ಭಾಗ - ೭: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಭಾಗ - ೭: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಐಕ್ಯರಾಜ್ಯ ಸಮಿತಿಗೆ......
     ೧೯೮೯ರ ಸೆಪ್ಟೆಂಬರ್ ೧೦ರಂದು ಅಝರ್‌ಬೈಝಾನಿನ ವಿಧ್ವಂಸಕಾರರು ತಮ್ಮ ಮೇಲೆ ಹತ್ಯಾಕಾಂಡವನ್ನು ಜರುಗಿಸದಂತೆ ತಡೆಯುವಲ್ಲಿ ಸೋವಿಯತ್ ರಷ್ಯಾದ ಪಾಲಕ ಮಂಡಳಿಯು ವಿಫಲವಾಗಿಯೆಂದು ’ನಾಗರ್ನೋ-ಕರಾಬಿಕ್ ಪ್ರಾಂತ’ದ ಆರ್ಮೇನಿಯನ್ನರು ವ್ಯಥೆಪಟ್ಟುಕೊಂಡರು. ಆದ್ದರಿಂದ ತಮ್ಮ ಜನಾಂಗದವರನ್ನು ರಕ್ಷಿಸಲು ಅವಶ್ಯಕತೆಯುಂಟಾದಲ್ಲಿ ಅಂತರ್ರಾಷ್ಟ್ರೀಯ ಸೈನಿಕ ಬೃಂದವನ್ನು ಕಳುಹಿಸಿ ಕೊಡಬೇಕೆಂದು ಆರ್ಮೇನಿಯನ್ ಕೌನ್ಸಿಲ್, ಐಕ್ಯರಾಜ್ಯ ಸಮಿತಿಯನ್ನು (UNO) ಭಿನ್ನವಿಸಿತು. ಭಾರತದಲ್ಲಿಯೂ ಸಹ ಈಗ ಪ್ರಾಂತಗಳ ಮಧ್ಯೆ ಈ ವಿಧವಾದ ವಿವಾದಗಳಿವೆ, ಆದರೆ ಇಲ್ಲಿ ಅಂತಹ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆಯೇ? 
         ನಿಜ ಹೇಳಬೇಕೆಂದರೆ ಆರ್ಮೇನಿಯನ್ನರು ಸಮಸ್ಯೆಯನ್ನು ಐಕ್ಯರಾಜ್ಯಸಮತಿಯ ಬಳಿಗೆ ಕೊಂಡೊಯ್ಯುವುದರ ಮೂಲಕ ಅವರು ರಷ್ಯಾದ ವಿರುದ್ಧ ತಿರುಗಿ ಬಿದ್ದರು. 
      ೧೯೮೯ರ ಡಿಸೆಂಬರ್ ಮೊದಲನೇ ತಾರೀಖಿನಂದು ನಾಗರ್ನೋ-ಕರಾಬಿಕ್ ಪ್ರಾಂತವನ್ನು ತಮ್ಮ ರಿಪಬ್ಲಿಕ್ಕಿನೊಳಗೆ ವಿಲೀನಗೊಳಿಸಿಕೊಳ್ಳುವುದಕ್ಕಾಗಿ ಆರ್ಮೇನಿಯಾದ ಶಾಸನ ಸಭೆಯು ಮಸೂದೆಯೊಂದನ್ನು ಅನುಮೋದಿಸಿತು. ಅದಷ್ಟೇ ಅಲ್ಲದೆ ನಾಗರ್ನೋ-ಕರಾಬಿಕ್ ಪ್ರಾಂತವನ್ನು ಅಭಿವೃದ್ಧಿಗೊಳಿಸಲು ಒಂದು ಯೋಜನೆಯನ್ನೂ ಸಹ ರೂಪುಗೊಳಿಸಿತು. ಆರ್ಮೇನಿಯಾದ ಶಾಸನ ಸಭೆಯ ನಿರ್ಣಯಗಳು ಕಾನೂನು ಬಾಹಿರವೆಂದು ಸೋವಿಯತ್ ರಷ್ಯಾದ ಸರ್ವೋಚ್ಛ ಅಧ್ಯಕ್ಷ ಮಂಡಳಿಯು ತೀರ್ಮಾನಿಸಿತು. ಆದರೂ ಸಹ ಇದನ್ನು ಆರ್ಮೇನಿಯಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಮ್ಯೂನಿಷ್ಟ್ ಸರ್ಕಾರಕ್ಕೆ ದೇಶದ ಮೇಲಿನ ಹಿಡಿತವು ತಪ್ಪಿದೆ. ೧೯೯೦ರ ಜನವರಿ ೧೦ನೇ ತಾರೀಕಿನಂದು ೪೩ ಮಂದಿ ಅಝರ್‌ಬೈಝಾನ್‌ ಜನಾಂಗದವರನ್ನು ಆರ್ಮೇನಿಯನ್ನರು ಅಪಹರಿಸಿಕೊಂಡು ಹೋದರು. ಅದಕ್ಕೂ ಮುನ್ನಾ ದಿನ ೧೯ ಜನ ಆರ್ಮೇನಿಯಾ ಅಧಿಕಾರಿಗಳನ್ನು ಅಝರ್‌ಬೈಝಾನಿನ ವಿಧ್ವಂಸಕಕಾರರು ಅಪಹರಿಸಿಕೊಂಡು ಹೋಗಿದ್ದರು. 
