ಭಾಗ - ೮: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

Submitted by makara on Sun, 09/09/2018 - 15:00

        ೧೯೪೭ರಲ್ಲಿ ಕಮ್ಯೂನಿಷ್ಟ್ ದೇಶವಾಗಿ ಮಾರ್ಪಟ್ಟ ನಂತರ ಎಂಟು ವರ್ಷಗಳಿಗೇ ಹಂಗೇರಿ ದೇಶದ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ದಂಗೆ ಎದ್ದರು. ವಿದೇಶಿಯರು ತಮ್ಮ ಮೇಲೆ ಹೇರಿದ ಕಮ್ಯೂನಿಷ್ಟ್ ವ್ಯವಸ್ಥೆಯನ್ನು ಅಲ್ಲಿನ ಸ್ಥಳೀಯ ಜನಾಂಗವು ವಿರೋಧಿಸಿತು. ೧೯೫೬ರ ನವೆಂಬರ್ ೪ರಂದು ಎರಡು ಲಕ್ಷ ಸೋವಿಯತ್ ಸೈನಿಕರು ಮತ್ತು ೨೫೦೦ ಸೋವಿಯತ್ ಯುದ್ಧ ಟ್ಯಾಂಕರುಗಳು ಹಂಗೇರಿಯೊಳಗೆ ನುಗ್ಗಿದವು. ೩೨,೦೦೦ ಜನ ಚಳವಳಿಕಾರರನ್ನು, ರಾಷ್ಟ್ರೀಯ ಕ್ರಾಂತಿಕಾರರನ್ನು ಸೋವಿಯತ್ ಸೈನಿಕರು ಹತ್ಯೆಗೈದರು. ಎರಡು ಲಕ್ಷ ಹಂಗೇರಿ ದೇಶಸ್ಥರು ದೇಶ ಬಿಟ್ಟು ಪಾರಾಗಿ ಹೋದರು. ಇದು ಕೇವಲ ಹಂಗೇರಿಯಲ್ಲಿ ಮಾತ್ರವೇ ಅಲ್ಲ, ಯೂರೋಪಿನಲ್ಲಿರುವ ಕಮ್ಯೂನಿಷ್ಟ್ ದೇಶಗಳ ಪ್ರಜೆಗಳೆಲ್ಲರೂ ಕಳೆದ ೪೦ ವರ್ಷಗಳಿಂದಲೂ ರಾಷ್ಟ್ರೀಯ ಚಳವಳಿಗಳನ್ನು ಮಾಡುತ್ತಲೇ ಇದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ ಅವರೆಲ್ಲರೂ ಹೋರಾಟಗಳನ್ನು ಮಾಡುತ್ತಲೇ ಇದ್ದಾರೆ. ೧೯೮೯ರಲ್ಲಿ ಅವರ ಹೋರಾಟವು ಯಶಸ್ವಿಯಾಯಿತು. ಆದರೆ ಈ ನಲ್ವತ್ತು ವರ್ಷಗಳಲ್ಲಿ ಪ್ರತಿ ದೇಶದೊಳೊಕ್ಕೂ ಸೋವಿಯತ್ ಸೈನಿಕರು ನುಸುಳಿ ಹೋಗಿದ್ದಾರೆ, ಅಲ್ಲೆಲ್ಲಾ ಮಾರಣ ಹೋಮಗಳನ್ನು ಮಾಡಿದ್ದಾರೆ. 
      ೧೯೫೬ರ ಹೋರಾಟವನ್ನು ’ಕಾಂತ್ರಿ ಪ್ರತೀಘಾತ’ ಅಂದರೆ ಕ್ರಾಂತಿಯ ವಿರುದ್ಧದ ಹೋರಾಟವೆಂದು ರಷ್ಯನ್ ಕಮ್ಯೂನಿಷ್ಟರು ಮತ್ತು ಹಂಗೇರಿ ಕಮ್ಯೂನಿಷ್ಟರು ಪ್ರಚಾರ ಮಾಡುತ್ತಲೇ ಬಂದರು. ಆದರೆ ಅದು ಪ್ರಜಾ ಉದ್ಯಮವೆಂದು ಈಗಿನ ಹಂಗೇರಿ ಕಮ್ಯೂನಿಷ್ಟ್ ಪಾರ್ಟಿ ಒಪ್ಪಿಕೊಂಡಿದೆ. ೧೯೫೮ರಲ್ಲಿ ಹಂಗೇರಿಯ ಪ್ರಧಾನಮಂತ್ರಿ ಇಮರ್ ನಾಗೀ ಪ್ರಜಾಪ್ರಭುತ್ವ ಸಂಸ್ಕರಣಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ಆದರೆ ಸೋವಿಯತ್ ರಷ್ಯಾ ಇದನ್ನು ಸಹಿಸಿಕೊಳ್ಳಲಾರದೇ ಹೋಯಿತು. ಸೋವಿಯತ್ ಸೈನಿಕರು ನಾಗೀ ಮತ್ತು ಅವನ ಪ್ರಮುಖ ಅನುಚರರನ್ನು ಹತ್ಯೆ ಮಾಡಿದರು. ನಾಗೀ ಹಾಗೂ ಆತನ ಸಹಚರರ ಮೃತ ದೇಹಗಳನ್ನು ಲಾರಿಗಳಲ್ಲಿ ತುಂಬಿ ಶವಪೆಟ್ಟಿಗೆಗಳಿಲ್ಲದ ಆ ಮೃತ ದೇಹಗಳನ್ನು ಚರಂಡಿಗಳೊಳಗೆ ಎಸೆದರು. ೧೯೫೮ರ ಜೂನ್ ೧೮ನೇ ತಾರೀಖು ಈ ದಾರುಣ ಘಟನೆಯು ಜರುಗಿತು. ೪೧ ಸಂವತ್ಸರಗಳ ನಂತರ ಈ ನಾಯಕರಿಗೆ ಸಗೌರವವಾಗಿ ಅಂತ್ಯಕ್ರಿಯೆಗಳನ್ನು ಜರುಗಿಸಬೇಕೆಂದು ಹಂಗೇರಿ ಕಮ್ಯೂನಿಷ್ಟ್ ಪಾರ್ಟಿ ನಿರ್ಣಯಿಸಿತು. ಈ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಸ್ವಲ್ಪ ದಿನಗಳ ಹಿಂದೆ ಕಮ್ಯೂನಿಸಮ್ಮನ್ನು ಕೈಬಿಡಬೇಕೆಂದು, ಏಕಪಕ್ಷ ಪಾಲನೆಗೆ ತಿಲಾಂಜಲಿ ಇಡಬೇಕೆಂದು ಕಮ್ಯೂನಿಷ್ಟ್ ಪಕ್ಷದ ನಾಯಕರು ನಿರ್ಣಯವನ್ನು ಕೈಗೊಂಡಿದ್ದರು (ಫೆಬ್ರವರಿ, ೧೯೮೯). 
