ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ
ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ
- - ಲ ಕ್ಷ್ಮೀಕಾಂತ ಇಟ್ನಾಳ
‘ಡು ಯು ನೋ ರವಿ ಬೆಳಗೆರೆ ಇನ್ ಕನ್ನಡ’ ಎಂದು ಕೇಳಿತ್ತು ಆ ಅಜ್ಜ. ಅದು 2007ರ ಒಂದು ದಿನ ಇದ್ದಿರಬಹುದು. ಆರು ಅಡಿಗಳಿಗಿಂತ ಹೆಚ್ಚು ಎತ್ತರದ ನಿಲುವಿನ, ಮಿಲಿಟರಿ ಕರ್ನಲ್ ಹುದ್ದೆಯಲ್ಲಿ ಬ್ರಿಟಿಶ್ ಹಾಗೂ ಇಂಡಿಯನ್ ಆರ್ಮಿಯಲ್ಲಿ ಸೇವೆಯಲ್ಲಿದ್ದು ರಾಜ ಗಾಂಭೀಂರ್ಯದಿಂದ ಬಾಳಿದ ಅಂತರರಾಷ್ಟ್ರೀಯ ಸುಪ್ರಸಿಧ್ಧ ಖ್ಯಾತಿಯ ಇಂಗ್ಲೀಷ ಐತಿಹಾಸಿಕ ( ಫಿಕ್ಷನ್ ಹಾಗೂ ನಾನ್ ಫಿಕ್ಷನ್) ಕಾದಂಬರಿಕಾರ. ಲೈಫ್ ಇಂಟರ ನ್ಯಾಶನಲ್, ಸ್ಟೇಟ್ಸ್ಮನ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಕಾಲಮಿಸ್ಟ. ದೆಹಲಿಯಲ್ಲಿ ಮಾಹಾತ್ಮಾಜಿಯವರನ್ನು ನಾಥೂರಾಮ್ ಗೋಡ್ಸೆ ಕೊಲೆಯಾಡಿದ ಸ್ಥಳ ಬಿರ್ಲಾಭವನದಿಂದ ಎರಡನೆಯ ಮನೆಯಲ್ಲಿಯೇ ವಾಸವಾಗಿದ್ದವರು ಮಳಗಾಂವಕರರು ಯಾವದೇ ದೇಶದ ಪ್ರವಾಸಿ ಭಾರತಕ್ಕೆ ಬರಬೇಕಾದರೆ, ಭಾರತದ ಇತಿಹಾಸ ತಿಳಿಯಬೇಕೆನಿಸಿದವರು ಮೊದಲು ಮನೋಹರ ಮಳಗಾಂವಕರರ ಪುಸ್ತಕವನ್ನು ಕೈಯಲ್ಲಿ ಹಿಡಿಯುತ್ತಾರೆ.
ಒಡಲ ತುಂಬೆಲ್ಲ ದಟ್ಟ ಕಾಡಿನ ಹಸಿರು ಹೊದ್ದ, ವನ್ಯಪ್ರಾಣಿಗಳ ಬೀಡುಗಳ ಮಧ್ಯೆ, ಕಳೆದ ನಲವತ್ತೈವತ್ತು ವರ್ಷಗಳಿಂದ ನೆಲೆಸಿದ್ದು, ಉತ್ತರ ಕನ್ನಡ ಜಿಲ್ಲೆಯ ಜೋಯಡಾ ಸಮೀಪ ಜಗಲಬೇಟ್ ಎಂಬ ಗ್ರಾಮದ ಹತ್ತಿರದ ಬರ್ಬೂಸಾ ಎಂಬ ಗ್ರಾಮದ ಒಂಟಿ ಅರಮನೆಯಂತಹ ಮನೆಯಲ್ಲಿ. ಮುಖ್ಯರಸ್ತೆಯಿಂದ ಹೆಚ್ಚೇನು ದೂರವಿಲ್ಲ. ಕೇವಲ ಎರಡುನೂರು ಹೆಜ್ಜೆಗಳು ಮಾತ್ರ. ಭಾರತೀಯ ಐತಿಹಾಸಿಕ ಕಥಾ ಸಾಹಿತ್ಯದಲ್ಲಿ ಅಗ್ರಗಣಿ, ಜಾಗತಿಕ ಖ್ಯಾತಿಯ ಮನೋಹರ ಮಳಗಾಂವಕರರೊಂದಿಗಿನ ಭೇಟಿಯ ಕೆಲ ಗಳಿಗೆಗಳು ಜೀವನದ ಅತೀ ಮಹತ್ವದ ಕ್ಷಣಗಳಾಗಿ ನನ್ನಲ್ಲಿ ಉಳಿದುಕೊಂಡಿವೆ. ಅವರ ಹಲವಾರು ಕಾದಂಬರಿಗಳಲ್ಲಿ ದಿ ಪ್ರಿನ್ಸ್, ದ ಡೆವಿಲ್ಸ್ ವಿಂಡ್, ಎ ಬೆಂಡ್ ಇನ್ ದಿ ಗ್ಯಾಂಜಿಸ್, ಸೀ ಹಾಕ್, ಶಾಲಿಮಾರ (ಇದು ಹಿಂದಿ ಚಲನಚಿತ್ರವೂ ಆಗಿದೆ), ಸ್ಪೈ ಇನ್ ಅಂಬರ್, ಬ್ಯಾಂಡಿಕೂಟ್ ರನ್, ದಿ ಮೆನ್ ಹೂ ಕಿಲ್ಡ್ ಗಾಂಧಿ (ನಾಥೂರಾಮ್ ಗೋಡ್ಸೆಯ ಎಲ್ಲ ಸಹಚರರನ್ನು ಖುದ್ದು ಭೇಟಿ ಮಾಡಿ ಬರೆದ ಕೃತಿ ),ಎ ಟೆಲ್ಲರ್ ಆಫ್ ಟೇಲ್ಸ್ ಇವುಗಳಲ್ಲಿ ಕೆಲವು. ಇವುಗಳಲ್ಲಿ ಕೆಲವು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಗಳಾಗಿವೆ. ಅವರ ಕಾದಂಬರಿಗಳಲ್ಲದೇ, ಅವರ ಕಾಲಂಗಳಿಂದಲೂ ಪ್ರಭಾವಿತನಾದವನು ನಾನು. ಅವರೊಬ್ಬ ದೂರದರ್ಶಿತ್ವವುಳ್ಳವರು. ಸೋವಿಯತ್ ಪತನದ ನಂತರ ಆಗಬಹುದಾದ ಬದಲಾವಣೆಗಳ ಕುರಿತು ಅವರು ಬರೆದ ‘ಸೈಬೀರಿಯಾದ ಕುರುಬರ ಪೆಸ್ಮೀನಾ ಉಣ್ಣೆಯ’ ಬಗ್ಗೆ ಸುಮಾರು ಹತ್ತಾರು ವರ್ಷಗಳ ಹಿಂದೆ ಇಂಗ್ಲೀಷ ಪತ್ರಿಕೆಯಲ್ಲಿ ಬರೆದ ವಿಚಾರ ನನ್ನನ್ನು ಹೆಚ್ಚು ಅವರತ್ತ ಆಕರ್ಷಿಸಿತ್ತು. ಅವರು ವಿಶ್ಲೇಷಿಸಿದಂತೆ ಉಣ್ಣೆಯ ರಗ್ಗು ಶಾಲುಗಳಿಗೆ ಇಂದು ಸೈಬೀರಿಯಾ ಪ್ರಸಿದ್ಧಿ ಪಡೆದಿದೆ ಹಾಗೂ ಅದರಿಂದ ಅದರ ಆರ್ಥಿಕತೆ ವೃದ್ಧಿಯಾಗುತ್ತಲಿದೆ.
