ಮಗುಗಳ ಮಾಣಿಕ್ಯ
ಮಳೆ ಬರುವ ಮೊದಲು ಹೋಗಿ ಮನೆ ಸೇರಿಬಿಡಬೇಕು ಎಂಬ ಧಾವಂತದಲ್ಲಿ ಕ್ಯಾಬ್ ಇಳಿದವಳು ಓಡುತ್ತ ಬಂದೆ. ಮುಖ್ಯರಸ್ತೆಯಿಂದ ನಮ್ಮನೆಗೆ ಹೋಗುವಾಗ ಒಂದು ದೊಡ್ಡ ಏರು(ಅಥ್ವಾ ಹಳ್ಳ) ಇಳಿಯಬೇಕು. ನಮ್ಮ ಮನೆಯಿರುವ ಬಡಾವಣೆ ಬೆಂಗಳೂರಿನ ಎತ್ತರದ ಗುಡ್ಡದ ಸರಹದ್ದು. ಹಾಗಾಗಿ ದಿನಾ ಆರೂವರೆಗೆ ಮನೆಗೆ ನಡೆದುಹೋಗುವಾಗ ಅಲ್ಲಿ ಪಶ್ಚಿಮದಂಚಲ್ಲಿ ಅಡಗುತ್ತಿರುವ ಕುಂಚಕೋವಿದ ಬೆಳಕಿನ ಶೂರ ಸೂರ್ಯ ಮಾಮಾ ಟಾಟಾ ಮಾಡುತ್ತಿರುತ್ತಾನೆ. ಅವನು ಆಗಷ್ಟೇ ನೀಡಿ ಹೋದ ಬೆಚ್ಚನೆ ಅಪ್ಪುಗೆಯಿಂದ ಬಾನ್ದೇವಿಯ ಪಡುವಣ ಕೆನ್ನೆ ಕೆಂಪಗೆ ಮಿರಮಿರನೆ ಮಿನುಗುತ್ತಿರುತ್ತದೆ. ದಾರಿಬದಿಯಲ್ಲಿ ಕುಳಿತಿರುವ ಹೂವಾಡಗಿತ್ತಿಯ ಬುಟ್ಟಿಯ ತುಂಬ ಆಗಷ್ಟೇ ಬಿರಿಯುತ್ತಿರುವ ಮೊಗ್ಗಿನ ಘಮ. ಸಂಜೆ ಟ್ಯೂಶನ್ನಿಗೂ ಖುಶಿಯಲ್ಲಿ ಸೈಕಲ್ ರೇಸ್ ಮಾಡಿ ಹೋಗುವ ಪುಟ್ಟ ಹುಡುಗರು. ಕಾಲೇಜಿನಿಂದ ಮನೆಗೆ ಬಂದು ಫ್ರೆಶ್ಶಾಗಿ, ಸಂಜೆ ದೇವಸ್ಥಾನಕ್ಕೆ ಹೊರಟ ಟಿಪ್ ಟಾಪ್ ಗೆಳತಿಯರು, ಅವರು ಬರುವುದನ್ನೇ ತನ್ನ ಅಂಗಡಿಯ ಕನ್ನಡಿಯಲ್ಲಿ ನೋಡುತ್ತ ಕುಳಿತ ಜುವೆಲ್ಲರಿ ಹುಡುಗ.. ಎಲ್ಲ ನಿತ್ಯದ ಆಪ್ತ ನೋಟಗಳೆ.
ಇವತ್ತು ಕೊಂಚ ಬದಲಾವಣೆ. ಮೋಡದ ಬಿಳಿ ಅಂಚು ಕಪ್ಪು ಸೀರೆ ಹೊದ್ದ ಬಾನ್ದೇವಿ, ಮಿಂಚು ಕಣ್ಣಿನೊಡನೆ ಗುಡುಗುತ್ತಿದ್ದಳು. ಗೆಳತಿಯ ಪ್ರದರ್ಶನಕ್ಕೆ ರಂಗ ಖಾಲಿ ಮಾಡಿ ಹೋದ ಸೂರ್ಯ ಬೇಗಬೇಗನೆ ಮನೆಗೆ ಹೋಗಿಬಿಟ್ಟಿದ್ದ. ನಾನು ಮನೆ ಸೇರ್ಇ ಗೇಟ್ ತೆಗೆದು ಬಾಗಿಲ ಹಿಡಿಗೆ ಕೈ ಹಾಕುವಾಗ ನೋಡಿದೆ.. ಅಲ್ಲೊಂದು ಪುಟ್ಟ ನೀಲಿ ಕವರು. ಮೇಲೆ ಅಂಶುನ ಮುದ್ದಾದ ಅಕ್ಷರಗಳು. ಮನ ನವಿರೆದ್ದಿತು. ಬೇಗ ಬಾಗಿಲು ತೆರೆದು ಒಳಗೋಡಿದೆ. ಅಷ್ಟರಲ್ಲೆ ಶುರುವಾಯಿತು.. ಸೋನೆ ರಾಗ.
ಸುಧಾಂಶು ಮತ್ತು ನಾನು ಎಷ್ಟೇ ಫೋನ್, ಮೈಲ್, ಮೆಸೇಜ್ ಮಾಡಿದರೂ ವಾರದಷ್ಟು ದೂರ ಬಿಟ್ಟಿರಬೇಕಾದರೆ ಪತ್ರಿಸಿಕೊಳ್ಳುತ್ತೇವೆ. ಆ ಪತ್ರದಲ್ಲಿ ಏನುಂಟು ಏನಿಲ್ಲ. ಅವನ ತುಂಟ ಗಂಭೀರ ನಿಲುವಿನಿಂದ ಹಿಡಿದು..ಮಗುವಿನ ಸ್ಪರ್ಶದ ಮೋಹಕತೆ.. ಅದಿರಲಿ ಬಿಡಿ ಇದು ನಮನಮಗೆ. ಬಟ್ಟೆ ಬದಲಾಯಿಸಿ, ಮಸಾಲೆ ಚಾ ಮಾಡಿಕೊಂಡು ಬಂದು ಕೂತು ನೀಲಿ ಕವರ್ರನ್ನೆತ್ತಿದೆ. ಮುಟ್ಟುತ್ತಲೂ ಮಳೆಯು ಒಳಗೇ ಸುರಿಯಿತು. ಮಿಂಚು ಹೊಳೆಯಿತು. ಇನ್ನೇನು ಬಿಡಿಸಬೇಕು ಅಷ್ಟರಲ್ಲಿ ಅದರಲ್ಲಿ ಬರೆದಿದ್ದ ಅಡ್ರೆಸ್ ನೋಡಿ ಹೈರಾಣಾಗಿ ಹೋದೆ. ದಿವ್ಯಾ ಅಂತಿರಬೇಕಾದಲ್ಲಿ ದಿವಾ ಅಂತ ಬರೆದಿತ್ತು. ಇಲ್ಲಿ ಬೆಚ್ಚಗೆ ಮನೆಯ ಉಯ್ಯಾಲೆಯಲ್ಲಿ ಕೂತ ಮನಸ್ಸು, ಅಲ್ಲಿ ಚಿಕ್ಕಪ್ಪನ ಮನೆಯಂಗಳಕ್ಕೆ ಕಾಂಪೌಂಡಿನ ಮೇಲೆ ಜೀಕಿಕೊಂಡು ಹೋಯಿತು.
ಅಲ್ಲಿ ಕಾಂಪೌಂಡ್ ಆಚೆಗಿಂದ ಓಡಿ ಬಂದ ಪುಟ್ಟ ಪೋರ ದಿವಾ. "ದಿವ್ಯಾ ಈಗ್ತಾನೆ ಬಂದ್ಯಾ? ನಾನ್ನಿಂಗೇ ಕಾಯ್ತಾ ಇದ್ದೆ. ಇವತ್ಯಾಕೆ ಹತ್ನಿಮಿಷ ಲೇಟು? ೩ಬಿ ಸಿಗ್ಲಿಲ್ವಾ? ಬಂದೆ ಇರು. ಅಮ್ಮಮ್ಮ ಹಾಲ್ಕೊಡ್ತಾರೆ ಬೇಗ ಕುಡಿದ್ಬಿಡು. ಶಕ್ತಿ ಬರತ್ತೆ, ಆಮೇಲೆ ನಾನೂ ನೀನೂ ಮೇಲ್ಗಡೆ ಹೋಗಿ.... " ಮಾತು ನಿಲ್ಲುವುದೇ ಇಲ್ಲ. ಒಂದು ರಾಗದ ಬೆನ್ನ ಹಿಂದೆ ಇನ್ನೊಂದು ರಾಗದ ಕಛೇರಿಯೊಂದರ ಪೂರ್ಣ ಅನುಭವ. ಇವನಿಗೆ ಇನ್ನೂ ನಾಲ್ಕು ವರ್ಷ. ನನ್ನ ಪುಟ್ಟ ಗೆಳೆಯನೀತ ದಿವಾಕರ. ಮಕ್ಕಳ ಎಂದಿನ ಚೆಲುವಿಗೊಂದು ಮುಗ್ಧ ತುಂಟತನದ ಪ್ರಭಾವಳಿ, ಮಾತಿನ ಮುತ್ತು ಹಾರ ಹಾಕಿಬಿಟ್ಟರೆ ಅದೇ ದಿವಾ. ಇವನು ನಮ್ಮ ಪಕ್ಕದ ಮನೆಯ ಜಾನಕಿ ಆಂಟಿಯ ಪುಟ್ಟ ಮಗ.
