ಮಗ ಕೇಳುತ್ತಾನೆ.

ಮಗ ಕೇಳುತ್ತಾನೆ.

ನನ್ನ ಹರೆಯದ ಮಗ ಕೇಳುತ್ತಾನೆ
ಕಲಿಯಬೇಕಾ ಅಪ್ಪ ಲೆಕ್ಕ?"
ಏನುಪಯೋಗ,
ಎರಡು ತುಣುಕು ರೊಟ್ಟಿ
ಒಂದಕ್ಕಿಂತ ಹೆಚ್ಚೆಂದು ಅರಿಯಲೇನು?
ಅದನು ಬದುಕೇ ಬಿಡದೆ ಕಲಿಸದೇನು?

ನನ್ನ ಹರೆಯದ ಮಗ ಕೇಳುತ್ತಾನೆ
ಕಲಿಯಲೇನು ಕನ್ನಡವನು ನಾನು?
ಏನುಪಯೋಗ,
ಭಾಷೆ ಮರೆತ ಆಡಳಿತ ಇರುವಾಗ
ಉದುರಿಸಿ ಇಂಗ್ಲಿಷಿನ ಅಣಿಮುತ್ತು
ಕರಜೋಡಿಸಿ ನಿಂತರೆ ಸಾಕಾಗುವ ಹೊತ್ತು
ಕನ್ನಡ ಕಲಿತೇನು ಬಂತು?

ಹರೆಯದ ಮಗ ಕೇಳುತ್ತಾನೆ
ಅರಿಯಬೇಕೇನು ನಮ್ಮ ಇತಿಹಾಸವನು?
ಏನುಪಯೋಗ
ನೆಲದೊಳಗೆ ತೂರಿಸಿ ತಲೆ
ಬಾಳುವುದೊಂದು ಹಿರಿಯ ಕಲೆ
ಅಷ್ಟಿದ್ದರೇ ಸಾಕಲ್ಲವೇ?

ನಾನು ಹೇಳುತ್ತೇನೆ..
ಹೌದು ಮಗೂ.. ಲೆಕ್ಕ ಕಲಿಯಬೇಕು
ಭಾಷೆ ಅರಿಯಬೇಕು, ಇತಿಹಾಸ ತಿಳಿಯಬೇಕು.
ಬ್ರೆಕ್ಟ್ ಕವಿಯ  " My young son asks me.. "    ಪದ್ಯದ  ಭಾವಾನುವಾದ.

Rating
No votes yet

Comments

Submitted by nageshamysore Wed, 05/22/2013 - 18:31

ನಮಸ್ಕಾರ ಮೊದ್ಮಣಿಯವರೆ,
ನಿರೀಕ್ಷೆಗಳ ಹೊರೆ ಹೊರಿಸಲೆತ್ನಿಸುವ ಪರಿಸರ / ವ್ಯವಸ್ಥೆ ಮತ್ತು ಅದರ ಹುಳುಕನೆತ್ತಿ ಆಡಿ ಅಣಕಿಸುವ ವಾಸ್ತವದ ವ್ಯಂಗ್ಯ - ಎರಡನ್ನು ಪರೋಕ್ಷವಾಗಿ ಬಿಂಬಿಸುವ ಬಗೆ ತಂದೆ ಮಗನ ಸಂವಾದದ ರೂಪದಲ್ಲಿ ಸರಳವಾಗಿ ನಿರೂಪಿತವಾಗಿದೆ. ಒಂದು ಅನುಮಾನ - ''ಹರೆಯ ಅನ್ನುವುದರ ಬದಲು 'ಎಳೆಯ' ಅಥ 'ಕಿರಿಯ' ಅಂದಿದ್ದರೆ ಭಾವಾನುವಾದಕ್ಕೆ ಹೆಚ್ಚು ಸೂಕ್ತವಿರುತ್ತಿತ್ತೆ?
-ನಾಗೇಶ ಮೈಸೂರು, ಸಿಂಗಪುರದಿಂದ

Submitted by kavinagaraj Thu, 05/23/2013 - 20:02

ಮಗನ ಏಕೆ ಪ್ರಶ್ನೆಗೆ ಅಪ್ಪನ ಉತ್ತರ ಸರಿಯಾಗದು! ಏಕೆಂದರೆ ಈ ಸ್ಥಿತಿ ಬರಲು ಅಪ್ಪಂದಿರೂ ಕಾರಣರು! ಅಲ್ಲವೇ ಮೊದ್ಮಣಿಯವರೇ. ಸುಂದರ ಭಾವ ಹೊಮ್ಮಿಸುವುದರೊಡನೆ ವಿಚಾರಕ್ಕೆ ಹಚ್ಚುವ ಕವನವಿದು.

