ಮರುಕಥನ - ಹೆಸರು ಉಳಿಯದ ತತ್ವಜ್ಞಾನಿಯ ಕಥೆ

ಮರುಕಥನ - ಹೆಸರು ಉಳಿಯದ ತತ್ವಜ್ಞಾನಿಯ ಕಥೆ

ಪ್ರಾಚೀನ ಕಾಲದಲ್ಲಿ ಒಂದು ರಾಜ್ಯದಲ್ಲಿ. ವಿರಾಟ ಎಂಬ ಸ್ವಚ್ಛ ಮತ್ತು ಸಚ್ಚಾರಿತ್ರ ಉಳ್ಳ ವ್ಯಕ್ತಿ ಇದ್ದ. ಅವನು ಖಡ್ಗ ಪಟುವೂ ಆಗಿದ್ದ. ಅವನು ಪರಾಕ್ರಮಶಾಲಿ ಯೋಧನಾಗಿದ್ದರೂ ಗುಣದಲ್ಲಿ ಶಾಂತನು. ತುಂಬಾ ರಾಜಭಕ್ತ. ನ್ಯಾಯ ಬುದ್ಧಿಯಿಂದ ಹೆಸರಾಗಿದ್ದ. ವಿದ್ವಾಂಸರು ಅವನಿಗೆ ತಲೆಬಾಗುತ್ತಿದ್ದರು. ಮಕ್ಕಳು ಅವನ ಮುಗ್ಧ ಹೊಳಪಿನ ಕಣ್ಣುಗಳನ್ನು ನೋಡಿ ಸಂತಸ ಪಡುತ್ತಿದ್ದರು.

ಒಂದು ಬಾರಿ ರಾಜನ ಭಾವನು ರಾಜನ ವಿರುದ್ಧ ಬಂಡೆದ್ದ. ಅವನು ತಾನೇ ರಾಜನಾಗಬೇಕೆಂಬ ಕನಸು ಕಾಣುತ್ತಿದ್ದ. ಮಹಾರಾಜರು ಈ ದಂಗೆಕೋರರನ್ನು ಹತ್ತಿಕ್ಕಲು ವಿರಾಟನನ್ನು ಸೇನಾಪತಿಯಾಗಿ ಮಾಡಿದನು. ವಿರಾಟನು ತನ್ನ ಸೈನ್ಯವನ್ನು ತೆಗೆದುಕೊಂಡು ಹೊರಟನು. ಅವನು ರಾತ್ರಿ ಹೊತ್ತು ಶತ್ರುಪಾಳಯದ ಮೇಲೆ ದಾಳಿ ಮಾಡಿದನು. ಅಲ್ಲಿನ ಎಲ್ಲಾ ಬಂಡುಕೋರರನ್ನು ಕೊಂದು ಹಾಕಿದನು.

ಹಗಲಾದಾಗ ಅವರಲ್ಲಿ ಅವನ ತಮ್ಮನು ಕೂಡ ಸೇರಿ ಸತ್ತಿದ್ದು ತಿಳಿದುಬಂದಿತು. ತನ್ನ ತಮ್ಮನು ದಂಗೆಕೋರ ಪಕ್ಷಕ್ಕೆ ಸೇರಿ ತನ್ನ ಕೈಯಿಂದಲೇ ವಧೆ ಆದದ್ದು ತಿಳಿದು ಬಹಳ ಬೇಸರವಾಯಿತು.

ಮಹಾರಾಜನಿಗೆ ವಿಜಯದ ವಾರ್ತೆ ತಿಳಿದು ಸಂತೋಷವಾಯಿತು. ಅವನು ವಿರಾಟನನ್ನು ಸೇನಾಧಿಪತಿಯಾಗಿ ಮಾಡಲು ಬಯಸಿದ. ಆದರೆ ವಿರಾಟನು ಹೀಗೆ ಹೇಳಿದ - ಮಹಾರಾಜರೇ ನಾನು ಇನ್ನು ಮೇಲೆ ಯಾರ ಮೇಲೂ ಕತ್ತಿಯನ್ನು ಎತ್ತುವುದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ ಯಾಕೆಂದರೆ ಈ ಕತ್ತಿಯು ನನ್ನ ಸ್ವಂತ ಸೋದರನನ್ನೇ ಕೊಂದಿದೆ.

ಮಹಾರಾಜರು ಹಾಗೆಯೇ ಆಗಲಿ ನೀನು ಖಡ್ಗವನ್ನು ಎತ್ತಬೇಕಾಗಿಲ್ಲ ಆದರೆ ಸೇನಾಪತಿ ಪಟ್ಟವನ್ನು ಸ್ವೀಕರಿಸು ಎಂದರು.

ವಿರಾಟನು ಹೇಳಿದನು -ಆದರೆ ಈ ಖಡ್ಗ ವು ಶಕ್ತಿಯ ಪ್ರತೀಕ ಮತ್ತು ಶಕ್ತಿಯು ನಿಜಕ್ಕೆ ವಿರುದ್ಧವಾದದ್ದು . ಕತ್ತಿಯಿಂದ ಹೊಡೆಯುವವನು ಅಪರಾಧಿಯಲ್ಲದೇ ಬೇರೆಯಲ್ಲ . ನಾನು ನನ್ನ ಹುದ್ದೆಯಿಂದ ಜನರಲ್ಲಿ ಪ್ರಾಣಭೀತಿಯನ್ನು ಹುಟ್ಟಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ನಾನು ಶಕ್ತಿ ಮತ್ತು ಪದವಿಗಳಿಂದ ದೂರವಿರಲು ಬಯಸುತ್ತೇನೆ.

ಮಹಾರಾಜರು ಹೇಳಿದರು -ನೀನು ನ್ಯಾಯಪ್ರಿಯನು. ಹಾಗಾಗಿ ರಾಜ್ಯದ ನ್ಯಾಯಾಧೀಶ ಪದವಿಯನ್ನು ಅಲಂಕರಿಸು . ಅದರಿಂದ ನನ್ನ ರಾಜ್ಯದಲ್ಲಿ ನ್ಯಾಯದ ಆಡಳಿತ ಉಂಟಾಗುತ್ತದೆ.

ವಿರಾಟನು ಈ ಹುದ್ದೆಯನ್ನು ಸ್ವೀಕರಿಸಿದ. ವಿರಾಟನ ನ್ಯಾಯ ಪ್ರಿಯತೆ ಹಾಗೂ ಕಾರುಣ್ಯದ ಪ್ರಶಂಸೆಯು ದೇಶವಿದೇಶಗಳಲ್ಲಿ ಹರಡಿತು. ಅವನು ಅಪರಾಧಿಯ ಮನವನ್ನು ಪ್ರವೇಶಿಸಿ ನೋಡಿ ನ್ಯಾಯ ನಿರ್ಣಯ ಕೊಡುತ್ತಿದ್ದ . ಮರಣದಂಡನೆಯನ್ನು ಅವನು ನಿಲ್ಲಿಸಿಬಿಟ್ಟಿದ್ದ. ಯಾಕೆಂದರೆ ಅವನ ದೃಷ್ಟಿಯಲ್ಲಿ ಜೀವನ ಕೊಡಬಲ್ಲವನು ಮಾತ್ರ ಮರಣದಂಡನೆಯನ್ನು ಕೊಡಬಲ್ಲ ಅಧಿಕಾರ ಹೊಂದಿದ್ದ.

ಒಂದು ಪ್ರಕರಣದಲ್ಲಿ ಒಬ್ಬ ಯುವಕನಿಗೆ ಮರಣದಂಡನೆಯನ್ನು ಕೊಡದೆ 5 ವರ್ಷಗಳ ಕಾಲ ಬಂಧನ ಮತ್ತು ತಿಂಗಳಿಗೆ 50 ಚಾಟಿ ಏಟು ವಿಧಿಸಿದ.