ಸರಿ, ನಾನು ಮನೆಯೊಳಗೆ ಹೋಗಿ ಕಾಲುತೊಳೆದು ತಿಂಡಿ ತಿಂದು, ಹಾಲು ಕುಡಿದು, ಮೇಲಿನ ಮೆತ್ತಲ್ಲಿರುವ ನನ್ನ ರೂಮಿಗೆ ಹೋಗುವವರೆಗೂ ದಿವಾ ಅಲ್ಲೆ, ಅಡಿಗೆ ಮನೆಯ ಬಾಗಿಲಲ್ಲಿಟ್ಟ ಪುಟ್ಟ ಸ್ಟೂಲಲ್ಲಿ.. ಏನೋ ಹೇಳಲು ಹೊರಡುತ್ತಾನೆ, ಓ ಬೇಡ, ನೀನು ತಿಂಡಿ ತಿನ್ನು ಆಮೇಲೆ ಮಾತಾಡೋಣ ಅಂತ ದೊಡ್ಡವನ ಹಾಗೆ ಹೇಳಿ, ಹಾಲಲ್ಲಿ ಕುಳಿತ ಅಮ್ಮಮ್ಮನ ಹತ್ತಿರ ಹೋಗುತ್ತಾನೆ. ಅಮ್ಮಮ್ಮ ಕಾಫಿ ಕುಡಿದ್ರಾ ನೀವು ಅಂತ.. ಜಾನಕಿ ಆಂಟಿಗೆ ಬ್ಯಾಂಕಲ್ಲಿ ಕೆಲಸ. ಅವರು ನಮ್ಮ ಇನ್ನೊಂದು ಪಕ್ಕದ ಮನೆಯಲ್ಲಿ ಆಂಟಿಯೊಬ್ಬರು ನಡೆಸುವ ಪ್ಲೇ ಹೋಮಲ್ಲಿ ಇವನನ್ನು ಬಿಟ್ಟು ಹೋಗಿರುತ್ತಾರೆ ಸಂಜೆಯವರೆಗೆ. ದಿವಾ ಬೀದಿಯ ಎಲ್ಲರಿಗೂ ಗೆಳೆಯ. ನನ್ನ ಅಮ್ಮಮ್ಮ, ಎದುರು ಮನೆಯ ತಾತ, ಮೂಲೆ ಮನೆಯ ಸುಲೂ ಆಂಟಿ, ಹಿಂದಿನ ಬೀದಿಯ ರಕ್ಷಾ, ಆಚೆ ಮನೆಯ ಸೀಮಾ-ವರುಣ್.. ಹೀಗೆ ಎಲ್ಲರೂ.. ಬೆಳಿಗ್ಗೆ ಅಮ್ಮಮ್ಮ ಯಾವುದೋ ಟೀವಿ ಸೀರಿಯಲ್ ನೋಡ್ತಾ ಇದ್ದರೆ, ನುಗ್ಗಿ ಬರುವ ಪೋರ ಕೇಳುತ್ತಾನೆ. ಅಮ್ಮಮ್ಮ ಎಲ್ರೂ ಹೋದ್ರಾ? ಆಫೀಸಿಗೆ, ಕಾಲೇಜಿಗೆ..? ಹೌದು ಅಂತ ಅಮ್ಮಮ್ಮ ಹೇಳಿಮುಗಿಸುವಷ್ಟರಲ್ಲಿ ಅಪ್ಪಣೆಯಾಗುತ್ತದೆ. ನೀವ್ಯಾಕೆ ಆ ಟೀವಿ ನೋಡ್ತಿರ್ತೀರ..ಆಫ್ ಮಾಡಿ, ಸ್ವಲ್ಪ ಹೊತ್ತು ಕೂತ್ಕೊಂಡು ಮಾತಾಡೋಣ.. ಅಂತ.. ಅಮ್ಮಮ್ಮನಿಗೆ ನಗು.. ಅಜ್ಜನೂ ಮಾಡಿರದ ಅಪ್ಪಣೆಯನ್ನು ಈ ಮರಿರಾಕ್ಷಸ ಮಾಡುತ್ತಾನಲ್ಲಾ ಅಂತ. ಅಮ್ಮಮ್ಮ ಅವನನ್ನು ಕರೆಯುವುದೇ ಕೂಗಿಲೇಶ್ವರ ಅಂತ.. :)
ಯಾವಾಗಾದ್ರೂ ಭಾನುವಾರ ನಾನು ಅಡಿಗೆ ಮನೆ ಚಾರ್ಜ್ ತಗೊಂಡಿರುತ್ತೇನೆ. ಅವರ ಮನೆಯ ಅಡಿಗೆಮನೆ ಕಿಟಕಿ ನಮ್ಮನೆಯ ಕಿಟಕಿಯ ನೇರಕ್ಕೇ ಬರುತ್ತದೆ. ಅವನು ಅಲ್ಲಿ ಕೂತಿರುತ್ತಾನೆ ಅಡಿಗೆ ಕಟ್ಟೆಯ ಮೇಲೆ.. ನನ್ನ ಮುಖ ಕಿಟಕಿಯಲ್ಲಿ ಕಂಡ ಕೂಡಲೆ ಕೂಗು.. ದಿವ್ಯಾ.. ಬಾ ಸ್ವಲ್ಪ ಹೊರಗಡೆ, ಇಲ್ಲಿ ಕಟ್ಟೆ ಮೇಲೆ ಕಾಲು ಚಾಚಿ ಹಾಯಾಗಿ ಕೂತು ಮಾತಾಡ್ಕೋಬಹ್ದು, ಎಷ್ಟೂಂತ ಕೆಲ್ಸ ಮಾಡ್ತೀಯ? ಆಂ.. ಪಾಯಸಾನಾ.. ನಂಗು ಬೇಕಲ್ಲ ಸ್ವಲ್ಪ.. ಅವ್ನ ಮಾತು ಕೇಳಿದರೆ ಯಾವುದೋ ಹಳೇ ಅಜ್ಜಿ ಮಾತಾಡಿದಂಗೆ ಇರುತ್ತದೆ.
ನಮ್ಮನೆಯಲಿ ಎಲ್ಲರಿಗೂ ಅಚ್ಚು ಮೆಚ್ಚು ಇವನು. ಅವನಿಗೆ ನನ್ನ ಬಗ್ಗೆ ಇರುವ ಇಷ್ಟದ ಬಗ್ಗೆ ಎಲ್ಲರಿಗೂ ಗೊತ್ತು. ಅದಕ್ಕೇ ಅವನ ಕಾಲೆಳೆಯುತ್ತಿರುತ್ತಾರೆ. ಅಮ್ಮಮ್ಮ ಅವನಿಗೆ ಬಯ್ದು ಏನ್ ದಿವಾ ನೀನು, ದಿವ್ಯಾ ನಿನಗಿಂತ ಎಷ್ಟು ದೊಡ್ಡವಳು, ಹೆಸರು ಹಿಡಿದು ಕರೀತೀಯಲ್ಲ, ಅಕ್ಕ ಅಂತನ್ನು ಅನ್ನುತ್ತಿರುತ್ತಾರ್ಎ. ಅವನದ್ದು ಈ ಅಜ್ಜಿಗೆ ಏನೂ ಗೊತ್ತಾಗೋದೆ ಇಲ್ಲ ಅನ್ನುವ ದಿವ್ಯ ನಿರ್ಲಕ್ಷ್ಯದ ಚುಟುಕು ಉತ್ತರ. "ಏನಮ್ಮಮ್ಮಾ ನೀವು - ದಿವ್ಯಾ ನಾನು ಫ್ರೆಂಡ್ಸ್."
ಚಿಕ್ಕಪ್ಪ ತಮಾಷೆ ಮಾಡುತ್ತಾರ್ಎ. ಏನೋ ದಿವಾ ನೀನು, ದಿವ್ಯಾಂಗೂ ನಿಂಗೂ ಒಂದೇ ಅಕ್ಷರ ವ್ಯತ್ಯಾಸ. ಒಂದು ಯ ಒತ್ತು ಕೊಟ್ ಬಿಟ್ರೆ ನೀನೂ ದಿವ್ಯಾ ಆಗ್ಬಿಡ್ತೀಯ ಅಂತ. ನಮ್ ಪುಟ್ಟಂಗೋ ಗಾಬರಿ. ಅವನಿಗೆ ಇನ್ನೂ ಒತ್ತಿನ ವ್ಯಾಕರಣ ಗೊತ್ತಿಲ್ಲ. ಬೇಡ ಬೇಡಾ ನಂಗೇನೂ ಒತ್ ಹಾಕಬೇಡಿ. ಅಂತ ಅಳುಮುಖ. ಚಿಕ್ಕಪ್ಪ ಬಿಡುವುದಿಲ್ಲ. ಹೋಗಲಿ ಬಿಡು, ದಿವ್ಯನ ಯ ಒತ್ತು ತೆಗೆದು ಹಾಕಿಬಿಡುತ್ತೇನೆ, ಅವಳೇ ದಿವಾ ಆಗ್ ಬಿಡುತ್ತಾಳೆ ಅಂತಂದ್ರೆ, ಮತ್ತೂ ಗಾಬ್ರಿ, ಬೇಡಾ ಬೇಡಾ ದಿವ್ಯಂಗೆ ಏನೂ ಮಾಡ್ ಬೇಡಿ ಅಂತ ಕಳಕಳಿ.
ದಿನಾ ನಾನು ಕಾಲೇಜಿನಿಂದ ಬಂದು ಮೇಲೆ ರೂಮಿಗೆ ಹೋದ ಕೂಡಲೆ ನನ್ನ ಹಿಂದೆ ಹಿಂದೆಯೇ ಈ ಪುಟ್ಟ ಕಿನ್ನರನ ತುಂಟ ಹೆಜ್ಜೆ. ನನ್ನ ಎಲ್ಲ ಚಟುವಟಿಕೆಗಳನ್ನೂ ನೆಟ್ಟ ಕಣ್ಣಿನಿಂದ ಗಮನಿಸುವ ಈ ಪೋರನಿಗೆ ನಾನೆಂದ್ರೆ ತುಂಬ ಪ್ರೀತಿ. ಯಾವ ಜನ್ಮದ ಪುಣ್ಯಫಲವೋ ಗೊತ್ತಿಲ್ಲ. ಅಷ್ಟು ಸವಿ. ಮೇಲೆ ಮೆತ್ತಿನಲ್ಲಿ ನಮ್ಮನೆಯಲ್ಲಿ ಒಂದು ಪುಟ್ಟ ಜೋಕಾಲಿ. ಒಬ್ಬರೇ ಕೂತು ತೂಗಿಕೊಳ್ಳಬಹುದು.ದಿವಾಗೆ ಅದೆಂದರೆ ತುಂಬ ಇಷ್ಟ. ಆದ್ರೆ ಒಬ್ಬನೇ ಕೂತುಕೊಳ್ಳಲು ಹೆದರಿಕೆ. ಹಾಗಾಗಿ ನಾನೇ ಕೂತು, ಅವನನ್ನು ಮಂಗನ ಮರಿಯ ಹಾಗೆ ಅವುಚಿಕೊಂಡು ತೂಗಿಕೊಳ್ಳಬೇಕು. ಆಗ ಅವನಿಗೆ ಇಷ್ಟವಾಗುವ ಕಳ್ಳನ ಹಾಡು ಬೇರೆ ಹೇಳಬೇಕು.
