ಭಾಗ ೯ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಧರ್ಮಬುದ್ಧಿಗೆ ತೊಡಕಾಗಿರುವ ಭಾವ ದಾಸ್ಯ (ಮಾನಸಿಕ ಗುಲಾಮಿತನ)......
ಮಹಾಕವಿ ನನ್ನಯ ಮತ್ತು ಮನ್ಮಥನ ಚಿತ್ರಗಳ ಕೃಪೆ: ಗೂಗಲ್
ಬ್ರಿಟಿಷರು ನಮ್ಮ ದೇಶದ ಮೇಲೆ ವಾಣಿಜ್ಯ ದುರಾಕ್ರಮಣವನ್ನು ಮಾಡಿದರು, ಅದರೊಂದಿಗೆ ರಾಜಕೀಯ ದುರಾಕ್ರಮಣವನ್ನೂ ಮಾಡಿದರು, ಇದಕ್ಕಾಗಿ ಅವರು ಅನುಸರಿಸಿದ ಮಾರ್ಗವು ಭೌತಿಕ ಬೀಭತ್ಸ್ಯಕಾಂಡ! ಭಾರತದ ನೆಲದಲ್ಲಿ ಅವರ ವಾಣಿಜ್ಯ, ರಾಜಕೀಯ ಅಧಿಕಾರಗಳು ಸ್ಥಿರಪಟ್ಟ ಮೇಲೆ ಅವರು ತಾವು ಅಕ್ರಮವಾಗಿ ಗಳಿಸಿಕೊಂಡ ಅಧಿಕಾರವನ್ನು ಸಕ್ರಮಗೊಳಿಸಿಕೊಳ್ಳಲು ಆರಿಸಿಕೊಂಡ ಮಾಧ್ಯಮವೇ ಬೌದ್ಧಿಕ ಬೀಭತ್ಸ್ಯಕಾಂಡ! ಈ ಬೌದ್ಧಿಕ ಬೀಭತ್ಸ್ಯಕಾಂಡವು ಮೆಕಾಲೆ ವಿದ್ಯಾವಿಧಾನದ ರೂಪತೆಳೆದು, ಸನಾತನ ಭಾರತದ ಸಾಮಾಜಿಕ ವ್ಯವಸ್ಥೆಯ ರೂಪುರೇಷೆಗಳನ್ನು ವಿಕೃತಗೊಳಿಸಿ, ಭಾರತೀಯರ ಬುದ್ಧಿಯನ್ನು ಭಾವದಾಸ್ಯಕ್ಕೊಳಗಾಗುವಂತೆ ಮಾಡಿತು - ಮಾನಸಿಕ ಗುಲಾಮಿತನವು ಭಾರತೀಯರ ಮೆದುಳಿನಲ್ಲಿ ಬೇರೂರುವಂತೆ ಮಾಡಿತು. ಕ್ರಿ.ಶ. ೧೭೭೫ರ ಸುಮಾರಿನಲ್ಲಿ ವಿಲಿಯಂ ಜೋನ್ಸ್ ಎನ್ನುವ ಬೀಭತ್ಸ್ಯಕಾರನು ಇದಕ್ಕೆ ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಿದನು. ಹಾಗೆ ಹದಗೊಂಡ ಭೂಮಿಕೆಯ ಮೇಲೆ ಥಾಮಸ್ ಬಾಬಿಂಗ್ಟನ್ ಮೆಕಾಲೆ ಕ್ರಿ.ಶ. ೧೮೩೪ರಲ್ಲಿ ವಿಷಬೀಜವನ್ನು ಬಿತ್ತಿದನು. ಕ್ರಿ.ಶ. ೧೮೫೭ರಲ್ಲಿ ಬಿಷಪ್ ರಾಬರ್ಟ್ ಕಾಲ್ಡ್ವೆಲ್ ಅದರ ವಿಷಫಲಗಳನ್ನು ಕೊಯ್ಲು ಮಾಡಿ ಎಲ್ಲರೂ ತಿನ್ನುವಂತೆ ಮಾಡಿದ, ಭಾರತೀಯರನ್ನು ಸಾಂಸ್ಕೃತಿಕವಾಗಿ ವಿಭಜಿಸಲು ಅವನು ಕುಟಿಲ ಯೋಜನೆಗಳನ್ನು ರೂಪಿಸಿದ. ’ಜೋನ್ಸ್-ಮೆಕಾಲೆ-ಕಾಲ್ಡ್ವೆಲ್’ ದುಷ್ಟತ್ರಯರ ಸಮಷ್ಟಿ ವ್ಯೂಹವೇ ಬ್ರಿಟಿಷರು ಅನುಷ್ಠಾನಕ್ಕೆ ತಂದ ಮೆಕಾಲೆ ವಿದ್ಯಾವಿಧಾನ. ಅದರ ಪುಣ್ಯವಿಶೇಷದಿಂದಾಗಿ ಇಂದಿಗೂ ಭಾವದಾಸ್ಯವು ಮುಂದುವರೆಯುತ್ತಿದೆ.....
