ಮಹಾನ್ ದೇಶಭಕ್ತ ಸಂತ ಶ್ರೀ ಗುರೂಜಿ ಗೊಲ್ವಾಲ್ಕರ್

ಮಹಾನ್ ದೇಶಭಕ್ತ ಸಂತ ಶ್ರೀ ಗುರೂಜಿ ಗೊಲ್ವಾಲ್ಕರ್

ಚಿತ್ರ

 

ಮಾಘ ಬಹುಳ ಏಕಾದಶಿ.ಶ್ರೀ ಗುರೂಜಿ ಗೊಲ್ವಾಲ್ಕರ್ ಅವರ ಜನ್ಮದಿನ. ಸ್ವಾಮಿ ವಿವೇಕಾನಂದರ ನಂತರ ಅವರ  ಇಚ್ಛೆಯಂತೆ  ದೇಶವನ್ನು ಪ್ರೀತಿಸುವ ಲಕ್ಷಲಕ್ಷ   ಯುವಕರನ್ನು ದೇಶಕ್ಕೆ ಕೊಟ್ಟ ಕೀರ್ತಿ ಶ್ರೀ ಗುರೂಜಿ ಗೋಲ್ವಾಲ್ಕರ್ ಅವರಿಗೆ ಸಲ್ಲುತ್ತದೆ. ಡಾ.ಹೆಡಗೇವಾರ್ ಆರಂಭಿಸಿದ  ಆರ್.ಎಸ್.ಎಸ್. ಸಂಘಟನೆಯನ್ನು ರಾಷ್ಟ್ರವ್ಯಾಪಿ ಮಾಡಿದ, ಅಷ್ಟೇ ಅಲ್ಲ ವಿಶ್ವದೆಲ್ಲೆಡೆ ಆರ್.ಎಸ್.ಎಸ್. ವಿಚಾರವನ್ನು ಅರ್ಥಾತ್ ಹಿಂದು ವಿಚಾರವನ್ನು  ಹರಡಿದ ಕೀರ್ತಿಯೂ ಗುರೂಜಿಯವರಿಗೇ ಸಲ್ಲಬೇಕು.ಶ್ರೀ ಗುರೂಜಿಯವರ ಭವ್ಯ ವ್ಯಕ್ತಿತ್ವದ ಬಗ್ಗೆ ಪತ್ರಿಕೆಗಳು ಏನು ಹೇಳಿವೆ? ಕೆಲವು ವರದಿ ನೋಡೋಣ..

1.    ರಾಂಚೀ ಎಕ್ಸ್ ಪ್ರೆಸ್ :-  “ಆಧುನಿಕ ಕಾಲದಲ್ಲಿ ಗಾಂಧೀಜಿ ನಂತರ ಲಕ್ಷಾಂತರ ಜನರ ಮೇಲೆ ತಮ್ಮ ವ್ಯಕ್ತಿತ್ವದಿಂದ ಪ್ರಭಾವ ಬೀರಿದವರು ಶ್ರೀ ಗುರೂಜಿ ಗೊಲ್ವಾಲ್ಕರ್”

2.    ಪ್ರಜಾವಾಣಿ:-  “ಅವರು ಪ್ರತಿಪಾದಿಸಿದ “ಹಿಂದು ರಾಷ್ಟ್ರ” ಮತೀಯವಾಗಿರದೆ ರಾಷ್ಟ್ರೀಯ ವಾಗಿತ್ತು. ಭಾರತವನ್ನು ತನ್ನ ಮಾತೃಭೂಮಿ ಎಂದು ತಿಳಿದು ಅದರ ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರುವ ಎಲ್ಲಾ ಭಾರತೀಯರೂ ಹಿಂದೂಗಳೇ ಎಂಬುದು ಗುರೂಜಿಯವರ ವಿಚಾರವಾಗಿತ್ತು.

3.    ಮದರ್ ಇಂಡಿಯಾ,ಮುಂಬೈ:-  “ ವ್ಯಾಸ, ವಾಲ್ಮೀಕಿ, ಸಂತತುಕಾರಾಮ, ಸಮರ್ಥ ರಾಮದಾಸರು, ಸ್ವಾಮಿ ವಿವೇಕಾನಂದರ ಸಾಲಿನಲ್ಲಿ ಗುರೂಜಿಯವರು ನಿಲ್ಲುತ್ತಾರೆ

4.    ಟೈಮ್ಸ್ ಆಫ್ ಇಂಡಿಯಾ , ಮುಂಬೈ:-  “ ತನ್ನ ಉಜ್ವಲ ಭೂತಕಾಲದ ಬಗ್ಗೆ ಗೌರವ ಹೊಂದಿರುವ, ತನ್ನ ಐತಿಹಾಸಿಕ ಸ್ವಂತಿಕೆಯನ್ನು ಕಳೆದುಕೊಳ್ಳದೇ ಪ್ರಗತಿಯನ್ನು ಸಾಧಿಸಬಲ್ಲ ಸಶಕ್ತ ಸಂಘಟಿತ ಭಾರತವನ್ನು ಕಾಣಬಯಸಿದ್ದ ಶಕ್ತಿದೂತರಾಗಿದ್ದರು ಶ್ರೀ ಗುರೂಜಿ.

