ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

ಕಳೆದ ಭಾನುವಾರ ಶಿವಮೊಗ್ಗದಲ್ಲಿ ಯು.ಆರ್.ಅನಂತಮೂತೀಯವರು ನನ್ನ 'ಮರಳಿ ಬರಲಿದೆ ಸಮಾಜವಾದ!' ಪುಸ್ತಕವನ್ನು ಬಿಡುಗಡೆ ಮಾಡುತ್ತಾ, ಇಂದಿನ ಸಂದರ್ಭಕ್ಕೆ ಮುಖ್ಯವೆನಿಸುವ ಅನೇಕ ಮಾತುಗಳನ್ನಾಡಿದರು. ಸಮಾಜವಾದ ಕುರಿತಂತೆ ಹೊಸದೆನ್ನುವಂತಹ ಒಳನೋಟಗಳನ್ನು ನೀಡಿದರು. ಇಂದಿನ ರಾಷ್ಟ್ರ ಮತ್ತು ರಾಜ್ಯ ರಾಜಕಾರಣ ಕುರಿತಂತೆ ತಮ್ಮದೇ ವೈಯುಕ್ತಿಕ ಅಭಿಪ್ರಾಯಗಳನ್ನು ದಾಖಲಿಸಿದರು. ಬೆಂಗಳೂರಿನಲ್ಲಿ ಕೌಟುಂಬಿಕವಾದ ತುರ್ತು ಕೆಲಸವಿರುವುದರಿಂದ ಆದಷ್ಟು ಬೇಗ ಸಮಾರಂಭದಿಂದ ತಮ್ಮನ್ನು ಕಳಿಸಿಕೊಡಬೇಕೆಂದು ಹೇಳಿದ್ದ ಅವರು; ಸಮಾರಂಭಕ್ಕೆ ಬಂದಿದ್ದ ಜನಸಮೂಹವನ್ನು ನೋಡಿ, ಈ ಜನ ಸಮೂಹದ ಮಧ್ಯೆ ಬೆರೆತಿದ್ದ ತಮ್ಮ ಓರಿಗೆಯ ಅನೇಕ ಸಮಾಜವಾದಿ ಮಿತ್ರರ ಎದುರಿನಲ್ಲಿ ವಿನೀತರಾದಂತೆ, ಕಾಲ ಮರೆತು ಸಮಾರಂಭ ಮುಗಿಯುವವರೆಗೂ ಕೂತರು! ತಮ್ಮ ಭಾಷಣದ ನಂತರವೂ ಎದ್ದು ಬಂದು ಇತರರ ಮಾತುಗಳಿಗೆ ಪ್ರತಿಕ್ರಿಯಿಸುವ ಸಡಗರ ತೋರಿದರು... ಒಂದೆರಡು ತಿಂಗಳುಗಳ ಹಿಂದೆ 'ಆವರಣ' ಹಗರಣದ ಸಂದರ್ಭದಲ್ಲಿ ತಮ್ಮ ಮೇಲೆ ನಡೆದಿದ್ದ 'ಆಕ್ರಮಣ'ದ ಬಗ್ಗೆ ನನ್ನೊಡನೆ ಮಾತಾಡುತ್ತಾ, 'ನನಗೆ 75 ವರ್ಷ ಎಂಬುದು ನೆನಪಿರಲಿ ನಾಗಭೂಷಣ;ಇದನ್ನೆಲ್ಲ ಸಹಿಸುವುದು ಕಷ್ಟ...' ಎಂದು ಖಿನ್ನರಾಗಿ ಹೇಳಿದ್ದ ಅನಂತಮೂರ್ತಿ ಇವರೇನಾ ಎಂದು ಆಶ್ಚರ್ಯ ಪಡುವಷ್ಟು ಉತ್ಸಾಹ - ಆಸಕ್ತಿಗಳಿಂದ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು - ಅದೂ ಹಿಂದಿನ ಸಂಜೆಯವರೆಗೆ ಹೆಗ್ಗೋಡಿನಲ್ಲಿ ಒಂದು ವಾರದ 'ನೀನಾಸಂ' ಸಾಂಸ್ಕೃತಿಕ ಶಿಬಿರದ ನಿರ್ದೇಶಕತ್ವ ವಹಿಸಿದ ಬಳಲಿಕೆಯ ನಂತರವೂ!

