ಭಾಗ - ೬ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಮಿತ್ರನೋ, ಶತ್ರುವೋ?
ಮದುವೆಯಾಗುವವರಗೆ ತಂದೆಯ ಅಧೀನದಲ್ಲಿ -
ಮದುವೆಯಾದ ನಂತರ ಪತಿಯ ಅಧೀನದಲ್ಲಿ -
ಮುದಿತನದಲ್ಲಿ ಮಗನ ಅಧೀನದಲ್ಲಿ -
ಗುಲಾಮಳಾಗಿರು. ಅವರ ದಯೆಯಿದ್ದರೆ ಅದು ನಿನ್ನ ಪುಣ್ಯ. ಇಲ್ಲದಿದ್ದರೆ ಅದು ನಿನ್ನ ಕರ್ಮ, ನಿನ್ನ ಹಣೆಬರಹ! ನಿನಗೆ ಜೀವನದಲ್ಲಿ ಸ್ವತಂತ್ರವಾಗಿ ಇರುವ ಅವಕಾಶವಿಲ್ಲ!
ಈ ವಿಧವಾಗಿ ಮನುವೆನ್ನುವ ಮಹಾಧೂರ್ತ ಶಾಪವಿತ್ತಿದ್ದಾನೆಂದಲ್ಲವೇ ಬುದ್ಧಿಜೀವಿಗಳೆಂದು, ವಿಚಾರವಾದಿಗಳೆಂದು ಕರೆಯಲ್ಪಡುತ್ತಿರುವವರ ಸಂಕಟ? ಅರ್ಥವೇನು, ಅಂತರಾರ್ಥವೇನು ಎನ್ನುವುದನ್ನು ಅರಿಯದೆ, ಅದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಎಲ್ಲಿಂದಲೋ ಹೆಕ್ಕಿ ತಂದು ಮಾತು ಮಾತಿಗೆ "ಸ್ತ್ರೀಯರು ಸ್ವಾತಂತ್ರಕ್ಕೆ ಅರ್ಹರಲ್ಲವೆಂದು" ಅವರು ಉದಾಹರಿಸುವ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎನ್ನುವ ಆ ಒಂದು ಪದಗುಚ್ಛವಿರುವುದು ಮನುಸ್ಮೃತಿಯ ಒಂಬತ್ತನೇ ಅಧ್ಯಾಯದ ಮೂರನೇ ಸಂಖ್ಯೆಯ ಶ್ಲೋಕದಲ್ಲಿ. ಅದರ ಹಿಂದೆಯೇ ಮತ್ತೊಂದು ಶ್ಲೋಕವೂ ಇದೆ -
ಕಾಲೇ ದಾತಾ ಪಿತಾ ವಾಚ್ಯೋ ವಾಚ್ಯಶ್ಚಾನುನಯನೇ ಪತಿಃ l
ಮೃತೇ ಭರ್ತರಿ ಪುತ್ರಸ್ತು ವಾಚ್ಯೋ ಮಾತು ರಕ್ಷಿತಾ ll (ಮನುಸ್ಮೃತಿ ೯-೪)
ಭಾವಾರ್ಥ - ಮದುವೆ ಮಾಡಬೇಕಾದ ವಯಸ್ಸಿನಲ್ಲಿ ಮಗಳಿಗೆ ಮದುವೆ ಮಾಡದೇ ಇದ್ದಲ್ಲಿ ಅದಕ್ಕೆ ತಂದೆಯು ತಪ್ಪಿತಸ್ಥನಾಗುತ್ತಾನೆ. ಹೆಂಡತಿಯನ್ನು ಸುಖವಾಗಿಡದ ಪಕ್ಷದಲ್ಲಿ ಅದಕ್ಕೆ ಗಂಡನೇ ಹೊಣೆ. ಗಂಡ ಮರಣಿಸಿದ ನಂತರ ತಾಯಿಯನ್ನು ಕಾಪಾಡದೇ ಹೋದರೆ ಮಗನಾದವನು ಅಪರಾಧಿ ಎನಿಸಿಕೊಳ್ಳುತ್ತಾನೆ.
