ಭಾಗ - ೯: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಭಾಗ - ೯: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಮೂಡಣ ಯೂರೋಪಿನಲ್ಲಿ ಮೂಡಿದ ಮೊದಲ ಪ್ರಜಾತಂತ್ರ
       ೧೯೮೦ರಲ್ಲಿ ಪೋಲೆಂಡಿನ ಕಾರ್ಮಿಕ ಸಂಘಗಳು ಪ್ರಜಾತಂತ್ರಕ್ಕಾಗಿ ಹೋರಾಟವನ್ನು ಆರಂಭಿಸಿದವು. ೧೯೮೯ರಲ್ಲಿ ಪೋಲೆಂಡಿನ ಕಾರ್ಮಿಕ ಸಂಘಗಳು ಸಾಲಿಡಾರಿಟಿ ಪಕ್ಷದ ಪ್ರಭುತ್ವವನ್ನು ರಚಿಸಿದವು. ಇದು ಪೂರ್ವ ಯೂರೋಪಿನಲ್ಲಿ ರಚನೆಯಾದ ಮೊಟ್ಟಮೊದಲ ಕಮ್ಯೂನಿಷ್ಟೇತರ ಸರ್ಕಾರ. ಪೂರ್ವ ಯೂರೋಪಿನಲ್ಲಿ ಪ್ರಪ್ರಥಮವಾಗಿ ಕಮ್ಯೂನಿಸಂನ ತೆಕ್ಕೆಗೆ ಸಿಲುಕಿದ್ದ ದೇಶ ಪೋಲೆಂಡ್. ’ಕಮ್ಯೂನಿಸಂ’ ಅನ್ನು ನಿರ್ಮೂಲಿಸಲು ಮುಂದಾದ ಮೊದಲ ದೇಶವೂ ಸಹ ಪೋಲೆಂಡ್, ಇದು ಇತರ ಐರೋಪ್ಯ ರಾಷ್ಟ್ರಗಳಿಗಿಂತ ’ಕಮ್ಯೂನಿಸಂ’ ಅನ್ನು ತೊಲಗಿಸುವಲ್ಲಿ ಮುಂಚೂಣಿಯಲ್ಲಿದೆ. ಪೋಲೆಂಡ್ ಪೂರ್ಣಸ್ಥಾಯಿಯಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಇನ್ನೂ ಏರ್ಪಡಿಸಿಕೊಂಡಿಲ್ಲ, ಆದರೆ, ಹಂಗೇರಿ ಪೂರ್ಣ ಸ್ಥಾಯಿಯಲ್ಲಿ ಪ್ರಜಾಪ್ರಭುತ್ವವನ್ನು ರೂಪಿಸಿಕೊಳ್ಳಲಿರುವ ಮೊದಲ ದೇಶವಾಗಲಿದೆ! 
         ೧೯೯೦ ಮಾರ್ಚ್‌೨೫ನೇ ತಾರೀಖಿನಂದು ಹಂಗೇರಿಯಲ್ಲಿ, ಅನೇಕ ಪಕ್ಷಗಳನ್ನೊಳಗೊಂಡ ಪ್ರಜಾತಂತ್ರ ವ್ಯವಸ್ಥೆಯನ್ನು ಆಧರಿಸಿ ಚುನಾವಣೆಗಳು ನಡೆಯಲಿವೆ. ೧೯೯೦ ಮಾರ್ಚ್ ೧೬ನೇ ತಾರೀಖಿನಂದು ಈಗ ಅಧಿಕಾರದಲ್ಲಿರುವ ಶಾಸನಸಭೆ (ಪಾರ್ಲಿಮೆಂಟ್) ರದ್ಧಾಗಲಿದೆ. ಕಮ್ಯೂನಿಸಂ ಪತನವಾದ ನಂತರ ಹಂಗಾಮಿ ಅಧ್ಯಕ್ಷರಾಗಿ ವ್ಯವಹರಿಸುತ್ತಿರುವ ಮಟ್ಯಾನ್ ಜೂರೋನ್ ಹಂಗೇರಿಯ ರಾಜಧಾನಿ ಬುಡಾಪೆಸ್ಟಿನಲ್ಲಿ ೧೯೮೯ರ ಡಿಸೆಂಬರ್ ೨೩ನೇ ತಾರೀಖಿನಂದು ಈ ವಿಷಯವನ್ನು ಪ್ರಕಟಿಸಿದ್ದಾರೆ. ಹಂಗೇರಿ ಕಮ್ಯೂನಿಷ್ಟ್ ಪಾರ್ಟಿಯ ಹೆಸರನ್ನು ಈಗ ’ಸೋಷಲಿಸ್ಟ್ ಪಾರ್ಟಿ’ ಎಂದು ಬದಲಾಯಿಸಲಾಗಿದೆ. 
