ಭೂಮಿಯ ಬಿಸಿ ಏರುತ್ತಿದೆ

ಭೂಮಿಯ ಬಿಸಿ ಏರುತ್ತಿದೆ

ಅದು ಮಾರ್ಚ್ ತಿಂಗಳು ೨೦೦೮. ಸುಡು ಬಿಸಿಲಿನಿಂದ ತತ್ತರಿಸಬೇಕಾದ ಮಂಗಳೂರಿನಲ್ಲಿ ಭಾರಿ ಮಳೆಯ ಸಿಂಚನ. ಸುಮಾರು ಒಂದು ವಾರ ಮಳೆಯ ಆರ್ಭಟ. ಬಿಸಿಲಿನಿಂದ ತತ್ತರಿಸಿದ ಜನತೆ ಬಹಳ ಸಂತಸ ಪಟ್ಟರು. ಅತ್ತ ಖಾಲಿ ಆಗಿದ್ದ ತುಂಬೆ ಅಣೆಕಟ್ಟು ಭರ್ತಿಯಾಯಿತು. ಮಹಾನಗರ ಪಾಲಿಕೆ ಈ ಬೇಸಿಗೆಯಲ್ಲಿ ನೀರು ಸರಬರಾಜಿಗೆ ತೊಂದರೆಯಿಲ್ಲವೆಂದು ಖುಶಿಪಟ್ಟಿತು.

ಅಂದು ಮಂಗಳೂರಿನಲ್ಲಿ ಒಂದೇ ವಾರದಲ್ಲಿ ಸುಮಾರು ೨೮೦ ಮಿ.ಮೀ ನಷ್ಟು ಮಳೆಯಾಗಿತ್ತು. ಯಾವುದೇ ಮಳೆಗಾಲವನ್ನು ಮೀರಿಸುವಂತಿತ್ತು. ಇದಕ್ಕೆ ಕಾರಣ? ಭೂಮಿಯ ತಾಪಮಾನ ಹೆಚ್ಚಳದಿಂದ ಅರಬ್ಬೀ ಸಮುದ್ರ ತುಂಬಾ ಬಿಸಿಯಾಗಿತ್ತು. ಇದರಿಂದ ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತವುಂಟಾಗಿ ದಟ್ಟ ಮೋಡಗಳು ಕಾಣಿಸಿಕೊಂಡವು. ಅದರ ಪರಿಣಾಮ ಮಂಗಳೂರಿನಲ್ಲಿ ಅಕಾಲಿಕ ಮಳೆ.

ಒಂದು ವಾರದ ಮಳೆಯಿಂದಾಗಿ ಭೂಮಿ ತಣ್ಣಗಾಗಿತ್ತು. ಅದರ ಪರಿಣಾಮ ಬೇಸಿಗೆಯಲ್ಲಿ ಭೂಮಿ ಹೆಚ್ಚಾಗಿ ಬಿಸಿ ಆಗಲೇ ಇಲ್ಲ. ಇದರಿಂದ ಮುಂಗಾರು ಕೈ ಕೊಡುವ ಸೂಚನೆ ನೀಡಿತ್ತು. ಜೂನ್ ೨ ನೆ ವಾರವಾದರೂ ಮುಂಗಾರಿನ ಪತ್ತೆಯೇ ಇಲ್ಲ!! ಅಂತು ಇಂತೂ ಮಳೆ ಬಂತು. ಜುಲೈ ಮುಂಗಾರು ಕೃಷಿಕರಿಗೆ ತುಂಬಾ critical. ಆದರೆ ಮತ್ತೆ ಜುಲೈ ಸಮಯದಲ್ಲಿ ಕೈ ಕೊಟ್ಟಿತು. ಆ ಸಮಯದಲ್ಲಿ ತುಂಬಿ ತುಳುಕಬೇಕಾಗಿದ್ದ ನಮ್ಮ ಎರಡು ಬಾವಿಗಳು ತಳಕ್ಕೆ ಹೋಗಿದ್ದವು. ಕೊನೆಗೂ ೩ ವಾರದ ವಿರಾಮದ ನಂತರ ಆಗಸ್ಟ್ ಮೊದಲನೆ ವಾರ ಮತ್ತೆ ಪ್ರತ್ಯಕ್ಷವಾಯಿತು. ಆದರೆ ಸಮರ್ಪಕವಾಗಿ ಬೀಳಲಿಲ್ಲ. ಅಷ್ಟೊತ್ತಿಗೆ ಭತ್ತದ ಬೆಳೆಗಳು ಸೊರಗಿ ಹೋಗಿದ್ದವು. ಹವಾಮಾನ ತಜ್ಞರ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಬಂದ ಮಳೆ ಮುಂಗಾರೆ ಅಲ್ಲ!! ಅದು ಬಂಗಾಲ ಕೊಲ್ಲಿಯಲ್ಲಿ ಆದ ವಾಯುಭಾರ ಕುಸಿತದ ಫಲ. ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತಿದ್ದರೆ ಮುಂದೆ ಕೃಷಿಯನ್ನು ಮಾಡುವವರೇ ಇರುವುದಿಲ್ಲ. ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಬೀಳುವುದು ಖಂಡಿತ. ಏಕೆಂದರೆ ಉಳುವವನು ಇಲ್ಲದಿದ್ದರೆ ಪ್ರೊಡಕ್ಷನ್ ಎಲ್ಲಿ? ಆಗ ಎಲ್ಲಾ ದಿನಸಿಗಳ ಬೆಲೆ ಏರುವುದಂತು ನಿಶ್ಚಿತ. ಅಂದ ಹಾಗೆ ಈ ಬಾರಿ ಲಿಂಗನಮಕ್ಕಿಯಲ್ಲೂ ಮುಂಗಾರು ದುರ್ಬಲವಾಗಿತ್ತು. ಈ ಬಾರಿ ಒಂದು ಸಲವೂ ಜಲಾಶಯ ಭರ್ತಿಯಾಗಿಲ್ಲ. ಇದು ಕರ್ನಾಟಕದ ವಿದ್ಯುತ್ ಸಮಸ್ಯೆಯನ್ನು ಮತಷ್ಟು ಜಟಿಲಗೊಳಿಸಿದೆ. ಅದರ ಪರಿಣಾಮವನ್ನು ನಾವೇ ಎದುರಿಸುತಿದ್ದೇವೆ.

ಪಶ್ಚಿಮ ಕರಾವಳಿಯಲ್ಲಿ ಮುಂಗಾರು ಮಳೆ ಸರಿಯಾಗಿ ಏಕೆ ಬರಲಿಲ್ಲ? ಅದಕ್ಕೆ ಒಂದು ಕಾರಣ ವಾತಾವರಣದಲ್ಲಿನ ತೇವಾಂಶ ಕೊರತೆ. ಇನ್ನೊಂದು ಕಾರಣ ಸಹ ಇದೆ. IMD ಪ್ರಕಾರ ಬಿಸಿಯಾದ ದಕ್ಷಿಣ ಚೀನಾ ಸಮುದ್ರ. ಅತಿಯಾಗಿ ಬಿಸಿಯಾಗುತ್ತಿದ್ದರಿಂದ ದಕ್ಷಿಣ ಚೀನಾ ಸಮುದ್ರದಲ್ಲಿ ಪದೇ ಪದೇ ತೂಫಾನು ಏಳುತ್ತಿದ್ದವು. ಇದರ ಪರಿಣಾಮ ಮುಂಗಾರು ಮಾರುತಗಳು ದಕ್ಷಿಣ ಚೀನಾದ ಕಡೆ ಸೆಳೆಯಲ್ಪಡುತಿದ್ದವು. ಅತ್ತ ತೈವಾನ್ ಮತ್ತು ದಕ್ಷಿಣ ಚೀನಾದಲ್ಲಿ ಪದೇ ಪದೇ ತೂಫಾನ್ ಕಾಟ, ಇತ್ತ ಕರಾವಳಿ ರೈತರ ಪರದಾಟ. ತೂಫಾನಿನ ಪರಿಣಾಮದಿಂದ ನೈರುತ್ಯ ಮುಂಗಾರು ತಮಿಳುನಾಡಿನಲ್ಲಿ ಹೆಚ್ಚು ಮಳೆ ಸುರಿಸಿತು.