5.    ಮಾತೃ ಭೂಮಿ ಮಲೆಯಾಳಮ್ ದೈನಿಕ, ತಿರುವನಂತ ಪುರ:-  “ ಅವರ ವಿಚಾರವನ್ನು ಒಪ್ಪದವರೂ ಮತ್ತುಅವರನ್ನು ಠೀಕಿಸುವವರೂ ಸಹ ಅವರ ಜೀವನದಲ್ಲಿನ ಶುದ್ಧತೆ,ಸಮರ್ಪಣಾಭಾವ, ಆಸಕ್ತಿ, ಪ್ರಾಮಾಣಿಕತೆಯ ಮುಂದೆ ನತಮಸ್ತಕರಾಗಲೇ ಬೇಕಾಗುತ್ತದೆ

6.    ಆಜ್ ದೈನಿಕ, ವಾರಣಾಸಿ:-  “ ಶ್ರೀ ಗುರೂಜಿಯವರು ಬಾಹ್ಯ ಮತ್ತು ಅಂತ: ಸ್ವರೂಪದಲ್ಲಿ ಋಷಿ ಸದೃಶರಾಗಿದ್ದರು.

7.    ಪ್ರಬುದ್ಧ ಭಾರತ:-  “ ಶ್ರೀ ಗುರೂಜಿಯವರದು ನಿ:ಸ್ವಾರ್ಥ, ನಿಷ್ಕಳಂಕ ಮತ್ತು ನಿರ್ಭಯ ಜೀವನ.ಅವರು ಸ್ವಂತಕ್ಕಾಗಿ ಬದುಕಲೇ ಇಲ್ಲ, ಸಂಪೂರ್ಣವಾಗಿ ಸಮಾಜಕ್ಕಾಗಿಯೇ ಬದುಕಿದರು.

  ಗುರೂಜಿಯವರು ಇಹಲೋಕ ಯಾತ್ರೆ ಮುಗಿಸಿದಾಗ ಹೀಗೆಯೇ ದೇಶದ ನೂರಾರು ಪತ್ರಿಕೆಗಳು ಅವುಗಳ ಸಂಪಾದಕೀಯದಲ್ಲಿ ಗುರೂಜಿಯವರ ಬಗ್ಗೆ ಅತ್ಯಂತ ಪ್ರಾಮಾಣಿಕ  ಮಾತುಗಳನ್ನಾಡಿದವು.

ಯಾಕೆ ಹೀಗೆ? ಏಕೆಂದರೆ………..ಅವರ ನಡೆ-ನುಡಿ ಯಲ್ಲಿ ಸಾಮ್ಯತೆ ಇತ್ತು. ಅವರ ಪ್ರಾಮಾಣಿಕ ಸಮರ್ಪಣಾ ಜೀವನದ ಬಗ್ಗೆ ಅವರ ವಿರೋಧಿಗಳೂ ಮೆಚ್ಚುತ್ತಿದ್ದರು. ಎಲ್ಲರಿಗೂ ಶ್ರೀ ಗುರೂಜಿಯವರಿಗೆ ಸಿಕ್ಕಿದಂತಾ ಎತ್ತರದ ಸ್ಥಾನ ಲಭ್ಯವಾಗುತ್ತದೆಯೇ? ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮ ಹಂಸರು,ಅರವಿಂದ ಘೋಷ್ ಅಂತಹ ಕೆಲವೇ  ಮಹಾನ್ ವ್ಯಕ್ತಿಗಳಲ್ಲಿ ಮಾತ್ರವೇ ಇಂತಹಾ ವ್ಯಕ್ತಿತ್ವವನ್ನು ಕಾಣಬಹುದಾಗಿತ್ತು.

ರಾಜಕಾರಣ,ವರ್ಣ ವ್ಯವಸ್ಥೆ, ಹಾಗೂ ಭಾಷಾವಾರು ಪ್ರಾಂತ ರಚನೆಯ ಬಗ್ಗ್ತೆ ಗುರೂಜಿಯವರ ನಿಲುವೇನಿತ್ತೆಂಬುದನ್ನು ಸಂಕ್ಷಿಪ್ತವಾಗಿ ತಿಳಿಯೋಣ. ಆರ್.ಎಸ್.ಎಸ್. ನ ಸರಕಾರ್ಯವಾಹರಾಗಿದ್ದ ಮಾನ್ಯಶ್ರೀ ಹೊ.ವೆ.ಶೇಷಾದ್ರಿಯವರು ಮೇಲಿನ ವಿಚಾರಗಳಲ್ಲಿ “ಶ್ರೀ ಗುರೂಜಿ” ಎಂಬ ಕಿರುಹೊತ್ತಿಗೆಯಲ್ಲಿ ಶ್ರೀ ಗುರೂಜಿಯವರ ಸ್ಪಷ್ಟ ವಿಚಾರಗಳನ್ನು ಬರೆದಿದ್ದಾರೆ. ಅದರಂತೆ….

·        ರಾಜಕಾರಣದ ಬಗ್ಗೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ರಾಜಕಾರಣಕ್ಕೆ ಎಳೆಯಬಾರದು.ಅದು ಯಾವುದೇ ರಾಜಕೀಯಪಕ್ಷದ ಅಧೀನದಲ್ಲಿ ಕೆಲಸ ಮಾಡುವುದಿಲ್ಲ.ಅದರ ನಿಜವಾದ ಕೆಲಸ ರಾಷ್ಟ್ರದ ಸಾಂಸ್ಕೃತಿಕ ಜೀವನವನ್ನು ಅರಳಿಸುವುದು.

