ಮರಳ (ಲಾರದ) ಶಿಲ್ಪ!

ಮರಳ (ಲಾರದ) ಶಿಲ್ಪ!

ಪುಟ್ಟ ಗೆಳತಿಗೊಂದು ನುಡಿನಮನ

ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್‌ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್‍ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್ಯಾಂಪಸ್‌ಲ್ಲಿ ಮೆಹಂದಿ ಗಿಡಗಳಿವೆ. ಅದನ್ನ ಅರೆದು ಹಚ್ಚಿಕೊಂಡಿದ್ದೀನಷ್ಟೇ. ನಿಮಗೂ ಬೇಕಾ? ನೆಕ್ಸ್ಟ್ ಟೈಂ ತಂದ್ಕೊಡ್ತೀನಿ. ಅಂದ್ಲು. ಕೆಲವು ತಿಂಗಳು ಬಿಟ್ಟು ಮತ್ತೆ ಬೆಂಗಳೂರಿಗೆ ಬಂದ್ಲು. ಆಗ ಮರೆಯದೇ ಮೆಹಂದಿ ತಂದಿದ್ದಳು. ಆದರೆ ಎಲೆಯಲ್ಲ ಪ್ಯಾಕೆಟ್‌. ಮೆಹಂದಿ ಗಿಡದ ಎಲೆ ತರಕ್ ಆಗ್ಲಿಲ್ಲ. ಆದ್ರೆ ಈ ಪ್ಯಾಕೆಟ್‌ನಲ್ಲಿರೋ ಮೆಹಂದಿ ಚೆನ್ನಾಗಿರತ್ತೆ. ಹಚ್ಕೊಳ್ಳಿ ಅಂದ್ಲು. ಆದ್ರೆ ಆ ಪ್ಯಾಕೆಟ್ ಓಪನ್ ಮಾಡೋದಕ್ಯಾಕೋ ಮನಸ್ಸಾಗ್ತಿಲ್ಲ. ಪ್ಯಾಕೆಟ್ ಓಪನ್ ಮಾಡಿಬಿಟ್ಟರೆ ಅವಳಂತೆ ಆ ಮೆಹಂದಿಯ ಘಮವೂ ಹೊರಟುಹೋಗುತ್ತದೆಯೇನೋ ಎಂಬ ಅಳುಕಿನಿಂದಲೇ ಅದನ್ನ ಹಾಗೇ ಇಟ್ಟಿದ್ದೇನೆ. ಅದು ಇನ್ಮುಂದೇನೂ ಹಾಗೇ ಇರಲೇನೋ.

ನನ್ನ ಅಕ್ಕನ ಮಗಳು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಸ್ಕಾಮ್ ಓದ್ತಿದಾಳೆ. ನಿಮ್ಮಲ್ಲಿ ಇಂಟರ್ನ್‌‌ಶಿಪ್ ಮಾಡ್ಬೇಕು ಅಂತಿದಾಳೆ. ಅವಳಿಗೆ ಒಂಚೂರು ಗೈಡ್ ಮಾಡಿ ಅಂದ್ರು. ನಾನು ಸರಿ ಚಿಂತೆಬಿಡಿ. ನಾನ್ ಕೇರ್‍ ತಗೊಳ್ತೀನಿ ಅಂತ ಅವಳ ಮಾವನಿಗೆ ಹೇಳಿ ಫೋನ್ ಇಟ್ಟೆ.

ಫೋನ್ ರಿಂಗಾಯ್ತು. ಶ್ರೀದೇವಿಯವ್ರಾ? ಪೂರ್ಣ ಮಾವ (ಬೇಳೂರು ಪೂರ್ಣಪ್ರಜ್ಞ) ನಿನ್ನೆ ನಿಮಗೆ ಫೋನ್ ಮಾಡಿ ನನ್ನ ಬಗ್ಗೆ ಹೇಳಿದ್ರಂತೆ. ಬೆಂಗಳೂರಿಗೆ ಬಂದಿದ್ದೀವಿ. ಇನ್ನೊಂದ್ ಗಂಟೆಲಿ ನಿಮ್ ಆಫಿಸಿಗೆ ಬರ್‍ತೀವಿ. ಅಡ್ರೆಸ್ ಕೊಡಿ ಅಂದ್ಲು.