ಇದರರ್ಥ ತಂದೆಗೆ, ಗಂಡನಿಗೆ ಮತ್ತು ಮಗನಿಗೆ ಮನುವು ವಹಿಸಿದ್ದು ದೊಡ್ಡಸ್ತಿಕೆಯಲ್ಲ ....... ಆದರೆ ಜವಾಬ್ದಾರಿ! ಅವರು ಅದನ್ನು ಸರಿಯಾಗಿ ನಿಭಾಯಿಸದೇ ಇದ್ದರೆ ಅದಕ್ಕೆ ಅವರೇ ಹೊಣೆ ಎಂದು ಮನು ಅವರನ್ನು ಎಚ್ಚರಿಸಿದ್ದಾನೆ. ಹೆಂಗಸೆಂದರೆ ಗಂಡಸಿನ ಕಾಲ ಬಳಿ ಬಿದ್ದಿರಬೇಕಾದ ದಾಸಿ, ಗಂಡಸಾದವನು ಹೇಗೇ ಇದ್ದರೂ, ತನ್ನನ್ನು ಹೇಗೇ ನೋಡಿಕೊಂಡರೂ, ಏನು ಮಾಡಿದರೂ ಹೆಣ್ಣೆಂಬುವವಳು ಅದರ ಕುರಿತು ತುಟಿ ಬಿಚ್ಚಬಾರದು ಎಂದು ಹೇಳುವ ಈ ಕಾಲದ ಅನೇಕರಿಗಿರುವಂತೆ ಮನುವಿಗೆ ಮೈಯೆಲ್ಲಾ ದುರಹಂಕಾರವಿದ್ದಿದ್ದರೆ ಅವನು ಮೇಲೆ ತಿಳಿಸಿದಂತಹ ಕಟ್ಟಳೆಯನ್ನು ಮಾಡುತ್ತಿದ್ದಿಲ್ಲ.
ನಿಜ, ಮಗಳಿಗೆ ಮದುವೆ ಮಾಡುವುದು ಹೆತ್ತವರ ಕರ್ತವ್ಯ. ಒಂದು ವೇಳೆ ಹೆತ್ತವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಹೋದರೆ? ಮಗಳ ಸಂಪಾದನೆ ಚೆನ್ನಾಗಿದ್ದು....... ಆಕೆಗೆ ಮದುವೆ ಮಾಡಿ ಹೊರಗೆ ಕಳುಹಿಸಿದರೆ ತಮಗೆ ನಷ್ಟವಾಗುವುದರಿಂದ ಏನೋ ಒಂದು ನೆಪ ಹೇಳಿ ಬಂದ ಸಂಬಂಧಗಳನ್ನೆಲ್ಲಾ ಮುರಿದು ಹಾಕಿ ಆಕೆಗೆ ಮದುವೆಯಾಗದಂತೆ ಎಚ್ಚರಿಕೆ ವಹಿಸುತ್ತಿರುವ ಎಷ್ಟು ಮಂದಿ ತಂದೆ-ತಾಯಿಗಳು ಈ ಕಾಲದಲ್ಲಿ ಇಲ್ಲ? ತಂದೆ-ತಾಯಿಗಳು ಬೇಕೆಂತಲೇ ಬಂದ ಸಂಬಂಧಗಳನ್ನೆಲ್ಲಾ ಹಾಳು ಮಾಡುತ್ತಿದ್ದಾರೆಂದು ಒಂದು ಮೂಲೆಯಲ್ಲಿ ಅನುಮಾನವಿದ್ದರೂ, ಧೈರ್ಯ ಮಾಡಿ, ತನಗೆ ಇಷ್ಟವಾಗುವವನನ್ನು ತಾನೇ ಆರಿಸಿಕೊಂಡು ಮದುವೆ ಮಾಡಿಕೊಂಡರೆ ಸುತ್ತಮುತ್ತಲಿನ ನಾಲ್ಕು ಜನ ಏನಂದುಕೊಂಡಾರು ಎಂದು ಸಮಾಜಕ್ಕೆ ಹೆದರಿ, ಮದುವೆಯಾಗುವ ಸಾಹಸಕ್ಕೆ ಹೋಗದಿರುವ ಎಷ್ಟು ಜನ ಹೆಣ್ಣುಮಕ್ಕಳು ಈಗಿನ ಕಾಲದಲ್ಲಿ ಇಲ್ಲ? ಈ ದಿನಗಳಲ್ಲಿ ಸ್ತ್ರೀವಾದ ಎಷ್ಟೇ ಪ್ರಬಲವಾಗಿದ್ದರೂ ಸಹ......., ಕಾಲ ಮತ್ತು ಸಮಾಜಗಳು ಎಷ್ಟೇ ಮುಂದುವರೆದಿದ್ದರೂ ಸಹ.... ವಿದ್ಯೆ, ವಿಜ್ಞಾನ ಎಷ್ಟೇ ಮುಂದಡಿಯಿರಿಸಿದ್ದರೂ ಸಹ.......... ಸ್ವಂತವಾಗಿ ಮದುವೆ ಮಾಡಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವೆನ್ನುವ ಧೈರ್ಯವನ್ನು, ವಿಶ್ವಾಸವನ್ನು..... ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬಗಳಲ್ಲಿ ಅವಶ್ಯವಿರುವ ಸ್ಥಾಯಿಯಲ್ಲಿ ಉಂಟು ಮಾಡಲಿಕ್ಕಾಗುತ್ತಿಲ್ಲವಲ್ಲ?!
ಆದರೆ, ಸಾವಿರಾರು ವರ್ಷಗಳ ಕೆಳಗೆ ಮನು ಏನು ಹೇಳಿದ್ದಾನೋ ನೋಡಿ -
ಅದೀಯಮಾನಾ ಭರ್ತಾರಂ ಅಧಿಗಚ್ಛೇತ್ ಯದಿಸ್ವಯಮ್ l
ನೈನಃ ಕಿಂಚಿದವಾಪ್ನೋತಿ ನ ಚಯಂ ಸಾಧಿಗಚ್ಚತಿ ll (ಮನುಸ್ಮೃತಿ ೯ - ೯೧)
ಭಾವಾರ್ಥ - ತಂದೆ-ತಾಯಿಗಳು ತನಗೆ ಯುಕ್ತ ವಯಸ್ಸಿನಲ್ಲಿ ಮದುವೆ ಮಾಡದೇ ಇದ್ದಲ್ಲಿ ತಾನು ಯೋಗ್ಯವಾನಾದವನನ್ನು ಮದುವೆಯಾದರೆ ಹಿರಿಯರನ್ನು ಧಿಕ್ಕರಿಸಿದ ಪಾಪವು ಸ್ತ್ರೀಗೆ ತಟ್ಟುವುದಿಲ್ಲ.
ಹಾಗಾದರೆ ಮೇಲೆ ಹೇಳಿದಂತಹ ಮನೋಕ್ಷೋಭೆಯಿಂದ ನಲಿಗಿ ಹೋಗುತ್ತಿರುವ ಈ ಕಾಲದ ಮದುವೆಯಾಗದ ಹೆಣ್ಣುಮಕ್ಕಳಿಗೆ ಮನುವು ಮಿತ್ರನೋ? ಶತ್ರುವೋ?
ಮದುವೆಯಾಗಿದೆ, ಪತಿ ದೇಶಾಂತರ ಹೋಗಿದ್ದಾನೆ. ಎಲ್ಲಿರುವನೋ ತಿಳಿಯದು. ಯಾವಾಗ ಹಿಂದಿರುಗಿ ಬರುತ್ತಾನೋ ಗೊತ್ತಿಲ್ಲ. ಅಸಲಿಗೆ ಹಿಂದಿರುಗಿ ಬರುವ ಉದ್ದೇಶವೇನಾದರೂ ಇದೆಯೋ ಇಲ್ಲವೋ? ಅಥವಾ ಅಲ್ಲೇ ಬೇರೆ ಯಾರನ್ನಾದರೂ ಗಂಟು ಹಾಕಿಕೊಂಡಿದ್ದಾನೋ ಗೊತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಂಡತಿಯಾದವಳು ಎಷ್ಟು ದಿವಸ ತನ್ನ ಗಂಡನಿಗಾಗಿ ಎದುರು ನೋಡಬೇಕು? ಏನು ಮಾಡಬೇಕು?