Submitted by modmani Fri, 05/24/2013 - 13:23

In reply to by kavinagaraj

ಕವಿ ನಾಗರಾಜರಿಗೆ ವಂದನೆಗಳು. ಮೆಚ್ಚುಗೆಯ ನುಡಿಗೆ ಧನ್ಯವಾದಗಳು.

ಮಗನ ಪ್ರಶ್ನೆಗಳಿಗೆ ಅಪ್ಪ ಹೇಳಬಯಸುವ ಉತ್ತರವೇನೇ ಇದ್ದರೂ, ಪರಿಸ್ಥಿತಿಯ ಒತ್ತಡಗಳಿಂದ ಮಗ ಕಲಿಯಬೇಕೇ ಎಂದು ಕೇಳಿದ ಪ್ರಶ್ನೆಗೆ ತನ್ನದೇ ಮನಸ್ಥಿತಿಯಲ್ಲಿ ಯೋಚಿಸುವ ತಂದೆ, ಮತ್ತೆ ಅದೇ ಪರಿಸ್ಥಿತಿಯ ಒತ್ತಡಗಳಿಗೆ ಕೈಗೊಂಬೆಯಾಗಿ ಉತ್ತರ ನೀಡುವುದನ್ನು ಇಲ್ಲಿ ಕಾಣುತ್ತೇವೆ.

ಬ್ರೆಕ್ಟ್ ಮಹಾಕವಿಯು, ಜಗತ್ತಿನ ಅತ್ಯುತ್ತಮ ನಾಟಕಕಾರನೂ, ಉತ್ತಮ ವಿಡಂಬಕಾರನೂ ಹೌದು. ದ್ವಿತೀಯ ಮಹಾಯುದ್ಧದ ಕಾಲದಲ್ಲಿ, ಹಿಟ್ಲರನ ಎದುರಾಗಿ ನಿಂತ ಕೆಲವೇ ಜರ್ಮನರಲ್ಲಿ ಇವನೂ ಒಬ್ಬ. ಅವನ ಕವಿತೆಯ ಆಶಯವನ್ನು ಕನ್ನಡೀಕರಿಸುವ ನಮ್ರ ಪ್ರಯತ್ನವಷ್ಟೇ ನನ್ನದು.

ಮೂಲ ಪದ್ಯಕ್ಕಾಗಿ ನೀವು ಈ ಕೊಂಡಿ http://www.artofeurope.com/brecht/bre1.htm ನೋಡಬಹುದು. ಬ್ರೆಕ್ಟ್ ಬಗೆಗಿನ ಮಾಹಿತಿಗಾಗಿ ಇಲ್ಲಿ http://en.wikipedia.org/wiki/Bertolt_Brecht ನೋಡಿ.

Submitted by kavinagaraj Fri, 05/24/2013 - 15:24

In reply to by modmani

ನಮಸ್ತೆ. ನಿಮ್ಮ ಅನಿಸಿಕೆಯನ್ನೇ ನಾನೂ ಹೇಳಿರುವುದು! ಮುಂದುವರೆಸಿದೆ, ಅಷ್ಟೆ. ಚೆನ್ನಾಗಿದೆ ಎಂದಷ್ಟೇ ಹೇಳದೆ, ಇಂತಹ ಪರಿಸ್ಥಿತಿಗೆ ಕಾರಣವನ್ನೂ ಹೇಳಿದ್ದೆನಷ್ಟೇ. ಅನ್ಯಥಾ ಭಾವಿಸದಿರಿ.

Submitted by modmani Fri, 05/24/2013 - 16:11

In reply to by kavinagaraj

ನಿಮ್ಮ ನುಡಿಯನ್ನು ಕಂಡಿತಾ ಅನ್ಯಥಾ ಭಾವಿಸುವುದಕ್ಕೆ ಸಾಧ್ಯವೇ ಇಲ್ಲ ಕವಿನಾಗರಾಜ್ ಸಾರ್. ನಾನು ಬಹುವಾಗಿ ಮೆಚ್ಚುವ ಸಂಯಮದ ವ್ಯಕ್ತಿತ್ವ ನಿಮ್ಮದು.
ಕವಿತೆಯನ್ನು ಅನುವಾದಿಸಿದ ನಂತರ ನನ್ನ ತುಡಿತವನ್ನು ನಾನು ಸಾಧಾರಣವಾಗಿ ಯಾರಿಗೂ ಹೇಳುವುದಿಲ್ಲ. ಈ ಕವಿತೆಯ ನಂತರದ ತುಡಿತ ಹೇಳಲೇಬೇಕೆನ್ನಿಸಿದ್ದರಿಂದ ಇಲ್ಲಿ ಹೇಳಿದೆ ಆಷ್ಟೆ.

