ಭಾವೂಬೀದ್

ಭಾವೂಬೀದ್

ಇಂದು ಮಾಮೂಲಿನಂತೆ ಬೆಳಗ್ಗೆ ಲೋಕಲ್ ಟ್ರೈನ್ ಹತ್ತಿದೆ. ನೋಡಿದ್ರೆ ಆಶ್ಚರ್ಯ, ಪರಮಾಶ್ಚರ್ಯ - ಗಾಡಿ ಪೂರ್ಣವಾಗಿ ಖಾಲಿಯಾಗಿದೆ. ಇದೇನು ಕನಸೇ ಅಥವಾ ಇಂದು ಭಾನುವಾರವೇ ಎಂದು ಕೈ ಚಿವುಟಿಕೊಂಡೆ, ಮೊಬೈಲ್ ನಲ್ಲಿ ದಿನವನ್ನು ಪರೀಕ್ಷಿಸಿದೆ. ಇಲ್ಲ! ಎಲ್ಲ ಸರಿಯಾಗಿಯೇ ಇದೆ.
ಅಲ್ಲೇ ಮೂಲೆಯಲ್ಲಿ ಕುಳಿತಿದ್ದವನೊಬ್ಬನನ್ನು ಕೇಳಿದೆ, ಇವತ್ತೇನು ಸ್ಟ್ರೈಕೇ, ಮುಂಬೈ ಬಂದ್ ಅಥವಾ ಇನ್ನೇನಾದರೂ ಹೆಚ್ಚು ಕಡಿಮೆ ಆಗಿದ್ಯಾ?
ಅವನು ಹೇಳಿದ, ' ಇಲ್ಲ ಸಾರ್, ಇವತ್ತು ಬಾವ್‍ಬೀಜ್, ಅಲ್ವಾ, ಅದಕ್ಕೇ ಜನಗಳು ರಜೆ ಹಾಕಿರ್ತಾರೆ'

ಈ ಬಾವ್‍ಬೀಜ್ ಅಂದ್ರೇನು? ಹೊಸ ಪದವೊಂದು ನನ್ನ ತಲೆಯೊಳಗೆ ಹುಳುವಿನಂತೆ ಸೇರಿ ಕೊರೆಯಹತ್ತಿತ್ತು. ತಕ್ಷಣ ನನ್ನ ಮರಾಠೀ ಸ್ನೇಹಿತರಾದ ಕಮಲಾಕರ ಹಸಬ್‍ನೀಸರಿಗೆ ಮೊಬೈಲ್‍ನಲ್ಲಿ ಮಾತನಾಡಿ ವಿಷಯ ಕೇಳಿದೆ. ಅವರು ಹೇಳಿದ ಪ್ರಕಾರ ಇಂದು ಭಾವೂ ಬೀಝ್. ಇದರರ್ಥ - ಭಾವೂ - ಸಹೋದರ, ಬೀಝ್ ಎಂದರೆ ಬಿದಿಗೆ ಎಂದರು. ಅವರಿಗೂ ಬೀಝ್ ಎನ್ನುವ ಪದದ ಅರ್ಥ ಸರಿಯಾಗಿ ಗೊತ್ತಿಲ್ಲವಂತೆ. ಕೆಲವರು ಇದನ್ನು ಭಾವುದೂಜ್ ಎಂತಲೂ ಕರೆಯುವರು. ಇಲ್ಲಿ ದೂಜ್ ಎಂದರೆ ಎರಡನೆಯ ದಿನ ಎಂದರ್ಥ. ಯಾರಿಂದಲೂ ನನಗೆ ಇದಕ್ಕೆ ಸರಿಯಾದ ಅರ್ಥ ಸಿಕ್ಕಿಲ್ಲ. ಈ ದಿನ ಬಲಿ ಪಾಡ್ಯಮಿಯ ನಂತರದ ದಿನ ಬರುವುದರಿಂದ ಬಿದಿಗೆ ಇರಬಹುದು ಎಂದು ನಾನು ತಿಳಿದಿರುವೆ.

