ಮಾನವರ ಮೇಧಾ ಶಕ್ತಿ ನಾಪತ್ತೆಗೆ ಕಾರಣ ಇಲ್ಲಿದೆ

ಮಾನವರ ಮೇಧಾ ಶಕ್ತಿ ನಾಪತ್ತೆಗೆ ಕಾರಣ ಇಲ್ಲಿದೆ

ಬೊಗಳೂರು, ಡಿ.11- ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರಲ್ಲೊಬ್ಬನಾಗಿರುವ ಅಸತ್ಯ ಅನ್ವೇಷಿಯ ಮರ್ಕಟ ಮನಸ್ಸಿನ ಹಿಂದಿರುವ ಕಾರಣವನ್ನು ಎಲ್ಲೆಲ್ಲೋ ಅಲೆದಾಡಿ ಪತ್ತೆ ಹಚ್ಚಿದಾಗ ಸಾಕಷ್ಟು ವಿವರಗಳು ಹಠಾತ್ ಆಗಿ ತಿಳಿದುಬಂದಿವೆ. (bogaleragale.blogspot.com)

ಇತ್ತೀಚೆಗೆ ಅನ್ವೇಷಿಯ ವರದಿಗಳಲ್ಲಿ ಬೊಗಳೆ ಇಲ್ಲ ಎಂಬ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಅನ್ವೇಷಿ ಮಿದುಳನ್ನು ತಪಾಸಣೆಗೊಳಪಡಿಸಲಾಯಿತು. ಆಗ ಮಿದುಳಿನ ಒಂದು ಭಾಗ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಈ ಒಂದು ಭಾಗ ಎಲ್ಲಿ ಹೋಗಿದೆ ಎಂದು ತಿಳಿದುಕೊಳ್ಳಲು ಹೋದಾಗ, ಅದು ಅನ್ವೇಷಿಯೊಬ್ಬನದೇ ಸಮಸ್ಯೆ ಮಾತ್ರವಲ್ಲ, ಮರ್ಕಟ ಮನಸ್ಸಿನ ಮಾನವ ಕುಲದವರೆಲ್ಲರ ಸಮಸ್ಯೆ ಎಂಬುದು ಬಟಾ ಬಯಲಾಯಿತು.

ಮನುಷ್ಯನ ಮಿದುಳಿನ ಕೋಶಗಳು ತಿಮಿಂಗಿಲಗಳಲ್ಲಿ ಪತ್ತೆಯಾಗಿದ್ದುದೇ ಇದಕ್ಕೆ ಕಾರಣವಾದ ಅಂಶವಾಗಿತ್ತು. ಅಲ್ಲದೆ ರಾಜಕಾರಣಿಗಳು, ಭೂ ಕಬಳಿಕೆದಾರರು, ದಂಧೆಕೋರರು ಮುಂತಾದವರೆಲ್ಲಾ ಸಿಕ್ಕಿದ್ದನ್ನು ಕಬಳಿಸುವ ಬುದ್ಧಿಯ ಹಿಂದಿನ ರಹಸ್ಯವೂ ಇದರಿಂದ ಬಯಲಾಗತೊಡಗಿದೆ.

ಇಷ್ಟು ಮಾತ್ರವಲ್ಲ ಒಂದೊಂದೇ ರಹಸ್ಯ ಬಯಲಾಗುವುದರ ಸಾಲಿಗೆ, ರಾಜಕಾರಣಿಗಳು ಆಗಾಗ್ಗೆ ಬೇರೆ ಪಕ್ಷಗಳ ಕೊಳಕ್ಕೆ ಹೋಗಿ ಗಾಳ ಹಾಕುವುದು ಯಾಕೆ, ಕೆಲವೊಂದು ತಿಮಿಂಗಿಲಗಳನ್ನೇ ಹಿಡಿಯುವುದು ಯಾಕೆ ಎಂಬುದಕ್ಕೆ ಕೂಡ ಕಾರಣ ಪತ್ತೆಯಾಗಿದೆ.

ಆಗಾಗ್ಗೆ ಕೆಲವೆಡೆ ದಾಳಿ ನಡೆಸುವ ಸಿಬಿಐ ಅಧಿಕಾರಿಗಳು ದೊಡ್ಡ ದೊಡ್ಡ ತಿಮಿಂಗಿಲಗಳನ್ನಷ್ಟೇ ಹಿಡಿಯುತ್ತಿದ್ದಾರೆ. ತಿಮಿಂಗಿಲಗಳ ಹಿಂದಿರುವ ಮೇಧಾ ಶಕ್ತಿಯೇ ಇದಕ್ಕೆ ಕಾರಣ ಎಂಬ ಅದ್ಭುತ ಅಸತ್ಯವನ್ನು ಮಿದುಳಿಲ್ಲದಿದ್ದರೂ ಅನ್ವೇಷಿ ಪತ್ತೆ ಮಾಡಿದ್ದಾನೆ.

Rating
No votes yet