          ಆಡಳಿತದ ಗುತ್ತಿಗೆ ಹಿಡಿದಿದ್ದ ಯುಗಸ್ಲೋವಿಯಾದ ಕಮ್ಯೂನಿಷ್ಟ್ ಪಕ್ಷವೂ ಸಹ ಸರ್ಕಾರದ ಮೇಲೆ ತನಗಿದ್ದ ಹಿಡಿತವನ್ನು ಸಡಲಿಸಲು ಡಿಸೆಂಬರ್ ತಿಂಗಳಿನಲ್ಲಿ ಅಂಗೀಕರಿಸಿದೆ. ೧೯೯೦ರಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಕಮ್ಯೂನಿಷ್ಟೇತರ ಪಕ್ಷಗಳೂ ಸಹ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಕಟಿಸಿವೆ. ಉಳಿದ ಪೂರ್ವ ಯೂರೋಪಿನ ದೇಶಗಳಲ್ಲಿಯೂ ಸಹ ೧೯೯೦ರಲ್ಲಿ ಮುಕ್ತವಾಗಿ ಚುನಾವಣೆಗಳು ನಡೆಯಲಿವೆ. ನಾಲ್ಕು ದಶಕಗಳ ಕಮ್ಯೂನಿಷ್ಟರ ನಿರಂಕುಶ ಆಡಳಿತವನ್ನು ಭರಿಸಿದ ಪ್ರಜೆಗಳು ಕಟ್ಟಕಡೆಗೆ ಕಮ್ಯೂನಿಸಮ್ಮಿಗೆ ಸಮಾಧಿಯನ್ನು ಕಟ್ಟಿದರು. ಪೂರ್ವ ಯೂರೋಪಿನ ಇತರ ದೇಶಗಳ ಕಮ್ಯೂನಿಷ್ಟ್ ಪಾರ್ಟಿಗಳೂ ಸಹ ತಮ್ಮ ಪಕ್ಷಗಳ ಹೆಸರುಗಳನ್ನು ಬದಲಾಯಿಸಿಕೊಂಡಿದ್ದಾರೆ. ಹಂಗೇರಿ ಈಗಾಗಲೇ ಈ ಕೆಲಸವನ್ನು ಮಾಡಿದೆ. ಸೋಷಲಿಸಂನ ನಂತರ ಕಮ್ಯೂನಿಸಂ (ಸಮಾಜವಾದದ ನಂತರ ಸಮತಾವಾದ) ಸಿದ್ಧಿಸುತ್ತದೆ ಎಂದು ಕಮ್ಯೂನಿಷ್ಟರು ಹೇಳುತ್ತಿದ್ದರು, ಆದರೆ ಪೂರ್ವ ಯೂರೋಪಿನ ಕಮ್ಯೂನಿಷ್ಟ್ ಪಕ್ಷಗಳು ಸೋಷಲಿಸ್ಟ್ ಪಾರ್ಟಿಗಳಾಗಿ ಬದಲಾಗಿವೆ, ಬದಲಾಗುತ್ತಿವೆ. ಚಾರಿತ್ರಿಕ ಪರಿಣಾಮ ವಿಶ್ಲೇಷಣ ಸಿದ್ಧಾಂತ ಕರ್ತರು (History Analysts) ಏನು ಹೇಳುತ್ತಾರೋ ಪಾಪ! 