ಧರ್ಮಬುದ್ಧಿಗೆ ತೊಡಕಾಗಿರುವ ಭಾವ ದಾಸ್ಯ (ಮಾನಸಿಕ ಗುಲಾಮಿತನ)......
ಬಂಗಾರದೆಳೆಗಳ ಮಂಗಳಕರ
ಭಾರತೀಯ ಮನೋರಥವು
ಪಡುವಣದ ಥಳಕು ಜರಿಗಳಲಿ
ಸಿಲುಕಿ ನಲುಗುತಿಹುದು!
ಮನೆಯಡಿಗೆಯ ರುಚಿಯ ಮರೆತ
ಭಾವದಾಸ್ಯದ ಮೇಧಾವಿಗಳು
ಬಿಳಿಯಮಲಿನ ಚಾಕಲೇಟುಗಳ
ಸವಿಯ ಮೆದ್ದು ಚಪ್ಪರಿಸುತಿಹರು!
ಮನ್ಮಥನಿಗೂ ಧರ್ಮಕ್ಕೂ ಸಂಬಂಧವೇನು? ಎಂದು ನಮ್ಮಲ್ಲಿ ಕೆಲವರಿಗೆ ಸಂದೇಹುವುಂಟಾಗುತ್ತದೆ. ಮನ್ಮಥನು ಪ್ರೇಮವನ್ನು ಹುಟ್ಟಿಸುವವನು, ಪ್ರಣಯವನ್ನು ಉದ್ದೀಪನಗೊಳಿಸುವವನು, ಮೋಹವನ್ನು ಕೆರಳಿಸುವವನು, ಮದುವೆಯನ್ನೂ ಮಾಡುವವನು! ಹಾಗಾದರೆ ಧರ್ಮಕ್ಕೂ ರತಿಪತಿಗೂ ಸಂಬಂಧವೇನು? ಎಂದು ಆ ಕೆಲವರಿಗೆ ಸಂದೇಹವೂ ಉಂಟಾಗಬಹುದು. ಇಲ್ಲಿ ಆ ಕೆಲವರು ಎಂದರೆ ಉನ್ನತ ಸ್ಥಾನಗಳನ್ನಲಂಕರಿಸಿದ ಅಕ್ಷರಸ್ಥರು. ಈ ಅಕ್ಷರಸ್ಥರು ಅತೀ ವಿಶಿಷ್ಠರು - ಪ್ರೊಪೆಸರುಗಳು, ಟೀಚರುಗಳು, ಡಾಕ್ಟರುಗಳು, ವಕೀಲರು, ಸಾಹಿತ್ಯಕೋವಿದರು. ಇವರೆಲ್ಲಾ ಆ ಕೆಲವರು! ಈ ಕೆಲವರೆಲ್ಲರೂ ’ಬ್ರಿಟಿಷ್ ವಿದ್ಯಾವಿಧಾನದ ಪ್ರಮಾಣಗಳಿಗೆ’ ಬದ್ಧರಾದವರು! ಈ ವಿದ್ಯಾವಿಧಾನಕ್ಕೆ ಕ್ರಿ.ಶ.೧೮೩೫ರಿಂದ ಇತ್ತೀಚೆಗಷ್ಟೇ ಒಂದು ಇತಿಹಾಸವೇರ್ಪಟ್ಟಿದೆ. ಇದು ಚರಿತ್ರೆ ಏಕೆಂದರೆ, ಥಾಮಸ್ ಬಾಬಿಂಗ್ಟನ್ ಮೆಕಾಲೆ ಎನ್ನುವ ಬ್ರಿಟಿಷ್ ನ್ಯಾಯಾಂಗ ನಿಪುಣ, ರಾಜಕೀಯ ಮುತ್ಸದ್ಧಿ ಹಾಗೂ ವಿದ್ಯಾವೇತ್ತ ಆ ಸಂವತ್ಸರದಲ್ಲಿ ಈ ವಿದ್ಯಾ ವಿಧಾನವನ್ನು ನಮಗೆ ಪ್ರಸಾದಿಸಿದ! ಇತ್ತೀಚಿಗಿನ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಚರಿತ್ರೆಯ ಪಾಠಗಳಲ್ಲಿ ’ವಿದ್ಯಾ ಚರಿತ್ರೆ - ಹಿಸ್ಟರಿ ಆಫ್ ಎಜ್ಯುಕೇಷನ್!’ ಎನ್ನುವ ಒಂದು ಅಧ್ಯಾಯವೂ ಇದೆ. ವಾರನ್ ಹೇಸ್ಟಿಂಗ್ಸ್ ಕಲಕತ್ತಾ ಮಹಾನಗರದಲ್ಲಿ ಒಂದು ಮದರಸಾವನ್ನು ಆರಂಭಿಸಿದನು. ಬ್ರಿಟಿಷ್ ಸರ್ಕಾರದಲ್ಲಿ ಕೆಲಸ ಮಾಡಲು ಜವಾಬ್ದಾರಿಯುಳ್ಳ ಮುಸ್ಲಿಮರಿಗೆ ಶಿಕ್ಷಣವನ್ನು ಕೊಡುವುದಕ್ಕಾಗಿ ಈ ಮದರಸಾವನ್ನು ಪ್ರಾರಂಭಿಸಲಾಯಿತು ಎನ್ನುವ ವಿಷಯದೊಂದಿಗೆ ಈ ವಿದ್ಯಾ ಚರಿತ್ರೆಯು ಆರಂಭಗೊಳ್ಳುತ್ತದೆ. ಕ್ರಿ.