ಭೂತಕ್ಕೆ ಆರು ಕಾಲು ಅರ್ಧ ಕೈ

ಭೂತಕ್ಕೆ ಆರು ಕಾಲು ಅರ್ಧ ಕೈ

ಮೊನ್ನೆ ನಡು ಹಗಲೇ ಮನೆಯ ಪಕ್ಕದ ಓಣಿಯಲ್ಲಿ ಒಂದು ಬೆಳ್ಳನೆಯ ಭೂತಾಕೃತಿ ಕಂಡಿತು. ಎಲೆಯಡಿಕೆ ಅಗಿಯುತ್ತಾ ಹಿಂದುಮುಂದು ನೋಡುತ್ತಾ ಹೆದರಿ, ಹೆದರಿ ಹೆಜ್ಜೆ ಹಾಕುತ್ತಿತ್ತು. ಸುಮ್ಮನೆ ಹತ್ತಿರ ಹೋಗಿ ಕಿಚಾಯಿಸುವ ಬದಲು ದೂರದಿಂದಲೇ ಏನು ಮಾಡುತ್ತದೆ ಎಂದು ನೋಡುತ್ತಾ ನಿಂತೆ.
ಭೂತದ ಕೈ ಸ್ವಲ್ಪ ಗಿಡ್ಡವಾಗಿತ್ತು. ಅದರ ಹಸ್ತಗಳು ಕೈತುದಿಯಲ್ಲಿರುವ ಬದಲು ಮೊಣಕೈಯಿಂದ ಹೊರಬಂದಿರುವುದು ಕಂಡಿತು. ಹಸ್ತ ಇರಬೇಕಾದಲ್ಲಿ ಕತ್ತರಿಸಿ ಹಾಕಿದ ಹಾಗೆ ಮೂಳೆ ಮಾಂಸ ಹಸಿಹಸಿಯಾಗಿ ನೇತಾಡುತ್ತಾ ರಕ್ತ ಒಸರುತ್ತಿತ್ತು. ಮೊಣಕೈ ಜಾಗದಿಂದ ಹೊರಚಾಚಿದ ಹಸ್ತದ ನಡುವೆ ಅಗಲವಾದ ತೂತಿದ್ದು, ಹಸ್ತದ ತುದಿಗೆ ಒಂದೇ ಗೆಣ್ಣಿರುವ ಒಂದಷ್ಟು ಬೆರಳುಗಳು ಸೆಟೆದುಕೊಂಡಿದ್ದವು. ಆದ್ದರಿಂದ ಅದಕ್ಕೆ ಮೂಗೊರೆಸಿಕೊಳ್ಳುವಂಥ ಸುಲಭದ ಕೆಲಸವೂ ಕಷ್ಟವಾಗುತ್ತಿತ್ತು. ನೆಗಡಿಯಿಂದ ಸೊರಸೊರ ಎನ್ನುತ್ತಿದ್ದ ಮೂಗನ್ನು ಒರೆಸಿಕೊಳ್ಳಲು ಹೆಣಗುತ್ತಿತ್ತು. ಅದರ ಹೆಣಗಾಟದ ನೋಡಿದಾಗಲೇ ಅದಕ್ಕೆ ಕತ್ತು ಕೊಂಕಿಸಲು ಆಗುವುದಿಲ್ಲ ಎಂಬುದೂ ಗೊತ್ತಾಯಿತು. ಕತ್ತನ್ನು ಕೋಲಿಗೆ ಸಿಕ್ಕಿಸಿದ ಮಡಕೆಯಂತೆ ಅತ್ತಿತ್ತ ತಿರುಗಿಸಲು ಮಾತ್ರ ಆಗುವಂತಿತ್ತು. ಮಡಕೆಗೆ ತೂತು ಮಾಡಿದಂತೆ ಎರಡು ಮೂಗಿನ ಹೊಳ್ಳೆಗಳು. ಮೂಗೇ ಇಲ್ಲ ಎಂಬಷ್ಟು ಅಪ್ಪಚ್ಚಿ. ಆದರೂ ನೆಗಡಿಯಾಗಿದ್ದರಿಂದ ಮೂಗಿನಿಂದ ಸಣ್ಣಗೆ ನೀರು ಸೋರುತ್ತಿತ್ತು. ಒರೆಸಿಕೊಳ್ಳಲು ಆಗದೆ ಹೆಣಗಾಡುತ್ತಿತ್ತು. ಮೂಗಿನಿಂದ ಸೋರಿದ್ದು ಮೈ ಮೇಲೆ ಬೀಳದೆ, ಅದರ ಮೂಲಕ ನೆಲಕ್ಕೆ ಬಿದ್ದು ಅರೆಕ್ಷಣ ಹೊಳೆದು ಮಾಯವಾಗುತಿತ್ತು.

ನಾನು ಹಿಂದೆ ನಿಂತಿದ್ದು ಭೂತಕ್ಕೆ ಭಾಸವಾಗಿರಬೇಕು. ಸರ ಸರ ಮುಂದೆ ಸರಿಯಿತು. ಆರು ಕಾಲಿಂದ ನಡೆಯಲು ಮಹಾ ಪಜೀತಿ ಪಡುತ್ತಾ, ತನ್ನ ಕಾಲಿಗೆ ತಾನೇ ಎಡವುತ್ತಾ ತೂಕವಿದ್ದಿದ್ದರೆ ಮುಗ್ಗರಿಸಿ ಬೀಳುತ್ತಿತ್ತು. ಆದರೆ ಯಾಕೋ ತೇಲುತ್ತಿರುವಂತೆ ಕಾಣುತ್ತಿತ್ತು. ಆರು ಕಾಲಿಂದ ಹೇಗೆ ನಡೆಯಬೇಕೆಂದು ಇನ್ನೂ ಕಲಿತಿಲ್ಲವೆಂದು ಸ್ಪಷ್ಟವಾಗುತ್ತಿತ್ತು. ವಾಲುತ್ತಾ ಸಾವರಿಸಿಕೊಂಡು ಬೀಳುವಂತಾದಾಗ ಹಗುರಾಗಿ ತೇಲುವಂತೆ ಮತ್ತೆ ನೇರವಾಗುತ್ತಿತ್ತು.
ಅದರ ಪಜೀತಿ ನೋಡಿ ಕನಿಕರವಾಯಿತು. ಹೇಗೆಂದು ಗೊತ್ತಿಲ್ಲದಿದ್ದರೂ ಹತ್ತಿರ ಹೋಗಿ ಸಹಾಯಮಾಡಬೇಕೆಂದು ಒಂದೆರಡು ಹೆಜ್ಜೆ ಇಟ್ಟದ್ದೆ ಅದು ಥಟ್ಟನೆ ಸೆಟೆದು ನಿಂತಿತು. ನನಗೂ ಯಾಕೋ ದಿಗಿಲಾಯಿತು. ಅಲ್ಲೇ ನಿಂತುಬಿಟ್ಟೆ. ಮೆಲ್ಲಗೆ ಅದರ ತಲೆ ತಿರುಗತ್ತಾ ಕರಕರ ಸದ್ದು ಮಾಡಿತು. ನನ್ನ ಎದೆಯ ಢವಢವ ಜೋರಾಗುತ್ತಲೇ ಹೋಯಿತು. ಏನಾಗುತ್ತಿದೆ, ಯಾಕಾಗುತ್ತಿದೆ ಎಂಬ ಅರಿವಾಗುವ ಮೊದಲೇ ನನ್ನತ್ತ ತಿರುಗಿದ ತಲೆಬುರುಡೆಯ ನಡುವೆ ಕಣ್ಣಿರಬೇಕಾದಲ್ಲಿ ಆಳವಾದ ಎರಡು ಕಪ್ಪು ತೂತುಗಳು. ಆ ತೂತುಗಳ ನಡುವ ಗುಡ್ಡೆ ಇಲ್ಲದಿದ್ದರೂ ಅದು ನನ್ನತ್ತಲೇ ನೋಡುತ್ತಿದೆ, ಅಳುತ್ತಿದೆ ಎಂದು ತಿಳಿದುಬಿಟ್ಟಿತು. ನನ್ನ ಹಿಂದಿಂದ ಅಳುವ ಸದ್ದು ಕೇಳಿತು. ಹಿಂದಿಂದ ಬರುತ್ತಿದ್ದರೂ ಅದು ನನ್ನ ಮುಂದಿರುವ ಭೂತ ಅಳುತ್ತಿರುವುದು ಎಂದು ನನಗೆ ಅನುಮಾನವೇ ಇರಲಿಲ್ಲ. ಆದ್ದರಿಂದಲೇ ಅದನ್ನೇ ನೋಡುತ್ತಾ ನಿಂತುಬಿಟ್ಟೆ. ಅದೂ ಒಂದು ಕ್ಷಣ ನನ್ನನ್ನೇ ನೋಡುತ್ತಿತ್ತು. ನನ್ನ ಹಿಂದಿಂದ ಅಳು ಕೇಳುತ್ತಲೇ ಇತ್ತು. ಥಟ್ಟನೆ ಯಾರೋ ಅಲುಗಾಡಿಸಿದವರಂತೆ ಅಲುಗಿ ನನ್ನತ್ತ ಬರತೊಡಗಿತು. ನಾನು ಬೇರು ಬಿಟ್ಟವನಂತೆ ನಿಂತೇ ಇದ್ದೆ. ಮೆಲ್ಲನೆ ಹತ್ತಿರ ಬಂದು ಇನ್ನೇನು ಡಿಕ್ಕಿ ಹೊಡೆಯುತ್ತದೆ ಅನ್ನುವಾಗ ನನ್ನ ಮೈಯೆಲ್ಲಾ ತಣ್ಣಗಾಯಿತು. ಅದು ನನ್ನ ಮೂಲಕ ಹಾದು ನನ್ನ ಹಿಂದೆ ಹೊರಟು ಹೋಯಿತು. ನಾನು ತಿರುಗಿ ನೋಡಲಿಲ್ಲ. ಯಾಕೆಂದರೆ ಅದರ ಅಳುವಿನ ಸದ್ದೇ ಅದು ದೂರ ದೂರ ಹೋಗುತ್ತಿದೆ ಎಂದು ಸಾರಿ ಸಾರಿ ಹೇಳುತ್ತಿತ್ತು.
ಭೂತಗಳು ಯಾವಾಗಲೂ ಹಾಗೆ ಹೆದರಿಸುತ್ತವೆ, ಆದರೆ ನಿಜವಾಗಿಯೂ ನೋಡಿದರೆ ಅಳುತ್ತಿರುತ್ತವೆ. ಸಿಟ್ಟಿನಿಂದಲೋ, ದುಃಖದಿಂದಲೋ ತಿಳಿಯುವುದಿಲ್ಲ. ಅಳು ಮಾತ್ರ ಕೇಳಿದ್ದೇನೆ.

Rating
No votes yet