ಟಿಪ್ಪಣಿ: ಈಗ ಹಾಗೆ ಅನ್ನಿಸುವುದಿಲ್ಲವಲ್ಲಾ! ಬಿ.ಜೆ.ಪಿಯ ಕೆಲಸಗಳಲ್ಲಿ ಆರ್.ಎಸ್.ಎಸ್ ಜೋಡಿಸಿಕೊಂಡಿದೆಯಲ್ಲಾ! ಎನಿಸದೆ ಇರದು. ನಿಜ ಸ್ಥಿತಿ ಹಾಗಲ್ಲ. ಆರ್.ಎಸ್.ಎಸ್ ನ ಹಿಂದು ವಿಚಾರಕ್ಕೆ ಬಿ.ಜೆ.ಪಿ ಪಕ್ಷದಲ್ಲಿ ಆಧ್ಯತೆ ಇರುವುದರಿಂದ ಆರ್.ಎಸ್.ಎಸ್. ತನ್ನ  ಕೆಲವು ಕಾರ್ಯಕರ್ತರನ್ನು ಬಿ.ಜೆ.ಪಿ. ಗೆ ಬಿಟ್ಟು ಕೊಟ್ಟಿದೆ. ಆದರೆ ಬೇರೆ ಪಕ್ಷದಲ್ಲಿ ಸಂಘದ ಸ್ವಯಂ ಸೇವಕರು ಇಲ್ಲವೆಂದಲ್ಲ. ಈ ವಿಚಾರ ಸಾಕಷ್ಟು ಚರ್ಚೆಗೆ ದಾರಿಮಾಡಿಕೊಡುತ್ತದೆಂಬ ಅರಿವು ಈ ಲೇಖಕನಿಗೆ ಇದೆ. ಈ ಬರಹದ ಉದ್ಧೇಶ ಗುರೂಜಿಯವರ ಸ್ಮರಣೆ ಮಾಡುವುದಾಗಿರುವುದರಿಂದ ಓದುಗರು ಮತ್ತು ಚರ್ಚೆ ಮಾಡಬಯಸುವವರು ಬೇರೆಯ ಸಂದರ್ಭದಲ್ಲಿ ಈ ವಿಚಾರವನ್ನು ಚರ್ಚೆ ಮಾಡುವುದು ಸೂಕ್ತವೆಂಬುದು ಲೇಖಕನ ಭಾವನೆ

·        ವರ್ಣ ವ್ಯವಸ್ಥೆ: ಮರವು ಬೆಳೆಯುತ್ತಿದ್ದಂತೆ ಅದರ ಒಣಗಿದ ಕೊಂಬೆಗಳು ಉದುರಿ ಅದರ ಜಾಗದಲ್ಲಿ ಹೊಸ ಕೊಂಬೆಗಳು ಹುಟ್ಟುವಂತೆಯೇ ಸಮಾಜದಲ್ಲಿ ಒಂದುಕಾಲದಲ್ಲಿ ಇದ್ದ ವರ್ಣ ವ್ಯವಸ್ಥೆಗೆ ಬದಲಾಗಿ ಸಮಾಜವು ತನಗೆ ಬೇಕಾದಂತೆ ಹೊಸವ್ಯವಸ್ಥೆಯನ್ನು ಮಾಡಿಕೊಳ್ಳುತ್ತದೆ.ಇದು ಸಮಾಜದ ವಿಕಾಸಪ್ರಕ್ರಿಯೆಯ ಸ್ವಾಭಾವಿಕ ರೀತಿ.

ಟಿಪ್ಪಣಿ: ವರ್ಣ ವ್ಯವಸ್ಥೆ ಬಗ್ಗೆ ವಿಸ್ತೃತವಾಗಿ ಬೇರೆ ಸಂದರ್ಭದಲ್ಲಿ ಚಿಂತನ-ಮಂಥನ ನಡೆಸುವುದು ಸೂಕ್ತ. ಈ ಲೇಖಕನ ಅಭಿಪ್ರಾಯದಲ್ಲಿ “ ಒಬ್ಬ ವೈದ್ಯನ ಮಗ ವೈದ್ಯನಾಗಬೇಕಾದರೆ ವೈದ್ಯಕೀಯ ಪದವಿ ಪಡೆಯಬೇಕಲ್ಲವೇ? ಹಾಗೆಯೇ ಈ ನಾಲ್ಕೂ ವರ್ಣಗಳನ್ನು [ಈಗ ರೂಢಿಯಲ್ಲಿರುವಂತೆ] ಜಾತಿಗೆ ಸಮೀಕರಿಸದೆ ಅವರವರ ಮನೋಭಾವ, ಸಾಮರ್ಥ್ಯ, ಗುಣ, ಸ್ವಭಾವಗಳ ಆಧಾರದ ಮೇಲೆ ಪಡೆಯುವುದಾಗಿದೆ. ಡಾ. ಅಬ್ದುಲ್ ಕಲಾಮ್ ಹಿಂದಿನ ವರ್ಣಾಶ್ರಮದ ಚಿಂತನೆಯಂತೆ  ಬ್ರಾಹ್ಮಣ ರು ಅಷ್ಟೆ. ಈ ಬಗ್ಗೆ ವಿಸ್ತೃತವಾಗಿ ಬೇರೆಡೆ ಚರ್ಚಿಸೋಣ.

·        ಭಾಷಾವಾರು ಪ್ರಾಂತ ರಚನೆ ಬಗ್ಗೆ: ಭಾಷಾವಾರು ಪ್ರಾಂತ ರಚನೆಯಿಂದ ಮುಂದೆ ಭಾಷಾ ದುರಭಿಮಾನ ಬೆಳೆಯುತ್ತದೆ.ನೆರೆಹೊರೆಯ ರಾಜ್ಯಗಳ ಮಧ್ಯೆ ವಿವಾದ ಬೆಳೆದು ಪರಸ್ಪರರಲ್ಲಿ ತೀವ್ರ ವಿರೋಧವು ತಲೆ ಎತ್ತುತ್ತದೆ.

