ಮತ್ತೆ ಬರುತಿದೆ ಮಳೆಗಾಲ (ಪ್ರಬಂಧ)

ಮತ್ತೆ ಬರುತಿದೆ ಮಳೆಗಾಲ (ಪ್ರಬಂಧ)

"ಮಳೆ ಬರುವ ಕಾಲಕ್ಕೆ


ಒಳಗ್ಯಾಕ ಕುಂತೇವು


ಇಳೆಯೊಡನೆ ಜಳಕವಾಡೋಣು,


ನಾವೂನು, ಮೋಡಗಳ ಆಟ ನೋಡೋಣು."


ಎಂದು ಪ್ರಾಸಬದ್ದವಾಗಿ, ಭಾವಪೂರ್ಣ ಸಾಲುಗಳನ್ನು ಬರೆದರು ವರಕವಿ ಬೇಂದ್ರೆ. ನಿಜ, ಮಳೆ ಎಂದರೆ ಹಾಗೇನೆ, ಆಗಸದ ಶೂನ್ಯದಿಂದ ಥಳಥಳಿಸುವ ಮುತ್ತುಗಳಂತೆ ನೆಲಕ್ಕೆ ಬಿದ್ದು ಜೀವಸೃಷ್ಟಿಗೆ ನಾಂದಿ ಹಾಡುವ ಮಳೆಯು ಅದ್ಯಾವುದೋ ಮಾಯದ ಲೋಕದಿಂದ ಬಂದದ್ದೇ ಇರಬಹುದೇನೊ ಎಂಬ ವಿಸ್ಮಯ! ಈ ಮಳೆಯ ಹುಟ್ಟೇ ಒಂದು ಅದ್ಭುತ, ಅಚ್ಚರಿ, ಕೌತುಕ, ಚೋದ್ಯ. ಬಿಸಿ ಬಿಸಿ ಬೇಗೆಯ ದಿನಗಳಲ್ಲಿ, ಮಳೆಯ ಸೂಚನೆಯೂ ಇರದೇ, ಆಗಸದಲ್ಲೆಲ್ಲಾ ಬಿಳಿ ಮೋಡ, ಬಿಸಿ ಗಾಳಿ. ನೆಲವೂ ಸಹ ಬಿರುಕು ಬಿಟ್ಟಿದ್ದು, ಅಂತರಾಳದ ಬೇಗೆಯನ್ನು ತಾಳದೇ ಬಿಸಿಯುಸಿರನ್ನು ಹೊರಹಾಕುತ್ತಿದೆಯೇನೊ ಎಂಬ ಭಾವನೆ. ಆಗ, ಅದೆಲ್ಲಿಂದಲೋ ಒಂದಷ್ಟು ಧೂಳಿ, ಅದರ ಮಧ್ಯೆ ತಂಗಾಳಿ. ಬಿಳಿ ಮೋಡಗಳ ನಡುವೆ ದಟ್ಟ ನೀಲಿಯ ಛಾಯೆ; ಮದಿಸಿದ ಕರಿಗಳ ರೂಪ ಪಡೆಯುವ ಕರಿಮೋಡಗಳು. ಮಿಂಚುಗಳ ಕೋರೈಸುವ ಬೆಳಕು; ಗುಡುಗುಗಳ ಗುಡುಗಾಟ. ಖಾಲಿಯಾಗಿದ್ದ ಆಗಸದಲ್ಲಿ ಒಮ್ಮೆಗೇ ಸೃಷ್ಟಿಯಾಗುವ ನೀರಿನ ಹನಿಗಳು ನೆಲಕ್ಕೆ ಬಿದ್ದು, ಬಿಸಿ ಬಿಸಿ ಭೂಮಿಯನ್ನು ಹಸಿ ಹಸಿಗೊಳಿಸುವ ಅಪೂರ್ವ ಪ್ರಕ್ರಿಯೆ.