ಕೆಲವು ಸಾರಿ ಕಾರವಾರದ ಕಡೆಗೆ ಹೋಗುವುದಿದ್ದಾಗ ನಾನು ಜೋಯಡಾ ಮಾರ್ಗ ಆರಿಸಿಕೊಂಡು ಜಗಲಬೇಟ್ ಹತ್ತಿರ ಬರ್ಬೂಸಾಗೆ ಹೋಗಿ ಅವರನ್ನು ಕ್ಷಣ ಭೇಟಿಯಾಗುತ್ತಿದ್ದೆ. ಹೆಚ್ಚಿಗೆ ಹೊತ್ತೇನು ಇಲ್ಲ. ಅವರ ಸೇವಕ ಅಶೋಕ (ಆನಂದ?) ಅವರಿಗೆ ‘ಧಾರವಾಡಕೆ ವೋ ಆದ್ಮೀ ………………’ ಅನ್ನುತ್ತಿದ್ದುದು ನನಗೆ ಕೇಳಿಸುತ್ತಿತ್ತು. ನನಗೆ ಕೂಡಲು ಹೇಳುತ್ತಿದ್ದರು. ಅದು ಸುಮಾರು ನಾಲ್ಕು ದೊಡ್ಡ ದೊಡ್ಡ ಬೆಡ್ ರೂಮುಗಳ, ಒಂದು ದೊಡ್ಡ ಲೈಬ್ರರಿಯನ್ನು ಒಳಗೊಂಡ ಉಳಿದೆಲ್ಲ ಸವಲತ್ತುಗಳ ದೊಡ್ಡ ಬಂಗಲೆ. ಪ್ರತಿಯೊಂದನ್ನು ಎಷ್ಟೊಂದು ಒಪ್ಪ ಓರಣವಾಗಿ ಜೋಡಿಸಿಟ್ಟಿರುತ್ತಿದ್ದರೆಂದರೆ ಒಂದು ಅರ್ಥದಲ್ಲಿ ಮ್ಯೂಜಿಯಂ ತರಹವಿತ್ತು. ಆ ಬಂಗಲೆಯ ಸುತ್ತ ಅವರ ಸೇವಕ ಸಿಬ್ಬಂದಿಗಳಿಗಾಗಿ ಕಟ್ಟಿಸಿದ ಮನೆಗಳು. ಕಾಡು ಪ್ರಾಣಿಗಳು ಹುಲಿ, ಆನೆ, ಚಿರತೆ, ಕಾಡುಕೋಣಗಳ ಹಿಂಡು ಸಹಿತ ಅಲ್ಲೆಲ್ಲ ಬರುತ್ತವೆ ಎಂಬುದನ್ನು ತಿಳಿಸಿದಾಗ ಗಾಬರಿಯಾಗುತ್ತಿತ್ತು. ಯಾವಾಗ ಹೋದರೂ, ನಿನ್ನೆ ರಾತ್ರಿ ಕಾಡು ಕೋಣಗಳ ಹಿಂಡು ಬಂದಿತ್ತು, ಚಿರತೆ ದನಗಳ ಕೊಟ್ಟಿಗೆ ಹತ್ತಿರ ಬಂದು ಹೋಗಿದೆ, ಕರಡಿ ಕಂಡಿತ್ತು ಎಂದೇ ಹೇಳುತ್ತಿದ್ದ ಅಶೋಕ. ಆ ಕಾಡಿನ ಪರಿಸರವೇ ಹಾಗಿತ್ತು. ಸ್ವಲ್ಪ ಹೊತ್ತಿನ ನಂತರ ತಮ್ಮ ಬೆಡ್ ರೂಮಿನಿಂದ ಹಜಾರದಲ್ಲಿ ಬಂದು ಕುರ್ಚಿಯ ಮೇಲೆ ಕೂಡುತ್ತಿದ್ದಂತೆ ಅವರ ಸೇವಕ ಅವರಿಗೆ ಕೂಡಲು ಸಹಾಯ ಮಾಡುತ್ತಿದ್ದ. ನಾನು ಅವರನ್ನು ಕಂಡೊಡನೇ ಅವರ ಕಾಲಿಗೆ ನಮಿಸಲು ತೊಡಗುತ್ತಿದ್ದಂತೆಯೇ, ಅವರು ‘ಪ್ಲೀಸ್ ಡೋಂಟ್ ಡು ದಾಟ್, ಐ ಆಮ್ ಟೂ ಸ್ಮಾಲ್ ಪರ್ಸನ್, ಫಾರ್ ಸಚ್ ಥಿಂಗ್ಸ್’ ಅನ್ನುತ್ತಿದ್ದರು. ಅದು ಅವರ ಸಜ್ಜನಿಕೆ. ಗಳಿಗೆ ಹೊತ್ತು ನಾನು ಬಂದ ಉದ್ದೇಶ, ತಮ್ಮ ಪುಸ್ತಕಗಳ ಬಗ್ಗೆ ಓದಿದ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ನಾನು ಅವರ ಅಭಿಮಾನಿ ಎಂದು ಹೇಳಿ, ಅವರ ಸಾಹಿತ್ಯದ ಬಗ್ಗೆ ಎಷ್ಟು ಗೊತ್ತು ಅಷ್ಟೇ ಹೇಳುತ್ತಿದ್ದೆ. ಸುಮ್ಮನೆ ಅವರನ್ನು ಮೆಚ್ಚಿಸಲು ಎಲ್ಲವನ್ನು ಓದಿದ್ದೇನೆ ಎಂದು ಹೇಳುತ್ತಿರಲಿಲ್ಲ. ಅವರ ದರ್ಶನ ಭಾಗ್ಯವೇ ನನಗೆ ಅಗಾಧವಾಗಿತ್ತು. ಅದು ಅವರಿಗೂ ಗೊತ್ತಾಗಿತ್ತು.