ಶ. ೧೭೭೨ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಆಗಿ ನೇಮಕಗೊಂಡ ವಾರನ್ ಹೇಸ್ಟಿಂಗ್ಸ್ ಎನ್ನುವವನು ಒಬ್ಬ ಬೀಭತ್ಸ್ಯಕಾರ! ಅವನ ಕಾಲದಲ್ಲೇ ಇಂಗ್ಲೀಷರ ಭೌತಿಕ ಬೀಭತ್ಸ್ಯವು ಪರಾಕಾಷ್ಠೆಯನ್ನು ಮುಟ್ಟಿತು. ಬೌದ್ಧಿಕ ಬೀಭತ್ಸ್ಯಕಾಂಡಕ್ಕೆ ಅಂಕುರಾರ್ಪಣವೂ ಸಹ ಅವನ ಕಾಲದಲ್ಲೇ ಜರುಗಿತು! ನಮ್ಮವರು ಇಂದಿಗೂ ಇದೇ ವಿದ್ಯಾವಿಧಾನವನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ.....
ಮೆಕಾಲೆ ವಿದ್ಯಾವಿಧಾನ ಅಥವಾ ಬ್ರಿಟಿಷರು ಆರಂಭಿಸಿದ ವಿಧಾನವು, ವಿದ್ಯೆಗೆ ಹೊಸ ಭಾಷ್ಯವನ್ನು ಬರೆಯಿತು - ವಿದ್ಯೆ ಅಂದರೆ ಕೇವಲ ಅಕ್ಷರಾಸ್ಯತೆ! ಅಲ್ಲಿಯವರೆಗೂ ನಮ್ಮಲ್ಲಿ ಅಕ್ಷರಭ್ಯಾಸಕ್ಕೆ ಸಂಬಂಧವಿಲ್ಲದಂತೆ ಅನೇಕ ವಿದ್ಯೆಗಳು ವಿಕಾಸಗೊಂಡವು. ಅಕ್ಷರ ಕಲಿಕೆಯು ವಿದ್ಯಾಭ್ಯಾಸದ ಒಂದು ಭಾಗವಾಗಿ ಮಾತ್ರವೇ ಇತ್ತು. ಆದರೆ ಇಂಗ್ಲೀಷಿನ ದೊಡ್ಡಸ್ತಿಕೆಯು ಪ್ರಬಲಗೊಂಡ ಮೇಲೆ "ಅಕ್ಷರಾಸ್ಯತೆ ಮಾತ್ರವೇ ವಿದ್ಯೆ" ಎನ್ನುವ ಪ್ರಚಾರವು ಆರಂಭವಾಯಿತು. ಅಕ್ಷರಗಳನ್ನು ಬರೆಯದೆ ನಾಲ್ಕು ವೇದಗಳನ್ನು ಹೇಳಬಲ್ಲವನೂ ಸಹ ವಿದ್ಯಾವಂತನಲ್ಲದೇ ಹೋದ! ಅಕ್ಷರಗಳನ್ನು ಬರೆಯದ ವೈದ್ಯರು, ಶಿಲ್ಪಿಗಳು, ಸ್ಥಪತಿಗಳು (ವಾಸ್ತು ಶಿಲ್ಪಿಗಳು), ಕೃಷಿ ವಿಜ್ಞಾನ ನಿಪುಣರು, ಪಾರಿಶ್ರಮಿಕ ಉತ್ಪತ್ತಿದಾರರು, ಮೊದಲಾದವರು ವಿದ್ಯಾವಂತರ ಪಟ್ಟಿಯಿಂದ ತೊಲಗಿಸಲ್ಪಟ್ಟರು. ಸ್ಥಾಪತ್ಯ ವಿದ್ಯೆ, ವೈದ್ಯ ವಿದ್ಯೆ, ಹೊಲದಲ್ಲಿ ವ್ಯವಸಾಯ ಮಾಡಿ ಬೆಳೆಗಳನ್ನು ಬೆಳೆಯುವ ಕೃಷಿ ವಿದ್ಯೆ, ಶಿಲ್ಪ, ನಾಟ್ಯ, ಸಂಗೀತ ಇವೆಲ್ಲವೂ ವಿದ್ಯೆಗಳೇ. ಈ ವಿದ್ಯೆಗಳನ್ನು ಹೇಳಿಕೊಟ್ಟವರೆಲ್ಲರೂ ಅಕ್ಷರಗಳನ್ನು ಹೇಳಿಕೊಡಲಿಲ್ಲ, ಕೆಲವರಷ್ಟೇ ಅವನ್ನು ಹೇಳಿಕೊಟ್ಟರು. ಆದರೆ ಆ ವಿದ್ಯೆಗಳ ಮೂಲಕ ಸಾವಿರಾರು ವರ್ಷಗಳ ಕಾಲ ಆಯಾ ವಿದ್ಯೆಗಳಲ್ಲಿ ನಿಪುಣರಾದವರು ಸಮಾಜವನ್ನು ಪರಿಪುಷ್ಟಗೊಳಿಸಿದರು. ಮೆಕಾಲೆ ವಿದ್ಯೆ ಬಂದ ನಂತರ ಇವೆಲ್ಲವೂ ವಿದ್ಯೆಗಳಾಗದೇ ಹೋಗಿವೆ! ಆಂಗ್ಲರ ಅಧಿಕಾರವು ಸ್ಥಾಪನೆಯಾದ ಮೇಲೆ, ಅಕ್ಷರವಂತರನ್ನಷ್ಟೇ ವಿದ್ಯಾವಂತರನ್ನಾಗಿ ಪರಿಗಣಿಸಲಾಗುತ್ತಿದೆ.