ಹೀಗೆ ಒಂದು ಹಳ್ಳಿ, ಅಲ್ಲೊಬ್ಬಾನೊಬ್ಬ ಕಳ್ಳ..
ಬೆಳ್ಳಿ ಕಳ್ಳ ಅಂತಾ ಬಿರುದು, ಎಲ್ಲಾ ಕದಿಯೋನಲ್ಲ..
ಕತ್ತಲು ಕವಿದ ಕಟ್ಟಮವಾಸ್ಯೆ ಇನ್ನೊಂದೂರಿಗೆ ಬಂದ..
ಆರಂಕಣದ ಮನೆಯನ್ನಾರಿಸಿ ಕನ್ನವ ಕೊರೆದೊಳಬಂದ..
ಕನ್ನ ಕೊರೆದು ಒಳ ಹೋಗುವ ಕಳ್ಳನಿಗೆ ಚಂದದ ಹುಡುಗಿ ಮಲಗಿದ ಕೋಣೆ ಸಿಗುತ್ತದೆ.ಅವಳ ಕಾಲಲ್ಲಿ ಹೊಳೆವ ಬೆಳ್ಳಿಗೆಜ್ಜೆ. ಅಲ್ಲಿ ತೋಳು ಮಡಚಿ ಮಲಗಿದ ಚಂದದ ಹುಡುಗಿಯ ಮುಖ ಮಂಡಲದ ಮೇಲೆ ರೂಮಿನಲ್ಲಿರುವ ಕಾಲುದೀಪದ ಮಬ್ಬು ಬೆಳಕು. ಕಳ್ಳ ಮೈ ಮರೆಯುತ್ತಾನೆ. ಗೆಜ್ಜೆ ಕದಿಯಲಾಗದೆ ಹಾಗೆ ವಾಪಸಾಗುತ್ತಾನೆ.
ನೋಡುತ್ತಾನೆ ಕನ್ನಡಿಯಲ್ಲಿ
ಎದೆಯಲ್ಲೊಂದು ಕನ್ನ
ಕಾಣುತ್ತಿಲ್ಲ ಕಳ್ಳನ ಹೃದಯಾ..
ಕದ್ದವರಾರು ಅದನ್ನ
ಕದ್ದವರಾರು ಅದನ್ನ...?!
(ಬಹುಶ: ಹೆಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆ, ನನಗೆ ಸರಿಯಾಗಿ ನೆನಪಿಲ್ಲ)
ನಮ್ಮ ಮಗುವೋ.. ನಾನು ಅದನ್ನು ಒಂದೇ ಸುತ್ತಿಗೆ ರಾಗವಾಗಿ ಹೇಳಿ ಮುಗಿಸುವಂತಿಲ್ಲ.. ಕತ್ತಲು ಕವಿದ ಕಟ್ಟಮವಾಸ್ಯೆ..ಅಂತ ಒಂದು ಪಾಸ್ ಕೊಡಬೇಕು.. ತುಂಬಾ ಕತ್ಲೇನಾ ದಿವ್ಯಾ, ಕಣ್ಣೇ ಕಾಣೋಲ್ವ..? ಕನ್ನ ಹ್ಯಾಗಿತ್ತೂ? ಗುಂಡಕೆ ಕೊರೆದಿದ್ನಾ.. ಹೀಗೆ ಅಲ್ಲಲ್ಲಿ ಪ್ರಶ್ನೆಗಳ ಪಕ್ಕವಾದ್ಯ ಮತ್ತು ನನ್ನ ಅಸಂಗತ ಉತ್ತರಗಳ ತಾಳದೊಂದಿಗೆ ಹಾಡು-ಕತೆ ಮುಂದುವರೆಯುತ್ತಿತ್ತು. ಕೊನೆಯಲ್ಲಿ ಕದ್ದವರಾರು ಅದನ್ನ ಹೇಳಿದಕೂಡಲೆ ನಮ್ಮ ಪುಟ್ಟನಿಗೆ ಫುಲ್ ಖುಶಿ. ನಂಗೆ ಗೊತ್ತು ಯಾರು ಅಂತ.. ಆ ಚಂದದ ಹುಡುಗಿ ಅಲ್ವಾ? ನಂಗೂ ಖುಶಿ ಆ ರಮ್ಯ ಕಲ್ಪನೆಯ ಲೋಕಕ್ಕೆ ಹೋಗಿ.
ಸರಿ ನನ್ನ ಕತೆ ಮುಗಿದ ಮೇಲೆ ಆಟ ಮುಗಿಯಿತೋ ಇಲ್ಲ. ಈಗ ಅವನ ಕತೆ. ಅದ್ಯಾವುದೋ ಫಲೂಡ ಹೆಸರಿನ ಕುದುರೆಯ ಕತೆ. ಕತೆ ಹೇಳಿ ಮುಗಿಸಿ.. ನಂಗೆ ಹೇಳುತ್ತಾನೆ. ನಾನು ದೊಡ್ಡವನಾದ ಮೇಲೆ ಇನ್ಸಪೆಕ್ಟರಾಗುತ್ತೀನಿ ಅಂತ. ಅದೂ ಯಾವ ತರಹ. ಫಲೂಡ ಅನ್ನೋ ಶಕ್ತಿಶಾಲಿ ಕುದುರೆಯ ಮೇಲೆ ಓಡಾಡುವ, ವಿಲನ್ ಗಳನ್ನೆಲ್ಲ ಹಿಡಿದು ಚಚ್ಚಿ ಬಿಡುವ, ಒಳ್ಳೆಯ ಇನ್ಸ್ ಪೆಕ್ಟರ್. ಆಮೇಲೆ ನಿಧಾನವಾಗಿ ನನ್ನ ಕೆನ್ನೆಗೆ ಅವನ ಕೆನ್ನೆ ತಾಗಿಸಿ ಹೇಳುತ್ತಾನೆ. ನನ್ ಕುದುರೆ ಮೇಲೆ ನಾನು ಯಾರನ್ನೂ ಕೂರಿಸೋದಿಲ್ಲ. ಒಬ್ಳೇ ಒಬ್ಳು ಮಾತ್ರ ಬರೋದು. ಅದು ನೀನು.. ನಂಗೆ ಜಂಭವಾಯಿತು. ಆದ್ರೂ ಕೇಳ್ದೆ. ಏನಪ್ಪಾ ನಂದು ಸ್ಪೆಶಲ್? ಅವನು ಹೇಳಿದ ಉತ್ತರ ನಾನೆಂದೂ ಮರೆಯುವಂತೆಯೇ ಇಲ್ಲ. ನೀನು ನನ್ನ ತುಂಬಾ ಪ್ರೀತಿ ಮಾಡ್ತೀಯಲ್ವಾ ದಿವ್ಯಾ, ನಾನು ಯಾವಾಗ ಕೇಳಿದರೂ ಆಡಕ್ಕೆ ಬರ್ತೀಯ, ಕತೆ ಹೇಳ್ತೀಯ, ಜೋಕಾಲಿ ತೂಗಿ ಹಾಡು ಹೇಳ್ತೀಯ, ಕಾಲೇಜಿಂದ ಬಂದು ಸುಸ್ತಾಗಿದ್ರೂ ಅಮ್ಮನ ತರ ಬಯ್ಯದೆ, ನನ್ನ ಎತ್ ಕೊಳ್ತೀಯ. ನಗಿಸ್ತೀಯ.. ಆಮೇಲೆ ಆಮೇಲೆ ನೀನ್ಯಾವತ್ತೂ ಅಪ್ಪನ ವಿಶ್ಯ ಮಾತಾಡೋದೆ ಇಲ್ಲ.. - ರೆಪ್ಪೆ ಕೆಳಗಾಗಿ ಕಣ್ಣು ನೆಲನೋಡತೊಡಗಿದವು ಈಗ - ನಾನು ಹಾರುತ್ತಿದ್ದ ಜಂಭದ ವಿಮಾನದಿಂದ ದೊಪ್ಪನೆ ಕೆಳಕ್ಕೆ ಬಿದ್ದೆ. ಈ ಪುಟ್ಟ ಜೀವದ ನಲಿವಿನಲ್ಲಿ, ಬೇಸರದಲ್ಲಿ ನನಗೇ ಗೊತ್ತಿಲ್ಲದೆ ಎಷ್ಟೊಂದು ಬೆಸೆದುಕೊಂಡಿದ್ದೇನೆ. ಮತ್ತು ಅದಕ್ಕೆ ನನಗೆ ಅವನ ಸ್ಪಂದನೆಯೇನು.. ಅವನು ಆ ಕ್ಷಣದಲ್ಲಿ ತಿಳಿದಿದ್ದ ಅತಿ ದೊಡ್ಡ ಫ್ಯಾಂಟಸಿಯಲ್ಲಿ ನನಗೂ ಜಾಗ. ಅವನ ವಿಶಾಲತೆಯ ಮುಂದೆ ನನ್ನ ಜಂಭದ ಬಲೂನಿನ ಗಾಳಿ ಹೋಗಿಬಿಟ್ಟಿತು. ಥ್ಯಾಂಕ್ಸ್ ದಿವಾ. ಬಾ ಈಗ ಚಿತ್ರ ತೋರಿಸಿ ಕಥೆ ಹೇಳ್ತೀನಿ ಅಂತ ಆಚೆ ಕಡೆ ಕರೆದುಕೊಂಡು ಹೋದೆ.