ಒಂದೆರಡು ಬಾರಿ ಗೇಟ್ ಹತ್ರ ಹೋಗಿ ಬಂದೆ. ಅಷ್ಟೊತ್ತಿಗೆ ಅಪ್ಪನನ್ನೇ ಅಂಟಿಕೊಂಡ ಆಳೆತ್ತರದ ಮಗಳು ಗೇಟ್‌ ಒಳಗೆ ಬಂದಳು. ಸುಮಾರು ವರ್ಷದ ಪರಿಚಯವಿದ್ದಂತ ಒಮ್ಮೆ ನಕ್ಕು ನೀವೇನಾ ಶ್ರೀದೇವಿ ಅಂದ್ಲು. ನಾನು ಹೌದು ಬಾ ಅಂತ ಕರೆದುಕೊಂಡು ಹೋದೆ.

ಅವಳದು ಇಂಟರ್ನ್‌‌ಶಿಪ್ ಕನ್‌ಫರ್ಮ್‌ ಆಗೋವರೆಗೂ ಅವಳ ಅಪ್ಪ ಸುಮಾರು ಮೂರು ಗಂಟೆಗಳ ಕಾಲ ಹೊರಗೇ ಕುಳಿತುಕೊಂಡಿದ್ದರು. ಅಪ್ಪನ ತಾಳ್ಮೆ ವಿನಯತೆಯೆಲ್ಲ ಮಗಳಲ್ಲಿ ಮೈಗೂಡಿದೆ ಎಂದುಕೊಂಡೆ.

ಚಾಕಚಕ್ಯತೆಯಿಂದ ಕೆಲಸ ಮಾಡಿ ಮುಗಿಸುವ, ಅಷ್ಟೇ ಲವಲವಿಕೆಯಿಂದ, ನಗುಮೊಗದಿಂದ ಎಲ್ಲರೊಂದಿಗೆ ಬೆರೆತು ಸರಳ ಮನಸ್ಸಿನಿಂದ ಮಾತನಾಡುವ ಹುಡುಗಿಯಾದ್ದರಿಂದ ಆಫೀಸಿನಲ್ಲಿ ಎಲ್ಲರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾಳೆ ಇನ್ನು ಮುಂದೆಯೂ.

ಆಗಾಗ ತನ್ನ ಅಮ್ಮನೊಂದಿಗೆ, ತಂಗಿಯೊಂದಿಗೆ ಫೋನಿನಲ್ಲಿ ಮಾತನಾಡಿಸಿ ಖುಷಿ ಪಟ್ಟು ಖುಷಿ ಹಂಚುವ ಹುಡುಗಿಯಾಗಿದ್ದಳು. ನೀವೇನಾದ್ರೂ ನಮ್ ಮನೆಗೆ ಒಮ್ಮೆ ಬಂದ್ರೆ ಮತ್ತೆ ಬೆಂಗಳೂರಿಗೆ ವಾಪಸ್ ಹೋಗೋದೇ ಇಲ್ಲ. ಇಲ್ಲಿ ಕಾಡು, ತೋಟ, ನದಿ ಎಷ್ಟು ಚೆನ್ನಾಗಿದೆ. ಬನ್ನಿ ಪ್ಲೀಸ್ ಒಂದೆರಡು ದಿನವಾದರೂ ಇದ್ದು ಹೋಗಿ ಅಂತ ಮಗುವಿನಂತೆ ಕೇಳಿಕೊಂಡಿದ್ದಳು. ಅವಳ ಊರಿಗೆ ಹೋಗದೇ ಇದ್ದಾಗ ಮತ್ತೆ ಮಾರಿಜಾತ್ರೆಗೂ ಹಾಗೇ ಫೋನಾಯಿಸಿದ್ದಳು. ಆದರೆ ಅದೆಲ್ಲ ಈಗ ಕಾಡುವ ನೆನಪು.

ನಿನ್ನ ಕಾಲೇಜು ಜೀವನ ಮುಗಿದ ನೆನಪಿಗಾಗಿ ಅಂತ ಗುಜರಾತ್ ಎಂಪೋರಿಯಂ ಗೆ ಕರೆದುಕೊಂಡು ಹೋಗಿ ಒಂದು ಟಾಪ್ ಮತ್ತು ಶಾಲ್ ಕೊಡಿಸಿದಾಗ ಹುಡುಗಿ ಸುತಾರಾಂ ಒಪ್ಪಲಿಲ್ಲ. ಬೇಡಪ್ಪಾ ನನಗಿದೆಲ್ಲ-ಅಂತ ಹಲವಾರು ಬಾರಿ ಸಂಕೋಚದ ಮುದ್ದೆಯಾಗಿದ್ದಳು. ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ನಾನು ಇದೇ ಟಾಪ್‌ನಲ್ಲೇ ನಿಮ್ಮೆದುರಿಗಿರ್‍ತೇನೆ ಅಂದವಳು ಈಗ. . .

