ಭಾಗ - ೩: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ - ತಪ್ಪುಗಳ ತಡಿಕೆ ಈಗ ಒಪ್ಪುಗಳ ಕುಡಿಕೆ!

ಭಾಗ - ೩: ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ - ತಪ್ಪುಗಳ ತಡಿಕೆ ಈಗ ಒಪ್ಪುಗಳ ಕುಡಿಕೆ!

ಚಿತ್ರ

 
           ಈಗ ವ್ಯಾವಹಾರಿಕ ಶಕವೊಂದು ದೇಶದಲ್ಲಿ ಹೊಸದಾಗಿ ಚಲಾವಣೆಗೆ ಬಂದಿದೆ! ಭಾರತೀಯರಿಗೆ ವ್ಯಾವಹಾರಿಕ ಶಕ ಎಂದರೇನು? ಬ್ರಿಟೀಷರ ಪ್ರಭಾವವು ಬೀಳದೇ ಇರುವವರೆಗೂ ಇದ್ದಂತಹ ಶಕ ಯಾವುದು? ನಾವು ಮಾಡುವ ಸಂಕಲ್ಪಗಳಲ್ಲಿ, "ವ್ಯಾವಹಾರಿಕೇ, ಕಲಿಯುಗೇ, ಶತಾಬ್ದೇ....." ಎಂದು ಹೇಳಲಾಗುತ್ತದೆ. ದಿವ್ಯಯುಗಗಳು, ಲೌಕಿಕ ಯುಗಗಳು ಎನ್ನುವ ಬೇಧವು ನಮ್ಮ ಚರಿತ್ರೆಗೆ ಸ್ಪಷ್ಟವಾಗಿ ತಿಳಿದಿತ್ತು, ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಲೌಕಿಕ ವ್ಯವಹಾರಗಳಿಗಾಗಿ ಮಾತ್ರವೇ ಕೃತ, ತ್ರೇತ, ದ್ವಾಪರ ಮತ್ತು ಕಲಿಯುಗಗಳು ವ್ಯವಸ್ಥೆಗೊಂಡಿವೆ! ಇದು ವ್ಯವಹಾರವಾದ್ದರಿಂದ ಪ್ರಸ್ತುತ ನಮಗೆ ವ್ಯಾವಹಾರಿಕ ಶಕ ಅಂದರೆ ಕಲಿಯುಗ ಶಕ! ಕಲಿಯುಗಾಬ್ದಗಳನ್ನು ಸುದೀರ್ಘಕಾಲಗಳವರೆಗೆ ಲೆಕ್ಕವಿಡುವುದು ಕಷ್ಟವೆಂದು ಭಾವಿಸಿದ್ದರಿಂದ ಸ್ವದೇಶಿ ಶಕಗಳಾದ ವಿಕ್ರಮ, ಶಾಲಿವಾಹನ ಶಕಗಳನ್ನು ವ್ಯವಹಾರಕ್ಕೆಂದು ನಮ್ಮ ಪೂರ್ವಿಕರು ಸ್ವೀಕರಿಸಿರಬಹುದು! ಆದರೆ ಕ್ರಿಸ್ತಶಕವನ್ನು ವ್ಯಾವಹಾರಿಕ ಶಕವಾಗಿ ನಾವು ಏಕೆ ಗುರುತಿಸಬೇಕು? ವಿದೇಶಿಯವಾದ ಧಾರ್ಮಿಕ ಶಕವೊಂದನ್ನು ಸ್ವದೇಶದಲ್ಲಿ ವ್ಯಾವಹಾರಿಕ ಶಕವಾಗಿ ಏಕೆ ಬಳಸುತ್ತಿದ್ದೇವೆ? ಈ ಮಾನಸಿಕ ಗುಲಾಮಿತನದಿಂದ ಹೊರಬರಲಾಗದೇ? ಕ್ರಿಸ್ತಶಕವನ್ನು ವ್ಯವಹಾರದಿಂದ ಹೊರಗಿಟ್ಟು ಕೇವಲ ಕ್ರಿಸ್ತಶಕವನ್ನಾಗಿ ಹೇಳಲಾರೆವೆ? ವ್ಯವಹಾರ ಶಕವೆಂದರೆ ನಮ್ಮ ಸ್ವದೇಶೀ ಶಕವೆಂದು ಮತ್ತು ಇದು ನಮ್ಮ ಸ್ವಂತ ವ್ಯವಹಾರಕ್ಕೆ ಸಂಬಂಧಿಸಿದ ವಿಷಯವೆಂದು ನಾವು ಎಂದಿಗೆ ಗ್ರಹಿಸುತ್ತೇವೆ? 
                                        ತಪ್ಪುಗಳ ತಡಿಕೆ ಈಗ ಒಪ್ಪುಗಳ ಕುಡಿಕೆ...!
ಧೃತಿಗೆ ತಪ್ಪಿ, ಶ್ರುತಿಗೆ ತಪ್ಪಿ,
ತಲೆಮಾರುಗಳ ಸ್ಮೃತಿಗೆ ತಪ್ಪಿ,
ಅಜನಾಭದ ಮೇಲೆ ನೆಲಸಿಹ
ಅಜರಾಮರ ನಿಲುಮೆಗಳಿಗೆ ತಪ್ಪಿ,
ಸುಸ್ಥಿತಿಯಿಂದ ಜಾರಿಬಿದ್ದ
ವ್ಯಥೆಗಳ ಕಥೆಗಳಿಗೆ ಮುಕ್ತಿ ಎಂದು?
ವಿವೇಕದ ಕಿರಣಗಳೊಡಮೂಡಿ
’ಸ್ವ’ಭಾವೋದಯವಾಗುದೆಂದು?
