ಮರ್ಕಟ ಮನ
ಮನಸ್ಸು ಎಲ್ಲಿಂದ ಎಲ್ಲಿಗೆ ಹೇಗೆ ಹಾರುತ್ತೆ ನೊಡಿ.
ಆರ್ಥರ್ ಸಿ. ಕ್ಲಾರ್ಕ್ ಅವರ "3001: The Final Odyssey" ಪುಸ್ತಕದಲ್ಲಿನ ಒಂದು ಸಂದರ್ಭ. ೨೦೦೧ನೆಯ ಇಸವಿಯಲ್ಲಿ ಭೂಮಿಯಿಂದ ಗುರುಗ್ರಹಕ್ಕೆ ನೌಕೆಯನ್ನು ಕಳುಹಿಸಿರುತ್ತಾರೆ. ಅದರಲ್ಲಿನ ನಾವಿಕರಲ್ಲಿ ಒಬ್ಬ, ಫ್ರ್ಯಾಂಕ್ ಪೂಲ್, ಕಾರಣಾಂತರಗಳಿಂದ ನೌಕೆಯಿಂದ ಹೊರ ಬೀಳುತ್ತಾನೆ. ಅವನ ಕಥೆ ಮುಗಿಯಿತು ಎಂದು ಎಲ್ಲರೂ ಅವನ ಕೈ ಬಿಡುತ್ತಾರೆ. ೩೦೦೧ರಲ್ಲಿ ನೆಪ್ಚೂನ್ ಗ್ರಹದ ಆಚೆ ಕೆಲಸದದಲ್ಲಿರುವ ಭೂಮಿಯ ನೌಕೆಯವರು ಅವನನ್ನು ಹಿಡಿಯುತ್ತಾರೆ. ೧೦೦೦ ವರ್ಷಗಳ ಕಾಲ ಸೂರ್ಯನ ಸುತ್ತು ಅಂತರಿಕ್ಷದಲ್ಲಿ ಸುತ್ತುತ್ತಿದ್ದರೂ ನಿದ್ರೆಯಿಂದ ಎದ್ದವನಂತೆ ಪೂಲ್ ಮಹಾಶಯ ಎಚ್ಚರವಾಗುತ್ತಾನೆ. ಅವನನು ಭೂಮಿಗೆ ಕರೆತಂದಾಗ ವೈದ್ಯರು ಪರೀಕ್ಷೆ ಮಾಡುತ್ತ ತಲೆಗೆ ತಂತುಗಳನ್ನು ಜೋಡಿಸುತ್ತಾರೆ. "ಇದೇನು, ಎಲೆಕ್ಟ್ರೋ ಎನ್ಸೆಫಲೋಗ್ರಾಮೆ?" ಎಂದು ಪೂಲ್ ಕೇಳಿದಾಗ ವೈದ್ಯನಿಗೆ ತಕ್ಷಣ ಅರ್ಥವಾಗುವುದಿಲ್ಲ. ಆಮೇಲೆ ಸಾವರಿಸಿಕೊಂಡು "ಹೌಧ್ಹೌದು, ಈಗ ಅದಕ್ಕೆ ಬ್ರೈನ್ ಸ್ಕ್ಯಾನ್ ಅಂತೀವಿ" ಎನ್ನುತ್ತಾನೆ.
