ಮನೆ ಮನೆ ಮಾತಾಗುತ್ತಿರುವ ಸಂಪದ
ಸಂಪದದಲ್ಲೀಗ ೩೧೬ ಸದಸ್ಯರಿದ್ದಾರೆ ಎಂದರೆ ಆಶ್ಚರ್ಯವೇನಲ್ಲ. ಅದರಲ್ಲಿ ಸರಿ ಸುಮಾರು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಯಾವುದೇ ತಾಣದಲ್ಲಿ ಸೇರುವ ಸದಸ್ಯರು ಆಗೊಮ್ಮೆ ಈಗೊಮ್ಮೆ ಮಾತ್ರ ಇಣುಕಿ ನೋಡಿ ಕಣ್ಮರೆಯಾಗುವರು. ಆದರಿಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ.
ಈ ಕೂಸಿಗಿನ್ನೂ ಒಂದು ತಿಂಗಳು ಕಳೆದಿಲ್ಲ. ಇದರ ಕರ್ತೃವಿಗೆ ತಾಣವನ್ನು ಸಂಭಾಳಿಸುವುದೇ ಸಮಸ್ಯೆ ಆಗಿದೆ. ಉಂಹೂಂ! ಹಣದ ಸಮಸ್ಯೆಯಲ್ಲ. ಬ್ಯಾಂಡ್ವಿಡ್ತಿನ ಸಮಸ್ಯೆ. ಇಷ್ಟು ಸದಸ್ಯರು ಬಂದು ಸೇರುವರೆಂದು ಕನಸು ಮನಸ್ಸಿನಲ್ಲೂ ಅವರು ಎಣಿಸಿರಲಿಲ್ಲ. ಮಧ್ಯೆ ಎರಡು ದಿನಗಳ ಕಾಲ ಸಂಪದ ತನ್ನಂತಾನೇ ರಜೆ ಘೋಷಿಸಿಕೊಂಡಿತು. ಆದರೂ ಬೇಜಾರುಪಟ್ಟುಕೊಳ್ಳದೇ ಸದಸ್ಯರು ಸಕ್ರಿಯವಾಗಿ ಅವರವರ ರುಚಿಗೆ ತಕ್ಕಂತೆ ಮಾತುಕತೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಳೆದ ತಿಂಗಳು ಮೂರು ಬಾರಿ ಬ್ಯಾಂಡ್ವಿಡ್ತನ್ನು ಹೆಚ್ಚಿಸಬೇಕಾಯ್ತು. ಕಾರಣವೇನು ಅಂತ ಕೇಳ್ತೀರಾ? ಸಂಪದದ ಕಂಪು ಹಾಗಿದೆ ಸ್ವಾಮಿ. ಸಂಪದ ಈಗ ಹುಟ್ಟಿದ ಕೂಸಾದ್ರೂ ಅದರ ಹಿರಿಯಣ್ಣ ಕನ್ನಡ ವಿಕಿಪೀಡಿಯ ಆಗಲೇ ಬಹಳ ದೊಡ್ಡ ಹೆಸರು ಮಾಡಿದೆ. ಇದರ ಬಗ್ಗೆ ಉದಯವಾಣಿ, ಅದುವೇಕನ್ನಡ (ದಟ್ಸ್ಕನ್ನಡ.ಕಾಂ) ಮತ್ತಿತರೇ ಜಾಲಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಇನ್ನು ಸಂಪದದ ಬಗ್ಗೆಯೇ ಒಂದು ವಿಶೇಷ ಲೇಖನವನ್ನು ಚಿಕ್ಕದಾಗಿ ಚೊಕ್ಕದಾಗಿ ಡಾ| ಪವನಜ ಅವರು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ಗಂಧದ ಮರವನ್ನು ಸ್ವಲ್ಪ ಚಿವುಟಿದರೂ ಸಾಕು, ಇಡೀ ಲೋಕಕ್ಕೇ ಇದರ ಸುಗಂಧ ಪರಿಮಳ ಹಬ್ಬಿ ಆ ಪರಿಮಳವನ್ನು ಆಘ್ರಾಣಿಸಲು ಸಹೃದಯರೆಲ್ಲರೂ ಇದರ ಕಡೆಗೇ ಓಡಿಬರುವರು.
