ಮತ್ಸಕ್ಕೆ ಮತ್ತುಣಿಸುವರೇ?
ಗಿರಿ ಶಿಖರಗಳ ಸಾಲು ಸಾಲು, ಕಾನನದಲ್ಲಿ ಹಳ್ಳ ಕೊಳ್ಳಗಳು, ಜುಳು ಜುಳು ಹರಿಯುವ ನೀರಿನ ತೊರೆಗಳು, ಪುಟ್ಟ ಪುಟ್ಟ ಜಲಪಾತಗಳು, ತಂಪಾದ ಸ್ವಚ್ಛಂದ ಗಾಳಿ, ಹಕ್ಕಿ ಗಳ ಚಿಲಿಪಿಲಿ ನಾದ, ಅಲ್ಲೊಂದು ಇಲ್ಲೊಂದು ಒಂಟಿ ಮನೆಗಳು, ಹಾವಿನಂತೆ ಅಂಕುಡೊಂಕಾಗಿರುವ ಪುಟ್ಟ ಪುಟ್ಟ ದಾರಿಗಳು ಹೀಗೆ ಹೇಳಿದಾಗಲೇ ಮಲೆನಾಡಿನ ಚಿತ್ರ ಕಣ್ಣ ಮುಂದೆ ಬಂದರೆ ಆಶ್ಚರ್ಯವಿಲ್ಲ.
ಹಾಗೆಯೇ ಮೀನುಗಾರಿಕೆ ಎಂದಾಕ್ಷಣ ಕಣ್ಣಿಗೆ ಕಾಣುವುದು, ದೋಣಿಗಳು, ಬಲೆಗಳು, ಹಡಗುಗಳೆ, ಇನ್ನೂ ಚಿಕ್ಕವೆಂದರೆ ಹವ್ಯಾಸಕ್ಕಾಗಿ ಕೊಳಗಳಲ್ಲಿ ಗಾಳದ ತುದಿಗೆ ಹುಳು ಹುಪ್ಪಡಿಗಳನ್ನು ಸಿಕ್ಕಿಸಿಕೊಂಡು ಮೀನು ಹಿಡಿಯುವ ಚಿತ್ರಗಳೇ ಕಣ್ಣ ಮುಂದೆ ಬರುತ್ತವೆ.
ಇದರ ಹೊರತಾಗಿ ಮಲೆನಾಡಿನಲ್ಲಿ, ಇಂದು ಅಪರೂಪವೆಂದೆ ಹೇಳಬಹುದಾದ ಮೀನು ಹಿಡಿಯುವ ಪದ್ಧತಿಗಳು ಅನೇಕ ಇವೆ. ಕೆರೆ, ಜಲಾಶಯ, ಹೊಳೆ, ಹಳ್ಳಗಳಲ್ಲಿ ಮಳೆಗಾಲದ ರಾತ್ರಿಗಳಲ್ಲಿ ದೀಪದ ಬೆಳಕಿನಲ್ಲಿ ಉದ್ದುದ್ದ ಕತ್ತಿಗಳನ್ನು ಹಿಡಿದು ಹತ್ತಮೀನು ಹೊಡೆದು ತರುವುದು ಒಂದು ಬಗೆ ಇದೆ. ಇತ್ತೀಚಿನ ದಿನಗಳಲ್ಲಿ ಬೇಸಿಗೆಯಲ್ಲಿ ಹಳ್ಳದ ಮಡುವುಗಳಿಗೆ ಹತ್ತಿರದಲ್ಲೇ ಹಾಯ್ದು ಹೋಗುವ ವಿದ್ಯುತ್ ತಂತಿಗಳಿಂದ ಕದ್ದು ನೀರಿಗೆ ವಿದ್ಯುತ್ ಹಾಯಿಸಿ ಎಲ್ಲ ಜಲಚರರಳನ್ನೇ ನಾಶಗೊಳಿಸಿ ಮೀನು, ಏಡಿ ಮೊದಲಾದವುಗಳನ್ನು ಸಂಗ್ರಹಿಸುವುದೂ ಇದೆ.
ಇವೆಲ್ಲವುಗಳಿಗೂ ಹಿಂದಿನಿಂದ ಸಾಂಪ್ರದಾಯಿಕವಾಗಿ ಬಂದ ಹಳ್ಳದ ಮಡುವುಗಳಲ್ಲಿ ಸಾಮೂಹಿಕ ಮೀನು ಹಿಡಿಯುವ ಪದ್ದತಿ ಯೊಂದೂ ಇದೆ. ಅದೇ "ಕಾರೆ ಕಾಯಿ" ಗಳ ರಸ ಉಣಿಸಿ, ಮೀನುಗಳಿಗೆ ಮತ್ತು ಬರಿಸಿ ಮೀನು ಹಿಡಿಯುವುದು.