"ಕರಡುಗಟ್ಟಿದ ಕ್ರೂರಮೃಗ" ಎಂದು ನಮ್ಮವರ ಮನಸ್ಸಿನಲ್ಲಿ ಮುದ್ರೆ ಹಾಕಿಸಿಕೊಂಡಿರುವ ಮನುವಾದರೋ - "ಎಷ್ಟು ವರ್ಷವಾದರೂ ಸರಿ ಗಂಡನಿಗಾಗಿ ಎದುರು ನೋಡಬೇಕಾದ್ದೆ, ಗಂಡ ಹಿಂದಿರುಗಿ ಬರುವವರೆಗೆ ತಂದೆ ಅಥವಾ ಮಾವನ ಕಾಲ ಬಳಿಯಲ್ಲಿ ಬಿದ್ದಿರಬೇಕಾದ್ದೇ, ಮತ್ತೆ ಮದುವೆ ಗಿದುವೆ ಎನ್ನುವ ಉಸಿರೆತ್ತಬಾರದೆಂದು ಆದೇಶಿಸಬೇಕಲ್ಲವೇ?"
ಆದರೆ, ಮನುಸ್ಮೃತಿಯಲ್ಲಿ ಹೇಳಿರುವ ಈ ಶ್ಲೋಕವನ್ನು ನೋಡಿ -
ಪ್ರೋಷಿತೋ ಧರ್ಮ ಕಾರ್ಯಾರ್ಥಂ ಪ್ರತೀಕ್ಷ್ಯೋಷ್ಟೌ ನರಸ್ಸಮಾಃ l
ವಿದ್ಯಾರ್ಥಂ ಷಡ್ಯಶೋರ್ಥಂ ವಾ ಕಾಮಾರ್ಥಂ ತ್ರೀಂಸ್ತು ವತ್ಸರಾನ್ ll (ಮನುಸ್ಮೃತಿ ೯ - ೭೬)
ಭಾವಾರ್ಥ - ಪತಿಯಾದವನು ಧರ್ಮಕಾರ್ಯಾರ್ಥವಾಗಿ ದೇಶಾಂತರ ಹೋಗಿದ್ದರೆ ಅವನ ಬರುವಿಕೆಗಾಗಿ ಎಂಟು ವರ್ಷ ಕಾಯಬೇಕು, ವಿದ್ಯಾರ್ಜನೆಗಾಗಿಯೋ ಅಥವಾ ಕೀರ್ತಿ ಸಂಪಾದನೆಗಾಗಿಯೋ ಹೋಗಿದ್ದರೆ ಆರು ವರ್ಷ ಕಾಯಬೇಕು, ಬೇರೆ ಸ್ತ್ರೀಯ ಮೇಲಿನ ವ್ಯಾಮೋಹದಿಂದ ಹೋಗಿದ್ದಾನೆಂದು ತಿಳಿದುಬಂದರೆ ಮೂರು ವರ್ಷಗಳ ಕಾಲ ಎದುರು ನೋಡಬೇಕು.
ಅಷ್ಟು ವರ್ಷಗಳಾದರೂ ಹೋದವನು ಪತ್ತೆಯಿಲ್ಲ ಎಂದಾಗ ಹೆಂಡತಿಯಾದವಳು ಏನು ಮಾಡಬೇಕು? ಅದು ಅವಳ ಇಷ್ಟಕ್ಕೆ ಬಿಟ್ಟದ್ದು. ಬೇಕಾದರೆ ಆಕೆ ಬೇರೊಬ್ಬರನ್ನು ಮದುವೆಯಾಗಬಹುದು, ಮಕ್ಕಳನ್ನು ಕೂಡ ಪಡೆದುಕೊಳ್ಳಬಹುದು. ಬೇಡ, ಕೇವಲ ಮಕ್ಕಳಾದರೆ ಸಾಕು ಎಂದು ಆಕೆ ಭಾವಿಸಿದರೆ ಮನೆಯಲ್ಲಿನ ಹಿರಿಯರ ಅನುಮತಿಯಿಂದ ಯೋಗ್ಯನಾದವನ ಮೂಲಕ ನಿಯೋಗ ಪದ್ಧತಿಯ ಮೂಲಕ ಗರ್ಭವನ್ನು ಧರಿಸಬಹುದು.