ಟಿಪ್ಪಣಿ: ಗುರೂಜಿಯವರ ಅಂದಿನ ಚಿಂತನೆ ಎಷ್ಟು ದೀರ್ಘವಾದ ಆಲೋಚನೆ ಅಲ್ಲವೇ? ಈಗ ಕರ್ನಾಟಕ-ಮಹಾರಾಷ್ಟ್ರ, ಕರ್ನಾಟಕ-ತಮಿಳ್ನಾಡು ಮಧ್ಯೆ ಕಿತ್ತಾಟ ನೋಡಿದಾಗ ಗುರೂಜಿಯವರ ಚಿಂತನೆಯ ಮಹತ್ವ ಅರ್ಥವಾದೀತು

 

ಪ್ರಜಾವಾಣಿ,ಪತ್ರಿಕೆಯು ಬರೆಯುವಂತೆ “ ಅವರು ಪ್ರತಿಪಾದಿಸಿದ “ಹಿಂದು ರಾಷ್ಟ್ರ” ಮತೀಯವಾಗಿರದೆ ರಾಷ್ಟ್ರೀಯ ವಾಗಿತ್ತು. ಭಾರತವನ್ನು ತನ್ನ ಮಾತೃಭೂಮಿ ಎಂದು ತಿಳಿದು ಅದರ ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರುವ ಎಲ್ಲಾ ಭಾರತೀಯರೂ ಹಿಂದೂಗಳೇ ಎಂಬುದು ಗುರೂಜಿಯವರ ವಿಚಾರವಾಗಿತ್ತು.

ಟಿಪ್ಪಣಿ: ಹಿಂದು ವಿಚಾರದಲ್ಲಿ ಗುರೂಜಿಯವರ ಚಿಂತನೆಯ ಆಳವನ್ನು ಇಂದು ಸಂಘದ ಸ್ವಯಂಸೇವಕರೂ ಕೂಡ  ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಕಾಲ ಬಂದಿದೆ.

 

ಗುರೂಜಿಯವರ ದೂರದರ್ಶಿತ್ವ:

1950  ರ ಆರಂಭದಿಂದಲೇ  ಚೀನಾದೇಶವು ಭಾರತದ ಉತ್ತರ ಮತ್ತು ಈಶಾನ್ಯ ಗಡಿಗಳಲ್ಲಿ ಗುಪ್ತವಾಗಿ ಸೈನಿಕರಿಗಾಗಿ ರಸ್ತೆ ನಿರ್ಮಾಣ ಮತ್ತು  ಅಲ್ಲಿನ ಭೂಮಿಯನ್ನು ಕಬಳಿಸುವ ಕೆಲಸಕ್ಕೆ ಕೈ ಹಾಕಿತ್ತು.1951 ರಲ್ಲಿ ಪತ್ರಿಕೆಯಲ್ಲಿ ಲೇಖನ ಒಂದನ್ನು ಬರೆದ ಗುರೂಜಿಯವರು “ಚೀನಾ ದೇಶವು ಸಧ್ಯದಲ್ಲೇ ಭಾರತದ ಮೇಲೆ ಆಕ್ರಮಣ ಮಾಡಲಿದೆ” ಎಂದಿದ್ದರು. ಆದರೆ ಆ ದಿನಗಳಲ್ಲಿ ನಮ್ಮ ದೇಶದ ಪ್ರಧಾನಿ ಜವಾಹರಲಾಲ್ ನೆಹರೂ ರವರು  ಚೀನಾ ದೇಶದ ಪ್ರಧಾನ ಮಂತ್ರಿ  ಚೌ ಎನ್ ಲಾಯ್ ಜೊತೆ ಕೈ ಜೋಡಿಸಿ “ಹಿಂದಿ ಚೀನಿ ಭಾಯಿ ಭಾಯಿ” ಎಂಬ ಘೋಷಣೆಯೊಡನೆ ದೇಶಾದ್ಯಂತ ಪ್ರವಾಸ ಮಾಡುತ್ತಿದ್ದರು.  ದೇಶದ ಜನರೆಲ್ಲಾ ಸಹಜವಾಗಿ “ಸೋದರತ್ವದ” ಈ ಭಾವನೆಗೆ ಮರುಳಾಗಿದ್ದರು. ಆದರೆ ಚೀನಾ ದೇಶದ ಕೃತ್ರಿಮ ಬುದ್ಧಿಯನ್ನರಿತು ಅದರ ಆಕ್ರಮಣದ ಬಗ್ಗೆ ಎಚ್ಚರಿಕೆಯ ಗಂಟೆ ಭಾರಿಸಿದವರು ಗುರೂಜಿಯವರು ಮಾತ್ರ.ನಂತರ 1962 ರಲ್ಲಿ ಅರುಣಾಚಲಪ್ರದೇಶದ ಮೇಲೆ ನೇರ ಆಕ್ರಮಣ ಮಾಡಿದ ಚೀನಾಸೈನ್ಯವು 64000 ಚದುರ ಕಿಲೋ ಮೀಟರ್ ಪ್ರದೇಶವನ್ನು ವಶಪಡಿಸಿಕೊಂಡಿತು. ಆಗ ಪಂಡಿತ್ ನೆಹರೂ ತಮ್ಮ ಮೈ ಮರೆವನ್ನು ಒಪ್ಪಿಕೊಂಡರು. ಆಗಲೂ ಗುರೂಜಿಯವರು ಸುಮ್ಮನೆ ಕೂರಲಿಲ್ಲ. ದೇಶಾದ್ಯಂತ ಸಂಚರಿಸಿ ಯುದ್ಧಕಾಲದಲ್ಲಿ ಸರ್ಕಾರಕ್ಕೆ ಎಲ್ಲಾರೀತಿಯ ಸಹಕಾರವನ್ನು ಕೊಡುವಂತೆ ಜನರಿಗೆ ಕರೆ ಕೊಟ್ಟರು.ಗುರೂಜಿಯವರ ಕರೆಯಂತೆ ಸ್ವಯಂ ಸೇವಕರು ಯುದ್ಧದ ಕಾರ್ಯಗಳಿಗೆ ಜನರ ಬೆಂಬಲ ಒದಗಿಸುವುದರಲ್ಲಿ ಮತ್ತು ಜನರ  ಮನೋಬಲ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ದೇಶದ ಪ್ರಧಾನಿ ಪಂಡಿತ್ ನೆಹರೂ ರವರು ಸ್ವಯಂ ಸೇವಕರ ಸಕಾಲಿಕ ಸಹಕಾರವನ್ನು ಮೆಚ್ಚಲೇ ಬೇಕಾಯ್ತು. ಪರಿಣಾಮವಾಗಿ 1963 ರಲ್ಲಿ   ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ದಲ್ಲಿ [ಹಲವು  ಕಾಂಗ್ರೆಸ್ಸಿಗರ  ವಿರೋಧದ ನಡುವೆಯೂ] ನೆಹರೂ ಅವರ ಆಮಂತ್ರಣದಂತೆ  3000 ಗಣವೇಶಧಾರೀ  ಸಂಘದ ಸ್ವಯಂ ಸೇವಕರು  ಘೋಷ್ ಸಹಿತವಾಗಿ ಪೆರೇಡ್ ನಲ್ಲಿ ಹೆಜ್ಜೆಹಾಕಿದರು.ಸಮಾರಂಭದಲ್ಲಿ ಅದು ಪ್ರಮುಖ ಆಕರ್ಷಣೆಯಾಗಿತ್ತೆಂದು ಹಲವು ಪತ್ರಿಕೆಗಳು ವರದಿ ಮಾಡಿದವು.

