ಭಾಗ - ೫ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಶತ್ರುವೆ?

ಭಾಗ - ೫ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಶತ್ರುವೆ?

ಚಿತ್ರ

           ಮನುವು ದುಷ್ಟ ಮೇಧಾವಿ. "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದು ಹೇಳುತ್ತಾ ಸ್ತ್ರೀಯರಿಗೆ ಎಲ್ಲಾ ಹಂತಗಳಲ್ಲಿ ಎಲ್ಲಿಯೂ ಸ್ವಾತಂತ್ರ್ಯವನ್ನು ಕೊಡದೆ ಅವರನ್ನು ಗುಲಾಮರಾಗಿರುವಂತೆ ಆದೇಶಿಸಿದ್ದಾನೆ. ಅದು ಸ್ತ್ರೀಯರ ಅಭಿವೃದ್ಧಿಗೆ ಕೊಡಲಿಪೆಟ್ಟಿನಂತಹುದು ಎಂದು ....... ಮಲ್ಲಾದಿ ಸುಬ್ಬಮ್ಮ ಎನ್ನುವ (ತೆಲುಗಿನ) ಮಹಿಳಾ ಹಕ್ಕುಗಳ ಹೋರಾಟಗಾರ್ತಿಯೊಬ್ಬರು ಹೇಳಿದ್ದಾರೆ. (ಇದಕ್ಕೆ ನಮ್ಮ ಕನ್ನಡದ ಸ್ತ್ರೀಪರ ಸಂಘಟನೆಗಳ ಮಹಿಳಾಮಣಿಗಳೂ ಸಹ ಹೊರತೇನಲ್ಲ ಬಿಡಿ). 
         "ಎಲ್ಲಾ ಪರಿಸ್ಥಿತಿಗಳಲ್ಲೂ ಸ್ತ್ರೀಯರು ಸ್ವತಂತ್ರವಾಗಿ ಜೀವಿಸುವುದು ಅಸಾಧ್ಯವೆಂದು ಮನುವು ಖಂಡಿತವಾಗಿ ಹೇಳಿದ್ದಾನೆ... ಭಾರತದ ಇತಿಹಾಸದಲ್ಲಿ ಹಿಂದು ಸ್ತ್ರೀಯರ ಅಧೋಗತಿಗೆ ಅವರು ಹಿಂದುಳಿಯುವುದಕ್ಕೆ ಮೂಲಕಾರಣನಾದವನು ಖಂಡಿತವಾಗಿಯೂ ಮನುಧರ್ಮವನ್ನು ರಚಿಸಿದ ಶಾಸ್ತ್ರಕಾರ...... ಮೊದಲಾದವು ನಮಗೆ ಆಗಾಗ ಕೇಳಿಬರುತ್ತಿರುತ್ತವೆ. 
           ಹಾಗಾದರೆ ಇದು ದಿಟವಾಗಿಯೂ ಗಂಭೀರವಾಗಿ ಆಲೋಚಿಸಬೇಕಾದ ವಿಷಯವೇ!
        ಆಧುನಿಕರು, ವಿಚಾರವಾದಿಗಳು ಎಂದು ಹೇಳಿಕೊಳ್ಳುವವರೆಲ್ಲರಿಗೂ ಮನುವಿನ ಹೆಸರು ಹೇಳಿದರೆ ಸಾಕು ನಡುಕ ಉಂಟಾಗುತ್ತದೆ. ’ಮನುಸ್ಮೃತಿ’ ಎಂದಾಕ್ಷಣ ಅದನ್ನು ಕೂಡಲೇ ಸುಟ್ಟುಹಾಕಬೇಕೆನ್ನುವಂತಹ ಕೆಂಡದಂತಹ ಕೋಪವುಂಟಾಗುತ್ತದೆ. ಈ ಕಾಲದಲ್ಲಿ ಅದರಲ್ಲೂ ಮುಖ್ಯವಾಗಿ ಸ್ತ್ರೀ ಸಂಕುಲವನ್ನು ನಾಶಪಡಿಸುತ್ತಿರುವ ಸಕಲ ಕೆಡುಕುಗಳಿಗೂ ಕಾರಣೀಭೂತನೂ, ನಕ್ಷತ್ರಿಕನಂತೆ ಕಾಡುತ್ತಿರುವವನೂ ಮನುವೇ ಎನ್ನುವುದರಲ್ಲಿ ಅನುಮಾನವಿಲ್ಲ! ಎನ್ನುವುದು ಅವರ ಅಭಿಪ್ರಾಯ. 
            ಹಾಗಾದರೆ ಮನುಸ್ಮೃತಿಯನ್ನು ರಚಿಸಿದ ಗ್ರಂಥಕರ್ತನು ಮಾಡಿರುವಂತಹ ಮಹಾಪಾಪವಾದರೂ ಏನು? 
ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ l
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ ll (ಮನುಸ್ಮೃತಿ ೩ - ೫೬)
          ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲಸಿರುತ್ತಾರೆ. ಸ್ತ್ರೀಯರಿಗೆ ಗೌರವವಿಲ್ಲದ ಸ್ಥಳಗಳಲ್ಲಿ ಕೈಗೊಳ್ಳುವ ದೇವತಾ ಪೂಜಾದಿ ಕ್ರಿಯೆಗಳೆಲ್ಲವೂ ವ್ಯರ್ಥವಾಗುತ್ತವೆ. ಹೀಗೆ ಹೇಳಿರುವಾಗ ಸ್ತ್ರೀಯರನ್ನು ತಲೆಯ ಮೇಲಿರಿಸಿಕೊಂಡಂತೆಯೋ ಅಥವಾ ಅವರನ್ನು ಕಾಲಕೆಳಗೆ ಹೊಸಕಿಹಾಕಿದಂತೆಯೋ? 
ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಸು ತತ್ಕುಲಂ l
ನ ಶೋಚಂತಿ ತು ಯತ್ರೈತಾ ವರ್ಧತೇ ತದ್ದಿ ಸರ್ವದಾ ll ಮನುಸ್ಮೃತಿ ೩ - ೫೭)
       "ಸ್ತ್ರೀಯರು ದುಃಖಿಸಿದರೆ ಅದಕ್ಕೆ ಕಾರಣವಾದವರ ವಂಶವು ನಾಶವಾಗುತ್ತದೆ. ಸ್ತ್ರೀಯರು ಸಂತೋಷದಿಂದ ಇದ್ದರೆ ಆ ಮನೆ, ಅವರ ವಂಶ ಯಾವಾಗಲೂ ಶೋಭಿಸುತ್ತಾ ವೃದ್ಧಿಸುತ್ತದೆ" ಎಂದು ಹೇಳಿದವನು ಸ್ತ್ರೀಯರ ಒಳಿತನ್ನು ಬಯಸಿದವನಾ? ಅಥವಾ ಕೆಡುಕನ್ನು ಕೋರಿಕೊಂಡವನಾ? 
ಸಂತುಷ್ಟೋ ಭಾರ್ಯಯಾ ಭರ್ತಾ ಭರ್ತಾ ಭಾರ್ಯಾ ತಥೈವ ಚ l
ಯಸ್ಮಿನ್ನೇವ ಕುಲೇ ನಿತ್ಯಂ ಕಲ್ಯಾಣಂ ತತ್ರ ವೈ ಧೃವಂll (ಮನುಸ್ಮೃತಿ ೩ - ೬೦)
             ಪತಿಯು ಪತ್ನಿಯನ್ನು, ಪತ್ನಿಯು ಪತಿಯನ್ನು ಸಂತೋಷಗೊಳಿಸುತ್ತಿದ್ದರೆ ಆ ಮನೆಯಲ್ಲಿ ನಿತ್ಯ ಕಲ್ಯಾಣವುಂಟಾಗಿ ಅಲ್ಲಿ ಸಿರಿಸಂಪದಗಳು ನೆಲೆಗೊಳ್ಳುತ್ತವೆ ಎಂದು ಮಧುರ ವಚನಗಳನ್ನಾಡಿದವನು ಸ್ತ್ರೀಯರನ್ನು ಆದರಿಸಿದಂತೆಯೋ ಅಥವಾ ಅಧಃಪಾತಾಳಕ್ಕೆ ತುಳಿದಂತೆಯೋ? 
ಪ್ರಜನಾರ್ಥಂ ಮಹಾಭಾಗಾಃ ಪೂಜಾರ್ಹಾ ಗೃಹ ದೀಪ್ತಯಃ l
ಸ್ತ್ರಿಯಃ ಶ್ರಿಯಶ್ಚ ಗೇಹೇಷು ನ ವಿಶೇಷೋಸ್ತಿ ಕಶ್ಚನ ll (ಮನುಸ್ಮೃತಿ ೯-೨೬)
          ಸಂತಾನವನ್ನು ಹೊಂದಲು ಕಾರಣರಾದ ಸ್ತ್ರೀಯರು ಅಧಿಕವಾದ ಗೌರವಕ್ಕೆ ಅರ್ಹರು. ಅವರು ಮನೆಗೆ ಬೆಳಕಿನಂತಹವರು. ಯಾವ ವಿಧವಾಗಿ ಸಿರಿಸಂಪದಗಳಿಲ್ಲದ ಮನೆಯು ಶೋಭಿಸುವುದಿಲ್ಲವೋ ಅದೇ ವಿಧವಾಗಿ ಸ್ತ್ರೀಯರಿಲ್ಲದ ಮನೆಯು ಕಾಂತಿಹೀನವಾಗಿರುತ್ತದೆ. ಹೀಗೆ ಹೊಗಳಿದವನು ಸ್ತ್ರೀಯರ ಔನತ್ಯವನ್ನು ಎತ್ತಿಹಿಡಿದಂತೆಯೋ ಅಥವಾ ತುಂಡರಿಸಿದಂತೆಯೋ? 
          ’ಕೆಂಪು ಕಾಮಾಲೆಯೋ’ ಅಥವಾ ’ಬಿಳಿ ಕಾಮಾಲೆಯೋ’ ಬಂದಿರುವ ಬುದ್ಧಿಜೀವಿಗಳ ಕಣ್ಣಿಗೆ ಹೇಗೆ ಕಂಡರೂ ಸರಿ, ಪ್ರಪಂಚದಲ್ಲಿ ಸ್ತ್ರೀಯರ ವೈಶಿಷ್ಠ್ಯವನ್ನು ಗುರುತಿಸಿ, ಅವರ ಘನತೆಯನ್ನು ಹೆಚ್ಚಿಸಿ ಸಮಾಜದಲ್ಲಿ ಸಮುಚಿತವಾದ ಗೌರವದ ಸ್ಥಾನವನ್ನು ಕಲ್ಪಿಸಿದ ಮೊತ್ತಮೊದಲ ಧರ್ಮವೇತ್ತ ಮನು. ಆಸ್ತಿ ಹಕ್ಕುಗಳ ವಿಷಯದಲ್ಲಿ, "ಪುತ್ರೇಣ ದುಹಿತಾ ಸಮಾ" - ಮಗ ಮತ್ತು ಮಗಳು ಇಬ್ಬರೂ ಸಮಾನರೇ ಎಂದು ಪ್ರಾಚೀನ ಕಾಲದಲ್ಲೇ ಘಂಟಾಘೋಷವಾಗಿ ಉದ್ಘೋಷಿಸಿದ ಮಹನೀಯ ಮನು. ಅದೂ ಸಹ ಎಷ್ಟು ಸೊಗಸಾಗಿ!
ಯಥೈವಾತ್ಮಾ ತಥಾ ಪುತ್ರಃ ಪುತ್ರೇಣ ದುಹಿತಾ ಸಮಾ l
ತಸ್ಯಾಮಾತ್ಮನಿ ತಿಷ್ಠನ್ತ್ಯಾಂ ಕಥ ಮನ್ಯೋ ಧನಂ ಹರೇತ್ ll (ಮನುಸ್ಮೃತಿ ೯- ೧೩೦)
             ತಾನು ಹೇಗೋ ಹಾಗೆಯೇ ಮಗನೂ ಸಹ. ಮಗನು ಹೇಗೋ ಹಾಗೆಯೇ ಮಗಳೂ ಸಹ. ಮಗನಿಲ್ಲದಿದ್ದರೆ ತಂದೆಯ ಧನವು ಮಗಳಿಗಲ್ಲದೆ ಇನ್ಯಾರಿಗೆ ಸಲ್ಲುತ್ತದೆ? 
ಮಾತಸ್ತು ಯೌತುಕಂ ಯತ್ಸ್ಯಾತ್ ಕುಮಾರೀ ಭಾಗ ಏವ ಸಃ  l
ದೌಹಿತ್ರ ಏವ ಚ ಹರೇದಪುತ್ರ ಸಾಖಿಲ್ಯಂ ಧನಂ  ll (ಮನುಸ್ಮೃತಿ ೯- ೧೩೧)
             ಒಂದು ವೇಳೆ ತಾಯಿಗೆ ಪ್ರತ್ಯೇಕವಾದ ಆಸ್ತಿಯಿದ್ದಲ್ಲಿ ಅದೆಲ್ಲವೂ ಸಂಪೂರ್ಣವಾಗಿ ಮದುವೆಯಾಗದ ಪುತ್ರಿಯರಿಗೇ ಸಲ್ಲಬೇಕು. ಒಂದು ವೇಳೆ ತಂದೆಯು ಗಂಡು ಸಂತಾನವಿಲ್ಲದೇ ತೀರಿಕೊಂಡಲ್ಲಿ ಅವನ ಸಂಪೂರ್ಣ ಆಸ್ತಿಯು ಮಗಳ ಮಗನಿಗೇ ಸಲ್ಲತಕ್ಕದ್ದು. 
ಜನನ್ಯಾಂ ಸಂಸ್ಥಿತಾಯಾಂ ತು ಸಮಂ ಸರ್ವೇ ಸಹೋದರಾಃ l 
ಭಜೇರನ್ಮಾತೃಕಂ ರಿಕ್ಥಂ ಭಗಿನ್ಯಶ್ಯ ಸನಾಭಯಃ  ll (ಮನುಸ್ಮೃತಿ ೯- ೧೯೨)
         ತಾಯಿಯು ಮರಣಿಸಿದ ನಂತರ ಆಕೆಯ ಧನವನ್ನು ಪುತ್ರರು ಮತ್ತು ಮದುವೆಯಾಗದ ಪುತ್ರಿಯರು ಸಮಾನವಾಗಿ ಹಂಚಿಕೊಳ್ಳಬೇಕು. ಮದುವೆಯಾದ ಪುತ್ರಿಯರಿಗೆ ತಂದೆಯ ಧನದಂತೆ ತಾಯಿಯ ಧನದ ನಾಲ್ಕನೇ ಒಂದು ಭಾಗವನ್ನು ಹಂಚಿ ಕೊಡಬೇಕು. ........ ಹೀಗೆ ಹೇಳಿರುವ ಮನುವು ಸ್ತ್ರೀಯರಿಗೆ ಶತ್ರುವೇ? 
          ಮನುಸ್ಮೃತಿಯಲ್ಲಿ ಲೆಕ್ಕವಿಲ್ಲದಷ್ಟು ಪ್ರಕ್ಷಿಪ್ತಗಳು ಬಂದು ಸೇರಿವೆ ಎಂದು ಹೇಳುತ್ತಿದ್ದಾರಲ್ಲವೇ? ಇದೂ ಸಹ ಆ ವರ್ಗಕ್ಕೆ ಸೇರಿರಬಹುದು. ಮನುಧರ್ಮವನ್ನು ಮೇಲೆತ್ತುವುದಕ್ಕಾಗಿ ಈ ಶ್ಲೋಕಗಳನ್ನು ಅದರಲ್ಲಿ ತೂರಿಸಿರಬಹುದು..... ಎಂದು ಹೇಳಬಹುದು! ಅದು ಖಂಡಿತ ಸಲ್ಲದು, ಏಕೆಂದರೆ ಎಷ್ಟೋ ಸಾವಿರ ವರ್ಷಗಳ ಮುಂಚೆಯೇ ಯಾಸ್ಕರಾಚಾರ್ಯರು ವೇದಾಂಗಗಳೊಲ್ಲೊಂದಾದ ನಿರುಕ್ತದಲ್ಲಿಯೇ ಈ ಕೆಳಕಂಡಂತೆ ಸಾರಿದ್ದಾರೆ -
ಅವಿಶೇಷೇಣ ಪುತ್ರಾಣಾಮ್ ದಾಯೋ ಭವತಿ ಧರ್ಮತಃ l 
ಮಿಧುನಾನಾಂ ವಿಸರ್ಗಾದೌ ಮನು ಸ್ವಯಂಭುವೋಬ್ರವೀತ್ ll (೧-೪)
           ವಂಶಪಾರಂಪರ್ಯವಾಗಿ ಬರುತ್ತಿರುವ ಆಸ್ತಿಯಲ್ಲಿ ಪುತ್ರರಿಗೆ ಮತ್ತು ಪುತ್ರಿಯರಿಗೆ ಸಮಾನವಾದ ಹಕ್ಕಿರಬೇಕೆಂದು ಸೃಷ್ಟಿಯ ಆರಂಭದಲ್ಲಿಯೇ ಸ್ವಾಯಂಭುವ ಮನುವೇ ಹೇಳಿದ್ದಾನೆ.