ಈ ವಿಧಾನವನ್ನು ಅನುಮೋದಿಸುವ ಕೆಲವರಿಗೆ ಕೆಲವೊಂದು ’ಸಂದೇಹ’ಗಳು ಬರುವುದು ಸಹಜವೇ! ಯಾವ ಸಂದೇಹ? ಮನ್ಮಥನಿಗೂ ಧರ್ಮಕ್ಕೂ ಏನು ಸಂಬಂಧವೆನ್ನುವ ಸಂದೇಹ......! ತೆಲುಗು ಪದ್ಯರಚನಾ ವಿದ್ಯೆಯಲ್ಲಿ ಆದ್ಯನಾದ ಕವಿ ನನ್ನಯನು ರಾಜ ರಾಜನರೇಂದ್ರನ ಕುರಿತು ಹೀಗೆ ಬರೆದಿದ್ದಾನೆ!
"ಘನದುರಿತಾನು ಬಂಧ ಕಲಿಕಾಲಜ ದೋಷ ತುಷಾರ ಸಂಹತಿನ್
ತನ ಉದಯಪ್ರಭಾವಮುನ ದಪ್ಪುಗ ಜೋಷಿ ಜಗಜ್ಜನಾನು ರಂ
ಜನಮಗು ರಾಜ್ಯ ಸಂತತ ವಸಂತ ನಿತಾಂತ ವಿಭೂತಿ ನೆಂತಯನ್
ದನರು ಚಳುಕ್ಯ ಮನ್ಮಥುಡು ಧರ್ಮನಿಬದ್ಧ ದಯಾರ್ದ್ರಬುದ್ಧಿಯೈ"
ಆ ಪದ್ಯದ ಸ್ಥೂಲ ಅನುವಾದವು ಹೀಗಿದೆ:
ಘನದುರಿತದನುಬಂಧದ ಕಲಿದೋಷ ಪ್ರತೀಕವಾದ ತುಷಾರವ ಸಂಹರಿಪ
ತನ್ನುದಯದ ಪ್ರಭಾವದಿಂ ತಿಮಿರವ ತೊಲಗಿಸಿ ಪ್ರಜಾ ಜನಗಳ ರಂಜಿಪ
ರಾಜ್ಯವ್ಯವಸ್ಥೆಯ ವಸಂತನು ಸಂತತವಿರುವಂತೆ ಮಾಡುವ ವಿಭೂತಿಯಂತಿಹ
ದೊರೆ ಚಾಳುಕ್ಯ ಮನ್ಮಥನು ಧರ್ಮನಿಬದ್ಧ ದಯಾರ್ದ್ರಬುದ್ಧಿಯುಳ್ಳವನಾಗಿಹ!