        ೧೯೫೬ರಿಂದ ಕಮ್ಯೂನಿಷ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಇದ್ದ ಮತ್ತು ಸೋವಿಯತ್ ಸಹಕಾರದಿಂದ ಹತ್ಯಾಕಾಂಡವನ್ನು ನಡೆಸಿದ ಜೋನನ್ ಕಾದರ್ ೧೯೮೮ರಲ್ಲಿ ಪದವಿಯಿಂದ ನಿಷ್ಕ್ರಮಿಸಿದನು. ಅವನು ನಿಷ್ಕ್ರಮಿಸುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಕಮ್ಯೂನಿಷ್ಟ್ ಪಕ್ಷದಲ್ಲಿ ಪ್ರಜಾಪ್ರಭುತ್ವದ ಭಾವನೆಗಳು ಟಿಸಿಲೊಡೆಯಲು ಅನುಕೂಲವಾಯಿತು. ’ಕಮ್ಯೂನಿಸಂ’ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಮೊದಲ ದೇಶ ಹಂಗೇರಿ. 
ಸ್ವರಾಜ್ಯದ ಸ್ವಾತಂತ್ರ ಸುಧೆಯ
ಭಾವಾಮೃತದ ಮಳೆಯಾಯಿತು
ಪ್ರಜಾಪ್ರಭುತ್ವದ ಹೊಳೆನೀರು
ಪ್ರಜೆಗಳ ತೃಷೆಯನು ಹಿಂಗಿಸಿತು!
ದಹನಕಾಂಡವ ನಡೆಸಿದ
ದಾವಾನಲಗಳು ಆರಿದವು
ಬೊಗಳೆಯ ಕ್ರಾಂತಿಕಾರಿಗಳು
ಚಲ್ಲಾಚದುರಾಗಿ ಓಡಿದರು! 
ಮನೆ-ಹಳ್ಳಿ-ಛತ್ರ:
ರಾಷ್ಟ್ರೀಯವಾದವು ಮನೆಯಂತೆ. ಮಾತೃಭೂಮಿ ತಾಯಿಯಂತೆ. ಅಂತರ್ರಾಷ್ಟ್ರೀಯ ತತ್ತ್ವವು ಹಳ್ಳಿಯಂತೆ. ಪ್ರತಿ ಮನೆಯೂ ಚೆನ್ನಾಗಿರಬೇಕು ಮತ್ತು ಪ್ರತಿ ಹಳ್ಳಿಯೂ ಪ್ರಗತಿ ಸಾಧಿಸಬೇಕು. ಆದರೆ ಕಮ್ಯೂನಿಷ್ಟರು ಪ್ರಚಾರ ಮಾಡಿದ ಅಂತರ್ರಾಷ್ಟ್ರೀಯವಾದ ಎನ್ನುವಂತಹುದು ಛತ್ರದಂತೆ. ಅಲ್ಲಿ, ಒಬ್ಬರು ಮತ್ತೊಬ್ಬರಿಗೆ ಏನೂ ಅಲ್ಲ. ಮನೆಯನ್ನೂ, ಹಳ್ಳಿಯನ್ನೂ ಕೆಡವಿ ಛತ್ರವನ್ನು ಕಟ್ಟಲು ಕಮ್ಯೂನಿಷ್ಟರು ಪ್ರಯತ್ನಿಸಿದರು. ಕಮ್ಯೂನಿಷ್ಟ್ ದೇಶಗಳು ಛತ್ರಗಳಾಗಿ ಮಾರ್ಪಟ್ಟವು. "ಮನೆ ಇರುವುದು ಸ್ವಾರ್ಥಪರತೆ-ಹಳ್ಳಿಯಿರುವುದೂ ಸ್ವಾರ್ಥಪರತೆ" ಎನ್ನುವ ಪ್ರಚಾರವನ್ನವರು ಮಾಡಿದರು. ಛತ್ರಗಳ ಯಜಮಾನರು ಹೇಳಿದಂತೆ ಅವರಿಗೆ ಗುಲಾಮರಾಗಿ ಜೀತದಾಳುಗಳಂತೆ ಬದುಕಿದರು ಕಮ್ಯೂನಿಷ್ಟ್ ದೇಶಗಳ ಪ್ರಜೆಗಳು. 