ಸಾಕ್ಷಾತ್   ಋಷಿ ಸದೃಶ ಗುರೂಜಿ:

ಶ್ರೀ ಗುರೂಜಿಯವರ ಆಧ್ಯಾತ್ಮಿಕ ತುಮುಲವನ್ನು ಕಂಡವರು ಗುರೂಜಿಯವರಲ್ಲಿ ಅತ್ಯಂತ ನಿರ್ಮಲವಾದ ಮತ್ತೊಂದು ಮುಖವನ್ನು ಕಂಡಿದ್ದರು. ಹುಟ್ಟಿನಿಂದಲೇ ಬಂದಿದ್ದ ಆಧ್ಯಾತ್ಮಿಕ ಹಸಿವು ಅವರನ್ನು ರಾಮಕೃಷ್ಣಾಶ್ರಮದತ್ತ ಸೆಳೆದಿತ್ತು. ಜೊತೆಗೇ ಹಿಂದು ಸಮಾಜದ ಘೋರ ದುರ್ದೆಶೆ ಮತ್ತು ದೇಶದ ದಾಸ್ಯವು ಅವರ ಮನವನ್ನು ಕಲಕಿತ್ತು. ಈ ಸಂದರ್ಭದಲ್ಲಿ ಗುರೂಜಿವರಿಗೂ ಸ್ವಾಮಿ ವಿವೇಕಾನಂದರಿಗೂ ಬಹಳ ಸಾಮ್ಯತೆ ಕಾಣುತ್ತದೆ. ವಿವೇಕಾನಂದರೂ ಕೂಡ ಕನ್ಯಾಕುಮಾರಿಯಲ್ಲಿ ಸಮುದ್ರದ ಬಂಡೆಯಮೇಲೆ ಕುಳಿತು ಧ್ಯಾನಿಸುವಾಗ ನಮ್ಮ ದೇಶದ ಅಂದಿನ ಸ್ಥಿತಿಯನ್ನು ಕುರಿತು ಮಮ್ಮುಲ ಮರುಗಿದ್ದರು. ಅವರು ಮುಕ್ತಿಗಾಗಿ ತಪಸ್ಸು ಮಾಡದೇ ದೇಶದ ಅತ್ಯಂತ ಕಡುಬಡವನ ಆರ್ಥಿಕ ಮತ್ತು ಸಾಮಾಜಿಕ ನೆಲೆಗಾಗಿ  ಪರಿಹಾರ ಕಂಡುಹಿಡಿಯುವ ಬಗ್ಗೆ ಆಳವಾದ ಚಿಂತನೆ ಮಾಡಿದ್ದರು. ವಿವೇಕಾನಂದರಿಗೂ ಅಂದು ದುರ್ಲಭವಾಗಿದ್ದ ಸಾಮಾಜಿಕ ಸಂಘಟನೆಯ  ಭವ್ಯ ಚಿತ್ರವು  ಗುರೂಜಿವರ ಮುಂದೆ ಇತ್ತು.ಡಾ.ಹೆಡಗೇವಾರ್ ದೇಶದ ಮೂಲ ಸಮಸ್ಯೆಯನ್ನು ಅರಿತು ಈ ದೇಶದ ಜನರು “ಹಿಂದು” ಹೆಸರಲ್ಲಿ ಸಂಘಟನೆ ಮಾಡ ಬೇಕೆಂಬ ದೃಢ ಸಂಕಲ್ಪದಿಂದ ಆರ್.ಎಸ್.ಎಸ್. ಆರಂಭಿಸಿ ಒಂದು ದಶಕವು ಕಳೆದಿತ್ತು. ಸಮಾಜದ ಸಮಸ್ಯೆಗಳ ಜೊತೆಗೇ ಅದನ್ನು ಪರಿಹರಿಸಲು ಅಗತ್ಯವಾದ ಕಾರ್ಯಕರ್ತರ ಬಲಿಷ್ಟ ಗುಂಪೊಂದು ಸಿದ್ಧವಾಗಿರುವ ಭವ್ಯ ಚಿತ್ರ  ಗುರೂಜಿಯವರ    ಕಣ್ಣೆದುರು ಮೂಡಿತ್ತು. ಅಧ್ಯಾತ್ಮದ ಸೆಳೆತಕ್ಕಾಗಿ  ರಾಮಕೃಷ್ಟಾಶ್ರಮ! ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಕಣ್ಮುಂದೆ ಮೂಡಿದ್ದ ಆರ್.ಎಸ್.ಎಸ್ ಭವ್ಯ ಚಿತ್ರಣ! ಹೀಗೆ 1935-36 ರ ವರ್ಷದಲ್ಲಿ ಈ ಎರಡೂ ವಿಚಾರಗಳು ಏಕಕಾಲದಲ್ಲಿ ಗುರೂಜಿಯವರ ಮುಂದೆ ಇತ್ತು.ಗುರೂಜಿಯವರಿಗೆ ಆಗ ಮೂವತ್ತು ವರ್ಷ ಪ್ರಾಯ. ಅಧ್ಯಾತ್ಮದ ಸೆಳೆತದ ಜೊತೆ ಜೊತೆಗೇ ಸಾಮಾಜಿಕ ಸಂಘಟನೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದ   ಡಾ. ಹೆಡಗೇವಾರ್ ಅವರ ಹೃದಯದ ನೆಂಟು. ಆಧ್ಯಾತ್ಮಿಕ ಸೆಳೆತ ಹೆಚ್ಚಾಗಿ ರಾಮಕೃಷ್ಣ ಮಠದ ಸ್ವಾಮಿ ಭಾಸ್ಕರಾನಂದರ ಸಂಪರ್ಕ. ಪೂಜ್ಯ ಅಮಿತಾಬ್ ಮಹಾರಾಜ್ ಅವರ ಪರಿಚಯ. ಅಲ್ಲಿಂದ ಸ್ವಾಮಿ ಅಖಂಡಾನಂದರ ಅನುಗ್ರಹಪ್ರಾಪ್ತಿಗಾಗಿ ಪ್ರಯಾಣ.ಆಶ್ರಮದಲ್ಲಿ ಸ್ವಾಮಿ ಅಖಂಡಾನಂದರ ಸೇವೆ.ಗುರೂಜಿಯವರ ಮುಖದ ಮೇಲೆ ಬೆಳೆದಿದ್ದ ಕೂದಲನ್ನು ನೋಡಿದ ಅಖಂಡಾನಂದರು ಹೇಳಿದರು” ನಿನಗೆ ಈ ಕೂದಲು ಸೊಗಸಾಗಿ ಕಾಣುತ್ತೆ, ಇದನ್ನು ನೀನು ತೆಗೆಯ ಬೇಡ. ಗುರೂಜಿ ಹಾಗೇ ಮಾಡಿದರು. ಜೀವನ ಪರ್ಯಂತ ಗಡ್ದದಾರಿಗಳಾಗೇ ಉಳಿದರು.13.1.1937 ರಂದು ಮಕರ ಸಂಕ್ರಾಂತಿಯಂದು ಗುರೂಜಿಯವರಿಗೆ ಸ್ವಾಮಿ ಅಖಂಡಾನಂದರಿಂದ ದೀಕ್ಷೆ ಪ್ರಾಪ್ತಿಯಾಯ್ತು. ಸ್ವಾಮಿ ಅಖಂಡಾನಂದರು ಅದೇವರ್ಷ ಫೆಬ್ರವರಿ 7 ರಂದು ಮಹಾನಿರ್ವಾಣದ ನಂತರ ಗುರೂಜಿಯವರು  ನಾಗಪುರಕ್ಕೆ ಆಗಮಿಸಿ 1938 ರಲ್ಲಿ  ಸಂಘಕಾರ್ಯವನ್ನು ಜೀವನ ವ್ರತವಾಗಿಸ್ವೀಕರಿಸಿ ತಾಯಿ ಭಾರತಿಯ ಪದತಲದಲ್ಲಿ ತಮ್ಮ ಜೀವವನ್ನು  ಸಮರ್ಪಿಸಿಬಿಡುತ್ತಾರೆ. ಈ ಬಗ್ಗೆ  ಒಬ್ಬ ಆತ್ಮೀಯರಲ್ಲಿ ಗುರೂಜಿ ಹೇಳಿದ್ದು ಹೀಗೆ” ನನ್ನ ಒಲವು ಆಧ್ಯಾತ್ಮದ ಜೊತೆ ಜೊತೆಗೇ ರಾಷ್ಟ್ರ ಸಂಘಟನೆಯ ಬಗ್ಗೆಯೂ ಮೊದಲಿನಿಂದಲೂ ಇದೆ.ಸ್ವಾಮಿ ವಿವೇಕಾನಂದರ ವಿಚಾರಗಳು ಮತ್ತು ನನ್ನ ಕಾರ್ಯಪದ್ದತಿಗೆ ಹೊಂದಾಣಿಕೆಯಾಗುತ್ತದೆ ಎಂದು ನನಗನಿಸುತ್ತಿದೆ.ಸಂಘದಲ್ಲಿದ್ದುಕೊಂಡೇ ಆಧ್ಯಾತ್ಮಿಕವಾಗಿಯೂ ಕೆಲಸವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಲ್ಲೆನೆಂಬ ವಿಶ್ವಾಸ ನನಗಿದೆ”