ಕೇವಲ ದೇಶಾಂತರ ಹೋದ ಪತಿ ಹಿಂದಿರುಗಿ ಬರದಿದ್ದಾಗಲಷ್ಟೇ ಅಲ್ಲ, ಗಂಡ ವಿಧಿವಶನಾದಾಗಲೂ ಸಹ ಹೆಂಡತಿಯಾದವಳು ತಲೆಬೋಳಿಸಿಕೊಂಡು, ಮಡಿಬಟ್ಟೆಯುಟ್ಟುಕೊಂಡು ತವರು ಮನೆ ಸೇರಿ ಜೀವಮಾನವೆಲ್ಲಾ ಅಳುತ್ತಾ ಕೂರಬೇಕಾಗಿಲ್ಲ. (ಈ ವಿಧವಾದ ಸನ್ನಿವೇಶ ತೆಲುಗಿನ ಗುರುಜಾಡ ಅಪ್ಪಾರಾವ್ ಅವರು ಬರೆದಿರುವ ನಾಟಕವೊಂದರಲ್ಲಿ ಬಹುಶಃ ಕನ್ಯಾಶುಲ್ಕ ನಾಟಕದಲ್ಲಿ ಬರುತ್ತದೆ. ಕನ್ನಡದ ಮಟ್ಟಿಗೆ ಈ ವಿಧವಾದ ಹೆಂಗಸರ ಕಷ್ಟಗಳ ಕುರಿತು ನಮಗೆ ಎಂ.ಕೆ.ಇಂದಿರಾ ಅವರು ಬರೆದಿರುವ ಫಣಿಯಮ್ಮ ಕಾದಂಬರಿಯಲ್ಲಿ ಸಿಗುತ್ತದೆ). ಆಕೆಗೆ ಇಷ್ಟವಾದರೆ ನಿರಭ್ಯಂತರವಾಗಿ ಮತ್ತೆ ಮದುವೆ ಮಾಡಿಕೊಳ್ಳಬಹುದು. ಮಕ್ಕಳನ್ನು ಕೂಡ ಪಡೆದುಕೊಳ್ಳಬಹುದು. ಒಂದು ವೇಳೆ ವಿತಂತುವಾಗಿದ್ದರೂ ಸಹ ವಿಧವೆಯಾದ ಸ್ತ್ರೀಯು ’ನಿಯೋಗ ಪದ್ಧತಿ’ಯ ಮೂಲಕ ಹತ್ತಿರದ ಸಂಬಂಧಿಯಿಂದ ಗರ್ಭವನ್ನು ಧರಿಸಬಹುದು.
ಒಂದು ವೇಳೆ ಪತಿ ದೇಶಾಂತರ ಹೋಗಿ, ನಿರ್ಧಿಷ್ಠ ಸಮಯದವರೆಗೂ ಪತ್ನಿಯಾದವಳು ನಿರೀಕ್ಷಿಸಿ ಅವನು ಬಾರದೇ ಹೋದಾಗ ಆಕೆ ಪುನರ್ವಿವಾಹ ಮಾಡಿಕೊಂಡಿದ್ದಾಳೆ ಎಂದಿಟ್ಟುಕೊಳ್ಳೋಣ. ಪುನರ್ವಿವಾಹದ ನಂತರ ಹಲವು ಕಾಲಕ್ಕೆ ಆಕೆಗೆ ಎರಡನೇ ಪತಿಯೊಂದಿಗೆ ಸಂಬಂಧ ಹಳಿಸಿಹೋದ ಸಮಯದಲ್ಲಿ ಆಕೆಯ ಮೊದಲನೇ ಪತಿ ಹಿಂದಿರುಗಿ ಬಂದನೆಂದಿಟ್ಟುಕೊಳ್ಳಿ, ಆಗ ಹೊಡೆದರೇನು, ಬಡಿದರೇನು ನನ್ನ ಮೊದಲನೇ ಗಂಡನೇ ಮೇಲು ಎಂದು ಆಕೆ ಭಾವಿಸಿ ಅವನ ಹತ್ತಿರ ಹೋಗಲು ಆಕೆ ಸಿದ್ಧಳಾದರೆ ಮೊದಲನೇ ಪತಿಯಾದವನು ಅಂತಹ ಸ್ತ್ರೀಯನ್ನು ಸ್ವೀಕರಿಸಬಹುದೇ?
