ಮಕ್ಕಳಾಚರಣೆಯ ದಿನ ಹೆಣ್ಣುಮಕ್ಕಳಿಗೊಂದು ಜೋಗುಳದ ಗಾನ

Submitted by saraswathichandrasmo on Wed, 11/14/2012 - 11:56
ಚಿತ್ರ

 

ಮಕ್ಕಳಾಚರಣೆಯ ದಿನ
ಹೆಣ್ಣುಮಕ್ಕಳಿಗೊಂದು ಜೋಗುಳದ ಗಾನ
 
ಜೋಗುಳ ಹಾಡದೆ ಇರೊ ತಾಯಿ ಇಲ್ಲ.
ಕೇಳಿ ಮಲಗದೆ ಇರೊ ಮಕ್ಕಳಿಲ್ಲ.
ಅಂತ ನನ್ನ ಅನುಭವ ಹಾಗು ಅನಿಸಿಕೆ.  ನಾನು ಕೇಳಿರೊ ಜೋಗುಳದ ಹಾಡುಗಳಲ್ಲಿ ಬಹಳಷ್ಟು ಕೃಷ್ಣ ಹಾಗು ರಾಮರ ಮೇಲೆ.  ಒಂದೆರಡು ಮಗುವಿನ ಮೇಲೆ ಇವೆ ಅನ್ನುವುದನ್ನು ಬಿಟ್ಟರೆ ಹೆಣ್ಣುಮಕ್ಕಳಿಗಾಗಿ ಇರುವುದು ನಾನು ಕೇಳಿಲ್ಲ.  ನಾನು ಹೆಣ್ಣು ಮಗುವೇ ಬೇಕೆಂದು ಆಸೆ ಪಟ್ಟವಳು. ಹೆಣ್ಣು ಮಗುವೆ ಆಗಿದ್ದು ಅದೃಷ್ಟ ಹಾಗು ಸಂತೋಷದ ವಿಷಯ.  ಈಗವಳು ಓದು ಮುಗಿಸಿ ಕೆಲಸದಲ್ಲಿದ್ದಾಳೆ. ಅವಳು ಸಣ್ಣವಳಿದ್ದಾಗ ಮಲಗಿಸಲು ಬಹಳಷ್ಟು ಹಾಡುಗಳನ್ನು ಹಾಡಬೇಕಿತ್ತು. 
೧. ಮಲಗು ಮಲಗೆನ್ನ ಮಗುವೆ
೨.ಜೋಜೋ ಲಾಲಿ ನಾ ಹಾಡುವೆ
೩.ಚೆಲುವೆ ಯಾರೊ ನನ್ನ ತಾಯಿಯಂತೆ
೪.ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
೫.ಜೋಜೋ ಕೃಷ್ಣ ಪರಮಾನಂದ
೬.ತೂಗೀರೆ ರಂಗನ ತೂಗೀರೆ
೭.ಆದಿದೇವ ಆದಿಮೂಲ.
ಹೀಗೆ ಇಷ್ಟು ಹಾಡುಗಳನ್ನು ಹಾಡಿದ ಮೇಲೂ ನನ್ನ ಜೋಗುಳದ ಹಾಡಿನ ಭಂಡಾರ ಖಾಲಿ ಆಗುತ್ತಿತ್ತೆ ಹೊರತು ಅವಳು ನಿದ್ರೆ ಮಾಡುತ್ತಿರಲಿಲ್ಲ. ನನಗೆ ಹೆಣ್ಣುಮಕ್ಕಳಿಗೆ ಅಂತ ಇರೋ ಜೋಗುಳದಹಾಡು ಒಂದೂ ಸಿಕ್ಕಿರಲಿಲ್ಲ.  ನಾನು ಇತ್ತೀಚೆಗೆ ಸುಗಮಸಂಗೀತ ತರಗತಿಗೆ ಸೇರಿಕೊಂಡೆ. ಅಲ್ಲಿ ಒಂದು ಜಾನಪದ ಜೋಗುಳದ ಹಾಡನ್ನು ಹೇಳಿ ಕೊಟ್ಟರು.
"ಬಂಗಾರದ ತೊಟ್ಟಿಲ ಗಿರಿಸಾಲದುಂಗುರ" ಅಂತ. ಅದನ್ನು ಕೇಳಿದ ಮೇಲೆ ಅದೇ ಧಾಟಿಯಲ್ಲಿ ಹೆಣ್ಣುಮಗುವಿಗೆ ಜೋಗುಳದ ಹಾಡು ಹಾಡುವ ನನ್ನ ಆಸೆ ಪೂರೈಸಿತು.  ನನಗೆ ಭಾಷಪ್ರೌಢಿಮೆ ಕಡಿಮೆ ಹಾಗಾಗಿ ಬಹಳ ಸರಳವಾಗಿ, ಆಡುಭಾಷೆಯಲ್ಲಿ ಬರೆದಿದ್ದೇನೆ. ಮಕ್ಕಳಾಚರಣೆ ದಿನದಂದು ಎಲ್ಲಾ ಹೆಣ್ಣುಮಕ್ಕಳಿಗೂ, ಹೆಣ್ಣು ಮಕ್ಕಳ ತಾಯಂದಿರಿಗೂ   ನನ್ನದೊಂದು ಪುಟ್ಟದೊಂದು ಕಾಣಿಕೆ ಈ ಹಾಡು.
 