ಅವರೆಷ್ಟು ನಿರ್ಲಿಪ್ತರೆಂದರೆ ಅವರು ಅಷ್ಟೆಲ್ಲ ಖ್ಯಾತನಾಮರಾಗಿದ್ದರೂ, ಅಂತರ್ಮುಖಿಯಾಗಿದ್ದರು. ಜಗತ್ತಿನಿಂದ ಅಕ್ಷರಶಃ ದೂರವಾಗಿದ್ದವರು. ಜನಾವಾಸದಿಂದ ದೂರವಾಗಿ ಕಾಡನ್ನೇ ಅಪ್ಪಿಕೊಂಡವರು. ಮೇಲೆ ಹೇಳಿದ ಹಾಗೆ ಒಂದು ಭೇಟಿಯ ಸಂದರ್ಭದಲ್ಲಿ , ‘ಡು ಯು ನೋ, ರವಿ ಬೆಳಗೆರೆ ಇನ್ ಕನ್ನಡ’ ಎಂದು ಕೇಳಿದ್ದರು. ನಾನು, ‘ಹಿ ಇಜ್ ಎ ವೆರಿ ಗುಡ್ ರೈಟರ್ ಆಂಡ್ ವೆರಿ ಪಾಪುಲರ ರೈಟರ್ ಆಲ್ಸೋ ಸರ್’ ಎಂದು ಹೇಳಿ, ‘ಹೀ ಇಜ್ ರನ್ನಿಂಗ್ ಏ ವೀಕ್ಲೀ ನೌನ್ ಆಜ್ ‘ಹಾಯ್ ಬೆಂಗಳೂರು’ ಎಂದೆ. ಆ ಪತ್ರಿಕೆಯನ್ನು ನಾನು ರೆಗ್ಯೂಲರ್ ಆಗಿ ಓದುವುದಿಲ್ಲವಾದರೂ, ಅವರ ಕಾಲಂಗಳು ತುಂಬ ಚನ್ನಾಗಿರುತ್ತವೆ ಎಂದು ಪ್ರಾಮಾಣಿಕವಾಗಿ ಹೇಳಿದೆ. ಅವರ ಹಲವಾರು ಪುಸ್ತಕಗಳನ್ನು ಓದಿದ್ದರಿಂದ ಒಳ್ಳೆಯ ಲೇಖಕನೆಂದು ಹೇಳಿದೆ. ( ಅವರ ಖಾಸಬಾತ್, ಲವಲವಿಕೆ, ಬಾಟಂ ಐಟಂಗಳನ್ನು ಮೆಚ್ಚಿದ ಸಾವಿರಾರು ಓದುಗರಲ್ಲಿ ನಾನೂ ಒಬ್ಬ)
ಮಳಗಾಂವಕರರು ಒಮ್ಮೆಲೇ ನನ್ನನ್ನು ‘ಕ್ಯಾನ್ ಐ ಗಿವ್ ಹಿಮ್ ಮಾಯ್ ರೈಟ್ಸ್ ಟು ಟ್ರಾನ್ಸ್ಲೇಟ್ ಮಾಯ್ ಬುಕ್ಷ ಇನ್ ಕನ್ನಡ’ ಎಂದು ಕೇಳಿದರು. ನಾನು ಆವಾಕ್ಕಾದೆ. ಈ ಪ್ರಶ್ನೆ ನಾನು ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ಯೋಚಿಸಿದೆ. ಇಬ್ಬರು ಟೆಸ್ಟ್ ಕ್ರಿಕೆಟ್ ಪ್ಲೇಯರ್ಸ್ ಮಧ್ಯೆ ಪ್ರೈಮರಿ ಸ್ಕೂಲ್ ಹುಡುಗನಂತಾಗಿದ್ದೆ. ಸರ್, ಇಂತಹ ವಿಷಯಗಳಲ್ಲಿ ನಾನು ತುಂಬ ಸಣ್ಣವನೆಂದು ಹೇಳಿ, ‘ಖಂಡಿತ ಕೊಡಬಹುದು’ ಎಂದು ಹೇಳಿ, ‘ತಾವು ಸಧ್ಯದಲ್ಲಿಯೇ ತಮ್ಮ ಪುಸ್ತಕಗಳ ಮೂಲಕ ಕನ್ನಡ ನಾಡಿನಲ್ಲಿ ಹೆಚ್ಚು ಪರಿಚಯವಾಗುತ್ತೀರಿ’ ಎಂದು ಅಭಿನಂದನೆ ಹೇಳಿದೆ. ಅದಕ್ಕೆ ಅವರು, ‘ಈ ವಯಸ್ಸಿನಲ್ಲಿ ನನಗಾವ ಪ್ರಸಿದ್ಧಿ, ಹಂಚಿಕೊಳ್ಳಲು ಯಾರಿದ್ದಾರೆ’ ಎಂದಾಗ ಮನಸ್ಸಿನ ಮೂಲೆಯಲ್ಲೆಲ್ಲೋ ನೋವಿನ ಅಲೆಯೊಂದು ಮಿಂಚಿ ಮರೆಯಾಗಿತ್ತು. ಅವರ ಶ್ರೀಮತಿಯವರು ಗತಿಸಿ ಆಗಲೇ 40 ವರ್ಷಗಳಾಗಿದ್ದವು. ಹಾಗೂ ಇದ್ದ ಒಬ್ಬ ಮಗಳು ಸುನೀತಾ ಕೂಡ 1998 ರಲ್ಲಿ ತೀರಿಕೊಂಡರೆಂದು ಅಶೋಕ ಹೇಳುತ್ತಲಿದ್ದ. ಹೀಗಾಗಿ ಅವರದು ಒಂಟಿ ಜೀವ. (ಆಗ ಅವರಿಗೆ 90+ ಇದ್ದಿರಬಹುದು). ಅಶೋಕ ತಂದಿತ್ತ ಕಾಫಿ ಕುಡಿದು ಅವರ ಆಶೀರ್ವಾದ ಪಡೆದು ನಾನು ಹೊರಡುತ್ತಲಿದ್ದೆ. ಅವರಿಗೆ ಬಹಳ ಹೊತ್ತು ಕೂಡಲು ಆಗುತ್ತಿರಲಿಲ್ಲ. ಮಲಗಿಯೇ ಇರುತ್ತಿದ್ದರು.
ಮತ್ತೊಮ್ಮೆ 2008 ರಲ್ಲಿ ಅವರಲ್ಲಿಗೆ ಗೆಳೆಯರೊಂದಿಗೆ ಹೋದಾಗ ನನಗೊಂದು ಪುಸ್ತಕ ಕೊಟ್ಟು ಅದರ ಮೇಲೆ ಹಸ್ತಾಕ್ಷರ ಹಾಕಿ ಕೊಟ್ಟರು. ನನಗೆ ತುಂಬಾ ಖುಷಿಯಾಯಿತು. ತೆರೆದು ನೋಡಿದರೆ ಅದು ರವಿ ಬೆಳಗೆರೆಯವರು ಅನುವಾದಿಸಿದ ‘ದಿ ಡೆವಿಲ್ಸ್ ವಿಂಡ್’ನ ಕನ್ನಡ ಅನುವಾದ, ‘ದಂಗೆಯ ದಿನಗಳು’. ರವಿ ಬೆಳಗೆರೆಯವರಿಂದ ಚನ್ನಾಗಿ ಅನುವಾದಿಸಲ್ಪಟ್ಟಿದೆ ಹಾಗೂ ಈ ಸಂದರ್ಭದಲ್ಲಿ ಬೆಳಗೆರೆಯವರು ಈ ಕನ್ನಡದ ಕೃತಿಯ ಹಕ್ಕುಗಳನ್ನೂ ಕೂಡ ಮಳಗಾಂವಕರರಿಗೆ ನೀಡಿದ್ದು ಬೆಳಗೆರೆಯವರ ಬಗ್ಗೆ ಮತ್ತಷ್ಟು ಗೌರವ ಮೂಡಿಸಿತು. ಈ ರೀತಿ ಮನೋಹರ ಮಳಗಾಂವಕರರು ಅವರ ಜೀವಿತ ಕಾಲದಲ್ಲಿಯೇ ಕನ್ನಡಕ್ಕೆ ಪಾದಾರ್ಪಣೆ ಮಾಡುವಂತಾದುದು ನನಗೆ ಅತೀವ ಸಂತೋಷವನ್ನು ಉಂಟು ಮಾಡಿತು. ಅವರು ಅನಾರೋಗ್ಯ ಪೀಡಿತರಾದುದು ಪತ್ರಿಕೆಗಳಲ್ಲಿ ಪ್ರಕಟವಾಗಿ ನೋಡಲು ಹೋಗಬೇಕೆಂದುಕೊಳ್ಳುತ್ತಿರುವಾಗಲೇ 14 ಜೂನ್, 2010 ರಂದು ಅಜ್ಜ ನಮ್ಮನ್ನಗಲಿದರು. (ಜನನ: 12, ಜುಲೈ, 1913). ಅವರ ಆತ್ಮಕ್ಕೆ ಶಾಂತಿ ಕೋರೋಣ. ಅವರು ಇಂದು ನವ್ಮೊಂದಿಗಿಲ್ಲದಿದ್ದರೂ, ಅವರ ಸಾಹಿತ್ಯ, ಕಾದಂಬರಿಗಳ ಮುಖೇನ ಜೀವಂತವಾಗಿದ್ದಾರೆ.
