ಮರೆಯಲಾರದ ಸಣ್ಣಕಥೆಗಳು -೨
ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ.
ಗೊರೂರು ರಾಮಸ್ವಾಮಯ್ಯಂಗಾರರು ಹೆಚ್ಚಾಗಿ ಹರಟೆ, ಅನುಭವಕಥನ, ಹಳ್ಳಿಯ ಜೀವನದ ವಿಶೇಷತೆಗಳನ್ನು ಹೆಕ್ಕಿ ತೋರಿಸುವ ಬರಹಗಳಿಗೆ ಪ್ರಖ್ಯಾತರು. ಅಲ್ಲದೆ, ಸಣ್ಣಕತೆಗಳನ್ನೂ, ನೀಳ್ಗತೆಗಳನ್ನೂ ಬರೆದಿದ್ದಾರೆ. ನಮ್ಮೂರ ರಸಿಕರು, ಹಳ್ಳಿಯ ಚಿತ್ರಗಳು ಮೊದಲಾದ ಅವರ ಪ್ರಬಂಧ ಸಂಕಲನಗಳು ಬಹಳ ಚೆನ್ನಾಗಿವೆ. ನಮಗೆ ೧೯೩೦ ರ ದಕ್ಷಿಣ ಕರ್ನಾಟಕದ ಹಳ್ಳಿಯ ಜನಜೀವನವನ್ನು ರಸವತ್ತಾಗಿ ಇಲ್ಲಿ ಅವರು ಚಿತ್ರಿಸಿದ್ದಾರೆ. ಚಲನಚಿತ್ರವಾಗಿ ಭಾರೀ ಯಶಸ್ಸು ಗಳಿಸಿದ ಇವರ ಬೂತಯ್ಯನ ಮಗ ಅಯ್ಯು ಕಥೆ ಯಾರಿಗೆ ಗೊತ್ತಿಲ್ಲ ಹೇಳಿ? ಅಲ್ಲದೆ ಪ್ರವಾಸಿಯ ವರದಿಯಾದ ಅಮೆರಿಕೆಯಲ್ಲಿ ಗೊರೂರು ಎಂಬ ಇವರ ಪುಸ್ತಕವೂ ಓದಬೇಕಾದಂತಹದ್ದೇ. ಬಹುಶಃ ತಮ್ಮ ೭೦ ರ ಮೇಲಿನ ವಯಸ್ಸಿನಲ್ಲಿ ಅವರು ಮಾಡಿದ ವಿದೇಶ ಯಾತ್ರೆಯ ಅನುಭವವನ್ನು ಅವರು ಸೊಗಸಾಗಿ ಹೇಳಿದ್ದಾರೆ. ಈ ಪುಸ್ತಕಗಳನ್ನು ಓದದಿದ್ದವರು, ಖಂಡಿತ ಓದಿ ಎನ್ನುವ ಶಿಫಾರಸು ನನ್ನದು.
ರಾಮಸ್ವಾಮಯ್ಯಂಗಾರರ ಸಣ್ಣ ಕಥೆಯೊಂದು ವರ್ಷಗಟ್ಟಲೆಯಿಂದ ನನ್ನ ಮನಸ್ಸಿನಲ್ಲಿ ನೆಲೆನಿಂತಿದೆ. ( ಈ ಕಥೆ ಗೊರೂರು ರಾಮಸ್ವಾಮಿ ಅಯ್ಯಂಗಾರರದ್ದೇ ಎನ್ನುವುದು ನನ್ನ ನೆನಪು. ಒಂದು ವೇಳೆ ಇದು ಅವರದಲ್ಲದೇ ಬೇರೆಯವರದ್ದಾದರೆ, ತಿಳಿದವರು ತಿದ್ದಿ!). ಈ ಕಥೆಯ ಹೆಚ್ಚಾಯ ಏನೆಂದರೆ, ಇದೊಂದು ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಹೊಂದುವಂತಹ ಕಥೆ. ಸಣ್ಣ ಕಥೆಗಳ ಹಿರಿಮೆಯೇ ಅದಲ್ಲವೇ? ಅದಕ್ಕೇ ತಾನೇ ಓ ಹೆನ್ರಿ, ಅಥವಾ ಮೊಪಾಸಾ ಅಂತಹವರ ಕಥೆಗಳು ಎಲ್ಲೆಡೆ ಪ್ರಖ್ಯಾತವಾಗಿರುವುದು?