ಅವರ ಮಾತುಗಳನ್ನು ಕೇಳಲು ಬಂದಿದ್ದ ಜನಸಮೂಹ ಕೂಡ ಕಥೆ - ಉಪಕಥೆ - ದೃಷ್ಟಾಂತ - ನೆನಪು - ಉಲ್ಲೇಖಗಳನ್ನು ಹದವಾಗಿ ಬೆರೆಸಿ ಅವರು ಮಾಡಿದ ಭಾಷಣದ ಮೋಡಿಗೊಳಗಾದಂತೆ ಅಲುಗಾಡದೆ ಕೂತಿತ್ತು. ರಾಜೇಂದ್ರ ಚೆನ್ನಿಯವರು ತಮ್ಮ ನಂತರದ ಪ್ರತಿಕ್ರಿಯೆಯಲ್ಲಿ ಇದನ್ನು ಉಪನಿಷತ್ (ಗುರುವಿನ ಹತ್ತಿರವೇ ಕೂತು ಕೇಳುವ) ಶೈಲಿಯ ವಿಚಾರ ಮಂಡನೆ ಎಂದದ್ದು ಸ್ವಲ್ಪ ಅತಿಯಾಯಿತೆನಿಸಿದರೂ, ಅನಂತಮೂರ್ತಿಯವರು ಆಂದಿನ ಆ ಲೋಹಿಯಾ - ನೆಹರೂ ಕಾಲದ ರಾಜಕಾರಣ ಹಾಗೂ ಇಂದಿನ ಈ ದೇವೇಗೌಡ - ಯಡಿಯೂರಪ್ಪ ರಾಜಕಾರಣದ ಮಧ್ಯೆ ಕಳೆದು ಹೋಗಿರುವ ಮೌಲ್ಯ ಪ್ರಜ್ಞೆ ಹಾಗೂ ರಾಜಕೀಯ ಕೌಶಲ್ಯಗಳ ವಿವೇಚನೆ ಮಾಡುತ್ತಾ, ಸಮಕಾಲೀನ ರಾಜಕಾರಣದ ಭಿತ್ತಿಯಲ್ಲಿ ಹೊಸ ಸಮಾಜವಾದದ ಚಿತ್ರ ಬಿಡಿಸಿದ ರೀತಿ ತಲೆ ತೂಗುವಂತಿತ್ತು. ಮುಖ್ಯವಾಗಿ ಸಮಯ ಪ್ರಜ್ಞೆಯ ರಾಜಕೀಯ ಹಾಗೂ ಸಮಯ ಸಾಧಕ ರಾಜಕೀಯಗಳ ನಡುವಣ ವ್ಯತ್ಯಾಸಗಳನ್ನು ಸೋದಾಹರಣವಾಗಿ ವಿಷದೀಕರಿಸುವ ಮೂಲಕ ಇಂದಿನ ರಾಜಕೀಯವನ್ನು ಗ್ರಹಿಸುವ, ಮೌಲ್ಯಮಾಪನ ಮಾಡುವ ಬಗೆಯನ್ನು ಅವರು ತಮ್ಮದೇ ಸೃಜನಶೀಲ ವಿಚಾರ ಮಂಡನೆಯ ಶೈಲಿಯಲ್ಲಿ ವಿವರಿಸಿದರು. ಲೋಹಿಯಾರ ಆಗಿನ ನೆಹರೂ ವಿರೋಧ ಹಾಗೂ ಕಾಂಗ್ರೆಸ್ಸೇತರವಾದ ಸಮಯ ಪ್ರಜ್ಞೆಯ ಉದಾಹರಣೆಗಳಾದರೆ, ದೇವೇಗೌಡರ ಈಗಿನ ಜಾತ್ಯತೀತೆಯ ಹುಯಿಲು ಸಮಯ ಸಾಧಕ ರಾಜಕಾರಣದ ಉದಾಹರಣೆಗಳೆಂದರು. ತಮ್ಮ ಗೆಳೆಯ ಜಾರ್ಜ್ ಫ‌ರ್ನಾಂಡೀಸ್ ಇಂತಹುದೇ ಸಮಯ ಸಾಧಕ ರಾಜಕಾರಣ ಮಾಡಿ ಸಮಾಜವಾದದ ವಿಶ್ವಾಸಾರ್ಹತೆಯನ್ನು ಹಾಳುಗೆಡಹಿದ್ದನ್ನು ಹೇಳಲು ಅವರು ಮರೆಯಲಿಲ್ಲ.