       ಮತ್ತೊಂದು ಕಡೆ ಅಝರ್‌ಬೈಝಾನಿನ ವಿಧ್ವಂಸಕಾರರು ಸೋವಿಯತ್ ಸಂಯುಕ್ತ ಸಂಸ್ಥಾನ ಮತ್ತು ಇರಾನಿನ ಸರಿಹದ್ದಿನಲ್ಲಿ ತೀವ್ರವಾದ ಬೀಭತ್ಸಕಾಂಡಗಳನ್ನು ಸೃಷ್ಟಿಸಿದರು. ಸರಿಹದ್ದಿನಲ್ಲಿದ್ದ ಮುಳ್ಳು ತಂತಿಯ ಬೇಲಿಗಳನ್ನು ತೊಲಗಿಸಿ ಇರಾನಿನೊಳಕ್ಕೆ ನುಸುಳಿದರು. ಇರಾನಿನಲ್ಲಿರುವ ತಮ್ಮ ಜನಾಂಗದವರೊಡನೆ ತಾವು ಸೇರಿಕೊಳ್ಳುತ್ತೇವೆ ಎಂದು ಅವರು ಘೋಷಿಸಿದರು. ಇದರರ್ಥ ಅಝರ್‌ಬೈಝಾನ್ ಸೋವಿಯತ್ ರಷ್ಯಾದಿಂದ ಬೇರ್ಪಡುವುದಕ್ಕೆ ಭೂಮಿಕೆಯನ್ನು ಸಿದ್ಧಗೊಳಿಸಲಾಗುತ್ತಿದೆ ಎಂದಾಯಿತು. 
         ಸೋವಿಯತ್ ರಷ್ಯಾದಲ್ಲಿನ ಮಧ್ಯ ಏಷಿಯಾದ ರಿಪಬ್ಲಿಕ್ ಆಗಿರುವ ಉಝ್‌ಬೇಕಿಸ್ತಾನದ ಮುಸ್ಲಿಮರು ೧೯೮೯ರ ಜೂನಿನಲ್ಲಿ ಬೃಹತ್ತಾದ ವಿಧ್ವಂಸಕ ಕೃತ್ಯಗಳನ್ನು ಕೈಗೊಂಡರು. ಜನಾಂಗೀಯ ದ್ವೇಷವು ಈ ವಿಧ್ವಂಸಕ ಕಾಂಡಕ್ಕೆ ದಾರಿಯಾಯಿತು. 