ಆ ಯುವಕ ಚೀರಿದ -ನನ್ನ ಯೌವನವನ್ನು ಹೀಗೆ ಹಾಳುಮಾಡಲು ನಿಮಗೆ ಏನು ಹಕ್ಕಿದೆ? ಕೊಡುವುದಿದ್ದರೆ ಮರಣದಂಡನೆ ಕೊಡಿ , ಜೀವಂತವಾಗಿರುವಾಗಲೇ ಸತ್ತವನ ಹಾಗೆ ಮಾಡಲು ನಿಮಗೇನು ಅಧಿಕಾರ ? ತಿಂಗಳಿಗೆ 50 ಚಾಟಿಯೇಟು ತಿನ್ನೋದಕ್ಕಿಂತ ಸಾಯುವುದೇ ಮೇಲು . ಇದು ಮರಣಕ್ಕಿಂತ ಘೋರವಾದದ್ದು.

ವಿರಾಟನ ಮನಸ್ಸು ವಿಚಲಿತವಾಗಿ ತನ್ನ ನ್ಯಾಯದ ಬಗ್ಗೆ ಸಂದೇಹ ಬಂದಿತು. ರಾತ್ರಿ ಕಾರಾಗ್ರಹಕ್ಕೆ ಹೋಗಿ ಆ ಯುವಕನ ಬದಲು ತಾನು ಕೆಲವು ದಿನಗಳ ಸೆರೆ ಮತ್ತು ಚಾಟಿ ಏಟಿನ ಶಿಕ್ಷೆ ಅನುಭವಿಸುವ ವ್ಯವಸ್ಥೆ ಮಾಡಿದ.

ಆ ರೀತಿ ಒಂದು ತಿಂಗಳು ಕಳೆದ ಮೇಲೆ ರಾಜನನ್ನು ನ್ಯಾಯಾಧೀಶನ ಹುದ್ದೆಯಿಂದ ಬಿಡುಗಡೆ ಮಾಡಲು ಕೇಳಿಕೊಂಡ - ಏಕೆಂದರೆ ಯಾರಾದರೂ ನ್ಯಾಯ ಕೊಡುತ್ತೇನೆಂದು ಗರ್ವ ಪಡುತ್ತಿದ್ದರೆ ಆ ನ್ಯಾಯವೇ ಅನ್ಯಾಯ. ನ್ಯಾಯದ ಅನ್ಯಾಯವನ್ನು ಈಗ ತಿಳಿದಿದ್ದೇನೆ. ದಂಡ ವಿಧಿಸುವುದು ಭಗವಂತನ ಕೆಲಸ, ನಮ್ಮದಲ್ಲ.

ಮಹಾರಾಜನ ಹೇಳಿದ- ಸರಿ ಹಾಗಾದರೆ .....

ವಿರಾಟ ಮುಂದುವರಿದ - ಶಕ್ತಿಯನ್ನು ಹಾಗೂ ಹುದ್ದೆಯನ್ನು ನನಗೆ ಕೊಡಬೇಡಿ ಶಕ್ತಿಯಿಂದ ಕ್ರಿಯೆ ಹುಟ್ಟುತ್ತದೆ- ಶಕ್ತಿಸಂಪನ್ನ ನಾದ್ದರಿಂದಲೇ ನಾನು ಹೇಳೋದೆಲ್ಲ ತಕ್ಷಣ ಕಾರ್ಯರೂಪಕ್ಕೆ ಬರುತ್ತದೆ ಆ ಕಾರ್ಯವು ದುಃಖಕ್ಕೆ ಮತ್ತು ಯಾತನೆಗೆ ಕಾರಣವಾಗುತ್ತದೆ. ಆದ್ದರಿಂದ ನಾನು ನಿಷ್ಕ್ರಿಯನಾಗಿ ಇರಬಯಸುತ್ತೇನೆ . ಇದರಿಂದ ನನ್ನ ಯಾವ ಕ್ರಿಯೆಯೂ ಪಾಪಕ್ಕೆ ಕಾರಣವಾಗಲಾರದು, ಈಗ ನಾನು ನನ್ನಷ್ಟಕ್ಕೆ ಏಕಾಂಗಿಯಾಗಿ ನನ್ನ ಮನೆಯಲ್ಲಿರಬಯಸುತ್ತೇನೆ . ತಾವು ಅಪ್ಪಣೆ ಕೊಡಿ.