ನೇತಾಡುತ್ತಿದ್ದ ರೈಲು ಕಂಬಿಯ ಮೇಲೆ ನಡೆದೇ ಬಿಟ್ಟರು: 1947 ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದ ದಿನಗಳು.ನಿಜವಾಗಿ ಸ್ವಾತಂತ್ರ್ಯದ ಸಂತಸ ಅನುಭವಿಸುವುದಕ್ಕಿಂತ ದೇಶ ತುಂಡಾಗಿ ಪಾಕಿಸ್ಥಾನ ನಿರ್ಮಾಣವಾದಾಗ  ಅಲ್ಲಿಂದ ಹಿಂದುಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬರುವ ಕೆಲಸವನ್ನು ಆರ್.ಎಸ್.ಎಸ್. ನಿರ್ವಹಿಸಿತು.ಆ ದಿನಗಳಲ್ಲಿ ಅನೇಕ ಹೃದಯ ವಿದ್ರಾವಕ, ರಕ್ತರಂಜಿತ ಪ್ರಸಂಗಗಳನ್ನು ಸ್ವಯಂ ಸೇವಕರು ಎದುರಿಸಬೇಕಾಯ್ತು.ಆ ಸಂದರ್ಭದಲ್ಲಿ ಸ್ವಯಂ ಸೇವಕರಿಗೆ ಸ್ಪೂರ್ಥಿಯಾಗಿ ನಿಂತವರು ಶ್ರೀ ಗುರೂಜಿ.ಪಂಜಾಬ್ ಪ್ರಾಂತವು ಆ ದಿನಗಳಲ್ಲಿ ಅತ್ಯಂತ ಭಯ ಮತ್ತು ಆತಂಕದಿಂದ ಕೂಡಿತ್ತು. ಆ ಎಲ್ಲಾ ಪ್ರದೇಶಗಳಿಗೂ ಸ್ವತ: ಗುರೂಜಿಯವರೇ ಹೋಗಿ ಜನರಿಗೆ ಧೈರ್ಯ ತುಂಬುತ್ತಿದ್ದರು. ಮಳೆಗಾಲಬೇರೆ. ರಸ್ತೆ ಎಲ್ಲಾ ಹಾಳಾಗಿವೆ. ಚೆಹೇಡೋ ಎಂಬ ಸೇತುವೆ ದಾಟಿ ಒಂದು ಗಲಭೆ ಪೀಡಿತ ಪ್ರದೇಶಕ್ಕೆ ಹೋಗಬೇಕಾಗಿತ್ತು. ರೈಲ್ವೆ ಹಳಿಯ ಅಸ್ಥವ್ಯಸ್ಥದಿಂದ ರೈಲು ಸಂಚಾರವನ್ನೂ ಕೂಡ ರದ್ದು ಮಾಡಲಾಗಿತ್ತು. ರಸ್ತೆ ಸಂಚಾರವೂ ಇಲ್ಲ. ರೈಲುಮಾರ್ಗವನ್ನು ಪರೀಕ್ಷಿಸುವ ಒಂದು ಟ್ರಾಲಿಯಲ್ಲಿಯೇ   ಗುರೂಜಿಯವರು ಹೊರಟರು. ಸೇತುವೆ ಹತ್ತಿರ ಬರುತ್ತಿದ್ದಂತೆ ಟ್ರಾಲಿ ನಿಂತಿತು. ಮುಂದೆ ಚಲಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ಸೇತುವೆಯ ರೈಲು ಪಟ್ಟಿಗಳು ನೇತಾಡುತ್ತಿದ್ದವು. ಕೆಳಗೆ ಪ್ರಚಂಡವಾಗಿ ಹರಿಯುತ್ತಿರುವ ನದಿ. ಅಂತಹ ದುರ್ಗಮ ಸನ್ನಿವೇಶದಲ್ಲಿ ನಿಧಾನ ಹೆಜ್ಜೆ ಯಿಡುತ್ತಾ ಗುರೂಜಿಯವರು ಮುರಿದ ಸೇತುವೆಯನ್ನು ದಾಟಿಯೇ ಬಿಟ್ಟರು. ಅಲ್ಲಿನ ಜನರಮೇಲೆ ಇದ್ದ  ಅಂತಹ ಉತ್ಕಟ ಪ್ರೀತಿ  ಗುರೂಜಿಯವರಿಂದ ಅಂತಹಾ ದುಸ್ಸಾಹಸ ಮಾಡಿಸಿತ್ತು.

ಪ್ರಾಚಾರ್ಯರೇ ಬೈಬಲ್  ತಪ್ಪು ಹೇಳಿದಾಗ:

ಒಮ್ಮೆ ಪ್ರಾಚಾರ್ಯರಾದ ಪ್ರೊ.ಗಾರ್ಡಿನರ್ ಬೈಬಲ್ ಪಾಠಮಾಡುತ್ತಿದ್ದರು. ವಿದ್ಯಾರ್ಥಿ ಮಾಧವ [ಗುರೂಜಿಯವರ ಬಾಲ್ಯದ ಹೆಸರು] ಎದ್ದು ನಿಂತ “ ಸರ್ ನೀವು ಹೇಳುತ್ತಿರುವುದು ತಪ್ಪು. “ಅದು ಹೀಗಿರಬೇಕು” ಎಂದಾಗ ಎಲ್ಲರಿಗೂ ಆಶ್ಚರ್ಯ! ಬೈಬಲ್ ತರಿಸಿ ನೋಡಿದಾಗ ಮಾಧವ ಹೇಳಿದ್ದು ಸರಿ ಇತ್ತು. ಪ್ರೊ.ಗಾರ್ಡಿನರ್ ಮಾಧವನ ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.  ಈ ಘಟನೆಯಿಂದ  ಮಾಧವನ ನಿರ್ಭಯತೆ , ನೆನಪಿನಶಕ್ತಿ ಮತ್ತು ಆತ್ಮ ವಿಶ್ವಾಸವು ಎಲ್ಲರ ಗಮನಕ್ಕೆ ಬಂತು.

