ಮನದಾಳದ ಕೂಗಿಗೆ ಧ್ವನಿಯಾಗು
ಸುಮ್ಮನೆ ಮಕಾಡೆ ಮಲಗಿದ್ದ ಮನಸ್ಸಿನ ಕೊಳಕ್ಕೆ ಯಾರೋ ಕಲ್ಲೆಸೆದ ಹಾಗಾಗಿದೆ. ತಿಳಿಯಾಗಿದ್ದ ಮನದಲ್ಲಿ ಅಲೆಯೊಂದು ಮೂಡಿ ಗೊಂದಲವನ್ನೇ ಎಬ್ಬಿಸಿಬಿಟ್ಟಿದೆ. ಯಾಕೋ ಜೂನ್ ತಿಂಗಳು ಬಂತೆಂದರೆ ಎದೆಯಲ್ಲಿ ಸಣ್ಣದೊಂದು ನಡುಕ, ಹೇಳಲಾಗದ ಕಸಿವಿಸಿ, ಸುಮ್ಮನೇ ಹರಿದು ಹೋಗುವ ಕಣ್ಣೀರು. ನೀನು ಹೇಟ್ ಮಾಡುವ ತಿಂಗಳು ಯಾವುದೆಂದು ಯಾರಾದರೂ ಕೇಳಿದರೆ ಅದು ಜೂನ್ ಅಂತಲೇ ನಾನು ಹೇಳೋದು. ಯಾಕಂದ್ರೆ ಅವತ್ತೆ ನಿನ್ನ ಕಳೆದುಕೊಂಡಿದ್ದು. ಅಪ್ಪ ಎಂದು ಕರೆಯುವ ನನ್ನಿಂದ ಕಸಿದುಕೊಂಡು ಹೊರಟೇಬಿಟ್ಟೆಯಲ್ಲ?ಕೂಸು, ನಿಂಗೆ ಧಾರೆ ಎರೆದು ಮದುವೆ ಮಾಡಿಕೊಟ್ಟರೆ ನಾನು ನಿಶ್ಚಿತ' ಎನ್ನುತ್ತಿದ್ದೆ. 'ಏನೂ ಬೇಕಾಗಿಲ್ಲ.. ನೀನು ಚಿಂತೆ ಮಾಡ್ತಾನೆ ಇರು. ನಾನಿಲ್ಲಿಂದ ಹೋಗಲ್ಲ' ನನ್ನ ಮಂಗಾಟಕ್ಕೆ ಗದರಿಸಿ ಅದಕ್ಕೆ ಪ್ರಾಯಶ್ಚಿತ್ತವಾಗಿ ಸಂಜೆ ತಿಂಡಿ ತಂದು ತಿನ್ನಿಸುತ್ತಿದ್ದ ನೀನು ಕಡೆಗೂ ಧಾರೆ ಎರೆಯಲೇ ಇಲ್ಲ. ಹೋಗಲಿ ನಿಶ್ಚಿಂತನಾಗಿದ್ದೀಯಾ? ಗೊತ್ತಾಗುತ್ತಿಲ್ಲ. ನಿನ್ನ ಲೋಕಕ್ಕೆ ಈಮೇಲ್, ಇಂಟರ್ನೆಟ್ ಇಲ್ಲವಲ್ಲ? ನೀ ಹೋದ ಮೇಲೆ ನನ್ನೆಲ್ಲ ಕನಸುಗಳು ಬದಲಾಗ ತೊಡಗಿದವು. ತಕ್ಷಣ ದೊರಕಿದ್ದೇನು ಗೊತ್ತಾ? ಅಪ್ಪನಿಲ್ಲದ ಮಕ್ಕಳೆಂಬ ಹಣೆಪಟ್ಟಿ. ನೀನೇನೋ ಹೋಗಿಬಿಟ್ಟೆ. ಆದರೆ ನಮ್ಮ ಬಾಳದೋಣಿ ಅಲ್ಲೋಲಕಲ್ಲೋಲ. ಅಮ್ಮನ ಬೋಳು ಹಣೆ, ಝಲ್ಗುಟ್ಟದ ಹಿತ್ತಾಳೆ ಬಳೆ, ಅವಳ ಮೌನ ರೋದನ, ನೀನಿಲ್ಲದ ಕುರುಹನ್ನು ಇಷ್ಟೊಂದಾ ಬಿಟ್ಟು ಹೋಗೋದು?. ಎಲ್ಲರ ಹಾಗೇ ಆಡುವ ಆಸಾಮಿಯಾಗಿರಲಿಲ್ಲವಲ್ಲ? ನಿನ್ನ ಮೌನ ಅಥೈಸುವ ವೇಳೆಗೆ ನಿಷ್ಠುರ ನಡೆ. ಯಾಕೋ ಅಪ್ಪ ನೀನ್ ಹಾಗೇ? ಮುಗ್ಧ ಮನಸ್ಸಿತ್ತು, ಕಷ್ಟಕ್ಕೆ ಮರುಗುವ ಹೃದಯವಿತ್ತು., ಸಾತ್ವಿಕ ಸಿಟ್ಟಂತೂ ಜಾಸ್ತಿಯೇ ಇತ್ತು. ಆಗೆಲ್ಲ ನಿನ್ನ ಕಂಡರೆ ಭಯಮಿಶ್ರಿತ ಪ್ರೀತಿ ನನ್ನೊಳಗೆ. ದಾರಿಯಲ್ಲಿ ನಿನ್ನ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದರೆ ಹೆಮ್ಮೆ ಉಕ್ಕುಕ್ಕಿ ಬರೋದು. ನೀನೊಬ್ಬ ಪರಿಪೂರ್ಣ ಅಪ್ಪನೆಂಬ ಅಭಿಮಾನ. ನಿಂಗೊತ್ತಾ? ಹೆಣ್ಣೋಂದು ಹುಟ್ಟಿದಾಗ ನೋಡುವ ಮೊದಲ ಪುರುಷ ತನ್ನ ಅಪ್ಪನೇ. ಗಂಡನ ಬಗ್ಗೆ ಕನಸು ಕಾಣೋ ಪ್ರತಿಯೊಬ್ಬ ಹೆಣ್ಣುಮಗಳೂ ತನ್ನ ಅಪ್ಪನಲ್ಲಿರುವ ಒಂದಲ್ಲಾ ಒಂದು ಗುಣ ಗಂಡನಲ್ಲಿರಬೇಕೆಂದು ಬಯಸುತ್ತಾಳೆ. ನಾನೂ ಹಾಗೇ ಕನಸು ಕಂಡಿದ್ದೆ. ಆದ್ರೆ ಅಂಥ ಗಂಡನನ್ನೇ ಹುಡುಕಿಕೊಡಲು ಮರೆತುಬಿಟ್ಟೆಯಲ್ಲ?. ನಿನ್ನ ನೆನಪು ಮಾತ್ರ ಹಚ್ಚ ಹಸಿರಾಗಿಯೇ ಇದೆ. ರಸ್ತೆಯಲ್ಲಿ ಯಾರಾದರೂ ಚುಡಾಯಿಸಿದಾಗ ಮನಸ್ಸು ನಿನ್ನ ನೆನೆಯುತ್ತೆ. ಯಾರದಾದರೂ ಮದುವೆಗೆ ಹೋದಾಗ ನನ್ನ ಮದುವೆ ದಿನ ದರ್ಪ ತೋರಿಸಲು ಅಪ್ಪನಿಲ್ಲವಲ್ಲ ಎನ್ನುವ ನೋವು ಮನಸ್ಸನ್ನು ಹಿಂಡಿ ಹಿಪ್ಪೆ ಮಾಡುತ್ತೆ. ರಾತ್ರಿ ಆಕಾಶಕ್ಕೆ ಮುಖಮಾಡಿ ಹೊಳೆಯುವ ನಕ್ಷತ್ರ ನೋಡಿದಾಗ ಮಾತೊಂದು ನೆನಪಾಯ್ತು. ಸತ್ತವರು ನಕ್ಷತ್ರವಾಗುತ್ತಾರೆ ಅಂತ. ನೀನೂ ಆಗಿದ್ದೀಯಾ? ಹಾಗಿದ್ರೆ ಮನದಾಳದ ಕೂಗಿಗೆ ಒಮ್ಮೆ ಮಿನುಗಿ ಧ್ವನಿಯಾಗುವೆಯಾ...?
'
ನಿನ್ನ ಪ್ರೀತಿಯೇ ಒಂದು ರೀತಿ ವಿಚಿತ್ರ
ಆರು ವರ್ಷ ಕಳೆದಿದೆ
Comments
ಉ: ಮನದಾಳದ ಕೂಗಿಗೆ ಧ್ವನಿಯಾಗು
In reply to ಉ: ಮನದಾಳದ ಕೂಗಿಗೆ ಧ್ವನಿಯಾಗು by kavinagaraj
ಉ: ಮನದಾಳದ ಕೂಗಿಗೆ ಧ್ವನಿಯಾಗು