ಮಕ್ಕಳ ಆರೋಗ್ಯ.....೧

ಮಕ್ಕಳ ಆರೋಗ್ಯ.....೧


ಗರ್ಬಿಣಿಯಾದಾಗ....ಮಗು ಹುಟ್ಟುವ ಮೊದಲು.......

ಕೆಲವು ಜೆನೆಟಿಕ್ ಖಾಯಿಲೆಗಳನ್ನು ಗರ್ಬಿಣಿಯಾದಾಗಲೇ ಮಗು ಹುಟ್ಟುವ ಮೊದಲು ಕಂಡು ಕೊಳ್ಳುವುದಕ್ಕೆ ಕೆಲವು ಪರೀಕ್ಷೆಗಳಿವೆ. ಇವುಗಳನ್ನು ಮೊದಲೇ ಪತ್ತೇ ಹಚ್ಚುವುದರಿಂದ, ನಿಭಾಯಿಸಲು, ನಿವಾರಿಸಲು ಯೋಜನೆ ಮಾಡಿಕೊಳ್ಳಲು ಅನುಕೂಲವಾಗುತ್ತೆ. ಈ ಪರೀಕ್ಷೆಗಳು ಕೆಳಗಿವೆ.

೧. ಆಮ್ನಿಯೋಸೆಂಟೆಸಿಸ್:

ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಎರಡನೇ ಟ್ರೈಮಿಸ್ಟರ್ ಅಂದರೆ ೧೫ ವಾರದಿಂದ ೨೦ ವಾರದ ಅವಧಿಯಲ್ಲಿ ಮಾಡಲಾಗುತ್ತೆ(ಗರ್ಭ ಹೊತ್ತ ದಿನದಿಂದ). ಒಂದು ಸಣ್ಣ ಸೂಜಿಯನ್ನು ಹೊಟ್ಟೆಯ ಮೂಲಕ ಗರ್ಭಕೋಶದೊಳಗೆ ನುಸುಳಿಸಿ ಆಮ್ನಿಯೋಟಿಕ್ ದ್ರವವನ್ನು ಸಂಗ್ರಹಿಸಲಾಗುತ್ತೆ. ಈ ಆಮ್ನಿಯೋಟಿಕ್ ದ್ರವವು ಮಗುವಿನ ಸುತ್ತ ಚೀಲಗಳಲ್ಲಿ ಇದ್ದು ಮಗುವನ್ನು ಪೆಟ್ಟುಗಳಿಂದ ರಕ್ಷಿಸಿ ಸುರಕ್ಷಿತವಾಗಿ ಇಟ್ಟಿರುತ್ತೆ.

ಈ ದ್ರವದಲ್ಲಿ ಮಗುವಿಗೆ ಸೇರಿದ ಕೆಲವು ಜೀವ ಕೋಶದ ಕಣಗಳೂ ಇರುತ್ತದೆ. ಈ ದ್ರವದಲ್ಲಿರುವ ಜೀವಕೋಶಗಳನ್ನು ಮೈಕ್ರೋಸ್ಕೋಪ್ ನಲ್ಲಿ ಪರೀಕ್ಷಿಸಿದಾಗ, ಕೆಲವು ಜೆನೆಟಿಕ್ ಖಾಯಿಲೆಗಳಾದ "ಡೌನ್ ಸಿನ್ಡ್ರೋಮ್", "ಸ್ಪೈನ ಬೈಫಿಡ" ಮುಂತಾದುವುಗಳನ್ನು ಮಗು ಹುಟ್ಟುವ ಮೊದಲೇ ಗುರುತಿಸಬಹುದು. ಗುರುತಿಸಿದ ನಂತರ ಅದಕ್ಕೆ ಸಂಭಂದ ಪಟ್ಟ ಚಿಕಿತ್ಸೆಗಳನ್ನು ತಕ್ಷಣ ಶುರುಮಾಡಲು ಅನುವಾಗುತ್ತದೆ. ಎರಡು ವಾರಗಳಲ್ಲಿ ಈ ಪರೀಕ್ಷೆಯ ಉತ್ತರ ತಿಳಿಯಬಹುದು. ಈ ಪರೀಕ್ಷೆ ಕೆಲವೊಮ್ಮೆ ೩೬ ವಾರಗಳ ನಂತರ ಮಾಡುವುದಿದೆ. ಅದರ ಉದ್ಧೇಶ ಮಗುವಿನ ಶ್ವಾಸಕೋಶದ ಅಭಿವೃದ್ಧಿ ಸರಿಯಾಗಿದೆಯೇ ಎಂದು ತಿಳಿಯಲು ಉಪಯೋಗಿಸುತ್ತಾರೆ.

೨. ಕೋರಿಯಾನೊಕ್ ವಿಲ್ಲಸ್ ಸ್ಯಾಂಪ್ಲಿಂಗ್:

ಈ ಪರೀಕ್ಷೆಯನ್ನು ೧೦ ರಿಂದ ೧೨ ವಾರದ ಅವಧಿಯೊಳಗೆ (ಗರ್ಭ ಹೊತ್ತ ದಿನದಿಂದ) ಮಾಡಲಾಗುತ್ತೆ. ಇದು ಆಮ್ನಿಯೋಸೆನ್ಟೆಸಿಸ್ ಗಿಂತಲೂ ಮೊದಲೇ ಮಾಡಬೇಕಾದ ಪರೀಕ್ಷೆ. ಮೇಲಿನಂತೆ ಇಲ್ಲಿಯೂ ಸಣ್ಣ ಸೂಜಿಯನ್ನು ಬಳಸಲಾಗುತ್ತೆ. ಆದರೆ, ಇಲ್ಲಿ ಕೋರಿಯಾನಿಕ್ ವಿಲ್ಲೈ ಎಂಬ ಪ್ಲಾಸೆಂಟಾದ ಜೀವಕೋಶದ ಸ್ಯಾಂಪಲ್ ಅನ್ನು ಸಂಗ್ರಹಿಸಲಾಗುವುದು. ಇದನ್ನು ಸಣ್ಣ ಕೊಳವೆ ಉಪಯೋಗಿಸಿ (ಕ್ಯಾತೆಟರ್) ವಜೈನ ದಿಂದ ತೂರಿಸಿ ಕೂಡಾ ಮಾಡಬಹುದು. ಇದರ ಪರೀಕ್ಷೆಯಿಂದ "ಡೌನ್ ಸಿನ್ಡ್ರೋಮ್", ಟೇ ಸ್ಯಾಕ್ಸ್ ಡಿಸೀಸ್", ಸಿಕಲ್ ಸೆಲ್ ಅನೀಮಿಯ, ಮತ್ತು ತ್ಯಲಸೀಮಿಯ ಮುಂತಾದ ಜೆನೆಟಿಕ್ ಖಾಯಿಲೆಗಳನ್ನು ಮಗು ಹುಟ್ಟುವ ಮೊದಲೆ (ಮಗು ಇವುಗಳಿಗೆ ತುತ್ತಾಗಿದ್ದರೆ) ಕಂಡುಕೊಳ್ಳಬಹುದು.  

ಚಿತ್ರ ಕೃಪೆ:  ಗೂಗಲ್- ಫಸ್ಟ್ ಟ್ರೈಮಿಸ್ಟರ್ ಪ್ರೆಗ್ನನ್ಸಿ ಯಿಂದ ಹೆಕ್ಕಿದ್ದು.

- ಡಾ||ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

Rating
No votes yet

Comments