ರಾಜನು ಅಪ್ಪಣೆ ಕೊಟ್ಟನು. ವಿರಾಟನು ಮನೆಯಲ್ಲಿ ಅನಾಸಕ್ತನಾಗಿ, ನಿಷ್ಕ್ರಿಯನಾಗಿ ಇರತೊಡಗಿದ.

ಒಂದು ದಿನ ಅವನ ಮಗನು ಸೇವಕನಿಗೆ ಹೊಡೆಯುತ್ತಿದ್ದ. ಇವನು ಮಗನನ್ನು ತಡೆದ. ಮಕ್ಕಳಿಗೆ ಸಿಟ್ಟು ಬಂತು. ಅವನು ಯೋಚಿಸಿದ - ಸ್ವಾತಂತ್ರ್ಯವು ಮನುಷ್ಯನ ಸಹಜ ಬಯಕೆ. ಯಾರನ್ನೂ ಪರತಂತ್ರ ಗೊಳಿಸುವುದು ಪಾಪ. ಬೇರೆಯವರನ್ನು ನಮ್ಮ ಇಚ್ಚೆಯ , ವಿಚಾರದ ದಾಸರನ್ನಾಗಿ ಮಾಡಲು ಅಧಿಕಾರವಿಲ್ಲ. ಆದ್ದರಿಂದ ನಾನು ನನ್ನ ವಿಚಾರಗಳನ್ನು , ಇಚ್ಛೆಗಳನ್ನು ಕುಟುಂಬದವರ ಮೇಲೂ ಹೇರಕೂಡದು.

ಮರುದಿನ ಅವನು ತನ್ನ ಪರಿವಾರವನ್ನು ತ್ಯಜಿಸಿ  ಅರಣ್ಯ ಸೇರಿದ . ಅಲ್ಲಿಯೇ ಇರತೊಡಗಿದ. ಅವನು ಪಾಪ ಮುಕ್ತನಾಗಲು ಅರಣ್ಯ ಸೇರಿದ ಸುದ್ದಿ ಎಲ್ಲೆಡೆ ಹರಡಿ ಜನರು ಅವನ ದರ್ಶನಕ್ಕೆ ಬರತೊಡಗಿದರು. ಒಂದು ದಿನ ಮಹಾರಾಜನೂ ಅವನಿಂದ ಮಾರ್ಗದರ್ಶನ ಬಂದನು.

ಆಗ ಅವನು ಹೇಳಿದ- ಮಹಾರಾಜರು ನಾನು ಈಗ ಏಕಾಕಿಯಾಗಿ ಬದುಕುತ್ತಿದ್ದೇನೆ. ಇದರಿಂದಾಗಿ ಪಾಪ ಮುಕ್ತನಾಗಿದ್ದೇನೆ. ಏಕಾಕಿಯಾದ ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳಬಲ್ಲ, ಬೇರೆಯವರಿಗೆ ಹೇಳಲಾರ. ನನಗೀಗ ಯಾರಿಗೂ ಏನೂ ಕೊಡಬೇಕಾದ್ದಿಲ್ಲ , ಯಾರಿಂದ ತೆಗೆದುಕೊಳ್ಳಬೇಕಾದ್ದಿಲ್ಲ . ಬೇರೆಯವರಿಗೆ ಕೊಡುವಂತದ್ದು ನನ್ನ ಬಳಿ ಏನೂ ಇಲ್ಲ. ಆದ್ದರಿಂದ ನಿಮಗೆ ನಾನು ಕೊಡುವಂಥದು ಏನಿಲ್ಲ. ಆದ್ದರಿಂದ ಮಹಾರಾಜರೇ ನೀವು ನನ್ನ ಬಳಿ ಬಂದದ್ದು ವ್ಯರ್ಥ.

