ಭಿಕ್ಷುಕರು

ಭಿಕ್ಷುಕರು

ಭಿಕ್ಷುಕರು
ಸಣ್ಣಕತೆ

ಸಂಚಾರಿ ಪೊಲೀಸರ (ಟೈಗರ್) ವ್ಯಾನ್ ಮುಂದೆ ಹೋದ ಕೂಡಲೇ ಅದರ ಹಿಂದೆ ಸಾಲು ಸಲಾಗಿ `ಬೌ ಬೌ ಬೌ ಬೌ' ಎಂದು ಒಂದು ಗುಂಪಲ್ಲಿ ಹತ್ತು ಹದಿನೈದು ನಾಯಿಗಳು ಓಡಿದವು. ನಿಧಾನಕ್ಕೆ ಹೋಗುತ್ತಿದ್ದ ವ್ಯಾನು ನಾಯಿಗಳನ್ನು ಕಂಡು ಹೆದರು ಓಡುವ ಕಳ್ಳರ ಹಾಗೆ ತನ್ನ ವೇಗವನ್ನು `ಸರ್ರ್ ರ್ರ್ ರ್ರ್' ಎಂದು ಜೋರಾಗಿ ಮುಂದೋಡಿತು. ಎಷ್ಟೋ ದಿವಸ ನಕ್ಕದವನಂತೆ ನಾನು ಜೋರಾಗಿ ನಕ್ಕುಬಿಟ್ಟೆ. ನನ್ನೆದುರು ಕೂತಿದ್ದ ಸ್ನೇಹಿತ ದರ್ಶನ್ ಯಾರದ್ದೋ ಜೊತೆ ಮೊಬೈಲಿನಲ್ಲಿ ಹರಟುತ್ತಿದ್ದವ ನನ್ನ ನಗೆಗೆ ಅಷ್ಟಾಗಿ ಗಮನ ಕೊಡದಿದ್ದರೂ `ಯಾಕೆ ಹಾಗೆ ನಕ್ಕಿದ್ದು?' ಎನ್ನುವಂತೆ ನೋಡಿದ. ಅಕ್ಕಪಕ್ಕದಲ್ಲಿ ಬೇರೆಯವರೆಲ್ಲಾ ತಮ್ಮ ತಮ್ಮ ಮೊಬೈಲುಗಳಲ್ಲಿ ತಮ್ಮ ಸ್ನೇಹಿತರ ಜೊತೆಗೋ ಅಥವಾ ಬೇರೆ ಯಾರೊಟ್ಟಿಗೋ ಗುಸುಗುಸು ಎಂದೋ, ಜೋರಾಗಿ ಕಿಸಕ್ಕನೆ ನಕ್ಕೋ, ಯಾರೊಡನೆಯೋ ಜಗಳಾಡುತ್ತಿದ್ದರು.
ಪಕ್ಕದಲ್ಲಿ ಹಾಗೂ ದೂರದಲ್ಲೆಲ್ಲೋ ಬಸ್ಸುಗಳು, ಕಾರುಗಳು, ದ್ವಿಚಕ್ರವಾಹನಗಳ ಹಾರ್ನುಗಳು, ಸೈಕಲ್‍ಗಳ `ಟಿಂಗ್ ಟಿಂಗ್' ಬೆಲ್ಲಿನ ಸದ್ದು ಕ್ಷಣಕ್ಷಣಕ್ಕೂ ಕೇಳುತ್ತಿದ್ದರೂ ನನ್ನ ಮನಸ್ಸು, ನಾನು ಮತ್ತು ದರ್ಶನ್ ಆಟೋರಿಕ್ಷಾದಲ್ಲಿ ರಂಗಶಂಕರಕ್ಕೆ ಬರುವಾಗ ಕಿವಿ ಶುದ್ಧ ಮಾಡಿಕೊಳ್ಳುವ ಹತ್ತಿಕಡ್ಡಿಗಳನ್ನು (ಇಯರ್ ಬಡ್ಸ್) ಮಾರುತ್ತಿದ್ದ. ಆ ಏಳು ಅಥವಾ ಎಂಟು ವರ್ಷದ ಹುಡುಗನ ಕಡೆಗೇ ತೇಲಾಡುತ್ತಿತ್ತು. ಸಂಗಂ ಸರ್ಕಲ್‍ನ ಬಳಿ ಸಿಗ್ನಲ್ ಹತ್ತಿರ ಆಟೋ ನಿಂತಾಗ ಬಂದ ಹುಡುಗ ``ಸರ್ ಒಂದೇ ಒಂದು ಪ್ಯಾಕ್ ತಗೊಳ್ಳಿ ಸರ್. ಬೆಳಿಗ್ಗೆಯಿಂದ ವ್ಯಾಪಾರ ಇಲ್ಲಾ ಸಾರ್, ಹೊಟ್ಟೇಗ್ ಏನೂ ತಿಂದಿಲ್ಲ ಸಾರ್, ಒಂದೇ ಒಂದು ಪ್ಯಾಕ್ ತಗೊಳ್ಳಿ ಸಾರ್,'' ಎಂದು ಗೋಗರೆದ. ದರ್ಶನ್ ``ಬೇಡ ಹೋಗು'' ಎಂದ. ನನಗೆ ಬೇಸರವಾಯಿತು. ``ಎಷ್ಟು ಕೇಳೋ'' ಎಂದೆ. ``ಎಷ್ಟು'' ದರ್ಶನ್ ಕೇಳಿದ್ದಕ್ಕೆ - ``ಹತ್ತು ರೂಪಾಯಿ ಸಾರ್'' ಹುಡುಗನ ಉತ್ತರ. ``ತಗೋ'' ಎಂದೆ. ದರ್ಶನ್ ಒಂದು ಪ್ಯಾಕ್ ಇಯರ್ ಬಡ್ಸ್ ತಗೊಂಡ.
`ಏಕೆ?' ಎನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿದ ದರ್ಶನ್. ``ಎಷ್ಟೋ ಸಣ್ಣ ವಯಸ್ಸಿನ ಹುಡುಗ್ರು ಭಿಕ್ಷೆ ಕೇಳಿ ಬದುಕುತ್ತಾರೆ. ಇವನು ವ್ಯಾಪಾರ ಮಾಡಿ ಬದುಕುತ್ತಿದ್ದಾನೆ. ಅದಕ್ಕೆ'' ಎಂದೆ. ದರ್ಶನ್ ಸುಮ್ಮನಾದ. ಸಿಗ್ನಲ್ ಬಿಟ್ಟು ಆಟೋ ರಂಗಶಂಕರದತ್ತ ಚಲಿಸಿತು.

*
*
*

ಸುಮಾರು ವರ್ಷಗಳ ಹಿಂದೆ ನಡೆದ ಶಿವಾಜಿರಾವನ ಘಟನೆ ನನ್ನ ನೆನಪಿಗೆ ಇಂದು ಈ ಹುಡುಗನ ಪ್ರಕರಣ ಕಂಡಾಕ್ಷಣ ಮರುಕಳಿಸಿತ್ತು.
ಇಲ್ಲಿಂದ ಸುಮಾರು ಎಂಟು ವರ್ಷಗಳ ಹಿಂದೆ, ಆಗಷ್ಟೇ ನನ್ನ ಪಿ ಯು ಸಿ ಪರೀಕ್ಷೆ ಮುಗಿಸಿ ದಿನಪತ್ರಿಕೆಯೊಂದರ ಕ್ಯಾನ್‍ವಾಸರ್ ಆಗಿ ಕೆಲಸಕ್ಕೆ ಹೋಗುತ್ತಿದ್ದೆ. ಅಂದಿನ ನನ್ನ ಜತೆಗಾರ ರವಿಶಂಕರ. ದಿವಸ ಬೆಳಗಿನ ಝಾವ ಐದು ಗಂಟೆಗೇ ಅಲಸೂರಿನ ದೇವಸ್ಥಾನದ ಎದುರು ನಮ್ಮ ಕೆಲಸ ಶುರುವಾಗಿ ಬೆಳಿಗ್ಗೆ ಹತ್ತರ ಹೊತ್ತಿಗೆ ಅಲಸೂರಿನ ಮಾರುತಿ ಚಿತ್ರಮಂದಿರದ ಬಳಿ ಮುಗಿಯುತ್ತಿತ್ತು. ದಿವಸ ನಲವತ್ತು ಮನೆಗಳಿಗೆ ನಾವೇ ಪೇಪರ್ ಹಾಕಿ ನಮ್ಮ ದಿನಪತ್ರಿಕೆಯ ಬಗ್ಗೆ ಒಲವು ಮೂಡಿಸಿ, ಕೊಳ್ಳುವ ಹಾಗೆ ಮಾಡುವುದು ನಮ್ಮ ಕೆಲಸವಾಗಿತ್ತು.
ಸುಮಾರು ದಿವಸ ಆ ಶಿವಾಜಿರಾವನನ್ನೇ ನಾನು ಗಮನಿಸುತ್ತಿದ್ದೆ. ಆತನ ಬಗ್ಗೆ ನನ್ನಲ್ಲಿ ಏನೋ ಒಂದು ರೀತಿಯ ಕುತೂಹಲವಿತ್ತು. ಅವನ ಮುಖದಲ್ಲಿ ಏನೋ ಒಂದು ರೀತಿ ಕಳೆ, ಕಣ್ಣಲ್ಲಿ ಉಜ್ವಲವಾದ ಬೆಳಕು ಕಾಣಿಸುತ್ತಿತ್ತು. ಅವನು ಭಿಕ್ಷುಕ ಅಲ್ಲೆಂದು ನನ್ನ ಮನಸ್ಸು ಹೇಳುತ್ತಲೇ ಇತ್ತು. ಆದರೆ ರವಿಶಂಕರನ ಮನಸ್ಸು ಇದಕ್ಕೆ ತದ್ವಿರುದ್ಧ. ಅವನಿಗೆ ಭಿಕ್ಷುಕರನ್ನು ಕಂಡರೆ ಆಗುತ್ತಿರಲಿಲ್ಲ. ನಾನು ಈ ವಿಷಯವಾಗಿ ರವಿಶಂಕರನ ಬಳಿ ಎಷ್ಟೋ ಬಾರಿ ಜಗಳಾಡಿದ್ದಿದೆ. ಒಮ್ಮೆಯಂತೂ ಒಬ್ಬ ಹೆಂಗಸು ಬಸ್ಸಿನಿಂದ ಬಿಸಾಡಿದ ಕೊಳೆತ ಬಾಳೆಹಣ್ಣನ್ನು ಸಿಪ್ಪೆಯ ಸಮೇತ ಗಬಗಬ ತಿಂದದ್ದು ನನ್ನ ಕುತೂಹಲವನ್ನು ಶಿವಾಜಿರಾವನ ಬಗ್ಗೆ ಇನ್ನೂ ಹೆಚ್ಚು ಮಾಡಿಬಿಟ್ಟಿತು.
ಅಂದೇ ಅವನ್ನು ಭೆಟ್ಟಿಯಾಗಬೇಕೆಂದು ತೀರ್ಮಾನಿಸಿ ಈ ವಿಷಯವನ್ನು ರವಿಯ ಬಳಿಯೂ ಹೇಳಿದೆ. ಅವನು ಮೊದಲು ಅದನ್ನು ತಿರಸ್ಕರಿಸಿದರೂ ನಂತರ ಬಸವನ ತಲೆಯಾಡಿಸಿದ.