           ಕ್ರಿ.ಶ.೧೯೪೭ರಲ್ಲಿ ನಮಗೆ ರಾಜಕೀಯವಾಗಿ ಸ್ವಾತಂತ್ರ್ಯವು ಸಿಕ್ಕ ಮೇಲೆ ಸರಿಸುಮಾರು ಹತ್ತು ವರ್ಷಗಳಿಗೆ ಒಂದು ರಾಷ್ಟ್ರೀಯ ಶಕವು ಜಾರಿಗೆ ಬಂದಿತು. ಅದನ್ನು ಶಾಲಿವಾಹನ ಶಕವೆಂದು ಭಾರತ ಸರ್ಕಾರವು ಅಧಿಕೃತವಾಗಿ ಘೋಷಿಸಿತು. ಮೇಲ್ನೋಟಕ್ಕೆ ಶಾಲಿವಾಹನ ಶಕವನ್ನೇ ರಾಷ್ಟ್ರೀಯ ಶಕವೆಂದು ಭಾರತ ಸರ್ಕಾರವು ಮಾನ್ಯ ಮಾಡಿದಂತೆ ಕಾಣಿಸುತ್ತದೆ. ಆದರೆ ಇಲ್ಲಿ ಕೇವಲ ಅದರ ಹೆಸರಿನ ಬಳಕೆಯಷ್ಟೇ ಇದೆ. ಅದರ ವಿವರಗಳನ್ನು ಮುಂದೆ ನೋಡೋಣ. ೧೯೫೭ರ ಮಾರ್ಚ್ ೨೨ರ ಚೈತ್ರಮಾಸದಲ್ಲಿ ರಾಷ್ಟ್ರೀಯ ಶಕವು ಆರಂಭವಾಯಿತು. ಅಂದು ೧೮೭೯ ಶಾಲಿವಾಹನ ಶಕ ಸಂವತ್ಸರವಾಗಿತ್ತು. ಇಂದು (೨೦೧೬ರಲ್ಲಿ) ೧೯೩೮ನೇ ಶಾಲಿವಾಹನ ಶಕ ವರ್ಷವು ನಡೆಯುತ್ತಿದೆ. ಈ ರಾಷ್ಟ್ರೀಯ ಶಕವನ್ನು ಪ್ರತಿದಿನವೂ ಆಕಾಶವಾಣಿ, ದೂರದರ್ಶನಗಳಲ್ಲಿ ಹೇಳುತ್ತಲೇ ಇದ್ದಾರೆ. (ಒಂದೊಂದು ಸಾರಿ ಅವುಗಳಲ್ಲಿ ತಪ್ಪು ತೇದಿಗಳನ್ನೂ ಸಹ ಹೇಳುತ್ತಾರೆ, ತೋರಿಸುತ್ತಾರೆ, ಆದರೆ ಅದು ಬೇರೆ ವಿಷಯ). ಈ ರಾಷ್ಟ್ರೀಯ ಶಕವು ಇಂದಿನವರೆಗೂ ದೈನಂದಿನ ವ್ಯವಹಾರಗಳಲ್ಲಿ ಬಳಕೆಯಲ್ಲಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರಗಳೂ ಸಹ ಇವನ್ನು ಅಧಿಕೃತವಾಗಿ ವ್ಯವಹಾರಗಳಲ್ಲಿ ಬಳಸುತ್ತಿಲ್ಲ. ಆದರೆ ಕೇಂದ್ರ ಸರ್ಕಾರದ ರಾಜ್ಯಪತ್ರದಲ್ಲಿ (ಗೆಜೆಟ್ಟಿನಲ್ಲಿ) ಮಾತ್ರವೇ ಇದನ್ನು ಕ್ರಿ.ಶ.ದೊಂದಿಗೆ ಅಧಿಕೃತವಾಗಿ ಬಳಸುತ್ತಿದ್ದಾರೆ. ರಾಷ್ಟ್ರೀಯ ಶಕವನ್ನೇ ಆಧಾರವಾಗಿಟ್ಟುಕೊಂಡು ವಿದೇಶದಿಂದ ಆಮದಾದ ಧಾರ್ಮಿಕ ಶಕಗಳನ್ನು ನಮ್ಮ ದೇಶದ ಅಧಿಕಾರಿಕ ಶಕದೊಂದಿಗೆ ಹೋಲಿಸಿ ನೋಡಿಕೊಳ್ಳಬೇಕು. ಆದರೆ ಸರ್ಕಾರಗಳ ನಿರ್ಲಕ್ಷ ಧೋರಣೆಗಳಿಂದಾಗಿ ಜನಸಾಮಾನ್ಯರು ಈ ರಾಷ್ಟ್ರೀಯ ಶಕದ ಮೇಲೆ ತಮ್ಮ ದೃಷ್ಟಿಯನ್ನು ಸಾರಿಸುತ್ತಿಲ್ಲ. ಇಂದೂ ಸಹ ಅನೇಕ ವಿಷಯಗಳಲ್ಲಿ ವಿದೇಶಿ ಸಂಸ್ಕೃತಿಯನ್ನೇ ಮಾನದಂಡವಾಗಿಟ್ಟುಕೊಂಡು ನಮ್ಮ ರಾಷ್ಟ್ರೀಯ ಸಂಸ್ಕೃತಿಯನ್ನು ಹೋಲಿಸಿ ನೋಡುವುದು, ತಾಳೆ ಮಾಡುವುದು ನಡೆಯುತ್ತಲೇ ಇವೆ. ಬ್ರಿಟೀಷರು ಭಾರತೀಯ ಭಾಷೆಗಳನ್ನು ’ಓರಿಯಂಟಲ್ ಲ್ಯಾಂಗ್ವೇಜಸ್’ (ಪೌರ್ವಾತ್ಯ ಭಾಷೆಗಳು) ಎಂದು ಕರೆದರು. ಅವರಿಗೆ ಸಹಜವಾಗಿಯೇ ಇವು ಪೌರ್ವಾತ್ಯ ಭಾಷೆಗಳು. ಆದರೆ, ಇಂದಿಗೂ ಸಹ ’ಓರಿಯಂಟಲ್ ಕಾಲೇಜು’ಗಳು ನಡೆಯುತ್ತಲೇ ಇವೆ. ಭಾರತೀಯ ಭಾಷಾ ಮಹಾವಿದ್ಯಾಲಯಗಳು ಎಂದು ಬದಲಾಯಿಸಿಕೊಳ್ಳುವ ಹುನ್ನಾರಕ್ಕೆ ನಾವು ಹೋಗಲೇ ಇಲ್ಲ. ನಮ್ಮ ದೇಶದಲ್ಲಿ ವಾಸಿಸುವವರಿಗೆ ಚೀನೀ, ಜಪಾನೀ, ಮೊದಲಾದ ಭಾಷೆಗಳು ಬೇಕಾದರೆ ’ಓರಿಯಂಟಲ್ ಲ್ಯಾಂಗ್ವೇಜಸ್’ ಆಗಬಹುದು. ಇಂಗ್ಲೀಷನ್ನೊಳಗೊಂಡು ಇತರೇ ಐರೋಪ್ಯ ಭಾಷೆಗಳು ಆಕ್ಸಿಡೆಂಟಲ್ (ಪಾಶ್ಚಿಮಾತ್ಯ) ಭಾಷೆಗಳಾಗಬಹುದು, ಆದರೆ ನಮ್ಮ ಭಾಷೆಗಳೇ ನಮಗೆ ಓರಿಯಂಟಲ್ ಆಗುವುದರಲ್ಲಿ ಚಿತ್ಯವೇನಿದೆ? ಸಮುದ್ರಗುಪ್ತನನ್ನು ’ಇಂಡಿಯನ್ ನೆಪೋಲಿಯನ್’ ಎಂದು ಕರೆಯಲಾಗುತ್ತಿದೆ, ಪಾಶ್ಚಾತ್ಯರು ಹಾಗೆ ಹೇಳಬಹುದು. ಆದರೆ ನಾವುಗಳು ಹೀಗೆ ಕರೆಯುವುದು ಸರಿಯಲ್ಲ, ಬೇಕಾದರೆ ನೆಪೋಲಿಯನ್ನನನ್ನು ’ಫ್ರೆಂಚ್ ಸಮುದ್ರಗುಪ್ತ’ ಎಂದು ಕರೆಯಬಹುದು. ಹೀಗೆ ಕರೆಯುವುದು ನಮಗೊಂದೇ ಅಲ್ಲಾ ಪಾಶ್ಚಾತ್ಯರಿಗೂ ಸಹ ಉಚಿತವೆನಿಸುತ್ತದೆ, ಏಕೆಂದರೆ ಸಮುದ್ರಗುಪ್ತನಿಗೆ ಹೋಲಿಸಿದರೆ ನೆಪೋಲಿಯನ್ ಇತ್ತೀಚಿನವನು. ಸಮುದ್ರಗುಪ್ತನ ಕಾಲವಾದರೋ ಇಂದಿಗೆ ಸುಮಾರು ೨೩೦೦ ವರ್ಷಗಳಷ್ಟು ಹಿಂದಿನದು. ಅದೇ ವಿಧವಾಗಿ  ಷೇಕ್ಸ್-ಪಿಯರ್‌ನನ್ನು ಪಾಶ್ಚಾತ್ಯ ಕವಿ ಕಾಳಿದಾಸ ಎಂದು ಹೇಳಬಹುದು. ಇತ್ತೀಚಿನ ಶತಮಾನಗಳಲ್ಲಿ ಬಾಳಿದ ಆಂಗ್ಲ ಕೃತಿಕಾರ ಷೇಕ್ಸ್‌ಪಿಯರನನ್ನು ಸುಮಾರು ೨೧೦೦ ವರ್ಷಗಳಷ್ಟು ಹಿಂದೆ ಜೀವಿಸಿದ ಕಾಳಿದಾಸನೊಂದಿಗೆ ಹೋಲಿಸಿ ’ಇಂಡಿಯನ್‌ಷೇಕ್ಸ್-ಪಿಯರ್‌’ ಎನ್ನುವುದು ಹಾಸ್ಯಾಸ್ಪದವಲ್ಲವೇ? ಷೇಕ್ಸ್-ಪಿಯರ್‌ ಮಹಾನ್ ಆಂಗ್ಲಭಾಷಾ ಕವಿ, ಸಾಹಿತಿ, ನಾಟಕಕಾರ ಎನ್ನುವುದರಲ್ಲಿ ಸಂದೇಹವಿಲ್ಲ, ಆದರೆ ಅವನಿಗಿಂತಲೂ ಮುಂಚಿನ ಕಾಲದಲ್ಲಿ ಜೀವಿಸಿದ್ದ ಕಾಳಿದಾಸನನ್ನು ಇತ್ತೀಚಿನವನಾದ ಷೇಕ್ಸ್-ಪಿಯರ್‌ನೊಂದಿಗೆ ಹೋಲಿಸುವುದು ಸರಿಯಲ್ಲ.
          ಹೀಗೆ ಗ್ರಹಣಗ್ರಸ್ತವಾದ ಹಲವಾರು ವಿಷಯಗಳಲ್ಲಿ ನಮ್ಮ ರಾಷ್ಟ್ರೀಯ ಶಕವು ಪ್ರಧಾನವಾದುದು. ಸುಮಾರು ಎರಡು ಸಾವಿರ ವರ್ಷಗಳಿಂದಲೂ ಉತ್ತರ ಭಾರತದಲ್ಲಿ ವಿಕ್ರಮ ಶಕವು ಪ್ರಚಲಿತವಿದ್ದರೆ, ದಕ್ಷಿಣ ಭಾರತದಲ್ಲಿ ಶಾಲಿವಾಹನ ಶಕವು ಪ್ರಚಲಿತವಿದೆ. ಸ್ವಾತಂತ್ರ್ಯಾನಂತರ ಶಾಲಿವಾಹನ ಶಕದ ಹೆಸರು ಮತ್ತು ಆಗ ನಡೆಯುತ್ತಿದ್ದ ಶಕ ಸಂವತ್ಸರವನ್ನೇ ಭಾರತದ ಅಧಿಕೃತ ರಾಷ್ಟ್ರೀಯ ಶಕವನ್ನಾಗಿ ಅಂಗೀಕರಿಸಲಾಗಿದೆ. ಈ ರಾಷ್ಟ್ರೀಯ ಶಕವು, ’ಸಾಯನ ಸೌರಮಾನ’ವನ್ನು ಆಧಾರವಾಗಿಟ್ಟುಕೊಂಡು ಮೂನ್ನೂರಾ ಅರವತ್ತೈದು ದಿನಗಳಿಗೆ ಒಂದು ವರ್ಷದಂತೆ ಪರಿಗಣಿಸಿ ಚಲಾವಣೆಯಾಗುತ್ತಿದೆ. ಇದು ವೈಜ್ಞಾನಿಕವಾದದ್ದೇ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಮೇಷ ರಾಶಿಯಲ್ಲಿ ಸೂರ್ಯನು ಪ್ರವೇಶಿಸಿದಾಗ ಚೈತ್ರ ಮಾಸವು ಆರಂಭವಾಗುತ್ತದೆ ಎಂದು ಈ ರಾಷ್ಟ್ರೀಯ ಶಕದಲ್ಲಿ ಬದಲಾವಣೆ ಮಾಡಲಾಗಿದೆ. ವಾಸ್ತವವಾಗಿ, ಹನ್ನೆರಡು ರಾಶಿಗಳಲ್ಲಿ ಸೂರ್ಯನು ಸಂಚರಿಸಿದಾಗ ಹನ್ನೆರಡು ಮಾಸಗಳಾಗುತ್ತವೆ ಮತ್ತು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವಾಗ ಒಂದು ಸಂಕ್ರಮಣ ಅಥವಾ ಸಂಕ್ರಾಂತಿಯು ಉಂಟಾಗುತ್ತದೆ, ಅವನ್ನು ಕ್ರಮವಾಗಿ ಮೇಷ ಮಾಸ, ವೃಷಭ ಮಾಸ,...... ಮೀನ ಮಾಸ ಎಂದು ಕರೆಯಬೇಕು. ಆದರೆ ಅದಕ್ಕೆ ಚಾಂದ್ರಮಾಸದ ಹೆಸರುಗಳನ್ನಿಟ್ಟಿದ್ದಾರೆ. ಉದಾಹರಣೆಗೆ ಸೂರ್ಯನು ಮೇಷದಲ್ಲಿದ್ದಾಗ - ಚೈತ್ರ, ವೃಷಭದಲ್ಲಿದ್ದಾಗ - ವೈಶಾಖ ಹೀಗೆ ಸಾಗುತ್ತದೆ. ಈಗ ಭಾರತ ಸರ್ಕಾರವು ಅನುಸರಿಸುತ್ತಿರುವ ’ಸಾಯನ ಸೌರಮಾನ’ ಪದ್ಧತಿಯಂತೆ ಪ್ರತಿ ತಿಂಗಳಿನ ಆರಂಭವು ಸ್ವಲ್ಪ ಹೆಚ್ಚೂ ಕಡಿಮೆ ೨೨ನೇ ತಾರೀಖಿನಂದು ಜರುಗುವ ಒಂದು ಸಂಕ್ರಾಂತಿಯುಂಟಾಗುವ ಮೂಲಕ ಏರ್ಪಡುತ್ತದೆ! ಕಡೇಪಕ್ಷ ಸರ್ಕಾರಗಳು ಪ್ರತೀ ತಿಂಗಳು ಈ ಸಂಕ್ರಾಂತಿಯಂದು ತನ್ನ ಉದ್ಯೋಗಿಗಳಿಗೆ ಸಂಬಳವನ್ನು ಕೊಡುವ ದಿನವನ್ನಾಗಿ ನಿಗದಿ ಮಾಡಿದಲ್ಲಿ ಈ ರಾಷ್ಟ್ರೀಯ ಶಕದ ಕುರಿತ ತಿಳುವಳಿಕೆಯು ಜನಸಾಮಾನ್ಯರಲ್ಲಿ ಮೂಡುತ್ತದೆ. "ಮಾರ್ಚ್‌೨೨ನೇ ತಾರೀಕು ಯಾವಾಗ ಎಂದರೆ "ಚೈತ್ರ ಮಾಸದ ಮೊದಲನೇ ದಿನ" ಎಂದು ನೋಡುವ ಸ್ಥಿತಿ ಇಂದು ಇಲ್ಲ. ರಾಷ್ಟ್ರೀಯ ಶಕವಾದ ಚೈತ್ರಮಾಸದ ಐದನೇ ದಿನ ಯಾವುದು ಎಂದು ಕೇಳಿದರೆ, ಮಾರ್ಚಿ ೨೭ನೇ ತಾರೀಕು ಎಂದು ಹೇಳುವ ಸ್ಥಿತಿ ಇಂದಿಗೂ ಮುಂದುವರೆದಿದೆ. ನಿಜವಾಗಿ ಹೇಳಬೇಕೆಂದರೆ ಭಾರತೀಯ ಸಂಸ್ಕೃತಿಯ ಪರಿಚಯವಿಲ್ಲದವರು ಈ ಎರಡನೇ ಪ್ರಶ್ನೆಯನ್ನು ಕೇಳಬೇಕು, ಏಕೆಂದರೆ ಅವರಿಗೆ ಭಾರತೀಯ ಶಕದ ಕುರಿತಾದ ತಿಳುವಳಿಕೆ ಇರುವುದಿಲ್ಲ. ಆದರೆ ಶೋಚನೀಯ ಸಂಗತಿ ಏನೆಂದರೆ, ಭಾರತೀಯರಾದ ನಮಗೇ, "ರಾಷ್ಟ್ರೀಯ ಶಕವೊಂದಿದೆ ಮತ್ತು ಅದನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ೧೯೫೭ರಂದು ಅಂಗೀಕರಿಸಿದೆ ಎಂದೂ ಮತ್ತು ಅಂದಿನಿಂದ ಅದು ಜಾರಿಯಲ್ಲಿದೆ ಎನ್ನುವುದು ತಿಳಿದಿಲ್ಲ!" ವಿದೇಶಗಳಿಗೆ ಹೋದಾಗ ಆಯಾ ದೇಶಗಳ ಸ್ಥಳೀಯ ಕಾಲಮಾನಗಳನ್ನು ತಿಳಿದುಕೊಳ್ಳುತ್ತೇವೆ. ಕಾರವಾರದಲ್ಲಿ ಬೆಳಿಗ್ಗೆ ೧೦.೩೦ ಆದರೆ ನ್ಯೂಯಾರ್ಕಿನಲ್ಲಿ ರಾತ್ರಿ ೧೧.೦೦ ಘಂಟೆಯೆಂದೂ, ಟೋಕಿಯೋದಲ್ಲಿ ಆಗ ಮಧ್ಯಾಹ್ನ ೩.೩೦ ಎಂಬುದಾಗಿ ಅಲ್ಲಿಗೆ ತೆರಳುವ ಭಾರತೀಯ ಯಾತ್ರಾರ್ಥಿಗಳು ತಿಳಿದುಕೊಳ್ಳುತ್ತಿದ್ದಾರೆ. ಆದರೆ ಚೈತ್ರಾದಿ ಮಾಸಗಳನ್ನು ಮಾತ್ರ ಅರಿತುಕೊಂಡು ವಿದೇಶಗಳಿಗೆ ಹೋದಾಗ ಅಲ್ಲಿನ ದೇಶಗಳಲ್ಲಿನ ತಾರೀಖು, ತಿಂಗಳು, ಸಂವತ್ಸರಗಳನ್ನು ಏಕೆ ಹೋಲಿಸಿ ನೋಡಿಕೊಳ್ಳುತ್ತಿಲ್ಲ? ಏಕೆಂದರೆ, ಮೊದಲನೆಯದನ್ನು ಅಂದರೆ ಒಂದು ದಿನದಲ್ಲಿನ ವಿವಿಧ ರೇಖಾಂಶಗಳ ಮಧ್ಯೆ ಇರುವ ಸ್ಥಳೀಯ ಕಾಲಮಾನಗಳನ್ನು ಅನುಸರಿಸುವುದನ್ನು ಬ್ರಿಟೀಷರು ಅಂಗೀಕರಿಸಿದ್ದರು ಮತ್ತು ಅನುಸರಿಸುತ್ತಿದ್ದರು, ಆದರೆ ಎರಡನೆಯದನ್ನು ಏಕೆ ಅನುಸರಿಸುವುದಿಲ್ಲವೆಂದರೆ ಚೈತ್ರಾದಿ ಮಾಸ, ತಿಥಿಗಳನ್ನೊಳಗೊಂಡ ಪಂಚಾಂಗ ವಿಷಯಗಳಿಗೆ ಮೆಕಾಲೆ ಮರಣಶಾಸನ ಬರೆದದ್ದರಿಂದ!
          ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೂ ಸಹ ಅಧಿಕೃತ ದಿನದರ್ಶಿಕೆಗಳನ್ನು (ಕ್ಯಾಲೆಂಡರ್) ಅಚ್ಚು ಹಾಕಿಸುತ್ತಿವೆ, ಆದರೆ ಅವುಗಳು ಪಂಚಾಂಗವನ್ನು ಆಧರಿಸಿದ ರಾಷ್ಟ್ರೀಯ ಶಕಸಂವತ್ಸರವನ್ನು ಅನುಸರಿಸದೆ ಇಂಗ್ಲೀಷ್ ಪದ್ಧತಿಯನ್ನೇ ಅನುಸರಿಸುತ್ತಿವೆ. ರಾಷ್ಟ್ರೀಯ ಶಕಸಂವತ್ಸರದಂತೆ ನಮ್ಮ ರಾಜ್ಯ ಹಾಗು ಕೇಂದ್ರ ಸರ್ಕಾರದ ದಿನದರ್ಶಿಕೆಗಳು ಪ್ರಕಟಣೆಗೊಂಡು ಜನಪ್ರಿಯವಾಗಬೇಕು, ಆಗ ಮಾತ್ರ ರಾಷ್ಟ್ರೀಯ ಶಕಕ್ಕೆ ಒಂದು ಅರ್ಥ ಬರುತ್ತದೆ. ರಾಷ್ಟ್ರೀಯ ಶಕ ಸಂವತ್ಸರದ ಪ್ರಕಾರ ಹೊಸ ವರ್ಷವು ಚೈತ್ರ ಮಾಸದಲ್ಲಿ ಪ್ರಾರಂಭವಾಗುತ್ತದೆ. ಆ ದಿವಸವನ್ನು, "ಭಾರತೀಯ ವರ್ಷದ ಆರಂಭ" ಎನ್ನುವುದನ್ನು ಅಧಿಕೃತವಾಗಿ ಪ್ರಕಟಿಸುತ್ತಿಲ್ಲ ಮತ್ತು ಆ ದಿವಸ ನೂತನ ವರ್ಷವನ್ನು ಆಚರಿಸಬೇಕೆಂಬ ಚಿಂತನೆಯನ್ನು ಪ್ರಜೆಗಳಲ್ಲಿ ಜನಪ್ರಿಯಗೊಳಿಸುತ್ತಿಲ್ಲ. ಅದನ್ನು ಕೇಂದ್ರ ಸರ್ಕಾರವೇ ಅಧಿಕೃತ ನೂತನ ವರ್ಷವಾಗಿ ಘೋಷಿಸಿ ಅಂದು ರಜೆಯನ್ನು ಮಂಜೂರು ಮಾಡಿದರೆ ರಾಷ್ಟ್ರೀಯ ಶಕದ ಕಲ್ಪನೆ ಜನರ ಮನಸ್ಸಿಗೆ ನಾಟುತ್ತದೆ. ಮತ್ತು ಇಂದು ಲಭ್ಯವಿರುವ ಕೇಂದ್ರ ಹಾಗು ರಾಜ್ಯಸರ್ಕಾರಗಳ ದಿನದರ್ಶಿಕೆಗಳು ಜನಪ್ರಿಯತೆಯನ್ನು ಗಳಿಸದೇ ಇರುವುದಕ್ಕೆ ಪ್ರಧಾನ ಕಾರಣ ಅವರು ಅನುಸರಿಸುತ್ತಿರುವ ಕಾಲಗಣನ ಪದ್ಧತಿ. ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಅಖಂಡವಾದ ಮತ್ತು ವಿಶಿಷ್ಟವಾದ ಕಾಲಗಣನಾ ಪದ್ಧತಿಗಳಿವೆ. ’ಸಾಯನ ಸೌರಮಾನ’ ಪದ್ಧತಿ ಮತ್ತು ’ನಿರಯನ ಸೌರಮಾನ’ ಪದ್ಧತಿ ಎನ್ನುವ ಎರಡು ರೀತಿಯ ಕಾಲಗಣನಾ ಪದ್ಧತಿಗಳಿವೆ ಮತ್ತು ಎರಡರಲ್ಲೂ ಮುನ್ನೂರಾ ಅರವತ್ತೈದು ದಿನಗಳು ಹಾಗು ಕೆಲವು ಘಂಟೆ, ನಿಮಿಷಗಳು ಇರುವ ಸಂವತ್ಸರಗಳೇ ಇವೆ. ಆದರೆ ಪ್ರಧಾನವಾಗಿ ನಮ್ಮ ದೇಶದಲ್ಲಿ ಪ್ರಚಲಿತದಲ್ಲಿರುವುದು ’ನಿರಯನ’ ಪದ್ಧತಿ. ಈ ಪದ್ಧತಿಯೊಂದಿಗೇ ಉಳಿದೆಲ್ಲಾ ಕಾಲಗಣನಾ ಪದ್ಧತಿಗಳನ್ನು ಸಮನ್ವಯಗೊಳಿಸುತ್ತಾ ಬರಲಾಗುತ್ತಿದೆ. ನಿರಯನ ಪದ್ಧತಿಯ ಪ್ರಕಾರ ಮಕರ ಸಂಕ್ರಾಂತಿಯು ಜನವರಿ ೧೪, ೧೫ನೇ ತೇದಿಗಳಲ್ಲಿ ಬರುತ್ತದೆ. ಮೇಷ ಸಂಕ್ರಾಂತಿಯು ಏಪ್ರಿಲ್ ೧೪ನೇ ತಾರೀಖು ಬರುತ್ತದೆ ಮತ್ತು ಅಂದಿನಿಂದ ಹೊಸ ವರ್ಷದ ಆರಂಭವಾಗುತ್ತದೆ. ಆದರೆ, ’ಸಾಯಣ ಸೌರಮಾನ’ ಪದ್ಧತಿಯ ಪ್ರಕಾರ ಮಕರ ಸಂಕ್ರಾಂತಿಯು ಡಿಸೆಂಬರ್ ೨೨ಕ್ಕೆ ಉಂಟಾಗುತ್ತದೆ ಮತ್ತು ಅದೇ ವಿಧವಾಗಿ ಮೇಷ ಸಂಕ್ರಮಣವು ಮಾರ್ಚ್ ೨೨ನೇ ತಾರೀಖಿನಂದು ಉಂಟಾಗುತ್ತದೆ. ಅಂದರೆ ಹನ್ನೆರಡು ಸಂಕ್ರಮಣಗಳ ವಿಷಯದಲ್ಲೂ ಈ ವ್ಯತ್ಯಾಸವು ಕಂಡು ಬರುತ್ತದೆ. ಕೇಂದ್ರ ಸರ್ಕಾರವು ಕಡೇ ಪಕ್ಷ ನಿರಯನ ಪದ್ಧತಿಯನ್ನು ರಾಷ್ಟ್ರೀಯ ಶಕಕ್ಕೆ ಆಧಾರವಾಗಿಸಿಕೊಂಡಿದ್ದರೂ ಸಹ ಜನವರಿ ೧೪ರ ಮಕರ ಸಂಕ್ರಮಣದಂತೆ ಉಳಿದೆಲ್ಲಾ ಸಂಕ್ರಾಂತಿಗಳೂ ಜನಪ್ರಿಯವಾಗಿರುತ್ತಿದ್ದವು. ಆಗ ಚೈತ್ರ - ಮೇಷಗಳೊಂದಿಗೆ ಕೂಡಿದ ನೂತನ ರಾಷ್ಟ್ರೀಯ ವರ್ಷದ ಆರಂಭವಾಗುತ್ತಿತ್ತು. ಜನಗಳು ಅನುಸರಿಸುವ ನಿರಯನ ಪದ್ಧತಿಯನ್ನು ಬದಿಗಿರಿಸಿ, ಕೇವಲ ಖಗೋಳ ಶಾಸ್ತ್ರಜ್ಞರಿಗೆ ಮಾತ್ರ ಪರಿಮಿತವಾದ ಸಾಯಣ ಸೌರಮಾನ ಪದ್ಧತಿಯನ್ನು ಕೇಂದ್ರ ಸರ್ಕಾರವು ಸ್ವೀಕರಿಸಿತು! ಪಾಶ್ಚಾತ್ಯರು ರಾಶಿಗಳನ್ನು ನಿರ್ಧರಿಸುವಲ್ಲಿ ಸಾಯನ ಪದ್ಧತಿಯನ್ನೇ ಅನುಸರಿಸುವುದರಿಂದ ಬಹುಶಃ ಅದನ್ನೇ ನಮ್ಮ ನಾಯಕರು ರಾಷ್ಟ್ರೀಯ ಶಕವನ್ನು ರೂಪಿಸುವುದಕ್ಕೆ ಬಳಸಿಕೊಂಡಿರಬೇಕು.
