ಮರಳಿ ನೆನಪಿಗೆ..

ಮರಳಿ ನೆನಪಿಗೆ..

ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ ನನ್ನ ಕೆಲಸದ ರೀತಿ ರಿವಾಜುಗಳನ್ನರಿತ ನನ್ನ ಮ್ಯಾನೇಜರ್ ನನಗೆ ರಜೆ ಅಂತ ಕೊಡದಿದ್ದರೂ, ಇಂಟರ್ನೆಟ್ ನೆಟ್ವರ್ಕ್ ಇರುವಂಥ ಜಾಗದಿಂದ ಕುಳಿತು ಕೆಲಸ ಮಾಡಲು ಅನುಮತಿ ನೀಡಿದ್ದಳು. ಒಂದೇ ವಾರದಲ್ಲಿ ಮೂರು ಮದುವೆ ಇದ್ದ ಕಾರಣ ನಾಲ್ಕು ದಿನಗಳ ಮುಂಚೆಯೇ ನಮ್ಮೂರ ಕಡೆ ಧಾವಿಸಿದ್ದೆ. ಮಾವನ ಮನೆ ಇರುವುದು ತೀರ್ಥಹಳ್ಳಿಯಲ್ಲಿ. ಅಲ್ಲೇ ಕುಳಿತು ಸಂಜೆಯ ನಂತರ ಅಮೇರಿಕ ಕಚೇರಿ ವೇಳೆಯಲ್ಲಿ ಕೆಲಸ ಮಾಡಬೇಕಿತ್ತು. ಕೊಟ್ಟ ಮಾತಿನಂತೆ ಪ್ರತಿ ಸಂಜೆಯೂ ಸಹ ೫:೩೦ ರ ವೇಳೆಗೆ ಕೆಲಸ ಶುರು ಹಚ್ಚಿ ಬೆಳಗಿನ ಜಾವ ೩:೩೦ ರ ವರೆಗೂ ಕೆಲಸ ಮಾಡಿ ಮಲಗಬೇಕು ಅನ್ನುವಷ್ಟರಲ್ಲಿ ಮದುವೆಯ ಸಡಗರದ ಗಲಾಟೆ ಮನೆಯಲ್ಲಿ ಶುರುವಾಗುತ್ತಿತ್ತು. ಅದೂ ಅಲ್ಲದೆ ಮದುವೆ  ಅಂದ ಮೇಲೆ ನೂರು ಜನ ನೆಂಟರು ಬಂದು ಹೋಗುವುದು ನಮ್ಮೂರ ವಾಡಿಕೆ. ಮದುವೆ  ಅಂದರೆ ಒಂದು ಹಬ್ಬವೇ ಸರಿ. ಇಂಥ ಸಮಯದಲ್ಲಿ ನಾನೊಬ್ಬ ಅಲ್ಲಿ ಮಲಗಿರುವುದು ನನಗೆ ತೀರ ಮುಜುಗರವೆನೆಸಿ, ನಿದ್ದೆಯೂ ತಡೆಯಲಾರದೆ ಕಸಿವಿಸಿ ಪಡುವ ಸಮಯ. ಹೀಗಿದ್ದಾಗ ನೆನಪಾಗಿದ್ದು ನನ್ನಜ್ಜನ ಮನೆ. ಅಮ್ಮ ಹುಟ್ಟಿ ಬೆಳೆದ ಮನೆ, ಅಮ್ಮ ಮಾತ್ರವಲ್ಲ ನಾನು ಹುಟ್ಟಿದ್ದು ಅಲ್ಲಿಯೆ. ಕುವೆಂಪು ಹುಟ್ಟಿದ್ದ ಕುಪ್ಪಳಿಯಿಂದ ೧೦ ೧೨ ಕಿಲೋಮೀಟರು ಇರಬಹುದು.. ಅನಂತಮೂರ್ತಿ ಅವರ ಮೇಳಿಗೆ ಅಜ್ಜನ ಮನೆಗೆ ೪ ರಿಂದ ೫ ಕಿಲೋಮೀಟರು ಅಷ್ಟೇ. ಹೆಸರು ನಗಡವಲ್ಲಿ. ಜ್ನಾನಪೀಠ ಪಡೆದ ಇಬ್ಬರು ಕವಿಗಳು ಹುಟ್ಟಿ ಬೆಳೆದ ಊರಿನಲ್ಲಿ ನಾನು ಹುಟ್ಟಿದ್ದು ಅಂತ ಭಾವಿಸಿದಾಗಲೆಲ್ಲ ಒಂಥರದ ರೋಮಾಂಚನವಾಗುತ್ತದೆ. ಅಜ್ಜನಲ್ಲದ ಮಾವ ಕೂಡ ತೀರ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿದ್ದರು.   ಅದರ ನಂತರ ಅಜ್ಜನ ಮನೆ ಕದೇ ಹೋಗಿರಲಿಲ್ಲ ಆಗಾಗ ಕರೆ ಮಾಡುತ್ತಿದ್ದ ಮಾವನ ಮಗ ಮತ್ತೆ ಅಜ್ಜಿ 'ಹುಟ್ಟಿದ ಮನೆಯನ್ನೂ ಮರೆತೆಯಾ ಮಾಣಿ'? ಅಂತ ಹೇಳಿದಾಗಲೆಲ್ಲ 'ಖಂಡಿತ ಈ ಸಾರಿ ಮನೆಗೆ ಬಂದಾಗ ಬರುತ್ತೇನೆ ಅಂತ ಹಾರಿಕೆಯ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಈಸಾರಿ ನಿದ್ದೆ ಮಾಡೋಕೆ ನೆನಪಾಗಿದ್ದು ಅಜ್ಜನ ಮನೆ. ಮಾವನ ಮನೆಯಲ್ಲಿ ಅಜ್ಜನ ಮನೆ ಕಡೆ ಹೋಗಿ ಬರುವುದಾಗಿ ತಿಳಿಸಿ ತೀರ್ಥಹಳ್ಳಿಯಿಂದ ಅಜ್ಜನ ಮನೆಯ ಹತ್ತಿರದ ಬಳಗಟ್ಟೆ ಕಡೆಯ ಬಸ್ ಹತ್ತಿದೆ. ಹೆಚ್ಚು ಕಮ್ಮಿ ಇಪ್ಪತ್ತು ನಿಮಿಷದ ದಾರಿ. ಅಜ್ಜನ ಮನೆಯಲ್ಲಿಯೇ ಇದ್ದು ಒಂದು ವರ್ಷ ಓದಿದ್ದರಿಂದ ಆ ದಾರಿ ನನಗೆ ತೀರ ಪರಿಚಿತವಾದದ್ದು. ತುಂಗಾ ನದಿಯ ಕಮಾನು ಸೇತುವೆಯ ಮೂಲಕ ಹಾದುಹೋಗುವ ದಾರಿ ಒಮ್ಮೆ ನನ್ನ ಪ್ರೌಢ ಶಾಲಾ ದಿನಗಳನ್ನು ನೆನಪಿಸಿತ್ತು. ಇಯರ್ ಫೋನ್ ಕಿವಿಯಲ್ಲಿ ತೂರಿಸಿ ಯಾವುದೋ ಹಾಡು ಕೇಳಿ ಮುಗಿಸುವಷ್ಟರಲ್ಲಿ ಬಳಗಟ್ಟೆ ಬಂದಿತ್ತು. ಇಳಿಯುತ್ತಲೇ ಕಾಣುತ್ತಿದ್ದ ಕೇಸರಿ ಬಣ್ಣ ಹೊಡೆದ ಕಲ್ಲಿನ ಬಸ್ ಸ್ಟಾಂಡ್ ಅಲ್ಲಿರಲಿಲ್ಲ.. ಯಾರೋ ಕಿತ್ತು ಅಲ್ಲಿಯ ಜಾಗವನ್ನು ಮಟ್ಟ  ಮಾಡಿ ಮನೆಯೋ ಅಂಗಡಿಯೋ ಕಟ್ಟಲು ತಯಾರಿ ನಡೆಸಿದ್ದರು.

ಬಸ್ ಸ್ಟ್ಯಾಂಡ್ ಕಿತ್ತ ಮಾತ್ರಕ್ಕೆ ಅದರ ಪಾದದಲ್ಲಿಯೇ ಹರಿಯುತ್ತಿದ್ದ ಹಳ್ಳವ ನಿಲ್ಲಿಸಲು ಸಾಧ್ಯವೇ? ತಾನಾಗಿಯೇ ಬೀಸಿದ ಗಾಳಿ ಬಾಯಾರಿದ ಮನಸ್ಸಿಗೆ ನೀರನೆರೆದಿತ್ತು. ಇಯರ್ ಫೋನ್ ಕಿತ್ತು ಜೇಬಿಗೆ ಸೇರಿಸಿದೆ. ಹಳ್ಳದಲ್ಲಿ ಹರಿಯುತ್ತಿದ್ದ ನೀರಿನ ಸದ್ದು ನನ್ನ ಕೈ ಹಿಡಿದೆಳೆದಿತ್ತು. ಹಳ್ಳದ ಪುಟ್ಟ ಸಿಮೆಂಟ್ ಸೇತುವೆಯ ದಾಟುತ್ತಿದ್ದಂತೆಯೇ ನನ್ನ ಕರೆದದ್ದು ಅದೇ ವಿಶಾಲ ಭತ್ತದ ಗದ್ದೆಗಳು. ಅದೆಷ್ಟು ವಿಶಾಲ ಅನ್ನುವುದು ಇಲ್ಲಿ ವರ್ಣಿಸಲಾಗದ್ದು. ಸಮುದ್ರ ಅಂತ ಹೇಳುವುದಾದರೆ, ಭತ್ತದ ಸಮುದ್ರ ಅನ್ನಬಹುದೇನೋ. ಅಷ್ಟು ದೊಡ್ಡದು. ಮಳೆಗಾಲ ಕಳೆದು ಮಾಗಿಯ ಚಳಿ ಬಿಸಿಲು ಎರಡರ ಹಗ್ಗ ಜಗ್ಗಾಟದ ನಡುವೆ ಹಸಿರಿದ್ದ ಭತ್ತದ ಪೈರು ಬಂಗಾರದ ಬಣ್ಣಕ್ಕೆ ತಿರುಗಿದ್ದವು. ಬೀಸುವ ಗಾಳಿಗೆ ಗದ್ದೆ ಏರಿಯ ಇಕ್ಕೆಲದಲ್ಲೂ ನೆಟ್ಟಿದ್ದ ಭತ್ತದ ಸಸಿಗಳು ತಲೆದೂಗಿ ಜಪಾನಿ ದೇಶದ ಜನರ ಹಾಗೆ ತಲೆ ಬಾಗಿ ನನ್ನ ಸ್ವಾಗತಿಸುವಂತೆ ಭಾಸವಾಗಿತ್ತು. ಅದು ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್ ಸಿನಿಮಾ ನೋಡಿ ಕಲಿತದ್ದೇನಲ್ಲ. ಅದ್ಯಾಕೂ ಎರಡೂ ಕೈಗಳೂ ನನ್ನ ಅರಿವಿಗೆ ಬರದ ಹಾಗೆ ಭತ್ತದ ತೆನೆಯ ಸ್ಪರ್ಶಿಸಿದ್ದವು.. ತೆನೆಯ ತುದಿಯಲ್ಲಿ ಬಲಿತು