ಮಗ-ಚಿನ್ನ,ಮಗಳು-ಕಂಚು

ಮಗ-ಚಿನ್ನ,ಮಗಳು-ಕಂಚು

ನನ್ನ ಪರಿಚಿತರೊಬ್ಬರಿಗೆ ೨ ಮಕ್ಕಳು.ಹುಡುಗಿಗೆ ೧೦ ವರ್ಷವಿರಬಹುದು.ಹುಡುಗನಿಗೆ ೭-೮ ವರ್ಷವಿರಬಹುದು.ತುಂಬಾ ತೆಳ್ಳಗಿದ್ದಾನೆ. ಅಪ್ಪ ಅಮ್ಮನಿಗೆ ಆ ಹುಡುಗನನ್ನು ಎಲ್ಲರ ಬಳಿ ಹೊಗಳುವುದೇ ಕೆಲಸ. ಯಾವುದೇ ವಿಷಯ ಮಾತನಾಡಿ ಕೊನೆಗೆ ಬಂದು ಮುಟ್ಟುವುದು ಆ ಹುಡುಗನ ವಿಷಯಕ್ಕೇ. "ದ್ರಾವಿಡ್ ರಾಜಿನಾಮೆ ಬೆಳಗ್ಗೆ ನ್ಯೂಸ್ ನಲ್ಲಿ ನೋಡಿದೆ.ನಮ್ಮ ಅಪ್ಪುಗೆ ಗಂಗೂಲಿ ಅಂದರೆ ಬಹಳ ಇಷ್ಟ.ಈಗ ದ್ರೋಣಿ(ಧೋನಿ)ನೂ ಲೈಕ್ ಮಾಡುತ್ತಾನೆ." "ಸ್ಕೂಲ್ನಿಂದ ಬಂದ ಕೂಡಲೇ ಹೋಮ್ ವರ್ಕ್ ಮಾಡಿ ಮುಗಿಸುವನು.ನಂತರ ಪೋಗೋ ಹಾಕಿ ಕುಳಿತುಕೊಳ್ಳುವನು.ಪೊಗೊದಲ್ಲಿ ಏನೆಲ್ಲಾ ಬರುತ್ತದೆ ಅವನಿಗೆ ಬೈಹಾರ್ಟ್ ಇದೆ.""ಕಂಪ್ಯೂಟರ್ ನಲ್ಲೂ ಇವರಿಗೇನಾದರೂ ಗೊತ್ತಾಗದಿದ್ದರೆ ಅವನನ್ನೇ ಕೇಳುವರು"ಎಂದು ಅವರ ಶ್ರೀಮತಿಯವರೂ ಒಗ್ಗರಣೆ ಹಾಕಿದರು.
ಈ ಸಮಯದಲ್ಲಿ ನಮ್ಮ ಮನೆಯಲ್ಲಿರುವ ಸ್ಠಿರಚರ ವಸ್ತುಗಳನ್ನೆಲ್ಲಾ ಒಂದು ರೌಂಡು ಅಲುಗಾಡಿಸಿ ಬಂದ ಮಗರಾಯ.ಆಗ ಅವರ ಮೊಬೈಲ್ ರಿಂಗಾಯಿತು.ಅವರ ಕೈಯಿಂದ ಮೊಬೈಲ್ ಕಸಿದು ಇವನೇ ಆನ್ ಮಾಡಿ ಮಾತನಾಡಲು ಸುರುಮಾಡಿದ.ಅವರು ಸ್ವಲ್ಪವೂ ಬೇಸರಿಸದೇ ಹೆಮ್ಮೆಯಿಂದ ನಮ್ಮ ಕಡೆ ನೋಡುತಿದ್ದರು.ನಂತರ ಸ್ವಲ್ಪ ಹೊತ್ತಿಗೆ ನನ್ನ ಮೊಬೈಲ್ ಅವನ ಕಣ್ಣಿಗೆ ಸಿಗಬೇಕೆ.ಅದ್ನಾನ್ ಸಾಮಿ ಕೀಬೋರ್ಡ್ ಬಾರಿಸುವುದಕ್ಕಿಂತ fast ಆಗಿ ಗೇಮ್ಸ್ ಆಡಲು ಸುರುಮಾಡಿದ.೧೩,೦೦೦ದ ಮೊಬೈಲ್,ಆಡಲು ನನ್ನ ಮಕ್ಕಳ ಕೈಗೂ ಕೊಟ್ಟಿಲ್ಲ,ಹೊಟ್ಟೆಯೊಳಗೆ ಸಂಕಟವಾದರೂ ಮೇಲಿನಿಂದ ನಗುತ್ತಲಿದ್ದೆ.
ಇನ್ನು ಈ ಮಗರಾಯ ಊಟಮಾಡಿದ ಚಂದ(ನರಕ) ದೇವರೇ...ಪ್ರತೀ ಐಟಮ್ ತಂದಾಗ "ಇದಾ ಬೇಏಏಡಾ" ಮುಖವನ್ನು ಸಗಣಿ ನೋಡಿದಾಗ ಮಾಡುವಂತೆ ಮಾಡುತಿದ್ದ."ಅವನಿಗೆ ಅದು ಇಷ್ಟವಿಲ್ಲಾ,..ಇದು ಇಷ್ಟವಿಲ್ಲ.."ತಾಯಿಯ ವಿವರಣೆ ಊಟಮುಗಿಯುವವರೆಗೆ ಮುಂದುವರಿದಿತ್ತು.ಸಂಜೆ pizza,ಐಸ್ಕ್ರೀಂ ಕೊಡಿಸುತ್ತೇನೆ ಎಂಬ ಅಪ್ಪನ ಆಮಿಷಕ್ಕೆ, ಅನ್ನಕ್ಕೆ ನೀರು(!!)ಹಾಕಿ ಕೆಟ್ಟದಾಗಿ ಸ್ವಲ್ಪ ತಿಂದು ಎದ್ದನು.ಅವರ ಮಗಳು ಬೇಕಾದುದನ್ನು ಬಡಿಸಿಕೊಂಡು ಚಂದ ಊಟ ಮಾಡಿ ಎದ್ದಳು.ಮೊದಲಿಗೆ ಮಾತನಾಡುತ್ತಿರುವಾಗಲೂ ಸೋಫಾದಲ್ಲಿ ಸುಮ್ಮನೆ ಕುಳಿತಿದ್ದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಳು.
ಈ ೧-೨ಗಂಟೆ ಸಮಯದಲ್ಲಿ ಅವಳನ್ನು ಒಮ್ಮೆಯೂ ಹೊಗಳಲಿಲ್ಲ. ಬದಲಿಗೆ ತೆಗಳಿಕೆ."ಇವಳಿದ್ದಾಳೆ ಬುದ್ದೂಸ್,ಅವನಷ್ಟು ಚುರುಕಿಲ್ಲಾ.ಅವನು ಎಲ್ಲಿ ಹೋದರೂ ಜಗಳಾಡಿ ಗೆದ್ದು ಬರುತ್ತಾನೆ. ಇವಳು ಅಳುತ್ತಾ ಬಂದು ಅಮ್ಮನಲ್ಲಿ ಕಂಪ್ಲೇಂಟ್ ಮಾಡುತ್ತಾಳೆ.ಅವನು ನೋಡಲಿಕ್ಕೆ ಹೀಗಿದ್ದಾನಲ್ಲಾ...ಸ್ಟೀಲ್ ಬಾಡಿ. ಅವನ ಪೆಟ್ಟು ಇವಳಿಗೆ ತಡೆಯಲಿಕ್ಕಾಗುವುದಿಲ್ಲಾ.."ಈ ಮಾತು ಕೇಳಿದ ಕೂಡಲೇ ಅವನು 'ಪೊಗೋ' ನೋಡುತ್ತಿದ್ದವನು ಎದ್ದು ರಿಮೋಟನ್ನು ಟೀಪಾಯಿ ಮೇಲೆ ಬಿಸಾಕಿ (ನಿಜಕ್ಕೂ ಬಿಸಾಕಿ) ಅವಳಿಗೆ ಹೊಡೆಯಲು ಸುರುಮಾಡಿದ.ಅವಳ ಕಣ್ಣು ತುಂಬಿ ಬಂದುದನ್ನು ನೋಡಿ ನನಗೆ ತಡೆಯಲಾಗಲಿಲ್ಲ.ಎದ್ದು ಹೋಗಿ ಅವಳ ಬಳಿ ಕುಳಿತು "ಏನೂ ಹೆದರಬೇಡ,ನಾನಿದ್ದೇನೆ.ಅವನು ಇಷ್ಟು ಹೊಡೆದ ಅಲ್ಲಾ,ನೀನು ಒಂದೇ ಏಟು ಹೊಡಿ. ಮುಖ,ಮೈಗೆ ಬೇಡ,ಕಾಲಿಗೆ ಮಾತ್ರಾ"ಎಂದೆ.ಒಂದು ಏಟು ಕೊಟ್ಟಳು ನೋಡಿ.ನನ್ನ ಲೆಕ್ಕದಲ್ಲಿ ಅದು 3 ಏಟು.ಊರಗಲ ಬಾಯಿ ಮಾಡಿ ಅಳಲು ಸುರುಮಾಡಿದ.
ಇದನ್ಯಾಕೆ ಇಲ್ಲಿ ಹೇಳಿದೆ ಎಂದರೆ -ಬಹಳಷ್ಟು ಜನ ಇದೇ ಸಂತತಿಗೆ ಸೇರಿದವರು.ಗಂಡು ಮಗುವನ್ನು ಹೊಗಳಲಿ,ತಮ್ಮದೇ ಹೆಣ್ಣು ಮಗುವನ್ನು ನಾಲ್ಕು ಜನರೆದುರು ಯಾಕೆ ಹೀಗಳೆಯುತ್ತಾರೆ?ನಾವು ಪರಿಚಿತರೇ ಇರಬಹುದು.ಆ ಹೆಣ್ಣು ಮಗುವಿಗೂ ಒಂದು ಮನಸ್ಸಿದೆ.ಅದೂ ತಂದೆತಾಯಿಯ ಹೊಗಳಿಕೆ ಬಯಸುತ್ತದೆ ಎಂಬ ಯೋಚನೆಯೇ ಇವರಿಗೆ ಬರುವುದಿಲ್ಲವಲ್ಲಾ?ಈ ರೀತಿ ಬೆಳೆಸಿದ ಗಂಡು ಮಕ್ಕಳೇ ಹೆಣ್ಣುಗಳನ್ನು ಕೀಳಾಗಿ ಕಾಣುವುದು.ನನಗೆ ಅರ್ಥವಾಗದೇ ಇರುವುದು ಹೀಗೆ ಕೀಳರಿಮೆಯಲ್ಲಿ ಬೆಳೆದ ಹೆಂಗಸರೇ ತಮ್ಮ ಹೆಣ್ಣು ಮಗಳನ್ನು ಯಾಕೆ ಗಂಡು ಮಗುವಿಗಿಂತ ಕೀಳಾಗಿ ಕಾಣುವರು?

Rating
No votes yet

Comments