          ಮೇಷ ಸಂಕ್ರಾಂತಿಯ ದಿವಸ (ಏಪ್ರಿಲ್ ೧೪) ಮತ್ತು ಅದೇ ವಿಧವಾಗಿ ಆರು ತಿಂಗಳ ನಂತರ ಬರುವ ತುಲಾ ಸಂಕ್ರಾಂತಿಯ ದಿವಸ (ಸೆಪ್ಟೆಂಬರ್ ೧೪) ಪ್ರಪಂಚದಾದ್ಯಂತ ರಾತ್ರಿ ಮತ್ತು ಹಗಲುಗಳು ಸಮಾನವಾಗಿರುತ್ತವೆ. ಪ್ರಪಂಚದಾದ್ಯಂತ ಅಂದರೆ, ಭೂಮಧ್ಯ ರೇಖೆಯಿಂದ ಉತ್ತರಕ್ಕೆ ಹಾಗು ದಕ್ಷಿಣಕ್ಕಿರುವ ಸುಮಾರು ೬೬0 ಕೋನಗಳ (ಡಿಗ್ರಿಗಳ) ಅಕ್ಷಾಂಶಗಳವರೆಗೆ ಇರುವ ಪ್ರಾಂತ ಅಥವಾ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿ ವೃತ್ತಗಳ ಮಧ್ಯದಲ್ಲಿನ ವ್ಯಾಪ್ತಿ ಪ್ರದೇಶ. ಹೀಗೆ ಹಗಲು ಮತ್ತು ರಾತ್ರಿಗಳು ಸಮಾನವಾದ ಸಮಯವನ್ನು ಹೊಂದಿರುವ ದಿವಸಗಳನ್ನು ’ವಿಷುವತ್’ ಮತ್ತು ’ವಿಷುವಮ್’ (Summer Equinox ಮತ್ತು Winter Equinox) ಎನ್ನುವುದು ಭಾರತೀಯರಿಗೆ ಅನಾದಿಕಾಲದಿಂದಲೂ ತಿಳಿದಿರುವ ವಿಷಯ. ಸುಮಾರು ಎರಡು ಸಾವಿರದ ಒಂದುನೂರ ವರ್ಷಗಳ ಹಿಂದೆ ರಚಿತವಾಗಿದೆ ಎಂದು ಹೇಳಲಾಗುವ ಅಮರಕೋಶದಲ್ಲಿ, "ಸಮರಾತ್ರಿಂ ದಿನೇ ಕಾಲೇ ವಿಷುವತ್ ವಿಷವಂ ಚ ತತ್" ಎನ್ನುವ ವಿವರಣೆಯು ನಮಗೆ ಸಿಗುತ್ತದೆ. (ಅಯ್ಯಪ್ಪ ಮಾಲೆಯನ್ನು ಧರಿಸುವ ಭಕ್ತರಿಗೆ ಶಬರಿಮಲೈಯಲ್ಲಿ ಏಪ್ರಿಲ್ ೧೪ರಂದು ಆಚರಿಸುವ ಉತ್ಸವವನ್ನು ವಿಷು ಉತ್ಸವ ಎಂದು ಏಕೆ ಕರೆಯುತ್ತಾರೆ ಎನ್ನುವುದು ಇದರಿಂದ ವಿಧಿತವಾಗಬಹುದು). ನಾವು ಗಂಗಾನದಿಯನ್ನು ಬಿಟ್ಟು ಚಿಕ್ಕ ಹಳ್ಳವೊಂದನ್ನು ಹಿಡಿದುಕೊಂಡಿದ್ದೇವೆ. ಭಾರತೀಯ ಕಾಲಮಾನವನ್ನು ಮರೆತು ತಪ್ಪುಗಳ ಕುಪ್ಪೆಯಾಗಿರುವ ಪಾಶ್ಚಾತ್ಯರ ದಿನದರ್ಶಿಕೆಯನ್ನು ಹಿಡಿದುಕೊಂಡಿದ್ದೇನೆ. ಭಾರತೀಯರು ಕಾಲಗಣನೆಯ ಪ್ರಯೋಗಗಳನ್ನು ಮಾಡಿ ಅದರಲ್ಲಿ ಸಿದ್ಧಿಯನ್ನು ಸಾಧಿಸಿದ ಮೇಲೆ ಲಕ್ಷಾಂತರ ಸಂವತ್ಸರಗಳು ಕಳೆದಿವೆ. ಈ ಪ್ರಯೋಗಗಳನ್ನು ಪಾಶ್ಚಾತ್ಯರು ಕೇವಲ ೧೫೦೦ ವರ್ಷಗಳಿಂದೀಚೆಗಷ್ಟೇ ಕೈಗೊಂಡಿದ್ದಾರೆ! ಆದರೆ ಅದೊಂದೇ ಚರಿತ್ರೆ ಎನ್ನುವ ಅಹಂಕಾರವನ್ನು ನಮ್ಮ ತಲೆಗೆ ಕಟ್ಟಿದ್ದಾರೆ ಆದರೆ ಇದನ್ನೇ ಅವರು ಚೈನಾದ ತಲೆಗೆ ಕಟ್ಟಲಿಲ್ಲ. ಏಕೆಂದರೆ ಚೈನಾದಲ್ಲಿ ಮೆಕಾಲೆಯ ಪ್ರಭಾವವಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ‘ವಾರ್ಷಿಕ ವಿಜ್ಞಾನ ಕಾರ್ಯಾಗಾರ’ಗಳು ನಡೆಯುತ್ತಿವೆ. ಆ ’ಇಯರ್ ಬುಕ್’ಗಳಲ್ಲಿ ಕ್ಯಾಲೆಂಡರಿನ ಚರಿತ್ರೆಯು ಪಾಶ್ಚಾತ್ಯರ ವಿಜ್ಞಾನಕ್ಕೇ ಪರಿಮಿತವಾಗಿದೆ. ಹಾಗೆಯೇ ಚೀನೀಯರ ಕಾಲಗಣನಾ ಪದ್ಧತಿಯನ್ನೂ ಸಹ ಪ್ರಾಚೀನವಾದುದೆಂದು ಅವುಗಳಲ್ಲಿ  ದಾಖಲಿಸುತ್ತಾರೆ. ಆದರೆ ಭಾರತದಲ್ಲಿನ ಕಾಲಗಣನೆಯ ವೈವಿಧ್ಯತೆಗಳ ಕುರಿತು ಅದರಲ್ಲಿ ಉಲ್ಲೇಖವಿಲ್ಲ. ಏಕೆಂದರೆ, ನಮ್ಮದು ಒಂದು ಕಾಲದಲ್ಲಿ ಬ್ರಿಟೀಷರ ಗುಲಾಮತನದಲ್ಲಿದ್ದ ದೇಶವಾದ್ದರಿಂದ! ನಮಗೇ ತಿಳಿಯದ ಇಂತಹ ಎಷ್ಟೋ ವಿಷಯಗಳ ಕುರಿತು ವಿದೇಶಿಯರಿಗಾದರೂ ಆಸಕ್ತಿ ಏಕಿರುತ್ತದೆ?