ಮಾಸ್ ಕಾಮ್ ಮುಗಿಸಿ ಸಂಡೇ ಇಂಡಿಯನ್ ಗೆ ಹಾರಿದಾಗ ಅವಳ ಮುಖ ನೋಡಬೇಕಿತ್ತು. ಮಗುವಿನಂತೆ ಸಂಭ್ರಮಪಟ್ಟಿದ್ದಳು.

ಹದಿನೈದು ದಿನಗಳ ಹಿಂದೆಯಷ್ಟೇ ಫೋನ್ ಮಾಡಿ ಆಫೀಸಿನಲ್ಲಿ ಇವರ ಎಕ್ಸ್‌ಪೆಕ್ಟೇಶನ್ ರೀಚ್ ಆಗಕ್ಕೆ ಆಗ್ತಿಲ್ಲ ಅಂತ ಕಣ್ಣೀರು ಹಾಕಿದ್ದಳು. ಹುಚ್ಚು ಹುಡುಗಿ ನೀನಿನ್ನೂ ಸೇರಿ ತಿಂಗಳಾಗಿದೆಯಷ್ಟೇ. ಈಗಲೇ ಹೀಗೆಂದರೆ ಹೇಗೆ ಅಂತ ಹೇಳಿ, ಮೊದಲ ಕೆಲಸ ಅಂದರೆ ಎಲ್ಲರಿಗೂ ಹೀಗೇನೇ. ಸ್ವಲ್ಪ ಟೈಂ ಕಳೀಲಿ ಎಲ್ಲಾ ಸರಿಹೋಗತ್ತೆ ಅಂತ ಸಮಾಧಾನಿಸಿದ್ದೆ. ಪುಟ್ಟ ಮಗುವಿನಂತೆ ತಲೆ ಅಲ್ಲಾಡಿಸಿರಬೇಕು ಅವಳು ಕಣ್ಣೀರು ವರೆಸಿಕೊಳ್ಳುತ್ತಾ.

ಆದರೆ ಮೊನ್ನೆ ಶನಿವಾರ ಬೆಳಗ್ಗೆ ಬೇಳೂರು ಸುದರ್ಶನ್ ಫೋನ್ ಮಾಡಿ ಶಿಲ್ಪಶ್ರಿ ಅಂದ್ರು. ಕುಕ್ಕೆಗೆ ಅದೇ ತಾನೇ ಬಂದಿಳಿದಿದ್ದೆ ಮನೆಯವರೆಲ್ಲರೊಂದಿಗೆ. ಹಾಂ ಹೇಳಿ. ಏನು ಹೇಳಿ ಅಂದಿದ್ದಕ್ಕೆ ಅವರು ಶಿಲ್ಪಶ್ರೀ ತೀರಿಹೋದ್ಲಂತೆ ಅಂದ್ರು. ಆಕ್ಸಿಡೆಂಟ್ನಲ್ಲಿ.

ಚಿಕ್ಕಮಗಳೂರಿನಲ್ಲಿ ಪ್ರಜಾವಾಣಿ ಕರೆಸ್ಪಾಂಡೆಂಟ್ ಆಗಿರೋ ಘನಶ್ಯಾಮ್ ಫೋನ್ ಮಾಡಿ ಅದೇ ಸುದ್ದಿ ಹೇಳಿದ. ನಾನು ಅವಳನ್ನ ನೋಡೇ ಇಲ್ಲ ಆದರೆ ಅವಳ ಸಾವಿನ ಸುದ್ದಿ ನನಗೇ ಮೊದಲು ಗೊತ್ತಾಯ್ತು ಅಂದ. ಹೌದು ಶ್ಯಾಮಾ. ಬೆಂಗಳೂರಿಗೆ ಬಂದಾಗ ಸದಾ ಅಂಟಿಕೊಂಡೇ ಇರುತ್ತಿತ್ತದು ಮಗುವಿನ ಹಾಗೆ. ಆದರೆ ಕೊನೆ ಬಾರಿ ನಾನವಳನ್ನು ನೋಡೋದಿಕ್ಕೇ ಆಗ್ಲಿಲ್ವಲ್ಲೋ ಅಂದೆ. ಕುಮಾರಧಾರಾ ನದಿ ಹರಿಯುತ್ತಲೇ ಇತ್ತು. ಅವಳ ಬೆಳದಿಂಗಳಂಥ ಪ್ರತಿಬಿಂಬವನ್ನೂ ಆ ಅಲೆಗಳೆಲ್ಲ ಕಸಿದುಕೊಂಡಿದ್ದವು.
-ಶ್ರೀದೇವಿ ಕಳಸದ

Rating
No votes yet

Comments