ಭೂಮಾತೆ

ಭೂಮಾತೆ

ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ
ದೈವದನಂತ ಸೃಷ್ಥಿಯಲಿ ನಾನೊಂದು ಚೇತನ
ಎನಿತು ಬಹುಭಾರ ತಡೆದಿರುವೆ ನೀನು
ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು

ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ
ಚಿಂತಿಸದೆ ಕೊರಗದೆ ಬಿಡಿಸಲವಕಾಶ ನೀಡು ಎನಗೆ
ಅನವರತ ಯತ್ನಿಸುವೆ ತರಲು ಬಿಡುಗಡೆಯ ಕಾಲ
ಹರಸು ಎನ್ನ ಅದೊಂದಾಗಲಿ ಲೋಕಕಲ್ಯಾಣಕೆ ಮೂಲ

ನಿಲ್ಲಿ ನಿಕೇತನರೆ ಹೊರಬಂದಾಲಿಸಿ ಎನ್ನ ವಚನ
ನಿತ್ಯ ಜಂಜಡದ ಭಾರ ಬದಿಗಿರಿಸಿ ನೀಡಿ ಗಮನ
ಅನಿವಾರ್ಯವೇ ನಿಮಗೆ ಷಡ್ವರ್ಗಗಳ ಭ್ರಾಂತಿ
ಕಿತ್ತೊಗೆದು ಪಡೆಯೋಣ ಬನ್ನಿ ಚಿರಸುಖದ ಶಾಂತಿ

ಬೇಕಿತ್ತೆ ನಾಮ,ಜಾತಿ,ಮತ,ಪಂಥಗಳ ಅಬದ್ಧ ಕ್ರಾಂತಿ
ಆ ಅನಿಷ್ಥಗಳ ಸುಟ್ಟು ಮಾಡೋಣ ಎಲ್ಲರ ಸುಸ್ಥಿತಿ
ನೆಡೆಸೋಣ ಸನ್ಮಾರ್ಗದಿ ನಮ್ಮೆಲ್ಲರ ಬಾಳಬಂಡಿ
ಹಿಂಸೆ ಅಧರ್ಮಗಳೆಂಬ ರಕ್ಕಸರ ರುಂಡ ಚೆಂಡಾಡಿ

ಪ್ರಾರ್ಥಿಸೋಣ ದೈವದಿ ಬರಲೆಂದು ಹೊಸ ಮನ್ವಂತರ
ಅದುವೇ ಆಗಲಿ ಲೋಕ ಕಲ್ಯಾಣದ ಸಾಕ್ಷಾತ್ಕಾರ
ಪಡೆಯೋಣ ಎಲ್ಲರೂ ಶಾಂತಿ ನೆಮ್ಮದಿಯ ಮಹದಾನಂದ
ಆಗೋಣ ಎಲ್ಲರೂ ದೈವದ ಕೃಪೆಯಡಿ ಸಚ್ಚಿದಾನಂದ

ಮುಕ್ತಳಾಗಿ ಕಾಣುವೆ ಓ ತಾಯೆ ಈಗ ನೀ ಸುಂದರ
ಕೊನೆವರೆಗೂ ಕಂಗೊಳಿಸು ಹೀಗೆಯೆ ಪೂರ
ನೀನಾಗು ದೈವ ನೆಲೆಸಿ ಹರಸುವ ದಿವ್ಯಮಂದಿರ
ನಿನ್ನ ನೋಡಿ ಬಾಳುವರು ಸ್ನೇಹದಿ ಸೂರ್ಯ ಚಂದಿರ

Rating
No votes yet