ಮಾತು ಮೌನವಾದಾಗ-ಮೌನ ಮಾತಾದಾಗ-ಮೌನ ಮೌನವಾದಾಗ

ಮಾತು ಮೌನವಾದಾಗ-ಮೌನ ಮಾತಾದಾಗ-ಮೌನ ಮೌನವಾದಾಗ

 ಮೌನ ನಗುತ್ತದೆ .


ಈಗ ಹೇಳು ನೀ ಹೇಳಿದ್ದೆಲ್ಲಾ ಸತ್ಯವೇ?. ನೀನೆಂದು ತೋರಿಸಿಕೊಳ್ಳುತ್ತಿರುವ ಆ ನೀನು ನೀನೇನಾ?. ನಿನ್ನೊಳಗಿನ ಮಾತುಗಳ ಅರ್ಥವನ್ನು ಹೇಳಿದೆ ಎಂದುಕೊಂಡೆ . ನಿಜ ಹೇಳಿದೆಯಾ?


ಮೌನ ಹಾಡುತ್ತದೆ


ನಾನಿರದಿದ್ದಾಗ ನೀ ನುಡಿದಿದ್ದು ನಾ ಕೇಳಲಿಲ್ಲವೇ? ನಿನ್ನೊಳಗಿನ ತುಮುಲ ಹೊರಬರಲೆಂದು ಚಡಪಡಿಸಿ ಇರುವಿಕೆ ಸಾರ ಹೊರಟಿದ್ದು ನಾ ಅರಿಯಲಿಲ್ಲವೇ?  ಬದುಕಲ್ಲಿ ಏನೋ ಇದೆ ಎಂದು ಅರಿವಾಗುವ ವೇಳೆಗೆ ಬೆನ್ನು ತಿರುಗಿಸಿದ್ದು ಏಕೆ?  ನಿನ್ನಾತ್ಮಕ್ಕೆ  ಎದುರಾಗಿ ಮಾತಾಡಿ , ಈಗ ಖೇದವೇಕೆ


ಮೌನ ಮಾತಾಗುತ್ತದೆ


ಯಾವುದೋ ನೆನಪಲ್ಲಿ ಕಣ್ಣ್ ಹನಿ ಯಾಗಿದ್ದು ಏಕೆ? ಯಾರ ನೆನೆಸಿ ಮತ್ತಾರ ಮುಂದೆಯೋ ಬಯಲಾಗುವ ಈ ಪರಿ ಏಕೆ?  ಮತ್ತಾವುದೋ ನೆನಪಲ್ಲಿ ತುಟಿ ಅರಳಿದ್ದೇಕೆ? ನನ್ನಿರಿವಿಕೆಯಲ್ಲಿ ನಿನ್ನ ಮನದಿ ತುಂಬಿರುವ ಆ ನೂರು ನೆನಪುಗಳು ನಿನ್ನೆದೆಗೆ ಧಾಳಿ ಇಡುತ್ತಿದೆಯೇ?ನೂರು ನೆನಪುಗಳ ತಂದುಕೊಡವ ನಾ ಬಳಿಯಲ್ಲಿ ಇರಲು ಒಲ್ಲೆಯೇಕೆ ನೀ?


ಮೌನ ವಾದಿಸುತ್ತದೆ


ನಾನಿರುವಲ್ಲಿ ಹಗರಣಗಳ ಭಯವಿಲ್ಲ. ವಾದಗಳ ಸುಳಿಯಿಲ್ಲ. ವ್ಯರ್ಥಾಯಾಸವಿಲ್ಲ.ನಾ ನಿನ್ನೊಡನಿರುವಷ್ಟೂ ಹೊತ್ತು ನೆಮ್ಮದಿ ತರಬಲ್ಲೆ ಮತ್ತೇಕೆ ನನ್ನಿಂದ ನೀ  ದೂರ ಓಡುವೆ?


ಮೌನ ಅಳುತ್ತದೆ


ದೂರ ಮಾಡಬೇಡ ಎನ್ನ .ನಾನಿರುವಷ್ಟು ಹೊತ್ತು ಮನ ತಂಪು ಎಂದವಳು,ಮತ್ಯಾಕೆ  ನಿನಗೆ ಮಾತಿನ ಒಡನಾಟ ?


ಮೌನ ಮೌನವಾಗುತ್ತದೆ.ಆಗಾಗ ಪಿಸುಗುಡುತ್ತದೆ ನಾ ಅತ್ತಾಗಲೆಲ್ಲಾ


ನನ್ನ ಬಳಿಗೆ ಬಂದುಬಿಡು . ಮರೆವೆ ಎಲ್ಲಾ  ನೋವನ್ನಾ.

Rating
No votes yet