಹೋಲಿಸಿಕೊಳ್ಳಬಹುದೆನಿಸುತ್ತದೆ!
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ಹಿಂದಿನ ಲೇಖನ ಭಾಗ - ೨ ಭೀಷ್ಮ ಯುಧಿಷ್ಠಿರ ಸಂವಾದ: ಎಲ್ಲಕ್ಕಿಂತ ಶ್ರೇಷ್ಠ ಅಸ್ತ್ರವಾವುದು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8-%E0%B2%AD...
Comments
ಉ: ಭಾಗ - ೩ ಭೀಷ್ಮ ಯುಧಿಷ್ಠಿರ ಸಂವಾದ: ಸಮಯಸಾಧಕತನ!
ಈ ಲೇಖನದ ಮುಂದಿನ ಭಾಗ - ೪ ಭೀಷ್ಮ ಯುಧಿಷ್ಠಿರ ಸಂವಾದ: ದೀರ್ಘದರ್ಶಿ, ಪ್ರಾಪ್ತಕಾಲಜ್ಞ ಮತ್ತು ದೀರ್ಘಸೂತ್ರಿಗಳ ವೃತ್ತಾಂತ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%AD...