ಮನೆಯ ಹಿಂದಿನ ಚಾಳ - ಲಕ್ಷ್ಮೀಕಾಂತ ಇಟ್ನಾಳ

ಮನೆಯ ಹಿಂದಿನ ಚಾಳ - ಲಕ್ಷ್ಮೀಕಾಂತ ಇಟ್ನಾಳ

ಮನೆಯ ಹಿಂದಿನ ಚಾಳ
                          -  ಲಕ್ಷ್ಮಿಕಾಂತ ಇಟ್ನಾಳ

ಮನೆಯ ಹಿಂದಿನ ಚಾಳಿನ ಮೊದಲ ಮನೆಯಲ್ಲಿ ಪ್ರೇಮಿಯೊಬ್ಬನಿದ್ದ,
ತನ್ನೆಡೆಗೆ ಹೋದ ಮಕ್ಕಳಿಗೆ ಕವನ ಹಂಚುತ್ತಿದ್ದ,
ತೊದಲು ತೊದಲು ಮಾತಿನಲ್ಲಿ, ಅವುಗಳನ್ನು ವಾಚಿಸುತ್ತಿದ್ದ,
ಭವ್ಯ ಭವಿಷ್ಯದ ಕನಸುಗಳ ಲಗೋರಿ, ಪ್ರೀತಿ ಪ್ರೇಮದ ಬುಗುರಿಯಾಗಿದ್ದ!
ತನ್ನಷ್ಟಕ್ಕೆ ತಾ ನಗುತ್ತಿದ್ದ, ನಿದ್ದೆಯಲ್ಲೂ ಬಡಬಡಿಸುತಿದ್ದ!
ಕವನಗಳಿಗೆ ಮೆಚ್ಚಿ ಒಬ್ಬಳೂ, ಅವನ ಕೈಹಿಡಿಯಲಿಲ್ಲವಂತೆ!
ಈಗ ಈ ಲೋಕದಲ್ಲಿಯೇ ಅವನಿಲ್ಲ!

ಚಾಳಿನ ಎರಡನೆಯ ಮನೆಯಲ್ಲಿ ಒಬ್ಬ ತಾಯಿ ತನ್ನ ಮಕ್ಕಳಿಗೆ,
ಚಿಮಣಿಯ ಬೆಳಕಿನಲ್ಲಿ ಓದಿಸುತ್ತಿದ್ದಳು,
ಸಂಜೆಯಾಗುತ್ತಲೇ ಶಾಲೆಯಿಂದ ಬರುವ ಮಕ್ಕಳಿಗಾಗಿ
ತುದಿಗಾಲಲ್ಲಿ ನಿಲ್ಲುತಿದ್ದಳು,
ಅವರು ಅಂಗಳದಲ್ಲಿ ಆಟವಾಡುವಾಗ,
ಇತ್ತ ಅವಳ ಕುಕ್ಕರು ಕೂಗುತ್ತಿತ್ತು,
ನಿದ್ದೆಯ ನಾಡಿ ಮಿಡಿಯುವವರೆಗೆ,
ಮಕ್ಕಳೊಂದಿಗೆ ಮಗುವಿನಂತೆ ಪಾಠಗಳನ್ನು ಹೇಳುತ್ತಿದ್ದಳು,
ತನ್ನ ವಯಸ್ಸನ್ನು ಅರೆದು ಅರೆದು ಧಾರೆಯೆರೆಯುತ್ತಿದ್ದಳು,
ಅರ್ಧ ಹೊಟ್ಟೆ ತಾನುಂಡರೂ, ಮಕ್ಕಳಿಗೆ ಪೂರ!
ಆ ಮನೆಯಲ್ಲೀಗ  ಅವಳಿಲ್ಲ!
ತನ್ನ ಸೊಸೆಯ ಬಾಣಂತನಕ್ಕಾಗಿ ಅಮೇರಿಕೆಯಲ್ಲಿದ್ದಾಳೆ!
ವರ್ಷ ವರ್ಷ ತಿರುಗುತ್ತಾಳಂತೆ, ಮಕ್ಕಳಿರುವ ದೇಶಗಳಲ್ಲಿ, ವಿಮಾನದಲ್ಲಿ!ಚಾಳಿನ ಕೊನೆಯ ಮನೆಯಲ್ಲಿದ್ದ ಹಿರಿಯ ಪ್ರಸಾಧನ ಕಲಾವಿದ,
ಮೊನ್ನೆ ಮನೆ ಬದಲಿಸಿದ,
ಬಾಡಿಗೆ ಕೊಡುವುದಾಗಲಿಲ್ಲವಂತೆ,
ಹಳೆಯ ಸೈಕಲ್ಲಿನೊಂದಿಗೆ,
ಭಾಂಡೆಗಳ ಚೀಲವೊಂದೇ ಸ್ವಂತ ಆಸ್ತಿ,
ಬಣ್ಣವಿಲ್ಲದ ಮುಖದೊಂದಿಗೆ ಪೆಚ್ಚು ಪೆಚ್ಚಾಗಿ ನಗುತ್ತ,
ಸಿಗರೇಟಿನ ಹೊಗೆಯಂತೆ ತೂರಾಡುತ್ತ  ಹೊರಟೇಬಿಟ್ಟ,
ಬರಿಗಾಲಲ್ಲಿ!
ಹಿಂದಿನ ಮಿನಿಲಾರಿಯಲ್ಲಿ ಪ್ರಶಸ್ತಿ ಫಲಕಗಳು,
ಹರಿದ ಗಂಟುಗಳಿಂದ ಹೊರಚಾಚಿದ್ದವು!
ಆಗಾಗ ಅವನ ಹೆಸರು ದಿನಪತ್ರಿಕೆಗಳಲ್ಲಿರುತ್ತೆ,
ಹುಡುಕಿದರೆ ಸಿಗುತ್ತದೆ, ಒಳಪುಟಗಳಲ್ಲಿ!