*
*
*

ಅವನನ್ನು ಭೆಟ್ಟಿಯಾಗುವ ಮುನ್ನ ನನ್ನ ಕುತೂಹಲ ಅವನ ಬಗ್ಗೆ ಮತ್ತೆ ಮತ್ತೆ ಹೆಚ್ಚಾಗ ತೊಡಗಿತ್ತು. ಬಹುಶಃ ಅವನು ನನ್ನೊಟ್ಟಿಗೆ ಮಾತಾಡ್ತಾನೋ ಇಲ್ಲವೋ ಎನ್ನುವ ಶಂಕೆ ಕೂಡ ಕಾಡುತ್ತಿತ್ತು. ಕ್ರಮೇಣ ಅವನನ್ನು ಭೆಟ್ಟಿಯಾದ ನಂತರ ಆ ಶಂಕೆ ಕಡಿಮೆಯಾಯಿತು. ಅವನ ಬಳಿ ಹೋಗಿ ನಿಂತೆವು. ಬಹುಶಃ ನಾವು ತೊಟ್ಟಿದ್ದ ಚರ್ಮದ ಬಣ್ಣದ ಬೂಟ್ಸು ನೋಡಿ ಪೊಲೀಸರೆಂದು ಹೆದರಿದನೋ ಏನೋ!
``ನಾನ್ ಏನೂ ಮಾಡಿಲ್ರೀ ಬಿಟ್ಬಿಡಿ ನನ್ನ'' ಎಂದು ಕಾಲು ಹಿಡಿದುಬಿಟ್ಟ. ನಾವು ಹಿಂದೆ ಸರಿದು ಹೇಳಿದೆವು-
``ನಾವಿಲ್ಲಿ ಬಂದ್ರೋದು ನಿನ್ನೊಟ್ಟಿಗೆ ಮಾತಾಡಲಿಕ್ಕೆ ನಾವು ಯಾವ ಪೊಲೀಸರೂ ಅಲ್ಲ. ಬಿಡು ಕಾಲು'' ಎಂದೆವು.
ಅವನು ಕಾಲು ಬಿಡಲಿಲ್ಲ. ``ಪೊಲೀಸಿನವರಂತೆ ಝಾಡಿಸಿ ಒದೆಯುತ್ತೀವೀಗ. ಬಿಡು ಕಾಲು'' ಎಂದು ಗದರಿಸಿದ ಮೇಲೆ ಕಾಲು ಬಿಟ್ಟ.
ಅವನೊಟ್ಟಿಗೆ ಮಾತಾಡಲಿಕ್ಕೆ ಬಂದು ಅವನನ್ನು ನೋಡಿದ್ದಾಯಿತು. ಆದರೆ ಹೇಗೆ? ಎಲ್ಲಿಂದ? ಏನು ಮಾತಾಡುವುದು ಎಂದು ಯೋಚಿಸಿದೆ. ಸುಮಾರು ಐದಾರು ನಿಮಿಷ ದೇವಸ್ಥಾನದ ಗಂಟೆ ಮೊಳಗುವ ಸದ್ದು ಬಿಟ್ಟರೆ ಇನ್ನುಳಿದದ್ದೆಲ್ಲ ಮೌನ. ಸ್ವಲ್ಪ ಹೊತ್ತಿನ ಬಳಿಕ ಅವನನ್ನು ``ಬಾ'' ಎಂದು ನಾವು ನಿತ್ಯ ತಿಂಡಿ ತಿನ್ನುವ ಜಯಂತಿ ಸಾಗರಕ್ಕೆ ಹೋಗಿ ಕುಳಿತೆವು.
``ಏನ್ ತಿಂತೀಯಾ?''
``ನಂಗೇನೂ ಬೇಡ ಸರ್'' ಎಂದ.
``ತಿನ್ನೋ ಮಾರಾಯಾ ನಿನ್ ಬಿಲ್ಲು ನಾವೇ ಕಟ್ತೀವಿ'' ಎಂದ ಕೋಪಮಿಶ್ರಿತ ದನಿಯಲ್ಲಿ ರವಿ.
``ಏನಾದ್ರೂ ಆತು ಸರ್'' ಎಂದ.
ರವಿಗೆ ಮತ್ತೆ ಕೋಪ ಹತ್ತಿಕ್ಕಿಕೊಳ್ಳಲಾರದೆ ಹೇಳಿದ ``ಏನಾದ್ರೂ ಅನ್ನೋ ತಿಂಡಿ ಇಡೀ ಜಗತ್ತಲ್ಲಿ ಎಲ್ಲೂ ಸಿಗೋದಿಲ್ಲ. ಅದೇನ್ ಬೇಕೋ ಸಂಕೋಚ ಬಿಟ್ಟು ತರಿಸಿಕೋ''
ಮಾಣಿಯನ್ನು ಕರೆಯುವ ಮುನ್ನ ``ಏ ಆ ಜುಟ್ಟು ಭಟ್ಟ ಬೇಡ ಮಾರಾಯ. ಕಸ್ಟಮರ್ ಕೇರ್‍ಗೆ ಫೋನ್ ಮಾಡ್ದಾಗ ಬಡ್ಕಳೋ ಐವಿಆರ್ ಥರಾ ಫುಲ್‍ಸ್ಟಾಪ್, ಕಾಮ ಏನೂ ಕೊಡ್ದೀರಾ ಸರ್ರ್ ರ್ರ್ ರ್ರ್ ಅಂತ ವಟಗುಟ್ಟುತಾನೆ ಕೋತ್ ನನ್ ಮಗ'' ಎಂದ.
ರವಿ ಸ್ವಲ್ಪ ಹಾಗೇ... ನಮ್ಮ ಈರಣ್ಣ ಮೇಷ್ಟ್ರು ಒಮ್ಮೆ ``ರವಿ, ಮಳೆ ಬಂದಾಗ ಏನಾಗ್ತದಪ್ಪಾ?'' ಅಂತ ಪ್ರಶ್ನೆ ಕೇಳಿದ್ದಕ್ಕೆ ``ಮೋರಿ ತುಂಬತ್ತೆ ಸಾರ್'' ಎಂದು ಹೇಳಿ ಒದೆಸಿಕೊಂಡು ಕ್ಲಾಸಿನಿಂದ ಆಚೆ ಹೋಗಿದ್ದ. ಆದರೂ ನಮ್ಮ ಈರಣ್ಣ ಮೇಷ್ಟ್ರಿಗೆ ಅವನೇ ಪ್ರೀತಿಯ ಶಿಷ್ಯ.
ಶಿವ ಅದೇನೇನನ್ನೋ ತಿಂದ. ತಿನ್ನುತ್ತಾ ತಿನ್ನುತ್ತಾ ನಾವು ಏನು ಕೇಳಬೇಕೆಂದಿದ್ದೆವೋ ಅದನ್ನು ಅರಿತವನಂತೆ ಅವನೇ ಎಲ್ಲಾ ಹೇಳಿದ. ಅವನು ಹೇಗೆ ಭಿಕ್ಷಾಟನೆಗೆ ಗುರಿಯಾದ ಅನ್ನೋ ಸಾರಾಂಶ ಹೇಳುತ್ತೇನೆ. ಕೇಳಿ.