    ಗೋರ್ಬಚೇವ್ ಅವರ ’ಪೆರಸ್ಟ್ರೋಯಿಕಾ’ದೊಂದಿಗೆ ಬಾಲ್ಟಿಕ್ ರಿಪಬ್ಲಿಕ್ಕುಗಳಲ್ಲಿ ಸ್ವಾತಂತ್ರ್ಯೋದ್ಯಮದ ಪವನಗಳು ಬೀಸತೊಡಗಿದವು. ಪೆರಸ್ಟ್ರೋಯಿಕಾ ಯೋಜನೆಯನ್ನು ಪ್ರಕಟಿಸುವುದರ ಮೂಲಕ ಗೋರ್ಬಚೇವ್ ಜನರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಲ್ಲದಿದ್ದರೆ ಬಾಲ್ಟಿಕ್ ದೇಶಗಳಾದ - ಲಾಟ್ವಿಯಾ, ಇಸ್ಟೋನಿಯಾ, ಲಿಥೂನಿಯಾಗಳು ಸೋವಿಯತ್ ರಷ್ಯಾದಿಂದ ಸಂಪೂರ್ಣವಾಗಿ ಬೇರ್ಪಡುತ್ತಿದ್ದವು. ಬಾಲ್ಟಿಕ್ ರಿಪಬ್ಲಿಕ್ಕಿನಲ್ಲಿ ಹೆಚ್ಚುತ್ತಿರುವ ಸ್ವಾತಂತ್ರದ ಆಕಾಂಕ್ಷೆಯು ಸೋವಿಯತ್ ಕಮ್ಯೂನಿಷ್ಟ್ ಪಾರ್ಟಿಯನ್ನು ಬೆಚ್ಚಿ ಬೀಳಿಸಿದೆ. ೧೯೨೨ರಲ್ಲಿ ರೂಪಗೊಂಡ ’ಸೋವಿಯತ್ ಏಕೀಕರಣ’ ಒಪ್ಪಂದವನ್ನು ಸಮೀಕ್ಷಿಸಿ ಅದನ್ನು ಪುನರ್ರಚಿಸಬೇಕೆಂದು ಗೋರ್ಬಚೇವ್ ಅಂಗೀಕರಿಸಿದರು. ಸೋವಿಯತ್ ಶಾಸನ ಸಭೆಯು ರೂಪಿಸುವ ಮಸೂದೆಗಳನ್ನು ಸಹ ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಹಕ್ಕುಗಳನ್ನೂ ಸಹ ರಿಪಬ್ಲಿಕ್ಕುಗಳಿಗೆ ಕಲ್ಪಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಚಳವಳಿ ಹೂಡಿದ ಬಾಲ್ಟಿಕ್ ರಾಜ್ಯಗಳು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಸೋವಿಯತ್ ಕಮ್ಯೂನಿಷ್ಟ್ ಪಾರ್ಟಿಯೊಂದಿಗೆ ಸಂಬಂಧಗಳನ್ನು ಕಡಿದುಕೊಳ್ಳುವ ದಿಶೆಯಲ್ಲಿ ಈ ಮೂರೂ ಬಾಲ್ಟಿಕ್ ರಿಪಬ್ಲಿಕ್ಕುಗಳು ತಮ್ಮ ತಮ್ಮ ಶಾಸನ ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡವು (೧೯೮೯ ಡಿಸೆಂಬರ್, ೧೯೯೦ ಜನವರಿಗಳಲ್ಲಿ). ಕಮ್ಯೂನಿಷ್ಟ್ ಪಾರ್ಟಿಗೆ ವಿಶೇಷವಾದ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಅಧಿನಿಯಮಗಳನ್ನು ಈ ರಿಬಪ್ಲಿಕ್ಕುಗಳು ಅನೂರ್ಜಿತಗೊಳಿಸಿದವು. ಕಮ್ಯೂನಿಷ್ಟ್ ಪಾರ್ಟಿಗೆ ರಾಜ್ಯಾಡಳಿತದಲ್ಲಿ ವಿಶೇಷ ಸ್ಥಾನಮಾನವನ್ನು ಕಲ್ಪಿಸಿದ ಪರಿಣಾಮವಾಗಿ ಸೋವಿಯತ್ ರಷ್ಯಾದಲ್ಲಿ ೭೦ ವರ್ಷಗಳಿಗೂ ಅಧಿಕ ಕಾಲ ’ಏಕಪಕ್ಷ ನಿರಂಕುಶ ಆಡಳಿತವು’ ಮುಂದುವರೆಯಿತು. ಈ ನಿರಂಕುಶ ಪರಿಪಾಲನೆಯನ್ನು ಬಾಲ್ಟಿಕ್ ರಿಪಬ್ಲಿಕ್ಕುಗಳು ಕೊನೆಗೊಳಿಸಿದವು. ಹೀಗೆ ಈ ದೇಶಗಳಲ್ಲಿ (ರಿಪಬ್ಲಿಕ್/ರಾಜ್ಯಗಳಲ್ಲಿ) ಅಂಕುರಗೊಂಡ ರಾಷ್ಟ್ರೀಯತೆಯ ಭಾವನೆಯು ಪ್ರಜಾಪ್ರಭುತ್ವವು ಮೊಳೆಯಲು ಕಾರಣವಾಯಿತು. 