ಚಾಳಿನ ಮೊದಲ ಮನೆಯ ಮೇಲಂತಸ್ತಿನಲ್ಲಿ,
ಒಬ್ಬ ಭಾರೀ ಮೀಸೆಯ ಜಮೀನ್ದಾರನಿದ್ದಾನೆ,
ಅಲ್ಲಿ ಹಜಾರದಲ್ಲಿ ಖಡ್ಗವೊಂದು ಗೋಡೆಗೆ ನೇತು ಹಾಕಿದೆ.
ಮೀಸೆ ಕತ್ತರಿಸಲೂ ಬರದು ಈಗದು, ಮೊಂಡಾಗಿದೆ!
ಜಮೀನು ಜಾಯದಾದ ಎಲ್ಲಾ ಹೋಗಿ, ಈಗ ಇಲ್ಲಿದ್ದಾನೆ,
ಹಗಲೆಲ್ಲ ಕೋರ್ಟನಲ್ಲೇ ಹೆಚ್ಚು ಹೆಚ್ಚು ಇರುತ್ತಾನೆ,
ಕಂಡವರ ಹತ್ತಿರ ಸಾಲು ಕೇಳುತ್ತಿರುತ್ತಾನೆ, ರಾತ್ರಿ ‘ಬಾರಿ’ ಗೆ!,
ಭೂತಕಾಲದ ಪ್ರತಿನಿಧಿಯಂತಿದ್ದಾನೆ, ಸೊರಗಿ ‘ದಾರ’ವಾಗಿದ್ದಾನೆ!ಚಾಳಿನ ನಡುಮನೆಯಲ್ಲಿ ಶಿಕ್ಷಕನ ಕುಟುಂಬ ಬಹಳ ವರ್ಷದಿಂದ ಇತ್ತು,
ಕಣ್ಣುಗಳು ಕೆಂಪಗಿರುವುದನ್ನು ನಾನು ನೋಡಿದ್ದೇ ಶಿಕ್ಷಕನಲ್ಲಿ,
ಆತ ಕಲಿಯುವುದು ಬಹಳವಿತ್ತು!
ಮಕ್ಕಳೆಲ್ಲ ಬಲು ಪೋಲಿ, ಅಪ್ಪನಿಗಿಂತ ಹೆಚ್ಚು ಕುಡಿಯುವವರು,
ಅವನ ಮಗನೊಬ್ಬ ನಿತ್ಯ ಜಗಳಗಂಟ,
ಶಾಲೆಗೆ ಬರುತ್ತಿದ್ದನಂತೆ, ಅಪ್ಪನಿಂದ ದುಡ್ಡು ಕೀಳಲು!
ಯಾರ್ಯಾರನ್ನೋ ಎದುರು ಕಟ್ಟಿಕೊಂಡು, ದೊಡ್ಡ ಗ್ಯಾಂಗ ಲೀಡರನಾಗಿದ್ದಾನೆ,
ಅಪ್ಪನ ಕಣ್ಣುಗಳು ಈಗ ಅವನದಾಗಿವೆ,
ನೂರಾರು ಜನರ ಪರಾಕಿನಲ್ಲಿ ವೋಟು ಕೇಳುತ್ತ ಬಂದ,
ಕ್ಯಾಂಡಿಡೇಟ್ ಯಾರು ಎಂದೆ, ‘ನಾನೇ’ ಎಂದ!
ಜನವೆಲ್ಲ ಹೇಳುತ್ತಲಿತ್ತು, ಅವ ಬಂದೇ ಬರುತ್ತಾನಂತೆ!
ಗೋಡೆಯ ಮೇಲಿನ ಗಾಂಧಿ ಫೋಟೋದತ್ತ ದೃಷ್ಟಿಸಿದೆ,
ಗಾಂಧಿ ನಗುತ್ತಿದ್ದ, ಪೆಚ್ಚು ಪೆಚ್ಚಾಗಿ!

Rating
No votes yet

Comments

Submitted by nageshamysore Tue, 04/30/2013 - 04:04

ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರೆ,
ವಿಪರ್ಯಾಸಗಳ ವ್ಯಾಖ್ಯಾನ ಮತ್ತು ವಾಸ್ತವಗಳ ವ್ಯಂಗ್ಯ ಮತ್ತು ಅಸಹಾಯಕತೆ ಚೆನ್ನಾಗಿ ಅನುರಣಿತವಾಗಿದೆ. ಲಹರಿ ಇಷ್ಟವಾಯ್ತು, ಧನ್ಯವಾದಗಳು.
- ನಾಗೇಶ ಮೈಸೂರು, ಸಿಂಗಾಪುರದಿಂದ

Submitted by lpitnal@gmail.com Tue, 04/30/2013 - 08:35

ಆತ್ಮೀಯ ನಾಗೇಶ ಮೈಸೂರು ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕವನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹಿಸಿದ್ದಕ್ಕೆ ದನ್ಯವಾದಗಳು.

Submitted by H A Patil Tue, 04/30/2013 - 21:12

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ಮನೆಯ ಹಿಂದಿನ ಚಾಳ್ ' ಓದುತ್ತ ಹೋದಂತೆ ಚಾಳ್ ನಲ್ಲಿ ವಾಸವಾಗಿರುವ ಭಿನ್ನ ಗುಣ ನಡತೆ ಸ್ವಭಾವಗಳ ಪ್ರೇಮಿ, ತಾಯಿ, ಪ್ರಸಾಧನ ಕಲಾವಿದ, ಜಮೀನ್ದಾರ ಮತ್ತು ಶಿಕ್ಷಕರು ಮನಸ್ಸನ್ನಾವರಿಸುತ್ತ ನಮ್ಮನ್ನು ಕಾಡುತ್ತಾರೆ ಚಿಂತನೆಗೆ ಹಚ್ಚುತ್ತಾರೆ, ಇದೊಂದು ಸಾರ್ಥಕ ಕವನ ಧನ್ಯವಾದಗಳು.

Submitted by lpitnal@gmail.com Tue, 04/30/2013 - 22:57

In reply to by H A Patil

ಹಿರಿಯರಾದ ಹೆಚ್ ಎ ಪಾಟೀಲರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಮೆಚ್ಚುಗೆಗೆ, ಹಾಗೂ ತುಸು ಕಾಡುವ ಸಾಲುಗಳನ್ನು ಗುರುತಿಸಿದ್ದಕ್ಕಾಗಿ, ಪ್ರೊತ್ಸಾಹಕರ ನುಡಿಗಳಿಗೆ ದನ್ಯಮನದೊಂದಿಗೆ ನಮನ.