Submitted by makara Thu, 05/23/2013 - 20:26

ಇತಿಹಾಸದಿಂದ ಯಾರೂ ಪಾಠ ಕಲಿಯುವುದಿಲ್ಲ ಎನ್ನುವುದು ತಿಳಿದಿದ್ದರೂ ಸಹ ಇತಿಹಾಸವನ್ನು ಪದೇ ಪದೇ ಓದಿ ಮರೆಯುತ್ತೇವೆ. ಹಾಗೆಯೇ ಬುದ್ಧಿ ಹೇಳಿದರೂ ಮಗ ಕೇಳುವುದಿಲ್ಲವೆಂದು ತಿಳಿದಿದ್ದರೂ (ಏಕೆಂದರೆ ನಾವೂ ಆ ವಯಸ್ಸಿನಲ್ಲಿ ನಮ್ಮ ಅಪ್ಪ ಅಮ್ಮಂದಿರ ಮಾತು ಕೇಳಿರುವುದಿಲ್ಲವಲ್ಲ) ಮತ್ತೆ ಮತ್ತೆ ಹೇಳುತ್ತೇವೆ. ನಮ್ಮಂತೆ ನಮ್ಮ ಮಗನೂ ಪ್ರಶ್ನೆ ಕೇಳುತ್ತಾನೆ, ಇದನ್ನರಿಯುವುದಕ್ಕೇ ಇತಿಹಾಸ ಕಲಿಯಬೇಕು, ಇದರಲ್ಲೂ ಒಂದು ಲೆಕ್ಕಾಚಾರವಿದೆ ಅದಕ್ಕೇ ಲೆಕ್ಕವನ್ನು ಕಲಿಯಬೇಕು :) ನಮ್ಮ ಮಕ್ಕಳಿಗೆ ಅವರ ಅಪ್ಪ-ತಾತಂದಿರು ಬರೆದಿರುವ ಲೆಕ್ಕ-ಪತ್ರಗಳನ್ನು ಓದಿಕೊಳ್ಳು ಕನ್ನಡದ ಅವಶ್ಯಕತೆ ಬೀಳಬಹುದು, ಅದಕ್ಕಾಗಿಯಾದರೂ ಅವರು ಕನ್ನಡವನ್ನು ಕಲಿಯಲಿ ಅಲ್ಲವೇ ಮೊದ್ಮಣಿಗಳೇ :))

Submitted by modmani Fri, 05/24/2013 - 13:29

In reply to by makara

ಶ್ರೀಧರ ಬಂಡ್ರಿಯವರಿಗೆ ವಂದನೆಗಳು.

ನಿಮ್ಮ ಮಾತೂ ಸತ್ಯ. ನಾವು ನಂಬಿಕೊಂಡ ತತ್ವಗಳು ಸಾಮಾಜಿಕವಾಗಿ ಉಪಯೋಗಕ್ಕೆ ಬರದಂತಾಗುವ ಸ್ಥಿತಿ ಎದುರಿಸುವ ಎಲ್ಲರೂ ಇಂತಹ ಪ್ರಶ್ನೋತ್ತರಗಳಿಗೆ ಒಳಗಾಗುತ್ತಾರೆ. ಅಪ್ಪ-ಮಗನ ಮಾತುಗಳು ಇಲ್ಲಿ ಪ್ರತಿಮಾ ರೂಪಕವಷ್ಟೆ. ಈ ಪ್ರತಿಮೆಯಲ್ಲಿ ಬ್ರೆಕ್ಟ್ ನಮ್ಮನ್ನು ಚಿಂತನೆಗೆ ಹಚ್ಚುತ್ತಾನೆ. ಕವಿಯ ನಿಜವಾದ ಶಕ್ತಿ ಅದು. ಬ್ರೆಕ್ಟ್ ಹಾಗೂ ಮೂಲ ಪದ್ಯದ ಕೊಂಡಿ ಮೇಲಿನ ಪ್ರತಿಕ್ರಿಯೆಯಲ್ಲಿದೆ.

Submitted by Shreekar Fri, 05/24/2013 - 20:13

+1