ನಾವು ಪರಮ ಧೂರ್ತ, ಮಹಾನ್ ಕ್ರೂರಿ, ಸ್ತ್ರೀ ದ್ವೇಷಿ ಎಂದು ಊಹಿಸಿಕೊಳ್ಳುತ್ತಿರುವ ಮನು ಈ ಪ್ರಶ್ನೆಗೆ "ಯಾವುದೇ ಕಾರಣಕ್ಕೂ ಅದು ನೆರವೇರದು. ಅಂತಹ ಹೆಂಗಸನ್ನು ನಾಯಿಗಳಿಂದ ಕಚ್ಚಿಸಿ, ಮೂಗು, ಕಿವಿಗಳನ್ನು ಕೊಯ್ಯಿಸಿ, ಕಲ್ಲುಗಳಿಂದ ಹೊಡೆದು, ಬದುಕಿರುವಾಗಲೇ ಸುಡಬೇಕು" ಎಂದು ಉತ್ತರಿಸಬೇಕಾಗಿತ್ತಲ್ಲವೇ? ನೀವು ನಂಬುತ್ತೀರೋ ಇಲ್ಲವೋ ತಿಳಿಯದು! "ಆಕೆಯನ್ನು ಪುನಃ ಸಂಸ್ಕಾರಗೊಳಿಸಿ ಆಕೆಯೊಂದಿಗೆ ನಿರಭ್ಯಂತರವಾಗಿ ಸಂಸಾರವನ್ನು ಮಾಡಬಹುದು" ಎಂದು ಮನು ಹೇಳಿದ್ದಾನೆ.
ಮೇಲೆ ಹೇಳಿರುವ ಮನುವಿನ ಧರ್ಮಸೂಕ್ತವನ್ನು ನಂಬಲಶಕ್ಯವೆನಿಸಿದರೆ ಈ ಕೆಳಗಿನ ಶ್ಲೋಕಗಳನ್ನು ನೋಡಿ -
ಯಾ ಪತ್ಯಾ ವಾ ಪರಿತ್ಯಕ್ತಾ ವಿಧವಾ ವಾ ಸ್ವಯೇಚ್ಛಯಾ l
ಉತ್ಪಾದಯೇತ್ ಪುನರ್ಭೂತ್ವಾ ಸ ಪೌನರ್ಭವ ಉಚ್ಯತೇ ll (ಮನುಸ್ಮೃತಿ ೯ - ೧೭೫)
ಭಾವಾರ್ಥ - ಭರ್ತನಿಂದ ತ್ಯಜಿಸಲ್ಪಟ್ಟಾಗಲಾಗಲಿ, ಆತನು ಮರಣಿಸಿದ ನಂತರವಾಗಲಿ ಬೇರೊಬ್ಬನನ್ನು ವಿವಾಹ ಮಾಡಿಕೊಂಡ ಸ್ತ್ರೀಗೆ ಪುತ್ರನು ಜನಿಸಿದರೆ ಅವನು ’ಪೌನರ್ಭವ’ ಎಂದು ಕರೆಯಲ್ಪಡುತ್ತಾನೆ.