ಮಹಾರಾಜರು ಹೊರಟುಹೋದರು.

ಒಂದು ದಿನ ವಿರಾಟನಿಗೆ ಅಡವಿಯಲ್ಲಿ ಒಂದು ಮೃತದೇಹ ಸಿಕ್ಕಿತು. ಅದಕ್ಕೆ ಅಂತ್ಯಸಂಸ್ಕಾರ ಮಾಡಲು ಅವನಿಗೆ ಬೇರೆ ಜನರ ಸಹಾಯ ಬೇಕಾಗಿ ಸಮೀಪದ ಹಳ್ಳಿಗೆ ಹೋದ. ಅಲ್ಲಿ ಅವನನ್ನು ಒಬ್ಬ ಹೆಂಗಸು ತಿರಸ್ಕಾರದಿಂದ ನೋಡಿದಳು . ಅದೇಕೆ ಎಂದು ವಿರಾಟನು ವಿಚಾರಿಸಿದಾಗ ಅವಳು ಹೇಳಿದಳು. -ನಿನ್ನಿಂದ ನನ್ನ ಸರ್ವನಾಶ ಆಗಿದೆ ನನ್ನ ಗಂಡನೂ ನಿನ್ನಂತೆ ಮನೆ ಬಿಟ್ಟು ಹೋಗಿದ್ದಾನೆ. ನನ್ನ ಮೂರು ಮಕ್ಕಳು ಹಸಿವು ಬಡತನ ಗಳಿಂದ ಸತ್ತರು.

ಆಗ ವಿರಾಟನು ಯೋಚಿಸಿದ - ಬಹುಶಃ ಸತ್ಯವು ಪಾಪ ಮುಕ್ತರಾಗುವುದರಲ್ಲಿಲ್ಲ, ಕರ್ಮದ ಆಘಾತವನ್ನು ಸಹಿಸುವುದರಲ್ಲಿ ಇದೆ . ನಿಷ್ಕ್ರಿಯತೆಯೂ ಕೂಡ ಒಂದು ಕ್ರಿಯೆಯೇ ಆಗಿದೆ. ಆದ್ದರಿಂದ ನಿಷ್ಕ್ರಿಯನಾಗಿದ್ದರೂ ಪಾಪವನ್ನು ಮೀರಿ ಇರಲು ಆಗುವುದಿಲ್ಲ. ತನ್ನ ಇಚ್ಛೆಯನ್ನು ನಾಶಪಡಿಸಿಕೊಂಡರೂ ಒಬ್ಬ ವ್ಯಕ್ತಿಯು ಒಂದು ಇನ್ನೊಬ್ಬನ ಇಚ್ಛೆಗೆ ಉದಾಹರಣೆ ಆಗಬಲ್ಲ. ಅವನು ತಾನು ಚಲಿಸದಿದ್ದರೂ ಇನ್ನು ಚಲಿಸುವಂತೆ ಮಾಡಬಲ್ಲ. ಆದ್ದರಿಂದ ಸ್ವಾತಂತ್ರ ವ್ಯಕ್ತಿಯೂ ಕೂಡ ಸ್ವತಂತ್ರನಲ್ಲ. ಅಪ್ರತ್ಯಕ್ಷ ರೂಪದಲ್ಲಿ ಆದರೂ ಕೂಡ ಅವನು ಪಾರತಂತ್ರ್ಯದ ಬಲೆಯನ್ನು ಹೆಣೆಯಬಲ್ಲ. ಯಾರದಾದರೂ ದುಃಖಕ್ಕೆ ಕಾರಣವಾಗಬಲ್ಲ. ಆದ್ದರಿಂದ ಕರ್ಮಕ್ಕೆ ಅಧೀನನಾದವನೇ ನಿಜವಾಗಿಯೂ ಸ್ವತಂತ್ರ. ತನ್ನ ಕರ್ಮಗಳನ್ನು ಕರ್ತವ್ಯಗಳನ್ನು ಹೊಣೆಗಾರಿಕೆಗಳನ್ನು ಕರ್ಮಕ್ಕೆ ಅರ್ಪಿಸುವುದೇ ಸರಿ. ಕರ್ಮದ ಅಂಚಿನಲ್ಲಿರುವುದು ಒಳ್ಳೇದಲ್ಲ . ನಾವು ಕರ್ಮದ ನಡುವೆಯೇ ಬದುಕಬೇಕು.