ಅದಕ್ಕೇ ಇರಬೇಕು, ಮಳೆ ಎಂದರೆ ಭಾವ ಜೀವಿಗಳಿಗೆ ಅದೇನೋ ಒಂದು ವಿಸ್ಮಯ. ಮೊದಲ ಮಳೆಗಾಗಿಯೇ ಕಾಯುವ ಭಾವ ಜೀವಿಯು, ಆ ಮಳೆ ತರುವ ವಾಸನೆಯನ್ನೇ ಮನದೊಳಗೆ ಅಚ್ಚೊತ್ತಿಕೊಳ್ಳುವ ತವಕದಿಂದ, ಕಣ್ಮುಚ್ಚಿ ಮಣ್ಣಿನ ವಾಸನೆಯನ್ನು ಘ್ರಾಣಿಸುತ್ತಾರೆ. ಮಳೆ ಬಿದ್ದ ಕೂಡಲೇ ಅದೇ ಮಳೆಯಲ್ಲಿ ನೆನೆಯುತ್ತಾ ನಿಲ್ಲುವ ಭಾವಜೀವಿಯು, ತನ್ನ ಮನದ ಮೂಲೆಯಲ್ಲಿ ಅಡಗಿ ಕುಳಿತಿರುವ ಪ್ರೀತಿಯ ಸೆಲೆಗೆ ದಾರಿ ಮಾಡಿಕೊಟ್ಟು, ಬಾನಿನಿಂದ ಬೀಳುವ ಮಳೆಯೊಡನೆ ಹರಿಬಿಡುತ್ತಾರೆ. ಮಳೆಯಲ್ಲಿ ನೆನೆಯುವುದರಲ್ಲೂ ಒಂದು ಖುಷಿ ಇದೆ - ಟಪ ಟಪ ಎಂದು ಆಗಸದಿಂದ ಬೀಳುವ ಮಳೆ ಹನಿಗಳು, ತಲೆ ಮೇಲೆ ತಮಟೆಯಂತೆ ಕುಟ್ಟಿ, ಕುತ್ತಿಗೆ ಭುಜದ ಮೇಲೆ ಹರಿದು, ಮೈ ಮನಗಳನ್ನೆಲ್ಲಾ ತೋಯಿಸಿ, ಮೂರ್ತ - ಅಮೂರ್ತ ಲೋಕಗಳ ಮಧ್ಯೆ ಇರುವ ಸೀಮಾರೇಖೆಯನ್ನು ಅಳಿಸಿ ಹಾಕಿ, ಅದ್ಯಾವುದೋ ಭಾವುಕ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.


ಮಳೆಗಾಲವು ಸುರಿಯುವ ಪರಿಗೆ ಆಯಾ ಪ್ರದೇಶದ್ದೇ ಆದ ವಿಶೇಷವಿದ್ದೇ ಇರುತ್ತದೆ. ಅದರಲ್ಲಿ, ನಮ್ಮ ಮಲೆನಾಡು ಮತ್ತು ಕರಾವಳಿಯಲ್ಲಿ ಕಾಣುವ ಮಳೆಗಾಲಕ್ಕೆ ತನ್ನದೇ ಆದ ವ್ಯಕ್ತಿತ್ವ ಇದೆ ಎಂದರ ತಪ್ಪಾಗದು. ಮಳೆಗಾಲದ ಮಳೆರಾಯನು ತನಗೆ ಅನಿಸಿದಂತೆ ವರ್ತಿಸಿ, ಆಟವಾಡಿ, ಫೂತ್ಕರಿಸಿ, ಗುಡುಗಿ, ನಾನಾ ಚಟುವಟಿಕೆಗಳನ್ನು ಮಾಡಿ, ಕಾಡಿನ ಅಂಚಿನಲ್ಲಿ ವಾಸಿಸುವ ಜನರ ಜೊತೆ ವಿಶೇಷವಾಗಿ ವರ್ತಿಸುವಂತೆ ಕಾಣುವುದರಿಂದಲೇ, ಮಲೆನಾಡಿನ / ಕರಾವಳಿಯ ಮಳೆಗಾಲಕ್ಕೆ ಒಂದು ವ್ಯಕ್ತಿತ್ವದ ಸ್ವರೂಪ ಬಂದಿದೆ. ಕನಿಷ್ಟ ಮೂರು ತಿಂಗಳು ಹಾಗೂ ಹೀಗೂ ಎಡೆಬಿಡದೆ, ಅಥವಾ ಪ್ರತಿ ದಿನವೆಂಬಂತೆ ಬರುವ ಮಳೆಯು ಇಲ್ಲಿನ ಜನಜೀವನದ ಒಂದು ಭಾಗ. ಎಷ್ಟೋ ಬಾರಿ ಹಗಲು ರಾತ್ರಿ ಎನ್ನದೇ ಸುರಿಯುವ ಮಳೆಯು ಮಲೆನಾಡಿಗೇ ವಿಶಿಷ್ಟ. ಸದಾ ಕವಚಿಕೊಂಡಿರುವ ಮೋಡ, ಬೀಸುವಗಾಳಿ, ಆ ಗಾಳಿಯಲ್ಲೂ ಮಳೆಯ ಸಿಂಚನ, ಬಿಸಿಲನ್ನು ಕಾಣದೇ ಮಂಕಾಗಿರುವ ಗಿಡ ಮರಗಳು, ದಬ ದಬ ಸುರಿಯುವ ಮಳೆ, ಆಗಾಗ ಗುಟುರು ಹಾಕುವ ಗುಡುಗು, ಮಿಂಚುಗಳ ಚೆಲ್ಲಾಟ - ಇವೆಲ್ಲವೂ ಮಲೆನಾಡು / ಕರಾವಳಿಯಲ್ಲಿ ಸಾಮಾನ್ಯ.


