ಮ.ಮೋ.ಕಂ.ಚೆಲುವೆ

ಮ.ಮೋ.ಕಂ.ಚೆಲುವೆ

 ಹ್ಮ್... ಕಳೆದ ಆರೇಳು ತಿಂಗಳ ನೋವು. ಹತಾಷೆ, ದುಃಖ, ಓಡಾಟ, ಹೋರಾಟ, ಆಲಸ್ಯ, ಅತೀ ಎನಿಸುವಷ್ಟು ಮಾತು, ಕಿರಿಕಿರಿಯಾಗಿ ಮೊಬೈಲ್ ಎಸೆದು ಬಿಡಬೇಕಿನೆಸುವಷ್ಟು ಫೋನ್ ಕರೆಗಳು, ಬೆಳಗ್ಗೆ ನಿದ್ದೆಯಿಂದ ಎದ್ದಾಗ ಇನ್ನೆಂತಹ ಮೆಸೇಜ್ಗಳು ನೋಡಬೇಕುವುದೋ ಎಂಬ ತಿರಸ್ಕಾರದಿಂದಲೇ ಹಗಲು ರಾತ್ರಿ ಡಿಲೀಟ್ ಮಾಡುತ್ತಿದ್ದ ಮೆಸೇಜ್ಗಳು...

ಜೊತೆಗೆ.. ಮೂರು ತಿಂಗಳಿಂದ ಬಿಡುವಿಲ್ಲದ ಓಡಾಟ, ಕೆಲಸ, ನಿದ್ದೆಯಿಲ್ಲದೆ ಬಳಲಿದ ಕಣ್ಣುಗಳಿಂದಲೇ ಬೆಂಗಳೂರನ್ನೆಲ್ಲಾ ಕಾರಲ್ಲಿ ಸುತ್ತಿಹಾಕಿ,  ಅನಾವಶ್ಯಕ ಎನಿಸಿದ ಮೊಬೈಲ್ ನಂಬರ್ಗಳನ್ನೆಲ್ಲಾ ಡಿಲೀಟ್ ಮಾಡಿ, ಅತೀ ಎನಿಸಿದವರು, ಅತಿಯಾಗಿ ಸಾಂತ್ವನ ಹೇಳಲು ಬಂದವರನ್ನೆಲ್ಲಾ ದೂರ ಇಟ್ಟು, ಸ್ನೇಹದ ಮುಖವಾಡದ ಸ್ನೇಹಿತ/ತೆಯರನ್ನೆಲ್ಲಾ ಹಂತ ಹಂತವಾಗಿ ದೂರ ಮಾಡುತ್ತಾ , ಅನುಭವದ ಪಾಠಗಳ ನೆರಳಿನಲ್ಲಿ ಹೆಜ್ಜೆಗಳನ್ನಿಡಲು ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡು. ಅದನ್ನು ಪಾಲಿಸಲು ಮಾರಕವಾಗುವ ರೂಪಸಿಗಳನ್ನೆಲ್ಲಾ ದೂರತಳ್ಳಿ ,

ಚಿತ್ರ-ವಿಚಿತ್ರಗಳ ಸಂತೆಯಲ್ಲಿ ರಿಲ್ಯಾಕ್ಸ್ ಆಗೋಣ ಅನ್ನೋಷ್ಟರಲ್ಲಿ ನೀನು ಕಂಡೆ.. ಅದೂ ಚಿತ್ರ ಸಂತೆಯಲ್ಲೇ...  ಆಸಂತೆಯ ಗದ್ದಲದಲ್ಲಿ ಯಾರೊಂದಿಗೋ ಫೋನ್ ನಲ್ಲಿ ಮಾತಾಡ್ತಾ ಇದ್ದಾಗ .. ಹಿಂದೆಯಿಂದ ಬಂದು .. "ಸರ್.. ನಿಮ್ಮನ್ನ ಗೋಪಾಲ್ ಸರ್ ಕರೀತಿದಾರೆ" ಅಂತಂದೆ..