ಮನೋಹರ ಮಳಗಾಂವಕರರು ಜಾಗತಿಕ ಪ್ರಸಿದ್ಧಿ ಪಡೆದರೂ, ಭಾರತೀಯರು ಅವರಿಗೆ ಸಲ್ಲಬೇಕಾದ ಸ್ಥರದಲ್ಲಿ ಗುರುತಿಸದೇ ಹೋದುದು ದುರದೃಷ್ಟಕರ ಸಂಗತಿಗಳಲ್ಲೊಂದು.
Comments
ಉ: ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ
In reply to ಉ: ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ by makara
ಉ: ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ
ಉ: ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ
In reply to ಉ: ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ by kavinagaraj
ಉ: ಮನೋಹರ ಮಳಗಾಂವಕರ_ ಜಾಗತಿಕ ಖ್ಯಾತಿಯ ಲೇಖಕ
ಲಕ್ಷ್ಮೀಕಾಂತ ಇಟ್ನಾಳರವರೇ
ಲಕ್ಷ್ಮೀಕಾಂತ ಇಟ್ನಾಳರವರೇ
ಚೆನ್ನಾಗಿದೆ. The Men Who Killed Gandhi ಒಮ್ದು ಭಾಗದ ಅನುವಾದ ಇಲ್ಲಿದೆ ನೋಡಿ
http://sampada.net/blog/narayana/03/10/2010/28283
ನಾರಾಯಣ
In reply to ಲಕ್ಷ್ಮೀಕಾಂತ ಇಟ್ನಾಳರವರೇ by Narayana
ಮನೋಹರ ಮಳಗಾಂವಕರ- ಜಾಗತಿಕ ಖ್ಯಾತಿಯ ಲೇಖಕ
ಪ್ರಿಯ ನಾರಾಯಣ ಒಂದು ಭಾಗದ ಅನುವಾದ ತಾವು ಹಂಚಿಕೊಂಡಿದ್ದೀರಿ. ಖಂಡಿತ ಓದುವೆ. ಹಾಗೆಯೇ ಮಳಗಾಂಗಕರ ಅಜ್ಜನ ಕುರಿತು ಹೆಚ್ಚಿಗೆ ಏನಾದರೂ ಗೊತ್ತಿದ್ದಲ್ಲಿ ಹಂಚಿಕೊಳ್ಳಿ. ನನಗಂತೂ ಅಜ್ಜ ತುಂಬ ಪ್ರೀತಿ, ನಂಬುಗೆ ತೋರಿಸಿದರು. ಅವರು ಎಷ್ಟೊಂದು ಸಜ್ಜನರೆಂದರೆ ಸಾಮಾನ್ಯರನ್ನೂ ಆತ್ಮೀಯವಾಗಿ ನೊಡುತ್ತಿದ್ದರು. ಅವರ ಆ ಮನೆ ಎಷ್ಟೊಂದು ಸುಂದರವಾಗಿ ಕಟ್ಟಿಸಿರುತ್ತಾರೆಂದರೆ, ಆ ಕಾಡಿನಲ್ಲಿ ಅಷ್ಟೊಂದು ಭವ್ಯ ಅರಮನೆ, ನಿಜವಾಗಿಯೂ ಇತಿಹಾಸದೆಲ್ಲೆಲ್ಲೂ ಅಂತಹ ಉದಾರಹಣೆ ಇಲ್ಲ ಅಂದ್ಕೋತಿನಿ. ಕುವೆಂಪು ಅವರದು ಇದೆ, ಆದರೆ ಅದು ಕೂಡ ತುಂಬ ಪ್ರಕೃತಿಯ ಮಡಿಲಲ್ಲಿದೆ. ಆದರೆ ಇಂತಹ ಮಾಡರ್ನ ಅರಮನೆ ಎಲ್ಲಿಯೂ ಇಲ್ಲ. ಅವರೊಬ್ಬ ಅದ್ವಿತೀಯ ಮನುಷ್ಯ.ಅವರು ರುಜು ಮಾಡಿ ಕೊಡುಗೆ ನೀಡಿದ ಪುಸ್ತಕ ಅವರ ನೆನಪಿಗಾಗಿ ಇಟ್ಟುಕೊಂಡಿದ್ದೇನೆ. ಪ್ರತಿಕ್ರಿಯೆಗೆ ಮಾನ್ಯರೇ ಮತ್ತೊಮ್ಮೆ ಧನ್ಯವಾದಗಳು.
In reply to ಮನೋಹರ ಮಳಗಾಂವಕರ- ಜಾಗತಿಕ ಖ್ಯಾತಿಯ ಲೇಖಕ by lpitnal@gmail.com
ನಾನು ಜಗಲಬೇಟ್ ನೋಡಿದ್ದೇನೆ.
ನಾನು ಜಗಲಬೇಟ್ ನೋಡಿದ್ದೇನೆ. ಅಲ್ಲಿ ಸುಮಾರು ಒಮ್ದು ವಾರ ಇದ್ದೆ. ಆದರೆ ಮಾಳಗಾಮ್ವ್ಕರರನ್ನು ನೋಡಿಲ್ಲ.
ನಾರಾಯಣ
ಮನೋಹರ ಮಳಗಾಂವಕರ- ಜಾಗತಿಕ ಖ್ಯಾತಿಯ ಲೇಖಕ
ಶ್ರೀ ನಾರಾಯಣ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಾವು ಜಗಲ್ ಬೇಟ್ ನೋಡಿದ್ದು ತಿಳಿದು ಸಂತೋಷವಾಯಿತು. ಅಲ್ಲಿಂದ ಮೂರು ಕಿಮೀ ಅದೇ ಮೇನ್ ರಸ್ತೆಯಲ್ಲಿ ಹೋದರೆ, ಅಲ್ಲಿ ಒಂದು ಮೈಲುಕಲ್ಲಿನ ಮೇಲೆ ಬರ್ಬೂಸಾ ಎಂದು ಬರೆದಿದೆ. ಅಲ್ಲಿ ಕಾಡಿನೊಳಗೆ ಒಂದು ಚಿಕ್ಕ 15 ಫೂಟು ಅಗಲದ ಮಣ್ಣಿನ ರಸ್ತೆ ಒಳಹೋಗಿದೆ. ಅದರಲ್ಲಿ 200-250 ಹೆಜ್ಜೆಗಳು ಹೋದರೆ ಅಜ್ಜನ ಮನೆ ಸಿಕ್ಕುತ್ತೆ. ಅವರ ಸಂಬಂಧಿ ಅಳಿಯ ಬಹುಶ: ಕಪೂರ ಎಂಬವರು ಬಾಂಬೆಯವರು. ಅವರು ಅದರ ಆಲ್ಟರ್ ನೇಶನ್ ಕೈಗೊಳ್ಳುತ್ತಿದ್ದಾರೆ ಎಂದು ಕೇಳಿದೆ. ಆದರೂ ಆ ಮೇಲೆ ಅಲ್ಲಿಗೆ ಹೋಗಲಾಗಿಲ್ಲ. ನಾನೊಬ್ಬ ಪಕ್ಷಿ ವೀಕ್ಷಕ, ಈ ಸಾರೆ ಹೋದಾಗ ಅಲ್ಲಿಗೂ ಹೋಗಿ ಬರುವೆ ಇರಾದೆ ಇದೆ. ನನ್ನಲ್ಲಿ ಆ ಮನೆಯ ಒಳಚಿತ್ರದ ವೀಡಿಯೋ ತುಣುಕುಗಳು ಇವೆ. ನನಗೆ ಅಪ್ಲೋಡ್ ಮಾಡಲು ಬಂದರೆ ಲೇಖನದಲ್ಲಿ ಹಾಕಲು ಪ್ರಯತ್ನಿಸುವೆ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಲಕ್ಷ್ಮಿಕಾಂತ ಇಟ್ನಾಳ ರವರಿಗೆ