ಗೊರೂರರ ಬಗ್ಗೆ ಹೇಳಬೇಕೆನ್ನಿಸಿದ್ದಕ್ಕೆ ಇನ್ನೂ ಒಂದು ಕಾರಣವಿದೆ. ಎಷ್ಟೇ ಎಂದರೂ, ನಾನೂ ಅವರ ಜಿಲ್ಲೆಯವನೇ. ಅವರು ಕುಡಿದ ಹೇಮಾವತೀ ನದೀ ನೀರನ್ನೇ ಕುಡಿದು ಬೆಳೆದವನೇ! ಅಲ್ಲದೇ, ರಾಮಸ್ವಾಮಯ್ಯಂಗಾರರ ಅಣ್ಣ ಶ್ರೀ ನರಸಿಂಹಾಚಾರರ ಬಳಿ ರಾಮಃ ರಾಮೌ ರಾಮಾಃ ಎಂದು ಸಂಸ್ಕೃತ ಪಾಠ ಕಲಿಯುವ ಅದೃಷ್ಟವೂ ನನ್ನದಾಗಿತ್ತು. :)
"ಮುಳ್ಳು ಗಿಡ" - ಇದು ನಾನು ಹೇಳಬೇಕೆಂದಿರುವ ಕಥೆಯ ತಲೆಬರಹ. ಈ ಕಥೆಯ ನಾಯಕ ಒಬ್ಬ ಸಾಧಾರಣವಾದ ಕೆಲಸವೊಂದರಲ್ಲಿರುವ, ಮಧ್ಯಮ ವರ್ಗದ ಗೃಹಸ್ಥ. ಕಷ್ಟ ಪಟ್ಟು ತಿಂಗಳ ಕೊನೆಯವರೆಗೆ ಖರ್ಚು ತೂಗಿಸಬೇಕಾದ ಪರಿಸ್ಥಿತಿ. ಇವನದ್ದೊಂದು ಕೊರಗು. ಕಾಲೇಜಿನಲ್ಲಿ ಓದುತ್ತಿದ್ದಾಗ ಜೊತೆಯಲ್ಲಿ ಓದುತ್ತಿದ್ದ ಸುಂದರಿ ಲಲಿತಳನ್ನು ಮದುವೆಯಾಗಬೇಕೆಂಬಾಸೆಯಿದ್ದರೂ, (ಕಾಲಮಾನಕ್ಕೆ ತಕ್ಕಂತೆ) ತಂದೆ ತಾಯಿ ನೋಡಿದವಳನ್ನೇ ಕಟ್ಟಿಕೊಳ್ಳಬೇಕಾಯಿತು. ಹೆಂಡತಿ ಸುರೂಪಿಯೂ ಅಲ್ಲ. ಹೋಗಲಿ, ಹಾಡು ಹಸೆ, ಚಿತ್ರ ಬರೆಯುವುದೋ, ಕಸೂತಿ ಹಾಕುವುದೋ, ಒಂದಾದರೂ ಒಳ್ಳೆ ಕಲೆ ಬರುವುದೋ? ಅದೂ ಇಲ್ಲ. ಬಲವಂತ ಮಾಘಸ್ನಾನವಾಯಿತು ಇವನ ಸಂಸಾರ. ಮದುವೆಯಾಗಿ ವರ್ಷಗಳು ಕಳೆದರೂ, ಸದಾಕಾಲ ಘಮಘಮಿಸುವ ಹೂವು ಬಿಡದ, ಕೆಟ್ಟ ಮುಳ್ಳುಗಿಡದ ತರಹ ಇವಳು ಎಂದು ಸದಾ ಕಾಲ ಹೆಂಡತಿಯನ್ನು ಮನಸ್ಸಿನಲ್ಲಿ ಬೈದುಕೊಳ್ಳುವುದನ್ನು ಮಾತ್ರ ಇವನು ಬಿಡಲಿಲ್ಲ.
ಒಮ್ಮೆ ಅಚಾನಕ್ಕಾಗಿ ಇವನಿಗೆ ಪೇಟೆಯಲ್ಲಿ ವರ್ಷಗಳಿಂದ ನೋಡದ, ಹಳೆಯ ಮಿತ್ರನೊಬ್ಬ ಸಿಕ್ಕಿದ. ಅವನು ಬಲವಂತ ಮಾಡಿ ತನ್ನ ಮನೆಗೆ ಬರಲೇಬೇಕೆಂದು ಕರೆದುಕೊಂಡೂ ಹೋದ. ಅಲ್ಲಿ ತನ್ನ ಗೆಳೆಯನೊಬ್ಬ ಬಂದಿದ್ದಾನೆಂದು ಮಿತ್ರ ಒಳಗೆ ಹೋಗಿ, ತನ್ನ ಹೆಂಡತಿಗೆ ಹೇಳಿದಾಗ, ಅವಳಾಡಿದ ಮಾತುಗಳು, ಹಜಾರದಲ್ಲಿದ್ದ ಇವನ ಕಿವಿಗೂ ಬಿದ್ದವು. ಪಾಪ, ಆಕೆಯೇನು ಅಂತಹ ಪಿಸುಮಾತಿನಲ್ಲಿ ಮಾತನಾಡುತ್ತಿರಲಿಲ್ಲವಲ್ಲ? ಗಂಡನ ಜನ್ಮವನ್ನೇ ಜಾಲಾಡಿದ್ದಳು ಆ ಮಹಾಸತಿ. ಪೆಚ್ಚು ಮುಖ ಹೊತ್ತ ಮಿತ್ರ ಹೊರಬಂದು ಏನೋ ಸಬೂಬು ಹೇಳಿ, ಈತನನ್ನು ಸಾಗಹಾಕಬೇಕಾಯಿತು. ಇವನೂ ಸಪ್ಪೆಮೋರೆ ಹಾಕಿಕೊಂಡು ಹೊರಹೋಗುವಾಗ ಕಿಟಿಕಿಯ ಪರದೆಯ ಸಂದಿಯಲ್ಲಿ ಮಿತ್ರನ ಹೆಂಡತಿಯ ಮುಖ ಕಂಡಿತು. ಆ ಮುಖವನ್ನು ಅವನು ಹೇಗೆ ತಾನೇ ಮರೆತಾನು? ಅವಳೇ ಅಲ್ಲವೆ ಈತ ಕನಸು ಕಂಡು ಕನವರಿಸುತ್ತಿದ್ದ ಲಲಿತ?
ಮನೆಗೆ ಹೋಗುತ್ತ ಅವನ ಮನಸ್ಸೊಂದು ತಕ್ಕಡಿಯಾಗಿತ್ತು. ಬರುವ ಸಂಬಳದಲ್ಲೇ, ಒಂದು ದಿನವೂ ಗೊಣಗದೇ ಸಂಸಾರ ನಿಭಾಯಿಸುವ, ಮೃದು ಮಾತಿನ, ನೆಂಟರಿಷ್ಟರು ಬಂದರೆ ಆದರದಿಂದ ಕಾಣುವ ತನ್ನ ಹೆಂಡತಿಯೆಲ್ಲಿ? ಮನೆಗೊಬ್ಬರು ಬಂದರೆ ಕಾಫಿಯನ್ನೋ ಹಾಲನ್ನೋ ಮಾಡಿಕೊಡಬೇಕಾದರೆ ಗಂಡನ ಮರ್ಯಾದೆಯನ್ನೇ ಕಳೆಯುವ, ಅವನನ್ನು ಬಾಯಿಗೆ ಬಂದಂತೆ ಹಳಿಯುವ ಲಲಿತೆಯಂತಹ ಹೆಣ್ಣೆಲ್ಲಿ?
ಕೊನೆಗೂ ಅವನಿಗೆ, ಮುಳ್ಳುಗಿಡ ಯಾರು ಅನ್ನುವುದು ಅರ್ಥವಾಗಿಹೋಯಿತು.
-ಹಂಸಾನಂದಿ
Comments
ಉ: ಮರೆಯಲಾರದ ಸಣ್ಣಕಥೆಗಳು -೨
In reply to ಉ: ಮರೆಯಲಾರದ ಸಣ್ಣಕಥೆಗಳು -೨ by kalpana
ಉ: ಮರೆಯಲಾರದ ಸಣ್ಣಕಥೆಗಳು -೨