ಇದನ್ನು ಓದಿದಾಗ ನನಗೆ ಥಟ್ಟನೆ ಹೊಳೆದಿದ್ದೇನು ಗೊತ್ತೆ? ಎ. ಎನ್. ಮೂರ್ತಿರಾಯರು ಆರ್. ಎಲ್. ನರಸಿಂಹಯ್ಯನವರ ಬಗ್ಗೆ ಬರೆಯುತ್ತ ಒಂದು ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ. ನರಸಿಂಹಯ್ಯನವರು ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ (ಫಿಸಿಕ್ಸ್) ಪ್ರಾಧ್ಯಾಪಕರಾಗಿದ್ದವರು. ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯಲಾರಂಭಿಸಿದವರಲ್ಲಿ ಒಬ್ಬರು. E.E.G ಯ ಬಗ್ಗೆ ಬರೆಯುವಾಗ ಅವರು "ವಿದ್ಯುನ್ಮಸ್ತಿಷ್ಕರೇಖಾಯಂತ್ರ" [Electro-Encephalograph ನ ನೇರ ಸಂಸ್ಕೃತಾನುವಾದ] ಎಂದು ಪ್ರಯೋಗಿಸಿದ್ದರಂತೆ. ಮೂರ್ತಿರಾಯರು "ಏನು ಸ್ವಾಮಿ ಕ್ಷ ಕ್ಷ ಕ್ಷ ಎನ್ನುವ ಹಾಗಿದೆಯಲ್ಲ, ಎಲೆಕ್ಟ್ರೋ ಎನ್ಸೆಫಲೋಗ್ರಾಫ್ ಎನ್ನಬಾರದೆ" ಎಂದಾಗ ನರಸಿಂಹಯ್ಯನವರು ಹೇಳಿದ್ದು "ನಮ್ಮ ಕನ್ನಡ ಜನಕ್ಕೆ ಸಂಸ್ಕೃತದ ಹೆಸರು ಇಂಗ್ಲಿಷ್ ಹೆಸರಿನಷ್ಟೆ ಹೊಸದು. ಸಂಸ್ಕೃತ ನಮ್ಮ ಜಾಯಮಾನಕ್ಕೆ ಹತ್ತಿರದ್ದು. ಇದಕ್ಕೆ ಕನ್ನಡ ಪದ ಬರುವವರೆಗೂ ಸಂಸ್ಕೃತ ಪದವೆ ಇರಲಿ ಆಮೇಲೆ ಬೇಕಾದರೆ ನನ್ನ ಸಂಸ್ಕೃತ ಪದವನ್ನು ನಿಘಂಟಿನಲ್ಲಿ ಹೂಳಲಿ ಬಿಡಿ".
[ ತಾಂತ್ರಿಕಪದಗಳ ಬಗ್ಗೆ - ಸುಲಭವಾಗಿ ಕನ್ನಡಿಸಲಾಗದ ತಾಂತ್ರಿಕಪದಗಳ ಬಗ್ಗೆ - ನನ್ನ ವಯಕ್ತಿಕ ನಿಲುವೂ ಅದೆ. ಈ ಬಗ್ಗೆ ಸಂಪದದಲ್ಲೂ ಕನ್ನಡ ವಿಕಿಪೀಡಿಯಾದಲ್ಲೂ ಚರ್ಚೆಗಳು ನಡೆದವು. ಅಲ್ಲಿನ ತೀರ್ಮಾನಗಳು ಬೇರೆಯವಾದರೂ ವಯಕ್ತಿಕ ಬರೆವಣಿಗೆಯಲ್ಲಿ ನಾನು ಸಂಸ್ಕೃತ ಪಕ್ಷಪಾತಿ. ನಾನು ಬರೆದದ್ದು ಮಾತ್ರ ಅಷ್ಟರಲ್ಲಿಯೆ ಇದೆ. ]
ನನ್ನ ತಲೆ ಅಲ್ಲಿಂದ ಅಲ್ಲಿ ಒಡಿದ್ದು ಮರೆತು ಹೋಗಿತ್ತು. ಮೊನ್ನೆ ಪುಸ್ತಕಗಳ ಮೇಲಿನ ಧೂಳು ಕೊಡವುತ್ತಿದ್ದಾಗ ಆರ್. ಎಲ್. ನರಸಿಂಹಯ್ಯನವರ (ಎಂದೋ ಕೊಂಡ, ಇನ್ನೂ ಓದಿ ಮುಗಿಸದ) ನಕ್ಷತ್ರ ದರ್ಶನ ಕೈಗೆ ಬಂತು. ಅದಕ್ಕೆ ಮುನ್ನುಡಿ ಬರೆಯುತ್ತ "ನಮ್ಮ ಪೂರ್ವಿಕರು ಹೆಸರಿಟ್ಟಿಲ್ಲದ ರಾಶಿಗಳನ್ನು ಪಾಶ್ಚಾತ್ಯರಂತೆ ಯವನ ನಾಮಗಳಿಂದಲೇ ಕರೆಯುವುದರ ಬದಲು ಅವುಗಳಿಗೆ ಹೊಸ ಹೆಸರುಗಳನ್ನಿಟ್ಟಿರುವುದು ಸಾಧುವೇ ?" ಎಂಬ ಪ್ರಶ್ನೆಯನ್ನೆತ್ತಿ "ರಾಶಿಗಳನ್ನು ನಾವು ಪಾಶ್ಚಾತ್ಯ ಹೆಸರುಗಳಿಂದಲೇ ಕರೆಯಬೇಕೆಂದು ತೀರ್ಮಾನಿಸಿದರೆ ೮೮ ಅಪರಿಚಿತ ನಾಮಪದಗಳನ್ನೂ ೮೮ ಗ್ರೀಕ್ ಷಷ್ಠೀ ವಿಭಕ್ತಿಗಳನ್ನೂ ಕನ್ನಡಿಗನು ಕಂಠಪಾಠ ಮಾಡಬೇಕಾಗುತ್ತದೆ. ಇದಕ್ಕಿಂತ ೮೮ ಸುಲಭ ಸಂಸ್ಕೃತ ಶಬ್ದಗಳನ್ನು ಪರಿಚಯ ಮಾಡಿಕೊಳ್ಳುವುದು ಸರಳ ಮಾರ್ಗ" ಎಂದು ಉದಾಹರಣೆಗಳ ಸಮೇತ ತರ್ಕಿಸಿದ್ದಾರೆ.
