ಮನ ಮೆಚ್ಚಿದ ಮಡದಿ - ನಾನು ನೋಡಿದ ಹಳೆಯ ಸಿನಿಮಾ

ಮನ ಮೆಚ್ಚಿದ ಮಡದಿ - ನಾನು ನೋಡಿದ ಹಳೆಯ ಸಿನಿಮಾ

ಇದು ನಿಜಕ್ಕೂ ಒಳ್ಳೆಯ ಸಿನೆಮಾ - youtube ನಲ್ಲಿದೆ.

ಒಂದೊಂದೇ ನಿಮಿಷದ ಕೆಲವು ದೃಶ್ಯಗಳು ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತವೆ . ಉದಾಹರಣೆಗೆ ಒಂದು ಸಂಸಾರದಲ್ಲಿ ಹುಡುಗನು ಸಿನಿಮಾ ನೋಡಲು ಹಣ ಕೇಳಿದರೆ ಅಲ್ಲಿ , ಮತ್ತೆ contrast ಆಗಿ ಇನ್ನೊಂದರಲ್ಲಿ ನಾನು ಕ್ಲಾಸಿಗೇ ಫಸ್ಟ್ ಆಗಿ ಬಂದಿದೀನಿ ಅಂತ ಹುಡುಗ ಹೇಳಿದಾಗ ಅಲ್ಲಿ ಹಿರಿಯರ ಪ್ರತಿಕ್ರಿಯೆ ಏನು? ಬೇರೆ ಬೇರೆ ಮೌಲ್ಯಗಳು , ಸಂಸ್ಕಾರಗಳು ನಮ್ಮ ಗಮನ ಸೆಳೆಯುತ್ತವೆ.

ಬೆಳೆದ ಮೊಮ್ಮಗನು ತಾತನಿಗೆ ತಿಳಿಸದೆ ತಾತನ ಮನಸ್ಸಿಗೆ ವಿರುದ್ಧವಾಗಿ ಮದುವೆಯಾಗಿ ಮನೆಗೆ ಬಂದಾಗ ಆ ತಾತ ಮತ್ತಿತರರು ನಡೆದುಕೊಳ್ಳುವ ರೀತಿ ಅದ್ಭುತವಾಗಿವೆ. " ಅಲ್ಲಿ ಕಾಣಬರುವ ಸಾಮಾಜಿಕ ಮತ್ತು ಸಾಂಸಾರಿಕ ರೀತಿ ನೀತಿಗಳು ಈ ಕಾಲದಲ್ಲಿ ಗಮನಿಸಿ ಅನುಸರಿಸತಕ್ಕಂತಹವು ಇವೆ.