ಛತ್ರಗಳು ಬಂದೀಖಾನೆಗಳಾದವು. ಪ್ರಜೆಗಳಿಗೆ ಸ್ವಾತಂತ್ರ್ಯವಿಲ್ಲದಾಯಿತು. ನಾವು ಉಂಡಿಲ್ಲ, ನಾವು ಹಸಿವೆಯಿಂದ ಬಳಲುತ್ತಿದ್ದೇವೆ ಎಂದು ಬಾಯ್ಬಿಟ್ಟು ಹೇಳುವ ಸ್ವಾತಂತ್ರ್ಯವನ್ನೂ ಅಲ್ಲಿನ ಪ್ರಜೆಗಳು ಕಳೆದುಕೊಂಡರು. ಛತ್ರದ ಒಡೆಯರು ದೋಚುತ್ತಿದ್ದರೂ ಪ್ರತಿಭಟಿಸುವ ಹಕ್ಕೂ ಸಹ ಅವರಿಗೆ ಇಲ್ಲವಾಯಿತು. ಅದಕ್ಕೇ ಈ ಛತ್ರಗಳಲ್ಲಿದ್ದ (ಕಮ್ಯೂನಿಷ್ಟ್ ದೇಶಗಳಲ್ಲಿದ್ದ) ಜನ ಈ ಛತ್ರಗಳು ಬೇಡವೆಂದರು. ಕಮ್ಯೂನಿಸಂ ಬೇಡವೆಂದರು, ಮನೆ, ಹಳ್ಳಿಗಳು ಬೇಕೆಂದರು, ಪ್ರಜಾಪ್ರಭುತ್ವ ಬೇಕೆನ್ನುತ್ತಿದ್ದಾರೆ. ಹಳ್ಳಿಗಳನ್ನು ನಿರ್ಮಿಸಿಕೊಂಡು ಸ್ವತಂತ್ರವಾಗಿ ಸ್ವದೇಶಿ ಚಿಂತನೆಯುಳ್ಳವರಾಗಿ, ಪ್ರಜಾಪ್ರಭುತ್ವವಾದಿಗಳಾಗಿ ಅಂತರ್ರಾಷ್ಟ್ರೀಯ ತತ್ತ್ವಕ್ಕೆ ಅಂಕುರಾರ್ಪಣ ಮಾಡೋಣವೆನ್ನುತ್ತಿದ್ದಾರೆ. 
 
ಕುಸಿದ ಗೋಡೆ:
ದೇಶ ವಿಭಜಿಸಿದಡ್ಡಗೋಡೆಯು
ಕುಸಿದು ಬಿದ್ದು ಹೋಯಿತು
ಸ್ವಾತಂತ್ರ್ಯದ ಹರಣವ ಮಾಡಿದ
ಕಬ್ಬಿಣದ ಬೇಡಿಯು ತುಂಡಾಯಿತು!
ಜನರ ಬಂಧಿಸಿದ ಜೈಲಿನ ಮಾಳಿಗೆಯ
ತಾರಸಿಯು ಎಗರಿ ಹೋಯಿತು
ಪ್ರಜಾಪ್ರಭುತ್ವದ ಕಿರಣಗಳು ಸೋಕಿ
ಕತ್ತಲೆಯು ತೊಲಗಿ ಹೋಯಿತು. 
        ಮುಂದೆ ಭವಿಷ್ಯದಲ್ಲಿ ನಿಮಗೆ ಸಮಾನತ್ವವನ್ನು ತಂದು ಕೊಡುತ್ತೇವೆ. ಅದಕ್ಕೂ ಮೊದಲು ನೀವು ನಿಮ್ಮ ಸ್ವಾತಂತ್ರ್ಯವನ್ನು ನಮ್ಮ ಬಳಿ ಅಡವಿಡಿ ಎಂದು ಹೇಳುತ್ತಿದ್ದಾರೆ ಕಮ್ಯೂನಿಷ್ಟ್ ಪ್ರಭೃತಿಗಳು. ಆದರೆ ಈ ವಿಧಾನವು ಬಹಳ ಭಯಂಕರವಾದುದು ಎಂದು ಕಾರ್ಲ್‌ಪಾಪರ್ ಅಭಿಪ್ರಾಯ ಪಡುತ್ತಾರೆ. ನನಗೆ ಹದಿನೇಳು ವರ್ಷ ತುಂಬುವಷ್ಟರಲ್ಲಿ ನಾನು ಮಾರ್ಕ್ಸ್‌ವಾದದ ವಿರೋಧಿಯಾದೆ. ಮಾರ್ಕ್ಸ್‌ತತ್ತ್ವದಲ್ಲಿರುವ ಮೌಢ್ಯವನ್ನು, ಕಾಲಕ್ಕನುಗುಣವಲ್ಲದ ಸೈದ್ಧಾಂತಿಕ ಅಹಂಕಾರವನ್ನು ನಾನು ಕಂಡುಕೊಂಡೆ. ವಿಶ್ಲೇಷಣೆ ಮಾಡದೆಯೇ ಅನುಮೋದಿಸಿದ ಪದ್ಧತಿಗಾಗಿ ಇತರರ ಪ್ರಾಣಗಳನ್ನು ಪಣಕ್ಕೆ ಒಡ್ಡುವುದು ತನ್ನ ಕರ್ತವ್ಯ ಮತ್ತದು ವೈಜ್ಞಾನಿಕವೆಂದು ಭಾವಿಸುವ ಒಬ್ಬ ವ್ಯಕ್ತಿ ಇರುವುದು ಅತ್ಯಂತ ಭಯಂಕರವಾದ ವಿಷಯ. 