ಕೊಯಿಲಿಗೆ ಸಿದ್ಧವಾಗಿ ನಿಂತ ಭತ್ಟದ ತೆನೆ ಅಕ್ಷರಶಃ ನನ್ನ ಅಂಗೈಗೆ ಕಚಗುಳಿಯಿತ್ತಿದ್ದವು. ಗದ್ದೆಯ ದಾಟುತ್ತಿದ್ದಂತೆಯೇ ಇನ್ನೊಂದು ಗದ್ದೆ ಸೇರಲು ಜೇಡಿಗಣಿಯ ಮರದ ಸೇತುವೆ ದಾಟುತ್ತಿದ್ದುದು ನೆನಪಿಗೆ ಬಂತು. ಚಿಕ್ಕವನಾಗಿದ್ದಾಗ ನಾನು ಆ ಮರದ ತೂಗು ಸೇತುವೆಯಲ್ಲಿ ತೆವಳುತ್ತಿದ್ದುದು ಇನ್ನೂ ನೆನಪಿದೆ. ಆದರೆ ಇಂದು ಆ ಸೇತುವೆ ಸಿಮೆಂಟ್ ಸೇತುವೆಯಾಗಿ ಮಾರ್ಪಟ್ಟಿತ್ತು. ಹೆದರಿ ನಡೆಯುವ ಅಗತ್ಯವಿರಲಿಲ್ಲ. ಹೆದರಿಕೆಯೊಂದಿಗೆ ಬೆರೆಯುತ್ತಿದ್ದ ಆ ರೋಮಾಂಚನವು ಇಂದು ಇರಲಿಲ್ಲ.

ಕಾಲ ಎಷ್ಟ್ ಬೇಗ ಬದಲಾಗುತ್ತೆ ಅಂತ ಮನಸಲ್ಲೇ ಅಂದ್ಕೊಂಡು ಸೇತುವೆ ದಾಟುತ್ತಲೇ ಇನ್ನೊಂದು ಗದ್ದೆ. ನಾಲ್ಕು ವರ್ಷಗಳ ಹಿಂದೆಗಿಡವಾಗಿದ್ದ ಅಕೇಶಿಯ ಸಸಿಗಳು ಇಂದು ಮರವಾಗಿ ಸಣ್ಣ ಕಾಡಾಗಿತ್ತು. ಬಿಸಿಲು ಬಿದ್ದು ಬಾಡುತ್ತಿದ್ದ ಜಾಗದಲ್ಲಿ ಸಣ್ಣ ಕಾಡು ನೋಡಿಮಲೆನಾಡು ಒಂದು ಸೋಜಿಗವೆ ಸರಿ ಅಂತ ನನ್ನಲ್ಲಿ ನಾನೇ ಮುಗುಳ್ನಕ್ಕು ಮುಂದೆ ಸಾಗಿದೆ. ಮತ್ತೆ ಭತ್ತದ ಸಾಗರ, ಗದ್ದೆಯ ಮಧ್ಯದಲ್ಲಿದ್ದಪುಟ್ಟ ಕೊಳವನ್ನು ದಯಮಾಡಿ ಯಾರು ಮುಚ್ಚಿರಲಿಲ್ಲ. ಆ ಗದ್ದೆಗೆ ಅದೇ ಒಂದು ಮೆರುಗು ತರುವಂತಾದ್ದು. ಕೊಳದ ಪಕ್ಕದಲ್ಲಿ ಒಂದುಗೂಡು ದೀಪದಂಥ ಬೆಳಕಿನ ಪೆಟ್ಟಿಗೆ, ಹುಳಗಳು ಭತ್ತವನ್ನು ತಿನ್ನದಂತೆ ಬೆಳಕಿಗೆ ಬಂದು ಕೂರುವ ಹಾಗೆ ಮಾಡಿದ ವ್ಯವಸ್ತೆ ಇಂದಿಗೂ ಹಾಗೆಇತ್ತು. ಪರ್ವಾಗಿಲ್ಲ ಇನ್ನೂ ಈ ಊರು ಹೀಗೆ ಉಂಟಲ್ಲ ಅಂತ ಮುಂದೆ ಹೋದಾಗ ಮುಂಚೆ ಇದ್ದ ಹಾಗೆ ಗದ್ದೆಗಳಿರಲಿಲ್ಲ.. ಭತ್ತದ ಗದ್ದೆಗಳುರಬ್ಬರ್ ಸಸಿಗಳ ಆಕ್ರಮಣಕ್ಕೆ ಕಾಲ್ಕಿತ್ತಿದ್ದವು. ರೈತರೂ ಲಾಭದ ಆಸೆಗೆ ಬಿದ್ದು ಅನ್ನವನ್ನು ಕಡೆಗಣಿಸಿದ್ದಾರೆ ಅಂತ ಆ ಕ್ಷಣಕ್ಕೆ ಅನಿಸಿದರೂ,ಪ್ರಸ್ತುತ ವ್ಯವಸ್ಥೆಗೆ ಸರಿಯಾಗಿಯೇ ಜೀವಿಸುತ್ತಿದ್ದಾರೆ ಅನ್ನುವುದು ಒಪ್ಪಿಕೊಳ್ಳಲೇಬೇಕಾಯಿತು. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಸಿಕ್ಕಿದುದುಅದೇ ಮಾವು ಹಾಗೂ ಹುಣಸೆ ಹೆಮ್ಮರಗಳು. ಮೊದಲೆಲ್ಲ ಚಿನ್ನಿ ದಾಂಡು, ಕ್ರಿಕೆಟ್ ಆಡಬೇಕಾದ್ರೆ ಹೊಡೆದ ಚೆಂಡು ಆತವಾ ಚಿನ್ನಿ ಮರಕ್ಕೂಎತ್ತರ ಹೋದರೆ ಅವ ಭಾರೀ ದಾಂಡಿಗ ಅಂತ ನಾವೇ ಮಾಡಿಕೊಂಡಿದ್ದ ಕಟ್ಟುಪಾಡಿಗೆ ಸಾಕ್ಷಿಯಾಗಿ ನಿಂತಿದ್ದ ಮರಗಳು. ನಮ್ಮ ಅಡ್ಡಬಡಿಗೆ ಪೆಟ್ಟು ತಿಂದು ಅದೆಷ್ಟು ಶಾಪ ಹಾಕಿದ್ದವೋ ಈ ಮರಗಳು.. ಹಸಿಮಾವು ಉಪ್ಪು ಮೆಣಸಿನ ಪುಡಿ, ಮಾಗಿದ ಹುಣಿಸೆ ಉಪ್ಪುಮೆಣಸಿನ ದಿನಗಳು ಒಣಗಿದ ನಾಲಿಗೆಯಲ್ಲೂ ನೀರು ಬರಿಸಿದವು. ಇಂದು ಬರುವ ಬದಲು ಮಾರ್ಚ್ ಏಪ್ರಿಲ್ ಲಿ ಬರಬಾರದಿತ್ತೆ ಅಂತಅನಿಸಿತು. ಹೋಗ್ಲಿ ಬಂದಾಯ್ತಲ್ಲ ಅಂತ ಅಜ್ಜನ ಮನೆಯ ಗೇಟ್ ಕಡೆ ಮುಖ ಮಾಡಿದೆ; ಅಂದು ಇದ್ದ ದೊಡ್ಡ ಅಲ್ಯೂಮಿನಿಯಂ ಡಿಶ್ಇರಲಿಲ್ಲ, ಆದರೆ ಅಂದು ಇದ್ದ ಬೃಹತ್ ಅಶ್ವತ್ತನ ಮರ ಇಂದು ಹಾಗೆ ಇತ್ತು.. ಕಟ್ಟೆಯ ಕಲ್ಲುಗಳು ಒರಲೆಯ ದಾಳಿಗೆ ಪುಡಿಗಟ್ಟಿ ಜಾರಿನೆಲದ ಕಡೆಗೆ ಮುಖ ಮಾಡಿದ್ದವು. ಅಶ್ವತ್ತನ ಮರ ಮೊದಲಿನಂತೆ ನಳ ನಲಿಸುತ್ತಿಲ್ಲ, ಅರ್ಧ ಮರ ಬಾಡಿ ಅರ್ಧ ಮರ ಸ್ವಲ್ಪ ಹಸಿರಿತ್ತು.ಪಕ್ಕದಲ್ಲ್ಲಿಯ ರಂಜದ ಮರ, ಬಿಲ್ವಪತ್ರೆಯ ಮರಗಳು ಕಣ್ಣಿಗೆ ಗೋಚರಿಸಲಿಲ್ಲ. ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಚಿಕ್ಕವರಿದ್ದಾಗ ಈ ಮರದಕೆಳಗೆ ಸ್ಪರ್ಧೆಯಲ್ಲಿ ಹೂ ಹೆಕ್ಕಿ ಹಾರ ಪೋಣಿಸುತ್ತಿದ್ದರಂತೆ, ರಂಜದ ಹೂವಿನ ಪರಿಮಳ ಹೇಳಿ ವರ್ಣಿಸಲಾಗದ್ದು, ಅದರ ಪರಿಮಳಆಸ್ವಾದಿಸಿದವನಿಗೆ ಗೊತ್ತು. ಗೇಟ್ ದಾಟಿದ್ದೆ, ಅವತ್ತಿದ್ದ ಜೋಕರ್, ಮರಿ ನಾಯಿಗಳು ಇಂದಿರಲಿಲ್ಲ.. ಅವು ಅಂದೆ ಅಳಿದು ಹೋಗಿದ್ದವು..ಇವತ್ತು ಅವುಗಳ ಮುಂದಿನ ಪೀಳಿಗೆಯ ಎರಡು ನಾಯಿಗಳು ಬೊಗಳುತ್ತಾ ನನ್ನ್ನ ಬಳಿ ಬಂದವು.. ನಾಯಿ ಬೊಗಳುತ್ತಾಲೆ ಅಜ್ಜಿ ಮಾವನಮಗ ಅತ್ತೆ ತಂಗಿ ಎಲ್ಲರೂ ಹೊರ ಬಂದು.. 'ಲೆ, ನಿಲ್ಲಿಸಿರೋ.. ಅದು ನಮ್ಮ ರಕ್ಷಿತ' ಅಂತ ನಾಯಿಗಳಿಗೆ ಗದರಿ ನನ್ನನ್ನುಬರಮಾಡಿಕೊಂಡರು. ಮಗ ತೀರಿ ಪುತ್ರವಿಯೋಗದ ನೋವಿನಲ್ಲೂ ಅಜ್ಜಿಯ ಕಣ್ಣಿನಲ್ಲಿದ್ದ ಮೊಮ್ಮಕ್ಕಳ ಮೇಲಿನ ಪ್ರೀತಿ ಸ್ವಲ್ಪವೂ ಕಮ್ಮಿಆಗಿರಲಿಲ್ಲ. ಪ್ರೀತಿ ಅದೆಷ್ಟು ವಿಚಿತ್ರ ಅಲ್ವಾ? 'ಇಷ್ಟು ದಿನ ಆದ್ಮೇಲೆ ನಮ್ಮ ನೆನಪಾಯ್ತೇನೋ ನಿನಗೆ, ಸಾವುಕಾರ' ಅಂತ ಹುಸಿಕೋಪತೋರಿದ ಅಜ್ಜಿ, ಕುಡಿಯಲು ಕೊಟ್ಟ ಬೆಲ್ಲದ ಕಾಫಿಯ ರುಚಿ ಸ್ವಲ್ಪವೂ ಬದಲಾಗಿರಲಿಲ್ಲ. ಮಲೆನಾಡ ನೆರಳಲ್ಲಿ ಬೆಳೆದು ಮುಚ್ಚಿಗೆ ಮನೆಯಲ್ಲಿಮಾಡಿದ ಕಾಫಿ ಸೊಗಡು ಅನುಭವಿಸಿದವ ಮಾತ್ರ ಬಲ್ಲ.
ಕಾಫಿ ಕುಡಿದು ಎಲೆ ಅಡಿಕೆ ತಂಬಾಕು ಬಾಯಲ್ಲಿರಿಸಿ ಮನೆಯ ಮುಚೆಕಡೆಯನ್ನೊಮ್ಮೆ ದಿಟ್ಟಿಸಿದೆ.. ತೀರಿಹೋದ ಅಜ್ಜನ ಫೋಟೋ ಒಳಗೆನೀರು ನುಗ್ಗಿ ಅಜ್ಜನ ಕಪಾಲು, ಕಣ್ಣು, ಎಲೆ ಅಡಿಕೆ ಜಗಿದು ಕೆಂಪಾದ ತುಟಿ, ಮೀಸೆ, ಬಿಳಿಗಡ್ಡ ಚಿಗುರುತ್ತಿದ್ದ ಗಲ್ಲ ಎಲ್ಲವೂ ಅರ್ಧರ್ಧ ಅಳಿಸಿಹೋಗಿದ್ದವು. ಅಜ್ಜನ ನೆನಪು ಸಹ ಮಾವ ತೀರಿಹೋದ ಮೇಲೆ ಅರ್ಧ ಅಳಿದು ಹೋಗಿತ್ತು. ಮಾವನ ಸಾವು ಮನೆಯ ಮನದಲ್ಲಿ ಮಾಸದೇಉಳಿದಿತ್ತು. ಅಜ್ಜನ ಫೋಟೋ ಪಕ್ಕದಲ್ಲಿದ್ದ ಸ್ವಿಸ್ ಮೇಡ್ ಬಿಳಿ ಲೋಲಕದ ಐವತ್ತು ವರ್ಷದ ಹಿಂದಿನ ಗಡಿಯಾರ ಮಾತ್ರ ಯಾರು ಬಂದುಹೋದರೂ ನಿಲ್ಲದೆ ಸಾಗಿತ್ತು. ಲೋಲಕದ ಕ್ಲಿಕ್ ಕ್ಲಾಕ್ ಸದ್ದು ಬಾಲ್ಯದ ಅದೇ ಮನೆಯ ಗತ ವೈಭವವನ್ನು ಕಣ್ಣು ಮುಂದೆ ತಂದು ನಿಲ್ಲಿಸಿತು.
 

ಅಜ್ಜನ ಮನೆಯಲ್ಲಿ ನನಗಿಷ್ಟವಾದ ಜಾಗ ಅಂದರೆ ಮಧ್ಯದ ಉದ್ದದ ಕೋಣೆ, ದೇವರ ಕೋಣೆ, ಕಪ್ಪು ಮಸಿ ಹಿಡಿದು ಸಾಂಭಾರುಪದಾರ್ಥಗಳು ತಮ್ಮ ಪರಿಮಳವ ಸೂಸುತ್ತಿದ್ದ ಅಡುಗೆ ಮನೆ. ಅಗಾಧ ಭತ್ತದ ಪೈರಿನ ಸುಗ್ಗಿಯಿಂದ ಸಿಂಗಾರಗೊಂಡಿದ್ದ ಹೊಸ್ತಿಲನ್ನು ತಲೆ ಬಗ್ಗಿಸಿ ದಾಟಿದ್ದೆ. ತೀರಾ ಸಣ್ಣ ಹೊಸ್ತಿಲ ದ್ವಾರ ಈ ಮನೆಯ ವಿಶೇಷ. ಮನೆಗೆ ಹೊಸದಾಗಿ ಬರುವವರೆಲ್ಲ ಬಗ್ಗಿ ನಡೆಯದೆ ತಲೆಗೆ ಹೊಡೆಸಿಕೊಂಡು ಅದಕ್ಕೆ ಬಯ್ದುಕೊಂಡದ್ದುಂಟು. ಇದೆಲ್ಲ ಪದೇ ಪದೇ ನೋಡಿ ನಕ್ಕು ಅಜ್ಜಿಯನ್ನೊಮ್ಮೆ ಕೇಳಿದ್ದಾಗ ಅದಕ್ಕವರು  ಮನೆಯ ಹೊಸ್ತಿಲನ್ನು ಎಲ್ಲರೂ ಬಗ್ಗಿಯೇ ದಾಟಬೇಕೆಂಬುದು ಬ್ರಾಹ್ಮಣ ಕುಟುಂಬದ ಆಚರಣೆ, ಅದು ಮನೆಗೆ ಸಲ್ಲಬೇಕಾದ ಗೌರವ. ನಮ್ಮನ್ನೆಲ್ಲ ರಕ್ಷಿಸಿ ಪ್ರೀತಿಸಿ ಸೂರು ಕೊಡುವ ಮನೆಗೆ ಎಲ್ಲರೂ ತಲೆತಗ್ಗಿಸಿ ಗೌರವಿಸಲೇಬೇಕು" ಅಂದೆದ್ದಿದ್ದು ನೆನಪಾಯಿತು.

