ಮಳೆಭೈರವ ರೋಷ

ಮಳೆಭೈರವ ರೋಷ

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ
ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ

ಕುವೆಂಪು ರವರ ಕವನದ ಮೇಲಿನ ಸಾಲುಗಳು ನನಗೆ ನೆನಪಾದದ್ದು, ಅನುಭವಕ್ಕೆ ಬಂದದ್ದು ಮೊನ್ನೆ ಶುಕ್ರವಾರ ರಾತ್ರಿ, ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಹೊರಟಾಗ .. ತುಮಕೂರು ರಸ್ತೆಯ ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳಲು , ಮಾಗಡಿ ರಸ್ತೆಯಲ್ಲಿ ಹೊರಡುತ್ತಿದ್ದಂತೆ ಶುರುವಾದ ಮಳೆ....

ಮೂರಡಿ ಮುಂದಿನ ರಸ್ತೆ ಕಾರಿನ ದಾರಿದೀಪಗಳ ಪ್ರಖರ ಬೆಳಕಿನಲ್ಲೂ ಕಾಣದಾದಾಗ, ಸುರಿದ ಮಳೆಹನಿ ಟಾರು ರಸ್ತೆಗೆ ಮುತ್ತಿಟ್ಟು ಸರ್ರ್ನೆ ಹಿಮಮಣಿಯಂತೆ ಕಾರೆತ್ತರಕ್ಕೂ ಚಿಮ್ಮಿ ಬರುವಾಗ , ಸುತ್ತಲಿನ ಕತ್ತಲೆಯ ಜಗತ್ತಿನಲ್ಲಿ, ನಮ್ಮ ಮುಂದಷ್ಟೇ ಬೆಳಕಿನ ದಾರಿ, ಅಲ್ಲಿ ನೀರ್ ಮಣಿಗಳ ನರ್ತನ ಲೋಕ , ನೋಡಿ ಕಣ್ತುಂಬಿಕೊಳ್ಳಲು ಖಾಲಿ ಮನಸು, ಜೊತೆಗೆ ಪಿ.ಬಿ. ಶ್ರೀನಿವಾಸರ ಮಧುರಕಂಠದ ಯುಗಳ ಗೀತೆ, ಆ ಗೀತೆಗೆ ತಾಳ ಹಾಕಿದಂತೆ ಕಾರಿನ ತಲೆಯ ಮೇಲೆ ಬಿದ್ದು ಗರ್ಜಿಸುವ ನೀರ ಹನಿಯ ಸದ್ದು. ಮಧ್ಯೆ ಮಧ್ಯೆ ಕಮರ್ಷಿಯಲ್ ಬ್ರೇಕ್ ಬರುವಂತೆ, ಗುಡುಗು ಸಿಡಿಲುಗಳ ಆರ್ಭಟ , ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರುದ್ರಮನೋಹರ .

ಮುಸಲಧಾರೆ, ಕುಂಭದ್ರೋಣ ಎಂದೆಲ್ಲಾ ಹೇಳುವ ಹಾಗೆ ಆಕಾಶಕ್ಕೆ ತೂತು ಬಿದ್ದಂತೆ ಒಂದೇ ಸಮನೆ ಹೊಯ್ದ ಮಳೆ ಬಾಯಾರಿದ ಇಳೆಗೆ ತಂಪುಣಿಸಿತೋ , ಈ ಇಳೆಯಲ್ಲಿ ತೃಣಮಾತ್ರನಾದರೂ, ತಾನೇ ತಾನಾಗಿ ಮೆರೆಯುತ್ತಿರುವ ಮಾನವನೆದೆಯಲ್ಲಿ ಕಂಪನವನುರಣಿಸಿತೋ ನಾ ಕಾಣೆನಾದರೂ, ಮೇಲಿಂದ ಬಿದ್ದು ಭೂತಾಯಿಯ ಮಡಿಲಲ್ಲಿ ಒಂದಾಗಿ ಹೋಗುವ ಮಳೆಹನಿಗಳ ಆಟ ನನ್ನೆದೆಯಲ್ಲಿ ಮೂಡಿಸಿದ್ದು ಭಾವಗಳ ಸಂತೆ. ಈ ಆಟ ಕಂಡು ನಾನಾದೆ ಭಗವಂತನೆದುರಾದ ಭಕ್ತನಂತೆ.

ಈ ಮಳೆ ಯ ವೈಭವ ...ಏನದರ ಸೊಬಗು.. ಇದೇನು ಮನದನ್ನೆಯನ್ನಗಲಿ ಯುದ್ದಕ್ಕೆ ಹೋದ ಪ್ರಿಯಕರ ಮತ್ತೆ ಮನೆಗೆ ಮರಳಿ ಬಂದ ಬಗೆಯೋ..? ಬೆಳ್ಳಂಬೆಳಗೇ ಮನೆಯಿಂದ ಹೊರಬಿದ್ದ ಮಗ ಹಸಿದೇ ಕಾಯುತ್ತಿರುವ ತಾಯಿಯನ್ನು ನೆನೆದು ಓಡೋಡಿ ಬರುವ ಪರಿಯೋ. ಭೂಮಾತೆಯ ಮೇಲೆ ನರರೆಸಗುತ್ತಿರುವ ದೌರ್ಜನ್ಯವನ್ನು ಅಳಿಸಲು ಸುರಿದ ಪುಣ್ಯಾಹಜಲವೋ. ತೃಣಗಾತ್ರದ ಮನುಜನ ಭೀಮ ಸಾಧನೆಗಳನ್ನೂ.. ಅದರ ಉಪಯುಕ್ತತೆಯನ್ನೂ ಕಂಡ ಆನಂದದ ಅಶ್ರುಗಳೋ. ಮಾತು ಕೇಳದ ಮಗನ ಮೇಲೆ ಕೋಪಿಸಿಕೊಂಡು ಬಯ್ಗುಳವನುಣಿಸುವ ಪಿತನ ಕೋಪವೋ. ಅಥವಾ.. ನೀನು ಏನೇ ಮಾಡಿದರೂ ನನ್ನ ಕಿರುಬೆರಳ ಸಾಮರ್ಥ್ಯಕ್ಕೂ ನೀನು ಸಮವಲ್ಲವೆಂದು ನಮಗೆ ಹೇಳುವ ಪರಿಯೋ..?

ಏನಾದರಾಗಲಿ.. ನಾವು ತೃಣವೆಂಬರಿವು ನಮಗಿದ್ದರೆ.. ಇದು ಮಳೆ ಯಾಟ. ಇಲ್ಲವೆಂದರೆ.. ಇದು ..
ಮಳೆಯಲ್ಲಿದು ಮಳೆಯಲ್ಲಿದು ಮಳೆಭೈರವ ರೋಷ.

Rating
No votes yet

Comments