ಹೌದು ಈ ತುಂಟ ಮಾತುಗಾರ ಪುಟಾಣಿಯ ಬದುಕು ಒಂದು ನೋವಿನ ಕೋಶ. ಅವನ ಅಪ್ಪ ಅಮ್ಮ, ಹೊಂದಿಸಲಾಗದ ಭಿನ್ನತೆಯಿಂದಾಗಿ ವರ್ಷದ ಹಿಂದೆ ಬೇರೆಯಾಗಿಬಿಟ್ಟರು. ಅಮ್ಮ ಆಫೀಸಿಗೆ ಹೋದಾಗ ಯಾವಾಗಲೋ ಅಪ್ಪ ಬಂದು ನರ್ಸರಿಯಲ್ಲಿ ನೋಡಿ ಮಾತಾಡಿಸಿ ಹೋಗುತ್ತಾರೆ. ಬೀದಿಯ ಎಲ್ಲರೂ ಜಾನಕಿ ಆಂಟಿಯ ಅಕ್ಕನಾಗಿ, ಅಮ್ಮನಾಗಿ, ಗೆಳತಿಯರಾಗಿ ಕಾದುಕೊಂಡಿದ್ದಾರೆ. ಅವರನ್ನು ನೋಯಿಸುವುದಿಲ್ಲ. ಆದರೆ ಕುತೂಹಲವನ್ನ ಅಡಗಿಸಿಡಲಾಗುವುದಿಲ್ಲ. ಅದಕ್ಕೆ ಸುಲಭವಾಗಿ ಸಿಗುವುದು ಈ ಪುಟ್ಟ ದಿವಾ. ಅವನ ಹತ್ತಿರ ಏನಾದ್ರೂ ಕೇಳುತ್ತಿರುತ್ತಾರೆ. ವಿಷಯದ ಪೂರ್ಣ ಅರಿವಿಲ್ಲದೆಯೂ ಅವನಿಗೆ ಗೊತ್ತು ಇದು ಏನೋ ಬೇರೆ ತರ ಅಂತ. ಇಷ್ಟವಾಗುವುದಿಲ್ಲ. ಆದರೆ ದೊಡ್ಡವರ ಚಾಲಾಕಿತನದ ಪ್ರಶ್ನೆಗಳನ್ನ ತಪ್ಪಿಸಿಕೊಳ್ಳಲಾಗದ ಮೂಕ ಮುಗ್ಧತೆ.
ಕೆಲದಿನಗಳ ಹಿಂದೆ ಇಬ್ಬರೂ ವಾಕಿಂಗ್ ಹೋದಾಗ ಜಾನಕಿ ಆಂಟಿ ಅತ್ತು ಬಿಟ್ಟಿದ್ದರು. ದಿನಾ ಸಂಜೆ ಅವರು ಮನೆಗೆ ಬಂದ ಮೇಲೆ ಇವನ ಕೈಕಾಲು ತೊಳೆಸಿ ದೇವರಿಗೆ ನಮಸ್ಕಾರ ಮಾಡಿಸುತ್ತಾರೆ. ಅಲ್ಲಿ ನಮ್ಮ ಈ ಪುಟ್ಟ ಕೇಳಿಕೊಳ್ಳೋದು ಏನು ಗೊತ್ತಾ? - ದೇವರೇ ಹ್ಯಾಗಾದ್ರೂ ಮಾಡಿ ನಮ್ಮಪ್ಪ ಅಮ್ಮ ಒಟ್ಟಿಗಿರಲಿ - ಅಂತ. ಆಂಟಿ ಅನ್ನಲಾರರು ಅನುಭವಿಸಲಾರರು.
ಈಗ ಕೆಲದಿನಗಳಿಂದ ದಿವಾ ಎಲ್.ಕೆ.ಜಿ ಸೇರಿದ. ಅಲ್ಲಿ ನಮ್ಮ ಹಿಂದಿನ ಬೀದಿಯ ಪುಟ್ಟ ರಕ್ಷಾ ಕೂಡ ಬರುತ್ತಾಳೆ. ಮೊನ್ನೆ ಭಾನುವಾರ ತಂಗಿ ಸುಷು ಕೇಳಿದಳು - ಏನ್ ದಿವಾ, ರಕ್ಷಾನ್ನ ಫ್ರೆಂಡ್ ಮಾಡಿಕೊಂಡ್ಯಾ ಅಂತ? - ಇವನಿಗೆ ಸಿಟ್ಟು - ಏ ಹೋಗು, ಮುಂಚೆ ಎಲ್ಲ ಎಷ್ಟು ಚೆನ್ನಾಗಿದ್ಳು. ನಾನ್ ರೋಪ್ ಹಾಕಿದ್ರೆ ಸುಮ್ನೆ ಇರ್ತ ಇದ್ಳು. ಈಚೀಚೆಗೆ ನಾನ್ ರೋಪ್ ಹಾಕಿದ್ರೆ ನಂಗೇ ತಿರುಗಿ ರೋಪ್ ಹಾಕ್ತಾಳೆ. ಸರೀಗಿಲ್ಲ ಅವ್ಳು. - ನಮಗೆಲ್ಲ ತಡೆಯಲಾರದ ನಗು.
ಹೀಗೇ ಮುನ್ನಡೆದ ದಿನಗಳ ಹಾದಿಯಲ್ಲಿ ನಾನು ಹೆಚ್ಚಿನ ಓದು, ಆಫೀಸ್, ಕೆಲಸ, ಮದುವೆ ಅಂತ ಬೇರೆ ಕಡೆ ಬಂದೆ. ಅಷ್ಟರಲ್ಲಿ ದಿವಾ ಮತ್ತು ಅವನಮ್ಮ ಬೇರೆ ಏರಿಯಾಗೆ ಹೋಗಿಬಿಟ್ಟಿದ್ದರು. ಅವನು ಮತ್ತೆ ಸಿಗಲಿಲ್ಲ.
ಈಗ ಗಂಡ ತಪ್ಪಾಗಿ ಬರೆದ ವಿಳಾಸದ ದಿವಾ ನನ್ನನ್ನು ಅವನ ಮುದ್ದು ನೆನಪಿನ ಹೊಳೆಯಲ್ಲಿ ತೇಲಿಸಿತು. ಅವನನ್ನು ನೋಡಲೇ ಬೇಕೆನ್ನಿಸಿ ಮನಸು ಉದಾಸವಾಯಿತು. ಉದಾಸವಾಗೆ ಕವರ್ ಬಿಚ್ಚಿದೆ. ಅದರಲ್ಲಿ ಅಂಶುವಿನ ಚಂದಸಾಲುಗಳ ಪ್ರೀತಿ ಒಕ್ಕಣೆಗಳ ಜೊತೆ ಪುಟ್ಟ ಮಗಳು ೧೧ ವರ್ಷದ ಸನ್ಮತಿಯ ಮುದ್ದು ಬರಹ.. ಅಪ್ಪ-ಮಗಳು ಇಬ್ಬರೂ ೮-೧೦ ದಿನದ ಮಟ್ಟಿಗೆ ಶಿರಸಿಯಲ್ಲಿ ಅಜ್ಜನ ಮನೆಗೆ ಹೋಗಿದ್ದರು. ನಾನು ಆಫೀಸಿನಲ್ಲಿ ಕೂತು ಮಾಡಿಸಲೇ ಬೇಕಿದ್ದ ಕೆಲಸವಿದ್ದಿದ್ದರಿಂದ ಹೋಗಲಾಗಿರಲಿಲ್ಲ. ಅವರಿಲ್ಲದೆ ಬೇಸರದ ದಿನಗಳನ್ನು ಹಾಡು-ಪುಸ್ತಕಗಳಲ್ಲಿ ಕಳೆಯುತ್ತಿದ್ದೇನೆ. ಆಗಲೆ ೮ ದಿನಗಳಾದವು.. ಇನ್ನೇನು ಈ ವಾರದ ಕೊನೆಗೆ ಬಂದು ಬಿಡುತ್ತಾರೆ. ಅಡಿಗೆ ಮಾಡಬೇಕಿತ್ತು. ಕುಕ್ಕರ್ ಜೋಡಿಸುವಾಗ ಮತ್ತೆ ದಿವಾನ ನೆನಪಿನ ದಾಳಿ.. ಕುಕ್ಕರ್ ಕೂಗುವಾಗ, ತಾನೂ ನಿಂತು ವೀ.... ಅಂತ ಕೂಗುತ್ತಿದ್ದ ಅವನ ದನಿ ಅಲೆಯಾಗಿ ಬಂತು. ಹೇಗೆ ನೋಡಲಿ ಏನು ಮಾಡಲಿ ಗೊತ್ತಾಗಲಿಲ್ಲ. ಚಿಕ್ಕಪ್ಪನ ಮನೆಗೆ ಫೋನ್ ಮಾಡಿ, ತಂಗಿ ಸುಷುನ ಕೇಳಿದೆ. ಅವಳು ನಕ್ಕು ಬಿಟ್ಟಳು ಏನ್ ಅಕ್ಕಾ ನೀನು.. ೧೮ ವರ್ಷಗಳ ನಂತರ.. ನಿನಗೇ ಆ ಪುಟ್ಟ ದಿವಾನಿಗಿಂತಲೂ ದೊಡ್ಡ ಮಗಳಿದ್ದಾಳೆ.. ಅವನೆಲ್ಲಿದಾನೋ ಈಗ.. ನಿನ್ನ ಮದ್ವೆಯಾದ ಒಂದೆರಡು ವರ್ಷ ಆಚೆ ಕಾಲೊನಿಯಲ್ಲಿದ್ದ, ನಾನು ಟ್ಯೂಷನ್ ಹೋಗುವಾಗ ಸಿಗ್ತಿದ್ದ. ಓಡ್ ಬಂದು ದಿವ್ಯಾ ಬರ್ತಾಳಾ ಹೇಗಿದಾಳೆ ಅಂತ ಕೇಳ್ತಿದ್ದ ಅಷ್ಟೇ... ಆಮೇಲೆ ನೋಡೆ ಇಲ್ಲ ಅಂದಳು.
ಹೇಗೋ ಅನ್ನ ಮೊಸರು ಊಟ ಮಾಡಿ, ಮಲಗಲು ಹೋದೆ. ಮೊನ್ನೆ ತಂದಿಟ್ಟುಕೊಂಡ ಹೊಸ ಪುಸ್ತಕಗಳನ್ನ ಬಿಡಿಸಲೂ ಮನಸಾಗಲಿಲ್ಲ. ಹಳೆಯ ಸಿ.ಡಿ.ಗಳಲ್ಲಿ ಹುಡುಕಿ ಡಿ.ಡಿ.ಎಲ್.ಜೆ ಯ ಹಾಡು ಹಾಕಿದೆ. ಅದು ದಿವಾನ ಅಚ್ಚುಮೆಚ್ಚಿನ ಹಾಡು.. ಝರಾ ಸಾ ಝೂಮುಲೂಮೆ..