ಅಡುಗೆ ಮನೆಗೆ ಹೋಗಿ ನೆಲದ ಮೇಲೆ ಕಾಲು ನೀಡಿ ಕುಳಿತು ನಿಟ್ಟುಸಿರು ಬಿಟ್ಟಾಗ ಅದೆಂತದೂ ಒಂದು ಸಮಾಧಾನ. ನೀರವ ಮೌನದನಡುವೆಯೂ ಹೇಳಲಾಗದ ಒಂದು ನೆಮ್ಮದಿ. ಹಳೆಯ ದಿನಗಳನ್ನು ಕುಳಿತಾಗ ಹೆಬ್ಬೆರಳಿಗೆ ಮುಳ್ಳು ಚುಚ್ಚಿದಂತಾಯಿತು. ಸ್ವಗತಕ್ಕೆ ಮರಳಿಸಿದ್ದು ಪುಟ್ಟ ಮುದ್ದು ಬೆಕ್ಕಿನ ಮರಿ. ಅಜ್ಜಿಗೆ ಕೇಳಿದಾಗ, ಅಮ್ಮ ಎಲ್ಲಿ ಹೋಯಿತೋ ಗೊತ್ತಿಲ್ಲ ಮಾರಾಯ, ಇದಕ್ಕೆ ಮಾತ್ರಮನುಷ್ಯರಂದರೆ ಆಸೆ, ಯಾವಾಗಲೂ ಆಟವಾಡುತ್ತದೆ.. ಮನೆಗೆ ಯಾರಾದರೂ ಬಂದ್ರೆ ಭಾರೀ ಖುಷಿ ಅದಕ್ಕೆ ನೋಡು' ಅಂತಿದ್ದಂತೆಅದರ ಕಡೆ ದಿಟ್ಟಿಸಿದೆ. ಪುಟ್ಟ ಹುಲಿಮರಿಯಂತೆಯೆ ಮೈ ಮೇಲೆಲ್ಲಾ ಪಟ್ಟೆಗಳು, ಪುಟ್ಟ ಹಸಿರು ಕಂಗಳು, ಕಂಗಳಲ್ಲಿ ಪ್ರೀತಿಯೋ,ತುಂಟತನವೋ, ಮುಗ್ಧತೆಯೋ ಅದೇನೋ ಅರ್ಥವಾಗಲಿಲ್ಲ. ಪಕ್ಕದಲ್ಲೇ ಇಟ್ಟಿದ್ದ ತೆಂಗಿನ ಹಿಡಿಯ ಕಡ್ಡಿಯೊಂದನ್ನು ತೆಗೆದು ಆಚೀಚೆಆಡಿಸಿದಾಗ ಅದರ ಹಿಂದೆಯೇ ಪುಟ ಪುಟ ಅಂತ ಮಿಂಚಿನಂತೆ ಕುಣಿಯುವ ಹತ್ತಿಯುಂಡೆ.

ಹದಿಮೂರು ವರ್ಷಗಳ ಹಿಂದೆ ಇಲ್ಲಿದ್ದು ಓದುವಾಗಲೂ ಹೀಗೆಯೇ, ಕರಿ ಹಿಡಿದ ಅಡುಗೆ ಮನೆಯ ದಂಡೆಯ ಮೇಲೆ ಕುಳಿತು ಮಳೆಗಾಲದಧೋ ಅಂತ ಸುರಿಯುವ ಮಳೆಯ ಥಂಡಿಯ ಚಳಿ ಮಧ್ಯೆ ಚಿಟಿ ಚಿಟಿ ಅಂತ ಸದ್ದು ಮಾಡುತ್ತಾ ಉರಿಯುತ್ತಿದ್ದ ಕಟ್ಟಿಗೆಯ ಪಕ್ಕದಲ್ಲೇ ಕೂತುಚಳಿ ಕಾಯಿಸುತ್ತಾ ಬೆಕ್ಕಿನೊಂದಿಗೆ ಆಡುತ್ತಿದ್ದಾಗ ನನಗೆ ಪ್ರಪಂಚದ ಆಗು ಹೋಗುಗಳು ಗೊತ್ತಾಗುತ್ತಿರಲಿಲ್ಲ. ಕಳೆದ ಆ ದಿನಗಳು ಕೊಟ್ಟಖುಷಿಯನ್ನು ಬೆಕ್ಕಿನೊಂದಿಗೆ ಆಡುತ್ತಾ ಮೆಲುಕು ಹಾಕುತ್ತಿರುವಾಗಲೇ ಅಜ್ಜಿ ಟವೆಲ್ ತಂದುಕೊಟ್ಟು ಹೋಗು ಸ್ನಾನ ಮಾಡು ಹಂಡೆ ನೀರುಬಿಸಿ ಇದೆ ಅಂತ ಅಲ್ಲಿಂದ ಎಬ್ಬಿಸಿದರು. ಬಚ್ಚಲ ಮನೆಗೆ ಮನೆಯ ಹಿತ್ತಲ ಚೌಕಿಯಿಂದಲೇ ಸಾಗಬೇಕು. ಸಣ್ಣಲಿರಬೇಕಾದರೆ ಜೀ ಹಾರರ್ಶೋ ನೋಡಿದ ದಿನವೆಲ್ಲಾ ಈ ಕತ್ತಲ ಚೌಕಿ ನೆನೆದೆ ನಾನು ಬಚ್ಚಲ ಮನೆಗೆ ರಾತ್ರಿ ಹೋಗುತ್ತಿರಲಿಲ್ಲ. ಚೌಕಿ ಬದಲಾಗಿರಲಿಲ್ಲ, ಸೂರನ್ಕಲಿಗೆಸಮನಾಗಿ ಪೇರಿಸಿಟ್ಟ ಸದಾಪು,ಸೇವಂತಿಗೆ, ಪುದೀನಾ, ಸಂಭಾರು, ಮಲ್ಲಿಗೆ ಗಿಡಗಳು ಎಂದಿನಂತೇ ನಳನಳಿಸುತ್ತಿದ್ದವು. ಒರಲೆ ಹಿಡಿದುಅರ್ಧ ಕಿತ್ತ ಮಣ್ಣಿನ ಗೋಡೆ ಇಂದಿಗೂ ಗಟ್ಟಿಯಾಗಿಯೇ ನಿಂತಿತ್ತು. ಮಳೆಗಾಲದಲ್ಲಿ ಕೂಡಿಡುತ್ತಿದ್ದ ಚಪ್ಪರದ ಬಾರಾಟಿಗೆ, ದಬ್ಬೆಗಳು ಮಾತ್ರಅಂಗಳದಲ್ಲಿ ಚೊಗರು ಹಚ್ಚಿದ ಮಲೆನಾಡ ಅಡಿಕೆಯ ತಮ್ಮೆದೆಯ ಹೊತ್ತು ರಾರಾಜಿಸುತ್ತಿದ್ದವು. ದಬ್ಬೆ ಮೊದಲಿದ್ದ ಜಾಗದಲ್ಲಿ ಜಾಗದಲ್ಲಿಬಟ್ಟೆಯೆಲ್ಲ ಹರಡಿ ಅರ್ಧ ಹಸಿಯಾಗಿ ಅರ್ಧ ಒಣಗಿದ್ದವು. ಚೌಕಿಯ ಮಧ್ಯೆ ತುಳಸಿ ಗಿಡ ಸ್ಫುಟವಾಗಿ ಬೆಳೆದು ಮನೆಯ ಸುತ್ತೆಲ್ಲ ಬೆಳೆದಕರವೇರ, ದಾಸವಾಳ, ಮಲ್ಲಿಗೆ, ಸಂಪಿಗೆ, ನಿತ್ಯಪುಷ್ಪ, ತುಂಬೆ ಹೂಗಳಿಂದ ಅಲಂಕೃತಳಾಗಿ ಅರಸಿನ ಕುಂಕುಮ ಹೊತ್ತುರಾರಾಜಿಸಿದ್ದಳು. ಅಲ್ಲೇ ನಿಂತು ಅದನ್ನೆಲ್ಲ ನೋಡುತ್ತಿದ್ದ ನನ್ನನ್ನು,  ಅಜ್ಜಿ , 'ಹೋಗಿ ಬೇಗ ಸ್ನಾನ ಮಾಡೋ ಸೋಂಬೇರಿ' ಅಂತನೆನಪಿಸಲು, ಬಚ್ಚಲಿಗೆ ನಡೆದೇ. ಫಳ ಫಳ ಹೊಳೆಯುತ್ತಿದ್ದ ತಾಮ್ರದ ಹಂಡೆ ತುಂಬಾ ಬಿಸಿ ಬಿಸಿ ನೀರು! ಅಬ್ಬಾ.. ಬೆಂಗಳೂರಲ್ಲಿ ಒಂದೇಬಕೆಟ್ ಬಿಸಿ ನೀರಲ್ಲಿ ಖಾಲಿ ಆಗುತ್ತಲ್ಲ ಅಂತ ಹಿಂದೆ ಮುಂದೆ  ಸ್ನಾನ ಮಾಡುವ ನನಗೆ ಇದೊಂದು ಭಾಗ್ಯವೇ ಅಂತ ಅನಿಸಿದ್ದು ಸರಿಯೆ.ರಪ ರಪ ತಲೆಗೆ ಬಿಸಿ ನೀರು ಹೊಯ್ದಾಗ ಆದ ಆ ಅದ್ಭುತ ಅನುಭವ ನನಗೆ ಮಾತ್ರ ಗೊತ್ತು. ಹಬೆ ತುಂಬಿದ ಶುದ್ದ ಬಿಸಿ ನೀರು ಸ್ನಾನಮಾಡಿ ಬೆವೆತು ದೇವರಿಗೊಂದು ನಮಸ್ಕಾರ ಹಾಕಿ ಊಟಕ್ಕೆ ನಡೆದ. ಅತ್ತೆ, ಅಜ್ಜಿ, ತಂಗಿ ಎಲ್ಲರೂ ಸೇರಿ ಮಾಡಿದ್ದ ಮಲೆನಾಡ ಗದ್ದೆ ಸವತೆಹುಳಿ, ಮೆಂತ್ಯ ಸೊಪ್ಪಿನ ತಂಬುಳಿ, ಸಂಡಿಗೆ ಮೆಣಸು, ಮಾವಿನಕಾಯಿಯ ಅದ್ಭುತ ಉಪ್ಪಿನಕಾಯಿ,  ಹಿತ್ತಲ ಹೀರೆಕಾಯಿಯ ಬೋಂಡ ,ಮಜ್ಜಿಗೆ ಎಲ್ಲವೋ ಹದವಾಗಿ ಹೊಟ್ಟೆ ಸೇರಿದ ನಂತರ ನನ್ನ ಅತ್ಯಂತ 'ಫೇವರಿಟ್' ಉಪ್ಪರಿಗೆಯ ಚಿಕ್ಕ ಕಪ್ಪು ಕೋಣೆಗೆ ಸೇರಿದ್ದೆ. ಕತ್ತಲೇತುಂಬಿದ, ಮುಚ್ಚಿಗೆ ಹೊದ್ದ ಆ ಕೋಣೆಯಲ್ಲಿ ಪ್ರಪಂಚವೇ ಮರೆತು ನಿದ್ರಿಸುವುದು ನಾನಿಲ್ಲಿರುವಾಗ ನನಗಿಷ್ಟವಾದ ಕೆಲಸ. ಇವತ್ತು ಅದೇಅನುಭವ! ಎರಡು ಘಂಟೆಯ ಸುಖ ನಿದ್ದೆಗೆ ಜಾರಿದ ನನ್ನ ಮತ್ತೆ ಎಬ್ಬಿಸಿದ ಮಾವನ ಮಗ ಮನೆಯ ಮುಂದಿನ ತೋಟಕ್ಕೆ ಕರೆದೊಯ್ದಿದ್ದ.ಒಂದು ಎಲೆ ಅಡಿಕೆ ಬಾಯಲ್ಲಿಟ್ಟು ತೋಟವೆಲ್ಲಾ ಸುತ್ತುವಾಗ ಹಿಂದಿದ್ದ ಕಾಫಿ ಮರಗಳು, ತೋಟವೆಲ್ಲಾ ಪರಿಮಳ ಸೂಸುತ್ತಿದ್ದ ಸುರುಳಿಗಿಡಗಳು, ಗೊಂಚಲು ಗೊಂಚಲು ಹಣ್ಣು ಬಿಟ್ಟು ನನ್ನ ಗೋಳು ಹೊಯ್ದುಕೊಳ್ಳುತ್ತಿದ್ದ ಅಮೃತದ ಹಣ್ಣಿನ ಮರಗಳು ಇಂದು ಕಾಣಲಿಲ್ಲ. ಏನೋಕಳೆದುಕೊಂಡಂತೆ ಭಾಸವಾಗಿ ಮಾವನ ಮಗನಿಗೆ 'ಯಾಕೋ ಅದನ್ನೆಲ್ಲ ತೆಗೆಸಿದೆ ಅಂತ ಸ್ವಲ್ಪ ಬೇಜಾರಲ್ಲಿಯೇ ಕೇಳಿದೆ'. ಅದಕ್ಕಾತ, 'ಪ್ರಾಕ್ಟಿಕಲ್ ಆಗಿ ಎಲ್ರೂ ಯೋಚನೆ ಮಾಡ್ಬೇಕು ಕಣಪ್ಪಾ. ಅಡಿಕೆ ಹಾಳಾಗ್ತಾ ಇದೆ ಇವೆಲ್ಲದರಿಂದ' ಅಂತ ಹೇಳಿ ಸುಮ್ಮನಾದ. ಮನಸ್ಸಿಲ್ಲದಮನಸ್ಸಿನಿಂದ 'ಹೂ' ಗುಟ್ಟಿ ಮನೆಗೆ ನಡೆಯುತ್ತಲೇ ಕಾಫಿ ತಯಾರಿತ್ತು. ಕಾಫಿ ಕುಡಿದು ಮುಗಿಸುತ್ತಲೇ, ಮುಚಕಡೆಯ ಅಜ್ಜನ ಫೋಟೋಪಕ್ಕದ ಲೋಲಕದ ಗಡಿಯಾರ '.೫' ಘಂಟೆ ಭಾರಿಸಿ ನನ್ನೆಚ್ಚರಿಸಿತ್ತು. ಲಘು ಬಗೆಯಿಂದ ತಯಾರಾದ ನಾನು ಎಲ್ಲರನ್ನೂ ಬೀಳ್ಕೊಟ್ಟು,ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟಿದ್ದೆ. ತೋಟದಿಂದ ಬಂದ ಅಡಿಕೆ ಕೊನೆಗಳ ರಾಶಿ ಸುಲಿತಕ್ಕೆ ಸಿದ್ದವಾಗಿದ್ದವು. ಸುಲಿತಕ್ಕೆ ಬಂದಕೆಲಸಗಾರರು ಸಿಪಾಯಿಗಳಂತೆ ಕತ್ತಿ
ಹಿಡಿದು ಗೋಣಿ ತನ್ನದು ನಿನ್ನದು ಅಂತ ಹೊಡೆದಾಡುತ್ತಿದ್ದ ಆ ದಿನಗಳು ಇಂದು ಕೇವಲ ಒಂದು ಮಿಶಿನ್ ಮೂಲಕ
ಕೊನೆಗೊಂಡಿತ್ತು.

ಸಂಜೆಯ ಹೊಂಗಿರಣಗಳು ಅಶ್ವತ್ತ ಮರದ ಎಲೆಗಳಿಂದ ಸಾಗಿ ನನ್ನ ಕೆನ್ನೆಯ ಸವರಿದ್ದವು.. ಗೇಟಿಂದ ಸಾಗಿ ಕೆಳಗಿಳಿದು ಗದ್ದೆಯಪ್ರವೇಶಿಸುವಾಗ ಅದೇ ಮಾವಿನ ಮರ, ಹುಣಸೆ ಮರಗಳು ಕೈ ಬೀಸಿ ತಂಗಾಳಿಯೊಂದಿಗೆ ಬೀಳ್ಕೊಟ್ಟಿದ್ದವು. 

Rating
No votes yet