ಮಲೆನಾಡಿನ ಕುರುಚಲು ಕಂಟಿ, ಮುಳ್ಳು ಗಿಡಗಳ ಸಾಲಿಗೆ ಸೇರುವ ಕಾರೆ ಗಿಡಗಳಿಂದ ಚೀಲದ ತುಂಬಾ ಕಾಯಿಗಳನ್ನು ಸಂಗ್ರಹಿಸಿ (ಈ ಕಾಲದಲ್ಲಿ ಹಸಿ ಕಾಯಿ ಸಿಗುವುದು, ಕಾಯಿಗಳನ್ನು ಒಣಗಿಸಿಟ್ಟು ನಂತರ ನೀರಿನಲ್ಲಿ ನೆನೆಸಿ ಹಸಿ ಮಾಡಿ ಬಳಸುವುದೂ ಇದೆ.) ತಂದು ಅವುಗಳನ್ನು ಜಜ್ಜಿ ಪುಡಿಮಾಡಿ ಅವುಗಳನ್ನು ನೀರಿನಲ್ಲಿ ಕದಡಿ ನೊರೆ ಬರಿಸುವುದು. ಇದು ಒಂದು ರೀತಿಯಲ್ಲಿ ಸೋಪಿನಂತೆ ನೊರೆ ಬರುತ್ತದೆ. ಮತ್ತು ಇದನ್ನು ಹಿಂದೆ ಬಟ್ಟೆ ತೊಳೆಯಲು ಸೋಪಿನ ಬದಲಾಗಿ ಬಳಸುತ್ತಿದ್ದರು ಕೂಡ. ಈ ನೋರೆ ಹರಿದು ಹೋಗದಂತೆ ಮೇಲಿನಿಂದ ಹರಿದು ಬರುವ ನೀರಿನ ಮಾರ್ಗವನ್ನು ಬದಲಾಯಿಸಿ ಕೊಂಡು ಮಡುವಿನ ನೀರು ಮತ್ತು ಮೀನುಗಳು ಹೊರಹೋಗದಂತೆ ಮಡುವುಗಳಿಗೆ ಕಟ್ಟೆ ಕಟ್ಟಿಬಿಡುತ್ತಾರೆ. ಸ್ವಲ್ಪ ಸಮಯದಲ್ಲಿಯೇ ಮೀನುಗಳೆಲ್ಲ ಮೇಲೆ ಬಂದು ಹಾರಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಆಗಲೇ ಆ ಮೀನುಗಳನ್ನು ಕೈಯಲ್ಲಿ ಹಿಡಿದು ಬುಟ್ಟಿಗೆ ತುಂಬಿಸಿ ಬಿಡುತ್ತಾರೆ. ಇಲ್ಲವಾದಲ್ಲಿ ಸ್ವಲ್ಪ ಹೊತ್ತಿನ ನಂತರ ಈ ಮೀನುಗಳು ಸತ್ತು ತೇಲಾಡಲು ಪ್ರಾರಂಭಿಸುತ್ತವೆ. ಆಗ ಅವುಗಳನ್ನು ಸಂಗ್ರಹಿಸಿಕೊಂಡು ನೀರಿನ ಹರಿವನ್ನು ಮೊದಲಿನಂತೇ ಮಾಡುವುದು ರೂಢಿ.
ಹೀಗೆ ಸತ್ತ ಮೀನುಗಳನ್ನು ಊಟದಲ್ಲಿ ಬಳಸಿದಲ್ಲಿ ಆರೋಗ್ಯದಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂಬುದು ಅವರ ಹೇಳಿಕೆ. ಇದು ಕೇವಲ ಮತ್ತು ಉಂಟು ಮಾಡುವುದರಿಂದ ಮೀನುಗಳು ಸಾಯುವವೆಂದು ಅವರ ಅಂಬೋಣ. ಇದರ ಬದಲಾಗಿ ಮಲೆನಾಡಿನಲ್ಲಿ ದೊರೆಯುವ ಮುಕ್ಕಡಕನ ನಾರನ್ನು (ಒಂದು ರೀತಿಯ ಕುರುಚಲು ಗಿಡ, ಇದರ ರಸ ಮೈಗೆ ತಾಗಿದರೆ ತುರಿಕೆ ಪ್ರಾರಂಭವಾಗುತ್ತದೆ.) ಬಳಸುವುದೂ ಇದೆ.
ಈ ರೀತಿಯ ಮೀನು ಹಿಡಿಯುವುದಕ್ಕೆ ತಯಾರಿ ಮತ್ತು ಜನ ಬಲ ಬೇಕಾಗಿರುವುದರಿಂದ ಇಂದು ಇದು ತೀರಾ ಅಪರೂಪದ್ದಾಗಿದೆ. ಹೀಗೆ ಅಪರೂಪಕ್ಕೆ ನೋಡಲು ದೊರೆತ ಅವಕಾಶವನ್ನೇ ಹೀಗೆ ದಾಖಲಿಸಿದ್ದೇನೆ.
Comments
ಉ: ಮತ್ಸಕ್ಕೆ ಮತ್ತುಣಿಸುವರೇ?