ನನ್ನನ್ನು ಒಳ್ಳೆಯ ರಾಜಕೀಯ ವಿಶ್ಲೇಷಕ ಎಂದು ಕರೆದು ವಿಶ್ವಾಸ ತೋರಿದ ಅನಂತಮೂರ್ತಿಯವರು, ನನ್ನ ಬರವಣಿಗೆಯ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಒಂದೆರಡು ಸಲಹೆಗಳನ್ನೂ ನೀಡಿದರು. ಒಂದು ಘಟನೆಯ ವಿಶ್ಲೇಷಣೆ ಮಾಡುವಾಗ ಸ್ವತಃ ನಾನು ಆ ಘಟನೆಯ ಮಧ್ಯೆ ಇದ್ದರೆ ಹೇಗೆ ವರ್ತಿಸುತ್ತಿದ್ದೆ ಎಂದು ಯೋಚಿಸಿ ಬರೆಯಬೇಕೆಂದು ಅವರು ಸೂಚಿಸಿದರು. ಬಹುಶಃ ಈ ಹಿಂದೆ ಒಂದೆರಡು ಬಾರಿ ನನ್ನ ಬರಹಗಳಲ್ಲಿ / ಪ್ರತಿಕ್ರಿಯೆಗಳಲ್ಲಿ ಅವರ ಕೆಲವು ವಿರೋಧಾಭಾಸದ ವರ್ತನೆಗಳನ್ನು / ಹೇಳಿಕೆಗಳನ್ನು ಟೀಕಿಸಿದ್ದುದು ಅವರ ಮನಸ್ಸಿನಲ್ಲಿ ಇದ್ದಿತೆಂದು ಕಾಣುತ್ತದೆ. ಹಾಗೇ ಅವರು ಸಮಯ ಪ್ರಜ್ಞೆ - ಸಮಯ ಸಾಧಕತೆಯ ವ್ಯತ್ಯಾಸಗಳ ಬಗ್ಗೆ ಮಾತಾಡಿದ್ದೂ, ಬದಲಾಗಬೇಕಾದ ನನ್ನ ಬರವಣಿಗೆಯ ಕ್ರಮದ ಸಂಬಂಧ ನೀಡಿದ ಸಲಹೆಯ ವಿಷದೀಕರಣವೇ ಆಗಿತ್ತೆಂದು ಕಾಣುತ್ತದೆ. ಏಕೆಂದರೆ, ಅವರು ಅದರ ಪ್ರಸ್ತಾಪ ಮಾಡಿದ್ದೇ, ಎರಡು ವರ್ಷಗಳ ಹಿಂದೆ 'ಅಹಿಂದ' ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ನಾನು ಅಹಿಂದದ ರಾಜಕಾರಣ ಹೇಗೆ ತತ್ವ ಕೇಂದ್ರಿತವಾಗದೆ, ವ್ಯಕ್ತಿ ಕೇಂದ್ರಿತವಾಗುತ್ತಿದೆ ಎಂದು ವಿವರಿಸಿ ಭಾಷಣ ಮಾಡಿದ ನಂತರ ಅಲ್ಲಿ ನನ್ನೊಡನೆ ಆಡಿದ ಒಂದು ಮಾತನ್ನು ಇಲ್ಲಿ ಈಗ ಪುನರುಚ್ಚರಿಸುವ ಮೂಲಕ!

ಪಟ್ಟಭದ್ರರ ಕುಟಿಲ ರಾಜಕಾರಣವನ್ನು ಸೂಚ್ಯವಾಗಿ ತಿಳಿಸಲು ಗೋಪಾಲ ಗೌಡರು ಆಡಿದರೆಂದು ಹೇಳಲಾದ ಆ ಮಾತು ಇದು: 'ಭೂಮಿಯನ್ನು ಹಂಚಿಕೊಳ್ಳುವ ಮುನ್ನ ಆಕಾಶ ಹಂಚಿಕೊಂಡು ಮುಗಿಸೋಣ'! ಈ ಮೂಲಕ ನನಗೆ ಅನಂತಮೂರ್ತಿಯವರು ಸ್ಪಷ್ಟವಾಗಿ ನೀಡಿದ ಸೂಚನೆಯೆಂದರೆ, ತತ್ವಾದರ್ಶಗಳ ಪ್ರಜ್ಞೆಗಿಂತ ಮುಖ್ಯವಾದುದು ವಾಸ್ತವ ಪ್ರಜ್ಞೆ . ಇದು ನನಗೆ ತಿಳಿಯದ ಸತ್ಯವೇನಲ್ಲ. ಹಾಗೆಂದು ಹೇಳುತ್ತಲೇ ಅವರು ನನಗೆ ಈ ಸಲಹೆ ನೀಡಿದರು! ಆದರೆ ಆದರ್ಶ ಹಾಗೂ ವಾಸ್ತವಗಳ ನಡುವಣ ಸಂಬಂಧ ಕುರಿತಂತೆ ನನ್ನ ಹಾಗೂ ಅನಂತಮೂರ್ತಿಯವರ ಅರಿವು