ಮನ - ಮನೆ ಸೇರಿದರೆ ಸಂಭ್ರಮಕ್ಕೇನು ಕಮ್ಮಿ
ನಮ್ಮೂರಿನ ಸುತ್ತ ಮುತ್ತ ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸದೊಂದು ಪದ್ಧತಿಯನ್ನು ರೂಢಿಸಿ ಕೊಂಡು ಬರುತ್ತಿದ್ದಾರೆ. ಅದೆಂದರೆ, ಮದುವೆ ಮುಂಜಿಗೆ ಬಂದ ಅತಿಥಿಗಳಿಗೆ ಊರವರೂ ಸೇರಿದಂತೆ ಎಲ್ಲರಿಗೂ ಊಟಕ್ಕೆ ಕುಳಿತಾಗ ಸ್ಟೀಲ್ ಪ್ಲೇಟ್, ರವಿಕೆ ಕಣ (ಬ್ಲೌಸ್ ಪೀಸ್) ಪುಟ್ಟ ಕೈಚೀಲ,ಪರ್ಸ್, ಟವೆಲ್, ಅಥವಾ ಇನ್ನೇನೋ ಒಂದು ಗಿಫ್ಟ್ ಐಟಮ್ ಕೊಡುವುದು. (ಇದು ಮಹಿಳೆಯರಿಗೆ ಹಿಂದೆ ನೀಡುತ್ತಿದ್ದ ಅರಿಶಿನ ಕುಂಕುಮ ಹೂವಿನೊಂದಿಗಿನ ಅಡಿಷನಲ್ಗಳು.) ಈ ಹಿಂದೆ ಇಂತಹ ವಸ್ತುಗಳನ್ನು ಕೊಡುವ ಪದ್ಧತಿ ಇರಲಿಲ್ಲ. ಊಟಕ್ಕೆ ಕುಳಿತ ಬ್ರಾಹ್ಮಣ ಸುಹಾಸಿನಿಯರಿಗೆ ಭೂರಿ ದಕ್ಷಿಣೆ ಎಂದು 5-10 ಪೈಸೆ ಯಿಂದ ಪ್ರಾರಂಭಗೊಂಡು ಇತ್ತೀಚೆಗೆ 1-10 ರೂಗಳ ವರೆಗೂ ಕೊಡುವುದಿದೆ.
ಈಗ ಕೆಲವು ವರ್ಷಗಳಿಂದೀಚೆಗೆ ಹೊಸದೊಂದು ಸಂಪ್ರದಾಯ (ಗಿಫ್ಟ್ ಐಟಮ್ ಕೊಡುವುದು) ನನ್ನ ಕಣ್ಣೆದುರಿಗೆ ಪ್ರಾರಂಭಗೊಂಡಿದೆ. ಹಾಗೆಯೇ ಗ್ರಾಮಸ್ಥರು ಮತ್ತು ಮನೆತನದವರೂ ಸಹ ಉಡುಗೊರೆಗಳನ್ನು ಕೊಡುವುದು ಪ್ರಾರಂಭವಾಗಿದೆ. ಹೀಗೇಕೆ, ಇದು ಬೇಕೆ ಇತ್ಯಾದಿ ಪ್ರಶ್ನೆಗಳು ನನ್ನಲ್ಲಿ ಅಂದಿನಿಂದ ಕಾಡತೊಡಗಿದೆ. ಕಾರಣ ನಾನು ನೋಡಿದಂತೆ ಹಳ್ಳಿಯಲ್ಲಿ ಇದ್ದ ನಡವಳಿಕೆ ಎಲ್ಲರಿಗೂ ಬಹಳ ಸರಳ ಹಾಗೂ ಅನುಕೂಲಕರವಾಗಿತ್ತು.
