ಮಂಪರಿನಲ್ಲಿ ಘಾಟಿ

ಮಂಪರಿನಲ್ಲಿ ಘಾಟಿ

ಬೆಂಗಳೂರಿನಿಂದ ಮೂಡುಬಿದ್ರೆಯ ದಾರಿಯಲ್ಲಿ ತೆವಳುತ್ತಿರುವ ಬಸ್ಸು. ನಡುರಾತ್ರಿ. ಬಸ್ಸಿನ ಅಲ್ಪ ಬೆಳಕಿನಲ್ಲಿ ಸರಿದು ಹೋಗುತ್ತಿದ್ದ ಮನೆ, ಅಂಗಳ, ಹಿತ್ತಲು, ಹಾಡಿ, ಕಾಡು... ಬಸ್ಸಿನ ಕ್ಷಣಿಕ ಬೆಳಕಿನಲ್ಲಿ ತೋರಿ ಕಾಣೆಯಾಗುತ್ತಿದ್ದ ದೇವಸ್ಥಾನ, ಮಸೀದಿ, ಇಗರ್ಜಿ ಗೋಪುರಗಳು... ಮತ್ತೆ ಕತ್ತಲೆಯಲ್ಲಿ ಕಾಡು ಬೇಲಿ ಇತ್ಯಾದಿ.

ಸಣ್ಣವನಿದ್ದಾಗ ಘಾಟಿ ಇಳಿದು ಹತ್ತುವುದನ್ನು ನೋಡುವ ಕುತೂಹಲದಲ್ಲಿ ಇವೆಲ್ಲವನ್ನು ಅರ್ಧ ಮಂಪರಿನಲ್ಲಿ ನೋಡುತ್ತಾ ನಿದ್ದೆ ಹತ್ತಿಬಿಡುತ್ತಿತ್ತು. ಘಾಟಿ ಹತ್ತಿ ಇಳಿಯುವುದು ಹಲವು ಸಲ ಸಿಕ್ಕುತ್ತಿರಲಿಲ್ಲ. ಆದರೆ, ಈ ಸಲ ಹಾಗಾಗಲಿಲ್ಲ. ಜೆಟ್‌ಲಾಗಿನ ಅವಾಂತರದಲ್ಲಿ ಎಚ್ಚರವಿತ್ತು. ಮನಸ್ಸಿನಲ್ಲಿ ನೆನಪುಗಳು ಬೆಚ್ಚಗೆ ಅರಳುತ್ತಿದ್ದವು. ಸಣ್ಣ ಮಗುವಿನ ಹಾಗೇ ಇವನ್ನೆಲ್ಲಾ ನೋಡುತ್ತಿದ್ದೇನೆ, ಅದೇ ಮಂಪರಿನಲ್ಲಿ, ಘಾಟಿಯ ಬರುವಿಕೆಯ ಕುತೂಹಲದಲ್ಲಿ ಅನಿಸುತ್ತಿತ್ತು!

ಬಸ್ಸು ಯಾಕೋ ತುಂಬಾ ತಡವಾಗಿ ಚಾರ್ಮಾಡಿ ಘಾಟಿ ತಲುಪಿತ್ತು. ಮುಂಜಾವದ ಬೆಳಕಲ್ಲಿ ಕಾತರದ ಮನಸ್ಸನ್ನು ಚೇಡಿಸುವಂತೆ ಮೆಲ್ಲನೆ ದೂರದ ಗುಡ್ಡ ಬೆಟ್ಟ ಮೋಡ ಎಲ್ಲ ಕಾಣತೊಡಗಿತು.

ಸರಕ್ಕನೆ ಇಳಿಯಬೇಕಾದ ಘಾಟಿಯ ಇಳಿಜಾರಿನಲ್ಲಿ ಏಕಾಏಕಿ ನಿಂತುಬಿಟ್ಟ ಬಸ್ಸು. ಮುಂದೆ ಹತ್ತಾರು ಬಸ್ಸು ಲಾರಿ ವಾಹನಗಳ ಸಾಲು. ತುಂಬಾ ಇಕ್ಕಟ್ಟಾದ ದಾರಿಯಲ್ಲಿ ಮುಂದಿಂದ ಬರುವ ವಾಹನಗಳನ್ನು ಸಂಬಾಳಿಸಿಕೊಂಡು ಹೋಗಬೇಕು. ಕೆಲವು ತಿರುವುಗಳಲ್ಲಿ ಅರ್ಧ ಮುಕ್ಕಾಲು ಗಂಟೆ ನಿಂತುಬಿಡುತಿತ್ತು. ಶಿರಾಡಿ ಘಾಟಿ ಮುಚ್ಚಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಎರಡರಷ್ಷು ಗಾಡಿಗಳು. ನಿಂತ ಬಸ್ಸಿಂದ ಇಳಿದು ಅಡ್ಡಾಡುತ್ತಾ, ಸರ್ಕಾರವನ್ನು ಬಯ್ಯುತ್ತಾ ಕಾಲದೂಡುತ್ತಿದ್ದ ಮಂದಿ. ಹೀಗೆ ಮೆಲ್ಲನೆ ತೆವಳಿ ಇಳಿಯುವಾಗ ನಾಕೈದು ಗಂಟೆ ಕಳೆದು ಬಿಟ್ಟಿತ್ತು. ಬೆಳಕು ಚೆನ್ನಾಗಿಯೇ ಹರಿದಿತ್ತು.

ಅರೆ ಮಂಪರಿನಲ್ಲಿ ಘಾಟಿ ಇಳಿಯುವ ಕಾರ್ಯಕ್ರಮವನ್ನು ಇಷ್ಟವಿಲ್ಲದಿದ್ದರೂ ಮತ್ತೊಂದು ದಿನಕ್ಕೆ ಮುಂದೂಡಬೇಕಾಯಿತು.

Rating
No votes yet

Comments