ಈ ಚಂಪಕಮಾಲ ಪದ್ಯದಲ್ಲಿ ಕವಿ ನನ್ನಯ, ದೊರೆಯಾದ ರಾಜರಾಜ ನರೇಂದ್ರನನ್ನು ಮನ್ಮಥನಿಗೆ ಹೋಲಿಸಿದ್ದಾನೆ. ಕಲಿಯುಗದಲ್ಲಿ ಸಹಜವಾಗಿ ಸಂಭವಿಸುವ ಪಾಪಗಳನ್ನು ಮಂಜಿನ ಹನಿಗಳ ಸಮೂಹಕ್ಕೆ ಹೋಲಿಸಿದರೆ, ಪ್ರಜೆಗಳಿಗೆ ಒಳಿತನ್ನುಂಟು ಮಾಡುವ ರಾಜ್ಯವ್ಯವಸ್ಥೆಯನ್ನು ವಸಂತ ಋತುವಿನೊಂದಿಗೆ ಕವಿಯು ಹೋಲಿಸಿದ್ದಾನೆ. ಕಂದರ್ಪನು (ಮನ್ಮಥ) ಧರ್ಮನಿಬದ್ಧವಾದ ದಯಾರ್ದ್ರ ಬುದ್ಧಿಯನ್ನುಳ್ಳವನೆನ್ನುವ ಸನಾತನ ಸತ್ಯವನ್ನು ಅರುಹಿದ್ದಾನೆ. ಮಂಜಿನಿಂದ ಕೂಡಿದ ಶಿಶಿರ ಕಾಲವನ್ನು (ಚಳಿಗಾಲ) ಒಳ್ಳೆಯ ಕಾಲವೆಂದು ಭಾರತೀಯರು ಎಂದಿಗೂ ಪರಿಗಣಿಸಲಿಲ್ಲ. ಆದ್ದರಿಂದ ಕಲಿಕಾಲವೆನ್ನುವ ಹೇಮಂತ, ಶಿಶಿರ ಋತುಗಳನ್ನು ನಿರಂತರವೂ ವಸಂತವಾಗಿರುವ ಕೃತಯುಗವು ತೊಲಗಿಸಲಿ ಎನ್ನುವುದು ಮಹಾಕವಿ ನನ್ನಯನ ಆಶಯ. ಧರ್ಮಬುದ್ಧಿಯನ್ನುಳ್ಳ ಮನ್ಮಥನು ಉದಯಿಸುವುದರ ಮೂಲಕ ವಸಂತ ಕಾಲವು ಆರಂಭವಾಗುತ್ತದೆ! ಅದೇ ವಿಧವಾಗಿ ಚಾಳುಕ್ಯ ಮನ್ಮಥನಾದ ರಾಜರಾಜನರೇಂದ್ರನು ಧರ್ಮನಿಬದ್ಧನಾಗಿ ವಿಶ್ವಜನರಂಜಕವಾದ (ಜನರಿಗೆ ಒಳಿತನ್ನುಂಟು ಮಾಡುವ) ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದನೆನ್ನುವ ವಿಷಯವನ್ನು ಕವಿ ನನ್ನಯ ಚಮತ್ಕಾರಿಕವಾಗಿ ಹೇಳಿದ್ದಾನೆ. ಧರ್ಮಕ್ಕೆ ಬದ್ಧರಾದವರ ಬುದ್ಧಿಯು ದಯೆಯಿಂದ ಆರ್ದ್ರವಾಗುತ್ತದೆ. ಧರ್ಮಬದ್ಧನಾದ ಅನಂಗನು (ಮನ್ಮಥನು ಅವಯವಗಳಿಲ್ಲದ ಮನಸ್ಸಿನ ಪ್ರತಿರೂಪನಾದ್ದರಿಂದ ಅವನಿಗೆ ಅನಂಗನೆನ್ನುವ ಹೆಸರೂ ಇದೆ) ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವ ಮಂಜುರಹಿತ ವಸಂತ ಋತುವನ್ನು ಪ್ರಕೃತಿಯಲ್ಲಿ ಉಂಟು ಮಾಡುತ್ತಾನೆ. ಅದೇ ವಿಧವಾಗಿ ಧರ್ಮಬದ್ಧನಾದ ರಾಜರಾಜನರೇಂದ್ರನು ದೋಷರಹಿತ ರಾಜ್ಯವನ್ನು ಸ್ಥಾಪಿಸಿದನು.
