ಮಳೆಯಲ್ಲಿ ಕಂಡೆ ನಾ ನಿನ್ನ...

ಮಳೆಯಲ್ಲಿ ಕಂಡೆ ನಾ ನಿನ್ನ...

ಬೀಸುತ್ತಿದ್ದ ಗಾಳಿಗೆ ಪಟಪಟನೆ ಹೊಡೆದುಕೊಳ್ಳುತ್ತಿದ್ದ 

ಕಿಟಕಿಯ ಕದವನ್ನು ಮುಚ್ಚಲು ಬಳಿ ಬಂದಾಗ 

ಶುರುವಾಗಿತ್ತು ಮುಗಿಲಿನಲ್ಲಿ ಮೇಘಗಳ ಘರ್ಷಣೆ

ನೆರಳು ಬೆಳಕಿನಾಟದ ನಡುವೆ ಗುಡುಗಿನ ತಾಳಮದ್ದಲೆ

 

ಕಣ್ಣು ಕೊರೈಸುವಂಥ ಸಿಡಿಲು ಮಿಂಚಿನ ಆರ್ಭಟದೊಂದಿಗೆ

ಇಳೆಯ ತಣಿಸಲು ಇಳಿಯಿತು ಹನಿಹನಿ ಮಳೆಹನಿ

ಚಿಟಪಟ ಮಳೆಹನಿಯು ನನ್ನ ಮುಖವ ಸ್ಪರ್ಶಿಸಲು

ಮರೆತೇ ನನ್ನ ನಾ ವರ್ಣಿಸಲಾಗದ ಆನಂದದಿ..

 

ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಕಂಡೆ ನಾನಂದು

ಹಾಲ್ಬಣ್ಣದ ಪಾದಗಳ ಮೇಲೆ ಬೆಳ್ಳಿಯ ಕಾಲ್ಗೆಜ್ಜೆಯ

ಮಳೆರಾಯನು ನಿನ್ನನ್ನು ಅಪ್ಪಿಕೊಳ್ಳಲು ಬರುತ್ತಿರಲು

ನೀನವನಿಂದ ತಪ್ಪಿಸಿಕೊಂಡು ಓಡಿ ಬರುತ್ತಿರಲು..

 

ಮಳೆರಾಯನನ್ನು ಸೋಲಿಸಲಾಗದೆ ನೀನವನಿಗೆ

ಸೋತು ಬಳಲಿ ಅವನಿಗೆ ನಿನ್ನನ್ನೊಪ್ಪಿಸಿ ನಿಂತು

ಕೈಯಿಂದ ಮುಂಗುರಳನ್ನು ಹಿಂದಕ್ಕೆ ಸರಿಸಿದಾಗ  

ಕಂಡೆ ಕಂಡೆ ನಾ ನಿನ್ನ ಆ ಸುಂದರ ವದನವ

 

ಏನು ಅಂದ ಏನು ಚಂದ ಆ ನಿನ್ನ ವದನ

ನೀಲಿ ಕಂಗಳ ನಡುವಿನ ಪುಟ್ಟ ಹಣೆಯಲ್ಲಿನ 

ಕುಂಕುಮ ನೂರ್ಪಟ್ಟು ಹೆಚ್ಚಿಸಿತ್ತು ನಿನ್ನಂದವ

ಯಾರೇ ನೀ ದೇವತೆಯೇ? ಯಾರೇ ನೀ? 

 

ಚಿತ್ರ ಕೃಪೆ : ಅಂತರ್ಜಾಲ
Rating
No votes yet

Comments