ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್ತಾಗ, ಮತ್ತೆ ತಾಳ್ಮೆ ಕೆಡುತ್ತದೆ.

ಸ್ವಲ್ಪ ಹೊತ್ತಿನ ನಂತರ ಕೋಪ ಇಳಿದಿರುತ್ತದೆ. ಮಾಡಿದ ಕೆಲಸ ನೆನೆದು ಮನಸ್ಸು ಮರುಗುತ್ತದೆ. ಎಂಥಾ ದಡ್ಡತನದ ಕೆಲಸ ಮಾಡಿದೆನಲ್ಲ ಎಂದು ಪಶ್ಚಾತ್ತಾಪ ಉಂಟಾಗುತ್ತದೆ. ಮಗುವನ್ನು ರಮಿಸುತ್ತೇವೆ. ಮಗುವೇನೋ ಬೇಗ ಮರೆತು ಮತ್ತೆ ನಗುತ್ತದೆ. ಆದರೆ ನಮಗೆ ಹಾಗೆ ತಕ್ಷಣ ಮನಸ್ಸು ಬದಲಾಯಿಸಿಕೊಳ್ಳಲು, ಮಾಡಿದ್ದ ತಪ್ಪನ್ನು ಮರೆತುಬಿಡಲು ಸಾಧ್ಯವಾಗುವುದಿಲ್ಲ.

ಏಕೆ ತಾಳ್ಮೆಗೆಡುತ್ತೇವೆ? ಮಗು ನಮ್ಮ ನಿರೀಕ್ಷೆಯ ಮಟ್ಟಕ್ಕೆ ಸ್ಪಂದಿಸಲಿಲ್ಲ ಎಂಬ ಅಸಮಾಧಾನಕ್ಕೋ ಅಥವಾ ಅದು ನಾನು ಹೇಳಿದ ಹಾಗೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೋ? ಒಟ್ಟಿನಲ್ಲಿ ನಮ್ಮ ವಿವೇಕ ಕೈಕೊಟ್ಟಿರುತ್ತದೆ.

ಆದರೆ, ಇಂಥದೇ ಅಸಮಾಧಾನವನ್ನು ನಮಗಿಂತ ದೊಡ್ಡವರು ಅಥವಾ ನಮ್ಮ ಜೊತೆಗಿರುವವರು, ಅವರು ಬಂಧುಗಳಾಗಲಿ, ಗೆಳತಿಯರಾಗಲಿ ತೋರಿಸಿದರೆ ನಮ್ಮ ಮನಃಸ್ಥಿತಿ ಹೇಗಿರುತ್ತದೆ? ಮಕ್ಕಳಂತೆ ಅನಿಸಿಕೊಂಡಿದ್ದನ್ನು, ಬೈಸಿಕೊಂಡಿದ್ದನ್ನು ನಾವು ತಕ್ಷಣ ಮರೆಯಲಾರೆವು. ಹಾಗಾದರೆ, ಮಕ್ಕಳಿಗಿಂತ ನಾವು ಚಿಕ್ಕವರಾದ ಹಾಗೆ ಅಲ್ಲವೆ?

ಎಷ್ಟೋ ಸಾರಿ ಹೀಗೆ ಅಂದುಕೊಂಡಿದ್ದೇನೆ. ಮಕ್ಕಳ ಮೇಲೆ ರೇಗಬಾರದು. ಹಾಗಂತ, ಅವು ತೀರಾ ಮೊಂಡುತನದಿಂದ ವರ್ತಿಸಿದರೆ ಶಿಕ್ಷೆ ಕೊಡಬಾರದು ಎಂದಲ್ಲ. ಆದರೆ ನಮ್ಮ ಶಿಕ್ಷೆ ಸಿಟ್ಟಿನಿಂದ ಮೂಡಿರಬಾರದು. ಅದಕ್ಕೆ ವಿವೇಕದ ಕಡಿವಾಣ ಇರಬೇಕು. ಯೋಚಿಸಿ ಶಿಕ್ಷಿಸಿದರೆ ಅದರ ಫಲಿತಾಂಶ ಉತ್ತಮವಾಗುತ್ತದೆ.

ನನ್ನ ಉದ್ದೇಶ ಇಷ್ಟೇ, ನಮ್ಮ ಮಕ್ಕಳ ನಡವಳಿಕೆಗಳ ಬಗ್ಗೆ ತಾಳ್ಮೆಯ ಪ್ರತಿಕ್ರಿಯೆ ಇದ್ದಷ್ಟೂ ಒಳ್ಳೆಯದು. ಇದನ್ನು ಅಭ್ಯಾಸ ಮಾಡಿಕೊಂಡರೆ, ದೊಡ್ಡವರ ಜೊತೆಗೂ ನಾವು ಸಮಾಧಾನದಿಂದ ವರ್ತಿಸುವುದು ಸಾಧ್ಯವಾಗುತ್ತದೆ. ಆಗ ನಮ್ಮ ಮನಸ್ಸು ಹಿಡಿತಕ್ಕೆ ಬಂದು, ವಿವೇಕದಿಂದ ವರ್ತಿಸುವುದು ಸುಲಭವಾಗುತ್ತದೆ. ನಮ್ಮ ಮಕ್ಕಳು ನಮ್ಮ ಗುರುವಾಗುವುದು ಹೀಗೆ. ಮಕ್ಕಳು ಎಷ್ಟೇ ಚಿಕ್ಕವರಿರಲಿ, ಅವುಗಳಿಂದ ಕಲಿಯುವುದು ತುಂಬ ಇರುತ್ತದೆ.

ಅನುಮಾನ ಬಂದರೆ ಪರೀಕ್ಷಿಸಿ ನೋಡಿ. ಮುಗ್ಧ ಮಕ್ಕಳು ಕಲಿಸಿದಂತೆ ಪ್ರಬುದ್ಧ ವ್ಯಕ್ತಿ ಕಲಿಸಲಾರ. ಆದರೆ, ನಮಗೆ ಕಲಿಯುವ ಮನಸ್ಸಿರಬೇಕಷ್ಟೇ.

- ರೇಖಾ ಚಾಮರಾಜ

Rating
No votes yet

Comments