          ಈ ಪದ್ಧತಿಯಾಗಲಿ ಅಥವಾ ಈ ಕಲ್ಪನೆಯಾಗಲಿ ಕಟ್ಟಕಡೆಗೆ ಅನುಷ್ಠಾನಗೊಳ್ಳುವುದು ಸಾಧ್ಯವಾಗದೇ ಹೋಗಬಹುದು. ಸ್ವಾತಂತ್ರ್ಯವನ್ನು ಕಳೆದುಕೊಂಡ ನಂತರ ಗುಲಾಮರ ಮಧ್ಯೆ ಸಮಾನತೆಯು ಇರುವುದಿಲ್ಲವೆಂದು ಗ್ರಹಿಸಲು ನನಗೆ ಸ್ವಲ್ಪ ಕಾಲ ಹಿಡಿಯಿತು ಎಂದು ಹೇಳುತ್ತಾರೆ ಕಾರ್ಲ್ ಪಾಪರ್ (ವಾಕಾಟಿ ಪಾಂಡುರಂಗರಾವ್ ಅವರು ಬರೆದ ಅವರ್ ಟುಮಾರೋ ಪುಟ ೧೪೯). ಸ್ವಾತಂತ್ರ್ಯವನ್ನು ಕಳೆದುಕೊಂಡ ನಂತರ ವ್ಯಕ್ತಿಗಳು ಗುಲಾಮರಾಗುತ್ತಾರೆ. ಬಂಡವಾಳಶಾಹಿ ದೇಶಗಳಲ್ಲಿ ಮತ್ತು ಪ್ರಜಾಪ್ರಭುತ್ವವುಳ್ಳ ದೇಶಗಳಲ್ಲಿಯೂ ಸಹ ಜನರ ಶೋಷಣೆ ನಡೆಯುತ್ತದೆ ಎನ್ನುವುದನ್ನು ಅಲ್ಲಗಳೆಯಲಾಗದು. ಆದರೆ, ತಾವು ಶೋಷಣೆಗೆ ಒಳಗಾಗುತ್ತಿದ್ದೇವೆ ಎಂದು ಹೇಳಿಕೊಳ್ಳುವ ಅವಕಾಶವು ಅಲ್ಲಿನ ಪ್ರಜೆಗಳಿಗಿದೆ. ಶೋಷಣೆ ಹಾಗು ಪ್ರಜೆಗಳನ್ನು ದೋಚಿಕೊಳ್ಳುವುದು ಕಮ್ಯೂನಿಷ್ಟ್ ರಾಷ್ಟ್ರಗಳಲ್ಲಿ ವಿಪರೀತವಾಗಿ ನಡೆದಿವೆ. ಭ್ರಷ್ಟರಾದ ಪಕ್ಷಗಳ ನೇತಾರರು, ಅಧಿಕಾರಿಗಳು ಪ್ರಜೆಗಳನ್ನು ವಿಪರೀತವಾಗಿ ಶೋಷಿಸಿ ಅವರನ್ನು ದೋಚಿಕೊಂಡಿದ್ದಾರೆ. ಆದರೆ ಅದನ್ನು ಬಾಯಿಬಿಟ್ಟು ಕೇಳುವ ಹಕ್ಕು ಶೋಷಣೆಗೆ ಗುರಿಯಾದ ಪ್ರಜೆಗಳಿಗೆ ಕಮ್ಯೂನಿಷ್ಟ್ ದೇಶಗಳಲ್ಲಿ ಇಲ್ಲ! 
       ಸ್ವಾತಂತ್ರ್ಯಕ್ಕಾಗಿ ಪೂರ್ವ ಜರ್ಮನಿಯ ಪ್ರಜೆಗಳು ಸುಮಾರು ನಲ್ವತ್ತು ವರ್ಷಗಳ ಕಾಲ ಕಮ್ಯೂನಿಷ್ಟ್ ಆಡಳಿತಗಾರರ ವಿರುದ್ಧ ಹೋರಾಡಿದರು. ಎರಡನೇ ಪ್ರಪಂಚ ಯುದ್ಧದ ನಂತರ ಜರ್ಮನಿ ಎರಡು ತುಂಡಾಯಿತು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಯುದ್ಧದಲ್ಲಿ ಸೋತು ಆತ್ಮಹತ್ಯೆ ಮಾಡಿಕೊಂಡ. ಸೋವಿಯತ್ ದಾಳಿಗೆ ತುತ್ತಾದ ಪೂರ್ವ ಜರ್ಮನಿ ಕಮ್ಯೂನಿಷ್ಟ್ ದೇಶವಾಯಿತು. ಅದು ೧೯೪೯ರಲ್ಲಿ ಜರ್ಮನ್ ಡೆಮಾಕ್ರೆಟಿಕ್ ರಿಪಬ್ಲಿಕ್ಕಾಗಿ ರೂಪುಗೊಂಡಿತು. ಬ್ರಿಟನ್. ಫ್ರ್ಯಾನ್ಸ್, ಅಮೇರಿಕಾ ಆಧೀನಕ್ಕೊಳಪಟ್ಟ ಪಶ್ಚಿಮ ಜರ್ಮನಿಯ ಪ್ರಾಂತವು, "ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ’ಯಾಗಿ ಏರ್ಪಟ್ಟಿತು. ಜರ್ಮನಿಯ ರಾಜಧಾನಿಯಾಗಿದ್ದ ಬರ್ಲಿನ್ ನಗರವೂ ಸಹ ಎರಡು ಹೋಳಾಯಿತು. ಪೂರ್ವ ಬರ್ಲಿನ್ "ಕಮ್ಯೂನಿಷ್ಟ್ ಜರ್ಮನಿ"ಯ ರಾಜಧಾನಿಯಾಯಿತು. ಪಶ್ಚಿಮ ಬರ್ಲಿನ್ ಪ್ರಜಾಪ್ರಭುತ್ವ ಜರ್ಮನಿಯ ಭಾಗವಾಯಿತು. 
ಕಮ್ಯೂನಿಷ್ಟ್ ಆಡಳಿತದಿಂದ ಮುಕ್ತಿ ಪಡೆಯಲು ೧೯೪೯ರಿಂದಲೇ ಪೂರ್ವ ಜರ್ಮನಿಯ ಪ್ರಜೆಗಳು ಪಶ್ಚಿಮ ಜರ್ಮನಿಗೆ ವಲಸೆ ಹೋಗಲಾರಂಭಿಸಿದರು. ೧೯೫೪ರಲ್ಲಿ ಪೂರ್ವ ಜರ್ಮನಿಗೆ ರಷ್ಯಾವು ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರಸಾದಿಸಿತು. ಆದರೂ ಸಹ ನಾಲ್ಕು ಲಕ್ಷ ಮಂದಿ ಸೋವಿಯತ್ ಸೈನಿಕರು ಮಾತ್ರ ಪೂರ್ವ ಜರ್ಮನಿಯಲ್ಲಿಯೇ ತಳವೂರಿದರು. 
         ಸ್ವಾತಂತ್ರ್ಯವನ್ನು ಬಯಸಿ ಪಶ್ಚಿಮ ಜರ್ಮನಿಗೆ ಪಾರಾಗಿ ಹೋಗುತ್ತಿದ್ದ ಪೂರ್ವ ಜರ್ಮನಿಯವರನ್ನು ನಿಯಂತ್ರಿಸಲು ಪೂರ್ವ ಜರ್ಮನಿಯ ಆಡಳಿತವು ೧೯೮೧ರಲ್ಲಿ ತನ್ನ ಗಡಿ ಉದ್ದಕ್ಕೂ ಬರ್ಲಿನ್ ನಗರಕ್ಕೆ ಅಡ್ಡಗೋಡೆಯೊಂದನ್ನು ನಿರ್ಮಿಸಿತು. ಪೂರ್ವ ಮತ್ತು ಪಶ್ಚಿಮ ಜರ್ಮನಿಗಳನ್ನು ಪ್ರತ್ಯೇಕಿಸುವ ಈ ಗೋಡೆಯು ೧೦ ಅಡಿ ಎತ್ತರವಿತ್ತು. ಗೋಡೆಯನ್ನು ಕಟ್ಟಿದ ನಂತರವೂ ಸಹ ಅದನ್ನು ದುಮುಕಿ ಪೂರ್ವ ಜರ್ಮನಿಯವರು ಪಶ್ಚಿಮ ಜರ್ಮನಿಗೆ ವಲಸೆ ಹೋಗುವುದನ್ನು ಮುಂದುವರೆಸಿದರು. ಅದಕ್ಕಾಗಿ ಪೂರ್ವ ಜರ್ಮನಿಯ ಸರ್ಕಾರವು ಗೋಡೆಯುದ್ದಕ್ಕೂ ಸೈನಿಕರ ಪಹರೆಯನ್ನು ಹಾಕಿತು. ಗೋಡೆಯ ಮೇಲೆ ವಿದ್ಯುತ್ ತಂತಿಗಳನ್ನೂ ಸಹ ಹಾಕಲಾಯಿತು. ಆದರೂ ಸಹ ಪೂರ್ವ ಜರ್ಮನರ ವಲಸೆಯು ನಿಲ್ಲಲಿಲ್ಲ. 
ಸ್ವೇಚ್ಛಾ ಸಮೀರಣನನು
ಬಂಧಿಸಬಲ್ಲೆವೆಂದು ಬೀಗಿ
ಪ್ರಜೆಗಳ ಹಕ್ಕುಗಳನು
ಮೊಟಕುಗೊಳಿಸಿ ವಿಜೃಂಭಿಸಿ
ತುಪಾಕಿಗಳಿಂದ ಜನರನು
ಹಿಡಿತಲ್ಲಿಡಬಲ್ಲವೆಂದು ಭಾವಿಸಿ
ಮೆರೆಯುತ್ತಿದ್ದವರು ಅಂದು
ಅಯ್ಯೋ ಎಂದು ಪರಿತಪಿಸಿಹರು ಇಂದು!
 
              ೧೯೭೪ರ ಸುಮಾರಿಗೆ ಒಂದೂವರೆ ಲಕ್ಷ ಪೂರ್ವ ಜರ್ಮನಿಯ ಪ್ರಜೆಗಳು ಪಶ್ಚಿಮ ಜರ್ಮನಿಗೆ ತಪ್ಪಿಸಿಕೊಂಡು ಹೋದರು. ನಂತರದ ಹತ್ತು ವರ್ಷಗಳಲ್ಲಿ ಹತ್ತು ಲಕ್ಷ ಮಂದಿ ಪಶ್ಚಿಮ ಜರ್ಮನಿಯನ್ನು ಸೇರಿಕೊಂಡರು. ಆದರೆ ಅದೆಲ್ಲಾ ಗತ ಇತಿಹಾಸ. 
           ೧೯೮೯ರಲ್ಲಿ ಉಭಯ ಜರ್ಮನಿಗಳ ಚರಿತ್ರೆಯಲ್ಲಿ ಹೊಸ ಶಕವು ಆರಂಭವಾಯಿತು. ಕಮ್ಯೂನಿಷ್ಟ್ ಜರ್ಮನಿಯ ಸರ್ಕಾರವು ಬಿರುಕು ಬಿಟ್ಟಿತು. ಎರಡೂ ಜರ್ಮನಿಗಳು ಒಂದಾಗ ಬೇಕೆನ್ನುವ ಅಭಿಲಾಷೆಗೆ ಹೊಸ ಹುರುಪು ಮೂಡಿತು. ಇದಕ್ಕೆ ಪೂರಕವಾಗಿ ಪಶ್ಚಿಮ ಜರ್ಮನಿಗೆ ಪೂರ್ವ ಜರ್ಮನಿಯ ಪ್ರಜೆಗಳ ವಲಸೆಯೂ ಆರಂಭವಾಯಿತು. ಸರಿಸುಮಾರು ೨೦ ಲಕ್ಷ ಮಂದಿ ಅಂದರೆ ಅಂದಾಜು ೨೦% ಕಾರ್ಮಿಕರು ಪಶ್ಚಿಮ ಜರ್ಮನಿಗೆ ವಲಸೆ ಹೋಗಬಹುದೆಂದು ಪೂರ್ವ ಜರ್ಮನಿಯ ಸರ್ಕಾರವು ಕಳವಳಗೊಂಡಿತು.