ಮಳೆಗಾಲ ಹುಟ್ಟುಹಾಕುವ ಜೀವ ಸೃಷ್ಟಿಯ ಸರಪಳಿಯು ಈ ಪ್ರಕೃತಿಯ ಒಂದು ಅಧ್ಬುತ. ಮಳೆ ಬೀಳುವುದನ್ನೇ ಕಾಯುತ್ತಿದ್ದು, ನೆಲದ ಗರ್ಭದಲ್ಲಿ ಹುದುಗಿದ್ದ ಬೀಜಗಳೆಲ್ಲಾ ಮೊಳಕೆ ಒಡೆದು, ಎರಡು ಹಸಿರು ಎಲೆಗಳನ್ನು ಹೊರಚಾಚಿ, "ನಾನು ಬಂದೆ, ಈ ಜಗತ್ತಿಗೆ" ಎಂದು ಸಾರಿ ಹೇಳುವ ರೀತಿಯೇ ಒಂದು ಕಾವ್ಯಮಯಚೋದ್ಯ. ಮಳೆಯಿಂದ ತೋಯ್ದ ಬಯಲು, ಕಾಡು, ಕಲ್ಲು ಮಿಶ್ರಿತ ಗುಡ್ಡಗಾಡು - ಅಲ್ಲೆಲ್ಲಾ ಹಚ್ಚಡ ಹಾಸಿದಂತೆ ಹುಟ್ಟಿಕೊಳ್ಳುವ ಹುಲ್ಲು ಹಾಸು - ಇಡೀ ಜಗತ್ತಿನ ತುಂಬಾ ಹಸಿರು ತುಂಬಿದಂತಹ ಅನುಭವ. ಹುಲ್ಲಿನ ಎಳೆ ಚಿಗುರುಗಳಿಂದ ತುಂಬಿದ ಲೋಕವೆಲ್ಲಾ ಹಸಿರುಮಯ. ಮೊದಲ ಮಳೆಯನ್ನು ನೋಡಿದ ಕೂಡಲೇ ಅದೆಷ್ಟೋ ಕ್ರಿಮಿ ಕೀಟಗಳ ಸೃಷ್ಟಿ. ದೀಪದ ಬೆಳಕಿಗೋ, ಬೇರಾವುದಕ್ಕೋ ಆಕರ್ಷಿತವಾಗಿ, ರಾಶಿ ರಾಶಿ ಕೀಟಗಳು ಅಲ್ಲಲ್ಲಿ ಜಮೆಯಾಗುತ್ತವೆ. ಇದನ್ನು ಕಾಯುತ್ತಿರುವಂತೆ, ಶಿಶಿರ ನಿದ್ರೆಯನ್ನು ಮುಗಿಸಿ ಹೊರಬಂದ ಕಪ್ಪೆಗಳು, ಇತ್ತ ಕೀಟಗಳನ್ನು ಸ್ವಾಹಾ ಮಾಡಿ, ಅತ್ತ ತಮ್ಮ ಪೀಳಿಗೆಯನ್ನು ಮುಂದುವರಿಸುವ ಕ್ರಿಯೆಗಾಗಿ ನೀರಾಶ್ರಯವನ್ನು ಹುಡುಕುತ್ತಾ, ಕುಣಿದಾಡುತ್ತವೆ. ಮಳೆ ಬಂದ ನಂತರ ನೀರಿನಿಂದ ತುಂಬಿಕೊಳ್ಳುವ ಹೊಂಡ - ಕೊಳಗಳು ಅದೆಷ್ಟೋ ಕಪ್ಪೆಮರಿಗಳಿಗೆ ಅರಮನೆ! ನೀರಿನಲ್ಲಿ ಮುಳುಗೇಳುತ್ತಾ, ಜೂಟಾಟವಾಡುತ್ತಾ, ನಿರಂತರವಾಗಿ ವಟಗುಟ್ಟುತ್ತಾ ಒಂದು ಸಂಗೀತಕಛೇರಿಯನ್ನು ಆರಂಭಿಸುವ ಈ ಕಪ್ಪೆಗಳ ಸಸ್ವರ ದಿನಚರಿಯು, ಮಳೆರಾಯನ ಉತ್ಸವಕ್ಕೆ ನಾದಸ್ವರ ನುಡಿಸುತ್ತವೆ. ಈ ನಾದಕ್ಕೆ ಸಮಾಂತರವಾಗಿ ಭಿನ್ನ ಶೃತಿಯಲ್ಲಿ ಮಳೆ ಬೀಳುವ ಸದ್ದು, ನೀರು ಹರಿಯುವ ಸದ್ದು - ಹಳ್ಳ, ತೊರೆ, ತೋಡು, ಝರಿ, ಕಿರು ನೀರ್ಬೀಳು, ದೊಡ್ಡ ತೋಡು, ಸಣ್ಣ ನದಿ, ಜಲಪಾತ - ಇಲ್ಲೆಲ್ಲಾ ನೀರು ಓಡಾಡುವ ಸದ್ದೇ ಸದ್ದು. ಮಳೆಗಾಲದಲ್ಲಿ ಸದಾ ಸದ್ದು ಮಾಡುತ್ತಾ ಹರಿಯುವ ಕರಾವಳಿ/ಮಲೆನಾಡಿನ ರಭಸ ನೀರಿನ ನಡೆಯನ್ನು "ಜುಳು ಜುಳು" ಎಂದು ಕರೆಯುವುದು ಸರಿಯಾಗದು. ನೀರು ಹರಿಯುವ ವೇಗ, ಸದ್ದು ಎಲ್ಲವೂ ಅದ್ಯಾವುದೋ ತುರ್ತು ಕೆಲಸಕ್ಕೆ ಓಡುವ ಧಾವಂತದ್ದು! ಅಲ್ಲಿ ಸಂಗೀತಕ್ಕಿಂತಾ, ಏರು ದನಿಯ ತಾರಕ ಸ್ಥಾಯಿಯ ಹಾಡುಗಾರಿಕೆ ಇದೆ. ಆಗಸದಿಂದ ಬಿದ್ದ ಹನಿಗಳು ಜೊತೆಗೂಡಿ, ಹಳ್ಳವಾಗಿ, ಸದ್ದು ಮಾಡುತ್ತಾ ಓಡಿ, ಓಡಿ, ದೂರದ ಸಾಗರವನ್ನು ಸೇರುವ ಆ ತುರ್ತನ್ನು ಏನೆಂದು ಹೇಳಬಹುದು? ದಾರಿಯುದ್ದಕ್ಕೂ ಅಸಂಖ್ಯ ಜೀವರಾಶಿಯನ್ನು ಹುಟ್ಟುಹಾಕುವ ಅಪರೂಪದ ಕೆಲಸದ ಜವಾಬ್ದಾರಿಯೇ ಈ ತುರ್ತು ಓಟಕ್ಕೆ ಕಾರಣ ಎನ್ನಬಹುದು? ಅಥವಾ ಸಾಗರದಲ್ಲಿ ಲೀನವಾಗುವ ಮೂಲಕ, ಜಗತ್ತಿನ ಎಲ್ಲಾ ಜಲಸಂಚಯದ ಮೋಕ್ಷವೇ ಈ ಸಾಗರ ಎಂದು ಸೂಚಿಸಿ, ಅದೇನೋ ಅಮೂರ್ತ ಸಂದೇಶವನ್ನು ನಮಗೆ ನೀಡುತ್ತಿದೆಯೇ, ಈ ನೀರಿನ ಓಟ?  