 
ಶವ ಪೆಟ್ಟಿಗೆಯ ಕೊನೆಯ ಮೊಳೆ...
        ರುಮೇನಿಯಾದ ಪರಿಸ್ಥಿತಿ ಏರ್ಪಡುವುದಕ್ಕೆ ಮುಂಚೆಯೇ ಗೋರ್ಬಚೇವ್ ಜಾಗೃತರಾಗುತ್ತಿದ್ದಾರೆ. ಸೋವಿಯತ್ ರಷ್ಯಾದಲ್ಲಿ ಕಮ್ಯೂನಿಷ್ಟ್ ಏಕಪಕ್ಷ ಪಾಲನೆಯನ್ನು ನಿವಾರಿಸಿ ಅನೇಕ ಪಕ್ಷಗಳುಳ್ಳ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಏರ್ಪಡಿಸಲು ತಾನು ಸಿದ್ಧನಾಗಿರುವುದಾಗಿ ಗೋರ್ಬಚೇವ್ ಹೇಳಿಕೆಯನ್ನಿತ್ತಿದ್ದಾರೆ. ೧೯೯೦ರ ಜನವರಿ ೧೩ನೇ ತಾರೀಖು ಲಿಥುವೇನಿಯಾದ ರಾಜಧಾನಿಯಾದ ವಿಲ್‌ನಿಯಸ್‌ನಲ್ಲಿ ಈ ಚಾರಿತ್ರಿಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಒಂದು ವೇಳೆ ಇದು ನಿಜವಾದುದೇ ಆದರೆ ೭೨ ವರ್ಷಗಳ ಕಮ್ಯೂನಿಷ್ಟ್ ಆಡಳಿತ ಮುಗಿದಂತೆಯೇ. ಸೋವಿಯತ್ ಕಮ್ಯೂನಿಷ್ಟ್ ಶವಪೆಟ್ಟಿಗೆಯ ಮೇಲೆ ಇದು ಕೊನೆಯ ಮೊಳೆಯಾಗುತ್ತದೆ. ಕಮ್ಯೂನಿಷ್ಟ್ ಪಕ್ಷವನ್ನು ಹೊರತುಪಡಿಸಿ ಇತರ ಪಕ್ಷಗಳನ್ನು ಅನುಮತಿಸುವುದಿಲ್ಲವೆಂದು ಹೇಳಿ ಅಧಿಕಾರಕ್ಕೆ ಬಂದ ಗೋರ್ಬಚೇವ್ ಈ ರೀತಿ ಪರಿಸ್ಥಿತಿಗೆ ಶರಣಾಗಿದ್ದಾರೆ. 