ಹೀಗೆ ಯೋಚಿಸಿ ಅವನು ಆಗಾಗ ಬಳಿಗೆ ಹೋದ ಅವನು ತನಗೆ ಒಂದು ಸಾಮಾನ್ಯ ಕೆಲಸವನ್ನು ಕೊಡಲು ಹೇಳಿದ. ಒಬ್ಬ ಸತ್ಪುರುಷ ಮತ್ತು ಸರ್ವಜ್ಞಾನಿಯ ಈ ಮಾತಿಗೆ ರಾಜನು ತನ್ನ ನಾಯಿಗಳ ರಕ್ಷಕನ ಕೆಲಸವನ್ನು ವಹಿಸಿದ.

ನಂತರ ವಿರಾಟನು ನಾಯಿಗಳ ರಕ್ಷಕನ ರೂಪದಲ್ಲಿ ಸಾಮಾನ್ಯ ಜೀವನ ನಡೆಸತೊಡಗಿದ. ತನ್ನ ಕೆಲಸವನ್ನು ಯಾವಾಗಲೂ ಪ್ರಾಮಾಣಿಕವಾಗಿ ದಕ್ಷತೆಯಿಂದಲೇ ಮಾಡಿದ ನಿಧಾನವಾಗಿ ಅರಮನೆ ರಾಜಧಾನಿ ರಾಜ್ಯ ನಗರಗಳ ಜನತೆ ಅವನನ್ನು ಮರೆಯಿತು. ರಾಜನೂ ಸತ್ತುಹೋದ ಹೊಸ ರಾಜನಿಗೆ ವಿರಾಟನ ಪರಿಚಯವೂ ಇರಲಿಲ್ಲ.

ಕೆಲವರ್ಷಗಳ ನಂತರ ವಿರಾಟನು ಕೂಡ ಸತ್ತುಹೋದ. ಅವನನ್ನು ಸಾಮಾನ್ಯ ಜನರಂತೆ ಸುಡಲಾಯಿತು ಯಾರೂ ಅಳಲು ಬರಲಿಲ್ಲ. ಅವನ ಮರಣದ ಬಗ್ಗೆ ಯಾರೂ ಶೋಕಗೀತೆ ಬರೆಯಲಿಲ್ಲ. ಅವನು ಸಾಕಿದ ನಾಯಿಗಳು ನಾಕು ದಿನ ಅವನ ವಿಯೋಗದಲ್ಲಿ ಕಣ್ಣೀರು ಹಾಕಿದವು. ಈ ರೀತಿ ವಿರಾಟನು ನಮಗೆ ಒಂದು ಸತ್ಯವನ್ನು ನೀಡಿದರೂ ಅವನ ಹೆಸರನ್ನು ವಿಜೇತರ ಇತಿಹಾಸದಲ್ಲಿ ಎಲ್ಲೂ ಬರೆಯಲಿಲ್ಲ . .. ಋಷಿಗಳ ಧರ್ಮ ಪ್ರವರ್ತಕರ ಪಟ್ಟಿಯಲ್ಲಿ ಅವರ ಹೆಸರು ದಾಖಲಾಗಲಿಲ್ಲ.

( ಈ ಕಥೆ ಜರ್ಮನಿಯ ಒಬ್ಬ ಲೇಖಕನದು. ಕರ್ನಾಟಕ ಸರಕಾರ ಪ್ರಕಟಿಸಿದ ಕಥಾ ಸಂಸ್ಕೃತಿ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. )

Rating
Average: 5 (2 votes)