ಮನ್ಮಥನಿಗೂ ಧರ್ಮಕ್ಕೂ ಸಂಬಂಧವೇನು ಎನ್ನುವ ಸಂದೇಹವು ಸುಮಾರು ಒಂಬತ್ತು ನೂರು ವರ್ಷಗಳ ಕಾಲ ಮೇಧಾವಿಗಳಿಗೆ ಉಂಟಾಗಲಿಲ್ಲ. ಮನ್ಮಥನು ಪ್ರೇಮವನ್ನು ಹುಟ್ಟುಹಾಕುತ್ತಾನೆ ಮತ್ತು ಮದುವೆಯನ್ನು ಮಾಡಿಸಿ ಗೃಹಸ್ಥಾಶ್ರಮವು ಏರ್ಪಡುವಂತೆ ಮಾಡುತ್ತಾನೆ. ಭಾರತೀಯ ಸಂಸ್ಕೃತಿಯಲ್ಲಿ ಉಳಿದ ಮೂರು ಆಶ್ರಮಗಳಿಗೂ ಗೃಹಸ್ಥನ ಧರ್ಮವೇ ಆಧಾರ. ಗೃಹಸ್ಥನು, ಬ್ರಹ್ಮಚಾರಿ (ವಿದ್ಯಾರ್ಥಿ), ವಾನಪ್ರಸ್ಥಿ ಮತ್ತು ಸಂನ್ಯಾಸಿಯನ್ನು ಪೋಷಿಸುತ್ತಾನೆ. ಇದು ನಾಲ್ಕು ಸರ್ಗಗಳಲ್ಲಿ ರಚಿತವಾದ ಸನಾತನ ಜೀವನದ ಸಮಗ್ರ ಕಾವ್ಯ. ಈ ಸಮಗ್ರತೆಯನ್ನು ಸುಸ್ಥಿರಗೊಳಿಸುವವನು ಮನ್ಮಥ, ಏಕೆಂದರೆ ಅದು ಅವನ ಧರ್ಮ. ಸೃಷ್ಟಿಯ ಆದಿಯಲ್ಲಿ ಮನ್ಮಥನು ಪ್ರಪ್ರಥಮ ಪ್ರೇಮಿಗಳನ್ನು ಒಂದು ಮಾಡಿ ಪರಿಣಯವನ್ನು ಮಾಡಿಸಿದ. ಆ ಪ್ರಪ್ರಥಮ ಪ್ರಣಯಮೂರ್ತಿಗಳು - ಶಿವಪಾರ್ವತಿಯರು! ಸುಟ್ಟು ಭಸ್ಮವಾದರೂ ಸಹ ಮದನನು ತನ್ನ ಪಾಲಿನ ಧರ್ಮವನ್ನು ಬಿಡಲಿಲ್ಲ... ಅದೇ ಧರ್ಮ. ಕಾಮನು ಧರ್ಮವನ್ನು ಸ್ವಭಾವವನ್ನಾಗಿ ಉಳ್ಳವನು. ಶೃಂಗಾರವು ಅವನ ಸ್ವರೂಪವಾದರೆ ಧರ್ಮವು ಅವನ ಸ್ವಭಾವ! ಅದಕ್ಕಾಗಿ ಆ ಆದಿ ವಧೂ-ವರರ ಪ್ರಣಯವು ಕುಟಂಬವಾಗಿ ಪರಿವರ್ತತವಾಯಿತು ಮತ್ತದು ಸಂಸ್ಕೃತಿಗೆ ಭೂಮಿಕೆಯಾಯಿತು. ಈ ಸತ್ಯ ಸಂಗತಿಯ ಕುರಿತು ಒಂಬತ್ತು ಶತಮಾನಗಳಷ್ಟು ಕಾಲ ಈ ದೇಶದಲ್ಲಿನ ಮೇಧಾವಿಗಳಿಗೆ, ಪಂಡಿತರಿಗೆ, ಸಾಹಿತ್ಯ ವಿಮರ್ಶಕರಿಗೆ ಸಂದೇಹವು ಉಂಟಾಗಲಿಲ್ಲ. ಮೆಕಾಲೆ ವಿದ್ಯಾವಿಧಾನವು ಅಮಲಿಗೆ ಬಂದ ನಂತರ ನಮ್ಮ ಮೇಧಾವಿಗಳ ಮೆದಳಿನೊಳಗೆ ಸಂದೇಹದ ಹುಳು ಹೊಕ್ಕಿತು!
ಆದ್ದರಿಂದ ಕವಿ ನನ್ನಯನ ಈ ಪದ್ಯವನ್ನು ಕುರಿತು ವ್ಯಾಖ್ಯಾನಿಸುವ ಆಧುನಿಕರಾದ ಕೆಲವರು ಈ ಸಂದೇಹವನ್ನು ವ್ಯಕ್ತಪಡಿಸುತ್ತಾರೆ. ಅವರು ಒಳ್ಳೆಯವರು, ಪಂಡಿತರು, ಆದರೆ ಅವರು ಪಾಶ್ಚಾತ್ಯ ಸಿದ್ಧಾಂತ ಭೂಮಿಕೆಯ ಮೇಲೆ ಸಾಹಿತ್ಯ ಕೃಷಿಯನ್ನು ಮಾಡುತ್ತಿದ್ದಾರೆ. ಅವರ ಸಮೀಕ್ಷೆಗಳಿಗೆ, ವಿಮರ್ಶೆಗಳಿಗೆ, ವಿಶ್ಲೇಷಣೆ, ವ್ಯಾಖ್ಯಾನಗಳಿಗೆ ಪ್ರಮಾಣಗಳು ಪಾಶ್ಚಾತ್ಯರ ಮಾನದಂಡಗಳು ಮಾತ್ರವೇ ಆಗಿವೆ. "ಪ್ಲಾಟೋ ಏನು ಹೇಳಿದ್ದಾನೆಂದರೆ ಎಂದು ಒಬ್ಬ ಸಂಸ್ಕೃತ ಸಾಹಿತ್ಯವೇತ್ತ ಉಪಕ್ರಮಿಸುತ್ತಾನೆ......"