*
*
*

ಬಿಜಾಪುರದ ಬಳಿ ಅವನದ್ದೊಂದು ಸಣ್ಣ ಊರಾದರೂ ಅದರ ಸುತ್ತಮುತ್ತ ಹತ್ತಿಪ್ಪತ್ತು ಹಳ್ಳಿಗಳಿಗೆ ಇವರೇ ಸರದಾರರು. ಹತ್ತಾರು ಶಾಲೆ, ನಾಲ್ಕಾರು ಜೋಳದ ಮಿಲ್ಲುಗಳನ್ನು ಇಟ್ಟಿದ್ದರು. ಶಾಲೆಗಳಲ್ಲಿ ಬಡವರಿಗೆ ಉಚಿತ ಪ್ರವೇಶವಾದರೆ ಶ್ರೀಮಂತರೆನಿಸಿಕೊಂಡವರ ಮಕ್ಕಳಿಗೆ ಆಗಲೇ ಐನೂರು ರೂಪಾಯಿಗಳ ವಾರ್ಷಿಕ ಶುಲ್ಕವಿತ್ತು. ಕಷ್ಟ ಇದೆ ಸಹಾಯ ಮಾಡಿ ಎಂದು ಕೇಳಿ ಬಂದವರಿಗೆ ``ಇಲ್ಲ'' ಎನ್ನದೆ ದಾನ ಧರ್ಮಗಳನ್ನು ಮಾಡುತ್ತಿದ್ದ ಉದಾರ ಮನಸ್ಸಿನ ಮನೆತನದವರು ಇವರು. ಇವರ ದೊಡ್ಡ ಬಂಗಲೆಯಲ್ಲಿ ಇವರು ನಾಲ್ಕು ಜನ. ಅಪ್ಪ, ಅಮ್ಮ, ತಂಗಿ ಮತ್ತು ಶಿವಾಜಿ. ಇವರೊಟ್ಟಿಗೆ ಇನ್ನೂ ಹತ್ತಾರು ಆಳುಕಾಳುಗಳು. ನಾಲ್ಕು ಮಜಭೂತಾದ ಬೇಟೆನಾಯಿಗಳು. ಒಮ್ಮೆ ಎರಡು ಹುಲಿಗಳು ಇವರ ತೋಟಕ್ಕೆ ಬಂದಾಗ ಆ ನಾಯಿಗಳೇ ಇವುಗಳ ಜೊತೆ ಕುಸ್ತಿ ಮಾಡಿ ಹುಲಿಗಳು ತಮ್ಮ ಬಾಲ ಮುದುರಿಕೊಂಡು ಹಿಂದಕ್ಕೆ ಓಟ ಕಿತ್ತಿತ್ತಂತೆ. ಅಂತಹ ಬೇಟೆನಾಯಿಗಳು. ಎರಡು ಅಂಬಾಸಿಡರ್ ಕಾರುಗಳು ಬೇರೆ.
ತಂಗಿಯನ್ನು ಬೇರೆ ಜಾತಿಯವನಿಗೆ ಕೊಟ್ಟು ಮದುವೆ ಮಾಡಿದರು. ಆ ದಿನಗಳಲ್ಲಿ ಯಾರಾದರೂ ಬೇರೆ ಜಾತಿಯವರ ಒಟ್ಟಿಗೆ ಮಾತನಾಡಿದರೂ ನಾಲ್ಕು ದಿನ ಮನೆಯಿಂದ ಹೊರಕ್ಕೆ ಅಟ್ಟುತ್ತಿದ್ದರು. ಇವನು ಬಿಜಾಪುರದ ಕಾಲೇಜೊಂದರಲ್ಲಿ ಇಂಗ್ಲಿಷ್ ಬಿ ಎ ಮೊದಲ ದರ್ಜೆಯಲ್ಲಿ ಪಾಸಾಗಿದ್ದ. ಇವನ ಇಂಗ್ಲಿಷಿನ ಜ್ಞಾನ ಎಷ್ಟಿತ್ತೆಂದರೆ ಹೋಟೆಲಿನಲ್ಲಿ ರವಿ ತಾನೊಬ್ಬನೇ ದೊಡ್ಡ ಇಂಗ್ಲಿಷ್ ಪಂಡಿತ ಎಂದು ಏನೇನನ್ನೋ ಹರಟುತ್ತಿದ್ದ. ಬಹುಶ್ಃ ಶಿವನಿಗೆ ಅವನ ಹಿಂದಿನದ್ದೆಲ್ಲ ಏನೋ ನೆನಪು ಬಂದಿರಬೇಕು. ತನ್ನಲ್ಲಿ ಗೊಣಗಿಕೊಂಡದ್ದು ನಮ್ಮಿಬ್ಬರಿಗೂ ಕೇಳಿಸಿತು: ``there are many outstanding faces, but outstanding faces are standing out'', ನಮ್ಮಿಬ್ಬರಿಗೂ ಇವನ ಇಂಗ್ಲಿಶ್ ಜ್ಞಾನ ನೋಡಿ ತಲೆ ಸುತ್ತಿಬಂದಹಾಗಾಯ್ತು.
ಇರಲಿ ಬಿಡಿ. ಇಂಗ್ಲಿಷ್ ಬಿ ಎ ಓದಿದ್ದ ಈತ. ಇಷ್ಟು ಸಿರಿವಂತನಾದ ಇವನು ಹೀಗೇಕೆ ಆದ ಎಂದು ಯೋಚಿಸುತ್ತಿದ್ದ ಹಾಗೇ ಮತ್ತೆ ತನ್ನ ಕಥೆ ಆರಂಭಿಸಿದ.
ಹೀಗಿರುವಾಗ ಒಮ್ಮೆ ತನ್ನ ತಂದೆಯ ಬೆಂಗಳೂರಿನ ಸ್ನೇಹಿತರೊಬ್ಬರು ಏನೋ ಸಹಾಯ ಕೇಳಲು ತಮ್ಮ ಮನೆಗೆ ಬಂದವರು ತಂದೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು. ಎಲ್ಲಿ ಹೋದರೂ ಎರಡೇ ದಿವಸದಲ್ಲಿ ಮರಳುತ್ತಿದ್ದ ಅಪ್ಪಾಜಿ ವಾರದ ನಂತರವೂ ಬರಲಿಲ್ಲ. ನಂತರ ಮನೆಗೆ ಬರುತ್ತಾರೆ! ಮುಖದ ಮೇಲಿದ್ದ ಎಂದಿನ ಕಳೆ ಇರಲಿಲ್ಲ. ಅಮ್ಮ ದೃಷ್ಟಿ ತೆಗೆದರು. ತಿಮ್ಮಪ್ಪನಿಗೆ ಹರಕೆ ಹೊತ್ತರು. ಎಷ್ಟು ದಿವಸವಾದರೂ ಹಾಗೇ ಇತ್ತು. ಶಿವ ಒಮ್ಮೆ ಅಪ್ಪ ಶಾಲೆಯ ಕಡೆ ಹೋಗಿದ್ದಾಗ ಕುತೂಹಲದಿಂದ ಅಪ್ಪನ ಅಲಮಾರಿಯನ್ನು ತೆಗೆದುನೋಡಿದಾಗಲೇ ಗೊತ್ತಾದದ್ದು, ಅಪ್ಪಾಜಿ ಯಾಕೆ ಹೀಗೆ ಆಗಿದ್ದಾರೆ ಅಂತ.

