ಮಳೆಯೋ ಮಳೆ.
ಶುರುವಾಗಿದೆ ಮತ್ತೊಮ್ಮೆ ಜಿಟಿಜಿಟಿ,ಜಿನುಗುಟ್ಟುವ ಮಳೆ... ಒಂದೆರೆಡು ಹನಿ ಮಳೆ ಬಿದ್ದರೆ ಸಾಕು, ಕಪಾಟಿನಲ್ಲಿದ್ದ ರೈನ್ ಕೋಟ್ ಗಳಿಗೆ ಬಿಡುಗಡೆ ಭಾಗ್ಯ, ಮುದುಡಿ ಮೂಲೆಗುಂಪಾಗಿದ್ದ ಕೊಡೆಗಳಿಗೆ ಅರಳುವ ಸೌಭಾಗ್ಯ...ಒಂದು ಹದ ಮಳೆ ಜೋರಾಗಿ ಬಿದ್ದರೆ ಸುನಾಮಿಯೇ ಬಂದಂತೆ ಆಡುವ ಜನರನ್ನು ಕಂಡರೆ ನಗು ಬರುತ್ತದೆ.
ಭಾಗಶಃ ಈಗಿನ ಬೆಂಗಳೂರಿನ ಜನಕ್ಕೆ ೯೦ರ ದಶಕದ ಮಳೆಯ ಪರಿಚಯವೇ ಇರುವುದಿಲ್ಲ.... ಏಕೆಂದರೆ ಮುಕ್ಕಾಲು ಪಾಲು ಬೆಂಗಳೂರನ್ನು ವಲಸಿಗರೇ ಆಕ್ರಮಿಸಿಕೊಂಡಿದ್ದಾರೆ. ಇವರಿಗೆ ಬೆಂಗಳೂರಿನ ಅಸಲಿ ಪರಿಚಯವೇ ಇಲ್ಲ..ಇವರಿಗೆ ಬರೀ ಮಾಲ್ ಗಳು, ಎತ್ತರೆತ್ತರದ ಕಟ್ಟಡಗಳು, ಅಪಾರ್ಟ್ಮೆಂಟ್ಗಳು, ಮೆಟ್ರೋ ಟ್ರೈನ್ ಗಳು, ಅಗಲವಾದ ರಸ್ತೆಗಳು, ಆ ರಸ್ತೆಗಳಲ್ಲಿ ಗಂಟೆಗಟ್ಟಲೆ ಕಾದು ನಿಲ್ಲಿಸುವ ಟ್ರಾಫಿಕ್ ಜಾಮ್ಗಳು..೯೦ರ ದಶಕದ ಬೆಂಗಳೂರಿನ ಪರಿಕಲ್ಪನೆಯೇ ಇವರಿಗಿಲ್ಲ..
ಆಗೆಲ್ಲ ಮಳೆ ಎಂದರೆ ಈಗಿನಂತೆ ಆಗೊಂದು ಈಗೊಂದು ಹನಿಯಂತೆ ಬೀಳುತ್ತಿರಲಿಲ್ಲ. ಒಮ್ಮೆಗೆ ಶುರುವಾದರೆ ಗಂಟೆಗಟ್ಟಲೆ ಧೋ ಎಂದು ಸುರಿಯುತ್ತಿದ್ದ ಮಳೆ, ಕೆಲವೊಮ್ಮೆ ದಿನಗಟ್ಟಲೆ ಸುರಿದಿದ್ದೂ ಉಂಟು... ಆದರೆ ಎಂದಿಗೂ ಮಳೆ ಜನಕ್ಕೆ ಭಯ ಹುಟ್ಟಿಸುತ್ತಿರಲಿಲ್ಲ... ಏಕೆಂದರೆ ಬಿದ್ದ ಮಳೆ ನೀರು ಎಲ್ಲೂ ನಿಲ್ಲದೆ, ಕೆರೆಗಳಿಗೆ ನಂತರ ಮೋರಿಗಳಿಗೆ ಸರಾಗವಾಗಿ ಹೋಗುತ್ತಿತ್ತು. ಈಗ ಅದೆಷ್ಟೋ ಕೆರೆಗಳು ನಾಮಾವಶೇಷ ಇಲ್ಲದಂತೆ ಹೋಗಿದೆ... ಇನ್ನು ಮೋರಿಗಳು!! ಯಾವ್ಯಾವ ಮೋರಿಯ ಮೇಲೆ ಯಾವ ಮಾಲ್ ಇದೆಯೋ.. ಯಾವ ಅಪಾರ್ಟ್ಮೆಂಟ್ ಇದೆಯೋ.... ಇನ್ನು ನೀರು ಹೋಗಬೇಕೆಂದರೆ ಎಲ್ಲಿಗೆ ತಾನೇ ಹೋದೀತು...
ಇನ್ನು ಮರಗಳು...ಬೆಂಗಳೂರಿನಲ್ಲಿ ಕಡಿದಿರುವ ಮರಗಳನ್ನು ಲೆಕ್ಕ ಹಾಕಿದರೆ ಬಹುಷಃ ಇಂದಿನ ಬೆಂಗಳೂರಿನ ಜನಸಂಖ್ಯೆಯ ಆಧಾರದ ಮೇಲೆ ಪ್ರತಿ ಐದು ಜನಕ್ಕೆ ಒಂದು ಮರದ ಹಾಗಿನ ಲೆಕ್ಕದಲ್ಲಿ ಕಡಿದಿರಬಹುದು. ಈ ಲೆಕ್ಕದಲ್ಲಿ ಮುಂಚಿನ ಹಾಗೆ ಮಳೆ ಬೀಳಬೇಕೆಂದರೆ ಹೇಗೆ ತಾನೇ ಸಾಧ್ಯ?? ಇನ್ನು ರಸ್ತೆಗಳ ಪರಿಸ್ಥಿತಿ ಆಗೆಲ್ಲಾ ಅಷ್ಟೆಲ್ಲ ಮಳೆ ಬಿದ್ದರೂ ರಸ್ತೆಗಳ ಗುಣಮಟ್ಟ ಈಗಿನಷ್ಟು ಹದಗೆಟ್ಟಿರಲಿಲ್ಲ. ಈಗ ಒಂದು ದಿನ ಮಳೆ ಬಿದ್ದರೆ ಸಾಕು ಟಾರ್ ಎಲ್ಲಿದೆ ಅಂತ ಹುಡುಕುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ರಸ್ತೆಯೊಳಗೆ ಗುಂಡಿಯೋ...ಗುಂಡಿಯೊಳಗೆ ರಸ್ತೆಯೋ !!!
ಯಾರನ್ನು ದೂರುವುದು? ಹೊರಗಿನಿಂದ ವಲಸೆ ಬರುವವರನ್ನೋ? ಭ್ರಷ್ಟ ರಾಜಕಾರಣಿಗಳನ್ನೋ? ವ್ಯವಸ್ಥೆಯನ್ನೋ ?
Comments
ಉ: ಮಳೆಯೋ ಮಳೆ.
ಜನಜಾಗೃತಿಯ ಅಗತ್ಯ ತೋರಿಸುವ ಲೇಖನ.