ಅಲ್ಲಿ ಗಮನಿಸಿದ ಕೆಲವು AIIitteration ಇರುವ ವಾಕ್ಯಗಳು :-
*ಕೂತ್ಕೊಳ್ಳೋಕೆ ಕುರ್ಚಿ ಕೊಟ್ಬಿಟ್ರೆ
*ಪಾಪದ ಫಲ , ಪ್ರಾಯಶ್ಚಿತ್ತ
*ಪುತ್ರ ಶೋಕ, ಪತ್ನಿ ವಿಯೋಗ
*ಕೂತುಕೊಂಡು ಕಣ್ಣಿರಿಟ್ಕಂಡು
*(ಚೆಲ್ಲಿ) ಹೋದ ಹಾಲಿಗೆ ಹಂಬಲಿಸಿ
*ಎಲ್ಲಿದೀಯ ?. ಏನ್ಮಾಡ್ತಿದೀಯ ?
*ನೆರೆಮನೆ ನೆಲಸಮ
*ಮಗಳನ್ನ ಮರೆತು
*ವರ್ತಕರ ವಂಚನೆ
*ಕೇಕೆಹಾಕುವ ಕೇಡಿಗಳು
*ಮಧ್ಯೆ ಮಾತಾಡಬೇಡ
*ಕಾರ್ ನಲ್ಲಿ ಕೂತ್ಕೋ ಬಾ
*ಯಾರು? ಏನು ಬೇಕಿತ್ತು ?
*ಗೊಡ್ಡುವೇಷಕ್ಕೆ ಗುಡ್ ಬೈ
*ಒಬ್ಬನನ್ನೇ ಒಂಟಿಯಾಗಿ
*ದುಡ್ಡಿರೋ ದೊಡ್ಮನುಷ್ಯರನ್ನ ಆಡಿಕೊಳ್ಳುವ ದಡ್ಡತನ
*ಹಾಲ್ಬೇಡಿ ಹರಿದತ್ತ ನೀರ್ಬೇಡಿ ನಿಂದತ್ತ
*ಚಿಕ್ಕವರಿದ್ದಾಗ ಚಿನ್ನಿ ಕೋಲು ಆಡ್ತಿದ್ರು. ಪಕ್ಕ ಪಕ್ಕ ಕೂತು ಪಗಡೆ ಆಡ್ತಿದ್ರು
*ಮಹಾರಾಜರನ್ನ ಮನೆಗೆ ಕರೆಸಿ ಮಂಡಿಗೆಪಾರ್ಟಿ ಮಾಡಿರೋರು
*ತಾತನ್ನ ಕೇಳಿ ತಾಳಿ ಕಟ್ತೀನಿ.
*ಅದು ಅವರ್ಣನೀಯ , ಅಪೂರ್ವ, ಆನಂದ
*ಅಪಾರ ಆಸೆಗಳನ್ನು ಅದುಮಿಟ್ಟುಕೊಂಡು ಅರ್ಥವಿಲ್ಲದ
ಅಳುಕಿನ ಪ್ರಶ್ನೆ ಕೇಳಿದ್ದೀರಿ
*ಐಶ್ವರ್ಯ ಅಂತಸ್ತುಗಳ ಆತಂಕದ ಮಹಿಮೆ ಅರಿತಷ್ಟೂ ಆಳವಾಗಿದೆ
*ಈಜು ಬಲ್ಲೆ ಅನ್ನೋ ಆತ್ಮವಿಶ್ವಾಸವುಳ್ಳವರಿಗೆ
ಆಳದ ಅಂಜಿಕೆ ಅಸ್ವಾಭಾವಿಕವಾಗಿದೆ:
*ಕರ್ತವ್ಯ ? ಇದೇ ಏನು ಕಾಲೇಜಲ್ಲಿ ಕಲಿತಿರೋದು? ಕಂಡ ಕಂಡ ಹೆಣ್ಣು ಮಕ್ಕಳನ್ನು ಕನಸಿನಲ್ಲಿ ಇರಿಸಿಕೊ೦ಡು ಕಡಿವಾಣ ಕಿತ್ತ ಕುದುರೆ ಹಾಗೆ ಕಂಬಿ ಕೀಳೋದು ?
*ಹೊಟ್ಟೆ ಬಟ್ಟೆ ಕಟ್ಟಿ ಚೋಟುದ್ದ ಇದ್ದವನನ್ನ ಈಟುದ್ದ ಮಾಡಿ ಕಲೀಲಿ ಅಂತ ಕಾಲೇಜಿಗೆ ಕಳಿಸಿದ್ರೆ ಕರ್ತವ್ಯ ಉಪದೇಶ ಮಾಡ್ತಿದಾನೆ !
*ತಾತನಿಗೇ ತತ್ವೋಪದೇಶನಾ ?
*ಬಾರಯ್ಯ, ಸನ್ಮಿತ್ರ ಶ್ರೀನಾಥ ! ಓಹೋ , ಶ್ರೀನಾಥ ಶ್ರೀದೇವಿ ಸಮೇತ !!
*ಕಲಗಚ್ಚು ಕುಡಿಯೋ ಕಾಡೆಮ್ಮೆ !
*ಪ್ರೇಮವಿವಾಹದ ಪ್ರಚಂಡ ಪರಿಣಾಮದ ಪರಿಚಯ ಈಗ ಆಗ್ತಾ ಇದೆ.
*ಪ್ರಾಯ ಬಂದ ಕೂಡಲೇ ಪ್ರಪಂಚವನ್ನೇ ಆಳುವ ಪ್ರತಾಪಶಾಲಿಗಳಾದ್ವಿ ಅಂತ ಪುಂಡಾಟಕ್ಕಿಳಿಯೋ ನಿಮ್ಮಂತಹವರಿಗೆ ಪಟ್ಟಣದ ಪುಟ್ಪಾತೇ ಗತಿ.
*ಬೆಲ್ಲದ ನೀರಲ್ಲಿ ಬೆಳೆಸಿದ ಮಾತ್ರಕ್ಕೆ ಬೇವಿನ ಮರದಲ್ಲಿ ಮಾವಿನ ಹಣ್ಣು ಬಿಡುತ್ಯೆ?
*ಅವರು ಕಾಫಿ ಕುಡಿಯಲೇ ಇಲ್ಲ. ಕಹಿಯೆಣ್ಣೆ ಅಂತ ಕೆಳಗಿಟ್ಟುಬಿಟ್ಟರು.
*ತಾನು ಮಾಡಿದ್ದನ್ನ ತಾನೇ ಉಂಡು ತತ್ತರಿಸಲಿ'
*ಅಲ್ಲೇನಾದರೂ ಅಕಸ್ಮಾತ್ ಅವಮಾನ ಆದರೆ
*ಕರೀದೆ ಇರೋ ಕಡೆ ಮರೀದೆ ಹೋದ್ರಂತೆ
*ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿಕೊಂಡು ಕರಕೊಂಡು ಬರ್ತೀನಿ
*ತಲೆಹರಟೆ ತಗೋಂಬಂದು !