*
*
*

ಬೆಂಗಳೂರಿಗೆ ತನ್ನ ಸ್ನೇಹಿತನ ಜೊತೆಗೆ ಬಂದ ರಾವ್‍ಜೀ ಸ್ನೇಹಿತನ ಬಲವಂತಕ್ಕೆ ಸಿಗರೆಟ್ಟು ಸೇದುವುದು, ಹೆಂಡ ಕುಡಿಯುವುದು, ಜೊತೆ ಜೊತೆಗೇ ಆಗಾಗ ರೇಸಿಗೆ ಹೋಗುವುದು ವಾಡಿಕೆಯಾಗಿಹೋಗಿತ್ತು. ಇದೆಲ್ಲ ಎಂದಾದರೊಂದು ದಿನ ಹೋಗದೇ ಇರಲಾರದು ಎಂದು ತಿಳಿದಿದ್ದ ಮನೆಯವರಿಗೆ ಇನ್ನೊಂದು ಆಘಾತಕಾರಿ ಸುದ್ದಿ ಕಾದಿತ್ತು. ರಾವ್‍ಜೀ ಮತ್ತೊಂದು ಮದುವೆಯಾಗಿಬಿಟ್ಟಿದ್ದರು. ಎಲ್ಲಾ ಆಸ್ತಿಯನ್ನು ತನ್ನ ಹೊಸ ಹೆಂಡತಿಗೆ ಬರೆದು ತಮ್ಮನ್ನು ಬೀದಿಗೆ ಅಟ್ಟಿದ್ದರು. ತಮ್ಮನ್ನು ಅಟ್ಟಿದ್ದರೆ ಪರವಾಗಿಲ್ಲ ತಮ್ಮ ಕಾರ್ಖಾನೆ ನೌಕರರನ್ನೆಲ್ಲ ಕೆಲಸಕ್ಕೆ ಬರಕೂಡದೆಂದು ತಾಕೀತು ಮಾಡಿದರು. ಬರಬರುತ್ತಾ ಅವರಿಗೆ ಹುಚ್ಚೇ ಹಿಡಿದು ತೀರಿಕೊಂಡರು. ಈ ದುಃಖಗಳನ್ನು ತಾಳಲಾರದೆ ಅವಳೂ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು. ನೆರವಿಗೆ ಬರಬೇಕೆಂದಿದ್ದ ತಂಗಿಯ ಮನೆಯವರೂ ಕೂಡ ತನ್ನ ತಂಗಿಗೆ ತನ್ನನ್ನು ಭೇಟಿಯಾಗಲು ಹೋದಲ್ಲಿ ಕೊಂದೇಬಿಡುತ್ತೇನೆಂದು ಹೆದರಿಸಿದರು.
ಇಲ್ಲಿಂದ ಕಾದಿತ್ತು ಶಿವನಿಗೆ ದರಿದ್ರತನ. ನಯ ಪೈಸೆ ಇಲ್ಲದೆ ಅವನನ್ನೂ ಆ ಬಿಜಾಪುರದ ಜಿಲ್ಲೆಯಿಂದಲೇ ಬಹಿಷ್ಕಾರ ಹಾಕಿಬಿಟ್ಟಳು.

*
*
*

``ಸರಿ ಹಾಗಾದೆ...... ನಿನ್ನ ಇಂಗ್ಲೀಷು ತುಂಬಾ ಚೆನ್ನಾಗಿದೆ. ನಮ್ಮ ಮೇನೇಜರ್ ಹತ್ತಿರ ನಾವು ಮಾತಾಡ್ತೀವಿ. ನಾಳೆ ನಮ್ಮ ಆಫೀಸಿನ ಹತ್ತಿರ ಬಾ. ಅಲ್ಲೇ ಕೆಲಸಕ್ಕೆ ಏರ್ಪಾಟು ಮಾಡೋಣ. ತಿಂಗಳಿಗೆ ಮೂರು ಸಾವಿರ ಸಂಬಳ. ನನ್ನ ರೂಮಲ್ಲೇ ಇರು'' ಎಂದ ರವಿ. ರವಿಯ ಈ ಒಳ್ಳೆಯತನಕ್ಕೆ ನಾನೂ ತಲೆದೂಗಬೇಕಾಯ್ತಿ. ಶಿವ ಅಳುತ್ತಾ ರವಿಯ ಕಾಲಿಗೆ ಬಿದ್ದೇಬಿಟ್ಟ.