         ಪೋಲೆಂಡಿನಲ್ಲಿ ಕಮ್ಯೂನುಷ್ಟೇತರ ಸರ್ಕಾರವು ರೂಪುಗೊಳ್ಳುವುದು, ಹಂಗೇರಿ ಕಮ್ಯೂನಿಷ್ಟ್ ಪಾರ್ಟಿಯು ಅಂತರ್ಧಾನವಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಸೋಷಲಿಸ್ಟ್ ಪಾರ್ಟಿಯಾಗಿ ರೂಪುಗೊಂಡದ್ದು ಮತ್ತು ಅನೇಕ ಪಕ್ಷಗಳುಳ್ಳ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡದ್ದು - ಇಂತಹ ಸಂಗತಿಗಳೆಲ್ಲಾ ಪೂರ್ವ ಐರೋಪ್ಯ ರಾಷ್ಟ್ರಗಳಲ್ಲಿದ್ದ ಕಮ್ಯೂನಿಷ್ಟ್ ಸರ್ಕಾರಗಳನ್ನು ನಡುಗಿಸಿದವು. ಸ್ವತಂತ್ರವಾಗಿ ಚುನಾವಣೆಗಳನ್ನು ನಡೆಸಬೇಕೆಂದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ತಮ್ಮ ಬೇಡಿಕೆಗಳನ್ನು ಮುಂದಿಡುತ್ತಾ ಪೂರ್ವ ಜರ್ಮನಿಯ ಪ್ರಜೆಗಳು ಪ್ರತಿಭಟನೆಗಳನ್ನು ಮತ್ತು ಚಳವಳಿಗಳನ್ನು ಮಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸುವುದನ್ನು ವಿರೋಧಿಸಿದ ಸ್ಟ್ಯಾಲಿನ್ ಭಕ್ತನಾದ ಎರಿಚ್ ಹೋನೆಕರ್ ೧೯೮೯ರ ಅಕ್ಟೋಬರಿನಲ್ಲಿ ಪದವಿಯಿಂದ ಚ್ಯುತಿಗೊಂಡ. ೧೯೭೧ರಿಂದ ಪೂರ್ವ ಜರ್ಮನಿಯ ಕಮ್ಯೂನಿಷ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿ, ಸರ್ಕಾರದ ಪ್ರಮುಖ ನೇತಾರನಾಗಿದ್ದ ಹೋನೆಕರ್ ನಿರಂಕುಶಾಡಳಿತದ ವಿಷವೃಕ್ಷವನ್ನು ನೆಟ್ಟು ಬೆಳೆಸಿದ. ಆದ್ದರಿಂದ ಹೋನೆಕರ್ ನಿಷ್ಕ್ರಮಿಸಿದ ನಂತರ ಜರ್ಮನ್ ಪ್ರಜೆಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. 
             ಮತ್ತೊಬ್ಬ ಕಟ್ಟಾ ಕಮ್ಯೂನಿಷ್ಟ್ ನಾಯಕನಾಗಿದ್ದ ಈಗನ್ ಕ್ರೆಂಜ್ ಪಕ್ಷ ಹಾಗು ಸರ್ಕಾರದ ಮುಖಂಡತ್ವವನ್ನು ವಹಿಸಿಕೊಂಡ. ಅವನು ಪಾರ್ಟಿಯ ಪಾಲಿಟ್‌ಬ್ಯೂರೋವನ್ನು (ಪಕ್ಷದ ಸ್ಥಾಯಿ ಸಮಿತಿ) ಪುನರುಜ್ಜೀವಗೊಳಿಸಿ ಮೊದಲಿದ್ದ ೨೧ ಸದಸ್ಯರ ಸಂಖ್ಯೆಯನ್ನು ೧೧ಕ್ಕೆ ಇಳಿಸಿದ. ಸ್ವತಂತ್ರವಾಗಿ ಚುನಾವಣೆಗಳನ್ನು ನಡೆಸುವುದಾಗಿ ಕ್ರೆಂಜ್ ಆಶ್ವಾಸನೆಯನ್ನೂ ಕೊಟ್ಟ. ಆದರೆ ಅಷ್ಟರಲ್ಲಾಗಲೆ ಕಮ್ಯೂನಿಷ್ಟ್ ಆಡಳಿತದ ವಿರುದ್ಧ ತೀವ್ರ ಸ್ಥಾಯಿಯಲ್ಲಿ ಪ್ರತಿಭಟನೆಗಳು ಹಾಗು ಚಳವಳಿಗಳು ಜರುಗಿದ್ದರಿಂದ ಕ್ರೆಂಜ್‌ನ ಆಡಳಿತವು ಎರಡೇ ತಿಂಗಳಿಗೆ ಅಂತ್ಯವಾಯಿತು. ಪಕ್ಷದ ಅಧ್ಯಕ್ಷತೆಯನ್ನೂ ಕ್ರೆಂಜ್ ಕಳೆದುಕೊಳ್ಳಬೇಕಾಯಿತು. 