ಬೇರೆ ಬೇರೆ ನೆಲೆಗಳಿಗೆ ಸೇರಿದವೆಂದು ಕಾಣುತ್ತದೆ. ಹಾಗಾಗಿ, ಅವರ ಭಾಷಣ ಮುಗಿದ ನಂತರ ನನಗೆ ಪ್ರತಿಕ್ರಿಯಿಸುವುದು ಅಗತ್ಯವೆನಿಸಿ, ನಾನು ಈ ಮಾತುಗಳನ್ನು ಹೇಳಲೇಬೇಕಾಯಿತು: ವಾಸ್ತವ ಪ್ರಜ್ಞೆ ಎನ್ನುವುದು ಸಮಯ ಪ್ರಜ್ಞೆ ಹಾಗೂ ಸಮಯಸಾಧಕತನಗಳ ನಡುವಣ ಗೆರೆ ಅಳಿಸಿಹೋಗುವಷ್ಟು ಅಸ್ಪಷ್ಟವಾದಾಗ, ಸನ್ನಿವೇಶವನ್ನು ಸ್ಪಷ್ಪಪಡಿಸುವುದು ತತ್ವಾದರ್ಶಗಳೇ. ಹಾಗೆ ನೋಡಿದರೆ, ಅವನ್ನು ಮರೆತ ವಾಸ್ತವ ಪ್ರಜ್ಞೆ ಎಂಬುದೇ ಇರಲಾರದು. ವಿಶೇಷವಾಗಿ, ಹಲವು ಆಕರ್ಷಣೆಗಳ ಈ ಆಧುನಿಕ ಕಾಲದಲ್ಲಿ. ಹೀಗಾಗಿ ಇಂದು ಆಕಾಶ ಪ್ರಜ್ಞೆ ಇಲ್ಲದ ಮನುಷ್ಯ ಮೃಗ ಮಾತ್ರ ಆಗುತ್ತಾನೆ. ಭೂಮಿ ಗ್ರಹಿಕೆಗೆ ಸಿಗುವುದೂ ಆಕಾಶದ ಸಾಪೇಕ್ಷದಲ್ಲೇ. ಹಾಗೇ, ವಾಸ್ತವವೆಂಬುದು ಗ್ರಹಿಕೆಗೆ ಸಿಗುವುದೂ ಕೆಲವು ನಂಬಿಕೆಗಳ ಆಧಾರದಲ್ಲೇ.

ಆದರೂ ಅನಂತಮೂರ್ತಿಯವರು ನನಗೆ ಹೀಗೆ ಸಲಹೆ ನೀಡಿದ್ದು ನನ್ನಲ್ಲೇನೂ ಆಶ್ಚರ್ಯವನ್ನುಂಟು ಮಾಡಲಿಲ್ಲ. ಏಕೆಂದರೆ, ಅವರು ಪಕ್ಕಾ ವಾಸ್ತವವಾದಿ ಎಂಬುದನ್ನು ನನಗೆ ಬಹು ಮುಂಚಿನಿಂದಲೂ ಗೊತ್ತಿದ್ದ ವಿಚಾರವಾಗಿತ್ತು. ಸ್ವತಃ ಅವರಿಗೆ ಅದನ್ನು ಈಗ್ಗೆ ಒಂದೆರಡು ತಿಂಗಳುಗಳ ಹಿಂದೆ ಪರೋಕ್ಷವಾಗಿ ಹೇಳಿಯೂ ಇದ್ದೆ. ಅವರ ಪುಸ್ತಕವೊಂದನ್ನು ನಾನು ಮಾಸ ಪತ್ರಿಕೆಯೊಂದಕ್ಕಾಗಿ ವಿಮರ್ಶಿಸಿದ ಪರಿ ಅವರಿಗೆ ಇಷ್ಟವಾಗದಿದ್ದುದನ್ನು ಯಾವುದೋ ಮಾತಿನ ಮಧ್ಯೆ ಅವರು ಪ್ರಸ್ತಾಪಿಸಿದಾಗ ನಾನು ಹೇಳಿದ್ದು ಇದು: 'ನೀವು ಹೇಳ ಬೇಕಾದ ಮಾತನ್ನು ಹೇಳಬೇಕಾದವರಿಗೆ ಹೇಳಬೇಕಾದಾಗ ಹೇಳದಿರುವುದೇ, ನಿಮ್ಮ ದೊಡ್ಡ ದೌರ್ಬಲ್ಯ. ನಿಮ್ಮ ದಾಕ್ಷಿಣ್ಯ ನಿಮ್ಮ ಪ್ರತಿಭೆಗೆ ಕುಂದು ತಂದಿದೆ.' ಅದಕ್ಕವರು ತಮ್ಮ ದಾಕ್ಷಿಣ್ಯವೇನಿದ್ದರೂ, ವ್ಯಕ್ತಿಗಳಿಗೆ ಸಂಬಂಧಿಸಿದಂತೆಯೇ ಹೊರತು ವಿಚಾರಗಳಿಗೆ ಸಂಬಂಧಿಸಿದಂತೆ ಅಲ್ಲ ಎಂದೇನೋ ಹೇಳಿದರು. ಆದರೆ ವಿಚಾರಗಳು ಹೊಮ್ಮುವುದೂ ವ್ಯಕ್ತಿಗಳ ಮೂಲಕವೇ ಅಲ್ಲವೇ ಎಂದು ಹೇಳಬೇಕಿನಿಸದರೂ, ನನ್ನ ಮಾತು ವಾದವಾಗಬಾರದೆಂದು ಸುಮ್ಮನಾದೆ.