ಮುನ್ನುಡಿಯನ್ನು ಓದುತ್ತಿದ್ದ ಹಾಗೆ E.E.G. ಕಥೆಯೂ ಹಿಂದಲೆ ೩೦೦೧ರ ಕಥೆಯೂ ಅಲ್ಲಿಂದ ಅಲ್ಲಿಗೆ ತಲೆ ಓಡಿದ್ದೂ, ಒಡಿದ್ದನ್ನು ಮರೆತಿದ್ದೂ ಎಲ್ಲವೂ ನೆನಪಿಗೆ ಬಂದವು. ಮತ್ತೆ ಮರೆಯುವ ಮುನ್ನ ಬರೆದಿಟ್ಟರೆ ಒಳ್ಳೆಯದು ಎನಿಸಿತು. ಬರೆದಿದ್ದೇನೆ.
[ ನಕ್ಷತ್ರ ದರ್ಶನ, ಆರ್. ಎಲ್. ನರಸಿಂಹಯ್ಯ, ಕನ್ನಡ ಪುಸ್ತಕ ಪ್ರಾಧಿಕಾರ, ೧೯೯೬; ಬೆಲೆ ೩೪ರೂ. ಖಗೋಳ ಶಾಸ್ತ್ರದ ಪರಿಚಯ ಮಾಡಿಸಿಕೊಡುವ ಗ್ರಂಥ. ೧೯೫೪ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ಅಂದಿನ ಅಸ್ಟ್ರಾನಮಿಗೂ ಇಂದಿನದಕ್ಕೂ ಅಜಗಜಾಂತರ. ಆದರೂ ಆಸಕ್ತರಿಗೆ, ಅದರಲ್ಲೂ ಎಳೆಯರಿಗೆ, ಹೇಳಿಮಾಡಿಸಿದಂತಹ ಪುಸ್ತಕ. ಕನ್ನಡದಲ್ಲಿದೆ ಬೇರೆ.
3001: The Final Odyssey ಆರ್ಥರ್ ಸಿ. ಕ್ಲಾರ್ಕ್ ಅವರ ಕಾದಂಬರಿ. 2001: A Space Odyssey ಪುಸ್ತಕದಿಂದ ಪ್ರಾರಂಭವಾಗುವ ಕಥೆಯ ನಾಲ್ಕನೆಯ, ಕೊನೆಯ ಕಂತು. 2001 ಕಾದಂಬರಿಯನ್ನು ಆಧರಿಸಿ ಸ್ಟ್ಯಾನ್ಲಿ ಕ್ಯುಬ್ರಿಕ್ ತೆಗೆದ ಚಿತ್ರ ಹೆಸರುವಾಸಿಯಾಯಿತು. ಮಾನವನ ಉಗಮ ವಿಕಾಸಗಳ ಬಗ್ಗೆ, ವಿಶ್ವದಲ್ಲಿ ನಮ್ಮ ಸ್ಥಾನದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಆಲೋಚನೆಗಳನ್ನು ಎಬ್ಬಿಸುವ ಕಥೆ. ]
Comments
ನನಗೆ ಇಷ್ಟ ಆಯ್ತು!