           ಉಭಯ ಜರ್ಮನಿ ದೇಶಗಳು ಒಂದಾಗುವುದಕ್ಕೆ ತಮ್ಮ ವಿರೋಧವಿಲ್ಲವೆಂದು ಸೋವಿಯತ್ ಪ್ರಭುತ್ವವು ೧೯೮೯ರ ಜುಲೈನಲ್ಲಿ ಪ್ರಕಟಿಸಿತು. ಒಂದು ವೇಳೆ ತಾವು ವಿರೋಧಿಸಿದರೂ ಸಹ ಎರಡೂ ಜರ್ಮನಿಗಳು ಏಕವಾಗುವುದು ದೃಢವೆಂದು ಗೋರ್ಬಚೇವ್‌ ಆಡಳಿತಕ್ಕೆ ತಿಳಿದಿದೆ. 
 
ರಾಷ್ಟ್ರೀಯ ಪ್ರಭಂಜನವನು
ಸೆರೆಮನೆಗಳು ಹಿಡಿದಿಡಲಾರವು
ಪ್ರಜಾಪ್ರಭುತ್ವದ ಪರಿಮಳವನು
ಗೋಡೆಗಳು ಬಂಧಿಸಲಾರವು!
ಜಾಗೃತ ಜನ ಮಾನಸದೊಳು
ಪ್ರಜ್ವಲಿಸುತಿಹ ಪ್ರಗತಿ ಜ್ವಾಲೆಗಳನು
ಸ್ಮಶಾನ ಸೇರಿದ ಸಮತಾವಾದದ
ಸಿದ್ಧಾಂತಗಳು ಶಮನಗೊಳಿಸಲಾರವು!
 
          ಪೂರ್ವ ಯೂರೋಪಿನಲ್ಲಿ ಪ್ರಜಾಪ್ರಭುತ್ವದೆಡೆಗೆ ಜನರು ಆಕರ್ಷಿತರಾಗಿ ಧಾವಿಸುತ್ತಿದ್ದಾರೆ. ಆ ಓಟದಲ್ಲಿ ಹಂಗೇರಿ ದೇಶ ಅಗ್ರಸ್ಥಾನದಲ್ಲಿದೆ. ಕಮ್ಯೂನಿಷ್ಟರ ವರ್ಗ ಸಂಘರ್ಷ ಕ್ರಾಂತಿಯನ್ನು ವಿರೋಧಿಸಿ ರಾಷ್ಟ್ರೀಯತೆಯ ಕಹಳೆ ಮೊಳಗಿಸಿದ ಯೂರೋಪಿನ ದೇಶಗಳ ನಾಯಕತ್ವ ವಹಿಸಿದ್ದು ಹಂಗೇರಿ. 
          ಹಂಗೇರಿಯ ಆಡಳಿತವು ಅನುಮತಿ ಕೊಟ್ಟದ್ದರಿಂದ ೧೯೮೯ನೇ ಸೆಪ್ಟಂಬರಿನಲ್ಲಿ ಪೂರ್ವ ಜರ್ಮನಿಯ ಪ್ರಜಾವಾಹಿನಿಯು ಪಶ್ಚಿಮ ಜರ್ಮನಿಯೆಡೆಗೆ ಚಲಿಸಿತು. ಪೂರ್ವ ಜರ್ಮನಿಯ ಪ್ರಜೆಗಳು ಹಂಗೇರಿ ದೇಶದ ಸರಿಹದ್ದನ್ನು ದಾಟಿ ಆಷ್ಟ್ರಿಯಾ ದೇಶವನ್ನು ಸೇರಿ ಅದರ ಮೂಲಕ ಪಶ್ಚಿಮ ಜರ್ಮನಿಗೆ ಹೋದರು. "ನಾವು ಸ್ವತಂತ್ರರಾದೆವು" ಎಂದು ಈ ಜರ್ಮನರು ಜೋರಾಗಿ ಘೋಷಣೆಗಳನ್ನು ಕೂಗಿದರು. ಹಂಗೇರಿ ಸರ್ಕಾರದ ಮೇಲೆ ಪೂರ್ವ ಜರ್ಮನಿಯ ಆಡಳಿತವು ತನ್ನ ಕೆಂಗೆಣ್ಣಿನ ಕಿಡಿ ಕಾರಿತು. ಪೂರ್ವ ಜರ್ಮನಿಯ ಈ ಕ್ರಿಯೆಯಿಂದ ಜರ್ಮನ್ನರ ವಲಸೆ ಇನ್ನಷ್ಟು ಹೆಚ್ಚಾಯಿತು. 