"ಮ್ಯಾಥ್ಯೂ ಆರ್ನಾಲ್ಡ್ ಕವಿತೆಯ ಸ್ವಭಾವದ ಕುರಿತು ಹೀಗೆ ಹೇಳಿದ್ದಾನೆ...... " ಎಂದು ಒಬ್ಬ ಆಂಧ್ರ ಸಾಹಿತ್ಯದ ವೀರ ವಿಮರ್ಶಕ ಗರ್ಜಿಸುತ್ತಾನೆ! ಅಷ್ಟೇ ಅಲ್ಲ, ಮೆಕಾಲೆ ವಿದ್ಯಾವಿಧಾನಗ್ರಸ್ತರಾದ ಕನ್ನಡವನ್ನೊಳಗೊಂಡು ಇತರೇ ಭಾರತೀಯ ಭಾಷಾ ಸಾಹಿತಿಗಳೆಲ್ಲರೂ ಮೂರು ಅಥವಾ ನಾಲ್ಕು ಶತಮಾನಗಳನ್ನು ದಾಟಿ ಅದರ ಹಿಂದೆ ಇಣುಕಿ ನೋಡುವ ಸಾಹಸವನ್ನು ಮಾಡುವುದಿಲ್ಲ!
ಅವರ ದೃಷ್ಟಿಯೂ ಸಹ ಪಾಶ್ಚಾತ್ಯರ ಪರಿಧಿಯನ್ನು ಅತಿಕ್ರಮಿಸಿ ಅದರಾಚೆಗಿನ ಸಾಹಿತ್ಯಸೀಮೆಗಳನ್ನು ನೋಡಲಾರದು, ಒಂದು ವೇಳೆ ಅವರು ಇಣುಕಿ ನೋಡಿದರೂ ಸಹ ಅವರಿಗೆ ಏನೂ ಗೋಚರಿಸದು. ಏಕೆಂದರೆ ಮೆಕಾಲೆ ವಿದ್ಯಾವಿಧಾನಕ್ಕೆ ಆ ಶಕ್ತಿಯಿಲ್ಲ! ಆದ್ದರಿಂದ ಮನ್ಮಥನು ಧರ್ಮಕ್ಕೆ ಕಟ್ಟು ಬೀಳುವವನೆನ್ನುವ ಸತ್ಯವು ಅವರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ಧರ್ಮ ಎಂದರೆ ಬಿಲ್ಲು ಎನ್ನುವ ಅರ್ಥವೂ ಇದೆ, ಆದ್ದರಿಂದ ಧರ್ಮನಿಬದ್ಧನೆಂದರೆ ಧನುರ್ಧಾರಿ ಎಂದು ಅರ್ಥೈಸಬೇಕೆಂದು ಆ ಕೆಲವರು ವ್ಯಾಖ್ಯಾನಿಸಿದ್ದಾರೆ. ಮನ್ಮಥನು ಧನುರ್ಧಾರಿ ಅಂದರೆ ಬಿಲ್ಲನ್ನು ಹೊಂದಿರುವವನು ಎನ್ನುವುದು ಬಹಳ ಸಣ್ಣ ವಿಷಯ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಯಾವ ಅರ್ಥವು ಸ್ಪುರಿಸಿದರೇನಂತೆ, ಅದರಿಂದಾಗಬೇಕಾದ್ದೇನು ಎಂದು ಕೇಳುವವರೂ ಇದ್ದಾರೆ. ಹೀಗೆ ಶತಮಾನಗಳ ಕಾಲ ನಾವು ಸಣ್ಣ ಸಣ್ಣ ವಿಷಯಗಳನ್ನು ಉಪೇಕ್ಷಿಸಿದ್ದೇವೆ. ಹೀಗೆ ಕಡೆಗಣಿಸಿ, ಕಡೆಗಣಿಸಿ, ಕಡೆಗೆ ರಾಷ್ಟ್ರದ ಸಾಂಸ್ಕೃತಿಕ ವೃಕ್ಷವನ್ನು ಹೊಡೆದುರುಳಿಸಲು ಸಿದ್ಧವಾಗುತ್ತಿದ್ದೇವೆ! ಮೆಕಾಲೆ ವಿದ್ಯೆಯು ನಮ್ಮ ಚಾಪೆಯ ಕೆಳಗೆ ನುಸುಳಿರುವ ವಿಷದ ನೀರಾಗಿದೆ, ಹೀಗೆಯೇ ಬಿಟ್ಟರೆ ಕ್ರಮೇಣವಾಗಿ ಅದು ಬೃಹತ್ತಾದ ಸಮುದ್ರವಾಗುತ್ತದೆ!