ರಿಪೀಟ್ ಮೋಡಲ್ಲಿ ಹಾಕಿ ಸುಮ್ಮನೆ ಮಲಗಿದೆ. ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ. ಎಚ್ಚರಾದಾಗ ಚುಮುಚುಮು ಬೆಳಗು. ದೋಸೆಗೆ ಬೆಲ್ಲ ಹಚ್ಚುವಾಗ ನೆನಪಾಯಿತು. ದಿವಾನಿಗೆ ಸಿಹಿ ಎಂದರೆ ತುಂಬ ಇಷ್ಟ. ಎಷ್ಟೆಂದರೆ ಏನೂ ಇಲ್ಲವಾದರೆ ಬೆಲ್ಲವಾದರೂ ಚೂರು ಬೇಕು. ಅಡಿಗೆ ಮನೆಗೆ ಬಂದು ಏನಾದ್ರು ಇದ್ಯಾ ಇವತ್ತು ಅಂತ ನಮ್ಮನ್ನು ಕೇಳುತ್ತಿದ್ದ. ಇಲ್ವಲ್ಲ ಅಂದರೆ, ಹೋಗ್ಲಿ ಚೂರು ಬೆಲ್ಲಮ್ ಕೊಟ್ಬಿಡಿ.. ಅಂತ ಅವನ ತೆಲುಗು ಪ್ರೇಷಿತ ಕನ್ನಡ.. ಹೇಗೋ ತಯಾರ್ಆಗಿ ಆಫೀಸಿಗೆ ಹೋದೆ. ಕೈ ತುಂಬ ಕೆಲಸ. ಕ್ಯೂಬಲ್ಲೆ ಕೂತು ಸಹೋದ್ಯೋಗಿಯೊಡನೆ ಕೋಡ್ ಕುಟ್ಟುತ್ತಾ, ಏನೋ ತರಿಸಿಕೊಂಡು ತಿಂದೆ. ಸಂಜೆ ಮನೆಗೆ ವಾಪಸಾಗುವಾಗ ದಿವಾನ ನೆನಪಿನ ಮಳೆ. ಅವನೊಡನೆ ಕಳೆದ ತುಂಟ ಕ್ಷಣಗಳ ಮಿಂಚು ಮಿಂಚಿದ್ದರೂ ಯಾಕೋ ಅವನನ್ನು ನೋಡಲೇಬೇಕೆಂಬ ತೂಫಾನೀ ಆಸೆ. ನಿಧಾನವಾಗಿ ನಡೆದು ಮನೆ ಸೇರಿದೆ. ಸುತ್ತಲ ಸಂಗತಿಗಳು ಲಕ್ಷಕ್ಕೇ ಬರಲಿಲ್ಲ. ಸೇರುವಷ್ಟರಲ್ಲಿ ಮಳೆಯೂ ಸುರಿಯಿತು. ಒಳಗೆ ಸೇರಿದಾಗ ಚಾ ಬೇಕೆನ್ನಿಸಲಿಲ್ಲ. ಸೂನಾ ಸೂನಾ ಮನಸ್ಸಿನಲ್ಲಿ ಬಟ್ಟೆ ಬದಲಾಯಿಸಬೇಕೆನ್ನಿಸದೆ ಸುಮ್ಮನೆ ಬಿದ್ದುಕೊಂಡೆ. ಕೆಲಸದ ಒತ್ತಡ ರಿಲೀಸ್ ಆಗಿದ್ದರಿಂದ ನಿದ್ದೆ ಬಂದು ಬಿಟ್ಟಿತು. ಎದ್ದಾಗ ಗಂಟೆ ಹತ್ತಾಗಿತ್ತು. ತಲೆ ತುಂಬ ನೋಯುತ್ತಿತ್ತು. ಒಂದು ಲೋಟ ಹಾಲಿನೊಡನೆ, ಮಾತ್ರೆ ನುಂಗಿ ಮಲಗಿಬಿಟ್ಟೆ. ಅಂಶು ಫೋನ್ ಮಾಡಿದಾಗ ಏನೋ ಹಾಂ ಹೂಂ ಅಂತ ಮಾತಾಡಿ ಮಲಗಿಬಿಟ್ಟೆ.
ಮರುದಿನ ಏನೋ ರಗಳೆ. ತಲೆನೋವು ಹೋಗಿರಲಿಲ್ಲ. ನೆಗಡಿ ಬೇರೆ ಆಗಿಬಿಟ್ಟಿತ್ತು. ತುಂಬ ಕೆಲಸವಿದ್ದಿದ್ದರಿಂದ ಆಫೀಸಿಗೆ ಹೋಗಿ ಹೇಗೋ ಕೆಲಸ ಮುಗಿಸಿ ಮನೆಗೆ ಬಂದೆ.. ಬಂದು ನೋಡಿದರೆ, ಅರೆ ಬಾಗಿಲು ತೆರೆದಿದೆ. ಅಪ್ಪ ಮಗಳಿಬ್ಬರೂ ಕಾಯುತ್ತ ಕೂತಿದ್ದರು. ನನಗೂ ಒಂದು ಅನುಮಾನವಿತ್ತು. ನಿನ್ನೆ ರಾತ್ರಿ ಸರಿಯಾಗಿ ಮಾತಾಡಲಿಲ್ಲ ಅನ್ನುವ ಅಂದಾಜಿನ ಮೇಲೆ ಅಮ್ಮನಂತೆ ಪ್ರೀತಿ ಮಾಡುವ ಅಂಶು ಬೇಗ ಬರುತ್ತಾನೆಂದು.
ಇಬ್ಬರಿಗೂ ಮುತ್ತಿಟ್ಟು, ಬಟ್ಟೆ ಬದಲಾಯಿಸಿ ಬಂದೆ. ಅಂಶು ಘಮಘಮಿಸುವ ಡಿಕಾಕ್ಷನ್ ಹಾಕಿ ಎಸ್.ಎಲ್.ವಿ ಕಾಫಿ ಮಾಡಿಟ್ಟು ಕಾಯುತ್ತಿದ್ದ. ಇಬ್ಬರೂ ಊರಿನ ಕತೆಯನ್ನ ಪೈಪೋಟಿ ಮೇಲೆ ಹೇಳಿದರು. ಕಿವಿ ಕೇಳಿಸಿಕೊಳ್ಳುತ್ತಿತ್ತು. ಮನಸ್ಸು ಉದಾಸ. ಒಂದು ಸ್ವಲ್ಪ ಹೊತ್ತು ಬಡಬಡಿಸಿದ ಇಬ್ಬರೂ ನನ್ನನ್ನು ಗಮನಿಸಿದವರೆ ಹತ್ತಿರ ಬಂದು ಕುಳಿತರು. ಅವನು ಏನ್.. ಅಂತ ಬಾಯಿ ತೆರೆಯುವಷ್ಟರಲ್ಲೆ ನಾನು ಅಡ್ರೆಸ್ಸಿನಿಂದ ಹಿಡಿದು ದಿವಾ ಎಂಬ ಪುಟ್ಟ ಕಿನ್ನರ ಗೆಳೆಯನ ಕತೆಯನ್ನು ಇನ್ನಷ್ಟು ವಿಷದವಾಗಿ ಹೇಳಿಬಿಟ್ಟೆ. ನಾನು ಹೇಳಿ ಮುಗಿಸುವಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ. ಆ ಕಿನ್ನರ ಪ್ರಪಂಚದ ಎಲ್ಲ ತಂಗಾಳಿಯನ್ನು ಸವಿದ ಹಿತವಾದ ಭಾವ. ಅವನ ತುಂಟ ಮಾತುಗಳನ್ನ ಪ್ರತ್ಯಕ್ಷ ಕೇಳಿದ ಆಹ್ಲಾದ.. ಸನ್ಮತಿಯಂತೂ ಖುಷಿ ಜಾಸ್ತಿಯಾಗಿ ಎದ್ದು ಬಂದು ಆವರಿಸಿಕೊಂಡು ನನ್ನ ಕೆನ್ನೆಗೆ ಕೆನ್ನೆಯೊತ್ತಿದಳು.. ನನ್ನ ಸೈಕಲ್ ಹೆಸರು ನಾಳೆಯಿಂದ ಫಲೂಡ ಅಂತ ಘೋಷಿಸಿದಳು.
ನನಗೆ ನಗು ಬಂತು. ನಗುತ್ತ ನಗುತ್ತ ನನ್ನ ಕಣ್ಣಲ್ಲಿ ನೀರಿಳಿದವು. ಕಿರುನಗೆಯ ಸೂಸುತ್ತಿದ್ದ ಅಂಶು ಪಕ್ಕದಲ್ಲಿ ಕೂತು ಬಳಸಿ ಕೇಳಿದ. ಯಾಕಪ್ಪಾ.. ಒಂದು ಕ್ಷಣ ತಡೆದು ಹೇಳಿಬಿಟ್ಟೆ.. ನನಗೆ ದಿವಾ ಬೇಕು. ಅವನನ್ನ ನೋಡಲೇ ಬೇಕಲ್ಲ ಅಂಶು, ಏನು ಮಾಡಲಿ, ಹೇಗೆ ಹುಡುಕಲಿ..? ಕೇಳಿದ ಕೂಡಲೇ ಸಂಕೋಚವಾಯಿತು.. ಮಗಳೇನಾದ್ರೂ ನಗುತ್ತಿದ್ದಾಳಾ ಅಂತ ಕಡೆಗಣ್ಣಲ್ಲಿ ನೋಡಿದೆ. ಅವಳು ನನ್ನನ್ನೇ ಗಂಭೀರವಾಗಿ ನೋಡುತ್ತಿದ್ದಳು. ಬಳಸಿ ಕೂತ ಅಂಶುಗೆ ನನ್ನ ಮೈ ಬೆಚ್ಚಗಾಗಿರುವುದು ಗೊತ್ತಾಯಿತು.