ಇಂದಿನ ದಿನದ ವಿಶೇಷವೇನೆಂದರೆ ಸಹೋದರರು ಮದುವೆಯಾದ ಸಹೋದರಿಯರ ಮನೆಗೆ ಔತಣಕ್ಕಾಗಿ ಹೋಗುವರು. ಸಹೋದರಿ ಅವರಿಗೆ ಆರತಿಯನ್ನು ಮಾಡಿ ಎದುರುಗೊಂಡು ಪೂಜಿಸುವರು. ಆರತಿ ತಟ್ಟೆಯಲ್ಲಿ ದೀಪವಿರಿಸಿರುವರು. ಸಹೋದರನ ಹಣೆಗೆ ಕುಂಕುಮವನ್ನಿಡುವರು. ನಂತರ ಅಕ್ಷತೆ ಕಾಳನ್ನು ಸಹೋದರನಿಗಿತ್ತು ನಮಸ್ಕರಿಸುವರು. ನಂತರ ಸಹೋದರರ ಏಳ್ಗೆ ಮತ್ತು ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುವರು. ನಂತರ ಸಹೋದರರು ಸಹೋದರಿಗೆ ಉಡುಗೊರೆಯನ್ನು ಕೊಡುವರು. ಇದು ಸಂಪ್ರದಾಯ. ಆ ಸಮಯದಲ್ಲಿ ಸಹೋದರರು ತೊಡುವ ಪಣವೇನೆಂದರೆ ಎಂಥಹ ಕಷ್ಟ ಕಾಲದಲ್ಲೂ ಸಹೋದರಿಯನ್ನು ಸಂರಕ್ಷಿಸುವೆ ಎಂದು. ಆ ದಿನದ ವಿಶೇಷ ತಿನಿಸು ಎಂದರೆ ಪೂರಿ ಮತ್ತು ಶ್ರೀಖಂಡ. ಈ ದಿನಕ್ಕೂ ಮತ್ತು ರಕ್ಷಾಬಂಧನದ ದಿನಕ್ಕೂ ಸ್ವಲ್ಪ ತಾಳೆ ಆಗ್ತಿದೆ ಅಲ್ಲವೇ?

ಕಛೇರಿಗೆ ಹೋದ ಮೇಲೆ ನೋಡಿದರೆ ಹೆಚ್ಚಿನ ಮರಾಠಿಗರು ರಜೆ ಹಾಕಿದ್ದಾರೆ. ನಾವು ಕೆಲವರೇ ಅವರೆಲ್ಲರ ಕೆಲಸವನ್ನೂ ಮಾಡಬೇಕಾಯ್ತು. ಹಾಗೇಯೆ ಸಂಜೆ ಎರಡು ಘಂಟೆಗಳು ಮುಂಚಿತವಾಗಿ ಕಛೇರಿ ಮುಚ್ಚುವರು ಎಂದೂ ತಿಳಿಯಿತು. ೪.೩೦ಕ್ಕೆ ಸ್ಟೇಷನ್‍ಗೆ ಬಂದರೆ ಎಲ್ಲೆಲ್ಲಿ ನೋಡಿದರೂ ಕುಟುಂಬಗಳೇ ಮತ್ತು ಕುಯ್ಯೋಂ ಮರ್ರೋ ಅನ್ನುವ ಮಕ್ಕಳುಗಳ ಅರಚಾಟ. ಟ್ರೈನ್‍ನಲ್ಲಿ ಜಾಗ ಸಿಕ್ಕರೂ ಕುಳಿತುಕೊಳ್ಳಲಾಗಲಿಲ್ಲ. ಪ್ರತಿ ಸ್ಟೇಷನ್‍ಗಳಲ್ಲೂ ಮಕ್ಕಳೊಂದಿಗರು ಹತ್ತುವರು ಇಳಿಯುವರು, ಅವರು ಬಂದು ನಿಂತಾಗ ನಾನು ಕುಳಿತಿರುವುದು ಸರಿಯಲ್ಲವೆಂದು ನನ್ನ ಸ್ಥಾನಕ ಬರುವವರೆವಿಗೂ ನಿಂತೇ ಇದ್ದೆ.

Rating
No votes yet

Comments