"ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು"
ಮೈಸೂರಿನ ವಿಸ್ಮಯ ಪ್ರಕಾಶನವು ಅಕ್ಟೋಬರ್ 13ರಂದು "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಕೃತಿಯನ್ನು ಲೋಕಾರ್ಪಣೆ ಮಾಡಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಂಸ್ಥಾಪಕರು ಹಾಗೂ ಕರ್ನಾಟಕವನ್ನು ಭ್ರಷ್ಟಾಚಾರಮುಕ್ತಗೊಳಿಸಬೇಕೆಂದು ಹೋರಾಡುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ಡಾ.ಆರ್.ಬಾಲಸುಬ್ರಹ್ಮಣ್ಯಂರವರು ಈ ಕೃತಿಯನ್ನು ರಚಿಸಿದ್ದಾರೆ. ಕರ್ನಾಟಕದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿ ಅಪಾರ ಜನಮನ್ನಣೆ ಗಳಿಸಿರುವ ಜಸ್ಟೀಸ್ ಸಂತೋಶ್ ಹೆಗ್ಡೆಯವರು ಪುಸ್ತಕ ಬಿಡುಗಡೆಗೊಳಿಸಿ "ಭಾರತದಲ್ಲಿ ಭ್ರಷ್ಟಾಚಾರ" ಕುರಿತು ಉಪನ್ಯಾಸ ನೀಡಲಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ವಿ.ಜಿ.ತಳವಾರ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಡಾ.ಆರ್.ಬಾಲಸುಬ್ರಹ್ಮಣ್ಯಂರವರು ಮುಖ್ಯ ಅತಿಥಿಯಾಗಿ ಹಾಗೂ ಪ್ರೊ. ಎ.ಆರ್.ವಿಶ್ವನಾಥ್, ಅಧ್ಯಕ್ಷರು, ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ ಇವರು ಅತಿಥಿಯಾಗಿ ಹಾಜರಿರುವರು.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿರುವ ಸೆನೆಟ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗಲಿದೆ.
ಡಾ.ಆರ್.ಬಾಲಸುಬ್ರಹ್ಮಣ್ಯಂರವರು ಇಂಗ್ಲಿಶ್ ನಲ್ಲಿ ಬರೆದಿರುವ ಲೇಖನಗಳ ಕನ್ನಡಾನುವಾದವಾದ "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಈ ಪುಸ್ತಕದ ಶೇಕಡ 80ರಶ್ಟು ಲೇಖನಗಳನ್ನು ನಾನು ಕನ್ನಡಕ್ಕೆ ಅನುವಾದಿಸಿರುವುದು ನನಗೆ ಹೆಮ್ಮೆಯ ಸಂಗತಿ.
ಲೇಖಕರು ಮುನ್ನುಡಿಯಲ್ಲಿ ಹೇಳಿರುವಂತೆ, "ಈ ಭ್ರಷ್ಟಾಚಾರವೆಂಬ ಪಿಡುಗನ್ನು ತಡೆಗಟ್ಟುವ ಮೊದಲ ಪ್ರಯತ್ನ ನಮ್ಮಿಂದಲೇ ಶುರುವಾಗಬೇಕಿದೆ. ಮಹಾತ್ಮ ಗಾಂಧೀಜಿವರೆಂದಂತೆ "ಇತರರಲ್ಲಿ ನಾವು ಬಯಸುವ ಬದಲಾವಣೆ. ಮೊದಲು ನಮ್ಮಿಂದಲೇ ಆಗಬೇಕು." ಇದನ್ನು ಸರಿಪಡಿಸಲು ಹೊರಡುವ ನಾವು, ಮೊದಲು ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಬೇಕು. ನಮ್ಮ ಮೌಲ್ಯಾಧಾರಿತ ಬದುಕೊಂದೇ ಭ್ರಷ್ಟಾಚಾರದ ಈ ಪಿಡುಗನ್ನು ಬಡಿದೋಡಿಸಲಾರದು. ಇದಕ್ಕೆ ಕಾನೂನು ಕಾಯ್ದೆಗಳ ನೆರವು ಅತ್ಯಗತ್ಯ. ಭ್ರಷ್ಟಾಚಾರದಲ್ಲಿ ತೊಡಗಿದವರು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲಾರದಂತಹ ಬಲಿಷ್ಠ ಕಾಯ್ದೆ ಬರಬೇಕು. ತಪ್ಪಿತಸ್ಥರಿಗೆ, ತಪ್ಪಿಗೆ ಶಿಕ್ಷೆ ಆಗಲೇಬೇಕು. ಬಲಿಷ್ಠ ಜನಲೋಕಪಾಲ ಮಸೂದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲರೂ ಒಂದಾಗಿ ಪ್ರಯತ್ನಿಸೋಣ."
ಈ ಕುರಿತ ಜಾಗೃತಿಗಾಗಿ ಸಂಪದಿಗರು ಈ ಪುಸ್ತಕವನ್ನು ಕೊಂಡು, ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದಲ್ಲಿ ಅಭಾರಿಯಾಗಿರುತ್ತೇನೆ.