ಮಲೆನಾಡಿನ ಬ್ಯಾಸಿಗಿ ದಿನಚರಿ......!
ಮೊನ್ನೆ ಸಾಗರದಲ್ಲಿಅಣ್ಣನ ಪುಸ್ತಕದ ಬಿಡುಗಡೆ ಇತ್ತು ಅಂತಾ ನೆವ ಮಾಡಿಕೊಂಡು ಅಂತೂ ಎರಡು ದಿನದ ಮಟ್ಟಿಗೆ ಮನೆಗೆ ಹೋಗಿ ಬಂದೆ. ಬಸ್‌ಸ್ಯ್ಟಾಂಡ್ ಇಳಿದು ಮನೆ ಕಡೆ ಹೆಜ್ಜೆಹಾಕೋವಾಗ ಅದ್ಯಾಕೋ ದೀಡೀರನೇ ಮಲೆನಾಡಿನ ಬೇಸಿಗೆ ನೆನಪಾಯಿತು. ಅಂದಹಾಗೇ ಬೇಸಿಗೆಯಲ್ಲಿ ಮನೆಗೆ ಹೋಗದೇ,ನೇರಳೆ ಹಣ್ಣು, ಈಚಲು ಹಣ್ಣು, ಸಂಪಿಗೆ ಹಣ್ಣು , ಕಬ್ಬಿನಾಲೆ ಇವನೆಲ್ಲಾ ಕಾಣದೆ ಸುಮಾರು ಐದು ವರ್ಷಗಳೇ ಕಳೆದುಹೋಗಿತ್ತು. ನಾವು ಇಸ್ಕುಲಿಗೆ ಹೋಗುತ್ತಿದ್ದ ಕಾಲದಲ್ಲಿ ಬೇಸಿಗೆ ಅಂದ್ರೆ ನಮಗೆ ಬೊಂಬಾಟ್ ಕಾಲ. ಆವಾಗಿನ ನಮ್ಮ ದಿನಚರಿ ಅಂದ್ರೆ.....ಛೇ ಇವತ್ತು ಅದನ್ನು ನೆನಸಿಕೊಂಡ್ರೆ ತುಂಬಾ ಫೀಲ್ ಆಗತ್ತೆ.
ಬೆಳಿಗ್ಗೆ ಆರು ಗಂಟೆಗೆ ಶುರು ನಮ್ಮ ಕಿರಿಕೆಟ್ಟು ಮ್ಯಾಚು! ಸುಮಾರು ಒಂಬತ್ತು ಘಂಟೆಗೆವರೆಗೂ ಕಿರಿಕೆಟ್ಟಾಡಿ ಕೊನೆಗೆ ಲೈಟಾಗೊಂದು ನಾಸ್ಟಾ ಮಾಡಿ ಅಪ್ಪ ಮನೇಲಿ ಇದ್ದಿದ್ದೂ ಹೌದಾದ್ರೆ ಗಡದ್ದಾಗಿ ಸ್ನಾನ ಮಾಡಿ ಅಪ್ಪನ ಎದುರಿಗೆ ಸಂಧ್ಯಾವಂದನೆ ಮಾಡೋ ನಾಟಕವಾಡಿ, ಗಾಯಿತ್ರಿ ಮಂತ್ರ ಹೇಳೋ ಕಾಲದಲ್ಲಿ ಯಾರ್ಯಾರದ್ದೋ ಹೆಸರು ಹೇಳಿ ಅಮ್ಮನ ಹತ್ರಾ ಬೈಸಿಕೊಂಡು ಕೊನೆಗೆ ಗುಡ್ಡ ಹತ್ತಿದ್ವೀ ಅಂದ್ರೆ ಶುರು ನೋಡಿ ನಮ್ಮ ದಿನಚರಿ!
