ಮನದಾಸೆ ಹಕ್ಕಿಯಾಗಿ

ಮನದಾಸೆ ಹಕ್ಕಿಯಾಗಿ

ಇಂದೇಕೋ ಮನವು ಉಲ್ಲಾಸದಿಂದ ಹಾಡುತ್ತಿದೆ.  ಒಂಟಿಹಕ್ಕಿಯಾಗಿದ್ದ ನನ್ನ ಕೂಗು ನಿನಗೆ ಕೇಳಿಸಿತೇನೋ ಎಂಬಂತೆ ನೀ ನನಗೆ ಸಿಕ್ಕೆ. ಸಿಕ್ಕ ಮರುಗಳಿಗೆಯಿಂದ ನನ್ನ ಜೀವನದ ದೃಷ್ಟಿಯೇ ಬದಲಾಗಿ ಹೋಯಿತು.  ಈ ಲೋಕವೇ ಸುಂದರವಾಗಿ ಕಾಣುತ್ತಿದೆ. ಮೊನ್ನೆ ನಿನ್ನ ಹೆಜ್ಜೆಯೊಂದಿಗೆ ನನ್ನ ಹೆಜ್ಜೆ ಜೊತೆಗೂಡಿ ಸಾಗುತ್ತಿದ್ದಾಗ ಆಹಾ! ಎಂತಹಾ ಮಧುರಾನುಭೂತಿ.  ಇದಕ್ಕೆ ಕೊನೆಯೇ ಇರದಿರಲಿ ಎಂದು ಮನ ಬಯಸಿದ್ದು ಸುಳ್ಳಲ್ಲ. ಇಂದು ಬೆಳಿಗ್ಗೆಯಿಂದ ಸಣ್ಣಗೆ ಸೋನೆ ಮಳೆ.  ಬೆಚ್ಚಗೆ ಹೊದ್ದು ಕನಸುಗಳಲ್ಲಿ ತೇಲಿಹೋಗಿದ್ದ ನನಗೆ ಅಮ್ಮನ ಕೂಗು ಎಬ್ಬಿಸಿದರೂ, ನಿದ್ದೆ ಮಾಡುತ್ತಲೇ ಇದ್ದಂತೆ ನಟಿಸಿದೆ. ಏಳಲೂ ಮನಸ್ಸೇ ಬರಲಿಲ್ಲ.  ಅಮ್ಮನ ಕಾಟಕ್ಕೆ ಬೈದುಕೊಂಡು ಎದ್ದರೂ, ನಿನ್ನ ನೆನಪುಗಳಲ್ಲಿಯೇ ಮುಳುಗಿ ಹೋಗಿದ್ದ ಮನಕ್ಕೆ ಅಮ್ಮನೊಂದಿಗೆ ಕಾದಾಡುವುದು ಬೇಕಿರಲಿಲ್ಲ.

ಇವಳಿಗೇನಾಗಿದೆ? ಎಂಬ ಅಮ್ಮನ ಪ್ರಶ್ನಾರ್ಥಕ ಮುಖ ಕಂಡರೂ ಕಾಣದಂತೆ ಈ ಚುಮುಚುಮು ಚಳಿಯಲ್ಲಿಯೂ ಇಲ್ಲಿದ್ದರೆ ನಿನ್ನ ನೆನಪುಗಳಿಗೆ ಯಾರಾದರೂ ಅಡ್ಡಿ ಮಾಡಿಯಾರೇನೋ ಎಂದು ಪಾರ್ಕಿಗೆ ಬಂದೆ. ತಲೆಯ ಮೇಲೆ ತುಂತುರು ಹನಿ, ಮೈ ಸೋಕುತ್ತಿರುವ ತಂಗಾಳಿ, ಜನರೇ ಇಲ್ಲದ ಪಾರ್ಕ್, ನೀ ನನ್ನೊಂದಿಗೆ ಈ ಕ್ಷಣವೇ ಇರಬೇಕಿತ್ತು ಎಂಬ ಬಯಕೆಯನ್ನು ಉಂಟು ಮಾಡಿತು.  ನನ್ನ ಹೃದಯದ ಕೂಗು ನಿನಗೆ ಕೇಳಿಸಿತೇನೋ ಎಂಬಂತೆ ಕೈಯಲ್ಲಿದ್ದ ಮೊಬೈಲ್ ಉಲಿದಾಗ ಸ್ವರ್ಗಕ್ಕೆ ಮೂರೇ ಗೇಣು! ನಿನ್ನೊಂದಿಗೆ ಮಾತನಾಡುತ್ತಾ ಆ ಮಳೆಯಲ್ಲಿಯೂ ಎಷ್ಟು ಹೊತ್ತು ಓಡಾಡಿದೇನೋ ಕಾಲದ ಪರಿವೆಯೇ ಇರಲಿಲ್ಲ.  ಕೈಯಲ್ಲಿ ಛತ್ರಿ ಹಿಡಿದು, ಬೈಯುತ್ತಾ ಅಮ್ಮ ಬಂದಾಗಲೇ ಭೂಮಿಗೆ ಬಂದಿದ್ದು.  ಅಮ್ಮನ ಕಾಳಜಿಯೂ ನನಗೀಗ ಕೊರೆತದಂತೆ ಕಾಣುತ್ತದೆ.  

Rating
No votes yet

Comments