ಊರಲ್ಲಿ ಯಾವುದೇ ಮನೆಯಲ್ಲಿ ಅಥವಾ ಸಾಮೂಹಿಕ ಸಮಾರಂಭ ನಡೆಯಲಿ, ಅದನ್ನು ಇಡೀ ಊರಿನ ಸಮಾರಂಭ ಎಂದೇ ಪರಿಗಣಿತವಾಗಿತ್ತು. ಅಂತಹ ಸಂದರ್ಭಗಳಲ್ಲಿ ಊರವರಿಗೆ ವಿಶೇಷ ಮರ್ಯಾದೆಯೂ ಸಿಗುತ್ತಿತ್ತು. ಸಮಾರಂಭಕ್ಕೆ ಮುನ್ನ ನಾಂದಿ ಇಡುವ ಪದ್ಧತಿಯ ನಂತರ ಇಡೀ ಊರನ್ನು ಮನೆಯ ಸದಸ್ಯರೇ ಅನಿವಾರ್ಯದಲ್ಲಿ ಕುಟುಂಬದ ಒಂದೂ ಮನೆಯನ್ನು ಬಿಡದೆ ಅಕ್ಷತೆ ಕೊಟ್ಟು ಕರೆದು ಬರಬೇಕಾಗಿತ್ತು. ಒಂದೂ ಮನೆಯನ್ನು ಬಿಡದೆ ಎಂದು ಹೇಳಲೂ ಸಹ ಕಾರಣ ಇದೆ. ಉಳಿದ ಸಂದರ್ಭಗಳಲ್ಲಿ ಜಗಳ ವೈಷಮ್ಯ ಯಾವುದೇ ಇದ್ದರೂ ಇಂತಹ ಸಂದರ್ಭಗಳಲ್ಲಿ ಕರೆಯಲೇ ಬೇಕಾಗಿತ್ತು. ಇಲ್ಲಿ ಯಾವುದೇ ವಯಕ್ತಿಕ ಜಗಳಗಳನ್ನು ಗಣನೆಗೆ ತೆಗೆದುಕೊಳ್ಳುವಂತಿರಲಿಲ್ಲ. ಹಾಗೊಮ್ಮೆ ಕರೆಯದೇ ಬಿಟ್ಟಲ್ಲಿ ಕರೆಯದೇ ಇರುವ ಬಗ್ಗೆ ನಮ್ಮ ನಮ್ಮ ಮಠಗಳಿಗೆ ದೂರು ಸಲ್ಲಿಸಿ ಈ ಬಗ್ಗೆ ವಿಚಾರಣೆ ನಡೆಸಿ ದಂಡ ಹಾಕುವ ಸಂಪ್ರದಾಯವೂ ಇತ್ತು.
ಊರವರೂ ಸಹ ಸಮಾರಂಭದ ಮನೆಗೆ ಬಂದು ಚಪ್ಪರ ಹಾಕುವುದರಿಂದ ಮೊದಲ್ಗೊಂಡು, ಬಂದ ನೆಂಟರಿಷ್ಟರೆಲ್ಲರ ಯೋಗಕ್ಷೇಮ ವಿಚಾರಿಸಿ, ಊಟ ತಿಂಡಿಗಳನ್ನು ನೀಡಿ ನಂತರ ತಾವೂ ಊಟ ಪೂರೈಸಿ ಸಮಾರಂಭದ ಪಾತ್ರೆ ಪಗಡಗಳನ್ನು ಒಪ್ಪ ಮಾಡಿ ಸೇರಿಸಿ ಕೊಡುವ ವರೆಗಿನ ಜವಾಬ್ದಾರಿಯನ್ನು ನಿಭಾಯಿಸ ಬೇಕಾಗಿತ್ತು.
ಹಾಗೆಯೇ ಸಮಾರಂಭದಲ್ಲಿ ಗ್ರಾಮದ ಮರ್ಯಾದೆ ಎಂಬುದಾಗಿ ಒಂದು ವಿಳ್ಯದೆಲೆ ಪಟ್ಟಿ ಯನ್ನು ಗ್ರಾಮಸ್ಥರಿಗೆ ಕೊಟ್ಟು ಅವರನ್ನು ಗೌರವಿಸಿದರೆ ಆಗಿತ್ತು.
ಇಂತಹ ಸಹಕಾರದಿಂದ ನಡೆಯುವ ಸಮಾರಂಭಗಳಲ್ಲಿ ವಟು, ವಧೂವರರಿಗೆ ಊರವರು ಮತ್ತು ಮನೆ ಮಂದಿ (ದಾಯಾದಿ ಸಂಬಂಧಿಗಳು) ಸಹ ಯಾವುದೇ ಉಡುಗೋರೆ ಕೊಡುವ ಪದ್ಧತಿ ಇರಲಿಲ್ಲ.
ಹೀಗಾಗಿ ಹಣ ಇಲ್ಲದಿದ್ದರೂ ಅಂದು ಎಲ್ಲರ ಮನೆಯಲ್ಲೂ ಮದುವೆ ಮುಂಜಿಗಳಂತಹ ಸಮಾರಂಭಗಳು ಅದ್ಧೂರಿಯಾಗಿಯೇ ನಡೆಯುತ್ತಿದ್ದವು. ಎಲ್ಲರೂ ಅದು ತಮ್ಮ ಮನೆಯ ಕಾರ್ಯಕ್ರಮವೆಂದೇ ಜವಾಬ್ದಾರಿ ಹೊತ್ತು ಭಾಗವಹಿಸುತ್ತಿದ್ದರು. ವಿಜ್ರಂಭಣೆಯೂ ಇರುತ್ತಿತ್ತು.