ಕೇವಲ ವ್ಯಾಲೆಂಟನ್ನ ಶೃಂಗಾರವನ್ನು ಕುರಿತು ಓದಿರುವವರಿಗೆ ಹಾಗು ಚರ್ಚಿಸುವವರಿಗೆ ಮನ್ಮಥನ ಧರ್ಮನಿಬದ್ಧ ಪ್ರಣಯದ ಕುರಿತ ತಿಳುವಳಿಕೆಯಾದರೂ ಎಲ್ಲಿಂದ ಬರಬೇಕು? ಧರ್ಮ, ಅರ್ಥ, ಕಾಮ, ಮೋಕ್ಷಗಳು ಸಮಗ್ರತೆಯ ಭಾಗಗಳು. ಈ ಸಮಗ್ರತೆಯ ದೃಷ್ಟಿ ಕವಿ ನನ್ನಯ್ಯನದು, ನಮ್ಮ ಭಾರತೀಯರದು. ಈ ಸಮಗ್ರತ್ವವು ಸೃಷ್ಟಿಗತವಾದ, ಸೃಷ್ಟಿಸ್ಥಿತವಾದ ಋತ - ವ್ಯಾವಹಾರಿಕ ಸತ್ಯ. ಈ ಋತವು ವಿಶ್ವವ್ಯವಸ್ಥೆಯನ್ನು ನಡೆಸುತ್ತದೆ. ಪಾಶ್ಚಾತ್ಯರು ಈ ಸಮಗ್ರತ್ವವನ್ನು ಭಾಗಗಳಾಗಿ ವಿಭಜಿಸಿದರು. ಅವರದು ಪಾರ್ಶ್ವ ದೃಷ್ಟಿ, ಅವರ ಈ ಪಾರ್ಶ್ವ ಅಥವಾ ಭಾಗಶಃ ದೃಷ್ಟಿಯಿಂದಾಗಿ ಸಮಗ್ರತೆಯು ಚಿದ್ರವಾಗಿದೆ, ಚಿದ್ರವಾಗಿ ಹೋಗುತ್ತಿದೆ. ಮೆಕಾಲೆ ವಿದ್ಯೆಯ ಪ್ರಭಾವವಿದು!
ಅಗೋ ಅಲ್ಲಿ ನಿಂತಿರುವವನು
ಸ್ವಾಭಿಮಾನವ ಹತ್ಯೆ ಗೈದದನು
ಉನ್ಮಾದಿಯ ತೆರದಿ ಕಬಳಿಸುತಿಹನು,
ಇದು ಎಮ್ಮದು ಇದೆಮ್ಮಯ ಭೂಮಿ
ಎಂಬುದ ಮರೆತು ಹೋದವನವನು
ಮಾತೃಭೂಮಿಯ ಮಮಕಾರವು
ಪ್ರಜ್ವಲಿಸದ ಕ್ಷುದ್ರಹೃದಯದವನು
ಪರದೇಶದಲಿ ಓಡುತೋಡುತ
ಪಾದಗಳ ಸುಟ್ಟುಕೊಳ್ಳುತಿಹನು
******
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಒಂಬತ್ತನೆಯ ಕಂತು, ’ಧರ್ಮಬುದ್ಧಿಕಿ ದಾಪುರಿಂಚಿನ ಭಾವದಾರಿದ್ರಂ - ಧರ್ಮಬುದ್ಧಿಗೆ ತೊಡಕಾಗಿರುವ ಭಾವ ದಾಸ್ಯ (ಮಾನಸಿಕ ಗುಲಾಮಿತನ)......
ಈ ಸರಣಿಯ ಎಂಟನೆಯ ಲೇಖನಕ್ಕೆ "ಕಾಲ್ಡ್ವೆಲ್ ಹಾಕಿದ ಸುಳ್ಳಗಳ ಅಡಿಪಾಯ, ಆಗಿದೆ ಸಮೈಕ್ಯತೆಗೆ ಕಂಟಕಪ್ರಾಯ" ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%AE...
Comments
ಉ: ಭಾಗ ೯ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಸಂಪದದ ಮಿತ್ರರಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯಗಳು. ಈ ಕಂತನ್ನೂ ಸಹ ಆದರದಿಂದ ಸ್ವಾಗತಿಸಿರುವ ನಿಮಗೆ ಹಾಗು ಇದನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡು ಹೆಚ್ಚಿನ ಓದುಗರನ್ನು ತಲುಪಲು ಸಹಾಯ ಮಾಡಿದ ಮಿತ್ರರಾದ ನಾಗೇಶ್, ಮೈಸೂರು ಹಾಗು ಅವರ ಸ್ನೇಹಿತರಾದ ವೀರು ಶಾರದಾ ಪ್ರದೀಪ್ ಅವರಿಗೂ ಸಹ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಈ ಸರಣಿಯ ಮುಂದಿನ ಲೇಖನಕ್ಕೆ ಆಸಕ್ತರು ಈ ಕೊಂಡಿಯನ್ನು ನೋಡಬಹುದು. ಎಲ್ಲರಿಗೂ ಈ ಶುಭ ದೀಪಾವಳಿಯು ತಮಸ್ಸಿನಿಂದ ಬೆಳಕಿನೆಡೆಗೆ ಹಾಗು ಭಾವದಾಸ್ಯದ ಕತ್ತಲೆಯಿಂದ ಸ್ವಾಭಿಮಾನದ ಸ್ವದೇಶೀ ಬೆಳೆಕಿನೆಡೆಗೆ ಕರೆದೊಯ್ಯಲಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...