ವಿಚಾರವೇನೇ ಇರಲಿ, ಮನುಷ್ಯ ಮುಖ್ಯ ಎಂಬ ಅನಂತಮೂರ್ತಿಯವರ ಮಾತನ್ನು ಒಪ್ಪಬೇಕಾದದ್ದೇ. ಆದರೆ, ಮನುಷ್ಯನ ಬಗ್ಗೆ ಗೌರವವಿಟ್ಟುಕೊಂಡೇ, ಆತನ ವಿಚಾರಗಳ, ಕೃತ್ಯಗಳು ಕೆಟ್ಟವು ಎಂದು ಅನ್ನಿಸಿದಾಗ ಆ ಬಗ್ಗೆ ಮಾತಾಡಲು ಇರುವ ತೊಂದರೆಯಾದರೂ ಏನು - ಅದೂ ಸಾರ್ವಜನಿಕ ಬುದ್ಧಿಜೀವಿ ಎಂದು ಕರೆಸಿಕೊಳ್ಳುವಾತನಿಗೆ? ನನ್ನನ್ನು ಸಮಾಜವಾದಿ ಚಿಂತನೆಯ ಒಳಗಿನ ಟೀಕಾಕಾರ (Critical insider) ಎಂದು ಕರೆದ ಅನಂತಮೂರ್ತಿಯವರು, ಆಳುವವರು ನಮ್ಮವರೇ ಆಗಿದ್ದಾಗ ಅವರಿಗೆ ಇಂತಹ ಟೀಕಾಕಾರರು ಹೇಳಬೇಕಾದುದನ್ನು ಕಿವಿಯಲ್ಲಾದರೂ ಹೇಳಬೇಕು ಎಂದು ಸೂಚಿಸಿದರು. ತಮ್ಮ ಪ್ರಿಯ ಮಿತ್ರ ಜೆ.ಎಚ್ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ತಾವು ಅನೇಕ ಬಾರಿ ಇಂತಹ ಕಿವಿ ಮಾತುಗಳನ್ನು ಹೇಳಿದ್ದಾಗಿಯೂ; ಅವರು ಅದನ್ನು ಕೇಳಿದ್ದಾಗಿಯೂ ಅನಂತಮೂರ್ತಿ ಹೇಳಿದರು. ಆದರೂ, ನಮ್ಮ ಇತ್ತೀಚಿನ ರಾಜಕಾರಣಿಗಳ ಪೈಕಿ ಅತ್ಯಂತ ಪ್ರತಿಭಾಶಾಲಿಯಾಗಿದ್ದ ಪಟೇಲರು ಆಡಳಿತಗಾರನಾಗಿ ಮಾತ್ರ ಸಾರ್ವಜನಕರ ಕಣ್ಣಲ್ಲಿ ವಿದೂಷಕನಿಗಿಂತ ಕಡೆಯಾದದ್ದು ಏಕೋ ಎಂಬುದನ್ನು ಅನಂತಮೂರ್ತಿಯವರೇ ವಿವರಿಸಬೇಕು.