     ಸೋವಿಯತ್ ರಷ್ಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಹೋರಾಟಗಳನ್ನು ಗಮನಿಸುತ್ತಿದ್ದರೆ ೧೯೯೦ರಲ್ಲಿ ಸೋವಿಯತ್ ಸಾಮ್ರಾಜ್ಯವು ಪತನವಾಗುವುದು ನಿಶ್ಚಿತವೆಂದು ೨೦ ವರ್ಷಗಳಷ್ಟು ಹಿಂದೆಯೇ ಎಚ್.ಸಿ. ದಿಷನ್‌ಕಾನ್ ಎನ್ನುವ ಫ್ರೆಂಚ್ ಸಾಮಾಜಿಕ ಶಾಸ್ತ್ರಜ್ಞ ’ಒಂದು ಸಾಮ್ರಾಜ್ಯದ ಪತನ - Fall of an Empire" ಎನ್ನುವ ಗ್ರಂಥದಲ್ಲಿ ವಿವರಿಸಿದ್ದಾನೆ (ಉಲ್ಲೇಖ - ದಿ ಹಿಂದೂ ಪತ್ರಿಕೆ ಜನವರಿ ೮, ೧೯೯೦)
       ’ಕಮ್ಯೂನಿಸಂ’ನಿಂದಾಗಿ ರಷ್ಯಾದಲ್ಲಿ ಆಹಾರದ ಕೊರತೆ ಉಂಟಾಗಲಿದೆ ಎಂದು ಸುಮಾರು ೪೦ ವರ್ಷಗಳ ಹಿಂದೆಯೇ (೧೯೫೦ರ ಸರಿಸುಮಾರಿನಲ್ಲಿ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿ ಗೋಳ್ವಲ್ಕರ್ ಅವರು ನುಡಿದಿದ್ದರು. ಆರ್ಥಿಕ ಶಾಸ್ತ್ರಜ್ಞ ಗಾಲ್ಬೆತ್ ಸಹ ಇದೇ ಮಾತನ್ನು ಹೇಳಿದ್ದ. ಕೆಲವರು ಅದನ್ನು ಕೇಳಿ ನಕ್ಕರು, ಕೆಲವರು ನಂಬಿದರು. 
 
ರಾಷ್ಟ್ರೀಯ ಕ್ರಾಂತಿಯ ಜ್ಯೋತಿಗಳು:
        ಕಳೆದ ಮೂವ್ವತ್ತು ವರ್ಷಗಳಿಂದಲೂ ಹಂಗೇರಿಯಲ್ಲಿ ನವೆಂಬರ್ ೭ರಂದು ಸರ್ಕಾರವು ರಜೆಯನ್ನು ಕೊಡುತ್ತಿತ್ತು. ಏಕೆಂದರೆ, ಅದೇ ದಿನಾಂಕದಂದು, ೧೯೧೭ರಲ್ಲಿ ಸೋವಿಯತ್ ರಷ್ಯಾದಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಡಳಿತಕ್ಕೆ ಬಂದಿತ್ತು. ಸೋವಿಯತ್ ರಷ್ಯಾದ ಅಡಿಯಾಳುಗಳಂತೆ ಆಡಳಿತ ನಡೆಸಿದ ಕಮ್ಯೂನಿಷ್ಟ್ ಸರ್ಕಾರಗಳೆಲ್ಲವೂ ಇದನ್ನೇ ಮಾಡಿದವು. ಆದರೆ ಈ ರಜೆಯನ್ನು ರದ್ದುಗೊಳಿಸುತ್ತಿರುವುದಾಗಿ ೧೯೮೯ರ ಮಾರ್ಚ್ ತಿಂಗಳಿನಲ್ಲಿ ಹಂಗೇರಿ ಪ್ರಭುತ್ವವು ಪ್ರಕಟಿಸಿತು. ಅದರೊಂದಿಗೆ, ಹಂಗೇರಿಯ ರಾಷ್ಟ್ರೀಯ ಚರಿತ್ರೆಯೊಂದಿಗೆ ಅನುಬಂಧವಿದ್ದ ಮಾರ್ಚ್, ೧೫ನ್ನು ಅಧಿಕೃತ ಸರ್ಕಾರಿ ರಜೆಯನ್ನಾಗಿ ಘೋಷಿಸಿತು. ೧೮೪೮ರಂದು ಆ ದಿನದಂದು ಹಂಗೇರಿಯನ್ನರು ವಿದೇಶಿ ಆಕ್ರಮಣಕಾರರ ಮೇಲೆ ದಂಗೆ ಎದ್ದಿದ್ದರು. ಆದರೆ ಆ ದಂಗೆಯನ್ನು ರಷ್ಯಾದ ಸಾಮ್ರಾಜ್ಯವಾದಿಗಳು