          ವರ್ಷದ ಅವಧಿಯು ಕ್ರಮೇಣವಾಗಿ ಕುಗ್ಗುತ್ತಿದೆ ಎನ್ನುವುದನ್ನು ಇತ್ತೀಚೆಗೆ ’ಗ್ರೀನ್‌ವಿಚ್ ಮೇಧಾವಿ’ಗಳು ಕಂಡುಕೊಂಡಿದ್ದಾರೆ. ಈ ವಿಷಯವನ್ನು ಲಕ್ಷಾಂತರ ವರ್ಷಗಳಷ್ಟು ಹಿಂದೆಯೇ ಭಾರತೀಯರು ಅನ್ವೇಷಿಸಿಸಿದ್ದರು. ನಾಲ್ಕುಸಾವಿರದ ಒಂಬತ್ತನೂರು ವರ್ಷಗಳಲ್ಲಿ ನಲವತ್ತೂವರೆ ಸೆಕೆಂಡುಗಳಷ್ಟು ಕಾಲವು ವರ್ಷವೊಂದಕ್ಕೆ ತಗ್ಗುತ್ತದೆ ಎನ್ನುವ ವಿಷಯವನ್ನು ಭಾರತೀಯ ಖಗೋಳಜ್ಞರು ನಿರ್ಧರಿಸಿದ್ದರು ಎನ್ನುವ ವಿಷಯವನ್ನು ಕೋಟ ವೆಂಕಟಾಚಲಂ ಅವರು ತಮ್ಮ "ಆರ್ಯುಲ ಧ್ರುವನಿವಾಸ ಖಂಡನಮು - ಆರ್ಯರ ಧ್ರುವನಿವಾಸ ಖಂಡನೆ" ಎನ್ನುವ ತೆಲುಗು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗೆ ವಿವಿಧ ಕಾಲಗಳಲ್ಲಿ ಕಡಿಮೆಯಾದ ಕಾಲಾವಧಿಯನ್ನು (ಕಾಲ ಪ್ರಮಾಣ) ತಮ್ಮ ಗ್ರಂಥಗಳಲ್ಲಿ ಭಾರತೀಯರು ದಾಖಲಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ಒಂದು ಸಂವತ್ಸರದ ಅವಧಿಯು ಮುನ್ನೂರಾ ಅರವತ್ತೈದು ದಿನಗಳನ್ನು ದಾಟಿ ಆರು ಘಂಟೆ ಹನ್ನೆರಡು ನಿಮಿಷಗಳಷ್ಟು (೩೬೫ ದಿನ, ೬ ಘಂಟೆ, ೧೨ ನಿಮಿಷ) ಇತ್ತು ಎನ್ನುವ ವಿಷಯವನ್ನು ಭಾರತೀಯ ಖಗೋಳಜ್ಞರು ದಾಖಲಿಸಿದ್ದಾರೆ. ಪ್ರಸ್ತುತ ಇರುವ ಒಂದು ವರ್ಷದ ಕಾಲಾವಧಿಯು ಮುನ್ನೂರಾ ಅರವತ್ತೈದು ದಿನಗಳು  ಹಾಗು ಐದು ಘಂಟೆ ನಲವತ್ತೆಂಟು ನಿಮಿಷಗಳು (೩೬೫ ದಿನ, ೫ ಘಂಟೆ, ೪೮ ನಿಮಿಷ)! ಹೀಗೆ ೨೪ ನಿಮಿಷಗಳ ವ್ಯತ್ಯಾಸವು ಇದೆ. ಈ ವ್ಯತ್ಯಾಸವನ್ನು ಅನುಸರಿಸಿ ಎಷ್ಟು ಲಕ್ಷ ವರ್ಷಗಳು ಗತಿಸಿವೆ ಎನ್ನುವುದನ್ನು ನಿರ್ಧರಿಸಬಹುದು. ’ಒಂದಾನೊಂದು ಕಾಲದಲ್ಲಿ’ ಅಂದರೆ ಸೂರ್ಯಸಿದ್ಧಾಂತ ಎನ್ನುವ ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆದ ಕಾಲ! ಸೂರ್ಯ ಸಿದ್ಧಾಂತ ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆದು ಸ್ವಲ್ಪ ಹೆಚ್ಚೂ ಕಡಿಮೆ ಒಂದು ಲಕ್ಷದ ಎಪ್ಪತ್ತು ಸಾವಿರ ವರ್ಷಗಳು (೧, ೭೦,೦೦೦) ಗತಿಸಿವೆ ಎಂದು ಈ ವ್ಯತ್ಯಾಸದಿಂದ ನಿರ್ಧರಿಸಬಹುದು. ವಿಲಿಯಂ ಜೋನ್ಸ್‌ ಮಹಾಶಯ ಹಾಗೆ ನಿರ್ಧಾರಿಸಲಿಕ್ಕೆ ಬಿಡಲೇ ಇಲ್ಲ! ಅವನು ’ಕಾಲಾಂತಕ’ ಅಂದರೆ ಭಾರತೀಯ ಕಾಲವನ್ನು ಅಂತ್ಯಗೊಳಿಸಿದವನು! "ಇಂತಹವುಗಳನ್ನೆಲ್ಲಾ ನಂಬಲಿಕ್ಕೆ ಸಾಧ್ಯವಿಲ್ಲ" ಎಂದು ಒಂದೇ ಒಂದು ಮಾತಿನಲ್ಲಿ ಅವನು ಚರ್ಚೆಗೆ ಮುಕ್ತಾಯ ಹಾಡಿದ. ಈಗ ನಾವು ಕೂಡಾ ಅದೇ ಹಾಡನ್ನು ಹಾಡುತ್ತಿದ್ದೇವೆ, "ಇಂತಹವುಗಳನ್ನೆಲ್ಲಾ ನಂಬಲಿಕ್ಕೆ ಸಾಧ್ಯವಿಲ್ಲ!" ಎಂದು......