ಗುರೂಜಿ ಹೆಸರೇಕೆ ಬಂತು:  ಆಗಸ್ಟ್ 1931 ರಲ್ಲಿ ಮಾಧವರಾಯರು ಕಾಶೀ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರುತ್ತಾರೆ.ತಮ್ಮ ವಿಷಯವೇ ಅಲ್ಲದೆ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಸಂದೇಹವನ್ನು  ಕೇಳಿದರೂ ಆತ್ಮೀಯವಾಗಿ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವುದು ಗುರೂಜಿಯವರ ಸಹಜ ಸ್ವಭಾವವಾಗಿತ್ತು. ಇವರಿಗೆ ಗೊತ್ತಿಲ್ಲದ ವಿಷಯ ವಿದ್ದರೆ ಆ ವಿಷಯದ ಪುಸ್ತಕ ಕೊಂದು ಓದಿ ವಿದ್ಯಾರ್ಥಿಗಳ ಸಂದೇಹವನ್ನು ಸಮಾಧಾನಗೊಳಿಸುತ್ತಿದ್ದರು. ಅಷ್ಟೇ ಅಲ್ಲ ಇವರ ಸಂಬಳದ ದುಡಿಮೆಯಲ್ಲಿ ಹಲವು ಬಡ ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನೂ  ತಾವೇ ಕೊಡುತ್ತಿದ್ದರು. ವಿದ್ಯಾರ್ಥಿಗಳೆಲ್ಲರ ಪ್ರೀತಿಗೆ ಇವರು  ಇಡೀ ಕಾಲೇಜಿನಲ್ಲಿ “ ಗುರೂಜಿ” ಎಂದೇ  ಕರೆಯಲ್ಪಟ್ಟರು.

1931 ರಲ್ಲಿ ಸಂಘದ ಸಂಪರ್ಕಕ್ಕೆ ಬಂದ ಗುರೂಜಿಯವರು 1935-36 ರಲ್ಲಿ ರಾಮಕೃಷ್ಣಾಶ್ರಮದ ಸಂಪರ್ಕದಲ್ಲಿದ್ದು ನಂತರ  1938 ರಲ್ಲಿ  ಸಂಘಕಾರ್ಯವನ್ನು ಜೀವನ ವ್ರತವಾಗಿಸ್ವೀಕರಿಸಿ 1940 ರಲ್ಲಿ ಡಾ.ಹೆಡಗೇ ವಾರರ ನಿಧನದ ನಂತರ ಸಂಘದ ಪರಮೋಚ್ಛ ಸ್ಥಾನವಾದ ಸರಸಂಘಚಾಲಕರ ಹೊಣೆ ಹೊರುತ್ತಾರೆ. ಆ ಸಮಯದಲ್ಲಿ ಗುರೂಜಿಯವರಿಗಿಂತ ಹಿರಿಯ ಕಾರ್ಯಕರ್ತರು ಸಂಘದಲ್ಲಿದ್ದರೂ ಗುರೂಜಿಯವರ ಸಾಮರ್ಥ್ಯದ ಅರಿವಿದ್ದ ಡಾ. ಹೆಡಗೇವಾರ್ ತಮ್ಮ ನಂತರ ಗುರೂಜಿಯವರು ತಮ್ಮ ಜವಾಬ್ಧಾರಿಯನ್ನು ಹೊರಬೇಕೆಂದು ಮುಂಚಿತವಾಗಿಯೇ ನಿರ್ಧರಿಸಿ ಸಹಕಾರ್ಯಕರ್ತರೊಡನೆ ಈ ಬಗ್ಗೆ ಚರ್ಚಿಸಿ   ನಿರ್ಧರಿಸಿರುತ್ತಾರೆ.1973 ರಲ್ಲಿ ಕಡೆಯದಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು  ಜೂನ್ 5ರಂದು ಅಂತಿಮ ಯಾತ್ರೆ ಗೈಯ್ಯುತ್ತಾರೆ.

ಹೌದು ಗುರೂಜಿಯವರೆಂದರೆ ಅವರೊಂದು ಅದ್ಭುತ ವ್ಯಕ್ತಿತ್ವ. ಗುರೂಜಿಯವರಿಗೆ ಗುರೂಜಿಯವರೇ ಸಾಟಿ. ಆಧ್ಯಾತ್ಮಿಕ ಚಿಂತನೆಯೊಂದಿಗೆ ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಂಡರೆ  ಒಬ್ಬ ಕಾರ್ಯಕರ್ತನು ತಾನೂ ಆಧ್ಯಾತ್ಮಿಕವಾಗಿ ಬೆಳೆಯುತ್ತಲೇ ಸಮಾಜದಲ್ಲೂ ತನ್ನ ಛಾಪನ್ನು ಒತ್ತಬಲ್ಲ. ಇಂದಿನ ದಿನಗಳಿಗೆ ಅಂತಹ ದೇಶಭಕ್ತ ಕಾರ್ಯಕರ್ತರ ಅಗತ್ಯ ಬಹಳವಾಗಿದೆ.

Rating
No votes yet