ಅಂದಾದ ತೊಟ್ಟಿಲಲಿ, ಚೆಂದಾಗಿ ಮಲಗಿರುವ
ಮುದ್ದಾದ ಕಂದಮ್ಮಗೆ, ಸದ್ದು ಮಾಡದೆ ತೂಗಿ............ಜೋಜೋ
     ಎಮ್ಮ ಮನೆಯಂಗಳದಿ. ಅರಳಿರುವ ಸುಮಬಾಲೆ
     ಲಕ್ಷ್ಮಿಯಂದದಿ ಮನೆಯ, ಬೆಳಗಲು ಬಂದಾಳ............ಜೋಜೋ
ಕಡುಗಪ್ಪು ಕಂಗಳು, ಮೂಗು ಸಂಪಿಗೆ ಎಸಳು
ಹವಳದ ತುಟಿಗಳು, ಹಾಲ್ಗೆನ್ನೆ ಸೆಳಿತಾವ................. ಜೋಜೋ
     ನಿದ್ರೆಯಿಂದೇಳುತ್ತ, ಕಣ್ಣಾ ತೆರೆಯುವಾಗ
     ಅಮ್ಮನ ಕಾಣದಿದ್ರೆ, ಸುಮ್ಮನೆ ಅಳುತಾಳ................ಜೋಜೋ
ಸಣ್ಣನೆ ಬಟ್ಟಲಲ್ಲಿ ಎಣ್ಣೇ ಇಟ್ಟುಕೊಂಡು
ಹಚ್ಚಲು ಹೋದರೆ ರಚ್ಚೆಯ ಹಿಡಿತಾಳ.........ಜೋಜೋ
     ಹಸಿವಾಗಿ ಅಳುವಾಗ ಬೇಗ ಹಾಲು ಕೊಡದಿದ್ರೆ
     ಕೊಟ್ಟ ಹಾಲು ಕುಡಿಯದೆ ಸಿಟ್ಟಾಗಿ ಇರುತಾಳ.........ಜೋಜೋ
ಊಟವ ಮಾಡಲು ಬಲು ಆಟ ಆಡುತಾಳ
ನುಂಗದೆ ಬಾಯಲ್ಲಿ ಇಟ್ಟುಕೊಂಡು ತುಪ್ಪುತಾಳ....... ಜೋಜೋ
    ಸಂಜೆಯ ಹೊತ್ತಿಗೆ ಹೊರಗೆ ಹೊಗೋಣೆಂದು
    ಸುಳ್ಳೇ ರಗಳೆ ಮಾಡಿ ಮಳ್ಳಿಯಂತಿರುತಾಳ.................ಜೋಜೋ
ರಾತ್ರಿ ಮಲಗೊ ವೇಳೆ ಜೋಗುಳವ ಹಾಡೆಂದು 
ಕಣ್ಣನು ಮುಚ್ಚದೆ ಕಿರಿಕಿರಿ ಮಾಡ್ತಾಳ.......................ಜೋಜೋ
    ಕಂದ ಅಳಬೇಡ, ಅತ್ತು ಹೆದರಿಸಬೇಡ
    ನಗುನಗುತ ನೀನಿದ್ದರೆ, ಸವಿದಂಗೆ ಸಕ್ಕರೆ...............ಜೋಜೋ
ದೇವರು ಗುರು ಹಿರಿಯರೆಂದರೆ ಭಕ್ತಿ ಇರಲಿ
ತಂದೆ ತಾಯಿಯರೆಂದರೆ ಪ್ರೀತಿ ಆದರವಿರಲಿ........ ಜೋಜೋ
    ಹಿರಿಯರು ಹೇಳಿದಂತೆ ಮೊದಲು ಮಾನವಳಾಗು
    ಒಳಿತನ್ನೇ ಬಯಸುವ ಹೆಮ್ಮೆಯ ಮಗಳಾಗು..........ಜೋಜೋ
ಮನಸು ತಣ್ಣಗಿರಲಿ, ನಿದಿರೆ ಕಣ್ಣಿಗೆ ಬರಲಿ
ಕನಸಲಿ ಚಂದಿರ, ತಾರೆ ಆಟಕೆ ಸೇರಲಿ.................ಜೋಜೋ
    ಆಯಸ್ಸು, ಆರೋಗ್ಯ, ಸಂಪತ್ತು, ವಿದ್ಯೆಯ 
    ನಿನಗೆ ಕರುಣಿಸಲೆಂದು, ಬೇಡುವೆನು ಆ ದೇವರ ........ಜೋಜೊ
                                                            
                                                                          ಶಾರಿಸುತೆ                                        
ಚಿತ್ರಕೃಪೆ: ಕುಟುಂಬದ ಆಲ್ಬಮ್
ಈ ಹಾಡನ್ನು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಕೇಳಬಹುದು
 http://youtu.be/1VjUxzCyO3g
 
Rating
No votes yet