ನಲವತ್ತು ವರ್ಷದ ಕಮ್ಯೂನಿಷ್ಟ್ ಆಡಳಿತದ ಪರಿಣಾಮವಾಗಿ ಹಂಗೇರಿಯಲ್ಲಿ ೧೯೮೯ರ ಆರಂಭದಲ್ಲಿ ಒಂದು ಜೊತೆ ಪಾದರಕ್ಷೆಗಳ ಧರ ಸಾವಿರ ರೂಪಾಯಿಗಳು! ಹೌದು ಅಕ್ಷರಶಃ ಒಂದು ಸಾವಿರ ರೂಪಾಯಿಗಳು ಮಾತ್ರ ಆಗಿವೆ. ಒಂದು ಸೋಫಾದ ಬೆಲೆ ೧೨,೦೦೦ ರೂಪಾಯಿಗಳು. ಸರಾಸರಿ ಪ್ರತಿ ಹಂಗೇರಿ ಪ್ರಜೆಯ ತಲೆಯ ಮೇಲಿರುವ ಸಾಲದ ಪ್ರಮಾಣವು ಯೂರೋಪಿನಲ್ಲಿಯೇ ಪ್ರಪ್ರಥಮ ಸ್ಥಾನದಲ್ಲಿದೆ. ಅಲ್ಲಿನ ಕಾರ್ಮಿಕರ ಸರಾಸರಿ ತಿಂಗಳ ಸಂಬಳವು ಕೇವಲ ರೂ. ೨, ೧೦೦ ಮಾತ್ರ, ಇದರರ್ಥ ಅವರು ಒಂದು ಜೊತೆ ಚಪ್ಪಲಿಗಳನ್ನು ಕೊಳ್ಳಲು ತಮ್ಮ ಅರ್ಧದಷ್ಟು ಸಂಬಳವನ್ನು ಖರ್ಚು ಮಾಡಬೇಕು. ಕಮ್ಯೂನಿಷ್ಟ್ ಆರ್ಥಿಕ ವಿಧಾನಗಳಿಗೆ ಎಳ್ಳುನೀರು ಬಿಡಬೇಕೆಂದು ಕಳೆದ ಎರಡು ವರ್ಷಗಳಿಂದ ಹಂಗೇರಿ ಕಮ್ಯೂನಿಷ್ಟ್ ಪಕ್ಷವು ಭಾವಿಸುತ್ತಲೇ ಬಂದಿತ್ತು. ಕಮ್ಯೂನಿಷ್ಟೇತರ ಪಕ್ಷಗಳನ್ನು ರಚಿಸಿಕೊಳ್ಳಲು ಸಾಧ್ಯವಾಗುವ ಅಧಿನಿಯಮವನ್ನೂ ಸಹ ೧೯೮೯ರಲ್ಲಿ ಹಂಗೇರಿ ಪ್ರಭುತ್ವವು ಒಪ್ಪಿಕೊಂಡಿತು. ೧೯೮೯ ಡಿಸೆಂಬರ್ ತಿಂಗಳೊಳಗೆ ಹಂಗೇರಿ, ರುಮೇನಿಯಾ, ಪೋಲೆಂಡ್, ಪೂರ್ವ ಜರ್ಮನಿ, ಬಲ್ಗೇರಿಯಾ, ಝಕಸ್ಲೋವಕಿಯಾ ದೇಶಗಳಲ್ಲಿ ಕಮ್ಯೂನಿಸಂ ಅಂತರ್ಧಾನವಾಗಿದೆ. ಯುಗೋಸ್ಲೋವಿಯಾದಲ್ಲಿ ಕಮ್ಯೂನಿಸಂನ ಅಂತ್ಯಕ್ರಿಯೆಗೆ ವೇದಿಕೆ ಸಿದ್ಧವಾಗುತ್ತಿದೆ. ವಾರ್ಸಾ ಕೂಟದ (ಸೋವಿಯತ್ ರಷ್ಯಾ, ಹಾಗು ಪೂರ್ವ ಯೂರೋಪಿನ ಏಳು ದೇಶಗಳ ಸೈನಿಕ ಕೂಟ - WARSAW PACT) ಭವಿಷ್ಯವು ಏನಾಗುತ್ತದೋ ಎಂದು ರಾಜಕೀಯ ವಿಶ್ಲೇಷಕರು ಎದುರು ನೋಡುತ್ತಿದ್ದಾರೆ! (೧೯೯೦ರಲ್ಲಿ ಇದರಿಂದ ಪೂರ್ವ ಜರ್ಮನಿಯು ಹೊರಬಂದಿತು ಮತ್ತು ಕ್ರಮೇಣ ಹಂಗೇರಿಯನ್ನೊಳಗೊಂಡಂತೆ ಒಂದೊಂದಾಗಿ ಇತರ ದೇಶಗಳೂ ಈ ಒಕ್ಕೂಟದಿಂದ ಹೊರಬಂದವು ಮತ್ತು ಅಂತಿಮವಾಗಿ ಸೋವಿಯತ್ ರಷ್ಯಾವು ಡಿಸೆಂಬರ್ ೧೯೯೧ರಲ್ಲಿ ಇದನ್ನು ಅಂತ್ಯಗೊಳಿಸಿತು). 