*
*
*

ಮಾರನೇ ದಿನ ಬೆಳಿಗೆ ಹತ್ತು ಗಂಟೆಗೆ ಐವಿಆರ್ ಭಟ್ಟ-
``ಹೋಯ್ ರವ್ ಮಾರಾಯ್ರೇ ಇಕ್ಕೊಳ್ಳಿ ಕಾಗದ. ಆ ಭಿಕಾರಿ ಕೊಟ್ಟು ಹ್ವಾತ್'' ಎಂದು ನಮ್ಮ ಕೈಗೊಂದು ಕಾಗದ ಕೊಟ್ಟು ಒಳನಡೆದ. ಕುತೂಹಲದಿಂದ ನಾವು ಅದೇನೆಂದು ಪತ್ರ ಬಿಡಿಸಿ ಓದಿದೆವು.
ಪ್ರಿಯ ರವಿ ಮತ್ತು ಚಂದ್ರು ಸರ್,
ನಿನ್ನೆ ನನ್ನೊಂದಿಗೆ ನೀವು ಮಾತಾಡಿ ಹೋದ ನಂತರ ಬಹುಶಃ ನಿಮ್ಮಲ್ಲಿ ಒಬ್ಬರ ಪರ್ಸು ನನಗೆ ಸಿಕ್ಕಿತು. ಅದರಲ್ಲಿ ೫೦೦೦/- ರೂಪಾಯಿ ದುಡ್ಡಿತ್ತು. ನಾನು ನಿಮಗೆ ಕೊಡೋಣ ಎಂದು ಇಟ್ಟುಕೊಂಡಿದ್ದೆ. ನನ್ನ ಕೈಲಿದ್ದ ಪರ್ಸನ್ನು ನೋಡಿ ಪೇದೆಯೊಬ್ಬ ನನ್ನೌ ಕಳ್ಳ ಎಂದು ತಿಳಿದು ಓಡಿಸಿಕೊಂಡು ಬಂದ. ನಾನು ಹೇಗೋ ತಪ್ಪಿಸಿಕೊಂಡು ಮತ್ತೆ ಈ ಹೋಟೇಲು ಬಳಿಗೆ ಬಂದು ಆ ಭಟ್ಟನ ಕೈಲಿ ಕೊಡೋಣ ಎಂದುಕೊಂಡೆ. ಆದರೆ ಪೊಲೀಸಿನವ ಅಲ್ಲೂ ಬಂದ. ನಾನು ಬಚ್ಚಿಟ್ಟುಕೊಂಡು ಅಲ್ಲೇ ಸಂದಿಯಲ್ಲಿ ಹತ್ತು ನಿಮಿಷ ಕೂತಿದ್ದೆ. ನನಗಾಗ ನನ್ನ ಬದುಕು ಮುಖ್ಯ. ಆ ದೇವರೇ ಈ ಹಣ ಕೊಟ್ಟಿದ್ದಾನೆ. ಇದನ್ನು ನನ್ನ ಸ್ವಂತ ಖರ್ಚಿಗೆ ಉಪಯೋಗಿಸುವುದರಲ್ಲಿ ತಪ್ಪಿಲ್ಲ ಎನಿಸಿತು. ಅದಕ್ಕೇ ಈ ದುಡ್ಡು ತಗೊಂಡು ಊರು ಬಿಟ್ಟೇ ಹೋಗುತ್ತಿದ್ದೇನೆ. ನಾನೆಲ್ಲಾದರೂ ನೆಲೆಯೂರಿದ ಮೇಲೆ ನಿಮಗೆ ಬಡ್ಡಿ ಸಮೇತ ಈ ಹಣವನ್ನು ರವಿ ಸರ್ ಮನೆಗೆ ಎಂ ಓ ಮಾಡುತ್ತೇನೆ. ಅವರ ಕಾರ್ಡು ನನ್ನ ಬಳಿ ಇದೆ. ತಪ್ಪು ಮಾಡುತ್ತಿರುವೆ ಎಂದು ಗೊತ್ತು. ಆದರೂ ಕ್ಷಮೆ ಇರಲಿ.
ಇಂತೀ ನಿಮ್ಮವ
ಶಿವಾಜಿರಾವ
ಅವನು ಹಾಗೇ ಮಾಡಿದ. ರವಿ ಪರ್ಸು ಕಳೆದುಕೊಂಡಿದ್ದ. ಶಿವಾಜಿ ಮುಂಬೈಗೆ ಹೋಗಿ ನೆಲೆಸಿದ. ಯಾವುದೋ ಗಡಂಗಿನ ಅಂಗಡಿಯಲ್ಲಿ ಗಲ್ಲಾಪೆಟ್ಟಿಗೆ ನೋಡಿಕೊಳ್ಳುತ್ತಿದ್ದಾನೆ. ರವಿಗೆ ಒಮ್ಮೆ ಎಂ ಓ ಬಂದಿತು. ಹತ್ತು ಸಾವಿರ ರೂಪಾಯಿ. ರವಿ ನನಗೆ ಫೋನ್ ಮಾಡಿ ``ಏನು ಮಾಡೋದೋ?. ಈ ದುಡ್ಡು ನನಗೆ ಬೇಡ ಮಾರಾಯ'' ಎಂದ. ನಾನವನಿಗೆ ಹೇಳಿದೆ. ``ಅದರಲ್ಲಿ ಐದು ಸಾವಿರ ನಿನ್ನದು. ಇನ್ನುಳಿದದ್ದು ಹೇಗೋ ಧರ್ಮಸ್ಥಳಕ್ಕೆ ಹೋಗ್ತಿದ್ದೀಯಾ, ಅಲ್ಲೇ ನಿನ್ನ ತಂದೆಯ ಹೆಸರಲ್ಲಿ ಅನ್ನದಾನ ಮಾಡಲಿಕ್ಕೆ ಕೊಟ್ಟು ಬಾ. ನಿನಗೂ ಒಳ್ಳೆಯದಾಗತ್ತೆ. ಆ ಶಿವನಿಗೂ'' ಎಂದೆ. ಅವನೂ ಅದೇ ಸರಿ ಎಂದು ಹೇಳಿ ಫೋನಿಟ್ಟ.