ಆದರೆ ಇಂದು ಅದ್ಧೂರಿತನವು ಪರಸ್ಪರರು ನೀಡುವ ಉಡುಗೋರೆಯ, ಊಟಕ್ಕೆ ಮಾಡುವ ವೆಚ್ಚದ ಮೇಲೆ ಅವಲಂಬಿತಗೊಂಡಂತೆ ಕಂಡು ಬರುತ್ತಿದೆ. ಅಂದಿನ ಕಲಸಾನ್ನ (ಚಿತ್ರಾನ್ನ) ಪಾಯಸದ ಅದ್ಧೂರಿ ಭೂರಿ ಭೋಜನ ಇಂದು ತಿನ್ನಲಾಗದೆ ವ್ಯರ್ಥಗೊಳಿಸುವಷ್ಟು ಪದಾರ್ಥಗಳಿಂದ, ಬಾಟಲಿ ನೀರಿನಿಂದ, ಐಸ್ ಕ್ರೀಂ ನಿಂದ ತುಂಬಿದೆ. ಸಾಲದೆಂಬಂತೆ ಊಟ ಮುಗಿಸಿ ಬರುವಾಗ ನೀಡುವ ಗಿಫ್ಟ್ ಗಳ ಪ್ಯಾಕ್ ನೋಡುವಂತಾಗಿದೆ.
ಅವರ ಮನೆಯಲ್ಲಿ ಅದನ್ನು ನೀಡಿದರು, ಇವರಮನೆಯಲ್ಲಿ ಇದನ್ನು ನೀಡಿದರು, ನಾವು ತಂದಿದ್ದೇವೆ. ನಾವೂ ಏನಾದರೂ ನೀಡಲೇ ಬೇಕು, ಎಂಬ ಮನೋಭಾವ, ಅದಕ್ಕಿಂತ ಹೆಚ್ಚಿನದನ್ನು ನೀಡಬೇಕೆಂಬ ನಿಲುಕದ ಅಹಮಿಕೆ, ಮೇಲಾಟಗಳೂ ಶುರುವಾಗಿವೆ.
ಹೀಗಾಗಿ ಬಡವರ - ಮಧ್ಯಮ ವರ್ಗದವರ ಮನೆಯ ಸಮಾರಂಭಗಳು ನಡೆಯುವುದೇ ಕಷ್ಟಸಾಧ್ಯವಾಗಿದೆ.
ಹಾಗಿದ್ದರೂ ಅಪರೂಪವೆಂಬಂತೆ ಸಹಕರಿಸುವ ಪದ್ಧತಿ ಶಾಸ್ತ್ರ ದ ಹೆಸರಿನಲ್ಲಿ ಉಳಿದುಕೊಂಡು ಬಂದಿದೆ. ಅದರಲ್ಲಿ ಸಮಾರಂಭದ ಮುನ್ನಾ ದಿನ ನಡೆಯುವ ದೊನ್ನೆ ಬಾಳೆ - ಹಾಗೂ ಆಸಿಗೆ (ತರಕಾರಿ) ಹೆಚ್ಚುವುದು. ಇದಕ್ಕೆ ಮನೆಯ ಯಜಮಾನ ಪತ್ನಿ ಸಮೇತ ಗ್ರಾಮಸ್ತರ ಎದುರಿನಲ್ಲಿ ಅಳಕಾಳು, ಬೆಲ್ಲ, ಕಾಯಿ, ಪಂಚಕಜ್ಜಾಯ, ನೀರನ್ನು ಇಟ್ಟು ನಮಸ್ಕರಿಸಿ ಗೌರವಿಸುತ್ತಾರೆ. ಇದೆ ಗ್ರಾಮಸ್ಥರಿಗೆ ಅನನ್ಯ ಗೌರವ ಮತ್ತು ಸಂಭಾವನೆ. ಇದನ್ನು ಅಲ್ಲಿ ಸೇರಿದ ಪ್ರತಿಯೊಬ್ಬರೂ ಕಲಸಿ ಹಂಚಿ ತಿನ್ನುತ್ತಾರೆ. ಅದರ ಚಿತ್ರವನ್ನು ಈ ಲೇಖನಕ್ಕೆ ಲಗತ್ತಿಸಿದ್ದೇನೆ.
Comments
ಉ: ಮನ - ಮನೆ ಸೇರಿದರೆ ಸಂಭ್ರಮಕ್ಕೇನು ಕಮ್ಮಿ
ಉ: ಮನ - ಮನೆ ಸೇರಿದರೆ ಸಂಭ್ರಮಕ್ಕೇನು ಕಮ್ಮಿ
ಉ: ಮನ - ಮನೆ ಸೇರಿದರೆ ಸಂಭ್ರಮಕ್ಕೇನು ಕಮ್ಮಿ