ಅಲ್ಲಿನ ಕೆಲವು ಸಂಭಾಷಣೆಗಳು :-
*ಮೊದಲೇ ಮಾತಾಡಿಕೊಂಡು ಮದುವೆ ಮಾಡಿಕೊಂಡರಂತೆ! ಗಂಡ ಹೆಂಡತಿ ಒಬ್ಬರಿಗೊಬ್ಬರು ಮೊದಲು ತಿನ್ನಿಸಿ ಆಮೇಲೆ ತಾವು ತಿನ್ನಬೇಕು.
*ಖಂಡಿತವಾದಿ ಲೋಕವಿರೋಧಿ
*ಮನಸ್ಸನ್ನು ಕಲ್ಲು ಬಂಡೆ ಮಾಡಿಕೊಂಡರೆ ಕಾಲದ ಪ್ರವಾಹ ಎದುರಿಸಬಹುದು
*ಕಣ್ಣು , ಮನಸ್ಸು ನಾಲಗೆಗಳನ್ನು ಯಾವಾಗಲೂ ಹತೋಟಿಯಲ್ಲಿ ಇಟ್ಕೊಂಡು , ಆಸೆಗಳನ್ನ ತಡೆಯೋ ಶಕ್ತಿ ಬೆಳೆಸಿಕೊಳ್ಳುತ್ತ ಹೋದರೆ ಮನಸ್ಸಿನ ಬಲ ಹೆಚ್ಚಾಗುತ್ತ ಹೋಗುತ್ತದೆ ; ತಪ್ಪು ಸರಿ ತಾನಾಗೇ ತಿಳಿಯುತ್ತದೆ. ಸರಿ ಯಾವುದು ಅಂತ ತಿಳಿದ ಮೇಲೆ ಎಂಥ ಕಷ್ಟವಾದರೂ ಅದನ್ನೇ ಅನುಸರಿಸಬೇಕು ಅನ್ನೋ ಧೈರ್ಯ ಬರುತ್ತೆ.
( ಇದಂತೂ ಸೂಪರ್! )

ಶ್ರೀಮಂತನ ಮಗಳನ್ನು ಮದುವೆ ಮಾಡಿಕೊಳ್ಳಬೇಕಾದ ಹಣದ ಅನುಕೂಲವಿಲ್ಲದ ನಾಯಕನಿಗೆ ಸಿರಿತನ ಬಡತನದ ಬಗ್ಗೆ ಆತನ ಹೆಂಡತಿ ಹೇಳುವ
ಇಲ್ಲಿನ ಟೈಟಲ್ ಸಾಂಗ್ ಕೂಡ ತುಂಬ ಚೆನ್ನಾಗಿದೆ. ಅದರ ಸಾಲುಗಳು ನಿಮಗಾಗಿ ಇಲ್ಲಿವೆ

ಸಿರಿತನ ಬೇಕೆ ? ಬಡತನ ಸಾಕೆ ?
ಎನ್ನುತ ಬಗೆ ಬಗೆ ಕೇಳುವರೆ
ಕನ್ನಡ ನಾಡಿನ ಹೆಣ್ಣಿನ ಹೊನ್ಮನ
ಒರೆಯಿಡಬೇಕೆ ? ನನ್ನ ದೊರೆ , ನನ್ನ ದೊರೆ!
ಐಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಬಾಳಿನ ಬಂಡಿ ಎಳೆಯುವ ಕೆಳದಿ
ನಾ ಮನ ಮೆಚ್ಚಿದ ಮಡದಿ
ಮನದಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಸಿಹಿ ಕಹಿಯೆಲ್ಲ ಸಹಿಸಲು ಬಲ್ಲ
ನಾ ಮನ ಮೆಚ್ಚಿದ ಮಡದಿ

ಕುವೆಂಪು ಅವರ 'ಜಯ ಭಾರತ ಜನನಿಯ ತನುಜಾತೆ ' ಹಾಡೂ ಕೂಡ ಇದರಲ್ಲಿದೆ

Rating
No votes yet