ಮುಂಗಾರು ಸರಿಯಾಗಿ ಬರದೆ ಇದ್ದುದರಿಂದ ಭೂಮಿ ತಾಪ ಮತ್ತೆ ಏರತೊಡಗಿತು. ಅಕ್ಟೋಬರ್ ತಿಂಗಳಿನಲ್ಲಿ ಮತ್ತೆ ಅರಬ್ಬೀ ಸಮುದ್ರ ಬಿಸಿಯಾಯಿತು. ಈಗ ಇದರ ಪರಿಣಾಮ ಉತ್ತರ ಕೇರಳದಲ್ಲಿ ಕಾಣಿಸಿಕೊಂಡಿತು. ಕೊಯಿಕ್ಕೊಡಿನಲ್ಲಿ ೩ ದಿವಸ ಸತತ ಮಳೆಯಾಯಿತು. ಮುಂಗಾರಿನ ಅವಧಿಯಲ್ಲಿ ಸಂಪೂರ್ಣ ಕೈ ಕೊಟ್ಟಿದ್ದ ಮಳೆ ಅಕ್ಟೋಬರ್ ಸಮಯದಲ್ಲಿ ಭಾರಿ ಮಳೆ ಸುರಿಸಿತು. ಕೊಯಿಕ್ಕೊಡಿನಲ್ಲಿ ಕಾಣಿಸಿಕೊಂಡ ಕುಂಭದ್ರೋಣ ಮಳೆ ಮೊದಲನೆ ದಿನ ೬೦ ಮಿ.ಮೀ, ಎರಡನೆಯ ದಿನ ೧೮೯ ಮಿ.ಮೀ ಮತ್ತು ಮೂರನೆಯ ದಿನ ೨೩೭ ಮಿ.ಮೀ ನಷ್ಟು ಸುರಿಯಿತು. ಪಕ್ಕದ ಕಣ್ಣೂರಿನಲ್ಲೂ ಇದರ ಪ್ರಭಾವ ಕಾಣಿಸಿಕೊಂಡಿತು.

ಇದು ಒಂದೆರಡು ನನಗೆ ತಿಳಿದಿರುವ ವಿಷಯಗಳು. ಉತ್ತರ ಭಾರತದಲ್ಲಿ ಈ ಬಾರಿ ಮುಂಗಾರು ಭಾರಿ ಮಳೆ ಸುರಿಸಿತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ ಕೈ ಕೊಟ್ಟಿತು. ಇಂತಹ ಅನೇಕ ನಿದರ್ಶನಗಳು ಸಿಗುತ್ತವೆ. ಆದರೆ ಮಾನವ ಇದರ ಬಗ್ಗೆ ಹೆಚ್ಚು ಯೋಚನೆ ಮಾಡುವುದೇ ಇಲ್ಲ. ನಾನೊಬ್ಬ ತಲೆ ಕೆಡಿಸಿಕೊಂಡರೆ ಏನು ಮಹಾ ಸಾಧನೆ ಆಗುವುದು ಎಂಬುವುದು ಅವನ ಹೇಳಿಕೆ. ಅದರಿಂದಲೇ ಇಂತಹ ಏರುಪೇರುಗಳು ನಡೆಯುವುದು. ಭೂಮಿ ತಾಪಮಾನ ಏರುವ ಸಂಗತಿಯ ಬಗ್ಗೆ ಯಾರು ಯೋಚಿಸದಿದ್ದರೆ ಮುಂದೊಂದು ದಿನ ಭಾರಿ ಪರಿಣಾಮವನ್ನು ಎದುರಿಸಬೇಕಾದೀತು.

ಕೊನೆ ಹನಿ: ಇತ್ತೀಚಿಗೆ ಟೈಮ್ಸ್ ಪತ್ರಿಕೆಯಲ್ಲಿ "National Action Plan on Climate Change" ಅವರ ಪ್ರಸ್ತಾವನೆಗಳನ್ನು ನೋಡಿದೆ. ಅದರಲ್ಲಿ ಖಾಸಗಿ ವಾಹನಗಳಿಗೆ ಕಡಿವಾಣ ಹಾಕುವ ಬಗ್ಗೆಯೂ ಪ್ರಸ್ತಾವನೆಗಳಿವೆ. ಮೊದಲೇ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ "Automobile industry" ಗೆ ಇಂತಹ ಬಿಸಿ ಮುಟ್ಟಿಸಲು ಸಾಧ್ಯವೇ? ನೀವು ಏನಂತೀರ?

Rating
No votes yet