ಮರೆಯಲಾರದ ಸಣ್ಣ ಕಥೆಗಳು
ಕೆಲವು ಕಥೆಗಳಿರುತ್ತವೆ. ಎಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬಹುದಾದಂತಹ ಹಥೆಗಳವು. ರಾಮಾಯಣ, ಮಹಾಭಾರತ, ಅಥವ ಶಾಕುಂತಲ ಅಂತಹ ಕತೆಗಳವು. ಗೊತ್ತಿದ್ದರೂ, ಮತ್ತೊಮ್ಮೆ ಅವಕಾಶ ಸಿಕ್ಕರೆ, ಸಿನಿಮಾವೋ, ನಾಟಕವೋ, ಯಕ್ಷಗಾನವೋ, ಮತ್ತೊಂದೋ ಎಲ್ಲಾದರೂ ಆ ಕಥೆಗಳು ಮತ್ತೆ ಮತ್ತೆ ಬಂದರೂ, ಬೇಸರಿಸದೇ ನೋಡುತ್ತೇವೆ. ಮುಂದೇನಾಗುವುದು ಎಂಬ ಕುತೂಹಲವಿಲ್ಲದಿದ್ದರೂ.
ಇನ್ನು ಕೆಲವು ಕಥೆಗಳಿರುತ್ತವೆ. ಒಮ್ಮೆ ಓದಿದ ನಂತರ ಎಷ್ಟೋ ವರ್ಷಗಳವರೆಗೆ, ಮತ್ತೆ ಓದದೆಯೂ, ಕೇಳದೆಯೂ ನೆನಪಿನಲ್ಲಿ ಉಳಿಯುವಂತಹವು ಆ ಕಥೆಗಳು. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶಯ್ಯಂಗಾರರ ಅನೇಕ ಕಥೆಗಳು ಈ ಗುಂಪಿಗೆ ಸೇರುತ್ತವೆ ಎಂದು ನನ್ನ ಎಣಿಕೆ.
ಆದರೆ, ಇವತ್ತು ನಾನು ನೆನಪಿಸಿಕೊಂಡ ಕಥೆಗಳೇ ಬೇರೆ. ಅವುಗಳಲ್ಲೊಂದು ಅಶ್ವತ್ಥರ ನಾಸೀಂ ಬೇಗಂ ಎಂಬ ಕಥೆ. ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿನ (ಅಥವಾ ಇನ್ನೂ ಮೊದಲದ್ದೇ ಇರಬಹುದು) ಕಾಶ್ಮೀರದ ಚಿತ್ರಣ ಕೊಡುವ ಈ ಕಥೆ ವಿಶಿಷ್ಟವಾದ್ದು. ಕಥೆ ಆರಂಭವಾಗುವಾಗ, ಪಾಕೀಸ್ತಾನೀ ಯೋಧರು ಕಾಶ್ಮೀರಕ್ಕೆ ಮಾರು ವೇಷದಿಂದ ಬಂದು ಬಿಟ್ಟಿರುವ ಸುದ್ದಿ ಬಂದಿದೆ. ನಾಸೀಂ ಬೇಗಂ, ಗಡಿಯ ಬಳಿಯ ಹಳ್ಳಿಯೊಂದರಲ್ಲಿ ಚಹಾ ಮಾರುವ ಪೆಟ್ಟಿಗೆಯಂಗಡಿಯೊಂದನ್ನು ಇಟ್ಟಿರುವ ಇಳಿವಯಸ್ಸಿನ ಮುದುಕಿ. ಈ ಸಮಯದಲ್ಲಿ, ಅವಳ ಅಂಗಡಿಯಲ್ಲಿ ಚಾ ಕುಡಿಯಲು, ಭಾರತದ ಸೈನಿಕರ ಸಮವಸ್ತ್ರ ಧರಿಸಿದ ಐದಾರು ಸೈನಿಕರು ಬರುತ್ತಾರೆ. ಅವರಿಗೆ ಚಹಾ ಮಾಡುತ್ತ, ಅವರ ಮಾತಿನ ಧಾಟಿಯನ್ನು ಕೇಳಿದ ನಾಸೀಮಳಿಗೆ, ಇವರು ಮಾರುವೇಷದಲ್ಲಿರುವ ವಿರೋಧಿ ಪಡೆಯವರು ಎಂದು ಅರ್ಥವಾಗಿಬಿಡುತ್ತೆ. ತಕ್ಷಣ ಮಾಡುತ್ತಿದ್ದ ಚಹಾಗೆ ಅವಳು ವಿಷ ಬೆರೆಸುತ್ತಾಳೆ. ಅವರಿಗೆ ಅದನ್ನು ನೀಡುವಾಗ, ಸೈನಿಕರು, ಮೊದಲು ನೀನು ಕುಡಿ, ಇಲ್ಲದೇ ನಮಗೆ ನೀನು ಮೋಸ ಮಾಡಿದರೆ ಎಂದಾಗ, ಧೈರ್ಯವಾಗಿ ಅದನ್ನು ಕುಡಿಯುತ್ತಾಳೆ; ನಂತರ ಸೈನಿಕರೂ ಅದನ್ನು ಕುಡಿದು ಹೊರಟು ನಾಲ್ಕಾರು ಹೆಜ್ಜೆಹಾಕುವಲ್ಲಿ, ಅವರಿಗೆ ನಡೆದ ವಿಷಯ ಅರ್ಥವಾಗುತ್ತೆ. ಆಗ ನಾಸೀಂ, ನನ್ನ ದೇಶ ನನ್ನ ಜೀವಕ್ಕಿಂತ, ನನ್ನ ನಂಬಿಕೆಗಿಂತ ಹೆಚ್ಚೆಂದು ಹೇಳಿ ಜೀವಬಿಡುತ್ತಾಳೆ. ಕ್ಷಣಗಳಲ್ಲೆ, ಎಲ್ಲಾ ವೈರಿ ಸೈನಿಕರೂ ಸಾಯುತ್ತಾರೆ.
ಕೆಲವು ಸಮಯದ ನಂತರ, ಅಲ್ಲಿಕೆ ಬಂದ ಭಾರತೀಯ ಸೈನಿಕರಿಗೆ, ಈ ಹೆಣಗಳು ಏಕೆ ಹೀಗೆ ಬಿದ್ದಿವೆ ಎಂದು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.
ಅಶ್ವತ್ಥರ ಹಲವು ಕಥೆಗಳನ್ನು ಬಹಳ ಹಿಂದೆ ಓದಿದ್ದೆ - ಸುಮಾರು ಇಪ್ಪತ್ತೈದು ವರ್ಷಗಳ ನಂತರವೂ ನಾನು ಮರೆಯಲಾರದ ಕಥೆಗಳಲ್ಲೊಂದು - ನಾಸೀಂ ಬೇಗಂ.
-ಹಂಸಾನಂದಿ
Comments
ಉ: ಮರೆಯಲಾರದ ಸಣ್ಣ ಕಥೆಗಳು
ಉ: ಮರೆಯಲಾರದ ಸಣ್ಣ ಕಥೆಗಳು