ಅಕ್ಟೋಬರ್ ಕ್ರಾಂತಿ ಇದೇ!
         ೧೯೮೯ರ ಅಕ್ಟೋಬರ್‌ನಲ್ಲಿ ಹಂಗೇರಿ ಕಮ್ಯೂನಿಷ್ಟ್ ಪಾರ್ಟಿಯನ್ನು ತೊಲಗಿಸಿ ಆ ಜಾಗದಲ್ಲಿ ಹಂಗೇರಿ ಸೋಷಲಿಷ್ಟ್ ಪಾರ್ಟಿಯನ್ನು ಸ್ಥಾಪಿಸಲಾಯಿತು. ರೆನ್‌ ಜೋನೆಯರ್ಸ್‌ ನೂತನ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾದರು. ಇದೇ ಅಕ್ಟೋಬರ್ ಕ್ರಾಂತಿ! ಕಮ್ಯೂನಿಷ್ಟ್‌ ಸಿದ್ಧಾಂತಕ್ಕೆ ಹಂಗೇರಿಯಲ್ಲಿ ಸಮಾಧಿ ಕಟ್ಟಿದ ರಾಷ್ಟ್ರೀಯ ಕ್ರಾಂತಿಯಿದು. 
      ಹಂಗೇರಿಯಲ್ಲಿ ಪ್ರಜಾತಂತ್ರವು ರೂಪುಗೊಳ್ಳುವುದು ಆರಂಭವಾಗಿರುವುದರಿಂದ ದ್ರವ್ಯೋಲ್ಬಣವುನ್ನು ನಿಯಂತ್ರಣಕ್ಕೆ ತರಲು ಆರ್ಥಿಕ ರಂಗದಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಯೋಜನೆಗಳು ಆರಂಭವಾಗಿವೆ. ಪೋಲೆಂಡ್ ಮತ್ತು ಹಂಗೇರಿ ದೇಶಗಳಿಗೆ ೧೦೨೯ ಕೋಟಿ ರೂಪಾಯಿಗಳ ತುರ್ತು ಸಹಾಯವನ್ನು ಮಾಡುವುದಾಗಿ ೨೪ ಧನಿಕ ದೇಶಗಳು ಮುಂದೆ ಬಂದಿವೆ. 
         ’ಕಮ್ಯೂನಿಸಂ’ ಅನ್ನು ಬದಿಗಿರಿಸಿದ ಪೂರ್ವ ಯೂರೋಪಿನ ರಾಷ್ಟ್ರಗಳು ಬಂಡವಾಳಶಾಹಿ ದೇಶಗಳಾಗಿ ಬದಲಾಗುತ್ತವೆ ಎಂದು ಭಾವಿಸಬೇಕಾಗಿಲ್ಲ. ಅಲ್ಲಿನ ಪ್ರಜೆಗಳು ಬಯಸುತ್ತಿರುವುದು ಪ್ರಜಾಪ್ರಭುತ್ವವನ್ನಷ್ಟೆ, ಬಂಡವಾಳಶಾಹಿ ವ್ಯವಸ್ಥೆಯನ್ನಲ್ಲ. 