ಸರಿ ಬಾ ಅವನನ್ನು ಹೇಗಾದ್ರೂ ಮಾಡಿ ಹುಡುಕೋಣ. ಈಗ ನೀನು ಸ್ವಲ್ಪ ಏನಾದ್ರೂ ತಿಂದು ಮಲಗು. ಅಮ್ಮ ಕಳಿಸಿದ ರುಚಿಯಾದ ಹಲಸಿನ ಕಡುಬಿದೆ. ಮೊಸರಿನ ಜೊತೆ ತಿನ್ನು. ಆಮೇಲೆ ಪ್ಯಾರಾಸಿಟಮೋಲ್ ತಗೊಂಡು ಮಲಗು. ಅದು ಇದು ಏನಿಲ್ಲ. ಇವತ್ತು ರಾತ್ರಿಯ ಅಡುಗೆ ನಮ್ಮಿಬ್ರದ್ದು. ಅಲ್ದೇ ಸನ್ ಬೇರೆ ಅವಳಜ್ಜಿ ಹತ್ರ ಹುಳಿ ಮಾವಿನ ಹಣ್ಣಿನ ಸಾಸ್ವೆ ಮಾಡೋದು ಕಲ್ತುಕೊಂಡು ಬಂದಿದ್ದಾಳೆ.. ಇಬ್ರೂ ಸೇರಿ ಮಾಡ್ತೀವಿ ಅಂತ ಒತ್ತಾಯಿಸಿದ. ಹುಷಾರಿಲ್ಲದಾಗ ಅವನು ಹೇಳಿದಂತೆ ಕೇಳಲೇಬೇಕು ನಾನು. ಮಿಲಿಟರಿ ಶಿಸ್ತು ಆಗ.
ಯಾವಾಗಲೋ ಎಚ್ಚರಾಯಿತು. ಸನ್ಮತಿ ಅಂಶು ಇಬ್ಬರೂ ನಿದ್ದೆ ಹೋಗಿದ್ದರು. ಸುಮ್ಮನೆ ಎದ್ದವಳು ಕಿಟಕಿಯ ಬದಿಯಲ್ಲಿದ್ದ ಕುರ್ಚಿಯಲ್ಲಿ ಕುಳಿತೆ. ಮೈಕೈಯೆಲ್ಲ ನೋವು. ಏನೋ ಕನವರಿಕೆ. ನಿದ್ದೆ ಹತ್ತಿದ ಕಣ್ಣನ್ನು ಬಿಡಿಸುತ್ತಿರುವ ಪುಟ್ಟ ಕೈಗಳು. ದಿವ್ಯಾ ಇದೊಂದು ಕತೆ ಕೇಳಿ ಆಮೇಲ್ ಮಲಕ್ಕೋ, ಇದು ಜುರಾಸಿಕ್ ಪಾರ್ಕ್ ದು ಹೊಸಾ ಕತೆ.. ನೀನು ಡೈನೋಸಾರ್ ನೋಡಿದೀಯ.. ಅದು ಫಲೂಡಾಗಿಂತ ಜಾಸ್ತಿ ಶಕ್ತಿ.. ದಿವ್ಯಾ ಪ್ಲೀಸ್ ಕಣ್ತೆಗಿ.. ಇನ್ನೊಂದ್ಸ್ವಲ್ಪ ಇದೆ ಕತೆ ಹೇಳ್ ಬಿಟ್ಟು ನಾನು ಮನೆಗೆ ಹೋಗ್ ಬಿಡ್ತೀನಿ.. ಆಮೇಲೆ ಈ ಭಾನ್ವಾರ ಮತ್ತೆ ಈ ಸಿನಿಮಾ ನೋಡೋಣ್ವಾ ನಾನು ನೀನು. ತುಂಬ ಸಕ್ಕತ್ತಾಗಿದೆ. ಇಲ್ಲೇ ಚೌಡೇಶ್ವರಿಯಲ್ಲಿ ಬಂದಿದೆ..
ನನಗೋ ತುಂಬ ನಿದ್ದೆ. ಪ್ಲೀಸ್ ದಿವಾ, ಇವತ್ತು ಪರೀಕ್ಷೆ ಇತ್ತಲ್ವ, ತುಂಬ ಬೇಗೆದ್ದಿದ್ದೆ. ಸುಸ್ತಾಗಿಬಿಟ್ಟಿದೆ. ನಾಳೆ ಸಂಜೆ ಕೇಳ್ತೀನಿ ಕತೇನ.. ಅಂಶು ಬಂದು ತಟ್ಟಿ ಎಬ್ಬಿಸಿ ಮತ್ತೆ ಮಂಚದಲ್ಲಿ ಮಲಗಿಸಿದ.
ಮರುದಿನ ಆಫೀಸಿಗೆ ಹೋಗಲಾಗಲಿಲ್ಲ. ತುಂಬ ಜ್ವರ ಬಂದು ಬಿಟ್ಟಿತ್ತು. ಅಂಶು ಹೇಗೂ ರಜೆಯಲ್ಲೇ ಇದ್ದ. ಕೃಷ್ಣಮೂರ್ತಿ ಡಾಕ್ಟರು ಮನೆಗೇ ಬಂದು ಔಷಧಿ ಕೊಟ್ಟು ಹೋದರು. ಜ್ವರದ ತಾಪವೇರಿದಾಗೆಲ್ಲ ಕನಸುಗಳ ದಾಳಿ.. ಅಲ್ಲೆರಡು ಪುಟ್ಟ ಕಾಲ್ಗಳು ಕಾಂಪೌಂಡ್ ಮೇಲೆ ಕುಳಿತು ತನ್ನ ಪುಟ್ಟ ಪುಟ್ಟ ಬೆರಳುಗಳಿಂದ ಬಾ ಎಂದು ಸನ್ನೆ ಮಾಡಿದಂತೆ, ಮೆತ್ತಗೆ ಮೈ ಮೇಲಿ ಹೂವಿನ ರಾಶಿಯೊಂದು ತಾನಾಗೆ ಏರಿಕೊಂಡು, ಕೊರಳಿಗೆ ಮಾಲೆಯಾದಂತೆ, ಹೂವಿನ ಪರಿಮಳ ಹೀರುವಷ್ಟರಲ್ಲಿ ಅವು ಪುಟ್ಟ ದಿವಾನ ಕೈಗಳಾಗಿ ಕಚಗುಳಿಯಿಟ್ಟಂತೆ, ಅವನ ಮುದ್ದು,ಸಲಿಗೆ,ತುಂಟ ಮಾತು, ಮಿಂಚು ನೋಟ, ಎಲ್ಲೆಲ್ಲೂ ಆವರಿಸಿಕೊಂಡವು. ಅಲ್ಲೆ ಹತ್ತಿರದಲ್ಲಿ ಅಂಶು ಕೂತು ತಣ್ಣೀರು ಬಟ್ಟೆ ಹಾಕುತ್ತಿದ್ದುದು ಆಗಾಗ ಗೊತ್ತಾಗುತ್ತಿತ್ತು. ಏನೂ ಬೇಡ, ಆರಾಮಾಗ್ಬಿಟ್ಟೆ ಅಂತ ಗೊಣಗಿದ ಕೂಡಲೆ, ಮುಚ್ಚಿದ ಕಣ್ಣನ್ನು ನೇವರಿಸುತ್ತ, ಕೆನ್ನೆ ಸವರುತ್ತಿದ್ದ ಅವನು. ಮತ್ತೆ ನಿದ್ದೆಯ ಮುಸುಕು. ಸನ್ಮತಿ ಅಲ್ಲೇ ಕೂತು ರಾಗವಾಗಿ ದೇವರನಾಮ ಹಾಡುತ್ತಿದ್ದಳು.. ಪೋಗಾದಿರೆಲೋ..ರಂಗಾ, ಬಾಗಿಲಿಂದಾಚೆಗೆ.. ಮಗುಗಳ ಮಾಣಿಕ್ಯ ದೊರಕೀತು ತಮಗೆಂದು....
ಸರಿಯಾಗಿ ಎಚ್ಚರವಾದಾಗ ಚುಮುಚುಮು ಬೆಳಗು. ಒಂದಿನ ಇಡೀ ಜ್ವರದ ಮತ್ತಲ್ಲಿ ಕಳೆದಿದ್ದು ಗೊತ್ತಾಯಿತು. ಅಪ್ಪ ಮಗಳಿಬ್ಬರೂ ಒಬ್ಬರಿನ್ನೊಬ್ಬರ ತೆಕ್ಕೆಯಲ್ಲಿ ಹಾಗೇ ಕುರ್ಚಿಯಲ್ಲಿ ಕೂತು ನಿದ್ದೆ ಹೋಗಿದ್ದರು. ನಿಧಾನವಾಗಿ ಎದ್ದು ರಗ್ಗು ಹೊದೆಸಿದೆ. ಊಂ ಎಂದ ಅಂಶುಗೆ ಜೋರು ನಿದ್ದೆ. ಹಾಲಿನವನು ಎಸೆದು ಹೋಗಿದ್ದ ಪ್ಯಾಕೆಟ್ ತೆಗೆದು, ಡಿಕಾಕ್ಷನ್ ಬದಲಾಯಿಸಿ ಒಂದು ಕಾಫಿ ಮಾಡಿ ಕೂತುಕೊಂದೆ, ಕಣ್ಣು ನೋಯುತ್ತಿದ್ದವು, ಪೇಪರ್ ಬೇಡವೆನ್ನಿಸಿ, ರೇಡಿಯೋ ಹಾಕಿದೆ. ಇಂಪಾದ ದನಿಯಲ್ಲಿ ಬಿ.ಆರ್.ಛಾಯಾ ರ ಹಾಡು ತೂರಿಬಂತು.. 'ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು.. ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು.." ಹಾಡಿನ ನೆರಳಲ್ಲೇ ದಿವಾನ ರೇಖೆಗಳು ಮೂಡತೊಡಗಿದವು. ಬೆಳಗಿನ ತಂಪಿಗೊಡ್ಡಿಕೊಂಡು ಉಲ್ಲಸಗೊಳ್ಳುತ್ತಿದ್ದ ಮನಸ್ಸು ಉದಾಸವಾಯ್ತು. ಹಾಗೆ ಒರಗಿಕೊಂಡು ಕೂತೆ.
