ಮಾತು ಮಾತಲ್ಲಿ
ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.
ನನ್ನ ಸ್ನೇಹಿತ ಶಿವಪ್ರಸಾದ್ ಬಿ. ಎಂ, ತನ್ನ ಆಫೀಸಿನಿಂದ ನನಗೆ ಆಗಾಗ ಕರೆ ಮಾಡುತ್ತಿದ್ದ ಫೋನ್ ನಂಬರ್.
ನಾವಿಬ್ಬರು ಒಬ್ಬರಿಗೊಬ್ಬರು ಫೋನ್ ಮಾಡಿದರೆ, ಮೊದಲು ಸ್ವಲ್ಪ ತರ್ಲೆ ಮಾತುಗಳನ್ನಾಡಿ ನಂತರ ಕರೆ ಮಾಡಿದ ವಿಷಯಕ್ಕೆ ಬರೋದು.
ಸರಿ ಫೋನ್ ಎತ್ತಿ, 'ಹಲೋ' ಎಂದೆ.
ಆ ಕಡೆಯಿಂದ ನನ್ನ ಸ್ನೇಹಿತ, ಮೊದಲೇ ನಾ ಹೇಳಿದ ರೀತಿಯಲ್ಲಿ ತರ್ಲೆ ಮಾಡುತ್ತಾ ಇಂಗ್ಲೀಷಿನಲ್ಲಿ ಮಾತಾಡಿದ.. ಆ ಸಂಭಾಷಣೆ ಇಂಗ್ಲಿಷಿನಲ್ಲೇ ನಡಿತು.....
ಅದನ್ನು ಇಲ್ಲಿ ಕನ್ನಡದಲ್ಲಿ ಬರಿತ ಇದೀನಿ. ನಮ್ಮ ಸಂಭಾಷಣೆ ಹೀಗಿತ್ತು ನೋಡಿ.
"ಹಲೋ , ನಾನು ಶಿವಪ್ರಕಾಶ್ ಎನ್ನುವವರ ಜೊತೆ ಮಾತಾಡಬಹುದೇ....?" ಎಂದ ನನ್ನ ಗೆಳೆಯ ಶಿವಪ್ರಸಾದ್.
ಆಗ ನಾನು ಹೇಳಿದೆ : "ಇಲ್ಲ, ಸಾಧ್ಯವಿಲ್ಲ. ನೀವು ಅವರ ಜೊತೆ ಮಾತನಾಡಲು ಆಗುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿಯಲ್ಲ. ಅವರು ದೊಡ್ಡ ಬುಸ್ಸಿನೆಸ್ಸ್ ಮಗ್ನೆಟ್ (Business Magnet). ಅವರು ಈಗ ಬಿಲ್ ಗೇಟ್ಸ್ ಜೊತೆ ಮೀಟಿಂಗ್'ನಲ್ಲಿ ಇದಾರೆ. ಅವರ ಜೊತೆ ನೀವು ನೇರವಾಗಿ ಮಾತನಾಡಲು ಸಾಧ್ಯವಿಲ್ಲ. ನಾನು ಶಿವಪ್ರಕಾಶ್ ಅವರ ಸಹೋದರ. ಅವರು ಅಸ್ಟು ಸುಲಭವಾಗಿ ನಿಮಗೆ ಮಾತನಾಡಲು ಸಿಗುವುದಿಲ್ಲ. ಮೊದಲು ಅಪಾಯಿಂಟ್ಮೆಂಟ್ ತಗೋಳಿ. ನಂತರ ಸಂದರ್ಶಿಸಿ. ಏನಾದ್ರು ತುಂಬಾ ಮುಖ್ಯವಾದ ವಿಷಯ ಇದ್ರೆ ಹೇಳಿ. ಅವರಿಗೆ ಬಿಡುವು ಸಿಕ್ಕಾಗ ಹೇಳುತ್ತೇನೆ..' ಎಂದು ಅವನಿಗೆ ಮಾತಾಡಲು ಬಿಡದೆ ಒಂದೈದು ನಿಮಿಷ ಹೀಗೆ ಚನ್ನಾಗಿ ದಬಾಯಿಸಿದೆ.
ಅ ಕಡೆಯಿಂದ ನನ್ನ ಗೆಳೆಯ... "ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ ಸರ್, ಅವರ ಜೊತೆ ಸ್ವಲ್ಪ ಮಾತನಾಡಬೇಕಿತ್ತು. ಅವರು ತಮ್ಮ Resume ಅನ್ನು Job Portal ನಲ್ಲಿ ಹಾಕಿದ್ದಾರೆ. ಅದಕ್ಕೆ ಹೊಂದುವ ಕೆಲಸ ನಮ್ಮ ಕಂಪನಿಯಲ್ಲಿ ಇತ್ತು. ಅದಕ್ಕೆ ಕರೆ ಮಾಡಿದಿವಿ ಸರ್...."
ಈ ಸಾರಿ ಮಾತಾಡಿದಾಗ ಅವನ ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಯಾಕೋ ಸಂದೇಹ ಬಂತು. ಮತ್ತೊಮ್ಮೆ ಕರೆಬಂದ ಸಂಕೆಯನ್ನು ಗಮನಿಸಿದೆ.
ಅಯ್ಯೋ... ಇವನು ನನ್ನ ಗೆಳೆಯನಲ್ಲ. ಅವನು ಫೋನ್ ಮಾಡಲು ಉಪಯೋಗಿಸುತ್ತಿದ್ದ ಫೋನ್ ನಂಬರಿಗೂ, ಇದಕ್ಕೂ ಸ್ವಲ್ಪವೇ ಸ್ವಲ್ಪ ವ್ಯತ್ಯಾಸವಿತ್ತು. ಬೇರೆ ಯಾರೋ ವ್ಯಕ್ತಿಗೆ, ಸುಮ್ಮನೆ ಸಿಕ್ಕಾಪಟ್ಟೆ ತಲೆ ತಿಂದು ಬಿಟ್ಟಿದ್ದೇನೆ. ಅಪರಿಚಿತ ವ್ಯಕ್ತಿಯೊಡನೆ ನಾನಾಡಿದ ಮಾತುಗಳನ್ನು ನೆನೆದು ನಗು ಬಂತು.
ಮಾಡಿದ ತಪ್ಪಿಗೆ, ಕ್ಷಮೆ ಕೇಳಿ ಫೋನ್ ಇಟ್ಟೆ.