ಸಾ ಚೇದಕ್ಷತ ಯೋನಿಸ್ಸ್ಯಾದ್ಗತ ಪ್ರತ್ಯಾಗತಾಪಿವಾ l
ಪೌನರ್ಭವೇನ ಭರ್ತಾ ಸಾ ಪುನಸ್ಸಂಸ್ಕಾರಮರ್ಹತಿ ll (ಮನುಸ್ಮೃತಿ ೯ - ೧೭೬)
ಭಾವಾರ್ಥ - ಮೊದಲನೇ ವಿವಾಹದ ನಂತರ ಭರ್ತನಿಂದ ಸುಖಹೊಂದಲಾರದೆಯೋ, ಚಿಕ್ಕ ವಯಸ್ಸಿನಲ್ಲಿಯೇ ವಿವಾಹ ಮಾಡಿಕೊಂಡು ಆತನಿಂದ ದೂರವಾಗಿ ಎರಡನೆಯವನಿಗೆ ಹೆಂಡತಿಯಾಗಿ, ರೋಗಾದಿ ಕಾರಣಗಳಿಂದ ಪತಿಯಿಂದ ಸುಖಪಡೆಯದ ಪರಿಸ್ಥಿತಿಯಿದ್ದಲ್ಲಿ ಆಕೆ ಪುನಃ ಮೊದಲನೇ ಗಂಡನ ಬಳಿಗೆ ಬಂದಲ್ಲಿ ಆಕೆಯು ಪುನಃ ವಿವಾಹ ಸಂಸ್ಕಾರಕ್ಕೆ ಯೋಗ್ಯಳು.
ನಾನ್ಯಸ್ಮಿನ್ ವಿಧವಾ ನಾರೀ ನಿಯೋಕ್ತವ್ಯಾ ದ್ವಿಜಾತಿಭಿಃ l
ಅನ್ಯಸ್ಮಿನ್ ಹಿ ನಿಯಿಂಜಾನಾ ಧರ್ಮಂ ಹನ್ಯಸ್ಸನಾತನಂ ll (ಮನುಸ್ಮೃತಿ ೯ - ೬೪)
ಭಾವಾರ್ಥ - ಸಂತಾನವಿಲ್ಲದ ವಿಧವೆಯು ಸಂತಾನವನ್ನು ಪಡೆಯಲೋಸುಗ ಪೂರ್ವದಲ್ಲಿ ಧರ್ಮವು ಹೇಳಿದ ಕಠೋರ ನಿಯಮ, ನಿಬಂಧನೆಗಳಿಗೆ ಒಳಪಟ್ಟು ಭಾವ, ಮೈದುನ ಅಥವಾ ಸಾಪಿಂಡಕರನ್ನು ಹೊರತು ಪಡಿಸಿ ಬೇರೆ ಯಾರನ್ನೂ ಅನುಮತಿಸಬಾರದು.
ಅಷ್ಟೇ ಅಲ್ಲ.....
ಹೆಣ್ಣು ಎಂದ ಮಾತ್ರಕ್ಕೆ ಗಂಡನ ಮನೆಗೆ ಹೋಗಲೇ ಬೇಕೆ? ಎಂತಹವನಾದರೂ ಸರಿ, ಎಷ್ಟು ಅವಲಕ್ಷಣಗಳು ಇದ್ದರೂ ಸರಿ, ಯಾರೋ ಒಬ್ಬರನ್ನು ಮದುವೆಯಾಗಲೇ ಬೇಕೆ? ಪಾಪಿಯನ್ನು, ನಿಕೃಷ್ಠವಾದವನನ್ನು ಕಟ್ಟಿಕೊಂಡು ಜೀವಮಾನವೆಲ್ಲಾ ಬಾಧೆಪಡುವುದಕ್ಕಿಂತ ಮದುವೆಯ ಗೋಜಿಗೆ ಹೋಗದೇ ಇರುವುದು ಒಳಿತಲ್ಲವೇ?
ಹೌದು ಅದು ನೂರಕ್ಕೆ ನೂರು ಸರಿ. ಅದರಲ್ಲಿ ಸಂದೇಹ ಪಡುವಂತಹುದೇನಿದೆ ಎಂದು ಆಧುನಿಕ ವಿಚಾರಧಾರೆಯುಳ್ಳವರು ಭಾವಿಸುತ್ತಾರೆ. ಆದರೆ ಪುರಾಣ ಯುಗದ, ಪುರುಷಹಂಕಾರಿಯಾದ ಮನುವು ಸ್ತ್ರೀಯರಿಗೆ ಇಂತಹ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆಯೇ?