ಸ್ವಲ್ಪ ಹೊತ್ತಿನ ಬಳಿಕ ಅಂಶು ಎದ್ದು, ಮಗಳನ್ನು ಸರಿಯಾಗಿ ಮಲಗಿಸಿ ಬಂದ. ಮುಖ ತೊಳೆದು ಬರುವಷ್ಟರಲ್ಲಿ ನಾನು ಕಾಫಿ ಮಾಡಿ ತಂದೆ. ಏನ್ ದಿವ್ಯಾ ಎದ್ ಬಿಟಿದೀಯ, ಬಾ ಇಲ್ಲೆ ಸ್ವಲ್ಪ ಹೊತ್ತು ಕುರ್ಚಿ ಮೇಲೆ ಹಾಯಾಗಿ ಕೂರೋಣ ಅಂತ ದಿವಾನ ಶೈಲಿಯಲ್ಲಿ ಅಣಕಿಸಿದ.. ನನ್ನ ಮುಖದಲ್ಲಿ ನಗು ಮೂಡಿದರೂ, ಖಿನ್ನತೆಯ ನೆರಳು ಬೆನ್ನು ಬಿಡಲಿಲ್ಲ.
ಕಾಫಿ ಕುಡಿಯುತ್ತಿದ್ದವನು ಇದ್ದಕ್ಕಿದ್ದಂಗೆ ಏನೋ ನೆನಪಾದಂತೆ, ಸಣ್ಣಗೆ ಹಾಡುತ್ತಿದ್ದ ರೇಡಿಯೋ ವಾಲ್ಯೂಮ್ ದೊಡ್ಡದು ಮಾಡಿ, ಟ್ಯೂನ್ ಮಾಡತೊಡಗಿದ. ನೀವು ಕೇಳುತ್ತಿದ್ದೀರ ರೇಡಿಯೋ ಸಿಟಿ ಮಾರ್ನಿಂಗ್ ರಾಗಾಸ್ ನಿಮ್ಮ ಬಸಂತಿಯ ಜೊತೆ...... ನಿಮ್ಮ ಕರೆ ನನಗೆ, ನಮ್ಮ ಹಾಡು ನಿಮಗೆ... ಧ್ವನಿಯಲ್ಲಿ ಹಿಗ್ಗು ತುಂಬಿಕೊಂಡಿದ್ದ ರೇಡಿಯೋ ನಿರ್ವಾಹಕಿ ವಾಸಂತಿಯ ಮಾತು ಕೇಳಿಬಂತು.
"ಇವತ್ತು ಒಂದು ಸ್ಪೆಶಲ್ ಇದೆ. ನಿನ್ನೆಯೇ ತಿಳಿಸಿದಂತೆ, ಇಂದು ದಂಪತಿಗಳ ದಿನ.. ನಿಮ್ಮ ಪ್ರೀತಿಯ ಪತಿ ಅಥವಾ ಪತ್ನಿಗೆ ಏನು ಇಷ್ಟ ಅಂತ ನೀವು ನಮಗೆ ಫೋನ್ ಮಾಡಿ ತಿಳಿಸಲು ನಿನ್ನೆ ಕೇಳಿದ್ದೆವು. ಅದರಲ್ಲಿ ತುಂಬ ಸಕ್ಕತ್ ಆದ ಮೆಸೇಜ್ ಗಳನ್ನ ನಾವು ಇವತ್ತು ಪ್ರಸಾರ ಮಾಡ್ತೇವೆ. ಮತ್ತು ಆಯ್ಕೆಯಾದ ಒಂದು ವಿಶೇಷ ಮೆಸೇಜ್ ಗೆ "ಪಿರೇಟ್ಸ್ ಆಫ್ ದಿ ಕೆರಿಬಿಯನ್" ಸಿನಿಮಾಕ್ಕೆ ಪಿ.ವಿ.ಆರ್. ನಲ್ಲಿ ಈ ಶನಿವಾರ ಸಂಜೆಯ ಶೋ'ಗೆ ಟಿಕೇಟ್ ದೊರೆಯುತ್ತದೆ. ಕೇಳಿ ನಮ್ಮ ಮೆಸೇಜ್, ಒಂದು ಚಿಕ್ಕ ಬ್ರ್ಏಕ್'ನ ಬಳಿಕ... ಮ್ಯೂಸಿಕ್ ತೂರಿಬಂತು. ನಾನು ಲೋಟ ತೆಗೆದುಕೊಂಡು ಅಡಿಗೆ ಮನೆಗೆ ಹೋದೆ. ಅಂಶು ವಾಲ್ಯೂಮ್ ಜಾಸ್ತಿ ಮಾಡಿದ. ಸನ್ಮತಿ ಏಳುತ್ತಾಳೆ ಅಂತ ಬಯ್ಯಲು ಬಂದವಳು ಹಾಗೇ ನಿಂತೆ. ರೇಡಿಯೋದಲ್ಲಿ ಅಂಶುನ ದನಿ ಕೇಳಿಬಂತು. ಅಚ್ಚರಿಯಿಂದ ನಿಂತವಳನ್ನ ಮುಂದೆ ಕೇಳು ಎಂಬಂತೆ ಕಣ್ಸನ್ನೆ ಮಾಡಿದ ಅವನು. "ನನ್ ಪ್ರೀತಿಯ ಹೆಂಡ್ತಿ ಅವಳು. ಅವಳಿಗೆ ಎಲ್ಲ ಒಳ್ಳೆಯ ಸಂಗತಿಗಳೂ ಇಷ್ಟ, ವಿಶೇಷವಾಗಿ ನಾನು (ದನಿಯಲ್ಲಿನ ತುಂಟತನವನ್ನು ಯಾರು ಬೇಕಾದ್ರೂ ಗುರುತಿಸಬಹುದು) - ಕೇಳಿ ವಾಸಂತಿ ಜೋರಾಗಿ ನಕ್ಕಳು. ನಂಗಿಂತ ಜಾಸ್ತಿ ನಮ್ಮಗಳು ಸನ್ಮತಿ, ಮತ್ತು ಈಗ ಇನ್ನೊಬ್ರು ಸೇರ್ಕೊಂಡಿದ್ದಾರೆ.. ದಿವಾ. ಈ ಮೆಸೇಜ್ ದಿವಾನಿಗೆ, ಮನೆಯಲ್ಲಿ ಜ್ವರ ಬಂದು ಮಲಗಿರುವ ನನ್ನ ಹೆಂಡತಿ ದಿವ್ಯಾಳ ಪರವಾಗಿ - ಪುಟ್ಟ ದಿವಾ, ಎಲ್ಲಿದ್ದರೂ ಬೇಗ ಫಲೂಡ ಹತ್ತಿ ಬಾ, ದಿವ್ಯಾ, ಬೆಳ್ಳಿ ಕಳ್ಳನ ಹಾಡು ಟ್ಯೂನ್ ಮಾಡಿಕೊಂಡು ಜೋಕಾಲಿಯ ಹತ್ತಿರವೇ ಕಾಯ್ತಿದ್ದಾಳೆ, ಬಂದು ಕಾಲು ಚಾಚಿ ಕೂತು ಹಾಯಾಗಿ ಮಾತಾಡೋವಂತೆ.. ೯೯೮೪೦ ೯೯೮೪೦ ಗೆ ಫೋನ್ ಮಾಡು.. ಮತ್ತೆ ಅದೇ ಮೆಸೇಜ್ ಇಂಗ್ಲಿಷ್ ನಲ್ಲೂ ಪ್ರಸಾರವಾಯಿತು.. ಜಲತರಂಗದ ನಿನಾದದ ನಗು ನಗುತ್ತ ವಾಸಂತಿ ಮತ್ತೆ ಮೆಸೇಜ್ ಹೇಳಿದಳು. ದಿವಾ ಎಲ್ಲಿದ್ರೂ, ಸುಧಾಂಶುರವರ ೯೯..... ನಂಬರ್ರಿಗೆ ಫೋನ್ ಮಾಡಿ ದಿವ್ಯಾ ಮನೆಗೆ ಬನ್ನಿ.. ಉಯ್ಯಾಲೆ ಹತ್ರ ಕಾಯ್ತಾ ಇರ್ತಾರೆ.." ನಾನು ನಂಬಲಾಗದೆ ಅಂಶುನ ಮುಖ ನೋಡಿದೆ.. ಅಲ್ಲಿ ಕಿರುನಗು. ವಾಸಂತಿಗೆ ಅದೇಕೋ ಈ ಮೆಸೇಜ್ ತುಂಬ ಇಷ್ಟವಾಗಿಬಿಟ್ಟಿತ್ತು. ಏನೇನೋ ಕೇಳುತ್ತಿದ್ದಳು, ಅದಕ್ಕೆ ಅಂಶುನ ಮಾತಲ್ಲೂ ಕಿರುನಗೆಯನ್ನ ಕೇಳಿಸುವ ಉತ್ತರಗಳು.. ನಮಗೆ ಸಿನಿಮಾ ಟಿಕೆಟ್ ಕೂಡಾ ಸಿಕ್ಕಿದವು ಅಂತೇನೂ ಬೇರೆ ಹೇಳಬೇಕಿಲ್ಲ ಅಲ್ಲವೆ?!
ಅವನೆಲ್ಲಿದ್ದಾನೋ ಈ ಮೆಸೇಜ್ ಎಲ್ಲಿ ಕೇಳುತ್ತೋ ಅಂದ್ಕೊಂಡೆ ನಾನು. ಇವತ್ತು ಬೆಳಿಗ್ಗೆ ತಿಂಡಿ ಎಸ್.ಎಲ್.ವಿ ಯಿಂದ ತರಿಸಿದ ಇಡ್ಲಿ ಸಾಂಬಾರ್.ತಿಂಡಿ ತಿನ್ನುತ್ತ ಮನಸ್ಸು ಯೋಚಿಸತೊಡಗಿತು. ನಾನು ಓದಲು ಬೇರೆಡೆ ಹೋದಾಗ ನನಗೆ ೧೮ ವರ್ಷ ಮತ್ತು ದಿವಾನಿಗೆ ಐದು. ಅದೆಲ್ಲ ನಡೆದು ಈಗ ೧೮ ವರ್ಷಗಳಾಗಿವೆ ಅಂದ್ರೆ ಹೆಚ್ಚೂ ಕಡಿಮೆ ಅವನಿಗೆ ಈಗ ೨೩ ವರ್ಷ ಇರುತ್ತೆ. ಯಾವ ಊರಿನಲ್ಲಿದ್ದಾನೋ ಏನು ಓದಿದನೋ ಯಾರಿಗೆ ಗೊತ್ತು.. ಸಂಜೆ, ಇನ್ಯಾವುದೋ ಎಫ್.ಎಂ. ವಿಭಾಗದಲ್ಲಿ ಇಂತಹದೆ ಕೇಳುಗರ ವಿಭಾಗದಲ್ಲಿ ಮತ್ತೊಂದು ಸಲ ಇಂಗ್ಲಿಷ್ ವಿನಂತಿ ತೇಲಿಬಂತು. ಈ ಸಲ ಬರೀ ಇಂಗ್ಲಿಷ್ ಜಾಸ್ತಿ ಇರುವ ರೇಡಿಯೋ ಒಂದರಲ್ಲಿ.