         ೧೯೯೦ನೇ ಇಸವಿಯ ೭ನೇ ತಾರೀಖಿನಂದು ಪೋಲೆಂಡಿನ ಕಮ್ಯೂನಿಷ್ಟ್‌ ಪಕ್ಷದ ’ಸೆಂಟ್ರಲ್ ಕಮಿಟಿ’ಯ ಅಂತಿಮ ಸಮಾವೇಶವು ನಡೆಯಿತು. ಕಮ್ಯೂನಿಷ್ಟ್ ಪಾರ್ಟಿಯನ್ನು ರದ್ದು ಮಾಡಬೇಕೆಂಬುದಾಗಿಯೂ ಮತ್ತು ಜನವರಿ ೨೭ನೇ ತಾರೀಖಿನಿಂದ ಹೊಸ ಪಕ್ಷವನ್ನು ರಚಿಸಬೇಕೆಂದು ಈ ಸಮಾವೇಶದಲ್ಲಿ ತೀರ್ಮಾನಿಸಲಾಯಿತು. ಇಷ್ಟು ವರ್ಷಗಳ ಕಾಲ ಪೋಲೆಂಡ್ ಕಮ್ಯೂನಿಷ್ಟ್ ಪಾರ್ಟಿಯನ್ನು ಪೋಲಿಷ್ ಯುನೈಟೆಡ್ ವರ್ಕರ್ಸ್ ಕಾಂಗ್ರೆಸ್ - ಪಿ.ಯು.ಡಬ್ಲ್ಯ.ಸಿ. (PUWC) ಎಂದು ಕರೆಯಲಾಗುತ್ತಿತ್ತು. ಅದನ್ನು ರದ್ದು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಮೋದಿಸುವ ಸೋಷಲಿಷ್ಟ್ ಪಾರ್ಟಿಯನ್ನು ರಚಿಸಬೇಕೆಂದು ಕಮ್ಯೂನಿಷ್ಟ್ ಪ್ರಭೃತಿಗಳು ತೀರ್ಮಾನ ಕೈಗೊಂಡಿದ್ದಾರೆ. ’ಸಾಲಿಡಾರಿಟಿ’ ಕಾರ್ಮಿಕ ಸಂಘವನ್ನು ಮಟ್ಟಹಾಕಲು ಸುಮಾರು ಹತ್ತು ವರ್ಷಗಳ ಕಾಲ ಪ್ರಯತ್ನಿಸಿದ ಕಮ್ಯೂನಿಷ್ಟ್ ಪಕ್ಷವು ಕಡೆಗೆ ತಾನೇ ನಾಮಾವಶೇಷವಾಯಿತು. ಇದು ಕಾರ್ಮಿಕರ ಹೋರಾಟಕ್ಕೆ ಸಂದ ಘನ ವಿಜಯ. 
          ಪ್ರಜಾಪ್ರಭುತ್ವ ವ್ಯವಸ್ಥೆ ಏರ್ಪಡಬೇಕೆಂದು ಬಯಸುತ್ತಾ ಲೇವ್‌ಲೇಸಾ ಅವರ ನಾಯಕತ್ವದಲ್ಲಿ ’ಸಾಲಿಡಾರಿಟಿ’ ೧೯೮೦ರಲ್ಲಿ ಪೋಲೆಂಡಿನಲ್ಲಿ ಚಳವಳಿಯನ್ನಾರಂಭಿಸಿತು. ಸಾಲಿಡಾರಿಟಿ ಸಂಸ್ಥೆಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಕಾರ್ಮಿಕರು ಅದರ ಸದಸ್ಯರಾಗಿದ್ದರು. 
ಪೋಲಿಷ್ ಕಾರ್ಮಿಕ ವೀರರೇ
ಸಂಕೋಲೆಗಳನು ತುಂಡರಿಸಿ
ನಿರಂಕುಶಾಡಳಿತದ ಕಾರ್ಗತ್ತಲೊಳು
ಮುಕ್ತ ಜ್ಯೋತಿಗಳು ನೀವಾಗಿರಿ!
ಪ್ರಪಂಚ ಕಮ್ಯೂನಿಷ್ಟ್ ದೇಶಗಳ
ಪ್ರಜೆಗಳಿಗೆ ದಾರಿದೀಪವಾಗಿರಿ
ಪ್ರಪಂಚದೆಲ್ಲೆಡೆ ಪ್ರಜಾಪ್ರಭುತ್ವದ
ಕುಸುಮ ಸೌರಭವ ಹರಡಿರಿ! 