ಲಕ್ಷ್ಮಿಕಾಂತ ಇಟ್ನಾಳ ರವರಿಗೆ ವಂದನೆಗಳು
" ವಯೋವೃದ್ಧ ಭೀಷ್ಮ ದಿ.ಮನೋಹರ ಮಳಗಾಂವಕರರ " ಬಗೆಗೆ ತಾವು ಬರೆದ ಲೇಖನ ಓದಿ ಬಹಳ ಸಂತಸವಾಯಿತು, ಅದಕ್ಕೂ ಹೆಚ್ಚಿನ ಸಂತಸ ಅವರಂತಹ ಮೇರು ವ್ಯಕ್ತಿಯನ್ನು ಕಂಡ ಮತ್ತೂ ಮಾತನಾಡಿದ ತಮ್ಮಂತಹವರ ಬರಹದ ಮೂಲಕ ಅವರ ಸಾರ್ಥಕ ಬದುಕನ್ನು ಮರು ನೆನಪಿಸಿಕೊಳ್ಳುವ ಸುಸಂಧರ್ಭ ಒಂದಿದು.
ಕನ್ನಡಿಗರಿಗೆ ಮನೋಹರ ಮಾಳ್ಗಾಂವಕರ ರವರನ್ನು ಪರಿಚಯಿಸಿದ ರವಿ ಬೆಳಗೆರೆಯವರ ಎಲ್ಲ ಬರಹಗಳು ಸಂಗ್ರಹ ಯೋಗ್ಯ. ಅವು ನಮ್ಮನ್ನು ಒಂದು ಅಲೌಕಿಕ ಲೋಕವೊಂದಕ್ಕೆ ಕರೆದೊಯ್ಯುವ ಲೇಖನಗಳು, ನಿಜ ಅರ್ಥದಲ್ಲಿ ಮಾಳ್ಗಾಂವಕರರು ಒಬ್ಬ ಸಂತ ಯೋಗಿ ಋಷಿ ಎಂಬ ಯಾವುದೇ ಹೆಸರಿನಿಂದ ಅವರನ್ನು ಕರೆಯ ಬಹುದು, ಅದಕ್ಕೆ ಅವರು ಯೋಗ್ಯರು. ' ದಂಗೆಯ ದಿನಗಳು ' ಕೃತಿಯನ್ನು ನಾನೂ ಒದಿರುವೆ, ಅರ್ಥಪೂರ್ಣ ಸಮರ್ಥ ಅನುವಾದ. ಗುಂಡಪ್ಪ ವಿಶ್ವನಾಥ ಮತ್ತು ದ್ರಾವಿಡರ ಸೊಗಸಾದ ಶತಕಗಳು ನೀಡುವ ಆನಂದಾನು ಭೂತಿಯನ್ನು ಈ ಲೇಖನ ನಮಗೆ ನೀಡಿದೆ. ಸ್ಮರಣೀಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.
In reply to ಲಕ್ಷ್ಮಿಕಾಂತ ಇಟ್ನಾಳ ರವರಿಗೆ by H A Patil
ಮನೋಹರ ಮಳಗಾಂವಕರ - ಜಾಗತಿಕ ಖ್ಯಾತಿಯ ಲೇಖಕ
ಶ್ರೀ ಹನುಮಂತ ಅನಂತ ಪಾಟೀಲ ರವರಿಗೆ , ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಪ್ರತಿಕ್ರಿಯೆ, ಅನಿಸಿಕೆ ನೋಡಿ ತುಂಬ ಖುಷಿಯಾಯ್ತು. ತಾವು ಲೇಖನ ಮೆಚ್ಚಿದ್ದಕ್ಕೆ ತುಂಬ ಹೃದಯದ ಧನ್ಯವಾದಗಳು.