ಮರುದಿನ ಶನಿವಾರ ಅವರಿಬ್ಬರನ್ನೂ ಸಿನಿಮಾಕ್ಕೆ ಕಳಿಸಿ ನಾನು ಮನೆಯಲ್ಲುಳಿಯಲು ನೋಡಿದೆ.. ಸನ್ ನಗುತ್ತ ಬಂದು ತಬ್ಬಿಕೊಂಡಳು, ನೀನ್ ಹೀಗೇ ಹೇಳ್ತೀಯಾಂತ ಗೊತ್ತು ಅದಿಕ್ಕೆ, ಅಪ್ಪ ನಂಗೂ ಒಂದು ಟಿಕೆಟ್ ಮಾಡ್ಸಿದಾನೆ. ಬಾಮ್ಮಾ ಎಲ್ರೂ ಹೋಗೋಣ.. ಇಲ್ಲವೆನ್ನಲಾಗಲಿಲ್ಲ. ಮುಗಿಸಿ ಬಂದು ಮನೆಯಲ್ಲಿ ಗಂಜಿ ತಿಂದು ಮಲಗಿದೆ. ಅವರಿಬ್ಬರೂ ಪಿಝಾ..
ಮಾರನೆಯ ದಿನಾ ಭಾನುವಾರ ಸಾಕಷ್ಟು ಚೇತರಿಸಿಕೊಂಡಿದ್ದೆ. ತಿಂಡಿ ತಿನ್ನುವಾಗ ಗಮನಿಸಿದೆ. ಅಪ್ಪ -ಮಗಳಿಬ್ಬರೂ ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ನಾನು ಅವರೆಡೆ ನೋಡಿದ ಕೂಡಲೆ ಮಾತು ಬಂದ್.. ಏನು ಆಟ ಹಚ್ಚಿದಾರೋ ಅಂದ್ಕೊಂಡೆ.
ಸ್ನಾನ ಮುಗಿಸಿ, ನಿಧಾನವಾಗಿ ತಯಾರಾಗಿ ಬಂದು ಕೂರುವಾಗ ೧೧ ಘಂಟೆ. ಇನ್ನೂ ತಿನ್ನುತ್ತಿದ್ದ ಮಾತ್ರೆಯ ಮತ್ತು, ನಿದ್ದೆಯ ಜೊಂಪು ಹತ್ತಿತ್ತು. ಅಷ್ಟರಲ್ಲೆ ಯಾರೋ ಕರೆಗಂಟೆ ಬಾರಿಸಿದರು.. ಅಂಶು ಬಾಗಿಲು ತೆಗೆದವನು, ಮಾತನಾಡಿ, ಪುಟ್ಟಿಯನ್ನು ಕೂಗಿದ.. ಅವಳು ಒಂದೇ ಓಟ.. ಹೋದವಳು ಮತ್ತೆ ಹಾರಿಕೊಂಡು ಓಡಿಬಂದಳು.. ಜೊಂಪಲ್ಲೆ ಎಚ್ಚರಾಗಿ ಕೂತಿದ್ದೆ ನಾನು, "ಅಮ್ಮಾ ನಿನ್ನ ದಿವಾ ಎಂದು ಎಬ್ಬಿಸಿ ಎಳೆದುಕೊಂಡು ಕರೆದೊಯ್ದಳು. ಬಾಗಿಲಿಗೆ ಬಂದು ನೋಡಿದೆ.
ಅಲ್ಲಿ ಚಿಗುರು ಮೀಸೆಯ, ಮಿಂಚು ಕಣ್ಗಳ ಎಳೆ ಯುವಕ.. ತುಟಿಯಂಚಲಿ ಮೋಹಕ ಕಿರುನಗು. ಯಾವುದೋ ಹಳೆಯ ನೆನಪು ನುಗ್ಗಿ ಬರುತ್ತಿತ್ತು. ಅಚ್ಚರಿಯಿಂದ ಬಾಯ್ತೆಗೆಯುವಷ್ಟರಲ್ಲಿ ಅವನೇ ಉಲಿದ.." ಹಾಯ್ ದಿವ್ಯಾ, ಹಾಯಾಗಿ ಮಾತಾಡೋಣಾ ಅಂತ ಬಂದ್ ಬಿಟ್ಟೆ.. ಅಲ್ನೋಡು ನನ್ನ ಫಲೂಡ.. ಅವನ ಮುಖದಿಂದ ಕಿತ್ತಿಡಲಾಗದೆ, ನನ್ನ ದೃಷ್ಟಿ ಕಿತ್ತು ಅವನು ಕೈ ತೋರಿದತ್ತ ನೋಡಿದೆ.. ಅಲ್ಲಿ ಕಪ್ಪಗೆ ಮಿರುಗುತ್ತ ನಿಂತಿತ್ತೊಂದು ಬೈಕು.. ಮೇಲೆ ಫಲೂಡ ಅಂತಲೇ ಬರೆದಿತ್ತು. ಈಗ ಅಪ್ಪ ಮಗಳ ಹುನ್ನಾರ ಅರ್ಥವಾಯಿತು. ಅವನಿಂದ ಫೋನ್ ಬಂದಿದ್ದನ್ನು ನನಗೆ ಹೇಳದೇ ಆಶ್ಚರ್ಯ ನೀಡಲು ಕಾದಿದ್ದರು. ಬಾಗಿಲಲ್ಲೇ ನಿಂತು ನನ್ನನ್ನೇ ನೋಡುತ್ತಿದ್ದ ಅಂಶುವಿನತ್ತ ನೋಡಿದೆ. ದಿವಾನ ಮುಖದ ಮೇಲೆ ಅರಳಿದ ಹೂ ನಗು, ಅಂಶುನ ಮುಖ ಮಂಡಲಕ್ಕೂ ಹಬ್ಬಿತ್ತು. ಇನ್ನು ಸನ್ ಬಿಟ್ಟಾಳೆಯೆ ಅವಳ ಮುಖದಲ್ಲಿ ಹೂಗೊಂಚಲೇ..
ಮುಂದೆ ನಿಂತಿದ್ದು ದಿವಾನೇ, ನಿಜವಾಗಲೂ ಅಂತ ಗೊತ್ತಾದ ಮೇಲೆ, ಹತ್ತಿರ ಹೋಗಿ ತಬ್ಬಿಕೊಂಡೆ.. ಅವನು ನಗುತ್ತಿದ್ದ. ಈಗ ಹೇಗೆ ಜೋಕಾಲಿಯ ಮೇಲೆ ಕೂರಿಸಿಕೊಳ್ತೀಯ ದಿವ್ಯಾ? ನಾನು ಮಾತ್ರ ನಿನ್ನನ್ನ ಫಲೂಡ ಮೇಲೆ ಕೂರಿಸಿಕೊಳ್ಳಬಹುದು.. ಅಂತ.. ಅದನ್ನು ಕೇಳಿ ಜೋರಾಗಿ ನಗುತ್ತಿದ್ದ ಸನ್ ಹೇಳಿದಳು.. ಇಲ್ಲಾ ದಿವಾ ಈಗ ನಮ್ಮನೇಲಿ ಉಯ್ಯಾಲೆ ಜೊತೆ ತೂಗು ಮಂಚವೂ ಇದೆ. ಅದರಲ್ಲಿ ತೂಗುತ್ತಾಳೆ ಅಮ್ಮ ಅಂತ.. ಈಗ ಮನೆಯ ಗೋಡೆಗಳಿಂದೆಲ್ಲ ನಗೆ ಹೂಗಳ ಮೋಹಕ ಪ್ರತಿಫಲನ..
ಒಂದ್ನಿಮಿಷ ಸುಮ್ಮನೆ ಕಣ್ಮುಚ್ಚಿಕೊಳ್ಳಿ,, ನಿಮಗೂ ಕೇಳಿಸುತ್ತದೆ, ಪರಿಮಳವೂ ಬರುತ್ತದೆ.. ಹಾಂ ನೋಡಿ ಈಗ ನಿಮ್ಮ ಮುಖದಲ್ಲು ಅರಳಿ ನಿಂತಿದೆ..
ಮಗುಗಳ ಮಾಣಿಕ್ಯವನ್ನ ನನ್ನ ಮುದ್ದು ಕಿನ್ನರಿ ಎನಗೊಪ್ಪಿಸುತ್ತಿದ್ದಾಳೆ..
[ಯಾವತ್ತು ನೆನಪಿಸಿಕೊಂಡರೂ ಮಧುರ ಅನುಭೂತಿಯನ್ನೇ ಸುರಿಸುವ
ಕಿನ್ನರ ಗೆಳೆತನವನ್ನು ಕೊಟ್ಟ ಆ ಮುದ್ದು ತುಂಟ ಪೋರನಿಗೆ ನಾನು ಕೃತಜ್ಞೆ..]
Comments
ಉ: ಮಗುಗಳ ಮಾಣಿಕ್ಯ
ಉ: ಮಗುಗಳ ಮಾಣಿಕ್ಯ
ಉ: ಮಗುಗಳ ಮಾಣಿಕ್ಯ
In reply to ಉ: ಮಗುಗಳ ಮಾಣಿಕ್ಯ by santoshbhatta
ಉ: ಮಗುಗಳ ಮಾಣಿಕ್ಯ