        ಹೀಗೆಂದು ಹಾಡುತ್ತಾ ಪ್ರಜಾಪ್ರಭುತ್ವವಾದಿಗಳು ಕಾರ್ಮಿಕರಿಗೆ ನೈತಿಕ ಬೆಂಬಲವನ್ನು ಸೂಚಿಸಿದ್ದಾರೆ. ೧೯೮೨ರಲ್ಲಿ ಪೋಲೆಂಡಿನ ಕಮ್ಯೂನಿಷ್ಟ್ ಸರ್ವಾಧಿಕಾರಿ ಜನರಲ್ ಯಾರುಜೆಲ್‌ಸ್ಕಿ ಸಾಲಿಡಾರಿಟಿ ಸಂಘವನ್ನು ನಿಷೇಧಿಸಿದ. ’ವಾರ್ಸಾ ಕೂಟ’ದ ಸದಸ್ಯ ದೇಶವಾದ ಪೋಲೆಂಡಿನಲ್ಲಿ ಪ್ರಜಾತಂತ್ರದ ಮೊಳಕೆಯೊಡೆಯುವುದನ್ನು ಸೋವಿಯತ್ ನೇತಾರರು ಜೀರ್ಣಿಸಿಕೊಳ್ಳದಾದರು. ವಾರ್ಸಾ ನಗರವು ಪೋಲೆಂಡಿನ ರಾಜಧಾನಿ. ಅದಕ್ಕಾಗಿ ಪೋಲೆಂಡಿನಲ್ಲಿ ಕಾರ್ಮಿಕರ ಮೇಲಿನ ದಹನಕಾಂಡವು ತೀವ್ರಸ್ಥಾಯಿಗೆ ಮುಟ್ಟಿತ್ತು. 
೧೯೫೬ರಲ್ಲಿ ಕೂಡಾ ಪೋಲೆಂಡಿನಲ್ಲಿ ಕಾರ್ಮಿಕರು ತಿರುಗಿಬಿದ್ದಿದ್ದರು. ೧೯೫೩ರಿಂದ ಕ್ಯಾಥೋಲಿಕ್ ಚರ್ಚುಗಳ ಮೇಲೆ, ಅದರ ಧರ್ಮಗುರುಗಳ ಮೇಲೆ ಕಮ್ಯೂನಿಷ್ಟ್ ಪ್ರಭುತ್ವವು ದಬ್ಬಾಳಿಕೆ ನಡೆಸಿತು. ೧೯೬೧ರಲ್ಲಿ ಶಾಲಾ ಕಾಲೇಜುಗಳಲ್ಲಿ ಕ್ರೈಸ್ತ ಧರ್ಮದ ಕುರಿತ ಬೋಧನೆಗಳನ್ನು ನಿಷೇಧಿಸಲಾಯಿತು. ಆದರೂ ಸಹ ಪೋಲೆಂಡಿನಲ್ಲಿ ಕ್ರೈಸ್ತಮತವು ನಾಶವಾಗಲಿಲ್ಲ. ಪೋಲೆಂಡ್ ದೇಶಸ್ಥನಾದ ಜಾನ್‌ಪಾಲ್ ೧೯೭೮ರಲ್ಲಿ ಕ್ಯಾಥೋಲಿಕ್ ಪೋಪ್ ಆಗಿಯೂ ಚುನಾಯಿತರಾದರು. 
           ೧೯೮೦ರಿಂದ ನಡೆದ ಹೋರಾಟದಲ್ಲಿ ’ಸಾಲಿಡಾರಿಟಿ’ಯು ವಿಜಯವನ್ನು ಸಾಧಿಸಿತು. ’ಸಾಲಿಡಾರಿಟಿ’ಯ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ೧೯೮೯ರ ಜನವರಿಯಲ್ಲಿ ಎತ್ತಿ ಹಾಕಲಾಯಿತು. ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ, ”ಸಾಲಿಡಾರಿಟಿ’ಯು ಪ್ರತಿಪಾದಿಸಿದ ಅರ್ಧಕ್ಕಿಂತಲೂ ಹೆಚ್ಚು ಬೇಡಿಕೆಗಳನ್ನು ಕಮ್ಯೂನಿಷ್ಟ್ ಪಕ್ಷವು ಮಾನ್ಯ ಮಾಡಬೇಕಾಯಿತು. ೧೯೮೯ಕ್ಕೆ ದ್ರವ್ಯೋಲ್ಬಣವು ಶೇಖಡಾ ೧೦೦ಕ್ಕೆ ಏರಿತು. ಪ್ರಪಂಚದಲ್ಲಿ ಮತ್ತೆಲ್ಲಿಯೂ ಇಂತಹ ವಿಷಮ ಪರಿಸ್ಥಿತಿ ಇಲ್ಲ. ಆಗಷ್ಟ್ ತಿಂಗಳಿನಲ್ಲಿ ಜರುಗಿದ ಚುನಾವಣೆಗಳಲ್ಲಿ ಸಾಲಿಡಾರಿಟಿ ಪಕ್ಷವು ಸ್ಪರ್ಧಿಸಿದ ಎಲ್ಲಾ ಸ್ಥಾನಗಳಲ್ಲೂ ವಿಜಯವನ್ನು ಸಾಧಿಸಿದೆ. ಆದರೆ ಕಮ್ಯೂನಿಷ್ಟ್ ಪಕ್ಷಕ್ಕಾಗಿ ಹಲವಾರು ಸ್ಥಾನಗಳನ್ನು ಮೀಸಲಾಗಿರಿಸಲಾಗಿತ್ತು. ಆ ಸ್ಥಾನಗಳಲ್ಲಿ ಕೇವಲ ಕಮ್ಯೂನಿಷ್ಟ್ ಪಕ್ಷವು ಮಾತ್ರವೇ ಸ್ಪರ್ಧಿಸಬಹುದಾಗಿತ್ತು. ಅಲ್ಲಿ ಪ್ರತಿಸ್ಪರ್ಧಿಗಳಿಲ್ಲದಿದ್ದರೂ ಬಹುತೇಕ ಸ್ಥಾನಗಳಲ್ಲಿ ಕಮ್ಯೂನಿಷ್ಟ್ ಪಕ್ಷವು ಪರಾಜಯ ಹೊಂದಿತು. ಇದಕ್ಕೆ ಕಾರಣವೇನೆಂದರೆ ವಿಜಯಿಯೆಂದು ಘೋಷಿಸಲು ಪಡೆಯ ಬೇಕಾಗಿದ್ದ ಕನಿಷ್ಠ ೫೦% ಮತಗಳೂ ಸಹ ಕಮ್ಯೂನಿಷ್ಟ್ ಪಕ್ಷವು ಗಳಿಸಲಿಲ್ಲ. ೪೫ ವರ್ಷಗಳ ನಿರಂಕುಶ ಆಡಳಿತಕ್ಕೆ ಒಳಪಟ್ಟ ಜನರು ಕಟ್ಟಕಡೆಗೆ ಕಮ್ಯೂನಿಷ್ಟ್ ಆಡಳಿತವನ್ನು ತೊಲಗಿಸಿದರು. ಆಗಸ್ಟ್ ೨೪ರಂದು ಸಾಲಿಡಾರಿಟಿ ಪಕ್ಷದ ನಾಯಕ ಟಡೇಯುಜ್ ಮಿಜೋವಿಕಿ ಪೋಲೆಂಡ್ ಪ್ರಧಾನ ಮಂತ್ರಿಯ ಪದವಿಯನ್ನು ಅಲಂಕರಿಸಿದರು. ಕಮ್ಯೂನಿಷ್ಟ್ ವಿಧಾನಗಳಿಂದ ದಿವಾಳಿಯ ಅಂಚಿನಲ್ಲಿರುವ ಪೋಲೆಂಡನ್ನು ಪುನರುದ್ಧಿರಬೇಕಾಗಿರುವುದು ಪ್ರಜಾಪ್ರಭುತ್ವದ ಆಡಳಿತಗಾರರ ಮುಂದಿರುವ ದೊಡ್ಡ ಸವಾಲಾಗಿದೆ. 
ಮುಂದುವರೆಯುವುದು.........
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್‌ ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು  ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ. 
 
ಹಿಂದಿನ ಲೇಖನ ಭಾಗ - ೮: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%95...
 

Rating
No votes yet

Comments

Submitted by makara Tue, 09/11/2018 - 21:33

ಸರಣಿಯ ಮುಂದಿನ ಹಾಗು ಅಂತಿಮ ಭಾಗ - ೧೦: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ! ಓದಲು ಈ ಕೊಂಡಿಯನ್ನು ಚಿವುಟಿಸಿhttps://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...

Submitted by makara Sun, 09/16/2018 - 09:27

ಈ ಲೇಖನ ಮಾಲಿಕೆಯಲ್ಲಿ ಮತ್ತೊಂದು ಬರಹವನ್ನೂ ಸಹ ವಿಶೇಷ ಲೇಖನಗಳಲ್ಲೊಂದಾಗಿ ಆಯ್ಕೆ ಮಾಡಿದ ಸಂಪದ ನಿರ್ವಾಹಕ ಮಂಡಳಿ ಹಾಗು ಶ್ರೀಯುತ ನಾಡಿಗರಿಗೂ ಧನ್ಯವಾದಗಳು. ಎಂದಿನಂತೆ ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದ ಮಿತ್ರರೆಲ್ಲರಿಗೂ ವಂದನೆಗಳು :)