ಭೋಗೇ ರೋಗಭಯಂ

ಭೋಗೇ ರೋಗಭಯಂ

ಭೋಗೇ ರೋಗಭಯಂ

ಕುಲೇ ಚ್ಯುತಿಭಯಂ

ವಿತ್ತೇ ನೃಪಾಲಾದ್ಭಯಂ

ಮಾನೇ ದೈನ್ಯಭಯಂ

ಬಲೇ ರಿಪುಭಯಂ

ರೂಪೇ ಜರಾಯಾಭಯಂ|

ಶಾಸ್ತ್ರೇ ವಾದಿಭಯಂ

ಗುಣೇ ಖಲಭಯಂ

ಕಾಲೇ ಕೃತಾಂತಾಭಯಂ

ಸರ್ವಂ ವಸ್ತು ಭಯಾನ್ವಿತಂ ಭುವಿನೃಣಾಂ 

ವೈರಾಗ್ಯಮೇವಾಭಯಂ ||

ರಾಜಾ ಭರ್ತೃಹರಿಯ ಈ ಮಾತು ಯಾವತ್ತಿಗೂ ಎಷ್ಟು ಸತ್ಯವೆಂಬುದನ್ನು ಈ ಸುಭಾಶಿತವನ್ನು ಅರ್ಥಮಾಡಿಕೊಳ್ಳುವಾಗ ನಮಗೆ ಅರಿವಾಗದಿರದು.

ಭಾವಾರ್ಥ: 

ಭೋಗವನ್ನು ಅನುಭವಿಸೋಣವೆಂದರೆ ಅದರಹಿಂದೆಯೇ ರೋಗದ ಭಯವು ನಮ್ಮನ್ನು ಕಾಡುತ್ತದೆ. ಹೊಟ್ಟೆ ತುಂಬಲು ಅತೀ ಅಗತ್ಯವಾದ ಸರಳವಾದ ಊಟ ಮಾಡುವುದನ್ನು ಬಿಟ್ಟರೆ ಹೆಚ್ಚು ಭೋಗಿಸಲು ಭಯವು ಕಾಡುತ್ತದೆ. ಸಕ್ಕರೆ ಖಾಯಿಲೆ, ಬಿ.ಪಿ, ಬೊಜ್ಜು, ...ಇತ್ಯಾದಿ ಯಾವ ಖಾಯಿಲೆಯು ಎಲ್ಲಿ ಕೆರಳೀತೋ ಎಂಬ ಭಯ.  [ ಕೆಲವರಿಗೆ  ಏಡ್ಸ್ ನಂತಾ ರೋಗಕ್ಕೆ ತುತ್ತಾಗಬೇಕಾಗುತ್ತದೋ ಎಂಬ ಭಯ] ನಾನು ಉನ್ನತಕುಲದಲ್ಲಿ ಜನಿಸಿದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳೋಣವೆಂದರೆ   ತನ್ನ ಮಗನೇ ಕುಲಕ್ಕೆಅಪಕೀರ್ತಿ ತರುವಂತೆ ಎಲ್ಲಿ ವರ್ತಿಸಿಬಿಡುತ್ತಾನೋ ಎಂಬ ಭಯ.ಧಾರಾಳವಾಗಿ ಹಣ ಸಂಪಾದಿಸಿ ಶ್ರೀಮಂತನಾಗೋಣವೆಂದರೆ ರಾಜನ ಭಯ, ಚೋರನ ಭಯ. ಇಂದಿನ ಕಾಲಕ್ಕೆ ವರಮಾನತೆರಿಗೆ ಅಧಿಕಾರಿಗಲ ಭಯ. ಮನೆಯಲ್ಲಿ ಹನವಿಡಲು ಕಳ್ಳಕಾಕರ ಭಯ.ಸದಾಚಾರ ಪಾಲನೆಯಿಂದ ಸನ್ಮಾನ್ಯನಾಗೋಣವೆಂದರೆ ಅಲ್ಪರಿಂದ ಅವಮಾನ ವಾಗುವ ಭಯ.ಬಲಶಾಲಿಯಾಗೋಣವೆಂದರೆ ಶತೃಆಕ್ರಮಣದ ಭಯ.ಸುಂದರ ಶರೀರವನ್ನು ಕಾಪಾಡಿಕೊಳ್ಳೋಣವೆಂದರೆ ವಯಸ್ಸಾಗುತ್ತಾ ಎಲ್ಲಿ ಸೌಂದರ್ಯವು ಕುಂದುತ್ತದೋ ಎಂಬ ಭಯ. ಓದಿ ಪಂಡಿತನಾಗೋಣವೆಂದರೆ ಪ್ರತಿವಾದಿ ಪಂಡಿತರ ಭಯ.ಎಲ್ಲಿ  ಮತ್ತೊಬ್ಬ ಪಂಡಿತನೆದುರು ಅವಮಾನವಾಗುತ್ತದೋ ಎಂಬ ಭಯ.ಸದ್ಗುಣವಂತನಾಗಿರೋಣವೆಂದರೆ ಧೂರ್ತರು ನಮ್ಮನ್ನು ದುರುಪಯೋಗಮಾಡಿಕೊಳ್ಳುವರೆಂಬ ಭಯ.ಶರೀರವನ್ನು ಚೆನ್ನಾಗಿ ಆರೋಗ್ಯವಾಗಿ ಇಟ್ಟುಕೊಳ್ಳೋಣವೆಂದರೆ ಯಾವಾಗ ಯಮನ ಕರೆ ಬರುತ್ತದೋ ಎಂಬ ಭಯ. ಒಟ್ಟಿನಲ್ಲಿ ಈ ಲೋಕದ ಎಲ್ಲಾ ವಸ್ತುಗಳಲ್ಲೂ ಭಯವು ತುಂಬಿಕೊಂಡಿದೆ. ಆದರೆ ವೈರಾಗ್ಯದಲ್ಲಿ ಮಾತ್ರವೇ ಭಯವು ಇಲ್ಲ. ಈ ಮೇಲಿನ ಇಷ್ಟೂ ವಿಷಯಗಳಲ್ಲಿ ವೈರಾಗ್ಯವನ್ನು ತಾಳಿದರೆ ಯಾರಿಗೆ ಹೆದರಬೇಕು?