ಹಾಗೆ ನೋಡಿದರೆ ಅನಂತಮೂರ್ತಿಯವರು 'ಪ್ರಭುತ್ವ'ದೊಂದಿಗೆ ಮುಖಾಮುಖಿಯಾದದ್ದು ಕಡಿಮೆ ಎಂದೇ ಹೇಳಬೇಕು. ಅವರು ಯಾವಾಗಲೂ ಪ್ರಭುತ್ವದೊಂದಿಗೆ ಮೃದುವಾಗಿರುವವರೇ. ಉದಾಹರಣೆಗೆ, ಈಗ ಕೋಮುವಾದಿಗಳ ವಿರುದ್ಧ ಅವರು ಮಾತನಾಡುತ್ತಿರುವ ವರಸೆಯನ್ನು ಇದೇ ಕೋಮುವಾದಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಆಡುತ್ತಿದ್ದ ಮಾತಿನ ವರಸೆಗೆ ಹೋಲಿಸಿ ನೋಡಿ. ಅಥವಾ ಅವರೇ ನೋಡಿಕೊಳ್ಳಲಿ. ಅಕ್ಷರಶಃ ನರಹತ್ಯೆಗಿಳಿದಿದ್ದ ನರೇಂದ್ರ ಮೋದಿ ಬಗ್ಗೆ ಆ ದಿನಗಳಲ್ಲಿ ಕೇಳಿದ ಪ್ರಶ್ನೆಗೆ ಅನಂತಮೂರ್ತಿಯವರು ಕೊಟ್ಟ ಜಾಣ ಉತ್ತರ: 'ನರೇಂದ್ರ ಮೋದಿ ಹಾಗೂ ಲಾಲೂ ಪ್ರಸಾದ್ ಯಾದವರ ರಾಜಕಾರಣ ಖಂಡನೀಯ'. ತತ್ವದ ಜೊತೆಯಲ್ಲೇ ಹೆಜ್ಜೆ ಹಾಕುವ ವಾಸ್ತವ ಪ್ರಜ್ಞೆ ಅಂದರೆ ಇದೇ ಇರಬೇಕು! ಅದೇನೇ ಇರಲಿ, ಮೊನ್ನಿನ ಸಮಾರಂಭದಲ್ಲಿ ಅವರ ವಾಸ್ತವ ಪ್ರಜ್ಞೆಯ ಇನ್ನೊಂದು ದುಃಖಕರ ಮುಖದ ಪರಿಚಯವೂ ಆಯಿತು. ಅವರು ಜೆ.ಡಿ(ಎಸ್)ನ ಕೆಟ್ಟತನಗಳ ಬಗ್ಗೆ ಜಿಗುಪ್ಸೆಯಂದ ಮಾತನಾಡಿದ ಉಸಿರಿನಲ್ಲೇ, ಅದು ಕಾಂಗ್ರೆಸ್ಸಿನೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಬೇಕೆಂದು ಸೂಚಿಸಿದರು. ಸದ್ಯದ ರಾಜಕೀಯ ಪರಿಸ್ಥಿತಿಗೆ ಇದೊಂದೇ ಪರ್ಯಾಯವೇ? ಅವರಿಗೆ ಈ ಮೂರೂ ಪಕ್ಷಗಳು ಪ್ರತಿನಿಧಿಸುವ ರಾಜಕೀಯ ಸಂಸ್ಕೃತಿಯಿಂದ ಇನ್ನೂ ಆಯಾಸವೇ ಆಗಿಲ್ಲವೇ? ಅವರ ಮನಸ್ಸು ಈ ರಾಜಕೀಯ ವಾಸ್ತವದಾಚೆಗೆ ಚಲಿಸಲೇಕೆ ನಿರಾಕರಿಸುತ್ತಿದೆ? ಹೊಸ ರಾಜಕೀಯ ಸಂಸ್ಕೃತಿಯನ್ನು ಕಟ್ಟಬೇಕಾದ ಅಗತ್ಯದ ಪ್ರಸ್ತಾಪವೂ ಅವರಿಂದ ಬರಲಿಲ್ಲವೆಂದರೆ? ವಾಸ್ತವ ಪ್ರಜ್ಞೆ ಎಂಬುದು ಇಷ್ಟೊಂದು 'ವಾಸ್ತವವಾದಿ'ಯಾಗರಬಾರದು...