        ಕ್ರಿ.ಪೂ. ೪೬ನೇ ವರ್ಷದಲ್ಲಿ ಜೂಲಿಯಸ್ ಸೀಝರ್ ಚಾಲ್ತಿಗೆ ತಂದ ’ಕ್ಯಾಲೆಂಡರ್’ ಪಾಶ್ಚಾತ್ಯರ ಕಾಲಗಣನೆಗೆ ’ಪ್ರಮಾಣ’ವಾಗಿದೆ. ಕ್ರಿಸ್ತಶಕ ಎನ್ನುವ ಒಂದು ಧಾರ್ಮಿಕ ಶಕವೂ ಚಾಲನೆಗೆ ಬಂತು. ಸೀಝರ್‌ನ ಹಿಂದಿನವರು ಮೂನ್ನೂರಾ ಅರವತ್ತೈದು ದಿನಗಳನ್ನು ಮಾತ್ರ ಪರಿಗಣಿಸಿ ಮೇಲಿನ ಘಂಟೆಗಳನ್ನು ಕೈ ಬಿಟ್ಟಿದ್ದರು, ಹಾಗೆ ಕಾಲಗಣನೆಯನ್ನು ಮಾಡಿದ್ದರಿಂದ ಎಷ್ಟು ದಿವನಸಗಳ ಲೆಕ್ಕಾಚಾರ ತಪ್ಪಿಹೋಯಿತೋ ಏನೋ? ಆದರೆ ಸೀಝರ್ ಮಾತ್ರ ನಾಲ್ಕು ವರ್ಷಗಳಿಗೊಮ್ಮೆ ಒಂದು ಅಧಿಕ ದಿನವನ್ನು ಸೇರಿಸಿಕೊಳ್ಳಬೇಕೆಂದು ಸೂಚಿಸಿದ. ಇದಕ್ಕೆ ಖಗೋಳ ವಿದ್ಯಮಾನಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಯಾವುದೋ ಒಂದು ಕುರುಡು ಗುರುತನ್ನು ಅದಕ್ಕೆ ಪ್ರಮಾಣವಾಗಿ ತೆಗೆದುಕೊಂಡರು. ಹಾಗಾಗಿ ಅದು ವೈಜ್ಞಾನಿಕ ಕ್ಯಾಲೆಂಡರ್ ಆಗಲಿಲ್ಲ. ಪ್ರತಿ ನಾಲ್ಕು ವರ್ಷಗಳಿಗೆ ನಲವತ್ತೆಂಟು ನಿಮಿಷಗಳನ್ನು ಸೀಝರನ ಕ್ಯಾಲೆಂಡರ್ ನುಂಗಿ ಹಾಕಿತ್ತು. ಹೀಗೆ ಹದಿನಾರು ಶತಮಾನಗಳಲ್ಲಿ ಸುಮಾರು ಹತ್ತು ದಿನಗಳನ್ನು ಈ ಕ್ಯಾಲೆಂಡರ್ ನುಂಗಿ ಹಾಕಿದ್ದನ್ನು ಪೋಪ್ ಗ್ರಿಗೆರಿ ಕ್ರಿ.ಶ. ೧೫೮೨ರಲ್ಲಿ ಕಂಡುಹಿಡಿದ. ಆದ್ದರಿಂದ ೧೫೮೨ ಅಕ್ಟೋಬರ್ ನಾಲ್ಕನೇ ತೇದಿಯ ನಂತರದ ದಿನವನ್ನು ಅಕ್ಟೋಬರ್ ಹದಿನೈದು ಎಂದು ಪೋಪ್ ಗ್ರಿಗರಿ ನಿರ್ಧರಿಸಿದ. ಹೀಗೆ ಜೂಲಿಯನ್ ಕ್ಯಾಲೆಂಡರ್ ಅಂದರೆ ಜೂಲಿಯಸ್ ಸೀಝರನ ಕ್ಯಾಲೆಂಡರ್ ಹೋಗಿ ಗ್ರಿಗೋರಿಯನ್ ಕ್ಯಾಲೆಂಡರ್ ಚಲಾವಣೆಗೆ ಬಂತು! ಆದರೆ ಪೋಪನ್ನು ಧಿಕ್ಕರಿಸಿದ ಕೆಲವು ಪಾಪಿಗಳು ಮಾತ್ರ ಹಳೆಯ ಜೂಲಿಯನ್ ಕ್ಯಾಲೆಂಡರನ್ನು ಅನುಸರಿಸುವುದನ್ನು ನಿಲ್ಲಿಸಲಿಲ್ಲ, ಅವರು ಹಳೆಯ ಕ್ಯಾಲೆಂಡರನ್ನೇ ಹಿಡಿದುಕೊಂಡು ಶತಮಾನಗಳ ಕಾಲ ನೇತಾಡಿದರು! ಹಾಗಾಗಿ ರಷ್ಯಾದಲ್ಲಿ ಅಕ್ಟೋಬರ್ ೨೭ರಂದು ನಡೆಯಿತೆಂದು ಹೇಳುವ ಅಕ್ಟೋಬರ್ ಕ್ರಾಂತಿಯು ನಿಜವಾಗಿಯೂ ನಡೆದದ್ದು ನವೆಂಬರ್ ೭ರಂದು. ಅದು ರಕ್ತರಹಿತ ಕ್ರಾಂತಿಯೆಂದು ಹೇಳಲ್ಪಡುವ ಒಂದು ಸಂಚು ಎನ್ನುವುದು ಬೇರೆ ವಿಷಯ.
      ತಪ್ಪುಗಳ ತಡಿಕೆಯಾಗಿರುವ ಕ್ಯಾಲೆಂಡರನ್ನೇ ನಾವು ಒಪ್ಪುಗಳ ಕುಡಿಕೆ ಎಂದು ಭಾವಿಸುತ್ತಿದ್ದೇವೆ. ಮಕರ ಸಂಕ್ರಾಂತಿಯು ಒಂದಾನೊಂದು ಕಾಲದಲ್ಲಿ ಜನವರಿ ೧೨ರಂದು ಬರುತ್ತಿತ್ತಂತೆ! ಆಮೇಲೆ ಜನವರಿ ೧೩ರಂದು ಬರಲಾರಂಭಿಸಿತು, ಈಗ ೧೪ಕ್ಕೆ ಬರುತ್ತಿದೆ. ವಾಸ್ತವವಾಗಿ ಸಂಕ್ರಾಂತಿಯಲ್ಲಿ ಬದಲಾವಣೆಯಿಲ್ಲ! ಏಕೆಂದರೆ, ಅಂತರಿಕ್ಷದಲ್ಲಿ ಸಂಕ್ರಾಂತಿ ಸಂಭವಿಸಿದ ಕ್ಷಣದಿಂದ ಕಾಲಗಣನೆಯನ್ನು ಭಾರತೀಯ ಖಗೋಳಜ್ಞರು ಲೆಕ್ಕಹಾಕಿದರೆ, ಈ ವಿಷಯದಲ್ಲಿ ಪಾಶ್ಚಾತ್ಯ ಖಗೋಳಜ್ಞರು ಲೆಕ್ಕ ತಪ್ಪುತ್ತಿದ್ದಾರೆ! ಮತ್ತೆ ಮತ್ತೆ ನಾಲಿಗೆಯನ್ನು ಕಚ್ಚಿಕೊಳ್ಳುತ್ತಿದ್ದಾರೆ. ನಮಗೆ ಕಾಲಗಣನೆಯ ಮಾನದಂಡವು ’ಸಂಕ್ರಮಣ’ಗಳಾಗ ಬೇಕು, ಈ ಜನವರಿ, ಫೆಬ್ರವರಿ... ಡಿಸೆಂಬರುಗಳಲ್ಲ.
        (ವಿಲಿಯಮ್ ಜೋನ್ಸ್ ಚಿತ್ರಕೃಪೆ: ವಿಕಿಪೀಡಿಯ)
                                                                                                       *****
        ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಮೂರನೆಯ ಕಂತು, "ತಪ್ಪುಲ ತಡಕ ಒಪ್ಪುಲ ಕುಪ್ಪ ಆಯಿಂದಿ - ತಪ್ಪುಗಳ ತಡಿಕೆ ಈಗ ಒಪ್ಪುಗಳ ಕುಡಿಕೆ"
ಈ ಸರಣಿಯ ಎರಡನೇ ಲೇಖನಕ್ಕೆ ಧಾರ್ಮಿಕ ಶಕವನ್ನು ನಮ್ಮ ತಲೆಗೆ ಕಟ್ಟಿದರು! ಈ ಕೊಂಡಿಯನ್ನು ನೋಡಿ 
https://sampada.net/blog/%E0%B2%AD%E0%B2%BE%E0%B2%97-%E0%B3%A8-%E0%B2%AE...
 
 

Rating
No votes yet

Comments

Submitted by makara Wed, 10/05/2016 - 17:06

ಈ ಲೇಖನವನ್ನು ಓದಿ ಮೆಚ್ಚಿಕೊಂಡ ವಾಚಕರೆಲ್ಲರಿಗೂ ಧನ್ಯವಾದಳು. ಈ ಸರಣಿಯ ಮುಂದಿನ ಕೊಂಡಿಗಾಗಿ ಇಲ್ಲಿ ಚಿಟುಕಿಸಿ https://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%AE...