ಆದರೆ ಲೋಕೋಕ್ತಿಯಂತೆ ಸರಸ್ವತಿ ಮತ್ತು ಲಕ್ಷಿ ಇಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೇ ಬಾಳೋದಿಲ್ಲವಂತೆ. ಹಾಗೆ ಈ ಸಾರಸ್ವತ ಲೋಕದಲ್ಲಿ ಲಕ್ಷ್ಮಿಯಿನ್ನೂ ಚಂಚಲೆ ಆಗಿದ್ದಾಳೆ. ಕೆಲವೇ ಕೆಲವು ಮಹಾನುಭಾವರ ದೇಣಿಗೆಯ ಸಹಾಯದಿಂದ ಈ ಚಕ್ರ ಓಡುತ್ತಿದೆ. ಆದರೆ ಸಂಪದಕ್ಕೆ ಹತ್ತು ಹಲವಾರು ಜನರಿಗೆ ಅನ್ನ ಹಾಕುವ ಶಕ್ತಿ ಹೊಂದುವ ಕಾಲ ದೂರವಿಲ್ಲ.
ಇದರಲ್ಲಿ ಅಂತಹ ಆಕರ್ಷಣೆ ಏನು? ಸಾಮಾನ್ಯವಾಗಿ ಮನಸ್ಸನ್ನು ಮುದಗೊಳಿಸುವಂತಹ ಹಾಡು, ಸಿನೆಮಾಗಳನ್ನು ಇಳಿಸಿಕೊಳ್ಳುವ ತಾಣಗಳಿಗೆ ಜನರು ಮುಗಿಬೀಳುವುದು ಸರ್ವೇ ಸಾಮಾನ್ಯ. ಆದರಿಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ವಿಚಾರ ವಿನಿಮಯ, ಚರ್ಚೆ ನಡೆಯುತ್ತಿದೆ. ಅದರಲ್ಲೇ ಸದಸ್ಯರು ಮನ ಮುದಗೊಳಿಸಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ ಸಂಪದದ ಅವಶ್ಯಕತೆ ಇತ್ತು ಅಂತ ಈಗ ತಿಳಿಯುತ್ತಿದೆ.
ಇದನ್ನು ರೂಪಿಸಿದ ಅತಿರಥ ಮಹಾರಥರು ಕನ್ನಡ ಸಾರಸ್ವತ ಲೋಕದಲ್ಲಿ ಹಬ್ಬಿಸುತ್ತಿರುವ ಕಂಪಿನಿಂದಲೇ ಸದಸ್ಯತ್ವ ಹೆಚ್ಚಾಗುತ್ತಿರುವುದು. ಓಎಲ್ಎನ್, ಡಾ| ಪವನಜ, ಇಸ್ಮಾಯಿಲ್, ವೆಂಕಟೇಶಮೂರ್ತಿ. ಓಹ್! ಜನಕ ಹರಿಪ್ರಸಾದರನ್ನೇ ಮರೆತೆ. ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅವರು ತಾಂತ್ರಿಕವಾಗಿಯೂ ನಿಪುಣರು, ಸಾರಸ್ವತ ಲೋಕದಲ್ಲೂ ನೈಪುಣ್ಯತೆ ಗಳಿಸಿರುವವರು. ಅವರಿಗೆ ಪವನಜರಂಥ ಗುರುಗಳಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಪವನಜರಿಗೇ ತಮ್ಮದೇ ತಾಣವಿದ್ದರೂ ಅವರಲ್ಲಿ ಸಂಸ್ಕೃತಿಯ ಬೆಳವಣಿಗೆಗೆ ತನ್ನತನ ಮರೆತು ಕೆಲಸ ಮಾಡುತ್ತಿರುವ ಉನ್ನತ ವ್ಯಕ್ತಿತ್ವವನ್ನು ಕಾಣಬಹುದು. ಇನ್ನು ಓಎಲ್ಎನ್ರ ಬಗ್ಗೆ ನಾನೇನು ಹೇಳಬಲ್ಲೆ. ಎಲ್ಲರಿಗೂ ಗೊತ್ತಿರುವ ವಿಷಯವೇ. ಕನ್ನಡದಲ್ಲಿ ಅವರು ಅವರದ್ದೇ ಆದ ಛಾಪನ್ನು ಒತ್ತಿರುವರು.
ಇದೊಂದು ಹೈಬ್ರೀಡ್ ತಳಿ. ಬಹಳ ಬೇಗ ಬೆಳೆದು ಹೆಮ್ಮರವಾಗುತ್ತಿದೆ. ಬರೀ ಮರವಾಗೋದು ಬೇಡ ಆಲದ ಮರವಾಗಿ ಬಿಳಲು ಬಿಟ್ಟು ನೆಲವಿಡೀ ಬೇರನ್ನು ಹಬ್ಬಿಸಲಿ ಎಂದು ಆಶಿಸೋಣ.
Comments
ಹೊಗಳಿಕೆ
In reply to ಹೊಗಳಿಕೆ by hpn
ಥ್ಯಾಂಕ್ಸ್, ಆದರೆ..
ಹೊನ್ನ ಶೂಲ