ಕಾಮಮಾಮರಣಾತ್ತಿಷ್ಠೇತ್ ಗೃಹೇ ಕನ್ಯರ್ತುಮತ್ಯಪಿ l
ನ ಚೈವೈನಾಂ ಪ್ರಯಚ್ಚೇತ್ತು ಗುಣಹೀನಾಯ ಕರ್ಹಿಚಿತ್ ll (ಮನುಸ್ಮೃತಿ ೯ - ೮೯)
ಭಾವಾರ್ಥ - ಗುಣಹೀನನಾದ ವರನಿಗೆ (ಮದುವೆ ಮಾಡಿ) ಕೊಡುವುದಕ್ಕಿಂತ ಕುವರಿಯನ್ನು ಜೀವಮಾನವೆಲ್ಲಾ ತವರು ಮನೆಯಲ್ಲಿಯೇ ಉಳಿಸಿಕೊಳ್ಳುವುದು ಒಳಿತು.
ಇವೆಲ್ಲಾ ಮನುಸ್ಮೃತಿಯಲ್ಲಿ ಇದ್ದರೂ ಇರಬಹುದು. ಈ ೨೧ನೇ ಶತಮಾನದಲ್ಲಿಯೂ ಸಹ ಸಂಕುಚಿತವಾಗಿ, ಮೂರ್ಖರಂತೆ ಆಲೋಚಿಸುವ ಅನೇಕರಿಗಿಂತ ಮನುಸ್ಮೃತಿಕಾರ ಇದ್ದುದರಲ್ಲೇ ಉತ್ತಮನಿರಬಹುದು. ಇಂತಹ ಸುಗುಣಗಳು ಅಲ್ಲಲ್ಲಿ ಇದ್ದ ಮಾತ್ರಕ್ಕೆ ಏನು ಬಂತು? ಮನುಸ್ಮೃತಿಯ ತುಂಬಾ ಸ್ರ್ರೀಯರ ಕುರಿತು ಅವಹೇಳನಕಾರಿಯಾದ ಪಕ್ಷಪಾತ ಧೋರಣೆಯಿದೆಯಲ್ಲವೇ? ಎಲ್ಲಿ ನೋಡಿದರೂ ಸ್ತ್ರೀ ಜಾತಿಯ ಮೇಲೆ ದೂಷಣೆ, ತಿರಸ್ಕಾರಗಳೇ ಇವೆಯಲ್ಲವೇ? ಅವನ್ನು ಹೇಗೆ ಉಪೇಕ್ಷಿಸೋಣ? ಸ್ತ್ರೀಯರನ್ನು ನಿಕೃಷ್ಟವಾಗಿ ಕಾಣುವ ಮನುಸ್ಮೃತಿಯನ್ನು ಹೇಗೆ ಸಹಿಸಿಕೊಳ್ಳೋಣ ಎಂದು ಪ್ರಶ್ನಿಸುವವರೂ ಇದ್ದಾರೆ. ಅಂತಹವರಿಗೆ ಮುಂದಿನ ಅಧ್ಯಾಯದಲ್ಲಿ ಉತ್ತರವಿದೆ.
ಈ ಸರಣಿಯ ಹಿಂದಿನ ಲೇಖನ ಭಾಗ - ೫ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಶತ್ರುವೆ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%AE...
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು ಪುಸ್ತಕದ ಐದನೆಯ ಅಧ್ಯಾಯ).
ಚಿತ್ರಗಳ ಕೃಪೆ: ಗೂಗಲ್
ಚಿತ್ರ - ೧: ಫಣಿಯಮ್ಮ
ಚಿತ್ರ -೨: ಕನ್ಯಾಶುಲ್ಕ
Comments
ಉ: ಭಾಗ - ೬ ಮನುವಿನ ಧರ್ಮ: ಮನು ಸ್ತ್ರೀಯರಿಗೆ ಮಿತ್ರನೋ, ಶತ್ರುವೋ?
ಈ ಸರಣಿಯ ಮುಂದಿನ ಲೇಖನ ಭಾಗ - ೭ ಮನುವಿನ ಧರ್ಮ: ಯಾವುದು ಅಶುದ್ಧ? ಯಾವುದು ಪರಿಶುದ್ಧ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AD-%E0%B2%AE...