          ಕುಟುಂಬದ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನವಾದ ಹಕ್ಕನ್ನು ಕೊಟ್ಟ ಮಾತ್ರಕ್ಕೆ ಸರಿಹೋಗದು. ಕಾಗದದ ಮೇಲೆ ಎಷ್ಟೋ ಕಾನೂನುಗಳು, ನ್ಯಾಯ ವ್ಯವಸ್ಥೆಗಳು ಪ್ರಬಲವಾಗಿರುವ ಈ ಕಾಲದಲ್ಲಿಯೇ, ಅಬಲೆಯರೆನ್ನುವ ಕ್ಷುಲ್ಲಕ ಭಾವನೆಯಿಂದ ಒಡಹುಟ್ಟಿದ ಅಕ್ಕ-ತಂಗಿಯರಿಗೆ ಅನ್ಯಾಯ ಮಾಡಿ ಅವರಿಗೆ ನ್ಯಾಯವಾಗಿ ಸೇರಬೇಕಾದ ಆಸ್ತಿಯನ್ನು ನುಂಗಿ ಹಾಕುವವರು ಎಷ್ಟೋ ಜನರಿದ್ದಾರೆ. ಇಂಥಹ ಕುಕೃತ್ಯಗಳನ್ನು ಎಸಗಬಹುದೆಂಬ ಮುಂದಾಲೋಚನೆಯಿಂದಲೇ, ಸ್ತ್ರೀಯರಿಗೆ ಸಲ್ಲಬೇಕಾದ ಆಸ್ತಿಯಲ್ಲಿ ಅವರಿಗೆ ಅನ್ಯಾಯ ಮಾಡುವವರು; ಅವರ ಹತ್ತಿರದ ಸಂಬಂಧಿಗಳೇ ಆಗಲಿ ಅಥವಾ ಸ್ವಂತ ಸಹೋದರರೇ ಆಗಲಿ ಅವರನ್ನು ಅನ್ಯಾಯವೆಸಗುವ ಸಾಮಾನ್ಯ ಕಳ್ಳರನ್ನು ಶಿಕ್ಷಿಸುವಂತೆ ಕಠಿಣವಾಗಿಯೇ ಶಿಕ್ಷಿಸಬೇಕೆಂದು ಮನುವು ಹೇಳಿದ್ದಾನೆ. ಸ್ತ್ರೀಯರ ಧನವನ್ನು ಅಪಹರಿಸುವುದು, ಸ್ತ್ರೀಯರಿಗೆ ಅನ್ಯಾಯ ಮಾಡುವುದು ಮೊದಲಾದವು ಮಹಾಪಾಪವೆಂದು ಎಚ್ಚರಿಸಿದ್ದಾನೆ (ಮನುಸ್ಮೃತಿ ೨-೫೨, ೮ - ೨೯, ೯- ೨೧೩). ಅಂತಹ ಅಪರಾಧಗಳಿಗೆ ವಿಧಿಸುವ ದಂಡನೆಗಳು ತೀವ್ರವಾಗಿದ್ದರೆ ಅವು ಕ್ರೂರವಾದವುಗಳು, ಅನಾಗರೀಕವಾದವುಗಳು, ಅಮಾನುಷವಾದವುಗಳು ಎಂದು ಮಹಾನಾಗಾರೀಕರಾಗಿರುವ ನಾವೇ ಪುನಃ ಅವನನ್ನು ಬೈದು, ಮೂರಾಬಟ್ಟೆ ಮಾಡುತ್ತೇವೆ.....! 