ಅಂದಿನ ಸಮಾರಂಭದಲ್ಲಿ ನನ್ನ ಪುಸ್ತಕದ ಮೇಲೇ 'ಎಲ್ಲ ಜಗಳ ಮೀರಿ' ಎಂದು ಪ್ರೀತಿಯಿಂದ ಸಹಿ ಹಾಕಿ ಕೊಟ್ಟಿರುವ ಅನಂತಮೂರ್ತಿಯವರು ನನ್ನೆಲ್ಲ ಈ ಮಾತುಗಳನ್ನು ಈ ತಕ್ಷಣಕ್ಕಲ್ಲದಿದ್ದರೂ, ಕ್ರಮೇಣ ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳುತ್ತಾರೆಂದು ನಂಬಿದ್ದೇನೆ. ಏಕೆಂದರೆ, ಅವರದು ಮೂಲತಃ ಉದಾರವಾದ, ವಿಸ್ತಾರವಾದ ಸ್ಪಂದನಶೀಲ ಮನಸ್ಸು. ಸದ್ಯಕ್ಕೆ ಅವರೇ ಕನ್ನಡದ ಅತ್ಯಂತ ಎತ್ತರದ ವಿಚಾರಶೀಲ ಮನಸ್ಸು ಕೂಡಾ. (ಇಷ್ಟೇ ಎತ್ತರದ ಇನ್ನೊಂದು ಮನಸ್ಸು ಬಹುಕಾಲದಿಂದ ಮೈಸೂರಿನಲ್ಲಿ ಮಲಗಿಬಿಟ್ಟಿದೆ!) ಇದೇ ಸಮಾರಂಭದಲ್ಲಿ ಬಿಚ್ಚಿಕೊಂಡ, ಹಿಂದೂ ಕೋಮುವಾದಿಗಳ ಕೋಮುವಾದ ಸೆಕ್ಯುಲರ್ ಉದ್ದೇಶಗಳಿಂದ (ಅಂದರೆ ಲೌಕಿಕ ಪ್ರಗತಿಗಾಗಿ) ಪ್ರೇರಿತವಾಗಿದ್ದರೆ ಇದಕ್ಕೆ ತದ್ವಿರುದ್ಧವಾಗಿ ಮುಸ್ಲಿಂ ಕೋಮುವಾದ ತನ್ನ ಮೂರ್ಖತನದಲ್ಲಿ ಪ್ರಗತಿಗೆ ವಿರುದ್ಧವಾಗಿ ನಿಂತಿದೆಯೆನ್ನುವ ಅವರ ಒಳನೋಟ, ಅನಂತಮೂರ್ತಿಯವರ ಪ್ರತಿಭೆಗೆ ಮಾತ್ರ ದಕ್ಕುವಂತಹದ್ದು. ಇದು ಒಂದು ದೊಡ್ಡ ಚರ್ಚೆಯನ್ನೇ ಉಂಟು ಮಾಡವಷ್ಟು ಸಂಕೀರ್ಣವಾದ ಒಳನೋಟ. ಅವರು ಪ್ರಸ್ತಾಪಿಸಿದ ಸಾವರ್ಕರಿಂದ ಹಿಡಿದು ಅರುಣ್ ಜೈಟ್ಲಿಯರವರಗಿನ ಕೋಮುವಾದ ಪ್ರೇರಿತವಾಗಿರುವುದೇ ಮುಸ್ಲಿಮರ ಮತಸಂಪ್ರದಾಯಿಕತೆಯ ಖಂಡನೆಯಾಗಿಯೇ? ಮುಸ್ಲಿಂ ಸಂಸ್ಕೃತಿಯ ವಿರೋಧವಿರುವುದು ನಿಜವಾಗಿಯೂ ಪ್ರಗತಿಗೋ ಅಥವಾ ತಮ್ಮ ಸಂಸ್ಕೃತಿಗೆ ಒಗ್ಗದ ಪ್ರಗತಿಗೆ ಮಾತ್ರವೋ? ಮುಂತಾದ ಪ್ರಶ್ನೆಗಳಿಗೆ ಅವಕಾಶವಿರುವ ಈ ಚರ್ಚೆ, ಇಂದಿನ ಪ್ರಗತಿ ರಾಜಕಾರಣ ಕುರಿತಂತೇ ಒಂದು ಜಿಜ್ಞಾಸೆಯನ್ನು ಹುಟ್ಟುಹಾಕಬಲ್ಲುದು. ಏಕೆಂದರೆ, ಸ್ವತಃ ಅನಂತಮೂರ್ತಿಯವರೇ ಈ ಸಮಾರಂಭದಲ್ಲಿ 'ಪ್ರಗತಿ ಬೇಡ' ಎಂಬುದು ನಮ್ಮ ಸದ್ಯದ ಘೋಷಣೆಯಾಗಬೇಕು ಎಂದರಲ್ಲ?

ವಾಸ್ತವವಾಗಿ ಇದು ನನ್ನ ಘೋಷಣೆಯೂ ಹೌದು! ಕೆ.ರಾಮದಾಸ್ರ ಶ್ರದ್ಧಾಂಜಲಿ ಸಭೆಯಲ್ಲಿ ನಾನು ಮಾತನಾಡುತ್ತಾ, '... 'ಅಭಿವೃದ್ಧಿ' ಕುರಿತಂತೆ ನಾವಿಂದು ಆಮೂಲಾಗ್ರವಾಗಿ ಪುನರಾಲೋಚಿಸುವ ಅಗತ್ಯವಿದೆ. ಅತಿಗೆ ಹೋಗಿ ಹೇಳುವುದಾದರೆ, 'ಅಭಿವೃದ್ಧಿ ಇನ್ನು ಸಾಕು' ಎಂಬ ಪ್ರಣಾಳಿಕೆಯ ಆಧಾರದ ಮೇಲೇ ಸಮಾಜವಾದವಿಂದು ತನ್ನ ಹೋರಾಟವನ್ನು ಆರಂಭಿಸಬೇಕಿದೆ.' ಎಂದು ಹೇಳಿದ್ದೆ. (ನೋಡಿ: ವಾರದ ಒಳನೋಟ: ವಿಕ್ರಾಂತ ಕರ್ನಾಟಕ: 20.7.2007). ವಿವರಗಳಲ್ಲಿನ ವ್ಯತ್ಯಾಸಗಳೇನೇ ಇರಲಿ, ಅನಂತಮೂರ್ತಿಯವರಂತಹ ಹಿರಿಯ ಸಮಾಜವಾದಿ ಹಾಗೂ ನನ್ನಂತಹ ಕಿರಿಯ ಸಮಾಜವಾದಿ ಇಬ್ಬರೂ ಹೀಗೆ ಒಂದೇ ಹೊತ್ತಿಗೆ ಒಂದೇ ತಾತ್ವಿಕ ತೀರ್ಮಾನಕ್ಕೆ ಬಂದಿರುವುದು, ಸಮಾಜವಾದ ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ತನ್ನ ಕೇಂದ್ರ ಕಳೆದುಕೊಂಡಿಲ್ಲ ಹಾಗೂ ಅದು ಮರಳಿ ಬರಲೇ ಬೇಕು ಎಂಬುದನ್ನು ಸೂಚಿಸುತ್ತದೆಯಲ್ಲವೇ? ಇದೇ ಸಮಾರಂಭದಲ್ಲಿ ಸಂಕ್ಷಿಪ್ತವಾಗಿಯಾದರೂ, ಅದ್ಭುತವಾಗಿ ಮಾತನಾಡಿದ ಡಾ|| ರಾಜೇಂದ್ರ ಚೆನ್ನಿಯವರು ಹೇಳಿದ ಹಾಗೆ, ಸಮಾಜವಾದದ ಶಕ್ತಿ ಇರುವುದೇ ಅದರ ಕನಸುಗಾರಿಕೆ (utopia)ಯಲ್ಲಿ. ಇಂದಿನ 'ಪ್ರಗತಿ'ಶೀಲ ಮಾರುಕಟ್ಟೆ ಕೇಂದ್ರಿತ ಜಗತ್ತಿನ ಮಧ್ಯೆ ಕಳೆದು ಹೋಗಿರುವ ಈ ಕನಸುಗಾರಿಕೆಯನ್ನು ಮರಳಿ ತರುವ ಆಶಯವೇ 'ಮರಳಿ ಬರಲಿದೆ ಸಮಾಜವಾದ!' ಎಂಭ ಭರವಸೆಯ ಹಿಂದಿನ ಆಶಯವೂ ಆಗಿದೆ!

ಅಂದ ಹಾಗೆ: ಲೋಹಿಯಾ ಅವರ 40ನೇ ಪುಣ್ಯತಿಥಿ ಸಂದರ್ಭದಲ್ಲಿನ 'ಲೋಹಿಯಾ ನೆನಪು' ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಈ ಪುಸ್ತಕ ಬಿಡುಗಡೆ ಸಮಾರಂಭ, ಅನಂತಮೂರ್ತಿಯವರ ಭಾಗವಹಿಸುವಿಕೆಯೂ ಸೇರಿದಂತೆ ಯಾವುದೇ ಮಾನದಂಡದಿಂದ ನೋಡಿದರೂ, ಶಿವಮೊಗ್ಗದ ಮಟ್ಟಿಗಾದರೂ ಮುಖ್ಯ ಸಮಾರಂಭವಾಗಿತ್ತು. ಹಾಗಾಗಿಯೇ ನಾಡಿನ ಎಲ್ಲ ಪತ್ರಿಕೆಗಳೂ ಈ ಸಮಾರಂಭದ ವರದಿಯನ್ನು ವಿವರವಾಗಿ - ಕೆಲವು ಮುಖಪುಟದ ಸುದ್ದಿಯಾಗಿಯೂ - ಪ್ರಕಟಿಸಿದವು. ಆದರೆ 60ರ ಸಂಭ್ರಮದಲ್ಲಿರುವ 'ಪ್ರಜಾವಾಣಿ ಮಾತ್ರ ಒಂದು ಸಾಲನ್ನೂ ಪ್ರಕಟಿಸದೇ ಹೋಯಿತು - ಅದರ ಸೋದರ ಪತ್ರಿಕೆ 'ಡೆಕ್ಕನ್ ಹೆರಾಲ್ಡ್' ಸಚಿತ್ರ ವರದಿ ಪ್ರಕಟಿಸಿತಾದರೂ! ಮಾರನೇ ದಿನ ಅದು ತನ್ನ ಪ್ರಾದೇಶಿಕ ಪುಟದ ಮೇಲ್ತುದಿಯಲ್ಲಿ ಸಣ್ಣದೊಂದು ಚಿತ್ರ ಪ್ರಕಟಿಸಿ ಕೈತೊಳೆದುಕೊಂಡಿತು!

ಕನ್ನಡದ ಶ್ರೇಷ್ಠ ಪತ್ರಿಕೋದ್ಯಮದ ಪರಿ ಇದು!

Rating
No votes yet