 


ಮಳೆ ಬಿದ್ದಕೂಡಲೆ ಗುಡ್ಡೆ ಹಾಡಿಗಳಲ್ಲಿ ಆಗುವ ಬದಲಾವಣೆಯು ಅಭೂತಪೂರ್ವದ್ದು. ಅದೆಂದೋ ಬಿದ್ದ ಮಾವಿನ ಕಾಯಿ ಗೊರಟು ಚಿಗುರೊಡೆಯುತ್ತದೆ. ಧೂಪದ ಕಾಯಿಗಳು ಮೊಳಕೆಬಿಟ್ಟು, ಸೊಂಡಿಲ ಗಣಪನನ್ನು ಹೋಲುವಂತೆ ಮರದ ಅಡಿಯಲ್ಲಿ ತಲೆಯೆತ್ತಿ ನಿಲ್ಲುತ್ತವೆ. ಸಳ್ಳೆ, ನೇರಳು, ಚಾರ್ ಮತ್ತಿರರ ಮರದ ಅಡಿ, ನೂರಾರು ಗಿಡಗಳು ತಲೆಯೆತ್ತಿ, ನಾವೂ ಈ ಹಾಡಿಯಲ್ಲಿ ಹೊಸ ಸದಸ್ಯರಾಗಿ ಜೀವಿಸಲು ಬಯಸುತ್ತೇವೆಂದು ಸಾರಿ ಹೇಳುತ್ತವೆ. ಗೋವೆ ಮರದ ಅಡಿ, ಹಳುವಿನ ಮಧ್ಯೆ ಕಣ್ತಪ್ಪಿ ಉಳಿದುಕೊಂಡ ಗೋವೆಬೀಜಗಳು ಗಿಡಗಳಾಗಿ ಮೇಲೆದ್ದಾಗ, ಗೋಡಂಬಿಯ ಎರಡು ಪಕಳೆಗಳು ಹೊಸಗಿಡದ ಎಳೆ ಕಾಂಡಕ್ಕೆ ಅಂಟಿಕೊಂಡಿದ್ದು, ಅಲ್ಲೆ ಓಡಾಡುವ ಮಕ್ಕಳ ಬಾಯಿಗೆ ಗ್ರಾಸವಾಗುತ್ತವೆ. ಹಾಡಿ, ಗುಡ್ಡೆಗಳಲ್ಲೆಲ್ಲಾ ಅದೆಷ್ಟೋ ಅಣಬೆಗಳು ಗುಂಡುಗುಂಡಗೆ ಪ್ರತ್ಯಕ್ಷವಾಗುತ್ತವೆ; ಅದನ್ನು ಹುಡುಕುತ್ತಾ ಬಂದ ಹೆಂಗೆಳೆಯರ ಕೈಯಲ್ಲಿದ್ದ ಕುಕ್ಕೆಯಲ್ಲಿ ಸಂಗ್ರಹಗೊಂಡು, ಮನೆಯಲ್ಲಿ ಅಡುಗೆಗೆ ಪದಾರ್ಥವಾಗುವ ಪ್ರಕ್ರಿಯೆಗೆ ತಾವೇ ಪಕ್ಕಾಗುತ್ತವೆ. 


  ಇನ್ನೇನು, ಈ ವರ್ಷದ ಮಳೆಗಾಲ ನಮ್ಮ,ನಿಮ್ಮ ಊರಿಗೆ ಬಂದಿಳಿಯಲು ಅದಾಗಲೇ ಮುನ್ನುಡಿಯನ್ನು ಬರೆದಿದೆ. ಮಳೆ ಸುರಿದು ಇಳೆಯ ತುಂಬಾ ನೀರ ಬಿಂಬ ಇನ್ನೇನು ತುಂಬಿಕೊಳ್ಳಲಿದೆ. ಮಳೆಗಾಲದ ಆಗಮನದೊಂದಿಗೇ, ಊರಿಗೆ ಊರೇ ಚಟುವಟಿಕೆಯ ಗೂಡಾಗುವಾಗ, ನಮ್ಮ ಕರಾವಳಿಯಲ್ಲಿ ಪ್ರಚಲಿತವಿರುವ ಹಾಡಿನ ತುಣುಕು ನೆನಪಾಗಿ, ಸುರಿಯುವ ಮಳೆಗೆ ತಾಳವನ್ನೋ, ಸ್ವಾಗತವನ್ನೋ, ಸೋಬಾನೆಯನ್ನೋ, ಬಯಸುವಂತಿದೆ: -


" ಬಂತ್ ಕಾಣಿ, ಬಂತ್ ಕಾಣಿ, ಮಳೆಗಾಲ ಬಂತ್ ಕಾಣಿ,


ನೆಡುಕಿನ್ನು ಶುರುವಾಯ್ತು ಗದ್ದೆ ಕಾಣಿ...."


ಚಿತ್ರ: trekearth.com


 

Rating
Average: 3.5 (2 votes)

Comments