        ನವೆಂಬರ್ ತಿಂಗಳಿನಲ್ಲಿ ಝೆಕಸ್ಲೋವಕಿಯಾ ದೇಶವೂ ಸಹ ಪೂರ್ವ ಜರ್ಮನ್ ದೇಶಸ್ಥರು ತಮ್ಮ ದೇಶದ ಮೂಲಕ ಪಶ್ಚಿಮ ಜರ್ಮನಿಗೆ ವಲಸೆ ಹೋಗಲು ಅನುಮತಿಯಿತ್ತಿತು. ಇದರಿಂದಾಗಿ ಪೂರ್ವ ಜರ್ಮನಿಯ ಕಮ್ಯೂನಿಷ್ಟ್ ಆಡಳಿತವೂ ಸಹ ತಮ್ಮ ದೇಶಸ್ಥರು ಪಶ್ಚಿಮ ಜರ್ಮನಿಯೆಡೆಗೆ ವಲಸೆ ಹೋಗುವುದನ್ನು ವಿಧಿಯಿಲ್ಲದೆ ಒಪ್ಪಿಕೊಂಡಿತು. ಕಟ್ಟಕಡೆಗೆ ೧೯೮೯ರ ಡಿಸೆಂಬರಿನಲ್ಲಿ, ಪೂರ್ವ ಜರ್ಮನಿಯವರು ನೇರವಾಗಿ ಪಶ್ಚಿಮ ಜರ್ಮನಿಯನ್ನು ಪ್ರವೇಶಿಸುವುದನ್ನು ಕಮ್ಯೂನಿಷ್ಟ್ ಪ್ರಭುತ್ವವು ಅಂಗೀಕರಿಸಿತು. ಹೇಗೆ ಬರ್ಲಿನ್ ನಗರದ ಗೋಡೆಯು ಬಿರುಕು ಬಿಟ್ಟು ಜನರು ಆಚೆ ಹೋಗಲು ದಾರಿ ಸುಗುಮವಾಯಿತೋ ಅದೇ ವಿಧವಾಗಿ ಜರ್ಮನಿಯ ಕಮ್ಯೂನಿಷ್ಟ್ ಕೋಟೆ ಅನೇಕ ಕಡೆ ಕುಸಿದು ಅಲ್ಲೆಲ್ಲಾ ಬಾಗಿಲುಗಳು ತಲೆ ಎತ್ತಿದವು. ರಾಷ್ಟ್ರೀಯ ಚಿಂತನೆಯ ಪಥದಲ್ಲಿ ನಡೆದ ಜರ್ಮನ್ನರ ಪ್ರಜಾತಂತ್ರದ ಜೈತ್ರ ಯಾತ್ರೆಯು ವಿಜಯವಂತವಾಯಿತು. 
ಡಿಸೆಂಬರ್ ೨೩ರಂದು ಬರ್ಲಿನ್ ಗೋಡೆ ಮುಕ್ತವಾಯಿತು. ೨೮ ವರ್ಷಗಳ ನಂತರ ಪೂರ್ವ ಪಶ್ಚಿಮ ಜರ್ಮನಿಗಳನ್ನು ಸೇರಿಸುವ ಬ್ರಾಂಡನ್ ಬರ್ಗ್‌ಗೇಟ್ ತೆರೆಯಲ್ಪಟ್ಟಿತು. ಆ ಗೇಟಿನ ಹತ್ತಿರ ೩.೦೦ ಘಂಟೆಗೆ ಪಶ್ಚಿಮ ಜರ್ಮನಿಯ ಛಾನ್ಸಲರ್ ಹೆಲ್ಮೆಟ್ ಕೋಲ್ ಅವರಿಗೆ ಪೂರ್ವ ಜರ್ಮನಿಯ ಪ್ರಧಾನಿ ಹಾನ್ಸ್‌ಮಂಡ್ ಸ್ವಾಗತವನ್ನು ಕೋರಿದರು. ಬರ್ಲಿನ್ ನಗರದ ನಿವಾಸಿಗಳು ಮತ್ತು ಜರ್ಮನಿ ದೇಶದ ಇತರೇ ನಾಗರಿಕರು ಸಂತೋಷದಿಂದ ಕುಣಿ ಕುಣಿದಾಡುತ್ತಾ, ನೃತ್ಯ ಮಾಡುತ್ತಾ ಬರ್ಲಿನ್ ಗೋಡೆಯನ್ನು ದಾಟಿದರು. ಉಭಯ ಜರ್ಮನಿಗಳ ಪ್ರಜೆಗಳು ಒಂದುಗೂಡಬೇಕೆಂದು ಅತ್ಯಧಿಕ ಶಾತ ಪೂರ್ವ ಜರ್ಮನ್ನಿನ ನಾಗರೀಕರ ಅಪೇಕ್ಷೆಯಾಗಿದೆ ಎನ್ನುವುದು ಎರಡು ಪ್ರತ್ಯೇಕ ಸರ್ವೆಗಳಲ್ಲಿ ಬೆಳಕಿಗೆ ಬಂತು. ಪಶ್ಚಿಮ ಜರ್ಮನ್ನರು ಬಹು ಹಿಂದಿನಿಂದಲೂ ಏಕೀಕರಣವನ್ನು ಬಯಸುತ್ತಿದ್ದರು. ೧೯೯೦ರಲ್ಲಿ ಪೂರ್ವ ಜರ್ಮನಿಯಲ್ಲಿ ಅನೇಕ ಪಕ್ಷಗಳನ್ನುಳ್ಳ ಪ್ರಜಾತಂತ್ರ ವ್ಯವಸ್ಥೆ ಏರ್ಪಡಲಿದೆ. ಮೇ ತಿಂಗಳ ೬ನೇ ತಾರೀಖಿನಂದು ಅಲ್ಲಿ ಮುಕ್ತ ಚುನಾವಣೆಗಳು ನಡೆಯಲಿವೆ. 
ಪ್ರಕೃತಿ ಪುಳಕಗೊಂಡಿತು
ಪ್ರಗತಿ ಶುಭ ಹಾರೈಸಿತು
ಕಮ್ಯೂನಿಷ್ಟ್ ಗೋಡೆಯನು
ಪ್ರಜೆಗಳು ಉರುಳಿಸಿದರು!
ಮಾನವ ಹಕ್ಕುಗಳ ಸಂಘವು
ಪದೇ ಪದೇ ಜಾಗೃತಗೊಳಿಸಲು
ಜರ್ಮನಿಯ ಸರಿಹದ್ದಿನೊಳು
ಸ್ವಾತಂತ್ರ್ಯ ಝರಿಯು ಪ್ರವಹಿಸಿತು!
 
ಮುಂದುವರೆಯುವುದು.........
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್‌ ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು  ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ. 
*****
ಹಿಂದಿನ ಲೇಖನ ಭಾಗ - ೭: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು ಈ ಕೊಂಡಿಯನ್ನು ನೋಡಿ 
 
 
 
 
 
 

Rating
No votes yet

Comments