ಹತ್ತಿಕ್ಕಿದ್ದರು. ಪುನಃ ನೂರು ವರ್ಷಗಳ ನಂತರ ರಷ್ಯಾದವರೇ ಹಂಗೇರಿಯನ್ನರ ಮೇಲೆ ಕಮ್ಯೂನಿಸಂ ಅನ್ನು ಹೇರಿದರು. ಕಮ್ಯೂನಿಷ್ಟ್ ಆಡಳಿತದಿಂದಾಗಿ ರಷ್ಯಾದ ಗುಲಾಮರಾದವರೆಲ್ಲರೂ ಸೋವಿಯತ್ ಉತ್ಸವಗಳನ್ನು ತಮ್ಮ ಉತ್ಸವಗಳಾಗಿ ಆಚರಿಸಿಕೊಳ್ಳತೊಡಗಿದರು. ಹೀಗೆ ಮಾಡುವುದರ ಮೂಲಕ ಹಂಗೇರಿ ದೇಶದ ಪ್ರಜೆಗಳಲ್ಲಿ ಆತ್ಮಾಭಿಮಾನ, ರಾಷ್ಟ್ರೀಯ ಭಾವನೆ ಅದೋಗತಿಗೆ ಇಳಿದವು. ಸೋವಿಯತ್ ಸಂಕೋಲೆಗಳನ್ನು ತುಂಡರಿಸಿಕೊಂಡು ಅವರು ತಮ್ಮ ರಾಷ್ಟ್ರೀಯ ದಿನದಂದು ರಜೆಯನ್ನು ಘೋಷಿಸಿಕೊಂಡಿದ್ದಾರೆ. ಇಷ್ಟು ದಿವಸ ಹಂಗೇರಿಯ ಪಾಠಶಾಲೆಗಳಲ್ಲಿ ರಷ್ಯನ್ ಭಾಷೆಯನ್ನು ಕಡ್ಡಾಯವಾಗಿ ಬೋಧಿಸಲಾಗುತ್ತಿತ್ತು. ಈಗ ಆ ನಿರ್ಬಂಧವನ್ನು ಎತ್ತಿ ಹಾಕಲಾಗಿದೆ. 
ರಾಷ್ಟ್ರದ ಜೀವನ ಗತಿಯ ನಡೆಸಿದ
ನೀತಿಯು ಮತ್ತೆ ನಿದ್ದೆಯಿಂದೆದ್ದಿಹುದು
ಜನಾಂಗಗಳ ಕಬಳಿಸುವ ರಾಕ್ಷಸ
ರೀತಿಗಳ ಮೇಲೆ ಕೆಂಡ ಕಾರುತಿಹುದು!
       ಉಳ್ಳವರು, ಇಲ್ಲದವರು ಎರಡು ವರ್ಗಗಳೆಂದು ಮತ್ತು ಉಳ್ಳ ವರ್ಗದವರ ಮೇಲೆ ಇಲ್ಲದವರು ಹೋರಾಟವನ್ನು ನಡೆಸಿ ವರ್ಗ ಸಂಘರ್ಷದ ಮೂಲಕ ಕಮ್ಯೂನಿಷ್ಟ್ ವ್ಯವಸ್ಥೆಯು ಏರ್ಪಡುತ್ತದೆಂದು ಕಮ್ಯೂನಿಷ್ಟರು ಹೇಳುತ್ತಿದ್ದರು. ಆದರೆ ಎರಡನೇ ಪ್ರಪಂಚ ಯುದ್ಧದ ನಂತರ ಕಮ್ಯೂನಿಷ್ಟ್ ವ್ಯವಸ್ಥೆಯ ಕಪಿಮುಷ್ಟಿಯೊಳಗೆ ಸಿಲುಕಿಕೊಂಡ ಪೂರ್ವ ಯೂರೋಪಿನ ದೇಶಗಳಲ್ಲಿ ಆ ವಿಧವಾಗಿ ಕಮ್ಯೂನಿಷ್ಟ್ ವ್ಯವಸ್ಥೆ ಏರ್ಪಡಲಿಲ್ಲ. ರಷ್ಯಾದವರ ಆಕ್ರಮಣಕ್ಕೆ ಸಿಲುಕಿದ ದೇಶಗಳೆಲ್ಲಾ ಎರಡನೇ ಪ್ರಪಂಚ ಯುದ್ಧದ ನಂತರ ಕಮ್ಯೂನಿಷ್ಟ್ ರಾಜ್ಯಗಳಾಗಿ ಬದಲಾದವು ಅಲ್ಲೆಲ್ಲಾ ರಷ್ಯಾದ ಲಕ್ಷಾಂತರ ಸೈನಿಕರ ಬಲವು ಅವನ್ನು ಮಾರ್ಪಡಿಸಿತು! ಎರಡನೇ ಪ್ರಪಂಚ ಯುದ್ಧದ ನಂತರ ಪೂರ್ವ ಯೂರೋಪಿನ ದೇಶಗಳು ಬಯಸಿದ್ದು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗಳನ್ನುಳ್ಳ ದೇಶಗಳನ್ನು. ಆದರೆ ಸೋವಿಯತ್ ಬೀಭತ್ಸಕಾಂಡವು ಈ ಪ್ರಜೆಗಳ ಆಕಾಂಕ್ಷೆಗಳನ್ನು ಬಲಿಕೊಟ್ಟಿತು. ಅಷ್ಟೇ ಏಕೆ, ಸೋವಿಯತ್ ರಷ್ಯಾವೂ ಸಹ ೧೯೧೭ರಲ್ಲಿ ಬಯಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ. ಝಾರ್ ಚಕ್ರವರ್ತಿಗಳ ನಿರಂಕುಶ ಆಡಳಿತದಿಂದ ಭಯಭ್ರಾಂತರಾಗಿದ್ದ ಪ್ರಜೆಗಳು ಬದಲಾವಣೆಯನ್ನು ಬಯಸಿದರು. ಅವರು ಚಳವಳಿಗಳನ್ನು ಮಾಡಿದರು. ತಾತ್ಕಾಲಿಕ ಪ್ರಜಾಪ್ರಭುತ್ವ ವ್ಯವಸ್ಥೆಯು ಆಗ ಏರ್ಪಟ್ಟಿತು. ಝಾರ್ ಚಕ್ರವರ್ತಿಗಳ ಆಡಳಿತವು ಕೊನೆಗೊಂಡಿತು. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಅಲ್ಲಿ ಚುನಾವಣೆಗಳು ನಡೆದವು. ಅಲ್ಲಿ ಶಾಸನ ಸಭೆಯು ಏರ್ಪಟ್ಟಿತು. ಅಲೆಗ್ಜಾಂಡರ್ ಕೆರೆನ್ಸ್ಕಿ ನಾಯಕತ್ವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ಸರ್ಕಾರದ ಆಡಳಿತವು ಏರ್ಪಟ್ಟಿತು. ಆದರೆ ಸೈನಿಕ ದಳಗಳ ಸಹಾಯದಿಂದ ಕಮ್ಯೂನಿಷ್ಟರು ಕುತಂತ್ರ ನಡೆಸಿ, ಕೆರೆನ್ಸ್ಕಿಯ ನಾಯಕತ್ವದ ಸರ್ಕಾರವನ್ನು ಅಂದರೆ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿದರು. ೧೯೨೪ರವರೆಗೆ ಲೆನಿನ್ ತದನಂತರ ೧೯೫೩ರವರೆಗೆ ಸ್ಟ್ಯಾಲಿನ್ ಸುಮಾರು ಎರಡು ಕೋಟಿ ಜನರನ್ನು ಹತ್ಯೆ ಮಾಡಿಸಿದರು. ಆದ್ದರಿಂದ ೧೯೧೭ರಂದು ನಡೆದದ್ದು ಕ್ರಾಂತಿಯಲ್ಲ ಅದು ಕುತಂತ್ರ. ಅದು ಅಕ್ಟೋಬರ್ ಕುತಂತ್ರ (ಕ್ಯಾಲೆಂಡರಿನಲ್ಲಿ ಅಳವಡಿಸಿಕೊಂಡ ಬದಲಾವಣೆಯಿಂದ ಆ ಅಕ್ಟೋಬರ್ ತಿಂಗಳು ನವೆಂಬರ್ ತಿಂಗಳಾಗಿ ಮಾರ್ಪಟ್ಟಿತು)
ಮುಂದುವರೆಯುವುದು.........
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್‌ ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು  ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ. 
 
ಹಿಂದಿನ ಲೇಖನ ಭಾಗ - ೬: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು  ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%95...
 
 
 
 
 

Rating
No votes yet

Comments