*
*
*

ಆಟೋ ರಂಗಶಂಕರದ ಬಳಿ ಬರುವವರೆಗೂ ನನಗೆ ಆ ಇಯರ್ ಬಡ್ಸ್ ಹುಡುಗ ಮತ್ತು ಶಿವನದ್ದೇ ಯೋಚನೆ. ಇಪ್ಪತ್ತೈದು ರೂಪಾಯಿ ಆಟೋ ಮೀಟರ್ ಕೊಟ್ಟು ಮನಸ್ಸಲ್ಲೇ ಆಟೋಡ್ರೈವರನಿಗೆ ``ಆ ಹತ್ತಿ ಹುಡುಗನೇ ಏಷ್ಟೋ ವಾಸಿ. ನೀವು ಹಗಲಲ್ಲೇ ಮೀಟರ್ ಜಂಪ್ ಮಾಡಿಸಿ ಇನ್‍ಡೈರೆಕ್ಟ್ ಕಳ್ಳತನ ಮಾಡ್ತೀರಾ' ಎಂದುಕೊಂಡೆ. ಏಕೆಂದರೆ ಆ ಹುಡುಗನನ್ನು ನೋಡಿ ಡ್ರೈವರ್ ಹೇಳಿದ್ದ ``ಪೊಲೀಸ್ ಬರ್ತಾರೆ ಅಂತ ಅದನ್ನ ಇಡ್ಕೊಂಡು ಮಾರ್‍ತಿದ್ದಾನೆ ಸಾರ್. ಇಲ್ಲಾಂದ್ರೆ ಭಿಕ್ಷೇನೆ ಬೇಡ್ತಿದ್ದ.
ರಂಗಶಂಕರದ ಎದುರು ಇದ್ದ ಖಾಲಿ ಸೈಟನ್ನು ಕಾಯಲು ಬಹುಶಃ ಯಾರೀ ಕಾವಲುಗಾರರಿದ್ದರು. ಅಲ್ಲೊಂದು ಸಣ್ಣ ಜೋಪಡಿ ಇತ್ತು. ಆ ದುಡಿಸಲಿನಲ್ಲಿ ಯಾರೋ ಒಬ್ಬ, ಒಬ್ಬ ಹೆಂಗಸಿಗೆ ದನಕ್ಕೆ ಹೊಡೆವ ಹಾಗೆ ಹೊಡೆಯುತ್ತಿದ್ದ. ಕುಡಿದಿದ್ದ ಅಂತ ಕಾಣತ್ತೆ. ಹೀನ ಬಯ್ಗುಳದ ಶಬ್ದ ಅವನ ಬಾಯಿಂದ ಕೇಳಿಬರುತ್ತಿತ್ತು.
ಆ ಹೆಣ್ಣಿನ ರೋದನ ತಾರಕಕ್ಕೇರಿತ್ತು. ಜೋಪಡಿಯಲ್ಲಿ ಒಂದು ಮಗು ಸಹ ಇತ್ತು. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿ ನೆರೆದಿದ್ದ ಜನರಲ್ಲಿ ಯಾರೂ ಆಕೆಯ ಸಹಾಯಕ್ಕೆ ಹೋಗದೆ ಗೂಬೆಗಳ ಹಾಗೆ ನಿಂತು ಹಳ್ಳಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ತೋರಿಸುವ ಬಿಟ್ಟಿ ಸಿನಿಮಾವನ್ನು ನೋಡುವ ಹಾಗೆ ನೋಡುತ್ತಿದ್ದರು. ನಾವೂ ಸಹ!

ಶ್ರೀಚಂದ್ರ
೦೩-೧೦-೨೦೦೬

Rating
No votes yet

Comments