        ಸ್ತ್ರೀಯರು ಆಕಾಶದಲ್ಲಿನ ಅರ್ಧ ಎಂದು ಬೊಗಳೆ ಬಿಡುತ್ತಾ ....... ಸ್ತ್ರೀಯರಿಗೆ ಸಮಾನ ಸ್ಥಾನಮಾನ, ಸ್ತ್ರೀ ವಿಮೋಚನೆ, ಸ್ತ್ರೀ ಸ್ವಾತಂತ್ರ್ಯ, ಸ್ತ್ರೀಯರ ಹಕ್ಕುಗಳು ಎಂದು ಮಾತಿನಲ್ಲೇ ಹೊಟ್ಟೆ ತುಂಬಿಸುತ್ತಾ, ಗಾಳಿ ಗೋಪುರಗಳನ್ನು ಕಟ್ಟುತ್ತಾ .... ಮಹಿಳೆಯರನ್ನು ಕ್ರೂರವಾಗಿ ಹಿಂಸಿಸುವ, ಅವರ ಮೇಲೆ ಅತ್ಯಾಚಾರವೆಸಗುವ, ಅವರಿಗೆ ಅನ್ಯಾಯ ಮಾಡುವ ನಮ್ಮ ಕಾಲದವರ ಧೂರ್ತತೆ ಮನುವಿಗೆ ಇರಲಿಲ್ಲ. ಸ್ತ್ರೀವಾದಿಗಳೆಂದು, ವೀರ ’ಫೆಮಿನಿಷ್ಟು’ಗಳೆಂದು ಬೀದಿಗಳಲ್ಲಿ ವೀರಾವೇಶಗಳನ್ನು ಪ್ರದರ್ಶಿಸುತ್ತಾ ತಮ್ಮ ಮನೆಗಳಲ್ಲಿಯೇ ಸೊಸೆಯಂದಿರನ್ನು, ಹೆಣ್ಣುಮಕ್ಕಳನ್ನು, ಅತ್ತೆಯರನ್ನು ಹಿಂಸಿಸುವ ಈ ಕಾಲದ ಆಷಾಡಭೂತಿತನ ಮನುಧರ್ಮದಲ್ಲಿ ಇಲ್ಲ. ಅರ್ಧರಾತ್ರಿಯಲ್ಲಿ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತಾ ಅರೆನಗ್ನರಾಗಿ ಪಬ್ಬುಗಳಿಗೂ, ಪಾನಕೂಟಗಳಿಗೂ ತಿರುಗಿದರೆ ಮಾತ್ರ ಸ್ತ್ರೀಯರಿಗೆ ಸ್ವಾತಂತ್ರ್ಯವಿದ್ದಂತೆ..... ಎಂದು ಹುಚ್ಚು ಹುಚ್ಚಾಗಿ ಸ್ತ್ರೀವಾದಿಗಳು ಕಿರುಚಾಡುತ್ತಾರೆ! ಆದರೆ ವಾಸ್ತವ ಚಿತ್ರಣವನ್ನು ಗಮನಿಸಿ ನೋಡಿದರೆ, ಮರ್ಯಾದೆಯಾಗಿ, ಇನ್ನೊಬ್ಬರಿಗೆ ತೊಂದರೆ ಕೊಡದಂತೆ ತಮ್ಮ ತಮ್ಮ ವೃತ್ತಿಗಳಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುವ ಮಹಿಳೆಯರಿಗೆ ಅವರು ಕೆಲಸ ಮಾಡುವ ಸ್ಥಳಗಳಲ್ಲಿ, ತಿರುಗಾಡುವ ರಸ್ತೆಗಳಲ್ಲಿ, ಹತ್ತಿ ಕೂರುವ ವಾಹನಗಳಲ್ಲಿ ಮಾನ, ಪ್ರಾಣಗಳಿಗೆ ಇರಬೇಕಾದ ಕನಿಷ್ಠ ಭದ್ರತೆಯೇ ಇಲ್ಲ. ಮನೆಯ ಒಳಗಡೆ, ಹೊರಗಡೆ ಮಾನವಂತ ಸ್ತ್ರೀಯರಿಗೆ ರಕ್ಷಣೆಯಿಲ್ಲದೆ ಅತ್ಯಾಚಾರಗಳಂತಹ ನೀಚವಾದ ಕೆಲಸಗಳನ್ನು ಮಾಡುವ ಕಾಮಾಂದರ ಅಟ್ಟಹಾಸಗಳನ್ನು ತಡೆಯಲಾಗದ, ಘೋರವಾದ ಅನ್ಯಾಯಗಳಿಗೆ ತುತ್ತಾದ ಮಹಿಳೆಯರಿಗೆ ಸರಿಯಾದ ನ್ಯಾಯವು ಎಂದಿಗೂ ದೊರೆಯದಿರುವ ಇಂದಿನ ಅಮಾನುಷ ಅವ್ಯವಸ್ಥೆಗಿಂತೆ ಮನುಧರ್ಮವು ಎಷ್ಟೋ ಮೇಲು. ಏಕೆಂದರೆ, ಮಹಿಳೆಯರನ್ನು ಅಪಹರಿಸಿಕೊಂಡು ಹೋಗುವವರಿಗೆ, ಸ್ತ್ರೀಯರನ್ನು ಹತ್ಯೆ ಮಾಡುವವರಿಗೆ ಮರಣ ದಂಡನೆ ವಿಧಿಸಬೇಕೆಂದು ಮನುವು ಹೇಳಿದ್ದಾನೆ (ಮನುಸ್ಮೃತಿ ೮-೩೨೩, ೩೫೨ ಮತ್ತು ೯- ೨೩೨). [ಇತ್ತೀಚೆಗೆ ಹಸುಗೂಸುಗಳ ಮೇಲೆ,  ಎಳೆಯ ಕಂದಮ್ಮಗಳ ಮೇಲೆ, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸುಗವ ಕಾಮಾಂಧರಿಗೆ ಮರಣದಂಡನೆಯನ್ನು ವಿಧಿಸಬೇಕೆಂದು ಲೋಕಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ]. ಸ್ತ್ರೀಯರನ್ನು ಕೆಡಿಸಿದವನ ಮೂಗು, ಕಿವಿಗಳನ್ನು ಕೊಯ್ದು, ಸುಡುವ ಹೆಂಚಿನ ಮೇಲೆ ಕೂರಿಸಿ ಸುಟ್ಟುಕರಕಲಾಗುವಂತಹ ಚಿತ್ರಹಿಂಸೆಗಳನ್ನು ಕೊಟ್ಟು ವಧಿಸಬೇಕೆಂದು "ಸ್ತ್ರೀಯರಿಗೆ ಶತ್ರು" ಎಂದು ನಾವು ಪ್ರಲಾಪಿಸುತ್ತಿರುವ ಮನು ಉದ್ಘೋಷಿಸಿದ್ದಾನೆ (ಮನುಸ್ಮೃತಿ ೮-೩೬೪ ಮತ್ತು ೩೭೨). ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ನಡುರಸ್ತೆಯಲ್ಲಿ ಹೋಗುತ್ತಿದ್ದ ಬಸ್ಸಿನಲ್ಲಿ ಒಬ್ಬ ಯುವತಿಯನ್ನು  ಅಮಾನುಷವಾಗಿ ಅತ್ಯಾಚಾರಗೈದು, ದಾರುಣವಾಗಿ ಹತ್ಯೆ ಮಾಡಿದ ನರರಾಕ್ಷಸರನ್ನು ನೇಣಿಗೇರಿಸಬೇಕೆಂದರೆ....... ಇದು ಅನಾಗರೀಕ ಕ್ರಮವೆಂದು ಹೇಳುತ್ತಾ..... ತಪ್ಪಿತಸ್ಥರನ್ನು ಹಂದಿಗಳೆಂತೆ ಮೇಯಿಸಿ ಅವರ ಮನಸ್ಸನ್ನು ಪರಿವರ್ತಿಸಿ ಅವರು ತಮ್ಮನ್ನು ತಾವು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಬೇಕೆ ಹೊರತು ಅವರಿಗೆ ಮರಣದಂಡನೆಯನ್ನು ವಿಧಿಸಬಾರದೆಂದು ಮಾಧ್ಯಮಗಳಲ್ಲಿ ಕಕ್ಕಿಕೊಂಡ ಈ ಕಾಲದ ಮಹಾನುಭಾವರು ನಾವು! 
        ಸಾಧಾರಣವಾಗಿ ಸ್ತ್ರೀಯರು ಎದುರಿಸುವ ಸಮಸ್ಯೆಗಳಿಗೆ ಮತ್ತು ಒಳಗಾಗುವ ಅನ್ಯಾಯಗಳಿಗೆ ಪರಿಹಾರ ಮಾರ್ಗಗಳನ್ನು ಮನುವು ಒತ್ತಿ ಹೇಳಿದ್ದಾನೆ. ಅವರ ಮೇಲೆ ಅನಾವಶ್ಯಕವಾಗಿ, ಆಧಾರವಿಲ್ಲದೆ ದೂಷಿಸುವುದು, ಅಪನಿಂದೆಗಳ ಮೂಟೆಯ ಹೊರೆಯನ್ನು ಹೊರಿಸುವ ಸಾಹಸವನ್ನು ಯಾರೂ ಮಾಡಲಾಗದಂತೆ ಶಿಕ್ಷೆಗಳು ಯಾವ ವಿಧವಾಗಿ ಇರಬೇಕೆನ್ನುವುದನ್ನು ಮನುವು ಸೂಚಿಸಿದ್ದಾನೆ. ಸ್ತ್ರೀಯರು ತಪ್ಪು ಮಾಡದೇ ಇದ್ದರೂ ಕಾರಣವಿಲ್ಲದೇ  ಸಖಾಸುಮ್ಮನೇ ಅವರನ್ನು ಪರಿತ್ಯಜಿಸುವ ಗಂಡಂದಿರನ್ನು ಯಾವ ವಿಧವಾಗಿ ಶಿಕ್ಷಿಸಬೇಕೆಂದು ಮನುವು ನಿರ್ದೇಶಿಸಿದ್ದಾನೆ. ಎಷ್ಟು ರೀತಿ ಸಾಧ್ಯವೋ ಅಷ್ಟು ವಿಧವಾಗಿ ಮನೆಗೆ ಮಹಾಲಕ್ಷ್ಮಿಯಂತಿರುವ ಸ್ತ್ರೀಯರ ಯೋಗಕ್ಷೇಮವನ್ನು ಕುರಿತು ಗಟ್ಟಿಯಾಗಿ ಪ್ರತಿಪಾದಿಸಿರುವ ಮನುವನ್ನು ಭಯಂಕರವಾದ ಸ್ತ್ರೀ ದ್ವೇಷಿಯೆಂದು ಶಪಿಸುವುದು ಎಷ್ಟರ ಮಟ್ಟಿಗೆ ಉಚಿತವಾದುದು? 
ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಪತಿ ಮತ್ತು ಮುದಿತನದಲ್ಲಿ ಮಗನು ಸ್ತ್ರೀಯರಿಗೆ ರಕ್ಷಣೆಯನ್ನು ಒದಗಿಸಬೇಕೆಂದು, ಆ ಸುರಕ್ಷಿತವಾದ ವ್ಯವಸ್ಥೆಯನ್ನು ಅತಿಕ್ರಮಿಸಿ ಸ್ತ್ರೀಯರು ರಕ್ಷಣೆಯಿಲ್ಲದೆ ಸ್ವತಂತ್ರವಾಗಿ ಇರುವುದು ಸೂಕ್ತವಲ್ಲವೆಂದು ಸಾವಿರಾರು ವರ್ಷಗಳ ಹಿಂದೆ ಮನುವು ಹೇಳಿದ ಹಿತನುಡಿಗಳಲ್ಲಿ ತಪ್ಪು ಕಂಡುಹಿಡಿಯುವ ಔಚಿತ್ಯವಾದರೂ ಏನು? ಇದು ಪರೋಕ್ಷವಾಗಿ ಗಂಡಸರಿಗೆ ಎಲ್ಲಾ ಸಮಯದಲ್ಲೂ ಒಂದಲ್ಲ ಒಂದು ವಿಧದಲ್ಲಿ ಅವರು ಸ್ತ್ರೀಯರಿಗೆ ರಕ್ಷಣೆಯನ್ನು ಒದಗಿಸಬೇಕೆಂದು ನಿರ್ದೇಶಿಸುವುದಾಗಿದೆಯಲ್ಲವೇ?
ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ l
ರಕ್ಷಂತಿ ಸ್ಥಾವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ll (ಮನುಸ್ಮೃತಿ ೯-೩)
        ಮೇಲಿನ ಶ್ಲೋಕದಲ್ಲಿ ಕಡೆಯ ಪದಗುಚ್ಚವನ್ನಷ್ಟೇ ಹಿಡಿದುಕೊಂಡು ಸ್ತ್ರೀಯರು ಸ್ವತಂತ್ರವಾಗಿರಲು ಅನರ್ಹರೆಂದು ಮನುವು ಹೇಳಿದ್ದಾನೆಂದು..... ಅವರು ಜನ್ಮದಾರಭ್ಯ ಸಾಯುವವರೆಗೆ ತಂದೆಯ ಆಧೀನದಲ್ಲೋ, ಪತಿಯ ಆಧೀನದಲ್ಲೋ ಅಥವಾ ಮಗನ ಆಧೀನದಲ್ಲೋ ಜೀತದಾಳಿನಂತೆ ಬಿದ್ದಿರಬೇಕೆಂದು ಸ್ತ್ರೀಯರಿಗೆ ಬಿಡುಗಡೆಯಾಗದಂತಹ ಶಾಪವನ್ನು ಕೊಟ್ಟಿದ್ದಾನೆಂದು, ಅರೆಬೆಂದ ಜ್ಞಾನದಿಂದ ಮನುವಿನ ಮೇಲೆ ಗೂಬೆ ಕೂರಿಸುವುದು ಯಾವ ವಿಧವಾದ ವಿವೇಚನೆ? 
         ಇಂದಿನ ಆಧುನಿಕ ನಾಗರೀಕ ಸಮಾಜ ಅಥವಾ ’ಅಲ್ಟ್ರಾ ಮಾಡರ್ನ್ ಸೊಸೈಟಿ’ ಎನ್ನುವ ಸ್ವೇಚ್ಛಾ ಸಾಮಾಜಿಕ ಸಂಸ್ಕೃತಿಯಲ್ಲಿ ತಂದೆಯ ಸಂರಕ್ಷಣೆಯಲ್ಲಿ ಹುಡುಗಿಯರು ಬದುಕುತ್ತಿಲ್ಲವೇ? ಸ್ತ್ರೀ ಸ್ವಾತಂತ್ರ್ಯ, ಸ್ತ್ರೀವಾದ ಅಥವಾ ಫೆಮಿನಿಜಮ್ಮಿನ ಆಜೀವ ಸದಸ್ಯರಾಗಿರುವ ವೀರನಾರಿಯರು ತಮ್ಮ ಗಂಡಂದಿರ ಮನೆಯಲ್ಲಿ ವಾಸಿಸುತ್ತಿಲ್ಲವೇ? ತಮ್ಮ ತಂಟೆಗೆ ಯಾರಾದರೂ ಬಂದರೆ ಅಥವಾ ಯಾವುದಾದರೂ ಪುರುಷ ಮೃಗ ಅವರನ್ನು ಹಿಂಬಾಲಿಸಿ ಪೀಡಿಸುತ್ತಿದ್ದರೆ ಆ ಸಮಸ್ಯೆಯನ್ನು ಎದುರಿಸಲು ಅವರು ತಂದೆಯ ಅಥವಾ ಗಂಡನ ಸಹಾಯವನ್ನು ಪಡೆದುಕೊಳ್ಳುತ್ತಿಲ್ಲವೇ? ನಾನು ಸ್ವತಂತ್ರಳು, ತಂದೆ ಅಥವಾ ಗಂಡನ ಸಹಾಯ ತಮಗೆ ಬೇಡವೆಂದು ಅವರು ಏಕಾಏಕಿ ಪೋಲಿಸ್ ಸ್ಟೇಷನ್ನುಗಳಿಗೆ ಹೋಗುತ್ತಿದ್ದಾರೆಯೇ? ಮನೆಯಲ್ಲಿ ತಮ್ಮ ಮಕ್ಕಳು ತಮ್ಮ ಸಂರಕ್ಷಣೆಯಲ್ಲಿ ಇರಬೇಕೆಂದು ಕೋರಿಕೊಳ್ಳುತ್ತಿದ್ದಾರಾ..... ಅಥವಾ ಹೆಣ್ಣುಮಕ್ಕಳು ಸ್ವತಂತ್ರರು ಆದ್ದರಿಂದ ಅವರು ತಮಗಿಷ್ಟ ಬಂದಂತೆ ರಾತ್ರಿ ಹೊತ್ತು ಎಲ್ಲಿಯಾದರೂ ಕಳೆಯಲಿ ಎಂದು ತಲೆತುಂಬಿ, ಕಾಂಡೋಮ್ ಪ್ಯಾಕೆಟುಗಳನ್ನು ಮಗಳ ಕೈಗಿತ್ತು ಕಳುಹಿಸುತ್ತಿದ್ದಾರಾ? ಮನೆಗೆ ಬಂದ ಸೊಸೆ ತನ್ನ ಮಗನ ಮಾತನ್ನು ಕೇಳಬೇಕೆಂದು ಬಯಸುತ್ತಾರಾ...... ಇಲ್ಲಾ ಅವನನ್ನು ನೀನು ಲೆಕ್ಕಕ್ಕೆ ತೆಗೆದುಕೊಳ್ಳಬೇಡ, ನೀನು ಸ್ವತಂತ್ರಳು, ಗಂಡ, ಮನೆ, ಮಕ್ಕಳು ಎನ್ನುವ ಗೋಜಿಗೆ ಹೋಗದೆ ಹಾಯಾಗಿ ನಿನ್ನ ಬಾಯ್‌ಫ್ರೆಂಡ್ಸ್‌ ಜೊತೆ ಮೋಜು, ಮಸ್ತಿ ಮಾಡು ಎಂದು ತಮ್ಮ ಸೊಸೆಯಂದಿರನ್ನು ಸ್ತ್ರೀಸ್ವಾತಂತ್ರ್ಯದಲ್ಲಿ ಮುಳುಗಿ ತೇಲಿಸುತ್ತಿದ್ದಾರಾ? ವಯಸ್ಸಾದ ಮೇಲೆ ಮಕ್ಕಳು ತಮ್ಮ ಬಳಿಯಿರಬೇಕೆಂದು ಬಯಸುತ್ತಿದ್ದಾರಾ....... ಅಥವಾ ವಯಸ್ಸಾದ ಮೇಲೆ ಗಂಡು ಮಕ್ಕಳಿಗೆ ವಿದಾಯ ಹೇಳಿ ತಮ್ಮ ಬಟ್ಟೆಬರೆಗಳನ್ನು ಜೋಡಿಸಿಕೊಂಡು ವೃದ್ಧಾಶ್ರಮಕ್ಕೋ ಇಲ್ಲಾ ಮಹಿಳೆಯರ ಹಾಸ್ಟೆಲ್ಲುಗಳಿಗೋ ಹೋಗಬೇಕೆಂದು ತಪಿಸುತ್ತಿದ್ದಾರಾ? (ಈ ಹೇಳಿಕೆಗಳು ಸ್ವಲ್ಪ ಅತಿರೇಕವೆನಿಸಿದರೆ ಅದಕ್ಕೆ ಕ್ಷಮೆಯಿರಲಿ). 
           ತಮ್ಮವರೆಗೆ ಬಂದಾಗ ಮಾತ್ರವೇನೋ ತಮ್ಮ ಮಕ್ಕಳು ತಮ್ಮ ಹಿಡಿತದಲ್ಲಿರಬೇಕು. ತಮ್ಮ ಒಳಿತು-ಕೆಡುಕುಗಳನ್ನೇನೋ ಗಂಡನೆಂಬ ಪ್ರಾಣಿಯೇ ನೋಡಿಕೊಳ್ಳಬೇಕು. ವಯಸ್ಸಾದ ನಂತರ ತಮ್ಮ ಕಷ್ಟಸುಖಗಳನ್ನೆಲ್ಲಾ ಮಕ್ಕಳು ನೋಡಿಕೊಳ್ಳಬೇಕು. ಒಂದು ವೇಳೆ ಹಾಗಲ್ಲದಿದ್ದರೆ ಮನುವು ಹೇಳಿದ್ದು ಮತ್ತಿನ್ನೇನು? ತನಗೊಂದು ನೀತಿ ಪರರಿಗೊಂದು ನೀತಿ ಎನ್ನುವ ಕಪಟತನವಿಲ್ಲದೇ ಇದ್ದುದರಿಂದ ಮನುವು ಲೋಕಕ್ಕೆಲ್ಲಾ ಒಂದೇ ನೀತಿಯಿರಬೇಕೆಂದು ಪ್ರತಿಪಾದಿಸಿದ್ದಾನೆ... ಅದು ಅವನ ತಪ್ಪೇ? 
    ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೪ ಮನುವಿನ ಧರ್ಮ: ಪರಂಗಿಗಳು ತಂದಿಟ್ಟ ಪಜೀತಿಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%AE...
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು ಪುಸ್ತಕದ ಐದನೆಯ ಅಧ್ಯಾಯ).
 
ಚಿತ್ರಗಳ ಕೃಪೆ: ಗೂಗಲ್
ಚಿತ್ರ - ೧: ಮಲ್ಲಾದಿ ಸುಬ್ಬಮ್ಮ
ಚಿತ್ರ -೨: ಡಾ. ಬಾಬಾ ಸಾಹೇಬ್ ಅಂಬೇಡ್ಕರ್
ಚಿತ್ರ - ೩: ಮನುಸ್ಮೃತಿ ಆಂಗ್ಲ ಅನುವಾದ 
ಚಿತ್ರ - ೪: ಮನುಸ್ಮೃತಿ ಕನ್ನಡ ಅನುವಾದ 

Rating
Average: 3.5 (2 votes)

Comments

Submitted by makara Thu, 01/24/2019 - 09:54

ಈ ಸರಣಿಯ‌ ಮುಂದಿನ ಲೇಖನ ಭಾಗ - ೬ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಮಿತ್ರನೋ, ಶತ್ರುವೋ? ಓದಲು ಈ ಕೊಂಡಿಯನ್ನು ನೋಡಿ:https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%AE...