ಭೋಗದ ವಿಚಾರದಲ್ಲಿ ವೈರಾಗ್ಯ ತಾಳಿದಾಗ ಜೀವ ಉಳಿಸಿಕೊಳ್ಳಲು ಒಂದಿಷ್ಟು ಆಹಾರ ಆಗ ರೋಗ ಹತ್ತಿರ ಸುಳಿಯದು

ಕುಲದ ವಿಚಾರದಲ್ಲೂ ಅಷ್ಟೆ.ನಾನು ಇಂತಾ ಕುಲದವನು ಎಂದು ಹೆಮ್ಮೆ ಪಟ್ಟಾಗ ಮಾತ್ರ ಎಲ್ಲಿ ನನ್ನ ಕುಲಕ್ಕೆ ಕಳಂಕ  ಬಂದೀತೋ ಎಂಬ ಭಯವು ಕಾಡುತ್ತದೆ. ಹೆಮ್ಮೆ ಪಡದೆ ಎಲ್ಲರಂತೆ ನನನ ಜನ್ಮವೂ ಆಗಿದೆ ಎಂದು ಎಲ್ಲರಂತಿದ್ದರೆ ಆತಂಕ ಪಡುವ ಸಂದರ್ಭವೇ ಬಾರದು.ಹಣವನ್ನು ಕೂಡಿಡುವುದೇಕೇ? ನಂತರ ಅದರ ರಕ್ಷಣೆಗಾಗಿ ಹೆದರುವುದೇಕೇ? ಗೀತೆಯಲ್ಲಿ   ಮಹಾತ್ಮನ ಗುಣವನ್ನು  ಹೇಳುವಂತೆ     " ವಿತ್ತೇ ತ್ಯಾಗ:" ಹೆಚ್ಚು ಸಂಪಾದಿಸಿದೀ ತಾನೇ, ನಿನ್ನ  ಜೀವನಕ್ಕೆ ಅಗತ್ಯಕ್ಕಿಂತ ಹೆಚ್ಚಿರುವುದನ್ನು ಸತ್ಕಾರ್ಯಕ್ಕೆ ದಾನಮಾಡಿಬಿಡು.ಆಗ ಸಂಪತ್ತಿನ ರಕ್ಷಣೆಗೆ ಹೆದರಬೇಕಿಲ್ಲ.ಭಯಪಡಬೇಕಾಗಿಲ್ಲ.ನಾನು ಎಲ್ಲರಿಗಿಂತ ಹೆಚ್ಚು ಎಂದು ತಿಳಿದಾಗ ಮಾತ್ರ ಬೇರೆಯವರಿಂದ ಎಲ್ಲಿ ಅವಮಾನವಾಗುತ್ತದೋ ಎಂಬ ಚಿಂತೆ. ಎಲ್ಲರಂತೆ ನಾನೂ ಎಂಬ ಭಾವನೆ ಇದ್ದರೆ ಮಾನಾಪಮಾನಗಳ ಭಯವೆಲ್ಲಿಂದ ಬಂತು? ನೀನು ಶಕ್ತಿಶಾಲಿಯಾಗೋಣವೆಂದುಕೊಂಡಾಗ ಮಾತ್ರವೇ ವೈರಿಯ  ಆಕ್ರಮಣದ    ಚಿಂತೆ. ಸಾಮಾನ್ಯರಿಗೆ ಯಾವ ಚಿಂತೆ? ಎಲ್ಲಾ ವಿಚಾರಗಳಲ್ಲೂ ಅಷ್ಟೆ ವಾಇರಾಗ್ಯಶಾಲಿಗಳಾಗಿದ್ದರೆ ಯಾರ ಭಯವೂ ಇಲ್ಲ.

 

Rating
No votes yet

Comments

Submitted by hemalata jadhav Fri, 11/29/2013 - 11:47

ಸುಭಾಷಿತ‌ ವಿವರಣೆ ಚೆನ್ನಾಗಿದೆ. ನಿರ್ಭಯವಾಗಿರುವವನು ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂ.

Submitted by H A Patil Fri, 11/29/2013 - 19:24

ಹರಿಹರಪುರ ಶ್ರೀಧರ ರವರಿಗೆ ವಂದನೆಗಳು
' ರಾಜಾ ಭತೃಹರಿಯ ಸುಭಾಷಿತವನ್ನು' ಅದರ ಭಾವಾರ್ಥ ಸಹಿತ ಸರಳವಾಗಿ ಆದರೆ ಮನ ಮುಟ್ಟುವಂತೆ ವಿರಿಸಿದ್ದೀರಿ. ನೀವು ವಿವರಿಸಿದಂತೆ ಎಲ್ಲ ಭಯಗಳಿಂದ ಮುಕ್ತತೆ4 ತ್ಯಾಗ ಗುಣದಿಂದ ಮಾತ್ರ ಸಾಧ್ಯ, ತ್ಯಾಗ ಭಾವ ಮನುಷ್ಯನನ್ನು ಎಲ್ಲ ಒತ್ತಡಗಳಿಂದ ದೂರ ಮಾಡುವ ಸಂಜೀವಿನಿ ಇದ್ದಂತೆ, ಉತ್ತಮ ಬರವಣಿಗೆ ಧನ್ಯವಾದಗಳು.