ಈ ಕರ್ಕಶ ಕ್ರ್ಯಾಕ್ ಮೈಕ್ ನ ಕಿರಿಕಿರಿ ನಡುವೆ ಕೋಗಿಲೆಯಂತಹ ಕಂಥ ಯಾರದಪ್ಪ ಅಂತ ಅನುಮಾನದಿಂದಲೇ ತಿರುಗಿ ನೋಡಿದೆ (ಅನುಮಾನ ಯಾಕೆಂದರೆ ಈ ಹಿಂದಿನ ಅನುಭವದಲ್ಲಿ ಕೋಮಲ ಕಂಠಕ್ಕೆ ಮರುಳಾಗಿ ಮೋಸ ಹೋದದ್ದರ ಅನುಭವವಿರುವುದರಿಂದ) ನೀಳವಾದ ಕೂದಲು ಗಾಳಿಯ ಸ್ಪೀಡಿಗೆ ಸಂಪದದಲ್ಲಿ ನಡೆಯುವ ಕೆಲವು ಅಸಂಬದ್ದ ಚರ್ಚೆಗಳಂತೆ ಎತ್ತೆತ್ತಲಿಗೋ ಹಾರಾಡುತ್ತಿರುವುದನ್ನು ಹಿಂದಕ್ಕೆ ತೆಗೆದು ಹೇರ್ ಕ್ಲಿಪ್ಪಿನಲ್ಲಿ ಬಂದಿಸಿಡಲು ಹೆಣಗುತ್ತಿದ್ದೆ ನೀನು.

ನಾನು ತಿರುಗಿದೊಡನೆ ಮತ್ತೇರುವಂತ ಕಣ್ಣುಗಳಿಂದ ನನ್ನೆಡೆಗೆ ಮಂದಹಾಸವನ್ನು ಬೀರಿದೆ.

ಮಂದಹಾಸ ಸಿನೆಮಾದವ್ರು ಪ್ರಾಯೋಜಿಸಿದ್ದ ವೈಟ್  ಟೀಶರ್ಟ್ ಮತ್ತು ಬ್ಲೂ ಜೀನ್ಸನಲ್ಲಿದ್ದ ನೀನು ಗೋಪಾಲ್  ಕಡೆಗೆ ಕೈ ತೋರಿಸಿ ’ನಿಮ್ಮನ್ನ ಸರ್ ಕರೀತಿದಾರೆ’ ಅಂತೇಳಿ ತಿರುಗಿ ಕೂಡ ನೋಡದೆ ಹೊರಟು ಹೋದೆ... 

ಈಗಾಗಲೆ ನಿರ್ಧರಿಸಿ ಗಟ್ಟಿ ಮಾಡಿರುವ ಮನಸ್ಸನ್ನು ಎಷ್ಟೇ ಪ್ರಯತ್ನ ಪಟ್ಟರು ನಿನ್ನ ಮಾತುಗಳು, ನಗೆಯನ್ನು ಮರೆಯಲು ಸಾದ್ಯವೇ ಆಗುತ್ತಿಲ್ಲ... ಆಗ ನೀನು ಕರೆದು ತಕ್ಷಣ ಹೊರಟು ಹೋದರು.. ಆನಂತರ ಕೋಮಲ್ ನಿನ್ನನ್ನು ಪರಿಚಯ ಮಾಡಿಕೊಟ್ಟ ಮೇಲೆ ಸರಿಸುಮಾರು ಎರೆಡು ಘಂಟೆಗಳ ಹೊತ್ತು ಮಾತಾಡಿದೆವು. ಆದರೂ ಆ ಫಸ್ಟ್ ಇಂಪ್ರೆಷನ್ ಮರೆಯಲು ಸಾಧ್ಯವೇ ಆಗುತ್ತಿಲ್ಲ.