ಹಾಳಾದ ಬೆಂಗಳೂರಿನಲ್ಲೂ ನಮ್ಮ ದಿನಚರಿಯಿದೆ. ಅದನ್ನಾ ಹೇಳಿದರೂ ಪ್ರಯೋಜನವಿಲ್ಲ ಬಿಡಿ. ಅಂದಹಾಗೇ ಗುಡ್ಡ ಹತ್ತುವ ಮೊದಲು ಒಂದಿಷ್ಟು ನೇರಳೆ ಹಣ್ಣಿನ ನೈವೇದ್ಯ ನಮಗೆ ಆಗಲೇ ಬೇಕಿತ್ತು. ಮಲೆನಾಡಿನಲ್ಲಿ ಬಿಡುವ ವಿಶಿಷ್ಟ ಹಣ್ಣುಗಳ ಪೈಕಿ ನೇರಳೆ ಉತ್ಕೃಷ್ಟವಾದದ್ದು. ನಾನು ಅತೀ ಇಷ್ಟಪಡುವ ಹಣ್ಣು ಅದೆ.ತುಂಬಾ ಸಿಹಿಯಾಗಿರುವ ತುಂಬಾ ರುಚಿಯುತವಾದ ಹಣ್ಣು ಅದು. ತಿಂದಷ್ಟು ತಿನ್ನಬೆಕು ಅನ್ಸತ್ತೆ. ಅದರ ಮುಂದೆ ನಿಮ್ಮ ಆಪಲ್ಲು, ಗ್ರೇಪು ಯಾವುದೂ ಅಲ್ಲ! ಅಷ್ಟು ರುಚಿ. ಅದನ್ನ ಒಂದು ರೌಂಡ್ ತಿಂದು ಮುಗಿಸಿ ನಮ್ಮ ಸೈನ್ಯ ಪಯಣ ಮುಂದುವರೆಸುವಾಗ ಘಂಟೆ ಹನ್ನೆರಡು ಆಗಿರುತ್ತಿತ್ತು. ಕೊನೆಗೆ ಗೇರು ಬ್ಯಾಣಕ್ಕೆ ನುಗ್ಗಿ ಒಂದಿಷ್ಟು ಗೇರು ಹಣ್ಣು ತಿಂದು ಯಾರದ್ದೋ ಬ್ಯಾಣದ ಗೇರು ಪೀಠ ಕದ್ದು ಅವರ ಹತ್ರಾ ಬೈಸಿಕೊಂಡು ರಂಪಾ ರಾಮಾಯಣ ಮುಗಿಯುವ ಹೊತ್ತಿಗೆ ಊಟದ ನೆನಪು. ನಿಜವಾಗ್ಲೂ ಊಟ ನಮಗೆ ಬೇಡದೇ ಹೋದ್ರು ಅಪ್ಪ, ಅಮ್ಮ ಬೈತಾರಲ್ಲ ಅಂತಾ ನಾವು ಅವರನ್ನ ಬೈದುಕೊಳ್ಳುತ್ತಾ ಊಟಕ್ಕೆ ಬರೋದು.
ಆಮೇಲೆ ದಿನಚರಿಯ ಎರಡನೇ ಅಧ್ಯಾಯ. ಈಚಲು ಹಣ್ಣಿನ ಬೇಟೆ! ಒಂತರಹ ಒಣ ದ್ರಾಕ್ಷಿ ರುಚಿಯುಳ್ಳಪಸಂದಾದ ಹಣ್ಣು ಅದು. ಈಗಂತೂ ಸುಡುಗಾಡು ನೀಲಗಿರಿ ಪ್ಲಾಂಟೇಶನ್ನಾಗಿ ಒಂದು ಈಚಲು ಮಟ್ಟಿನೇ ಇಲ್ಲ ನಮ್ಮ ಮನೆ ಹತ್ರಾ. ಇದಾದ ಮ್ಯಾಕೆ ಮರಕೋತಿ, ಮಣ್ಣು ಮಸಿ ಅಂತಾ ಹುಚ್ಚುಚ್ಚು ಆಟ. ಕೊನೆಗೆ ೪.೩೦ಕ್ಕೆ ಎಂಟರ್ ದೀ ಫೀಲ್ಡ್ ಫಾರ್ ಪ್ಲೇಯಿಂಗ್ ಕಿರಿಕೆಟ್ಟು. ಆಚೆ ಮನೆ ಅಜ್ಜ, ಇಚಿಗೆ ಕಾಡಜ್ಜನ ಮನೆ ಅಮ್ಮಮ್ಮ ಎಲ್ಲಾ ಗಟ್ಟಿಯಾಗಿ ನಿದ್ದೆ ಮಾಡ್ತಾ ಇದ್ದರೆ ನಾವು ಕೂಗಿ ಕಬ್ಬರಿಯುವುದು. ಅರೆನಿದ್ದೆಗಣ್ಣಲ್ಲಿದ್ದ ಅವರು ಬೆತ್ತ ತಗೊಂಡು ಆಲದ ಮರದವರೆಗೆ ನಮ್ಮನ್ನ ಬೆರೆಸಿಕೊಂಡು ಬರ್ತಾ ಇದ್ದಿದ್ದನ್ನು ನೆನಸಿಕೊಂಡ್ರೆ ಇವತ್ತಿಗೂ ನಗು ಬರತ್ತೆ.
ಹೋಗ್ಲಿ ಬಿಡಿ ಕಳೆದು ಹೋದ ಬದುಕು ಬಾಲ್ಯದಲ್ಲೇ ಕಳೆದುಕೊಂಡ ಸರಕು ಇವ್ಯಾವುದು ನಾವು ಎಷ್ಟೇ ದೊಡ್ಡವರಾಗಿ ಹಣ ಸಂಪಾದಿಸಿ ಕೀರ್ತಿ ಗಳ್ಸಿದರೂ , ಎಷ್ಟು ಅತ್ತು ಕರೆದು ಮಾಡಿದರೂ ವಾಪಾಸ್ ಬರೋದಿಲ್ಲ. ಏನೋ ನೆನಪಾಗಿ ಯಾಕೋ ಬರೆಯಲಿಕ್ಕೆ ಕೈ ಮುಂದೆ ಓಡ್ತಾನೇ ಇಲ್ಲ. ಸಾದ್ಯವಾದಾಗ ಮತ್ತೊಮ್ಮೆ ಬರೀತೀನಿ ದಿನಚರಿಯನ್ನ. ಸದ್ಯಕ್ಕೆ ಇಷ್ಟು ಸಾಕು.