ನಮ್ಮ ಕಲಾಶಾಲೆಗಳಲ್ಲಿ ಮೊದಲ ಭೇಟಿಯಲ್ಲಿ ಆಗುವ ಕ್ಲೀಷಾತ್ಮಕ  ಚರ್ಚೆಗಳಂತೆ ನಮ್ಮ ಮಾತುಗಳು ಕಲೆಯ ಸುತ್ತಲೇ ಗಿರಕಿ ಸುಮಾರು ಹೊತ್ತು ಹೊಡೆಯುತ್ತಾ, ಕಣ್ಣು ತುಂಬಿ ಕಣ್ಣಿಂದ ಬರೀ ಬಣ್ನಗಳ ಹೊಳೆಯೇ ಹರಿಯುವಷ್ಟು ಚಿತ್ರಗಳನ್ನು ನೋಡುವುದರೊಂದಿಗೆ, ನೋಡುತ್ತಿರುವುದರ ಬಗ್ಗೆ ಚರ್ಚೆ ಮಾಡುತ್ತಿದ್ದಾಗಲೆ ನೀನು ಮತ್ತಷ್ಟು ಆಸಕ್ತಿಯಾಗಿ ಕಾಡಲು ಶುರುವಾಗಿದ್ದು. ನೀನು ಈಗಿನ್ನು ಮೊದಲ ವರ್ಷ!  ಕಾಲೇಜಿಗೆ ರೆಗ್ಯುಲರ್ ವಿಧ್ಯಾರ್ಥಿಗಳಿಗಿಂತಲೂ ರೆಗ್ಯುಲರ್ ಆಗಿ ಬರುವ ನನಗೆ ಚರ್ಚೆಗಳಿಗೆ ಆಸಕ್ತಿಯನ್ನು ಹುಟ್ಟು ಹಾಕುವ ಯಾವ ಜಾಗದಲ್ಲು ನೀನು ನನ್ನ ಕಣ್ಣಿಗೆ ಕಂಡಿರಲಿಲ್ಲ. ಆದರೂ ನೀನು ಚಿತ್ರಗಳನ್ನು ಗ್ರಹಿಸುವ ರೀತಿ ನಿನ್ನನ್ನು ಮತ್ತೆ ಮತ್ತೆ ನೆನೆಯುವಂತೆ ಮಾಡುತ್ತಿದೆ.

ನಿನ್ನೊಂದಿಗೆ ಕಾಫಿ ಕುಡಿಯಲು ಹೋಗೋಣ ಎನ್ನುವಷ್ಟರಲ್ಲಿ ಮೈಕಲ್ಲಿ ನಿನ್ನನ್ನು ಇನ್ಫರ್ಮೇಶನ್ ಡೆಸ್ಕ್ ಹತ್ರ ಬರೋದಿಕ್ಕೆ ಹೇಳಿದ ತಕ್ಷಣ ನೀನು ನನ್ನ ನಂಬರ್ ತಗೊಂಡು ಹೊರಟೇ ಬಿಟ್ಟೆ. ಅದಾದ ಬಳಿಕ ಸುಮಾರು ಹೊತ್ತು ಕಾದು, ಇನ್ಫರ್ಮೇಶನ್ ಡೆಸ್ಕ್ ಹತ್ರ ವಿಚಾರಿಸೋಣ ಎಂದು ಬರೋಹೊತ್ತಿಗೆ ಅನ್ ನೋನ್ ನಂಬರ್ರಿಂದ ಮೆಸೇಜ್ ಬಂತು. ಡ್ಯಾಡಿ ಜೊತೆ ಅರ್ಜೆಂಟ್ ಮನೆಗೆ ಹೋಗ್ತಾ ಇದೀನಿ. ಎರಡು ದಿನ    ಕಾಲೇಜಿಗೆ ಬರೋದಿಲ್ಲ  ವೆಡ್ನೆಸ್ ಡೇ ಮೀಟ್ ಆಗೋಣ  ಅಂತ.

ನನಗೆ ಬುದುವಾರ ಬರೋದಿಕ್ಕೆ ಸಾಧ್ಯವಾಗೋದಿಲ್ಲ  ಅಂತ ರಿಪ್ಲೇ ಕೊಡಬೇಕೆನಿಸಿದರೂ ಕೊಡಲಾಗದೆ...  ಕನ್ಫ್ಯೂಶನ್ ನಲ್ಲ್ಲೇ ಒದ್ದಾಡ್ತಾ ಇದೀನಿ...

ನಾಳೆಯ ಬುದುವಾರದಂದು ಮತ್ತೆ ’ಮತ್ತೇರಿಸುವ ಮೋಹಕ ಕಂಗಳ ಚೆಲುವೆಯ” ಭೇಟಿಯ ನಿರೀಕ್ಷೆಯಲ್ಲಿ.....

 

ಮಂಸೋರೆ.

 

Rating
No votes yet

Comments